ಬಸವ ಮಂಟಪ
ರವಿ ಹಂಜ್
ಅಷ್ಟಕ್ಕೂ ಈ ‘ಬಸವ ಸಂಸ್ಕೃತಿ ಅಭಿಯಾನ’ದ ಪ್ರಮುಖ ಉದ್ದೇಶವೇನಾಗಿತ್ತು? ಅದೇ ಹಳೆಯ ವೀರಶೈವ ಬೇರೆ ಲಿಂಗಾಯತ ಬೇರೆ, ಆಚಾರ ಸಲ್ಲದು, ವಿಚಾರ ಬಿಡಲಾಗದು, ಬಸವಣ್ಣ ಮತ್ತು ಶರಣರು ಮಾಡಿದ್ದು ಕಮ್ಯುನಿಸ್ಟ್ ಕ್ರಾಂತಿ, ಇತ್ಯಾದಿ ನಾಸ್ತಿಕವಾದದ ಹೊಸ ಪ್ರಯೋಗವೇ ಈ ವರ್ಷದ ಬಸವ ಸಂಸ್ಕೃತಿ ಅಭಿಯಾನವಾಗಿತ್ತಷ್ಟೇ. ಆದರೆ ಇವರ ದೂ(ದು) ರಾಲೋಚನೆಯ ಹಿಂದೆ ಅಖಂಡ ವೀರಶೈವ ಧರ್ಮದ ಧರ್ಮಭಂಜನೆಯಷ್ಟೇ ಅಲ್ಲದೆ ಇವರ ವಿಶೇಷಾರ್ಥದ ಲಿಂಗಾ ಯತವೂ ನಿರ್ನಾಮವಾಗಲಿದೆ.
ಏಕೆಂದರೆ ಇವರ ಒಟ್ಟು ಉದ್ದೇಶ- ಹಿಂದೂ ಪ್ರಭೇದದ ಮತಧರ್ಮಗಳ ನಾಶವೇ ಏಕಂಶ ಕಾರ್ಯ ಕ್ರಮವಾಗಿದೆ. ಇದರ ಅಂಗವಾಗಿ ‘ಶಿವನೇ ಬೇರೆ, ಲಿಂಗವೇ ಬೇರೆ’ ಎನ್ನುತ್ತಾ ಮೂರ್ತಿಪೂಜೆ ನಮ್ಮದಲ್ಲ ಎಂದರು. ನಂತರ ಆಚಾರಗಳನ್ನು ನಿರಾಕರಿಸಿ ಕೇವಲ ವಿಚಾರಗಳನ್ನು ಅದರಲ್ಲೂ ಕಮ್ಯುನಿ ವಿಚಾರಗಳನ್ನೇ ಪ್ರಮುಖವಾಗಿ ಲಿಂಗಾಯತ ಸಿದ್ಧಾಂತಗಳನ್ನಾಗಿಸಿದರು.
ಲಿಂಗವು ಭೌತಶಾಸ್ತ್ರದ ಕಾರ್ಬನ್ ಎಂದರು. ಹೀಗೆ ಒಂದೊಂದೇ ಆಸ್ತಿಕ, ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳನ್ನು ಅಳಿಸುತ್ತಾ ನಾಸ್ತಿಕವಾದವನ್ನು ಸ್ಥಾಪಿಸಿ ಅಂತಿಮವಾಗಿ ಅಖಂಡ ವೀರಶೈವ ಧರ್ಮವನ್ನು ಶೂನ್ಯಗೊಳಿಸುವ ಗುರಿಯೇ ಇವರ ಏಕಮಾತ್ರ ಉದ್ದೇಶವಾಗಿದೆ.
ಒಂದು ಧರ್ಮವನ್ನು ನಾಶಮಾಡಬೇಕೆಂದರೆ ಅದರ ಪೂಜಾರಿಗಳನ್ನು ಉರ್ಫ್ ಧಾರ್ಮಿಕ ಮುಖಂಡರನ್ನು ಮತ್ತು ಅವರ ಧಾರ್ಮಿಕ ಕ್ಷೇತ್ರಗಳನ್ನು ಇಲ್ಲವಾಗಿಸಬೇಕು. ಆಗ ಧರ್ಮಬೋಧನೆ ಮಾಡುವವರು ಮತ್ತು ಕ್ಷೇತ್ರಗಳು ಇಲ್ಲದೆ ಧರ್ಮ ತ್ವರಿತವಾಗಿ ನಾಶವಾಗುತ್ತದೆ. ಇದನ್ನೇ ಇಸ್ಲಾಂ ದಾಳಿಯಲ್ಲಿ ಪ್ರಯೋಗಿಸಿ ಬೌದ್ಧ ಧರ್ಮವನ್ನು ಅತ್ಯಂತ ತ್ವರಿತವಾಗಿ ನಾಶಪಡಿಸಲಾಯಿತು.
ಇದನ್ನೂ ಓದಿ: Ravi Hunj Column: ಎಲ್ಲಿಗೆ ಬಂತು ಸಂಗಯ್ಯಾ, ಅಲ್ಲಿಗೆ ಬಂತು ಸಂಗಯ್ಯಾ ಕಾನು ಕಾನು ಉತ್ತತ್ತಿ !
ಭಾರತದಲ್ಲಿ ಬೌದ್ಧಧರ್ಮ ನಾಶವಾಗಲು ವಿದೇಶಿ ದಾಳಿಯೇ ಪ್ರಮುಖ ಕಾರಣ ಎಂದು ಇಡೀ ಜಗತ್ತೇ ಬಲ್ಲದು. ಅದನ್ನೇ ಅಂಬೇಡ್ಕರ್ ಹೀಗೆ ಅನುಮೋದಿಸಿದ್ದಾರೆ: ... The religion of the Buddha got the severest blow from the Muslim invasion. They destroyed the Buddhist idols and killed the Bhikkus. They mistook the great Nalanda University as the Fort of Buddhists and killed a large number of monks thinking that they were soldiers. The few Bhikkus who escaped the onslaught fled away to the neighboring countries like Nepal, Tibet and China (Modernisation of Buddhism: Contributions of Ambedkar and Dalai Lama XIV, book by Lella Karunyakara, pg 223 & 226)-ಅಂದರೆ ಬೌದ್ಧಧರ್ಮವನ್ನು ಇಲ್ಲವಾಗಿಸಿದ್ದು ಮುಸ್ಲಿಂ ದಾಳಿ!
ವಿದೇಶಿ ಆಕ್ರಮಣಕಾರರಾದ ಮುಸಲ್ಮಾನರು ಬೌದ್ಧಧರ್ಮಕ್ಕೆ ಕೊಡಲಿಯನ್ನು ಹಾಕಿದರು. ನಳಂದಾ ವಿಶ್ವವಿದ್ಯಾಲಯವನ್ನು ಬೌದ್ಧರ ಕೋಟೆ ಎಂದೂ ಬೌದ್ಧ ಬಿಕ್ಷುಗಳನ್ನು ಸೈನಿಕರೆಂದು ಬಗೆದು ಅವರನ್ನು ಕೊಂದರು. ಆಗ ಸನ್ಯಾಸಿಗಳಾಗಿದ್ದ ಬೌದ್ಧ ಬಿಕ್ಷುಗಳು ಇಲ್ಲದಂತಾಗಿ ಬೌದ್ಧ ಧರ್ಮ ಅವನತಿಗೊಂಡಿತು. ಅಳಿದುಳಿದ ಬೌದ್ಧ ಭಿಕ್ಷುಗಳು ಚೈನಾ, ನೇಪಾಳಕ್ಕೆ ಓಡಿ ಹೋದರು.
ಆದರೆ ಮೂರ್ತಿಪೂಜಕರಾಗಿದ್ದ ಬೌದ್ಧರು ಮತ್ತು ಹಿಂದೂಗಳನ್ನು ಮುಸ್ಲಿಮರು ಕೊಚ್ಚಿ ಹಾಕಿದರು ಎಂದು ಇತಿಹಾಸವು ತಿಳಿಸುತ್ತದೆ. ಈಗ ಅಂಥ ಭೌತಿಕ ದಾಳಿಗಳು ಸಾಧ್ಯವಿಲ್ಲದ ಕಾರಣ ತಾತ್ವಿಕ ದಾಳಿಗಳನ್ನು ರೂಪಿಸಲಾಗಿದೆ. ಈ ತತ್ವದನ್ವಯ ಮೊದಲಿಗೆ ‘ವೀರಶೈವ ಬೇರೆ, ಲಿಂಗಾಯತ ಬೇರೆ’ ಎಂಬ ವಿಭಜನೆಯ ಬುನಾದಿ ಹಾಕಲಾಯಿತು. ನಂತರ ವೀರಶೈವ ಅವಿವೇಕ, ಮೌಢ್ಯ, ಮೂರ್ತಿ ಪೂಜೆ ಮಾಡುವವರು ಎಂದು ಹೀಗಳೆದು ಮಸಿ ಬಳಿಯಲಾಯಿತು.
ಜತೆ ಜತೆಗೆ ಲಿಂಗಾಯತಕ್ಕೆ ವೈಚಾರಿಕ, ವೈಜ್ಞಾನಿಕ, ಸಮಸಮಾಜ ಎನ್ನುವ ಮೇಕಪ್ ಹಚ್ಚಿ ಅಂದ ಗಾಣಿಸಲಾಯಿತು. ಈ ಅಂದಚೆಂದಕ್ಕೆ ಮುಗ್ಧರು ಆಕರ್ಷಿಸಲ್ಪಟ್ಟರು. ನಂತರ ನಾವು ಹಿಂದೂ ಅಲ್ಲ. ದೇವಸ್ಥಾನಗಳಿಗೆ ಹೋಗಬೇಡಿ. ಲಿಂಗ ಶಿವನಲ್ಲ. ಲಿಂಗ ಪಿಂಡಾಂಡ ಸ್ವರೂಪ, ಕಂತೆ ಬ್ರಹ್ಮಾಂಡದ ಸ್ವರೂಪ ಇತ್ಯಾದಿಯಾಗಿ ಹಾಡಿ ಹಾಡಿ ಆಕರ್ಷಿತ ಜನರನ್ನು ಹಾದಿ ತಪ್ಪಿಸಿದರು.

ಅಂದ ಹಾಗೆ ಈ ಪಿಂಡಾಂಡ ಬ್ರಹ್ಮಾಂಡ ಎಂದರೆ ಏನು? ಮೂಲದಲ್ಲಿ ಶಕ್ತಿ ವಿಶಿಷ್ಟಾದ್ವೈತದ ಸಿದ್ಧಾಂತವೇ ಇದಲ್ಲವೇ! ಬೀಜದಲ್ಲಿ ಮರವಾಗುವ ಶಕ್ತಿಯು ಅಡಗಿರುವಂತೆ ಮನುಷ್ಯನಲ್ಲಿ ದೇವರಾಗುವ ಶಕ್ತಿಯು ಅಡಗಿರುತ್ತದೆ. ಬೀಜವೃಕ್ಷಗಳ ತಾದಾತ್ಮ್ಯ ಸಂಬಂಧವೇ ಜೀವ-ದೇವರು ಗಳಲ್ಲಿರುವುದು. ಬೀಜವು ಮೊಳೆತು, ಬೆಳೆದು ಗಿಡವಾಗುವುದಕ್ಕೆ ಸ್ಥಲಜಲಕಾಲಾದಿಗಳು ಹೇಗೆ ಅವಶ್ಯವೋ ಹಾಗೆಯೇ ಜೀವನು ತನ್ನ ಸಂಕುಚಿತ ಶಕ್ತಿಯನ್ನು ವಿಕಾಸಗೊಳಿಸಿ ದೇವರಾಗುವ ಮಾರ್ಗಕ್ಕೆ ಸಾಧನವಾಗಿ ಮತಧರ್ಮವು ಅವಶ್ಯ ಎಂದು ವೀರಶೈವವು ಬೋಧಿಸುತ್ತದೆ.
ಹಾಗಾಗಿಯೇ ವೀರಶೈವ ತತ್ವವು ಜೀವಜಗತ್ತುಗಳನ್ನು ಮಿಥ್ಯವೆಂದು ಹೇಳುವುದಿಲ್ಲ. ದೇಹವನ್ನಲ್ಲ ಗಳೆಯುವುದಿಲ್ಲ, ಭೋಗವನ್ನು ದುಃಖಪ್ರದವೆಂದು ಪರಿಗಣಿಸುವುದಿಲ್ಲ. ಭೋಗವನ್ನು ಈಡೇರಿಸಿ ಕೊಳ್ಳಲು ಅನುವಾಗುವ ವೃತ್ತಿಗಳನ್ನು ತುಚ್ಛವಾಗಿ ಕಾಣುವುದಿಲ್ಲ. ಈ ಜಗದಾದಿಗಳೇ ಜೀವನು ಶಿವನಾಗುವ ವಿಕಾಸಮಾರ್ಗಕ್ಕೆ ಮುಖ್ಯ ಸಾಧನಗಳೆಂಬ ವಾಸ್ತವಾಂಶವನ್ನು ಹೇಳುತ್ತದೆ.
ಜೀವಜಗತ್ತುಗಳೆಲ್ಲವೂ ದೇವರ ಅಂಶಗಳೇ ಆಗಿವೆ. ಇದನ್ನೇ ಸರಳವಾಗಿ ಅರ್ಥವಾಗುವಂತೆ ವಚನಗಳ ಮೂಲಕ ಹೇಳಲಾಗಿದೆ. ಇನ್ನು ‘ತತ್ ತ್ವಂ ಅಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಂ ಬ್ರಹ್ಮ, ಅಯಂ ಆತ್ಮ ಬ್ರಹ್ಮ, ಸರ್ವಂ ಖಲ್ವಿದಂ ಬ್ರಹ್ಮ’ ಇವುಗಳ ಅರ್ಥವೇನು? ಅಹಂ ಎಂದರೆ ಪಿಂಡಾಂಡ, ಬ್ರಹ್ಮಾಸ್ಮಿ ಎಂದರೆ ಬ್ರಹ್ಮಾಂಡ ಎಂಬ ಅರುಹಿನ ಕುರುಹೇ ಲಿಂಗವಲ್ಲವೇ!
ಇದ್ಯಾವುದೂ ಈ ಅಲ್ಪಮತಿ ಕಾವಿಗಳಿಗೆ ಅರ್ಥವಾಗುವುದಿಲ್ಲ. ಹಾಗಾಗಿಯೇ ಅವರು ಸುಲಭದ ಶಿಶುವಿಹಾರದ ಕೆಲವೇ ಕೆಲವು ವಚನಗಳಿಗೆ ಜೋತುಬಿದ್ದಿದ್ದಾರೆ. ಇರಲಿ, ಹೀಗೆ ವೀರಶೈವ ಆಚಾರ ವನ್ನು ನಿರಾಕರಿಸಿ ಗಾಂಪರು ತಮ್ಮ ಕಮ್ಯುನಿ ವಿಚಾರವೇ ಪ್ರಮುಖ ಎಂದರು.
ಮುಂಬರುವ ದಿನಗಳಲ್ಲಿ ಕಮ್ಯುನಿ ಸಿದ್ಧಾಂತಿಗಳು ಈ ಮಠೀಯ ಗಾಂಪರನ್ನೂ ಇಲ್ಲವಾಗಿಸಿ ಲಿಂಗಾಹತರಾಗಿಸಿ ಶಸ್ತ್ರವಿಲ್ಲದೆ ಧರ್ಮನಾಶ ಮಾಡಲಿzರೆ, ಹಾಗಾಗಿಯೇ ಕಮ್ಯುನಿಸ್ಟ್ ಮುಖಂಡ ರಾದ ಸಿದ್ದನಗೌಡ ಪಾಟೀಲ, ರಂಜಾನ್ ದರ್ಗಾ, ಮೀನಾಕ್ಷಿ ಬಾಳಿ, ನೀಲಾ, ಎಸ್.ಜಿ. ಸಿದ್ದರಾಮಯ್ಯ ಮುಂತಾದವರು ಬಸವ ಸಂಸ್ಕೃತಿ ಅಭಿಯಾನದಲ್ಲಿ ಪ್ರಮುಖ ಭಾಷಣಕಾರರಾಗಿರುವುದು.
ಈ ಕಮ್ಯುನಿಸ್ಟರ ಪ್ರಮೇಯಗಳು ಎಂಥ ಸುಳ್ಳುಗಳು ಎಂದು ಈ ಹಿಂದೆಯೇ ‘ಬಸವ ಮಂಟಪ’ ಅಂಕಣದಲ್ಲಿ ಸಾಕ್ಷಿ ಸಮೇತ ವಿವರಿಸಲಾಗಿದೆ. ಅವಿವೇಕಿ ಕಾವಿಧಾರಿ ಪ್ರಚಾರಪ್ರಿಯರು ಜನರ ಗಮನಕ್ಕಾಗಿ ಕಾತರಿಸಿ, “ನನ್ನನ್ನು ಗಮನಿಸಿ, ನನ್ನನ್ನು ಗಮನಿಸಿ" ಎಂದು ಚೀತ್ಕರಿಸಿ ಪೂತ್ಕರಿಸಿ ಜಿಗಿಜಿಗಿದಾಡುವ Histrionic Personality Disorder (HBD) ಯಾನೆ ನಾಟಕೀಯ ವ್ಯಕ್ತಿತ್ವದ ಅಸ್ವಸ್ಥತೆಯ ರೋಗಿಗಳಾಗಿರುವರು.
ಹಾಗಾಗಿಯೇ ನಿತ್ಯ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಲು ಹಾತೊರೆಯುತ್ತಿರುವರು. ತಮ್ಮ ಪ್ರತಿಯೊಂದು ಧಾರ್ಮಿಕ ಸಭೆಯಲ್ಲೂ ಭಾಷಣದಲ್ಲಿ “ನೆರೆದಿರುವ ಮಾಧ್ಯಮ ಮಿತ್ರರಿಗೂ..." ಎಂದು ವಿಶೇಷವಾಗಿ ಕರೆದು ಗೌರವ ಸಲ್ಲಿಸುವರು. ಸಮಾಜವು ಈ ಭಂಜಕರನ್ನು ಉಪೇಕ್ಷಿಸಿ ಮುಂದುವರಿಯಬೇಕಿದೆ.
ಇವರ ಅಸ್ವಸ್ಥತೆಯನ್ನು ಬಳಸಿಕೊಂಡು ಕಮ್ಯುನಿಸ್ಟರು ಧರ್ಮನಾಶಕ್ಕೆ ವ್ಯಾಪಕ ಬಲೆ ಹರಡಿದ್ದಾರೆ. ಢಾಳಾಗಿ ಕಾಣುವ ಈ ಧರ್ಮನಾಶದ ಅಂಶಗಳನ್ನು ಅಖಂಡ ವೀರಶೈವ ಲಿಂಗವಂತ ಸಮಾಜ ವಲ್ಲದೆ ಹಿಂದೂ ಸಮಾಜವೂ ಈಗ ಅರಿಯದಿದ್ದರೆ ಮುಂದೆ ವಿಚ್ಛಿದ್ರಗೊಂಡು ನೆಲೆಯಿಲ್ಲದೆ ನಿರ್ನಾಮ ಸಮಾಜವಾಗುವುದು ನಿಶ್ಚಿತ ಎಂದು ಈಗಾಗಲೇ ಪ್ರಕಟಿಸಿರುವ ಜಾತಿಗಣತಿಯಲ್ಲಿ ಸಾಬೀತಾಗಿದೆ.
ಹಾಗಾಗಿಯೇ ಮುಂಬರುವ ಜಾತಿಗಣತಿಯಲ್ಲಿ ಹಿಂದೂ ಎಂದು ಧರ್ಮವನ್ನು ಬರೆಸದೆ ಕೇವಲ ಜಾತಿ ಮಾತ್ರ ಬರೆಸಿ ಎಂದು ಸ್ವಘೋಷಿತ ಚಿಂತಕರು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಕರೆ ನೀಡುತ್ತಿದ್ದಾರೆ. ಇವರೆಲ್ಲರೂ ಒಂದೊಮ್ಮೆ ಜಾತಿ ವಿನಾಶದ ಪ್ರಮುಖರಾಗಿದ್ದರು ಎಂಬುದು ಸಾಮಾಜಿಕ ವಿಪರ್ಯಾಸ. ಅಂದಿನ ಇವರ ಜಾತಿವಿನಾಶ ಕಾರ್ಯಸೂಚಿಗೂ ಇಂದಿನ ಜಾತಿವಿಕಾಸ ಕಾರ್ಯಸೂಚಿಗೂ ನಡುವಿನ ಬಿಟ್ಟು ಹೋದ ಪದಗಳನ್ನು ತುಂಬಿಕೊಂಡರೆ ಎಲ್ಲವೂ ಸ್ಫಟಿಕ ಸದೃಶ!
ಇನ್ನು ವೀರಶೈವ ಲಿಂಗಾಯತ ಒಂದೇ ಎನ್ನುವ ಮತ್ತು ಬೇರೆ ಬೇರೆ ಎನ್ನುವ ಎರಡೂ ಬದಿಗಳಲ್ಲಿ ಜನಗಣತಿಯಲ್ಲಿ ಏನನ್ನು ಬರೆಸಬೇಕು ಎಂದು ತಮಗೆ ತೋಚಿದಂತೆ ಕರೆ ನೀಡುತ್ತಿದ್ದಾರೆ. ಅವರ ಕರೆಗಳನ್ನು ಜನರು ತಿರಸ್ಕರಿಸಿ, ಸರಕಾರಿ ಜನಗಣತಿ ಮಾನ್ಯತೆ ಪಡೆದ ಧರ್ಮಗಳನ್ನು ಮತ್ತು ಜಾತಿ ಗಳನ್ನು ನಮೂದಿಸುವುದು ಸೂಕ್ತ. ಸದ್ಯಕ್ಕೆ ಸರಕಾರದ ಜನಗಣತಿಯಲ್ಲಿ ಮಾನ್ಯತೆ ಇರುವ ಹಿಂದೂ, ಜೈನ, ಬೌದ್ಧ, ಸಿಖ್, ಮುಸ್ಲಿಂ ಮುಂತಾದ ಧರ್ಮಗಳ ಜತೆಯಲ್ಲಿ ‘ಇತರೆ’ ಮತ್ತು ‘ಹೇಳ ಲಿಚ್ಛಿಸುವುದಿಲ್ಲ’ ಎಂಬ ಇನ್ನೆರಡು ಆಯ್ಕೆಗಳಿವೆ.
ಜಾತಿ ಮೀಸಲಾತಿ ಪಡೆದಿರುವ ಮತ್ತು ಪಡೆಯಬಯಸುವ ಜಾತಿವಂತರು ಧರ್ಮದ ಆಯ್ಕೆಯಲ್ಲಿ ಹಿಂದೂ ಎಂದೇ ಬರೆಸಬೇಕು. ಯಾರದ್ದೇ ಮಾತು ಕೇಳಿ ನಮ್ಮ ಧರ್ಮ ‘ಲಿಂಗಾಯತ’ ಎಂದಾಗಲಿ, ‘ವೀರಶೈವ’ ಎಂದಾಗಲಿ, ‘ವೀರಶೈವ ಲಿಂಗಾಯತ’ ಎಂದಾಗಲಿ ಬರೆಸಿದರೆ ಅವರು ತಮ್ಮ ಉಪಜಾತಿ ಗಿರಬಹುದಾದ ಮೀಸಲಾತಿ ವಂಚಿತರಾಗುತ್ತಾರೆ.
ಆಗ ಯಾವ ಕಾವಿಯೂ ನಿಮ್ಮೊಂದಿಗೆ ತಹಶೀಲ್ದಾರ್ ಕಚೇರಿಗೆ ದಂಡಯಾತ್ರೆ ಬರುವುದಿಲ್ಲ. ಹಾಗಾಗಿ ಸದ್ಯಕ್ಕೆ ಆಯ್ಕೆಗಿರುವ ಹಿಂದೂ ಧರ್ಮ, ವೀರಶೈವ/ಲಿಂಗಾಯತ ಜಾತಿ, ಮತ್ತು ಅವರವರ ಉಪಜಾತಿಯಷ್ಟನ್ನೇ ಬರೆಸಬೇಕು. ಈ ಹಿಂದೆಯೇ ಹೇಳಿದಂತೆ ಸಮಗ್ರವಾಗಿ ವೀರಶೈವ ಲಿಂಗವಂತ ಮತವು ಪ್ರತ್ಯೇಕ ಧರ್ಮ ಎಂದು ಸಾಬೀತುಪಡಿಸಲು ಯಾವುದೇ ವಿಶೇಷ ಸಂಶೋಧನೆ, ಸಂಕಥನ, ಮಾರ್ಪು, ತೋರ್ಪು ಬೇಕಿಲ್ಲ. ಕೇವಲ ಭಾರತೀಯ ಪ್ರಜಾಪ್ರಭುತ್ವದ ಸಾಂವಿಧಾನಿಕ ಅಂಶಗಳನ್ನು ನ್ಯಾಯಯುತವಾಗಿ ಪ್ರಶ್ನಿಸಿದರೆ ಸಾಕು,
ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುತ್ತದೆ! ಏಕೆಂದರೆ ಇದು ಅಬ್ರಹಾಮಿಕ್ ಮತದ ಬ್ರಿಟಿಷ್ ಆಡಳಿತ ವಲ್ಲ, ನಮ್ಮದೇ ಆದ ಹಿಂದೂ ಪ್ರಭೇದದ ಧರ್ಮದವರಿಗಾಗಿಯೇ ರೂಪುಗೊಂಡ ಪ್ರಜಾಪ್ರಭುತ್ವ ರಾಷ್ಟ್ರ. ಈಗ ಬೇಕಿರುವುದು ಅಂಥ ಸಮಗ್ರತೆಯ ಕಾನೂನಾತ್ಮಕ ಹೋರಾಟದ ತಾರ್ಕಿಕ ಮಾರ್ಗ ಮಾತ್ರ! ಏಕೆಂದರೆ, ಭಾರತದ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಪ್ರಕಾರ: “ಯಾವುದೇ ವ್ಯಕ್ತಿ ಯಾವುದೇ ಧರ್ಮವನ್ನು ನಂಬುವ ಅಥವಾ ನಂಬದಿರುವ ಹಕ್ಕನ್ನು ಹೊಂದಿದ್ದಾನೆ.
ಧರ್ಮವನ್ನು ಪ್ರಚಾರ ಮಾಡಲು, ಆಚರಿಸಲು, ಪ್ರಸಾರ ಮಾಡಲು, ಧಾರ್ಮಿಕ ನಂಬಿಕೆಗಳನ್ನು ವ್ಯಕ್ತಪಡಿಸಲು, ಧಾರ್ಮಿಕ ಪದ್ಧತಿಗಳನ್ನು ಆಚರಿಸಲು ಮತ್ತು ಇತರರೊಂದಿಗೆ ತನ್ನ ನಂಬಿಕೆ ಗಳನ್ನು ಹಂಚಿಕೊಳ್ಳಲು ಸ್ವತಂತ್ರನಾಗಿದ್ದಾನೆ. ಹಾಗೆಯೇ ಧಾರ್ಮಿಕ ಸಂಪ್ರದಾಯಗಳನ್ನು ನಿರ್ವಹಿಸುವ ಹಕ್ಕನ್ನು ಸಂವಿಧಾನ ಗುರುತಿಸುತ್ತದೆ".
ಹೀಗೆ ತಾರ್ಕಿಕವಾಗಿ ಹೋರಾಡುವ ವೀರಗಣಾಚಾರ ಕ್ರಿಯಾಶಕ್ತಿಯು ವೀರಶೈವ ಲಿಂಗವಂತರಲ್ಲಿ ಕಾಣದೆ ಕೇವಲ ‘ವಿಶ್ವವಾಣಿ’ಯಲ್ಲಿ ಕಾಣುತ್ತಿರುವುದು ಈ ಶೂನ್ಯ ಸಂಪಾದಿತ ಸಮಾಜದ 21ನೇ ಶತಮಾನದ ದುರಂತ. ಇದು ಪುನರುತ್ಥಾನದ ಪ್ರಕ್ರಿಯೆಯೆಂದು ಜಾಗೃತಗೊಂಡು ಅಖಂಡವಾಗಿ ಒಗ್ಗೂಡಿ ನಿಲ್ಲುವ ಸಮಯ ಇದಾಗಿದೆ.
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)