ಧರ್ಮಜಿಜ್ಞಾಸೆ
ಡಾ.ಎ.ಜಯಕುಮಾರ ಶೆಟ್ಟಿ
ನಮ್ಮ ವಿವೇಕವನ್ನು ಉಪಯೋಗಿಸದೆ ಬಾಲಿಶವಾದ ಸುಳ್ಳನ್ನು ಆಶ್ರಯಿಸವುದು ಅಪಾಯ ಕಾರಿ. ಸುಳ್ಳಿನ ಪ್ರಚಾರ ಮಾಡುವವರು ಇದ್ದೇ ಇರುತ್ತಾರೆ. ಆದರೆ ಅದನ್ನು ವಿಚಾರಿಸದೆ ನಂಬುವವರೇ ನಾಶದ ಮಾರ್ಗ ಹಿಡಿಯುತ್ತಾರೆ. ಸುಳ್ಳಿನ ನೆರಳುಕ್ಷಣಿಕ. ಆದರೆ ಸೇವೆಯ ಸೂರ್ಯ ಅಸ್ತ ವಾಗುವುದಿಲ್ಲ. ಧರ್ಮಸ್ಥಳದ ಇತಿಹಾಸವೇ ಸತ್ಯಕ್ಕೆ ಶಾಶ್ವತ ಸ್ಮಾರಕ. ಧರ್ಮಸ್ಥಳದ ಬೆಳಕನ್ನು ಯಾವ ಸುಳ್ಳಿನ ಬಿರುಗಾಳಿಯೂ ನಂದಿಸಲಾರದು. ಅದಕ್ಕಾಗಿ ಸಮಾಜದ ಪ್ರತಿಯೊಬ್ಬರಕರ್ತವ್ಯ ಸತ್ಯದೊಂದಿಗೆ ನಿಲ್ಲುವುದು, ಸೇವೆಗೆ ಕೈಜೋಡಿಸುವುದು.
ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಅಸಮಾನ ಮಾಹಿತಿಯು ಮಾರುಕಟ್ಟೆ ವೈಫಲ್ಯಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಜಾರ್ಜ್ ಅಕರ‍್ಲಾ- ಪರಿಚಯಿಸಿದ ‘ಮಾರ್ಕೆಟ್ ಫಾರ್ ಲೆಮನ್ಸ್’ ಸಿದ್ಧಾಂತವು ವಿವರಿಸುತ್ತದೆ. ಅಕರ‍್ಲಾ- ಹೇಳಿದಂತೆ, ಒಂದು ಮಾರುಕಟ್ಟೆಯಲ್ಲಿ ಖರೀದಿದಾರರಿಗೆ ಸಂಪೂರ್ಣ ಮಾಹಿತಿ ದೊರಕದಿದ್ದಾಗ, ಅವರು ಯಾವಾಗಲೂ ಅನುಮಾನದಿಂದ ನಡೆದುಕೊಳ್ಳುತ್ತಾರೆ.
ಈ ಗೊಂದಲದ ನಡುವೆ, ಉತ್ತಮ ಗುಣಮಟ್ಟದ ವಸ್ತುಗಳು (plums) ಮಾರುಕಟ್ಟೆಯಿಂದ ಮಾಯವಾಗುತ್ತವೆ ಮತ್ತು ಕಡಿಮೆ ಗುಣಮಟ್ಟದ ವಸ್ತುಗಳು (lemons) ಮಾತ್ರ ಉಳಿಯುತ್ತವೆ. ಅದೇ ಮಾರುಕಟ್ಟೆಯ ವಿಫಲತೆ. ಕಡಿಮೆ-ಗುಣಮಟ್ಟದ ಸರಕುಗಳ ಪ್ರಾಬಲ್ಯದಿಂದಾಗಿ ಮಾರುಕಟ್ಟೆ ಯ ದಕ್ಷತೆ ಕಡಿಮೆಯಾಗಿ ಅದರ ಕುಸಿತಕ್ಕೂ ಕಾರಣವಾಗಬಹುದು.
ಇಂಥ ಅಸಮಾನ ಮಾಹಿತಿಯ ಸಂಕಟವೇ ಇಂದು ಧರ್ಮಸ್ಥಳದಲ್ಲಿ ಕಂಡುಬರುತ್ತಿದೆ. ಆರ್ಥಿಕ ತತ್ತ್ವದಲ್ಲಿ ಪ್ರಸಿದ್ಧವಾದ ಗ್ರೇಶಮ್‌ನ ನಿಯಮದ (Bad money drives out good money) ಪ್ರಕಾರ, ಕೆಟ್ಟ ನಾಣ್ಯವು ಒಳ್ಳೆಯ ನಾಣ್ಯವನ್ನು ಮಾರುಕಟ್ಟೆಯಿಂದ ಹೊರ ಹಾಕುತ್ತದೆ.
ಇದನ್ನು ಸಮಾಜಕ್ಕೆ ಅನ್ವಯಿಸಿದಾಗ ಸುಳ್ಳು, ಅಪಪ್ರಚಾರ, ದುರುದ್ದೇಶಗಳು ಕೆಲವೊಮ್ಮೆ ಕೆಟ್ಟ ನಾಣ್ಯದಂತೆ ವೇಗವಾಗಿ ಹರಡುತ್ತವೆ. ಆದರೆ, ಸತ್ಯ, ಧರ್ಮ, ಸೇವೆ ಇತ್ಯಾದಿಗಳು ಉತ್ತಮ ನಾಣ್ಯ ದಂತೆ ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಯುತ್ತವೆ.
ಇದನ್ನೂ ಓದಿ: Raghava Sharma Nidle Column: ರಾಜಕೀಯ ಶುದ್ಧೀಕರಣವೋ, ವಿಪಕ್ಷಗಳ ವಿರುದ್ಧ ದಂಡಾಸ್ತ್ರವೋ ?
ಕೆಲವೊಮ್ಮೆ ತಾತ್ಕಾಲಿಕವಾಗಿ ಸುಳ್ಳುಗಳು ಹೆಚ್ಚು ಶಕ್ತಿ ಪಡೆದಂತೆ ತೋರಿದರೂ, ದೀರ್ಘಾವಧಿ ಯಲ್ಲಿ ಸಮಾಜದ ಒಪ್ಪಿಗೆಯನ್ನು ಪಡೆಯುವುದು ಸತ್ಯ ಮತ್ತು ಧರ್ಮ ಮಾತ್ರ. ಇಷ್ಟಾಗಿಯೂ ಕೆಲವೊಮ್ಮೆ ಅಪಪ್ರಚಾರಗಳು, ಸುಳ್ಳು ಆರೋಪಗಳು ಕೆಟ್ಟ ನಾಣ್ಯದಂತೆ ತಲೆ ಎತ್ತುತ್ತವೆ. ಆದರೆ ಧರ್ಮಸ್ಥಳದ ಪಾರದರ್ಶಕತೆ, ಡಾ.ವೀರೇಂದ್ರ ಹೆಗ್ಗಡೆಯವರ ನಿಸ್ವಾರ್ಥ ಸೇವೆ ಮತ್ತು ಸಮಾಜದ ಒಗ್ಗಟ್ಟೇ ಆ ಸುಳ್ಳನ್ನು ತಳ್ಳಿಬಿಡುತ್ತದೆ.
ಗ್ರೇಶಮ್‌ನ ನಿಯಮವು ಹೇಳುವಂತೆ ಕೆಟ್ಟದ್ದು ಒಳ್ಳೆಯದನ್ನು ಹೊರಹಾಕುತ್ತದೆ ಎನ್ನುವುದು ಆರ್ಥಿಕ ಮಾರುಕಟ್ಟೆಗೆ ಸೂಕ್ತವಾಗಿರಬಹುದು. ಆದರೆ “ಧರ್ಮ ಮತ್ತು ಸೇವೆಯ ಶಕ್ತಿ ಶಾಶ್ವತ ; ಸುಳ್ಳು ಮತ್ತು ಅಪಪ್ರಚಾರ ತಾತ್ಕಾಲಿಕ". ಸುಳ್ಳು ನಾಣ್ಯಕ್ಕೆ ಎಷ್ಟು ಹೊಳಪಿದ್ದರೂ ಸತ್ಯದ ಬೆಳಕನ್ನು ಮಸುಕಾಗಿಸಲು ಸಾಧ್ಯವಿಲ್ಲ.
ಅಪವಾದಗಳ ಆರ್ಭಟ: ಶತಮಾನಗಳಿಂದ ಭಕ್ತಿ, ಸೇವೆ ಮತ್ತು ಮಾನವೀಯತೆಯ ತಾಣವಾಗಿ ರುವ ಧರ್ಮಸ್ಥಳದ ಮೇಲೆ ಅಸಾಧಾರಣ ಆರೋಪಗಳು ಎದ್ದಿವೆ. ಸಮೂಹ ಸಮಾಧಿಗಳು, ಮಹಿಳೆಯರ ಮೇಲಿನ ದೌರ್ಜನ್ಯಗಳು ಎಂಬ ಕಟ್ಟುಕತೆಗಳು ಜನಮನದಲ್ಲಿ ಭಾರಿ ಅಲೆ ಎಬ್ಬಿಸಿವೆ. ಸಾಕ್ಷ್ಯ-ಪ್ರಮಾಣಗಳು ಇನ್ನೂ ಸ್ಪಷ್ಟವಾಗದಿದ್ದರೂ, ‘ಸುಳ್ಳಿನ ಶಬ್ದ’ವೇ ಹೆಚ್ಚು ಕೇಳಿಬರುತ್ತಿದೆ.
ಇಂಥ ಅಪವಾದಗಳು ಕಡಿಮೆ-ಗುಣಮಟ್ಟದ ಸರಕುಗಳಾಗಿ ಸಮಾಜದಲ್ಲಿ ಹರಡುತ್ತಿವೆ. ಸುಳ್ಳು ಅಥವಾ ಅರ್ಧಸತ್ಯದ ಸುದ್ದಿಗಳು ಕೆಲವೇ ಕ್ಷಣದಲ್ಲಿ ಜನಮನದ ನಂಬಿಕೆಯನ್ನು ಧಕ್ಕೆಗೊಳಿಸು ತ್ತವೆ. ಗುಣಮಟ್ಟದ ಮಾರುಕಟ್ಟೆಯಿಂದ ಹಂತಹಂತವಾಗಿ ಮಾಯವಾಗಿ ಮಾರುಕಟ್ಟೆ ಅಂದರೆ ಸಮಾಜ ಅಧಃಪತನದತ್ತ ಮುಖಮಾಡುವಂಥ ಸಂಗತಿ ಆತಂಕಾರಿ.

ಸೇವಾ ಪರಂಪರೆಯ ಮೌಲ್ಯ: ಇನ್ನೊಂದು ಕಡೆ, ಧರ್ಮಸ್ಥಳದ ನೂರಾರು ವರ್ಷಗಳ ಸೇವಾ ಪರಂಪರೆ ಇದೆ. ಶಿಕ್ಷಣ, ಆರೋಗ್ಯ, ಅನ್ನದಾನ, ಸಾಂಸ್ಕೃತಿಕ ಚಟುವಟಿಕೆ, ಧರ್ಮಸಹಿಷ್ಣುತೆ- ಇವೆಲ್ಲವೂ ಸಮಾಜಕ್ಕೆ ದಾರಿದೀಪವಾದ ಕಾರ್ಯಗಳು. ವೀರೇಂದ್ರ ಹೆಗ್ಗಡೆಯವರ ನಿಸ್ವಾರ್ಥ ಸೇವೆ ಜನಸಾಮಾನ್ಯರ ಬದುಕನ್ನು ಸ್ಪರ್ಶಿಸಿದೆ. ಇವೆಲ್ಲವೂ ಸಮಾಜವನ್ನು ನೈತಿಕ ತಳಹದಿಯ ಮೇಲೆ ಬೆಳಗಿಸುವ ಆಶಯದ ಪ್ರಯತ್ನಗಳು. ಆದರೆ ಇಂದಿನ ಅಲೆ, ಈ ಸೇವಾ ಇತಿಹಾಸವನ್ನೇ ಮಸುಕಾ ಗಿಸಲು ಪ್ರಯತ್ನಿಸುತ್ತಿರುವುದು ಆಘಾತಕಾರಿ.
ಸತ್ಯ-ಸುಳ್ಳಿನ ಗೊಂದಲ: ನೂರಾರು ವರ್ಷಗಳಿಂದ ಸಮಾಜ ವನ್ನು ಒಂದಾಗಿಸಿರುವ ಧರ್ಮ ಸ್ಥಳವೇ ಸತ್ಯ-ಸುಳ್ಳಿನ ಗೊಂದಲದಲ್ಲಿ ಜನರ ಕಣ್ಮುಂದೆ ಪ್ರಶ್ನೆಗೆ ಒಳಗಾಗುತ್ತಿದೆ. ಇದನ್ನೇ ಅಕರ‍್ಲಾ- ಹೇಳಿದ್ದು ‘ಮಾರುಕಟ್ಟೆ ವಿಫಲತೆ’ ಎಂದು. ಅಲ್ಲಿ ಉತ್ತಮ ಗುಣಮಟ್ಟದ ವಸ್ತುಗಳು (ಸತ್ಯ, ಸೇವೆ, ಧರ್ಮ) ಮಸುಕಾಗುತ್ತವೆ ಮತ್ತು ಕೆಟ್ಟ ಗುಣಮಟ್ಟದ ವಸ್ತುಗಳು (ಅಪವಾದ, ಸುಳ್ಳು, ಕಪಟ) ಪ್ರಭಾವಶಾಲಿಯಾಗುತ್ತವೆ.
ಹೊಳೆಯುವ ಅಮೃತಸೇವೆ: ಕೇವಲ ಇಪ್ಪತ್ತನೇ ವಯಸ್ಸಿನಲ್ಲಿ ಧರ್ಮಸ್ಥಳದ ಹೊಣೆಗಾರಿಕೆ ಹೊತ್ತು, ದೀರ್ಘಕಾಲದವರೆಗೆ ಸೇವಾಪಥವನ್ನು ಬೆಳಗಿಸುತ್ತಾ ಬಂದಿರುವ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂದು 55 ವರ್ಷಗಳ ನಿರಂತರ ಸೇವಾ ಸಾಧನೆಯೊಂದಿಗೆ ಜನಮನಗಳಲ್ಲಿ ಅಮೃತ ಪ್ರತಿಮೆಯಾಗಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.
ಅವರು ಕೈಗೊಂಡ ದಾರಿಯು ಧಾರ್ಮಿಕತೆಗೆ ಸೀಮಿತವಾಗಿರದೆ, ಸಾಮಾಜಿಕ ಸುಧಾರಣೆ, ಶಿಕ್ಷಣದ ವಿಸ್ತರಣೆ, ಆರೋಗ್ಯದ ಪ್ರಸರಣೆ, ಗ್ರಾಮಾಭಿವೃದ್ಧಿ, ಮಹಿಳಾ ಸಬಲೀಕರಣ, ಹಸಿದವನಿಗೆ ಅನ್ನದಾನ- ಇಂಥ ಅನೇಕ ಕ್ಷೇತ್ರಗಳಲ್ಲಿ ಜನಜೀವನವನ್ನು ಮುಟ್ಟಿದೆ. ಹಸಿದವನ ಹೊಟ್ಟೆ ತುಂಬಿಸುವ ಹೃದಯ, ವಿದ್ಯಾರ್ಥಿಗೆ ಬೆಳಕು ತುಂಬಿಸುವ ದೃಷ್ಟಿ, ಬಡವನಿಗೆ ಆಶಾಕಿರಣ ನೀಡುವ ಕೈ, ಸಮುದಾಯಗಳನ್ನು ಒಗ್ಗೂಡಿಸುವ ಬಲ- ಇವೆಲ್ಲವೂ ಹೆಗ್ಗಡೆಯವರ ಸೇವೆಯ ಜೀವಾಳ.
ಆದರೆ ಇಂಥ ತ್ಯಾಗಮಯ ಜೀವನದ ಮೇಲೆ ಮಾನಹಾನಿಕರ ಅಪವಾದಗಳ ನೆರಳು ಬೀಳಲು ಪ್ರಯತ್ನಿಸುವುದು ನಿಜಕ್ಕೂ ದುಃಖದ ಸಂಗತಿ. ಸತ್ಯದ ಹಾದಿಯಲ್ಲಿ ನಡೆವವರ ಮೇಲೆ ಸುಳ್ಳಿನ ಕಲ್ಲು ಎಸೆಯುವುದು, ಫಲ ಕೊಡುವ ಮರದ ಮೇಲೆ ಕಲ್ಲು ಎಸೆಯುವಂತಾಗಿದೆ.
ಸಮಾಜದ ಅಂಗಳದಲ್ಲಿ ಹೊಳೆಯುವ ಸೂರ್ಯನನ್ನು ಮೋಡದ ಹಿಂದಕ್ಕೆ ಮುಚ್ಚುವ ಪ್ರಯತ್ನ ಎಷ್ಟೇ ನಡೆದರೂ, ಸೂರ್ಯನು ಮತ್ತೆ ಬೆಳಗುವುದೇ. ಅದೇ ರೀತಿ, ಪೂಜ್ಯ ಹೆಗ್ಗಡೆಯವರ ಸೇವಾಪಥ ವನ್ನು ಯಾವುದೇ ಸುಳ್ಳು ಪ್ರಚಾರ ಕಳೆಗಟ್ಟಲು ಸಾಧ್ಯವಿಲ್ಲ. ಧರ್ಮಸ್ಥಳದ ಅನ್ನದಾನ ಮಂದಿರದಲ್ಲಿ ತಿನ್ನುವ ಲಕ್ಷಾಂತರ ಹಸಿದ ಬಾಯಿಗಳ ಆಶೀರ್ವಾದ, ಆಸ್ಪತ್ರೆಗಳಲ್ಲಿ ಬದುಕು ಪಡೆದ ಬಡಜನರ ಕೃತಜ್ಞತೆ, ಶಿಕ್ಷಣದಿಂದ ಹೊಸ ಬದುಕು ಕಟ್ಟಿಕೊಂಡ ಯುವಜನರ ಕಣ್ಣೀರಿನ ಸಂತೋಷ- ಇವೆಲ್ಲವೂ ಸುಳ್ಳಿನ ಜಾಲವನ್ನು ಹರಿದು ಹಾಕುವ ಸತ್ಯಸಾಕ್ಷಿಗಳು.
ಅಪವಾದ ಕ್ಷಣಿಕ, ಸೇವೆ ಶಾಶ್ವತ: ಸತ್ಯವೇ ನಮ್ಮ ನೆಲದ ಉಸಿರು, ಧರ್ಮವೇ ನಮ್ಮ ಶಕ್ತಿ. ಆದ್ದರಿಂದ, ಸಮಾಜದ ಪ್ರತಿಯೊಬ್ಬರೂ ಸೇವಾಪಥದಲ್ಲಿ ತೊಡಗಿರುವವರನ್ನು ಗೌರವಿಸುವುದು, ಅವರ ಹಾದಿಯನ್ನು ಶುದ್ಧವಾಗಿಡುವುದು ನಮ್ಮ ಜವಾಬ್ದಾರಿ. ಪೂಜ್ಯ ಹೆಗ್ಗಡೆಯವರಂಥ ಸೇವಾಧನರು ಸಮಾಜದ ಶಿರೋಮಣಿಗಳಾಗಿದ್ದು, ಅವರ ಮೇಲೆ ಏರುವ ಪ್ರತಿಯೊಂದು ಸುಳ್ಳಿನ ಅಲೆ, ಕೊನೆಗೂ ಸತ್ಯದ ತೀರದಲ್ಲಿ ಕುಸಿದು ಬೀಳುವುದೇ ನಿಶ್ಚಿತ.
ಸಮಾಜದಲ್ಲಿ ಒಂದು ಹಳೆಯ ಮಾತಿದೆ: “ಹಣ್ಣು ಕೊಡುವ ಮರದ ಮೇಲೆಯೇ ಕಲ್ಲು ಬೀಳುತ್ತದೆ". ಜನಮನಗಳಲ್ಲಿ ಆಳವಾಗಿ ಬೇರೂರಿದವರ ಮೇಲೆ, ಸೇವೆಯಿಂದ ಅಚ್ಚಳಿಯದ ಗುರುತು ಮೂಡಿಸಿ ದವರ ಮೇಲೆ, ಸುಳ್ಳಿನ ಕಲ್ಲುಗಳು ಎಸೆಯಲ್ಪಡುವುದು ಹೊಸದೇನಲ್ಲ. ಆದರೆ ಸೂರ್ಯನನ್ನು ಕೈಯಿಂದ ಮುಚ್ಚಲು ಸಾಧ್ಯವಿಲ್ಲವೆಂಬಂತೆ, ಹೆಗ್ಗಡೆಯವರ ಸೇವಾಸಾಧನೆಯನ್ನು ಯಾವುದೇ ಕಪಟ ಆರೋಪಗಳು ಮಸುಕಾಗಿಸಲು ಸಾಧ್ಯವಿಲ್ಲ.
ಇಲ್ಲಿ ಪ್ರಶ್ನೆ ಕೇವಲ ಹೆಗ್ಗಡೆಯವರ ವೈಯಕ್ತಿಕ ಗೌರವದ ಬಗ್ಗೆ ಅಲ್ಲ; ಇದು ಸಮಾಜದ ಸಂಸ್ಕೃತಿಯ ಕನ್ನಡಿ. ಸೇವೆಯನ್ನು ಗೌರವಿಸಬೇಕೋ, ಸುಳ್ಳಿನ ಸದ್ದುಗಳಿಗೆ ತಲೆಬಾಗಬೇಕೋ ಎಂಬುದು ಸಮಾಜದ ವಿವೇಕದ ಪರೀಕ್ಷೆ. ಪೂಜ್ಯ ಹೆಗ್ಗಡೆಯವರಂಥ ವ್ಯಕ್ತಿಗಳ ವಿರುದ್ಧ ಅಪಪ್ರಚಾರ ನಡೆಸುವುದು, ಮೂಲತಃ ಸಮಾಜದ ಒಳಿತಿನ ವಿರುದ್ಧ ನಡೆಯುವ ಕೃತ್ಯ. ಅದನ್ನು ತಿರಸ್ಕರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಆದರೆ, ಇಂಥ ತ್ಯಾಗಮಯ ಬದುಕಿನ ಮೇಲೆ ಇತ್ತೀಚೆಗೆ ಕೇಳಿಬರುತ್ತಿರುವ ಮಾನಹಾನಿಕರ ಅಪವಾದಗಳು ಅಸಹ್ಯಕರವೂ, ಅಸಮಂಜಸವೂ ಆಗಿವೆ. ಇವು ಕೇವಲ ಒಬ್ಬ ವ್ಯಕ್ತಿಯ ಹೆಸರನ್ನು ಮಸುಕಾಗಿಸುವ ಪ್ರಯತ್ನವಲ್ಲ; ಸಮಾಜದ ಮೂಲ ಮೌಲ್ಯಗಳ ಮೇಲೆ ನಡೆದಿರುವ ದಾಳಿ. ಇತಿಹಾಸ ಸಾಕ್ಷಿ- ಸತ್ಯಸೇವಕರ ಮೇಲೆ ಸುಳ್ಳಿನ ಕಲ್ಲುಗಳು ಬೀಳುವುದು ಹೊಸದೇನಲ್ಲ.
ಆದರೆ, ಸುಳ್ಳು ಕ್ಷಣಿಕ, ಸೇವೆ ಶಾಶ್ವತ. ಕತ್ತಲೆ ಎಷ್ಟೇ ಗಾಢವಾಗಿದ್ದರೂ, ಬೆಳಕನ್ನು ಆವರಿಸಲಾರದು. ಇದೇ ಸತ್ಯ ಹೆಗ್ಗಡೆಯವರ ಬದುಕಿನ ಹಾದಿಗೂ ಅನ್ವಯಿಸುತ್ತದೆ. ಇಲ್ಲಿ ಸಮಾಜದ ಪಾತ್ರ ಮುಖ್ಯ. ಸೇವೆಯ ಪಥವನ್ನು ಗೌರವಿಸುವುದೋ, ಸುಳ್ಳಿನ ಸದ್ದುಗಳಿಗೆ ತಲೆಬಾಗುವುದೋ ಎಂಬುದು ಜನಮನದ ವಿವೇಕದ ಪ್ರಶ್ನೆ. ಸೇವೆ ಮಾಡಿದವರನ್ನು ಕಾಪಾಡುವುದು ಸಮಾಜದ ಹೊಣೆ, ಸುಳ್ಳನ್ನು ತಿರಸ್ಕರಿಸುವುದು ಜನರ ಕರ್ತವ್ಯ.
ಸಮಾಜದ ವಿರುದ್ಧದ ಅಪರಾಧ: ಸಮಾಜದಲ್ಲಿ ಒಬ್ಬ ವ್ಯಕ್ತಿಯ ನಿಷ್ಠೆ, ಪ್ರಾಮಾಣಿಕತೆ ಮತ್ತು ಜೀವನಪರ್ಯಂತದ ಸೇವೆಯನ್ನು ಕಳಂಕಗೊಳಿಸುವ ಅಪಪ್ರಚಾರವು ಕೇವಲ ವ್ಯಕ್ತಿಗಷ್ಟೇ ಹಾನಿ ಮಾಡುವುದಿಲ್ಲ, ಅದು ಸಮಾಜದ ವಿರುದ್ಧವೇ ಎಸಗಲ್ಪಡುವ ಅಪರಾಧ. ಸತ್ಯದ ದೀಪವನ್ನು ಹೊತ್ತವರು ಯಾವಾಗಲೂ ಸುಳ್ಳಿನ ಗಾಳಿಗೆ ಗುರಿಯಾಗಿzರೆ. ನಿಜವಾದ ಹಿತವನ್ನು ಮಾಡುವವರು ವಿರಳರು; ಸುಳ್ಳನ್ನು ಹರಡುವವರು ಅನೇಕರು.
ಧರ್ಮಸ್ಥಳದ ಸೇವಾ ಚಟುವಟಿಕೆಗಳು ವಿರಳವಾದ ಹಿತಕಾರ್ಯಗಳ ಉದಾಹರಣೆ. ಇಂಥ ಸೇವೆ ಯನ್ನು ಕುಗ್ಗಿಸಲು ಸುಳ್ಳು ಬಾಣಗಳು ಬೀಳುವುದು ಆಶ್ಚರ್ಯದ ವಿಷಯವಲ್ಲ. ನಮ್ಮ ವಿವೇಕ ವನ್ನು ಉಪಯೋಗಿಸದೆ ಬಾಲಿಶವಾದ ಸುಳ್ಳನ್ನು ಆಶ್ರಯಿಸವುದು ಅಪಾಯಕಾರಿ. ಸುಳ್ಳಿನ ಪ್ರಚಾರ ಮಾಡುವವರು ಇದ್ದೇ ಇರುತ್ತಾರೆ.
ಆದರೆ ಅದನ್ನು ವಿಚಾರಿಸದೆ ನಂಬುವವರೇ ನಾಶದ ಮಾರ್ಗ ಹಿಡಿಯುತ್ತಾರೆ. ಸುಳ್ಳಿನ ನೆರಳು ಕ್ಷಣಿಕ. ಆದರೆ ಸೇವೆಯ ಸೂರ್ಯ ಅಸ್ತವಾಗುವುದಿಲ್ಲ. ಧರ್ಮಸ್ಥಳದ ಇತಿಹಾಸವೇ ಸತ್ಯಕ್ಕೆ ಶಾಶ್ವತ ಸ್ಮಾರಕ. ಧರ್ಮಸ್ಥಳದ ಬೆಳಕನ್ನು ಯಾವ ಸುಳ್ಳಿನ ಬಿರುಗಾಳಿಯೂ ನಂದಿಸಲಾರದು. ಅದಕ್ಕಾಗಿ ಸಮಾಜದ ಪ್ರತಿಯೊಬ್ಬರ ಕರ್ತವ್ಯ ಸತ್ಯದೊಂದಿಗೆ ನಿಲ್ಲುವುದು, ಸೇವೆಗೆ ಕೈಜೋಡಿಸುವುದು.
ಕುಸಿತದ ಸಾಮ್ಯತೆಗಳು: ಮಾರುಕಟ್ಟೆ ಕುಸಿತ ಮತ್ತು ಸಮಾಜದ ಅಧಃಪತನದ ನಡುವೆ ಹಲವಾರು ಸಾಮ್ಯತೆಗಳಿವೆ. ಅವನ್ನು ಹೀಗೆ ವಿವರಿಸಬಹುದು:
ನಂಬಿಕೆಯ ಕುಸಿತ: ಮಾರುಕಟ್ಟೆಯಲ್ಲಿ ಹೂಡಿಕೆದಾರರು ಪರಸ್ಪರ ನಂಬಿಕೆ ಕಳೆದುಕೊಂಡರೆ, ಷೇರುಗಳ ಬೆಲೆ ಏಕಾಏಕಿ ಕುಸಿಯುತ್ತದೆ. ಸಮಾಜದ ಮೌಲ್ಯಗಳಾದ ಸತ್ಯ, ನೀತಿ ಮೇಲೆ ನಂಬಿಕೆ ಕಳೆದು ಜನರು ಸ್ವಾರ್ಥದ ದಾರಿಯಲ್ಲಿ ನಡೆದರೆ, ಸಮಾಜದಲ್ಲಿ ಅಧಃಪತನ ಸಂಭವಿಸುತ್ತದೆ. ಮಾರುಕಟ್ಟೆಯಲ್ಲಿ ಒಂದು ವದಂತಿ, ಭಯ ಅಥವಾ ಅನುಮಾನವು ಹೂಡಿಕೆದಾರರನ್ನು ಭಾರಿ ಪ್ರಮಾಣದಲ್ಲಿ ಷೇರು ಮಾರಾಟಕ್ಕೆ ಒತ್ತಾಯಿಸುತ್ತದೆ. ಸಮಾಜದಲ್ಲಿ ಸುಳ್ಳು ಸುದ್ದಿ, ಅಪಪ್ರಚಾರ ಅಥವಾ ಗಾಳಿಸುದ್ದಿ ಜನರ ಮನಸ್ಸಿನಲ್ಲಿ ಭೀತಿಯನ್ನೂ, ವಿಭಜನೆಯನ್ನೂ ಉಂಟುಮಾಡುತ್ತದೆ.
- ಅಸ್ಥಿರತೆ ಮತ್ತು ಆಘಾತ: ಮಾರುಕಟ್ಟೆಯಲ್ಲಿ ಲಾಭದ ಹವಣೆಯಿಂದ ಕೃತಕ ಬೆಲೆ ಏರಿಕೆ, ಕೃತಕ ಬೇಡಿಕೆ ಉಂಟುಮಾಡಿದಾಗ ಅವಶ್ಯವಾಗಿ ಕುಸಿತ ಬರುತ್ತದೆ. ಸಮಾಜದಲ್ಲಿ ವ್ಯಕ್ತಿಗಳು ಸಮಾಜಹಿತವನ್ನು ಬಿಟ್ಟು ಸ್ವಾರ್ಥ, ಅಹಂಕಾರದ ಹಂಬಲದಲ್ಲಿ ಮುಳುಗಿದಾಗ ಮೌಲ್ಯಗಳ ಕುಸಿತ ಸಹಜ. ಮಾರುಕಟ್ಟೆ ಕುಸಿತವು ಅಕಸ್ಮಿಕವಾಗಿ ಅನಿಶ್ಚಿತತೆಯನ್ನು ಸೃಷ್ಟಿಸಿ ಕೆಲವೇ ದಿನಗಳಲ್ಲಿ ಸಾವಿರಾರು ಕೋಟಿ ನಷ್ಟ ಉಂಟುಮಾಡಬಹುದು. ಆದರೆ ಸಮಾಜದ ಅಧಃಪತನ ವು ನಿಧಾನವಾಗಿ ಮೌಲ್ಯಗಳ ಕುಸಿತದಿಂದ ನಡೆಯುತ್ತದೆ, ಆದರೆ ಅದರ ಪರಿಣಾಮ ಆಳವಾದುದು- ಅಂದರೆ ಕುಟುಂಬ ವ್ಯವಸ್ಥೆ, ಶಿಕ್ಷಣ, ನಂಬಿಕೆ, ಧರ್ಮ ಇವೆಲ್ಲವೂ ಕುಗ್ಗುತ್ತವೆ.
ಸತ್ಯವು ಸತ್ಯವಾಗಿಯೇ ಉಳಿಯುತ್ತದೆ: ಮಾರುಕಟ್ಟೆ ಕುಸಿತವು ಹಣಕಾಸಿನ ವಿಶ್ವಕ್ಕೆ ಏನೋ, ಸಮಾಜದ ಅಧಪತನವು ಮಾನವ ಜೀವನಕ್ಕೆ ಅದೇ ಆಗಿರುತ್ತದೆ. ಎರಡರ ಮೂಲ ಕಾರಣವೂ ನಂಬಿಕೆಯ ನಷ್ಟ ಮತ್ತು ಮೌಲ್ಯಗಳ ಕುಸಿಯುವಿಕೆ. ಸತ್ಯದ ನಡಿಗೆ ನಿಧಾನ. ಸತ್ಯ ಒಂದು ಹೆಜ್ಜೆ ಮುಂದಿಡುವಷ್ಟರಲ್ಲಿ, ಸುಳ್ಳು ಪ್ರಪಂಚವನ್ನು ಒಂದು ಸುತ್ತು ಸುತ್ತಿ ಬಂದುಬಿಡಬಹುದು. ಸುಳ್ಳನ್ನು ಸಾವಿರ ಸಲ ಹೇಳಿದರೆ ಅದು ಸತ್ಯವಾಗುತ್ತದೆ ಎಂಬುದು ಗೊಬೆಲ್ಸ್ ಸಿದ್ಧಾಂತ. ಆದರೆ, ಸುಳ್ಳನ್ನು ಸತ್ಯವೆಂದು ನಂಬಿಸಬಹುದಷ್ಟೇ ಹೊರತು, ನಿಜವಾದ ಸತ್ಯ ಸತ್ಯವಾಗಿಯೇ ಉಳಿದಿ ರುತ್ತದೆ ಎಂಬುದೇ ಸತ್ಯ! ಇದು ಕೇವಲ ತಾತ್ವಿಕ ವಾಕ್ಯವಲ್ಲ, ಇದು ಇಂದು ಎಚ್ಚರಿಕೆಯ ಗಂಟೆ ಯೂ ಹೌದು.
(ಲೇಖಕರು ನಿವೃತ್ತ ಪ್ರಾಂಶುಪಾಲರು)