Ravi Hunj Column: ಎಲ್ಲಿಗೆ ಬಂತು ಸಂಗಯ್ಯಾ, ಅಲ್ಲಿಗೆ ಬಂತು ಸಂಗಯ್ಯಾ ಕಾನು ಕಾನು ಉತ್ತತ್ತಿ !
17ನೇ ಶತಮಾನದವರೆಗೆ ಜಂಗಮವಾಗಿದ್ದ ಶೂನ್ಯಪೀಠವು ಚಿನ್ಮೂಲಾದ್ರಿಯಲ್ಲಿ ಸ್ಥಾವರಗೊಳ್ಳುವು ದರೊಂದಿಗೆ ವೀರಶೈವವು ‘ಯದಾ ಯದಾ ಹಿ ಧರ್ಮಸ್ಯ’ ಎಂಬುದನ್ನು ಕಾಲಕಾಲಕ್ಕೆ ನಿರೂಪಿಸುತ್ತಾ ಬಂದಿದೆ. ಇಂಥ ಚಿತ್ಕಳೆಯ ಚಿನ್ಮೂಲಾದ್ರಿಯೇ ಮತ್ತೊಮ್ಮೆ ವೀರಶೈವ ಧರ್ಮದೊಳಗಿನಿಂದಲೇ ಧರ್ಮಕ್ಕೆ ಮಸಿ ಬಳಿಯುವವರ ವಿರುದ್ಧ ತಾತ್ವಿಕ ಗಣಾಚಾರಕ್ಕೆ ವಿಶ್ವವಾಣಿ ಮುಖೇನ ಮುನ್ನುಡಿ ಬರೆಯಬೇಕೆಂಬುದು ವೀರಶೈವ ಪುನರುತ್ಥಾನದ ಗಮ್ಯವೇ ಆಗಿತ್ತೇನೋ!

-

ಬಸವ ಮಂಟಪ
ರವಿ ಹಂಜ್
ಕಳೆದ ವರ್ಷ ಹೊಳಲ್ಕೆರೆಯಲ್ಲಿ ‘ಚಿನ್ಮೂಲಾದ್ರಿ ಚಿತ್ತಳೆ’ ಎಂಬ ಸಂಪಾದಿತ ಗ್ರಂಥದ ಬಿಡುಗಡೆ ಯಾಯಿತು. ಗ್ರಂಥ ಬಿಡುಗಡೆಯ ಜತೆಗೆ ಆ ಗ್ರಂಥದ ಸೂರ್ತಿಯಾದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಜಗದ್ಗುರುಗಳ ಸ್ಮರಣೋತ್ಸವ ಕಾರ್ಯಕ್ರಮವೂ ನಡೆಯಿತು. ಒಂದು ಕಾಲದ ಮುರುಘಾಮಠದ ಬದ್ಧ ವಿರೋಧಿಗಳಾಗಿದ್ದ ರಂಗಜಂಗಮ ಶ್ರೀ ಸಾಣೇಹಳ್ಳಿಯವರು ಪುಢಾರಿ ಭಕ್ತರ ದೆಸೆಯಿಂದ ಈ ಕಾರ್ಯಕ್ರಮದಲ್ಲಿ ಹಾಜರಿದ್ದು, ‘ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ....’ ಇತ್ಯಾದಿಯಾಗಿ ಹಿಂದೂ ಧರ್ಮದ ಅವಹೇಳನ ಮಾಡಿದರು.
ಇದನ್ನು ಟೀಕಿಸಿ ‘ವಿಶ್ವವಾಣಿ’ಯ ವಿಶ್ವೇಶ್ವರ ಭಟ್ಟರು, ‘.. ಸಾಕು ಮಾಡಿ ನಿಮ್ಮ ಗೊಡ್ಡು ಪುರಾಣ’ ಎಂಬ ಲೇಖನವನ್ನು ಬರೆದರು. ಅದಕ್ಕೆ ಪೂರಕವಾಗಿ ಲೇಖನವೊಂದನ್ನು ಬರೆಯುವ ಮೂಲಕ ಆರಂಭವಾದ ‘ಬಸವ ಮಂಟಪ’ ಅಂಕಣ ಸ್ಥೂಲವಾಗಿ ವಿಷಯ ಮಂಡನೆ ಮಾಡುತ್ತ ಸಮಗ್ರ ಐತಿಹಾಸಿಕ, ಸಾಮಾಜಿಕ, ಧಾರ್ಮಿಕ, ಗ್ರಾಂಥಿಕ, ಪುರಾತತ್ವ ಪುರಾವೆಗಳ ಸಮೇತ, ‘ಲಿಂಗಾಯತ ಹಿಂದೂ ಧರ್ಮದ ಭಾಗವಾಗಿತ್ತೇ?’ ಎಂದು ವಿಶ್ಲೇಷಣೆ ಮಾಡುತ್ತಾ ಬಂದಿದೆ.
ಅಂದು ವಿಶ್ವವಾಣಿಯ ‘ಬಸವ ಮಂಟಪ’ ಅಂಕಣದ ಉದ್ದೇಶ, ಕೇವಲ ಸತ್ಯಾನ್ವೇಷಣೆಯ ವಾಸ್ತವಿಕ ಸಂಶೋಧನಾಪೂರ್ಣ ಐದಾರು ಲೇಖನಗಳ ಗುರಿಯನ್ನು ಹೊಂದಿತ್ತು. ಆದರೆ ಮುಂಬರುವ ಮಹಾನಾಟಕದ ಅಂಕ, ರಂಗಸಜ್ಜಿಕೆ, ಸಂಭಾಷಣೆ, ಪಾತ್ರಧಾರಿ, ಹಿನ್ನೆಲೆ ಸಂಗೀತ, ಗಾಯನಗಳ ಸುದೀರ್ಘ ತಯಾರಿ ನಡೆಸಿಕೊಂಡೇ ರಂಗಜಂಗಮರು ಹೊಳಲ್ಕೆರೆಯ ‘ಚಿನ್ಮೂಲಾದ್ರಿ ಚಿತ್ಕಳೆ’ಯ ಸಭಾಮಂಟಪದಲ್ಲಿ ತಮ್ಮ ರಂಗನಾಟಕದ ಪರದೆಯನ್ನು ಎತ್ತಿದರು.
ಹಾಗಾಗಿ ಅವರ ಮಹಾನಾಟಕಕ್ಕೆ ಪ್ರತಿವಾಸ್ತವಿಕ ‘ಬಸವ ಮಂಟಪ’ ಅಂಕಣದ ರಿಯಾಲಿಟಿ ಶೋ ಅದಷ್ಟಕ್ಕೆ ಅದೇ ನೆರವೇರತೊಡಗಿತು. ಹರಪ್ಪಾ ಮೊಹೆಂಜೋದಾರೋ ಸಂಸ್ಕೃತಿಗಿಂತ ಅನಾದಿ ಯಾಗಿದ್ದ ವೀರಶೈವವು ‘ಯದಾಯದಾ ಹಿ ಧರ್ಮಸ್ಯ’ ಎಂಬಂತೆ ಪುನರುತ್ಥಾನಗೊಳ್ಳುತ್ತ ಸಾಗಿಬಂದಿದೆ. ಸ್ಕಂದ ಪುರಾಣದಲ್ಲಿ, “ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನಮನಃ ಪ್ರಚಾರಃ ಬಾಹ್ಯಕ್ರಿಯಾಸಂಕುಲನಿಸ್ಠಹಾತ್ಮಾ| ಸಂಪೂಜಯತ್ತಂಗ ಸ ವೀರಶೈವಂ|" ಎಂದು ದಾಖಲಾಗಿ, 11ನೇ ಶತಮಾನದ ಕೊಂಡಗುಳಿ ಕೇಶಿರಾಜ, ದೇವರ ದಾಸಿಮಯ್ಯಗಳು ಹಾಕಿದ ಕಂದಪದ್ಯ, ವಚನ ಸಾಹಿತ್ಯದ ಬುನಾದಿಯ ಮೇಲೆ 12ನೇ ಶತಮಾನದ ಬಸವಾದಿ ಶರಣರಿಂದ ವಿಸ್ತರಣೆಗೊಂಡು 15ನೇ ಶತಮಾನದಲ್ಲಿ ತೋಂಟದ ಸಿದ್ದಲಿಂಗೇಶ್ವರರಿಂದ ಮತ್ತೊಮ್ಮೆ ಪುನರು ತ್ಥಾನ ಹೊಂದಿತು.
ಇದನ್ನೂ ಓದಿ: Ravi Hunj Column: ಇದು ವಿಡಂಬನೆಯಾಚೆಗಿನ ಸತ್ಯ, ಗುರುತು ಹಾಕಿಕೊಳ್ಳಿ...
17ನೇ ಶತಮಾನದವರೆಗೆ ಜಂಗಮವಾಗಿದ್ದ ಶೂನ್ಯಪೀಠವು ಚಿನ್ಮೂಲಾದ್ರಿಯಲ್ಲಿ ಸ್ಥಾವರಗೊಳ್ಳುವು ದರೊಂದಿಗೆ ವೀರಶೈವವು ‘ಯದಾ ಯದಾ ಹಿ ಧರ್ಮಸ್ಯ’ ಎಂಬುದನ್ನು ಕಾಲಕಾಲಕ್ಕೆ ನಿರೂಪಿ ಸುತ್ತಾ ಬಂದಿದೆ. ಇಂಥ ಚಿತ್ಕಳೆಯ ಚಿನ್ಮೂಲಾದ್ರಿಯೇ ಮತ್ತೊಮ್ಮೆ ವೀರಶೈವ ಧರ್ಮದೊಳಗಿ ನಿಂದಲೇ ಧರ್ಮಕ್ಕೆ ಮಸಿ ಬಳಿಯುವವರ ವಿರುದ್ಧ ತಾತ್ವಿಕ ಗಣಾಚಾರಕ್ಕೆ ವಿಶ್ವವಾಣಿ ಮುಖೇನ ಮುನ್ನುಡಿ ಬರೆಯಬೇಕೆಂಬುದು ವೀರಶೈವ ಪುನರುತ್ಥಾನದ ಗಮ್ಯವೇ ಆಗಿತ್ತೇನೋ!
ಇದಕ್ಕೆ ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ, ಪಾತಾಳದಿಂದವತ್ತತ್ತ, ಬ್ರಹ್ಮಾಂಡದಿಂದ ವಿತ್ತಿತ್ತ, ಅಗಮ್ಯ ಅಗೋಚರವಾಗಿರುವ ಅಪ್ರತಿಮ ಲಿಂಗ ಒಲಿದು ಕೃಪೆದೋರಿತು. ಒಟ್ಟಾರೆ ಇದೆಲ್ಲವೂ ಭಾರತೀಯ ಸನಾತನ ಪರಂಪರೆಯಲ್ಲಿ ಹೇಳುವ “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ|| ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ| ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||’ದಂತೆಯೇ ಈ ೨೧ನೇ ಶತಮಾನದಲ್ಲಿಯೂ ಪುನರ್ ನಿರೂಪಿತವಾಗಿದೆ.
ಇಂಥ ಸನಾತನ ವೀರಶೈವ ಧರ್ಮದ ಧರ್ಮಭಂಜಕ ಕೃತ್ಯದ ಆರಂಭವು ಮೇಲ್ನೋಟಕ್ಕೆ ಕಳೆದ ಅವಧಿಯ ಕಾಂಗ್ರೆಸ್ ಸರಕಾರದಲ್ಲಿ ಆರಂಭವಾಯಿತು ಎನಿಸಿದರೂ ಇದರ ಆರಂಭಕ್ಕೆ ವಿಧಿಯು ಬಹು ಹಿಂದೆಯೇ ಭಂಜಕತನದ ಶೂನ್ಯ ಅರಿವಿಲ್ಲದೆ ಜ್ಞಾನ ದೀವಿಗೆಯಂದು ಅಗ್ನಿ ಅವಘಡ ಸೃಷ್ಟಿಸುವ ಮೂಲಕ ಆರಂಭಿಸಿದ್ದನು. ಪಾಂಡಿಚೆರಿಯಲ್ಲಿರುವ ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಪುದುಚೆರಿ ಸಂಸ್ಥೆಯು ಪ್ರಪಂಚದಡೆಗಿಂತ ಅತಿ ಹೆಚ್ಚು ಶೈವೇತಿಹಾಸದ ಗ್ರಂಥಗಳು, ತಾಳೆಗರಿಗಳು ಮತ್ತು ಸಂಶೋಧನಾ ಕೃತಿಗಳ ಬೃಹತ್ ಸಂಗ್ರಹವನ್ನು ಈಗಲೂ ಹೊಂದಿದೆ.
ಈ ಸಂಸ್ಥೆಯಲ್ಲಿ ಹಲವಾರು ದಶಕಗಳ ಹಿಂದೆ ನಡೆದ ಒಂದು ಅಗ್ನಿ ಅವಘಡದಲ್ಲಿ ಅಮೂಲ್ಯ ವಾದ ಕೆಲವು ತಾಳೆಗರಿಗಳು ಸುಟ್ಟು ಕರಕಲಾಗಿ ಹೋದವು. ಇವೆಲ್ಲವೂ ಹೆಚ್ಚಿನದಾಗಿ ವೀರಶೈವಕ್ಕೆ ಸಂಬಂಧಿಸಿದ ಗ್ರಂಥಗಳೇ ಆಗಿದ್ದವು. ಪ್ರಮುಖವಾಗಿ ವೇದವ್ಯಾಸರು ಬರೆದಿರುವರೆನ್ನುವ ಸ್ಕಂದ ಪುರಾಣದಲ್ಲಿ, “ಯೋ ಹಸ್ತಪೀಠೇ ನಿಜಮಿಷ್ಟಲಿಂಗಂ ವಿನ್ಯಸ್ಯ ತಲ್ಲೀನಮನಃ ಪ್ರಚಾರಃ ಬಾಹ್ಯ ಕ್ರಿಯಾಸಂಕುಲನಿಸ್ಠಹಾತ್ಮಾ| ಸಂಪೂಜಯತ್ತಂಗ ಸ ವೀರಶೈವಂ|" ಎಂಬ ಶ್ಲೋಕದ ಮೂಲ ಪ್ರತಿಯೂ ಸೇರಿದಂತೆ ಅಮೂಲ್ಯ ಶಿವಾಗಮಕ್ಕೆ ಸೇರಿದ ಗ್ರಂಥಗಳು ಸುಟ್ಟು ಹೋದವು ಎನ್ನಲಾಗು ತ್ತದೆ.
ಅಂದು ಈ ಸಂಸ್ಥೆಯಲ್ಲಿ ಕನ್ನಡಿಗರೇ ಆದ ಎನ್.ಆರ್.ಭಟ್ ಎನ್ನುವ ಶೈವತತ್ವದ ಬಹು ದೊಡ್ಡ ವಿದ್ವಾಂಸರು ಮುಖ್ಯಸ್ಥರಾಗಿದ್ದರು. ಇವರು ಬಹು ಆಸ್ಥೆಯಿಂದ ಸಂಗ್ರಹಿಸಿದ್ದ ವೀರಶೈವದ ಅಮೂಲ್ಯ ತಾಳೆಗರಿಗಳು ಅವಘಡದಲ್ಲಿ ಸಿಲುಕಿ ಭಸ್ಮವಾದವು. ಆ ಸಮಯದಲ್ಲಿ ಕನ್ನಡಿಗ ರಾಜಕಾರಣಿಯೋರ್ವರು ಅಂದಿನ ಪಾಂಡಿಚೆರಿ ರಾಜ್ಯಪಾಲರಾಗಿದ್ದರು.
ಶೈವಸಿದ್ಧಾಂತದ ವಿದ್ವಾಂಸರು ಮತ್ತು ವೀರಶೈವ ರಾಜ್ಯಪಾಲರ ಕಾಲಾವಧಿಯಲ್ಲಿಯೇ ಈ ಅಗ್ನಿ ಅವಘಡ ನಡೆದದ್ದು ವಿಧಿ ವಿಪರ್ಯಾಸ! ಮುಂದೆ ಈ ರಾಜಕಾರಣಿಗಳ ಕುಟುಂಬವು ಬಸವಣ್ಣನ ಹೆಸರಿನಲ್ಲಿ ಸಂಸ್ಥೆಯೊಂದನ್ನು ಮಾಡಿಕೊಂಡು ಸರಕಾರದಿಂದ ನೂರು ಎಕರೆಗೂ ಹೆಚ್ಚಿನ ಭೂಮಿಯನ್ನು ಬೆಂದಗಾಳೂರಿನ ಹೊರವಲಯದಲ್ಲಿ ಲೀಸಿಗೆ ಪಡೆದುಕೊಂಡಿತು.
ಈಗ ಆ ಆಸ್ತಿಯು ಅವರ ಕುಟುಂಬದ ಖಾಸಗಿ ಆಸ್ತಿಯೇ ಆಗಿಹೋಗಿದೆ. ಸರಕಾರದಿಂದ ಕಮಿಟಿಗೆ ಮಂಜೂರು ಮಾಡಿಸಿಕೊಂಡಿದ್ದ ನೂರು ಎಕರೆ ಜಾಗದಲ್ಲಿ ಆ ರಾಜಕಾರಣಿಗಳ ಮತ್ತವರ ಪತ್ನಿಯ ಸಮಾಧಿ ಕಟ್ಟಿ ಸ್ವಕುಟುಂಬದ ಆಸ್ತಿಯಾಗಿಸುವ ಹಕ್ಕೊತ್ತಾಯವನ್ನು ಮಾಡಲಾಗಿದೆ ಎಂಬ ಜ್ವಲಂತ ಅಪವಾದವಿದೆ. ಈ ಬಗ್ಗೆ ಹಲವರು ಕೋರ್ಟಿನಲ್ಲಿ ದಾವೆ ಸಹ ಹೂಡಿದ್ದರು.
ಈಗ ಈ ಕೌಟುಂಬಿಕ ಟ್ರಸ್ಟಿನ ಒಟ್ಟು ಆಸ್ತಿ ಸಾವಿರಾರು ಕೋಟಿಗೂ ಅಧಿಕ ಎಂಬಲ್ಲಿಗೆ ಅಂದಿನ ‘ವಿಽಲಿಖಿತ ಅಗ್ನಿಸ್ವಾಹದ ಆಕಸ್ಮಿಕ’ ಮತ್ತು ಇಂದಿನ ‘ಭೂಸ್ವಾಹದ ಅಪವಾದ’ಗಳ ನಡುವೆ ಬಿಟ್ಟು ಹೋದ ಸ್ಥಳಗಳನ್ನು ತುಂಬಿಕೊಂಡರೆ ಎಲ್ಲಾ ಪಂಚಭೂತಗಳೂ ವಿಧಿತಮತಿಗೆ ತಕ್ಕಂತೆ ಸ್ಫಟಿಕ ಸದೃಶ ಶಿಲೆಯಲ್ಲಿನ ಅಗ್ನಿಯಂತೆ ಪ್ರಕಾಶಿಸಬಹುದು!
ಈ ವಿಧಿವಿಲಾಸದ ನೂತನ ಪಂಚಭೂತಗಳ ಪ್ರಕಾಶವನ್ನು ಕಂಡ ಅನೇಕರು ಅದನ್ನು ಮಹಾ ಬೆಳಕಾಗಿ ಹೇಗೇಗೋ ಅರ್ಥೈಸಿಕೊಂಡು ಬಸವಣ್ಣನನ್ನು ನಂದಿನಿಯಾಗಿಸಿ ಇಂದು ಕ್ಷೀರ ಸಾಗರ ವನ್ನೇ ಹರಿಸುತ್ತಿದ್ದಾರೆ. ಯಾವ ವಿಧಿ ಲಿಖಿತ ಅಗ್ನಿ ಅವಘಡದ ಆಶ್ರಯವಿಲ್ಲದೆ ಸಮಾಜಕ್ಕೆ ಖುದ್ದು ಬೆಂಕಿ ಹಚ್ಚಿ ತಮ್ಮ ತಮ್ಮ ಮಹಾಮನೆಗಳಲ್ಲಿ ಉಜ್ವಲ ಮಹಾಬೆಳಕನ್ನು ಕಾಣುತ್ತಿದ್ದಾರೆ.
ಈ ಬೆಚ್ಚನೆಯ ಕ್ಷೀರಸಾಗರವನ್ನು ಕಂಡ ಪಶುಪಾಲಕ ರಾಜಕಾರಣಿಯೊಬ್ಬರು, ‘ಅಕಟಕಟಾ! ಪಶುಪಾಲನೆ ಮಾಡುವವರು ನಾವು, ಹಾಲು ಕುಡಿಯುವವರು ಅವರು!’ ಎಂಬ ದ್ವೇಷಾಸೂಯಾಗ್ನಿ ಯನ್ನು ಎದೆಯಲ್ಲಿ ಹೊತ್ತಿಸಿಕೊಂಡು ಎಂದಿನಿಂದಲೋ ಕಾಪಿಟ್ಟುಕೊಂಡರು. ಸೂಕ್ತ ರಾಜಕೀಯ ರಂಗಸಜ್ಜಿಕೆ ಮತ್ತು ಅಧಿಕಾರ ಸಿಕ್ಕಾಕ್ಷಣ ಬುದ್ಧಿಜೀವಿ ಹೊಗಳು ಭಟರು, ಕಮ್ಯುನಿಸ್ಟ್ ಪ್ರಜಾಪ್ರಭುತ್ವ ವಾದಿಗಳು, ನಾಸ್ತಿಕ ಮಠಾಧೀಶರನ್ನು ಕಲೆ ಹಾಕಿ ಒಂದು ರಂಗತಂಡವನ್ನು ರಚಿಸಿಕೊಂಡರು.
ಬುದ್ಧಿಜೀವಿ ಸಂಶೋಧಕರು ತಕ್ಕ ಸಂಶೋಧನಾ ಸಾಹಿತ್ಯವನ್ನು ಒದಗಿಸಿದರೆ, ಕಮ್ಯುನಿಸ್ಟ್ ಪ್ರಜಾಪ್ರಭುತ್ವವಾದಿಗಳು ಭಾವನಾತ್ಮಕ ಸಂಭಾಷಣೆಗಳನ್ನು ಬರೆದುಕೊಟ್ಟರು. ಆಡಳಿತಶಾಹಿ ನಿವೃತ್ತರು ತಕ್ಕ ಸರಕಾರಿ ಪರಿಭಾಷೆಯನ್ನೊದಗಿಸಿದರು, ಇತ್ತ ಕಾವಿ ಪಾತ್ರಧಾರಿಗಳು ಮತ್ತೆ ಕಲ್ಯಾಣ, ನಿತ್ಯ ನಾಟಕ, ಪ್ರತ್ಯೇಕ ಧರ್ಮ ಮುಂತಾಗಿ ತಾಲೀಮು ನಡೆಸತೊಡಗಿದರು.
ಈ ಎಲ್ಲಾ ಬುದ್ಧಿಜೀವಿ ಹೊಗಳುಭಟರು, ಕಮ್ಯುನಿಸ್ಟ್ ಪ್ರಜಾಪ್ರಭುತ್ವವಾದಿಗಳು, ನಾಸ್ತಿಕ ಮಠಾಧೀಶರ ಸುಳ್ಳಿನ ಸಂಕಥನಗಳನ್ನು ವಿಶ್ವವಾಣಿ ‘ಬಸವ ಮಂಟಪ’ ಅಂಕಣವು ಸಾಕ್ಷಿ-ಪುರಾವೆ ಸಮೇತ ಬಯಲು ಮಾಡಿ ತೋರಿಸಿದೆ, ಅಲ್ಲದೆ ಇವರೆಲ್ಲರ ಬೆನ್ನುಮೂಳೆಯಾದ ಕಲಬುರ್ಗಿ ಸಂಶೋಧನೆಗಳನ್ನು ಪುಟದಿಂದ ಪುಟಕ್ಕೆ ರzಗುವ ಸಂಶೋಧನೆಗಳೆಂದು ಸಾಬೀತುಪಡಿಸಿದೆ.
ಹೀಗಿದ್ದೂ ಸುಳ್ಳುಗಳು ವಿಜೃಂಭಿಸುತ್ತಿವೆ ಎಂದರೆ ಅದು ಬಸವಣ್ಣನಿಗೆ ಮಾಡುವ ಅಪಚಾರವಾಗಿದೆ. ಈಗ ಈ ಸುಳ್ಳಿನ ಸಂಕಥನವನ್ನು ರಂಗಜಂಗಮರ ನಿರ್ದೇಶನದಲ್ಲಿ ‘ಬಸವ ಸಂಸ್ಕೃತಿ ಅಭಿಯಾನ’ ಎಂಬ ರಂಗಪ್ರಯೋಗದ ರೂಪದಲ್ಲಿ ರಾಜ್ಯಾದ್ಯಂತ ಹಮ್ಮಿಕೊಂಡು ನಡೆಸಲಾಗುತ್ತಿದೆ. ಬಸವನ ಬಾಗೇವಾಡಿಯಲ್ಲಿ ಭಾರಿ ಶಬ್ದದೊಂದಿಗೆ ಆರಂಭವಾಗಿ, ಒಂದು ಜಾತಿಯವರಿಗೆ ವಿವೇಕ ಕಡಿಮೆ ಎಂಬ ಜನಾಂಗೀಯ ದ್ವೇಷದೊಂದಿಗೆ ದಿನಗಳೆದಂತೆ ಅಪಸವ್ಯಗಳ ಮೇಲೆ ಅಪಸವ್ಯಗಳ ನುಡಿಯುತ್ತ ಸಾಗುತ್ತಿದೆ.
ವಾಗ್ಮಿಗಳನ್ನು ಬಿಡಿ, ಹದಿಹರೆಯದ ಯುವಜನರ ಸಾಮಾನ್ಯeನದ ಪ್ರಶ್ನೆಗಳಿಗೆ ಸೂಕ್ತ ಉತ್ತರ ಕೊಡಲಾಗದೆ ತಿಪ್ಪೆ ಸಾರಿಸುತ್ತ ಎಡವಿದ ಅಭಿಯಾನವು ಹಾಸನ ವನ್ನು ತಲುಪುವಲ್ಲಿಗೆ ಉಗಿಯಾ ರಿದ ರೈಲಿನಂತೆ ‘ಹುಸ್’ ಎಂದಿತು. ಹಾಸನದ ಅಭಿಯಾನದಲ್ಲಿ ದಾಸೋಹಿ ರಾಜಣ್ಣ ಎನ್ನುವವರು ನೇರವಾಗಿ ಧರ್ಮಭಂಜನೆಯ ಧ್ವನಿಯನ್ನು ಖಂಡಿಸಿ ‘ಗಣತಿಯಲ್ಲಿ ವೀರಶೈವ ಲಿಂಗಾಯತವೆಂದೇ ಬರೆಸಿ’ ಎಂದು ನೆರೆದವರಿಗೆ ಕರೆ ನೀಡಿದರು.
ಅಭಿಯಾನದುದ್ದಕ್ಕೂ ತಮ್ಮನ್ನು ತಾವೇ ಅವಿವೇಕಿಗಳೆಂದು ಪ್ರದರ್ಶಿಸಿಕೊಳ್ಳುತ್ತಾ ಭಂಜಕರು ಕೊಡಗಿಗೆ ಬಂದು ದಿಕ್ಕುತಪ್ಪಿ ವೀರಶೈವವನ್ನಪ್ಪಿದ ಮಂಜಿನಂತಾದರು. ವೀರಭದ್ರನ ವೀರಗಾಸೆ ಕುಣಿತ, ಗುರುಭ್ಯೋ ನಮಃ, ಶಿವಂ ಭೂಯಂ ಎಂಬ ಸಂಸ್ಕೃತ ಶ್ಲೋಕ, ಹಾನಗಲ್ ಕುಮಾರ ಸ್ವಾಮಿ ಗಳ ಭಾವಚಿತ್ರದ ವೀರಶೈವ ಲಿಂಗಾಯತ ಮಹಾಸಭಾ ಬ್ಯಾನರಿನಡಿಯಲ್ಲಿ ಬಸವ ಸಂಸ್ಕೃತಿ ಅಭಿಯಾನವು ವೀರಶೈವದಲ್ಲಿ ಲೀನವಾಗಿ ನಿಶ್ಶೂನ್ಯವಾಯಿತು.
ಬಸವಣ್ಣನೇ ‘ವೀರಶೈವವನ್ನು ಅಪ್ಪಿದೆ’ ಎಂದು ವಚನವನ್ನು ನುಡಿದಿರುವಾಗ, ಬಸವಣ್ಣನ ಸಂಸ್ಕೃತಿಯೇ ವೀರಶೈವವಾಗಿರು ವಾಗ ಯಾರೋ ಮೂರ್ಖರು ಅಲ್ಲವೆಂದು ನಾಟಕ ರಚಿಸಿ ನಟಿಸಿದೊಡೆ ದಿಟವಾಗಬಲ್ಲದೆ? ಅಲ್ಲದೇ ದೇವಭಾಷೆ ಸಂಸ್ಕೃತದಲ್ಲಿದ್ದ ಸಿದ್ಧಾಂತಗಳನ್ನು ಕನ್ನಡಕ್ಕೆ ತಂದವನು ಬಸವಣ್ಣ ಎಂದು ಕೊಡಗಿನ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಭಾಷಣವನ್ನೂ ಮಾಡಿದರು.
ಅದಕ್ಕೆ ಕನ್ನಡದ ಖ್ಯಾತ ಹಾಸ್ಯನಟ ದಿವಂಗತ ನರಸಿಂಹರಾಜು ಅವರ ಕಳೆದು ಹೋದ ಹುಟ್ಟು ಸೋದರಿಯಂತಿರುವ ಜಗದ್ಗುರು ಭಂಜಕಮಾತೆಯೊಬ್ಬರು ಬಾಲ ಸುಟ್ಟುಕೊಂಡ ಬೆಕ್ಕಿನಂತಾಗಿ ಥೇಟ್ ನರಸಿಂಹರಾಜು ಅವರ ಶೈಲಿಯ ನಗುತ್ತ ಅಭಿನಯಿಸುತ್ತಾ ಭಾಷಣ ಮಾಡಿದ್ದುದು ಕೊಡಗಿನ ಅಭಿಯಾನದ ವಿಶೇಷ ಆಕರ್ಷಣೆಯಾಯಿತು. ಅಂದ ಹಾಗೆ ಈ ಮಾತೆಯವರ ಕೂದಲ ಬಣ್ಣದ ಬ್ರ್ಯಾಂಡ್ ಯಾವುದಿರಬಹುದು? ಎಂದು ಕೊಡಗಿನ ‘ತೆಳ್ನೆ ಬೆಳ್ನೆ ಪೂವಮ್ಮನೋರು’ ಪ್ರಶ್ನಿಸಿಕೊಳ್ಳುತ್ತಾ ನೋಡುತ್ತಿದ್ದರೆ, ರಂಗದ ಮೇಲಿದ್ದ ಉಳಿದ ಕಾವಿ ಪಾತ್ರಧಾರಿಗಳು ಕಪ್ಪಿಟ್ಟು ಕುಳಿತಿದ್ದರು.
ಮರುದಿನ ಮೈಸೂರಿನಲ್ಲಿ ಸಹ ವೀರಶೈವ ಲಿಂಗಾಯತ ಮಹಾಸಭಾದ ಬ್ಯಾನರ್ ಕೆಳಗೆ ಸಂಸ್ಕೃತಿ ಅಭಿಯಾನ ನಡೆದು ಬಿಸಿಬಿಸಿ ಚರ್ಚೆಯಾಯಿತು. ಸಭಿಕರೊಬ್ಬರು ಭಂಜಕತನದ ಕುರಿತು ಗಟ್ಟಿಯಾಗಿ ಪ್ರಶ್ನಿಸಿದಾಗ, “ಈ ಮೊದಲು ವೀರಶೈವದ ಹೆಸರಿನಲ್ಲಿ ಪ್ರತ್ಯೇಕ ಧರ್ಮ ಅಂತ ಹೋದಾಗ, ವೀರಶೈವ ಸಪ್ತಶೈವದ ಭಾಗ ಎಂದು ರಿಜೆP ಆಯ್ತು. ಮುಂದ ವೀರಶೈವ ಲಿಂಗಾಯತ ಅಂತ ಹೋದಾಗ, ಇದ್ರಾಗ ವೀರಶೈವ ಪದನೂ ಐತಿ ಅಂತ ರಿಜೆಕ್ಟ್ ಆಯ್ತು.
ಅದಕ್ಕ ಈಗ ಲಿಂಗಾಯತ ಅಂತ ಟ್ರೈ ಮಾಡಿದ್ರ ಸಕ್ಸಸ್ ಅಕ್ಕತಿ" ಎಂದುತ್ತರಿಸಿ ತಾವು ಎಂಥ ಮೂರ್ಖ ಪ್ರಭೃತಿ ಎಂದು ಇಳಕಲ್ ಸ್ವಾಮಿಗಳು ಇಳೆಗಿಳಿದು ಹೋದರು. ಅಲ್ಲದೇ ಹಾನಗಲ್ ಕುಮಾರಸ್ವಾಮಿಗಳ ಅವಹೇಳನ ಮಾಡಿದ್ದ ಪತ್ರಿಕೆಯ ‘ಗೌರವ ಸಂಪಾದಕರು ನಾವಲ್ಲ ನಾವಲ್ಲ’ ಎಂದು ಮಾನ ಮುಚ್ಚಿಕೊಳ್ಳಲು ಯಾವ ಕಾವಿಗಳು ತಮ್ಮ ಹೆಸರು ತೆಗೆಸಿ ಹಾಕಿಸಿದ್ದರೋ ಅದೇ ಕಾವಿಗಳು ಅದೇ ’ಬಸವ ಭಾರತ’ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದು, ಇವರ ನಡೆಯೊಳಗಿರದ ನುಡಿಗೆ ಸಾಕ್ಷಿಯಾಯಿತು.
ವಿಪರ್ಯಾಸವೆಂದರೆ ಮೈಸೂರಿನ ಯಾವ ಮಠದ ಆವರಣದಲ್ಲಿ ‘ಮೂರ್ತಿಪೂಜೆ ಮಾಡಕೂಡದು, ಇಷ್ಟಲಿಂಗ ಬಿಟ್ಟು ಬೇರೆ ಮೂರ್ತಿಪೂಜೆ ಮಾಡುವವರು ಲಿಂಗಾಯತರಲ್ಲ’ ಎಂದು ಈ ಒಕ್ಕೂಟಿ ಗಳು ಫರ್ಮಾನು ಹೊರಡಿಸಿದರೋ ಅದೇ ಮಠದ ಶ್ರೀಗಳು ಅಮೆರಿಕದ ವಾಷಿಂಗ್ಟನ್ ಡಿಸಿ ಹೊರವಲಯದಲ್ಲಿರುವ ತಮ್ಮದೇ ಮಠದ ಆವರಣದಲ್ಲಿ ದೇವಸ್ಥಾನವನ್ನು ಕಟ್ಟಿಸಿ ಮೂರ್ತಿ ಗಳನ್ನು ಪ್ರತಿಷ್ಠಾಪಿಸಲಿದ್ದಾರೆ.
ಅದರ ಪ್ರಗತಿಯ ಪರಿಶೀಲನೆಗೆ ಈಗ ಅಮೆರಿಕೆಗೆ ಬಂದಿದ್ದಾರೆ. ‘ಕಣ್ಣರಿಯದಿದ್ದರೂ ಕರುಳರಿಯದೆ’ ಎನ್ನುವಂತೆ ಮೀನಾಕ್ಷಿ ಬಾಳಿ ಎನ್ನುವ ಭೀಷಣ ಭಾಷಣಕಾರ್ತಿ ತನ್ನ ಭಾಷಣದಲ್ಲಿ ‘ಹಣಕ್ಕೆ, ಪ್ರಶಸ್ತಿಗೆ, ಡಾಕ್ಟರೇಟಿಗೆ, ಆಸ್ತಿಗೆ ಮಾರಿಕೊಂಡವರು ಬಸವದ್ರೋಹಿಗಳು’ ಎಂದು ತಮ್ಮನ್ನೂ ಒಳಗೊಂಡು ವೇದಿಕೆಯ ಮೇಲಿದ್ದ ಅಭಿಯಾನಿಗಳ ಒಳಹೂರಣವನ್ನು ಹೊರ ಹಾಕಿದರು.
‘ಇಂದೇ ಡ್ರಾ, ಇಂದೇ ಬಹುಮಾನ’ ಎಂದು ಕೆಲವು ದಶಕಗಳ ಹಿಂದೆ ಲಾಟರಿ ಮಾರುವವರ ಅಭಿಯಾನದಂತೆ ಈ ಅಭಿಯಾನಿಗಳ ಉದ್ದೇಶ ಬೆಡಗಿನ ವಚನದಂತೆ ಅ ಬಯಲಾಯಿತು. ಇನ್ನು ಈ ಅಭಿಯಾನಿಗಳು ಕೊಡಗಿಗೆ ಬರುವ ಮುನ್ನವೇ ಈ ಒಕ್ಕೂಟದ ಇಮ್ಮಡಿ ಸಿದ್ಧರಾಮ ಸ್ವಾಮಿಗಳು, ಜಯಮೃತ್ಯುಂಜಯ ಸ್ವಾಮಿಗಳು, ಮಾದಾರ ಚೆನ್ನಯ್ಯ ಸ್ವಾಮಿಗಳು, ಮತ್ತಿತರೆ ಒಕ್ಕೂಟಿಗಳು ತಮ್ಮ ಜಾತಿ ಸಮುದಾಯಕ್ಕೆ ಧರ್ಮದ ಕಾಲಮ್ಮಿನಲ್ಲಿ ಹಿಂದೂ ಎಂದು ಬರೆಸಿ ಎಂದು ಕರೆಕೊಟ್ಟು ಅಭಿಯಾನವನ್ನು ಮತ್ತು ಲಿಂಗಾಯತವನ್ನು ನಡುನೀರಿನಲ್ಲಿ ಕೈಬಿಟ್ಟಿರುವುದು ಒಕ್ಕೂಟದ ವಿಶೇಷ ಬಿಕ್ಕಟ್ಟು.
ಅದಕ್ಕೂ ಮೊದಲು ಇಮ್ಮಡಿ ಸಿದ್ಧರಾಮ ಸ್ವಾಮಿಗಳು, ಶಾಂತವೀರ ಸ್ವಾಮಿಗಳು, ಮಾದಾರ ಚೆನ್ನಯ್ಯ ಸ್ವಾಮಿಗಳು, ಮಾಚಿದೇವ ಸ್ವಾಮಿಗಳು ಮತ್ತಿತರೆ ಒಕ್ಕೂಟಿಗಳು ಚಿತ್ರದುರ್ಗದ ಹಿಂದೂ ಮಹಾಗಣಪತಿ ಉತ್ಸವದಲ್ಲಿ ಪಾಲ್ಗೊಂಡು ತಮ್ಮದೇ ಒಕ್ಕೂಟದ ನಿಯಮವಾದ ಗಣಪತಿ ಪೂಜೆ ಸಲ್ಲದು ಎಂಬ ತತ್ವವನ್ನು ಸಾರ್ವಜನಿಕವಾಗಿ ಉಲ್ಲಂಸಿದ್ದಾರೆ!
ಇತ್ತ ಅಭಿಯಾನದುದ್ದಕ್ಕೂ ‘ಮೂರ್ತಿಪೂಜೆ ಮಾಡಬೇಡಿ, ಮೂರ್ತಿಪೂಜೆ ಮಾಡಬೇಡಿ’ ಎಂದು ಭಾಷಣ ಬಿಗಿದ ಅಭಿಯಾನ ನಿರ್ದೇಶಕ ರಂಗಜಂಗಮರು ತಮ್ಮ ಹಿರಿಯ ಗುರುಗಳ ಪುಣ್ಯತಿಥಿ ಯಲ್ಲಿ ಮೂರ್ತಿಪೂಜೆ, ಭಜನೆ, ಮೂರ್ತಿಹೊತ್ತ ರಥೋತ್ಸವದಲ್ಲಿ ತೊಡಗಲು ಅಭಿಯಾನ ಬಿಟ್ಟು ತಮ್ಮ ಶಾಖಾಮಠಕ್ಕೆ ಹೋಗಿದ್ದಾರೆ.
ಹಾವೇರಿಯಲ್ಲಿ ಸಾಗರ್ ಎನ್ನುವ ಯುವಕನಿಗೆ ಭಾಲ್ಕಿ ಶ್ರೀಗಳು, “ನಾವು ಕೆಲವು ಮಠಗಳಲ್ಲಿರುವ ಗದ್ದುಗೆಗಳ ಮೇಲಿನ ಸ್ಥಾವರ ಲಿಂಗ, ಮೂರ್ತಿಗಳನ್ನು ತೆಗೆಸಲು ಹೋರಾಟ ಮಾಡುತ್ತೇವೆ" ಎಂದು ಭರವಸೆ ನೀಡಿದವರು ತಮ್ಮ ಅಭಿಯಾನಿ ಮಿತ್ರ ಸಾಣೇಹಳ್ಳಿಯವರಿಗೆ, “ನೀವು ತಕ್ಷಣಕ್ಕೆ ನಿಮ್ಮ ಮಠದಲ್ಲಿರುವ ನಿಮ್ಮ ಹಿರಿಯ ಶ್ರೀಗಳ ಮೂರ್ತಿಯನ್ನು ತೆಗೆಸಿ, ಮತ್ತು ಅವರ ಮೂರ್ತಿಯನ್ನಿಟ್ಟು ತೇರು ಎಳೆಯುವ ಸನಾತನ ಹಿಂದೂ ಪದ್ಧತಿಯನ್ನು ನಿಲ್ಲಿಸಿ" ಎಂದೇಕೆ ಹೇಳದೆ ಅಭಿಯಾನದಿಂದ ರಜೆ ಕೊಟ್ಟು ಉತ್ಸವ ಮಾಡಲು ಕಳಿಸಿದರು ಎಂಬುದು ಈ ಒಕ್ಕೂಟಿಗರ ನಡೆಯೊಳಗಿರದ ನುಡಿಗೆ ಸಾಕ್ಷಿಯಾಯಿತು.
ಅಲ್ಲಿಗೆ ‘ವಿಚಾರ ಬಕ್ನೇ ಕೋ, ಬದನೆಕಾಯಿ ಖಾನೇ ಕೋ!’ ಎಂದು ಇವರ ವ್ಯವಹಾರ ಪರದೆ ಅನಾವರಣಗೊಳ್ಳುತ್ತದೆ. ‘ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ, ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯಾ. ನುಡಿಗೆ ತಕ್ಕ ನಡೆಯ ಕಂಡಡೆ ಕೂಡಲಸಂಗಮದೇವನೊಳಗಿಪ್ಪನಯ್ಯಾ’ ಎಂದು ಬಸವಣ್ಣನ ವಚನವನ್ನು ಇವರೆಲ್ಲರೂ ಅತ್ಯಂತ ಧಾರ್ಷ್ಟ್ಯದ ಮದದಿಂದ ಸಾಬೀತುಪಡಿಸಿ ದ್ದಾರೆ.
ತಾವೆಂಥ ವೇಷಧಾರಿ ಡಂಬಕರು ಎಂದು ಅಭಿಯಾನವೆಂಬೋ ಸಂತೆಯುದ್ದಕ್ಕೂ ವೇಷ ವನ್ನು ಕಳಚುತ್ತಾ ಬೆತ್ತಲಾಗಿzರೆ. ಬಸವಣ್ಣನು ಹೇಳಿದನ್ವಯ ಇವರೊಳಗೆ ಕೂಡಲಸಂಗಮದೇವನಿಲ್ಲದ ಕಾರಣವೇ ಇವರು ವೈeನಿಕವಾಗಿ ಕಾರ್ಬನ್ ಲಿಂಗಿಗಳಾಗಿದ್ದಾರೆ!
ಮೇಲಾಗಿ ಬಂಗಾರಕ್ಕೆ ಕುಂದಣವಿಟ್ಟಂತೆ ಅಥವಾ Icing on the cake ಎನ್ನುವಂತೆ ರಂಗಜಂಗಮರ ಮುಖ್ಯಮಠದ ಗುರುಗಳು ತಮ್ಮ ಭಕ್ತರಿಗೆ ಧರ್ಮದ ಕಾಲಮ್ಮಿನಲ್ಲಿ ಹಿಂದೂ ಎಂದು ಬರೆಸಲು ಕರೆ ನೀಡಿzರೆ. ಅಲ್ಲಿಗೆ ಶಾಖಾಪೀಠಿ ರಂಗಜಂಗಮರ ಕರೆ ನಿಶ್ಶೂನ್ಯದಲ್ಲಿ ನಿಶ್ಶೂನ್ಯ ವಾಗಿದೆ.
ಇದಕ್ಕೂ ಮಿಗಿಲಾಗಿ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಬಸವರಾಜ ಹೊರಟ್ಟಿ ಯವರು, “ಧರ್ಮದ ಕಾಲಮ್ಮಿನಲ್ಲಿ ‘ಇತರೆ’ ಬರೆಸಿ, ‘ಲಿಂಗಾಯತ’ ಬರೆಸಿ ‘ಮತ್ತೊಂದು’ ಬರೆಸಿ ಎನ್ನುವ ಮೂರ್ಖರ ಮಾತು ಕೇಳಬೇಡಿ" ಎಂದು ತಮ್ಮದೇ ಮಹಾಸಭಿಗರನ್ನು ಮತ್ತು ಒಕ್ಕೂಟಿ ಕಾವಿಗಳನ್ನು ‘ಅವಿವೇಕಿಗಳು’ ಎನ್ನುತ್ತಾ, “ಧರ್ಮದ ಕಾಲಮ್ಮಿನಲ್ಲಿ ಮೊದಲಿನಂತೆಯೇ ಹಿಂದೂ ಎಂದು ಬರೆಸಿ" ಎಂದು ಖಡಕ್ಕಾಗಿ ಕರೆ ನೀಡಿ ಪ್ರತ್ಯೇಕಿಗಳನ್ನು ಲಿಂಗಾಹತರನ್ನಾಗಿ ಮಾಡಿದ್ದಾರೆ.
ಇಂದಿನ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಇವರ ನಡೆನುಡಿಗಳು ಎಂದೆಂದಿಗೂ ಒಂದೇ ಆಗಿಲ್ಲ ಎಂದು ಇವರೇ ಅಭಿಯಾನದುದ್ದಕ್ಕೂ ಸಾಕ್ಷಿ ಕೊಟ್ಟು ತೋರುತ್ತಿದ್ದಾರೆಂದರೆ ಇವರು ಎಂಥ ಅಧಮ ಮೂರ್ಖರಿರಬಹುದು? ಅಥವಾ ಇವರು, ಕರ್ನಾಟಕದ ಪ್ರಜೆಗಳು ತಾವು ಏನು ಹೇಳಿದರೂ ನಂಬುವ ಕರ್ಮಠ ಮೂರ್ಖರೆಂದುಕೊಂಡಿದ್ದಾರೆಯೋ? ಅಥವಾ ನಿಜಕ್ಕೂ ವಾಸ್ತವವಾಗಿ ಕರ್ನಾಟಕದ ಜನತೆ ಅಂಥ ಮೂರ್ಖರೋ, ಆಂಧರೋ, ಮುಗ್ಧರೋ, ಮಾಂದ್ಯರೋ ಆಗಿದ್ದಾರೆಯೇ? ಚಿಂತನಾರ್ಹ ಪ್ರಶ್ನೆ!
ಅಭಿಯಾನದ ಈ ನಟುವಾಂಗರ ನಡೆ-ನುಡಿಯನ್ನು ಗಮನಿಸುತ್ತಿರುವ ಅಖಂಡ ಕರ್ನಾಟಕದ ಜನಸ್ತೋಮವೇ, ಹೇಳಿ, ಇದು ಬಸವ ಸಂಸ್ಕೃತಿಯೇ? ಇವರು ಬಸವ ಅನುಯಾಯಿಗಳೇ? ಅದೆಲ್ಲಕ್ಕಿಂತ ಹೆಚ್ಚಾಗಿ ನೀವು ಇಷ್ಟೊಂದು ಸುಲಭವಾಗಿ ಇವರಿಂದ ಮೂರ್ಖರೆನ್ನಿಸಿಕೊಳ್ಳುವಿರೆ? ಒಟ್ಟಾರೆ, ‘ಬಯಲು ಬಯಲನೇ ಬಿತ್ತಿ ಬಯಲು ಬಯಲನೇ ಬೆಳೆದು ಬಯಲು ಬಯಲಾಗಿ ಬಯಲಾಯಿತಯ್ಯ...’ ಎಂಬ ಗುಹೇಶ್ವರನ ವಚನದ ಪ್ರಕ್ಷಿಪ್ತ ರೂಪಕವೇ ಈ ಅಭಿಯಾನ ಎಂದು ಅಖಂಡ ವೀರಶೈವ ಲಿಂಗಾಯತ ಅನುಯಾಯಿಗಳು ಕಂಡುಕೊಂಡು ಇಂಥ ಪ್ರಚ್ಛನ್ನ ಬಸವ ಅನುಯಾಯಿಗಳನ್ನು ಎಲ್ಲಿರಿಸಬೇಕೋ ನಿರ್ಧರಿಸಿ.
(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)
(ಮುಂದುವರಿಯುವುದು)