ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

C T Ravi Column: ಹಿಂದುತ್ವ, ರಾಷ್ಟ್ರೀಯತೆ ಮತ್ತು ಫ್ಯಾಸಿಸ್ಟ್‌ ಕಾಂಗ್ರೆಸ್‌ ನ ಆರೋಪಗಳ ಹಿಂದಿನ ಸತ್ಯಾಂಶ

ಇಲ್ಲಿ ಹಿಂದುತ್ವ ಎಂಬುದು ವಿಭಜನೆಯ ಮಾರ್ಗವಲ್ಲ, ಬದಲಿಗೆ ಸಮಗ್ರ ಏಕೀಕರಣದ ಪಥವಾಗಿದೆ. ಈ ಸಾಂಸ್ಕೃತಿಕ ಸಾರದಲ್ಲಿಯೇ ಭಾರತದ ರಾಷ್ಟ್ರಭಾವನೆ ಅಡಗಿದೆ ಎಂಬುದು ಸ್ಪಷ್ಟ. ವಿಶ್ವಮಾನವ ಧರ್ಮ ಮತ್ತು ಹಿಂದುತ್ವದ ಸಮನ್ವಯ: ‘ವಸುಧೈವ ಕುಟುಂಬಕಂ’ (ಜಗತ್ತೇ ಒಂದು ಕುಟುಂಬ) ಮತ್ತು ‘ಸರ್ವೇ ಜನಾಃ ಸುಖೀನೋ ಭವಂತು’ (ಎಲ್ಲರೂ ಸುಖವಾಗಿರಲಿ) ಎಂಬ ಮಹೋನ್ನತ ಸಿದ್ಧಾಂತಗಳಿಂದ ಪ್ರೇರಿತವಾಗಿರುವ ಹಿಂದೂ ಧರ್ಮವು, ವಿಶ್ವಮಾನವ ಧರ್ಮದ ಮೂಲತತ್ವವನ್ನೇ ಪ್ರತಿಬಿಂಬಿಸುತ್ತದೆ.

ಸಮರ್ಥನೆ

ಸಿ.ಟಿ.ರವಿ

ಬಿ.ಕೆ.ಹರಿಪ್ರಸಾದ್‌ರವರು, ಪ್ರಿಯಾಂಕ್ ಖರ್ಗೆಯವರು ಸೇರಿದಂತೆ ಕಾಂಗ್ರೆಸ್‌ನ ಕೆಲವು ನಾಯಕರು ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ವಿರುದ್ಧ ಹಲವು ಟೀಕೆಗಳನ್ನು ಮಾಡಿ ದ್ದಾರೆ. ಆರೆಸ್ಸೆಸ್ ನ ಉದ್ದೇಶ, ಕಾರ್ಯಶೈಲಿ ಮತ್ತು ಅದರ ಐತಿಹಾಸಿಕ ಪಾತ್ರದ ಕುರಿತು ಅನೇಕ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೆಸ್ಸೆಸ್‌ನ ನಿಜಸ್ವರೂಪವನ್ನು ಸ್ಪಷ್ಟಪಡಿಸು ವುದು ಅತ್ಯಗತ್ಯವಾಗಿದೆ.

ರಾಷ್ಟ್ರೀಯತೆ ಮತ್ತು ಹಿಂದುತ್ವದ ಅನನ್ಯ ಸಂಬಂಧ: ಆರೆಸ್ಸೆಸ್‌ನ ದೃಷ್ಟಿಕೋನದ ಪ್ರಕಾರ, ಭಾರತದ ರಾಷ್ಟ್ರೀಯತೆ ಎಂದರೆ ಕೇವಲ ಕಾನೂನುಬದ್ಧ ಪೌರತ್ವವಲ್ಲ. ಬದಲಿಗೆ ಆಳವಾದ ಸಾಂಸ್ಕೃತಿಕ ಏಕತೆಯ ಅನುಭೂತಿ. ಕಾಶಿಯಿಂದ ರಾಮೇಶ್ವರದವರೆಗೆ, ಕಾಮಾಖ್ಯದಿಂದ ದ್ವಾರಕೆ ಯವರೆಗೆ ವ್ಯಾಪಿಸಿರುವ ಈ ಭಾವನೆ, ಶತಮಾನಗಳಿಂದಲೂ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ.

ಇಲ್ಲಿ ಹಿಂದುತ್ವ ಎಂಬುದು ವಿಭಜನೆಯ ಮಾರ್ಗವಲ್ಲ, ಬದಲಿಗೆ ಸಮಗ್ರ ಏಕೀಕರಣದ ಪಥವಾಗಿದೆ. ಈ ಸಾಂಸ್ಕೃತಿಕ ಸಾರದಲ್ಲಿಯೇ ಭಾರತದ ರಾಷ್ಟ್ರಭಾವನೆ ಅಡಗಿದೆ ಎಂಬುದು ಸ್ಪಷ್ಟ. ವಿಶ್ವಮಾನವ ಧರ್ಮ ಮತ್ತು ಹಿಂದುತ್ವದ ಸಮನ್ವಯ: ‘ವಸುಧೈವ ಕುಟುಂಬಕಂ’ (ಜಗತ್ತೇ ಒಂದು ಕುಟುಂಬ) ಮತ್ತು ‘ಸರ್ವೇ ಜನಾಃ ಸುಖೀನೋ ಭವಂತು’ (ಎಲ್ಲರೂ ಸುಖವಾಗಿರಲಿ) ಎಂಬ ಮಹೋನ್ನತ ಸಿದ್ಧಾಂತಗಳಿಂದ ಪ್ರೇರಿತವಾಗಿರುವ ಹಿಂದೂ ಧರ್ಮವು, ವಿಶ್ವಮಾನವ ಧರ್ಮದ ಮೂಲತತ್ವವನ್ನೇ ಪ್ರತಿಬಿಂಬಿಸುತ್ತದೆ.

ಆದ್ದರಿಂದ ಹಿಂದುತ್ವ ಮತ್ತು ವಿಶ್ವಮಾನವ ಧರ್ಮಗಳು ಪರಸ್ಪರ ವಿರೋಧಿಯಲ್ಲ, ಬದಲಿಗೆ ಪೂರಕವಾಗಿವೆ ಎಂದು ಆರೆಸ್ಸೆಸ್ ಪ್ರತಿಪಾದಿಸುತ್ತದೆ. ಅಂಬೇಡ್ಕರ್ ಮತ್ತು ಮತೀಯವಾದದ ಆರೋಪ: ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ‘ಥಾಟ್ಸ್ ಆನ್ ಪಾಕಿಸ್ತಾನ್’ ಎಂಬ ಪ್ರಸಿದ್ಧ ಕೃತಿಯಲ್ಲಿ ಆರೆಸ್ಸೆಸ್‌ನ ಬಗ್ಗೆ ಯಾವುದೇ ನಿರ್ದಿಷ್ಟ ಆರೋಪವನ್ನಾಗಲೀ ಉಲ್ಲೇಖವನ್ನಾಗಲೀ ಮಾಡಿಲ್ಲ.

ಇದನ್ನೂ ಓದಿ: C T Ravi Interview: ಮಾಸ್‌ ಪಕ್ಷಕ್ಕೆ ಕ್ಲಾಸ್‌ ನಾಯಕತ್ವ ಅಗತ್ಯ

ಇಸ್ಲಾಂ ಹೇಗೆ ವಿಭಜಕ ಸಿದ್ಧಾಂತವನ್ನು ಒಳಗೊಂಡಿದೆ, ಅದು ರಾಷ್ಟ್ರೀಯತೆಗೆ ಹೇಗೆ ಪೂರಕ ವಾಗಿಲ್ಲ ಮತ್ತು ಮುಸ್ಲಿಮರು ಹೇಗೆ ತಾವೇ ಪ್ರತ್ಯೇಕ ಜನಾಂಗ ಅಂತ ಭಾವಿಸುತ್ತಾರೆ ಅನ್ನುವುದನ್ನು ಅಂಬೇಡ್ಕರ್ ಈ ಕೃತಿಯಲ್ಲಿ ವಿವರಿಸುತ್ತಾರೆ. ಅದು ಕೇವಲ ಮತಧರ್ಮವಲ್ಲ, ಅದು ರಾಜಕೀಯ ಸಿದ್ಧಾಂತವೂ ಹೌದು.

ಮುಸ್ಲಿಮರ ನಡೆ-ನಡವಳಿಕೆಯನ್ನು ಅಂಬೇಡ್ಕರ್ ವಿಶ್ಲೇಷಿಸಿ, ‘ತಾವು ಪ್ರತ್ಯೇಕ’ ಎಂದು ನಂಬುವ ಮುಸ್ಲಿಮರ ಮನೋವೈಜ್ಞಾನಿಕ ಅಂಶವನ್ನು ಎಳೆಎಳೆಯಾಗಿ ಚಿತ್ರಿಸುತ್ತಾರೆ. ಅದನ್ನು ಅಂಬೇಡ್ಕರ್ ಹೇಳುವುದು ಹೀಗೆ: “ಮುಸ್ಲಿಂ ಜಗತ್ತು, ಈ ಪ್ರಪಂಚವನ್ನು ಎರಡಾಗಿ ನೋಡುತ್ತದೆ, ಒಂದು ‘ದಾರುಲ್ ಇಸ್ಲಾಂ’, ಮತ್ತೊಂದು ‘ದಾರುಲ್ ಹರಬ್’. ಮುಸಲ್ಮಾನರು ತಮ್ಮ ಜಗತ್ತನ್ನು ‘ದಾರುಲ್ ಇಸ್ಲಾಂ’ ಆಗಿ ನೋಡಿದರೆ, ಮುಸ್ಲಿಮೇತರರನ್ನು ‘ದಾರುಲ್ ಹರಬ್’ ಆಗಿ ನೋಡುತ್ತಾರೆ ಮತ್ತು ಇದು ನಿರಂತರ ಸಂಘರ್ಷಕ್ಕೆ ನಾಂದಿಯಾಗುತ್ತದೆ".

ತಾನೇ ಸತ್ಯ, ತಾನೇ ಶ್ರೇಷ್ಠ ಎಂಬುದೇ ಫ್ಯಾಸಿಸ್ಟ್ ಮನೋಭಾವ. ಸರ್ವರನ್ನೂ ಒಳಗೊಳ್ಳತಕ್ಕಂಥ ‘ಹಿಂದುತ್ವ’ವು ಮತೀಯವಾದ ಹೇಗಾಗುತ್ತದೆ? ‘ಕ್ರಾಂತಿಸೂರ್ಯ’ ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾವುದೇ ಸಂದರ್ಭದಲ್ಲೂ ಆರೆಸ್ಸೆಸ್‌ನ ವಿರುದ್ಧವಾದ ಮಾತುಗಳನ್ನಾಡಿಲ್ಲ. ಅಂಬೇಡ್ಕ ರರು ಯಾವುದರ ಬಗ್ಗೆ ಬಹಳ ಆತಂಕ ವ್ಯಕ್ತಪಡಿಸಿದ್ದರೋ ಅದರ ಕುರಿತಾಗಿ ಕಾಂಗ್ರೆಸ್ಸಿನ ಮಹಾನ್ ನಾಯಕರು ಮೌನವಾಗಿದ್ದು, ಅವರು ಹೇಳದ ವಿಚಾರಗಳನ್ನು ‘ಹೇಳಿದ್ದಾರೆ’ ಎಂಬಂತೆ ಈ ನಾಯಕರು ಮಾತನಾಡುತ್ತಿರುವುದು ಅಂಬೇಡ್ಕರರಿಗೆ ಮಾಡುವ ಘೋರ ಅಪಮಾನ.

ಹಿಂದುತ್ವವನ್ನು ಆರೆಸ್ಸೆಸ್ ‘ಎಲ್ಲರನ್ನೂ ಒಗ್ಗೂಡಿಸುವ ಸಾಂಸ್ಕೃತಿಕ ರಾಷ್ಟ್ರೀಯತೆ’ ಎಂಬುದಾಗಿ ವಿವರಿಸುತ್ತದೆಯೇ ವಿನಾ, ‘ಮತೀಯತೆ’ ಎಂಬುದಾಗಿ ಅಲ್ಲ. “ರಾಷ್ಟ್ರ ಮತ್ತು ಸಮಾಜದ ಬಗೆಗಿನ ತೀವ್ರ ಪ್ರೀತಿಯೇ ಆರೆಸ್ಸೆಸ್‌ನ ಕೆಲಸಕ್ಕೆ ಆಧಾರ" ಎಂಬ ಸಂಘದ ಹಿಂದಿನ ಸರಸಂಘಚಾಲಕರಾದ ಗುರೂಜಿ ಗೋಳವಲ್ಕರ್ ಅವರ ಮಾತು ಆರೆಸ್ಸೆಸ್‌ನ ಕಾರ್ಯವೈಖರಿ ಮತ್ತು ಮೌಲ್ಯಗಳನ್ನು ಸೂಚಿಸುತ್ತದೆ.

ತುರ್ತು ಪರಿಸ್ಥಿತಿ ಮತ್ತು ಆರೆಸ್ಸೆಸ್‌ನ ಪಾತ್ರ: 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಅಂದಿನ ಕಾಂಗ್ರೆಸ್ ಸರಕಾರವೇ ಪ್ರಜಾಪ್ರಭುತ್ವ ವಿರೋಧಿ ಸರ್ವಾಧಿಕಾರವನ್ನು ಹೇರಿತ್ತು ಮತ್ತು ಸಂವಿಧಾನ ವಿರೋಧಿಯಾಗಿ ವರ್ತಿಸಿತ್ತು, ಅಂಬೇಡ್ಕರರು ರಚಿಸಿದ ಸಂವಿಧಾನವನ್ನು ಯಾವುದೇ ಚರ್ಚೆಯಿಲ್ಲದೆ ಮನಸೋ ಇಚ್ಛೆ ತಿದ್ದುಪಡಿ ಮಾಡಿತ್ತು. ಕಾಂಗ್ರೆಸ್‌ನ ಸರ್ವಾಧಿಕಾರವನ್ನು ಕಿತ್ತೊಗೆದು, ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದಕ್ಕೆಂದು ಆರೆಸ್ಸೆಸ್‌ನ ಲಕ್ಷಾಂತರ ಸ್ವಯಂ ಸೇವಕರು ಜೈಲಿಗೆ ಹೋದರು,

ಗಣನೀಯ ಸಂಖ್ಯೆಯ ಜನರು ಭೂಗತರಾಗಿ ಚಳವಳಿ ಮಾಡಿ ಜನಜಾಗೃತಿಯನ್ನು ಮೂಡಿಸಿದರು. ಕಾಂಗ್ರೆಸ್‌ನ ಸರ್ವಾಧಿಕಾರಿ ಇಂದಿರಾ ಗಾಂಧಿಯವರನ್ನು ಕಿತ್ತೊಗೆದು, ಪ್ರಜಾಪ್ರಭುತ್ವವನ್ನು ಮರು ಸ್ಥಾಪನೆ ಮಾಡಿ ಸಂವಿಧಾನವನ್ನು ಉಳಿಸುವ ಕೆಲಸವನ್ನು ಆರೆಸ್ಸೆಸ್ ಮಾಡಿತು. ಇಂಥ ಭವ್ಯ ಇತಿಹಾಸವನ್ನು ಅರಿತುಕೊಳ್ಳದೆ ಆರೆಸ್ಸೆಸ್ ಅನ್ನು ‘ಫ್ಯಾಸಿಸ್ಟ್ ಸಂಘಟನೆ’ ಎಂದು ಆರೋಪಿಸು ವುದು ಐತಿಹಾಸಿಕ ಅನ್ಯಾಯ.

ಜಾತಿಭೇದ ನಿರ್ಮೂಲನದೆಡೆಗೆ ಹೆಜ್ಜೆ: ಆರೆಸ್ಸೆಸ್ ಪ್ರಬಲವಾಗಿರುವ ಕಡೆ ಅಸ್ಪೃಶ್ಯತೆಯ ಆಚರಣೆ ಅಥವಾ ಅಟ್ರಾಸಿಟಿ ಇರುವುದಿಲ್ಲ, ಯಾಕೆಂದರೆ, ಜಾತೀಯತೆ ಹಾಗೂ ಅಸ್ಪೃಶ್ಯತೆಯನ್ನು ಆರೆಸ್ಸೆಸ್ ಪೋಷಿಸುವುದಿಲ್ಲ. ಸ್ವಯಂಸೇವಕರುಗಳ ಮನೆಗಳಲ್ಲಿ ಮತ್ತು ಅವರ ಪ್ರಭಾವವಿರುವ ಕಡೆಗಳಲ್ಲಿ ಅಸ್ಪೃಶ್ಯತೆಯು ಅಕ್ಷರಶಃ ಶೂನ್ಯವಾಗಿರುತ್ತದೆ.

ಜಾತಿ ಹಾಗೂ ವರ್ಗಭೇದವಿಲ್ಲದೆ ಕಾರ್ಯನಿರ್ವಹಿಸುತ್ತದೆ ಆರೆಸ್ಸೆಸ್. 1969ರ ವಿಶ್ವ ಹಿಂದೂ ಪರಿಷತ್‌ನ (ವಿಹಿಂಪ) ಸಮ್ಮೇಳನದಲ್ಲಿ ಸೇರಿದ್ದ ಎಲ್ಲಾ ಮಠಾಧಿಪತಿಗಳು, ‘ಅಸ್ಪೃಶ್ಯತೆಗೆ ಹಿಂದೂ ಧರ್ಮದಲ್ಲಿ ಯಾವುದೇ ಸ್ಥಾನವಿಲ್ಲ’ ಎಂದು ಘೋಷಿಸಿದರು. ವಿಹಿಂಪ ಸ್ಥಾಪನೆಗೂ ಮೊದಲಿ ನಿಂದಲೂ ಎಲ್ಲಾ ಜಾತಿ-ವರ್ಗದ ಜನರೂ ಆರೆಸ್ಸೆಸ್‌ನ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಿಕೆ: ಆರೆಸ್ಸೆಸ್‌ನ ಸಂಸ್ಥಾಪಕರೇ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಆರೆಸ್ಸೆಸ್‌ನ ಸ್ಥಾಪನೆಗೂ ಮುನ್ನ ನಾಗಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು, ಅನುಶೀಲನಾ ಸಮಿತಿಯ ಸದಸ್ಯರಾಗಿ ಕ್ರಾಂತಿಕಾರಿಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದವರು.

ಕಾಂಗ್ರೆಸ್ ಆರಂಭಿಸಿದ ಅಸಹಕಾರ ಚಳವಳಿಯಲ್ಲೂ, ಕ್ರಾಂತಿಕಾರಿಗಳ ಹೋರಾಟದಲ್ಲೂ ಆರೆಸ್ಸೆಸ್‌ನ ನೂರಾರು ಸ್ವಯಂಸೇವಕರು ಪಾಲ್ಗೊಂಡಿದ್ದರು. ಇದಕ್ಕೂ ಮಿಗಿಲಾಗಿ ರಾಷ್ಟ್ರವನ್ನು ಬಲಪಡಿಸುವುದೇ ಆರೆಸ್ಸೆಸ್‌ನ ಸ್ಥಾಪನೆಯ ಉದ್ದೇಶವಾಗಿತ್ತು. ಕಾಂಗ್ರೆಸ್ ಕಡೆಗಣಿಸಿದ ಹಲವಾರು ಕ್ರಾಂತಿಕಾರಿಗಳನ್ನು, ಸಾಮಾಜಿಕ ಏಕತೆ ಮತ್ತು ಸೇವಾಕಾರ್ಯದ ಭಾಗವಾಗಿ ‘ಬಾಲಭಾರತಿ’ಯು ಸಮಾಜಕ್ಕೆ ಪರಿಚಯಿಸಿದೆ. ಉದಾಹರಣೆಗೆ ರಾಮಪ್ರಸಾದ್ ಬಿಸ್ಮಿಲ್ಲಾ, ಅಶಾಕ್ ಉಲ್ಲಾ ಖಾನ್, ಭಗತ್ ಸಿಂಗ್, ಚಂದ್ರಶೇಖರ ಆಜಾದ್, ಚಾಪೇಕರ್ ಸಹೋದರರು, ಸಾವರ್ಕರ್ ಸಹೋದರರು.

ಇವರು ಕಾಂಗ್ರೆಸ್ ಕಡೆಗಣಿಸಿದ ನೂರಾರು ಕ್ರಾಂತಿಕಾರಿಗಳಲ್ಲಿ ಕೆಲವರು; ತನ್ನ ನಿತ್ಯಶಾಖೆಗಳಲ್ಲಿ ಅವರ ಕಥೆಗಳನ್ನು ಹೇಳುವ ಮೂಲಕ, ಅವರ ನೆನಪನ್ನು ಸಮಾಜದಲ್ಲಿ ಜೀವಂತವಾಗಿಡುವ ಕಾರ್ಯವನ್ನು ಆರೆಸ್ಸೆಸ್ ಮಾಡಿದೆ.

ಗಾಂಧೀಜಿ ಹತ್ಯೆಯ ಆರೋಪ ಮತ್ತು ಸಮಿತಿಗಳ ತೀರ್ಮಾನ: ಮಹಾತ್ಮ ಗಾಂಧಿಯವರ ಹತ್ಯೆಯ ನಂತರ, 1948 ಮತ್ತು 1975ರಲ್ಲಿ ಆರೆಸ್ಸೆಸ್ ಮೇಲೆ ಕಾಂಗ್ರೆಸ್ ಗಂಭೀರ ಆರೋಪ ಗಳನ್ನು ಮಾಡಿತು. ಆದರೆ, ಕಪೂರ್ ಕಮಿಷನ್ ಸೇರಿದಂತೆ ಮೂರು ಪ್ರಮುಖ ತನಿಖಾ ಸಮಿತಿಗಳು ಕೂಲಂಕಷ ಪರಿಶೀಲನೆ ನಡೆಸಿದ ನಂತರ, ಗಾಂಧಿಯವರ ಹತ್ಯೆಯಲ್ಲಿ ಆರೆಸ್ಸೆಸ್ ನ ಪಾತ್ರವೇನೂ ಇಲ್ಲ ಎಂದು ತೀರ್ಮಾನವಾಯಿತು. 1948ರಲ್ಲಿ ವಿಧಿಸಲಾಗಿದ್ದ ನಿಷೇಧವನ್ನು ಕೂಡ ಈ ಹಿನ್ನೆಲೆ ಯಲ್ಲಿ ತೆಗೆದುಹಾಕಲಾಯಿತು.

ಆರೆಸ್ಸೆಸ್‌ನ ವಿರುದ್ಧದ ಆರೋಪಗಳು, ರಾಜಕೀಯ ದುರುದ್ದೇಶದಿಂದ ಹುಟ್ಟಿಕೊಂಡ ಸುಳ್ಳು ಆರೋಪಗಳು ಎಂಬುದನ್ನು ಈ ತನಿಖೆಗಳು ಸ್ಪಷ್ಟಪಡಿಸಿದ್ದರೂ, ಕಾಂಗ್ರೆಸ್ ತನ್ನ ಹಳೆಯ ಚಾಳಿ ಯಂತೆ ಮತ್ತೆ ಮತ್ತೆ ಸುಳ್ಳು ಹೇಳಿ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ವಿಫಲ ಯತ್ನದಲ್ಲಿ ತೊಡಗಿದೆ.

ರಾಷ್ಟ್ರ ರಕ್ಷಣೆಯಲ್ಲಿ ಪ್ರಮುಖ ಪಾತ್ರ: ಪಂಜಾಬ್ ಮತ್ತು ಜಮ್ಮು-ಕಾಶ್ಮೀರದ ಇತಿಹಾಸವನ್ನು ಗಮನಿಸಿದರೆ, ಉಗ್ರರ ಉಪಟಳ ತಪ್ಪಿಸುವಲ್ಲಿ ರಕ್ಷಣಾ ಪಡೆಗಳ ಜತೆ ಆರೆಸ್ಸೆಸ್ ವಹಿಸಿದ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತದೆ. 1980ರ ದಶಕದಲ್ಲಿ ಪಂಜಾಬ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದವು ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತಿದ್ದಾಗ, ಆರೆಸ್ಸೆಸ್‌ನ ಸ್ವಯಂಸೇವಕರು ಪೊಲೀಸರಿಗೆ ಮತ್ತು ಸೈನ್ಯಕ್ಕೆ ಮಾಹಿತಿ ಒದಗಿಸಿ, ಭಯೋತ್ಪಾದಕರ ಚಟುವಟಿಕೆಗಳನ್ನು ತಡೆಗಟ್ಟಲು ಸಹಕರಿಸಿ ದರು.

ಇದರಿಂದಾಗಿ ಸಾಮೂಹಿಕ ಹಿಂಸಾಚಾರವನ್ನು ತಡೆಯಲು ಮತ್ತು ಸ್ಥಳೀಯ ಜನರ ಭದ್ರತೆಯನ್ನು ಕಾಪಾಡಲು ಸೈನ್ಯಕ್ಕೆ ಸಾಕಷ್ಟು ನೆರವು ದೊರಕಿತು. ಇದೇ ರೀತಿಯ ಬೆಳವಣಿಗೆಯನ್ನು ಜಮ್ಮು-ಕಾಶ್ಮೀರದಲ್ಲಿಯೂ ಕಾಣುತ್ತೇವೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧ ಭಾರತೀಯ ಭದ್ರತಾ ಪಡೆಗಳು ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ, ಆರೆಸ್ಸೆಸ್‌ನ ಸ್ವಯಂಸೇವಕರು ಉಗ್ರಗಾಮಿ ಗಳ ಚಲನವಲನದ ಮಾಹಿತಿ ನೀಡಿ ಸೈನ್ಯಕ್ಕೆ ಸಹಾಯ ಮಾಡುವ ಮೂಲಕ ಶಾಂತಿಸ್ಥಾಪನೆಗೆ ಸಹಕಾರ ನೀಡಿದ್ದಿದೆ.

ಸಾಮಾಜಿಕ ಏಕತೆ ಮತ್ತು ಸೇವಾಕಾರ್ಯಗಳು: ಆರೆಸ್ಸೆಸ್ ಕೇವಲ ಯಾವುದೋ ನಿರ್ದಿಷ್ಟ ವಲಯಕ್ಕೆ ಸೀಮಿತಗೊಂಡಿಲ್ಲ; ತನಗೆ ತಳಹದಿಯಾಗಿರುವ ತತ್ವ-ಸಿದ್ಧಾಂತದಿಂದ ಪ್ರೇರಣೆ ಪಡೆದು, ವಿವಿಧ ಸಾಮಾಜಿಕ ವಲಯಗಳ ನಡುವೆ ಸಾಂಸ್ಕೃತಿಕ ಏಕತೆಯನ್ನು ಬೆಳೆಸಲು ಮತ್ತು ಸಂಘರ್ಷ ಗಳನ್ನು ತಡೆಯಲು ಅದು ಶ್ರಮಿಸುತ್ತದೆ.

ಈಶಾನ್ಯ ಭಾರತದ ಅಸ್ಸಾಂ, ಮಣಿಪುರ ಸೇರಿದಂತೆ, ಹಲವು ಪ್ರದೇಶಗಳಲ್ಲಿ ಶಾಂತಿಸ್ಥಾಪನೆಯಲ್ಲಿ ಮಹತ್ವದ ಸಹಕಾರ ನೀಡಿರುವ ಆರೆಸ್ಸೆಸ್, 2024ರ ರಾಷ್ಟ್ರೀಯ ಕಾರ್ಯನಿರ್ವಹಣಾ ಮಂಡಳಿಯ ಸಭೆಯಲ್ಲಿ ಪರಿಸರ ಸಂರಕ್ಷಣೆ, ಸ್ವಾವಲಂಬನೆ ಮತ್ತು ನಾಗರಿಕ ಹೊಣೆಗಾರಿಕೆಗಳನ್ನು ಉತ್ತೇಜಿಸಿದೆ. ರಾಷ್ಟ್ರಭಕ್ತಿಯನ್ನು ಪ್ರಧಾನವಾಗಿ ಇಟ್ಟುಕೊಂಡು ವ್ಯಕ್ತಿಗೆ ಸಂಸ್ಕಾರವನ್ನು ಕೊಡುವ ಕೆಲಸ ಮಾಡುವುದರ ಜತೆಗೆ, ಯುದ್ಧ, ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗಗಳ ಅಪ್ಪಳಿಕೆ ಮುಂತಾದ ಸಂಕಷ್ಟ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಸೇವಾ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಂಡಿದೆ ಆರೆಸ್ಸೆಸ್.

ವನವಾಸಿ ಕಲ್ಯಾಣ, ಶಿಕ್ಷಣ ಮತ್ತು ಸಂಸ್ಕಾರ: ಆರೆಸ್ಸೆಸ್ ಕೇವಲ ಸೈದ್ಧಾಂತಿಕ ಚರ್ಚೆಗಳ ಪರಿಽಗೆ ಸೀಮಿತವಾದ ಸಂಘಟನೆಯಲ್ಲ; ಇದು ದೇಶದ ವಿವಿಧ ಸಾಮಾಜಿಕ ವಲಯಗಳಲ್ಲಿ ಕ್ರಿಯಾಶೀಲ ವಾಗಿ ತೊಡಗಿಸಿಕೊಂಡಿದೆ ಎಂಬುದಕ್ಕೆ ಅದರ ಅಂಗಸಂಸ್ಥೆಯಾದ ‘ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ’ ಒಂದು ಜೀವಂತ ನಿದರ್ಶನ. 1952ರಲ್ಲಿ ಸ್ಥಾಪನೆಯಾದ ಈ ಆಶ್ರಮವು, ಭಾರತದ ಅತ್ಯಂತ ಹಿಂದುಳಿದ ಬುಡಕಟ್ಟು ಪ್ರದೇಶಗಳಲ್ಲಿ (ವನವಾಸಿ ಕ್ಷೇತ್ರಗಳಲ್ಲಿ) ಮೌನಕ್ರಾಂತಿಯನ್ನು ನಡೆಸುತ್ತಿದೆ.

ಆರೆಸ್ಸೆಸ್ ಪ್ರಕಾರ, ದೇಶದ ಬುಡಕಟ್ಟು ಸಮುದಾಯಗಳು ‘ಅರಣ್ಯವಾಸಿಗಳು’ ಅಥವಾ ‘ಆದಿವಾಸಿ ಗಳು’ ಮಾತ್ರವಲ್ಲ, ಅವರು ಭಾರತೀಯ ಸಂಸ್ಕೃತಿಯ ಮೂಲಬೇರುಗಳನ್ನು ಕಾಪಾಡಿ ಕೊಂಡು ಬಂದ ವನವಾಸಿಗಳು (ಅರಣ್ಯದಲ್ಲಿ ವಾಸಿಸುವವರು) ಮತ್ತು ಅನನ್ಯ ರಾಷ್ಟ್ರೀಯ ಚೇತನದ ಭಾಗ. ಅವರ ಸಮಗ್ರ ಅಭಿವೃದ್ಧಿಯು ರಾಷ್ಟ್ರ ನಿರ್ಮಾಣಕ್ಕೆ ಅತ್ಯಗತ್ಯ ಎಂಬ ದೃಷ್ಟಿ ಕೋನವನ್ನು ಆರೆಸ್ಸೆಸ್ ಹೊಂದಿದೆ. ಶಿಕ್ಷಣದ ಮೂಲಕ ಅಇಕಾರ ನೀಡಿಕೆ, ಆರೋಗ್ಯ ಮತ್ತು ಜೀವನ ಭದ್ರತೆ, ಸಾಂಸ್ಕೃತಿಕ ಸ್ವತ್ವದ ಪುನರುಜ್ಜೀವನ, ಕ್ರೈಸ್ತ ಮಿಷನರಿಗಳ ಮತಾಂತರದ ಬೆದರಿಕೆಯನ್ನು ಸಮರ್ಥವಾಗಿ ಎದುರಿಸುವಿಕೆ ಮತ್ತು ವನವಾಸಿಗಳ ವಿಶಿಷ್ಟ ಸಾಂಸ್ಕೃತಿಕ ಸ್ವತ್ವವನ್ನು ಕಾಪಾಡುವಿಕೆ ಮುಂತಾದ ನೆಲೆಗಳಲ್ಲಿ ಆಶ್ರಮ ಶ್ರಮಿಸುತ್ತದೆ ಹಾಗೂ ವನವಾಸಿಗಳ ಹಕ್ಕುಗಳ ರಕ್ಷಣೆ ಮತ್ತು ಗ್ರಾಮ ವಿಕಾಸ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ.

ವನದಲ್ಲಿ ಅರಳಿದ ಜ್ಞಾನದ ದೀಪ: ‘ಏಕಲ ವಿದ್ಯಾಲಯ’ ಅಭಿಯಾನವು ‘ಒಬ್ಬ ಗುರು-ಒಂದು ಶಾಲೆ’ ಎಂಬ ತತ್ತ್ವದ ಮೇಲೆ ನಿಂತು, ವನವಾಸಿ ಮತ್ತು ಗ್ರಾಮೀಣ ಮಕ್ಕಳಿಗೆ ಬೆಳಕಾಗಿದೆ. ಇದು ಅರಣ್ಯದ ಹೃದಯಭಾಗದಲ್ಲಿ ಮೂಲ ಶಿಕ್ಷಣ, ಆರೋಗ್ಯದ ಅರಿವು ಮತ್ತು ಸ್ವಾವಲಂಬನೆಯ ದೀಕ್ಷೆ ನೀಡುವ ಮಹಾ ಸೇವಾಯಜ್ಞವಾಗಿದೆ. ‘ವಿದ್ಯೆಯಿಂದ ರಾಷ್ಟ್ರೋದ್ಧಾರ’ ಎಂಬುದು ಇದರ ಧ್ಯೇಯ.

ಮೌಲ್ಯದ ಮಂದಾರ ‘ರಾಷ್ಟ್ರೋತ್ಥಾನ ಪರಿಷತ್’: ಬೆಂಗಳೂರನ್ನು ಮೂಲನೆಲೆಯಾಗಿ ಹೊಂದಿ ರುವ ರಾಷ್ಟ್ರೋತ್ಥಾನ ಪರಿಷತ್, ಮೌಲ್ಯಾಧಾರಿತ ಶಿಕ್ಷಣ, ಆರೋಗ್ಯ ಸೇವೆ ಮತ್ತು ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಸಮಾಜದ ನೈತಿಕ ಪುನರುತ್ಥಾನಕ್ಕೆ ಶ್ರಮಿಸುತ್ತಿದೆ.

ಇಲ್ಲಿ ಶಿಷ್ಯರಿಗೆ ಜ್ಞಾನವನ್ನಷ್ಟೇ ನೀಡದೆ, ರಾಷ್ಟ್ರಭಕ್ತಿ, ಸಂಸ್ಕಾರ ಮತ್ತು ಸೇವಾ ಮನೋಭಾವದ ಬೀಜವನ್ನು ಬಿತ್ತಲಾಗುತ್ತದೆ. ಇದು ಭವಿಷ್ಯದ ಭಾರತದ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ದಿವ್ಯಸಂಕಲ್ಪವಾಗಿದೆ.

ಶಿಸ್ತು, ಶಕ್ತಿ, ಸಮರ್ಪಣೆಯ ಕ್ರೀಡಾಕ್ಷೇತ್ರ: ‘ಕ್ರೀಡಾಭಾರತೀ’ ಎಂಬುದು ಕ್ರೀಡೆಯ ಮೂಲಕ ವ್ಯಕ್ತಿತ್ವ, ಶಿಸ್ತು ಮತ್ತು ರಾಷ್ಟ್ರಭಕ್ತಿಯನ್ನು ಬೆಳೆಸುವ ಸಂಸ್ಥೆ. ಇದು ದೇಸಿ ಆಟಗಳು, ಯೋಗ ಮತ್ತು ದೈಹಿಕ ತರಬೇತಿಗಳ ಮೂಲಕ ಯುವಕರಲ್ಲಿ ಶಕ್ತಿ, ಸಹಕಾರ ಮತ್ತು ಸಮರ್ಪಣೆಯ ಮನೋ ಭಾವವನ್ನು ತುಂಬುತ್ತದೆ. ‘ಕ್ರೀಡೆ ಕೇವಲ ಆಟವಲ್ಲ, ಅದು ರಾಷ್ಟ್ರಸೇವೆ’ ಎಂಬ ಸಂದೇಶವನ್ನು ಜೀವಂತಗೊಳಿಸುತ್ತದೆ.

ಧರ್ಮಸಂವಾದ ಮತ್ತು ಸಾಮಾಜಿಕ ಬಾಂಧವ್ಯ: ಆರೆಸ್ಸೆಸ್‌ನ ಮುಖ್ಯಸ್ಥರಾದ ಮೋಹನ್ ಭಾಗವತ್ ಅವರು ಮುಸ್ಲಿಂ ಸಮುದಾಯದ ಮುಖಂಡರನ್ನು ಭೇಟಿಮಾಡಿ, ಧಾರ್ಮಿಕ ಸಂವಾದ ಮತ್ತು ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಧರ್ಮಗಳ ನಡುವೆ ಶಾಂತಿ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವಲ್ಲಿ ಆರೆಸ್ಸೆಸ್ ತನ್ನ ಪಾತ್ರವನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ದೇಶದ ಮುಸ್ಲಿಂ ಸಹೋದರರನ್ನು ರಾಷ್ಟ್ರಭಾವನೆ, ಸೌಹಾರ್ದ ಮತ್ತು ಏಕತೆಯ ಮಾರ್ಗದಲ್ಲಿ ಒಗ್ಗೂಡಿಸುವ ವೇದಿಕೆಯಾಗಿದೆ ‘ರಾಷ್ಟ್ರೀಯ ಮುಸ್ಲಿಂ ಏಕತಾ ಮಂಚ್’. ‘ಮೊದಲು ದೇಶ, ನಂತರ ಧರ್ಮ’ ಎಂಬ ಧ್ಯೇಯದೊಂದಿಗೆ ಇದು ದೇಶಭಕ್ತಿ, ಶಿಕ್ಷಣ ಹಾಗೂ ಸಾಮಾಜಿಕ ಸೇವೆಯ ಮೂಲಕ, ಸಂವಿಧಾನ ನಿಷ್ಠೆಯ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುತ್ತಿದೆ.

ಈ ವೇದಿಕೆಯ ಮೂಲಕ ರಾಷ್ಟ್ರಭಕ್ತ ಮುಸ್ಲಿಮರನ್ನು ಸಂಘಟಿಸುವ ಕೆಲಸವು ಆರೆಸ್ಸೆಸ್‌ನಿಂದ ನಡೆಯುತ್ತಿದ್ದು, ಡಾ. ಎಪಿಜೆ ಅಬ್ದುಲ್ ಕಲಾಂ, ಹವಾಲ್ದಾರ್ ಅಬ್ದುಲ್ ಹಮೀದ್, ಬಿಸ್ಮಿಲ್ಲಾ ಖಾನ್, ಹರೇಕಳ ಹಾಜಬ್ಬ, ಇಬ್ರಾಹಿ ಸುತಾರ್ ಅವರಂಥ ರಾಷ್ಟ್ರನಿಷ್ಠ ಮುಸ್ಲಿಮರನ್ನು ಅದು ಪ್ರತಿ ಹಂತದಲ್ಲಿ ಉದಾಹರಣೆಯಾಗಿ ಉಲ್ಲೇಖಿಸುತ್ತದೆ. ದೇಶದ್ರೋಹಿ ಯಾರೇ ಇರಲಿ, ಅವರು ಹಿಂದು ಅಥವಾ ಮುಸ್ಲಿಂ ಆಗಿರಲಿ, ಅವರನ್ನು ವಿರೋಽಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ: ‘ವಿದ್ಯಾಭಾರತಿ’ ಶಾಲೆಗಳ ಮೂಲಕ ಮಕ್ಕಳಿಗೆ ಆರೆಸ್ಸೆಸ್ ಶಿಕ್ಷಣ ಒದಗಿಸುವುದಲ್ಲದೆ, ಕೋವಿಡ್ ಸಾಂಕ್ರಾಮಿಕ ಅಪ್ಪಳಿಸಿದ ಸಂದರ್ಭಗಳಲ್ಲಿ ‘ಸೇವಾ ಭಾರತ್’ನ ಮೂಲಕ ಆರೋಗ್ಯ ಮತ್ತು ತುರ್ತು ನೆರವು ಕಾರ್ಯಗಳನ್ನು ದೇಶಾದ್ಯಂತ ನಡೆಸಿದೆ. ಇದು ೭.೩ ಮಿಲಿಯನ್‌ಗೂ ಹೆಚ್ಚು ಬಡವರಿಗೆ ಆಹಾರ ಮತ್ತು ಮಾಸ್ಕ್ ವಿತರಣೆ, ರಕ್ತದಾನ ಸೇರಿದಂತೆ ವಿವಿಧ ಸೇವೆಗಳನ್ನು ನಿರಂತರವಾಗಿ ನೀಡುತ್ತಾ, ಹಿಂದುಳಿದ ಪ್ರದೇಶಗಳಲ್ಲಿ ಸಹಾಯ ಮಾಡಿದೆ. ‘ತಪಸ್’ ಎಂಬುದು ರಾಷ್ಟ್ರೋತ್ಥಾನ ಪರಿಷತ್‌ನ ಉಚಿತ ವಸತಿ-ಪ್ರಶಿಕ್ಷಣ ಯೋಜನೆಯಾಗಿದ್ದು, ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ‘ಐಐಟಿ-ಜೆಇಇ’ ಸೇರಿದಂತೆ ಉನ್ನತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತದೆ. ‘ಸಾಧನಾ’ ಎಂಬುದು ಇದೇ ಯೋಜನೆಯ ಹುಡುಗಿಯರ ವಿಭಾಗವಾಗಿದ್ದು, ವೈದ್ಯಕೀಯ ಮತ್ತು ಇತರ ಉನ್ನತ ಕೋರ್ಸ್‌ಗಳಿಗೆ ಸಿದ್ಧಗೊಳ್ಳುವ ವಿದ್ಯಾರ್ಥಿನಿಯರಿಗೆ ವಸತಿ ಮತ್ತು ಶಿಕ್ಷಣದ ನೆರವನ್ನು ನೀಡುತ್ತದೆ.

ರಾಷ್ಟ್ರ ಮೊದಲು ಎಂಬ ಪರಿಕಲ್ಪನೆ: ಕೌಟುಂಬಿಕ ಭಾವನೆಯೊಂದಿಗೆ ‘ರಾಷ್ಟ್ರ ಮೊದಲು’ ಎಂಬ ಪರಿಕಲ್ಪನೆಯ ಅಡಿಯಲ್ಲಿ ತನ್ನ ಶಾಖೆಗಳ ಮೂಲಕ ಸಂಸ್ಕಾರ ನೀಡುವ ವೇದಿಕೆಯಾಗಿದೆ ಆರೆಸ್ಸೆಸ್. ಇದರ ಶಾಖೆಗಳಲ್ಲಿ ಜಾತಿ-ಮತ-ಧರ್ಮ, ಮೇಲು-ಕೀಳು ಎನ್ನುವ ಭೇದವಿಲ್ಲ. ಅಮೃತ ವಚನಗಳು, ಹಾಡುಗಳು, ಕಥೆಗಳ ಮೂಲಕ ರಾಷ್ಟ್ರಭಕ್ತಿ ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತದೆ.

ಗಾಂಧೀಜಿ, ಸುಭಾಸ್‌ಚಂದ್ರ ಬೋಸ್, ಡಾ. ಬಿ.ಆರ್. ಅಂಬೇಡ್ಕರ್, ಬ್ರಹ್ಮರ್ಷಿ ನಾರಾಯಣ ಗುರು, ಜ್ಯೋತಿಬಾ ಫುಲೆ, ಕಬೀರ್‌ದಾಸ್, ಗುರುನಾನಕ್, ಬಸವಣ್ಣ, ಕನಕದಾಸ ಹಾಗೂ ಎಪಿಜೆ ಅಬ್ದುಲ್ ಕಲಾಂ ಮುಂತಾದವರ ಹಿತನುಡಿಗಳನ್ನು ಇಲ್ಲಿ ಬೋಧಿಸಲಾಗುತ್ತದೆ.

ಕೌಟುಂಬಿಕ ಶೈಲಿಯಲ್ಲಿರುವ, ಪಾರಿವಾರಿಕ ಭಾವನೆಗಳನ್ನು ಬಿತ್ತುವ ಸಂಘಟನೆಯಾಗಿರುವ ಆರೆಸ್ಸೆಸ್ ಎಂಬುದು ಟ್ರಸ್ಟ್ ಅಲ್ಲ, ಸೊಸೈಟಿಯೂ ಅಲ್ಲ ಅಥವಾ ಇದು ರಾಜಕೀಯ ಪಕ್ಷವೂ ಅಲ್ಲ. ಆರೆಸ್ಸೆಸ್‌ನ ವಿರೋಧಿಗಳು ಸುಳ್ಳು ಮತ್ತು ಅಪಪ್ರಚಾರದಿಂದ ಸಾಮಾಜಿಕ ಪರಿವರ್ತನೆಗೆ ತಡೆ ಮಾಡುತ್ತಿದ್ದಾರೆ. ಆರೆಸ್ಸೆಸ್‌ನ ಕಾರ್ಯವೈಖರಿಯು ನಿಸ್ವಾರ್ಥವೂ, ರಾಷ್ಟ್ರಪರವೂ, ಎಲ್ಲರನ್ನೂ ಒಳಗೊಳ್ಳುವಂಥದ್ದೂ ಆಗಿದೆ.

ನಾಗಪುರದ ಮೋಹಿತೆವಾಡದಿಂದ ಆರಂಭವಾದ ಆರೆಸ್ಸೆಸ್, ಇಂದಿಗೆ ಕೋಟ್ಯಂತರ ಸ್ವಯಂ ಸೇವಕರ ಹೃದಯಗಳಲ್ಲಿ ಸ್ಥಳ ಪಡೆದಿದೆ, ವಿದೇಶಗಳಲ್ಲಿಯೂ ಹಿಂದೂ ಸ್ವಯಂಸೇವಕ ಸಂಘದ ಕಾರ್ಯವಿದೆ.

ಫ್ಯಾಸಿಸ್ಟ್ ಮನಸ್ಥಿತಿಯ ಕೆಲ ಕಾಂಗ್ರೆಸ್ಸಿಗರು ಹೇಳುವಂತೆ ‘ಹಿಂದೂ ಫ್ಯಾಸಿಸಂ’ ಎನ್ನುವುದು ಅಸಾಧ್ಯ: ಏಕೆಂದರೆ ಹಿಂದೂ ಸಂಸ್ಕೃತಿಯು ಬಹುಸಂಸ್ಕೃತಿವಾದಿಯಾಗಿದೆ. ಅಪ್ಪಟ ರಾಷ್ಟ್ರೀಯ ತೆಗೂ ಫ್ಯಾಸಿಸಂಗೂ/-ಸಿಸ್ಟರಿಗೂ ಸಂಬಂಧವಿಲ್ಲ. ‘ಒಬ್ಬ ಪ್ರವಾದಿ-ಒಬ್ಬ ದೇವರು-ಒಂದು ಪುಸ್ತಕ’ದ ಮೇಲೆ ನಂಬಿಕೆಯಿಟ್ಟವರು -ಸಿಸ್ಟ್ ಆಗುತ್ತಾರೆ. ರಾಷ್ಟ್ರೀಯತೆಯ ಮೇಲೆ, ಬಹುತ್ವದ ಮೇಲೆ ನಂಬಿಕೆಯಿಟ್ಟವರು, ಬಹುತ್ವದ ನಂಬಿಕೆಯಿರುವ ಹಿಂದುತ್ವವನ್ನು ಪ್ರತಿಪಾದಿಸುವವರು ಯಾವತ್ತಿಗೂ ಫ್ಯಾಸಿಸ್ಟ್ ಆಗಲು ಸಾಧ್ಯವಿಲ್ಲ.

ಹಿಂದುತ್ವವು ಫ್ಯಾಸಿಸ್ಟ್ ಅಥವಾ ಕಮ್ಯುನಲ್ ಅಲ್ಲ; ಅದು ಸತ್ಯ, ಸದ್ಗುಣ ಮತ್ತು ಪಂಚಭೂತಗಳ ಸಂರಕ್ಷಣೆಯ ಆಧಾರಿತ ಸಾಂಸ್ಕೃತಿಕ ವಿಚಾರಧಾರೆ. ‘ಹಿಂದೂ ರಾಷ್ಟ್ರ’ ಎಂಬ ಪದವನ್ನೂ, ಅರ್ಥವನ್ನೂ, ಪರಿಕಲ್ಪನೆಯನ್ನೂ ಈ ತತ್ತ್ವದ ಅಡಿಯಲ್ಲಿ ವಿವರಿಸಲಾಗಿದೆ. ಕಾಂಗ್ರೆಸ್ಸಿನ ರಾಜಕೀಯ ವಿದ್ರೋಹ: ‘ಟುಕಡೆ ಗ್ಯಾಂಗ್ ’ನೊಂದಿಗೆ ಕಾಂಗ್ರೆಸ್ಸಿನ ನಂಟು, ರಾಷ್ಟ್ರದ್ರೋಹದ ನೆರಳು ಇದೆ.

ದೇಶದ ಏಕತೆ, ಸಂವಿಧಾನ ಮತ್ತು ಸೇನೆಯ ಪಾವಿತ್ರ್ಯದ ವಿರುದ್ಧ ದನಿಯೆತ್ತುವ, ‘ಭಾರತ್ ತೇರಾ ಟುಕಡೆ ಹೋಂಗೆ’ ಎಂದು ಕೂಗಿ ರಾಷ್ಟ್ರವಿಭಜನೆಗೆ ಹಾತೊರೆಯುವವರ ಗುಂಪಿನ ಜತೆಗೆ, ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಕಾಂಗ್ರೆಸ್ ಪಕ್ಷವು ನೇರವಾದ ಸಂಬಂಧವನ್ನು ಹೊಂದಿದೆ. ತನ್ನ ಬೆಂಬಲಿಗರು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದರೂ ಅದನ್ನು ವಿರೋಧಿಸದ ಕಾಂಗ್ರೆಸ್ಸಿನ ಮೌನ, ವಿದೇಶಗಳಲ್ಲಿ ಭಾರತದ ಮರ್ಯಾದೆಗೆ ಕುಂದುತರುವ ತನ್ನ ಅಧಿನಾಯಕ ರಾಹುಲ್ ಗಾಂಧಿಯವರ ಪರ ವಹಿಸುವ ಅನಿವಾರ್ಯತೆ- ಹೀಗೆ ಹಲವು ವಿಚಾರಗಳು ಕಾಂಗ್ರೆಸ್‌ ನಲ್ಲಿರುವ ರಾಷ್ಟ್ರಭಕ್ತಿಯ ಕೊರತೆಯನ್ನು ಅಂಗೈಹುಣ್ಣಿನಷ್ಟೇ ಸ್ಪಷ್ಟವಾಗಿ ತೋರಿಸುತ್ತವೆ.

ಜಾತಿ ಜಾತಿಗಳನ್ನು ಎತ್ತಿಕಟ್ಟುವ, ಸಮಾಜವನ್ನು ಒಡೆಯುವ ರಾಜಕಾರಣವು ಕಾಂಗ್ರೆಸ್‌ನ ನೀತಿ ಯಾಗಿದೆ. ಜನರನ್ನು ಧರ್ಮ, ಜಾತಿ ಮತ್ತು ಮತಗಳ ಮೇಲೆ ವಿಭಜಿಸಿ, ಕೆಲವರ ಮೇಲೆ ತುಷ್ಟೀಕರಣ ನೀತಿಯನ್ನು ಪ್ರಯೋಗಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ.

ಸಮಾಜದಲ್ಲಿ ಒಗ್ಗಟ್ಟಿನ ಸೇತುವೆ ಕಟ್ಟುವುದಕ್ಕೆ ಬದಲಾಗಿ, ವಿಭಜನೆ ಮತ್ತು ದ್ವೇಷದ ಗೋಡೆ ಕಟ್ಟುವುದೇ ಕಾಂಗ್ರೆಸ್‌ನ ರಾಜಕೀಯ ಹಾದಿಯ ಮೂಲಮಂತ್ರ. ಇಂಥ ದುಷ್ಟ ಇಚ್ಛೆಗಳಿಗೆ ಅಡ್ಡ ನಿಂತಿರುವುದೇ ಆರೆಸ್ಸೆಸ್! ‘ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವುದು ಹೇಗೆ ಫ್ಯಾಸಿಸಂ ಆಗುತ್ತದೆ? ತಾನು-ತನ್ನವರು ಮಾತ್ರ ಸುಖ ಪಡಬೇಕು, ಉಳಿದವರು ಹಾಳಾದರೂ ಪರವಾಗಿಲ್ಲ ಎನ್ನುವವರು ಫ್ಯಾಸಿಸ್ಟ್‌ಗಳು. ಎಲ್ಲರೂ ಸುಖವಾಗಿರಬೇಕು ಅನ್ನೋರು ಫ್ಯಾಸಿಸ್ಟ್ ಹೇಗೆ ಆಗುತ್ತಾರೆ? ಆರೆಸ್ಸೆಸ್‌ನ ವಿರುದ್ಧದ ಸುಳ್ಳು ಟೀಕೆಗಳ, ಅಪಪ್ರಚಾರದ ಹಿಂದಿರುವ ಮೂಲಕಾರಣ- ಸಂಘದ ಬೆಳವಣಿಗೆಯಿಂದ ದೇಶದ ಯುವಜನರಲ್ಲಿ ಹೆಚ್ಚುತ್ತಿರುವ ದೇಶಭಕ್ತಿಯ ಪ್ರಭಾವ.

ಇದರಿಂದಾಗಿ, ತುಷ್ಟೀಕರಣದ ರಾಜಕೀಯ ಮಾಡುತ್ತಿರುವ ಕಾಂಗ್ರೆಸ್‌ಗೆ ಆತಂಕ ಎದುರಾಗಿದೆ. ಈ ಕಾರಣಕ್ಕೆ ಕೆಲ ಕಾಂಗ್ರೆಸ್ಸಿಗರು ಹತಾಶರಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಕಾಲಘಟ್ಟದಲ್ಲಿ ಸತ್ಯ, ನಿಷ್ಠೆ ಮತ್ತು ಸಮಾಜಮುಖಿ ಕಾರ್ಯಗಳೊಂದಿಗೆ ಆರೆಸ್ಸೆಸ್ ಜಾಗೃತಿ ಮಾಡುತ್ತಾ, ಸುಳ್ಳು ಆರೋಪಗಳನ್ನು ಬದಿಗೊತ್ತಬೇಕಾಗಿದೆ. ದೇಶದ ಏಕತೆ ಮತ್ತು ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸುವ ಕಾಲ ಬಂದಿದೆ.

(ಲೇಖಕರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು)