ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌C P Radhakrishnan Column: ಏಕತೆಯ ಶಕ್ತಿ: ಜಯಪ್ರಕಾಶ್‌ ನಾರಾಯಣ್

‘ಜೆಪಿ’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು, ತಮ್ಮ ಬಗ್ಗೆ ಎಂದಿಗೂ ಯೋಚಿಸದೆ, ದೇಶದ ಬಡವರನ್ನೇ ತಮ್ಮ ಮೊದಲ ಆದ್ಯತೆಯಾಗಿರಿಸಿಕೊಂಡಿದ್ದ ಒಬ್ಬ ಶ್ರೇಷ್ಠ ರಾಜನೀತಿಜ್ಞ‌ ರಾಗಿದ್ದರು. ಅವರಿಗೆ ‘ಲೋಕನಾಯಕ’ ಎಂಬ ಬಿರುದನ್ನು ಯಾವುದೇ ಮಹಾನ್ ವ್ಯಕ್ತಿ ನೀಡಿಲ್ಲ- ಇದನ್ನು 1974ರ ಜೂನ್ ೫ರಂದು ಪಟನಾದ ಗಾಂಽ ಮೈದಾನದಲ್ಲಿ ಒಟ್ಟುಗೂಡಿದ್ದ ಲಕ್ಷಾಂತರ ಭಾರತೀಯರು ಪ್ರೀತಿಯಿಂದ ನೀಡಿದರು.

ಲೋಕನಾಯಕ

ಸಿ.ಪಿ..ರಾಧಾಕೃಷ್ಣನ್

೧೯೦೨ರ ಅಕ್ಟೋಬರ್ ೧೧ರಂದು, ಬಿಹಾರದ ಧರ್ಮ, ಸಂಸ್ಕೃತಿ ಮತ್ತು ಜ್ಞಾನಭೂಮಿಯಲ್ಲಿ, ಗಂಗಾ ಮತ್ತು ಘಾಘ್ರ ನದಿಗಳ ಸಂಗಮದಲ್ಲಿರುವ ಸಿತಾಬ್ದಿಯಾರ ಎಂಬ ಗ್ರಾಮದಲ್ಲಿ ಪ್ರಜಾ ಪ್ರಭುತ್ವದ ಪ್ರತಿಪಾದಕರಾದ ಲೋಕನಾಯಕ ಶ್ರೀ ಜಯಪ್ರಕಾಶ್ ನಾರಾಯಣ್ ಅವರು ಜನಿಸಿದರು. ಈ ವರ್ಷ, ‘ಸಂಪೂರ್ಣ ಕ್ರಾಂತಿ’ಯ ಈ ಹರಿಕಾರರ ೧೨೩ನೇ ಜಯಂತಿಯನ್ನು ನಾವು ಆಚರಿಸು ತ್ತಿದ್ದೇವೆ.

‘ಜೆಪಿ’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಅವರು, ತಮ್ಮ ಬಗ್ಗೆ ಎಂದಿಗೂ ಯೋಚಿಸದೆ, ದೇಶದ ಬಡವರನ್ನೇ ತಮ್ಮ ಮೊದಲ ಆದ್ಯತೆಯಾಗಿರಿಸಿಕೊಂಡಿದ್ದ ಒಬ್ಬ ಶ್ರೇಷ್ಠ ರಾಜನೀತಿಜ್ಞ‌ ರಾಗಿದ್ದರು. ಅವರಿಗೆ ‘ಲೋಕನಾಯಕ’ ಎಂಬ ಬಿರುದನ್ನು ಯಾವುದೇ ಮಹಾನ್ ವ್ಯಕ್ತಿ ನೀಡಿಲ್ಲ- ಇದನ್ನು 1974ರ ಜೂನ್ ೫ರಂದು ಪಟನಾದ ಗಾಂಧಿ ಮೈದಾನದಲ್ಲಿ ಒಟ್ಟುಗೂಡಿದ್ದ ಲಕ್ಷಾಂತರ ಭಾರತೀಯರು ಪ್ರೀತಿಯಿಂದ ನೀಡಿದರು.

ಈ ದಿನದಂದು, ಅವರ ಜೀವನ ಮತ್ತು ತತ್ವಗಳನ್ನು ಬಿಂಬಿಸುವ ಈ ಲೇಖನದ ಮೂಲಕ, ನಾನು ಆ ಮಹಾನ್ ನಾಯಕನಿಗೆ ನನ್ನ ‘ನಮನ’ಗಳನ್ನು ಸಲ್ಲಿಸುತ್ತೇನೆ. ರಾಜಕೀಯ ಜಾಗೃತಿಯ ಆರಂಭ: ಸೀತಾಬ್ದಿಯಾರಾದಲ್ಲಿನ ಲೋಕನಾಯಕರ ಆರಂಭಿಕ ಸಾಧಾರಣ ಜೀವನವು, ಬಡವರ ದಿನನಿತ್ಯದ ಬವಣೆಗಳು ಮತ್ತು ಜೀವನಶೈಲಿಗೆ ಅವರು ಸದಾ ಬದ್ಧರಾಗಿರಲು ಸಹಾಯ ಮಾಡಿತು.

ಇದನ್ನೂ ಓದಿ: M J Akbar Column: ಔರಂಗಬೇಬನ ಬದುಕಿನಲ್ಲೂ, ಸಾವಿನ ಬಳಿಕವೂ ಸತ್ಯವಾದ ಭವಿಷ್ಯವಾಣಿ

ಅಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರ, ಪಟನಾದಲ್ಲಿನ ವಿದ್ವತ್ಪೂರ್ಣ ಮತ್ತು ತೀವ್ರ ರಾಷ್ಟ್ರೀಯತೆಯ ವಾತಾವರಣವು ಅವರಲ್ಲಿ ದೇಶಪ್ರೇಮದ ಬೀಜಗಳನ್ನು ಬಿತ್ತಿತು. ಅವರು ಇಂಟರ್‌ಮೀಡಿಯೆಟ್ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ, ಬ್ರಿಟಿಷರ ವಿರುದ್ಧ ಭಾರತದಾದ್ಯಂತ ವ್ಯಾಪಿಸುತ್ತಿದ್ದ ಅಹಿಂಸಾತ್ಮಕ ಅಸಹಕಾರ ಚಳುವಳಿಯ ಘೋಷಣೆಗಳು ಅವರ ಮೇಲೆ ಅತಿದೊಡ್ಡ ಪ್ರಭಾವ ಬೀರಿದವು. ಪರಿಣಾಮವಾಗಿ ಅವರು ಎಲ್ಲಾ ಐಷಾರಾಮಗಳನ್ನೂ ತ್ಯಜಿಸಿ ಸಂಪೂರ್ಣ ಸ್ವದೇಶಿಯಾದರು.

ಅಮೆರಿಕದಲ್ಲಿ ೭ ವರ್ಷ ವಿದ್ಯಾಭ್ಯಾಸ ಮಾಡುವಾಗ, ಅವರು ಮಾರ್ಕ್ಸ್‌ ವಾದದತ್ತ ಆಕರ್ಷಿತ ರಾದರು. ಆ ಹೊತ್ತಿಗೆ, ಭಾರತದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಮಾರ್ಕ್ಸ್‌ ವಾದದಲ್ಲಿಯೇ ಇದೆ ಎಂದು ಅವರು ನಂಬಿದ್ದರು. ಆದರೆ, ಭಾರತಕ್ಕೆ ಮರಳಿ, ಮಾರ್ಕ್ಸ್ ವಾದದ ಸಿದ್ಧಾಂತವನ್ನು ಭಾರತೀಯ ಸನ್ನಿವೇಶಕ್ಕೆ ಅಳವಡಿಸುವ ಕಾರ್ಯಸಾಧ್ಯತೆಯನ್ನು ಕೂಲಂಕಷ ವಾಗಿ ಪರಿಶೀಲಿಸಿದ ಮೇಲೆ, ಪ್ರಜಾಸತ್ತಾತ್ಮಕ ಸಮಾಜವಾದ ಮತ್ತು ಸರ್ವೋದಯವೇ ನಮ್ಮ ದೇಶದ ಸಮಸ್ಯೆಗಳಿಗೆ ನಿಜವಾದ ಔಷಧ ಎಂಬ ಅರಿವು ಅವರಿಗಾಯಿತು. ‌

ಜೆ.ಪಿ.ಯವರ ಈ ಪ್ರಾಯೋಗಿಕ ಮತ್ತು ದೂರದೃಷ್ಟಿಯ ಚಿಂತನೆ, ಅವರ ವಿವೇಕ ಮತ್ತು ರಾಜನೀತಿಜ್ಞತೆಗೆ ಸಾಕ್ಷಿಯಾಗಿದೆ. ಅವರ ಜೀವನದ ಈ ನಿರ್ಣಾಯಕ ಘಟ್ಟವು, ಅವರು ಕೇವಲ ಸಿದ್ಧಾಂತಗಳ ಬೆಂಬಲಿಗರಾಗಿರಲಿಲ್ಲ, ಬದಲಿಗೆ ಸಮಾಜದಲ್ಲಿ ಪರಿವರ್ತನೆ ಮತ್ತು ನೈಜ ಬದಲಾವಣೆಯನ್ನು ತರಲು ಬಯಸಿದ ನಿಜವಾದ ನಾಯಕರಾಗಿದ್ದರು ಎಂಬುದನ್ನು ಸ್ಪಷ್ಟವಾಗಿ ಸಾರುತ್ತದೆ.

J U

ಭೂದಾನ ಚಳವಳಿ: ೧೯೫೨ರಲ್ಲಿ, ವಿನೋಬಾ ಭಾವೆ ಯವರ ಭೂದಾನ ಚಳವಳಿಯನ್ನು ಸರ್ವೋದಯ ತತ್ವದೊಂದಿಗೆ ಸಂಯೋಜಿಸಿದರೆ, ಭಾರತದ ಜ್ವಲಂತ ಭೂಸಮಸ್ಯೆಗೆ ವಾಸ್ತವಿಕ ಪರಿಹಾರ ಸಿಗಲಿದೆ ಎಂಬುದನ್ನು ಅವರು ಮನಗಂಡರು. ೧೯೫೪-೧೯೭೩ರ ಅವಧಿಯಲ್ಲಿ ಅವರು ಕೈಗೊಂಡ ಚಂಬಲ್ ಕಣಿವೆಯ ದರೋಡೆಕೋರರ ಪುನರ್ವಸತಿ ಮತ್ತು ಅಹಿಂಸಾತ್ಮಕ ಸಂಪೂರ್ಣ ಕ್ರಾಂತಿಯಂಥ ಉಪಕ್ರಮಗಳನ್ನು ಜಾಗತಿಕವಾಗಿ ಗುರುತಿಸಿ ಗೌರವಿಸಲಾಗಿದೆ.

ನಿರ್ದಿಷ್ಟವಾಗಿ ಭಾರತಕ್ಕೆ ಮತ್ತು ಸಾಮಾನ್ಯವಾಗಿ ಸಮಸ್ತ ಮಾನವಕುಲಕ್ಕೆ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಶಾಂತಿಯನ್ನು ತಂದುಕೊಡಬೇಕೆಂದು ಅವರು ನಿರಂತರವಾಗಿ ತುಡಿಯುತ್ತಿದ್ದರು.

ಅನುಭವದಿಂದ ಮೂಡಿದ ಶ್ರಮದ ಮಹತ್ವ: ಅವರ ‘ಶ್ರಮದ ಘನತೆ’ಯ ಪರಿಕಲ್ಪನೆಯು ಕೇವಲ ಪುಸ್ತಕಕ್ಕೆ ಸೀಮಿತವಾಗಿರಲಿಲ್ಲ. ಬದಲಾಗಿ ಅದು ಸ್ವಂತ ಅನುಭವದಿಂದ ಬಂದಿತ್ತು. ಅಮೆರಿಕದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅವರು ‘ಕಲಿಯುತ್ತಲೇ ಗಳಿಸಬೇಕಾದ’ ಅನಿವಾರ್ಯತೆಗೆ ಸಿಲುಕಿದ್ದರು ಮತ್ತು ತಮ್ಮ ವಿದ್ಯಾಭ್ಯಾಸದ ಖರ್ಚಿಗಾಗಿ ಹಲವು ಬಗೆಯ ಸಣ್ಣಪುಟ್ಟ ಕೆಲಸಗಳನ್ನು ಮಾಡಿದ್ದರು. ಈ ಅನುಭವಗಳು ಕಾರ್ಮಿಕ ವರ್ಗದ ಸಮಸ್ಯೆಗಳ ಕುರಿತು ಅವರಿಗೆ ಆಳವಾದ ಒಳನೋಟವನ್ನು ನೀಡಿದವು. ಪ್ರಾಮಾಣಿಕ ದುಡಿಮೆಗೆ ಗೌರವ, ನ್ಯಾಯಯುತ ವೇತನ ಮತ್ತು ಮಾನವೀಯ ಕೆಲಸದ ವಾತಾವರಣ ಸಿಗಲೇಬೇಕು ಎಂಬ ಅವರ ನಂಬಿಕೆಯನ್ನು ಇದು ಮತ್ತಷ್ಟು ದೃಢಗೊಳಿಸಿತು.

ಕೈಗಾರಿಕಾ ಸಮಾಜಗಳು ಸಮೃದ್ಧಿಯಿಂದ ಮೆರೆಯುತ್ತಿದ್ದರೂ, ದುಡಿಯುವ ವರ್ಗ ಮಾತ್ರ ಬಡತನದಲ್ಲಿಯೇ ಬದುಕು ಸವೆಸುತ್ತಿರುವುದನ್ನು ಅವರು ಕಂಡರು. ಭಾರತಕ್ಕೆ ಮರಳಿದಾಗ, ‘ನ್ಯಾಯಪರ ಸಮಾಜದ ಅಡಿಪಾಯವು ದುಡಿಯುವ ವರ್ಗದ ಕಲ್ಯಾಣದ ಮೇಲೆಯೇ ನಿಂತಿರಬೇಕು’ ಎಂಬ ದೃಢ ಸಂಕಲ್ಪವನ್ನು ತಮ್ಮೊಂದಿಗೆ ಹೊತ್ತು ತಂದರು.

ಇದಕ್ಕೆ ಪೂರಕವಾಗಿ, ೧೯೪೭ರಲ್ಲಿ ಅವರು ೩ ಪ್ರಮುಖ ಅಖಿಲ ಭಾರತ ಕಾರ್ಮಿಕ ಸಂಘಟನೆಗಳಾದ ಅಖಿಲ ಭಾರತ ರೈಲ್ವೇಮೆ ಫೆಡರೇಷನ್, ಅಖಿಲ ಭಾರತ ಅಂಚೆ ಮತ್ತು ಟೆಲಿಗ್ರಾಫ್‌ ಕೆಳದರ್ಜೆ ನೌಕರರ ಸಂಘ ಹಾಗೂ ಅಖಿಲ ಭಾರತ ಆರ್ಡಿನೆ ಫ್ಯಾಕ್ಟರಿ ಕಾರ್ಮಿಕರ ಸಂಘಗಳ ಅಧ್ಯಕ್ಷರಾಗಿ ಆಯ್ಕೆಯಾದರು.

ಬಿಹಾರದ ಬರಗಾಲ: ಜಯಪ್ರಕಾಶರ ಕಾರ್ಯಯಾತ್ರೆ ಕೇವಲ ಸ್ವಾತಂತ್ರ್ಯ ಚಳವಳಿಗೆ ಸೀಮಿತ ವಾಗಿರಲಿಲ್ಲ. ಅಧಿಕಾರದ ಆಸೆ ಅವರನ್ನು ಎಂದಿಗೂ ಸೆಳೆಯಲಿಲ್ಲ, ಬದಲಾಗಿ ಜನಸೇವೆಯಲ್ಲಿಯೇ ತೊಡಗಿಸಿಕೊಳ್ಳಲು ಅವರು ಸದಾ ತುಡಿಯುತ್ತಿದ್ದರು. ೧೯೬೦ರ ದಶಕದಲ್ಲಿ, ಮುಂಗಾರು ಕೈಕೊಟ್ಟಿದ್ದರಿಂದ ಬಿಹಾರವು ಭೀಕರ ಬರಗಾಲದ ದವಡೆಗೆ ಸಿಲುಕಿತ್ತು. ಆಗ ಅವರು, ಭೂದಾನ ಚಳವಳಿಯ ತಮ್ಮ ಸಹವರ್ತಿಗಳು ಮತ್ತು ಅನುಯಾಯಿಗಳೊಂದಿಗೆ ಸೇರಿ, ಜನರ ಸಂಕಷ್ಟವನ್ನು ನೀಗಿಸಲು ಪರಿಹಾರ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.

‘ಬಿಹಾರ ರಾಹತ್ ಸಮಿತಿ’ಯ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾಗ, ಆರೆಸ್ಸೆಸ್ ಸ್ವಯಂಸೇವಕರ ‘ರಾಷ್ಟ್ರಸೇವಾ ಮನೋಭಾವ’ ವನ್ನು ಹತ್ತಿರದಿಂದ ಕಂಡು, ಅವರ ಕಾರ್ಯತತ್ಪರತೆಯಿಂದ ಪ್ರಭಾವಿತರಾದರು.

ನನ್ನ ವೈಯಕ್ತಿಕ ಅನುಭವ: ಬದುಕಿನ ಸರ್ವಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿರುವುದನ್ನು ಕಂಡ ಲೋಕನಾಯಕರಿಗೆ, ಭಾರತೀಯ ಸಮಾಜದ ಪುನರು ಜ್ಜೀವನ-ಪುನರ್‌ನಿರ್ಮಾಣಕ್ಕೆ ಮುನ್ನುಡಿ ಬರೆಯಲು ದೇಶದ ಯುವಜನತೆಯನ್ನು ಪ್ರೇರೇಪಿಸಬೇಕಾದ ಅನಿವಾರ್ಯತೆ ಮನದಟ್ಟಾಯಿತು.

ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆಯೇ ಜನರು ನಂಬಿಕೆ ಕಳೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ಈ ಚಳವಳಿಯ ಮೂಲಕ ಅವರು ಪ್ರಜಾಪ್ರಭುತ್ವದ ಶಕ್ತಿಯಲ್ಲಿ ಜನರ ಭರವಸೆಯನ್ನು ಮರುಸ್ಥಾಪಿ ಸಿದರು. ೧೯೭೩ರಲ್ಲಿ ವಿನೋಬಾ ಭಾವೆಯವರ ಪವನಾರ್ ಆಶ್ರಮದಿಂದ ಅವರು ‘ಸಂಪೂರ್ಣ ಕ್ರಾಂತಿ’ಯ ಕಹಳೆ ಮೊಳಗಿಸಿದರು. ಈ ಚಳವಳಿಯ ಅಂತಿಮ ಧ್ಯೇಯವು, ಮಾನವೀಯ ಮೌಲ್ಯಗಳನ್ನೊಳಗೊಂಡ ಆದರ್ಶ ಸಮಾಜವನ್ನು ನಿರ್ಮಿಸುವುದಾಗಿತ್ತು.

ಅಂದಿನ ರಾಜಕೀಯದಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಾಚಾರದ ವಿರುದ್ಧದ ಅವರ ಅವಿರತ ಧ್ವನಿಯು, ಪ್ರಜಾಪ್ರಭುತ್ವದಲ್ಲಿ ‘ಜನಶಕ್ತಿ’ಯನ್ನು ಮರುಸ್ಥಾಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಜನರನ್ನು ಒಗ್ಗೂಡಿಸಿ, ಅವರ ಆಕ್ರೋಶಕ್ಕೆ ಒಂದು ದಿಕ್ಕು ತೋರಿ, ೧೯೭೭ರಲ್ಲಿ ಭಾರತ ದಲ್ಲಿ ಒಂದು ಹೊಸ ರಾಜಕೀಯ ವ್ಯವಸ್ಥೆಯನ್ನು ಸ್ಥಾಪಿಸಿದ ಅವರ ಸಾಮರ್ಥ್ಯ ಅದ್ಭುತವಾದದ್ದು. ಪ್ರಜಾಪ್ರಭುತ್ವವೆಂದರೆ ಜನರ ಮೇಲೆ ಅಧಿಕಾರ ಚಲಾಯಿಸುವುದಲ್ಲ, ಅದು ಜನಸಾಮಾನ್ಯರ ಧ್ವನಿಯಾಗಬೇಕು ಎಂಬುದನ್ನು ಅವರು ಈ ಚಳವಳಿಯ ಸಾರಿದರು.

ನಾನು ೧೯ ವರ್ಷದ ಯುವಕನಾಗಿದ್ದಾಗ, ಕೊಯಮತ್ತೂರಿನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಾಗಿ ‘ಸಂಪೂರ್ಣ ಕ್ರಾಂತಿ’ ಚಳವಳಿಯಲ್ಲಿ ಅಳಿಲುಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಭಾರತದ ಇತಿಹಾಸದ ಆ ನಿರ್ಣಾಯಕ ಘಟ್ಟದಲ್ಲಿ, ಈ ಚಳವಳಿಯಲ್ಲಿದ್ದಾಗ ಕಲಿತ ಪಾಠಗಳು, ನನ್ನನ್ನು ಒಬ್ಬ ಸಾಮಾನ್ಯ ಯುವಕನಿಂದ ಆತ್ಮವಿಶ್ವಾಸವುಳ್ಳ, ಸಾಮಾಜಿಕ ಪ್ರಜ್ಞೆ ಯುಳ್ಳ ನಾಯಕನಾಗಿ ಪರಿವರ್ತಿಸಿದವು. ಈ ಚಳವಳಿಯು ನನ್ನಲ್ಲಿ ಪ್ರಬುದ್ಧತೆ, ನೈತಿಕ ವಿವೇಚನೆ ಮತ್ತು ನಾಗರಿಕ ಪ್ರಜ್ಞೆಯಂಥ ನಾಯಕತ್ವದ ಗುಣಗಳನ್ನು ಪೋಷಿಸಿತು.

ಜಯಪ್ರಕಾಶ್‌ರನ್ನು ಇಂದು ನಾವು ಸ್ಮರಿಸುತ್ತಿರುವಾಗ, ಅವರ ಧರ್ಮಪತ್ನಿ ಶ್ರೀಮತಿ ಪ್ರಭಾವತಿ ದೇವಿಯವರ ಅಚಲ ಬೆಂಬಲವನ್ನು ಮರೆಯುವಂತಿಲ್ಲ. ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ತಮ್ಮನ್ನು ಸಮರ್ಪಿಸಿಕೊಳ್ಳುವುದಕ್ಕಾಗಿ ಅವರು ‘ಬ್ರಹ್ಮಚರ್ಯ’ ವ್ರತವನ್ನು ಸ್ವೀಕರಿಸಿದ್ದರು, ತಮ್ಮ ಸಂಪೂರ್ಣ ಶಕ್ತಿಯನ್ನು ಗಾಂಧಿಯವರ ಆದರ್ಶಗಳನ್ನು ಪಾಲಿಸುವುದಕ್ಕಾಗಿಯೇ ಮುಡಿಪಾಗಿಟ್ಟಿ ದ್ದರು.

ಜಯಪ್ರಕಾಶರ ಪರಂಪರೆ: ೧೯೪೨ರ ‘ಚಲೇಜಾವ್ ಚಳವಳಿ’ಯಿಂದ ಹಿಡಿದು ೧೯೭೦ರ ದಶಕದಲ್ಲಿ ಅವರು ಮುನ್ನಡೆಸಿದ ‘ಸಂಪೂರ್ಣ ಕ್ರಾಂತಿ’ಯವರೆಗೆ, ಅವರನ್ನು ಸದಾ ಮುನ್ನಡೆಸಿದ ಏಕೈಕ ಚಾಲP ಶಕ್ತಿ ಎಂದರೆ ಅಚಲ ದೇಶಪ್ರೇಮ. ಸರಕಾರದಲ್ಲಿ ತಮಗೆ ಬೇಕಾದ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶವಿದ್ದರೂ, ಅವರು ಅಧಿಕಾರದ ಆಸೆಗೆ ಬಲಿಯಾಗದೆ, ರಾಷ್ಟ್ರಸೇವೆಗಾಗಿಯೇ ಸಮರ್ಪಿಸಿಕೊಂಡಿದ್ದರು.

ಬಡವರು, ದೀನದಲಿತರ ಉನ್ನತಿಗಾಗಿ ಅವರಲ್ಲಿದ್ದ ತ್ಯಾಗ ಮನೋಭಾವ ಅನನ್ಯವಾದುದು. ಸವಾಲುಗಳು ಎಷ್ಟೇ ದುಸ್ತರವಾಗಿದ್ದರೂ ಜನಶಕ್ತಿಯು ಎಂಥ ಬದಲಾವಣೆಯನ್ನು ಬೇಕಾದರೂ ತರಬಲ್ಲದು ಎಂಬುದಕ್ಕೆ ಜಯಪ್ರಕಾಶರ ಜೀವನ-ಬೋಧನೆಗಳೇ ಸಾಕ್ಷಿ. ಪ್ರಜಾಸತ್ತಾತ್ಮಕ ಮೌಲ್ಯ ಗಳನ್ನು ರಕ್ಷಿಸುವುದಕ್ಕೆ, ಸಮಾನತೆ, ನ್ಯಾಯ ಹಾಗೂ ಶಾಂತಿಯಿರುವ ಸಮಾಜದ ನಿರ್ಮಾಣಕ್ಕೆ ಶ್ರಮಿಸುವುದಕ್ಕೆ ಅವರ ಬೋಧನೆಗಳು ಒತ್ತುನೀಡುತ್ತವೆ.

ಸಾಮಾಜಿಕ ಮತ್ತು ಆರ್ಥಿಕ ನ್ಯಾಯದಿಂದ ರಾಜಕೀಯ ಸ್ವಾತಂತ್ರ್ಯವನ್ನು ಬೇರ್ಪಡಿಸಲಾಗದು ಎಂದು ಘೋಷಿಸಿದ ಅವರು ಒಬ್ಬ ದಾರ್ಶನಿಕ ನಾಯಕರಾಗಿದ್ದರು. ಅವರ ಬೋಧನೆಗಳು ರಾಜಕಾರಣಿಗಳಿಗಷ್ಟೇ ಅಲ್ಲ, ಪ್ರಜಾಪ್ರಭುತ್ವ, ಸ್ವಾತಂತ್ರ್ಯ ಮತ್ತು ಸಮಾನತೆಯ ಆದರ್ಶಗಳಲ್ಲಿ ನಂಬಿಕೆಯಿಟ್ಟ ಪ್ರತಿಯೊಬ್ಬ ಭಾರತೀಯರಿಗೂ ಸೂರ್ತಿಯ ಸೆಲೆಯಾಗಿವೆ.

‘ಕ್ರಾಂತಿ’ಯನ್ನು ಸಾಮಾನ್ಯವಾಗಿ ಹಿಂಸೆಯ ಪ್ರತಿರೂಪ ಎಂದೇ ಭಾವಿಸಲಾಗುತ್ತದೆ. ಆದರೆ, ಜಯಪ್ರಕಾಶರು ಮುನ್ನಡೆಸಿದ ‘ಸಂಪೂರ್ಣ ಕ್ರಾಂತಿ’ಯು ಅಹಿಂಸಾ ಮಾರ್ಗವನ್ನು ಆಧರಿಸಿತ್ತು. ಅಹಿಂಸಾತ್ಮಕ ಜನಾಂದೋಲನದ ಮೂಲಕವೇ, ವ್ಯವಸ್ಥೆ ಮತ್ತು ಸಮಾಜದೊಳಗೆ ಮಾನವೀಯತೆ ಹಾಗೂ ನೈತಿಕ ಮೌಲ್ಯಗಳ ಮೇಲೆ ಪ್ರಗತಿ ಹೊಂದುವಂಥ ಭಾರತದ ನಿರ್ಮಾಣಕ್ಕೆ ಅವರು ಅಡಿಪಾಯ ಹಾಕಿದರು. ಈ ಮಹಾನ್ ಚೇತನವನ್ನು ಪ್ರೀತಿಯಿಂದ ಸ್ಮರಿಸುತ್ತಾ, ಗೌರವ ನಮನ ಗಳನ್ನು ಸಲ್ಲಿಸುವ ಈ ಸಂದರ್ಭದಲ್ಲಿ, ಅವರು ರಕ್ಷಿಸಿದ ಪ್ರಜಾಪ್ರಭುತ್ವದ ಜಾಗೃತ ಕಾವಲು ಗಾರರಾಗಿರಲು ಪ್ರತಿಜ್ಞೆ ಮಾಡೋಣ.

ನಮ್ಮ ಆತ್ಮಸಾಕ್ಷಿಯನ್ನು ಜಾಗೃತಗೊಳಿಸಿ, ನಿಸ್ವಾರ್ಥ ಸೇವೆ ಮತ್ತು ಸತ್ಯದ ಮಾರ್ಗದಲ್ಲಿ ಭಾರತದ ಉನ್ನತಿಗಾಗಿ ಶ್ರಮಿಸುವುದೇ ನಾವು ಈ ದಿನದಂದು ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ. ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಗಳಿಗಾಗಿ, ಅವರಿಗೆ ‘ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಆದರೆ ಈ ಮಹಾನ್ ಚೇತನಕ್ಕೆ ಆ ಗೌರವವೂ ತೀರಾ ಕಡಿಮೆಯೆಂದೇ ನನ್ನ ಭಾವನೆ. ಏಕೆಂದರೆ, ಅವರು ನಿಜಕ್ಕೂ ‘ಭಾರತ ರತ್ನ’ವಾಗಿದ್ದರು.

(ಲೇಖಕರು ಭಾರತದ ಉಪರಾಷ್ಟ್ರಪತಿಗಳು)