ಇದೇ ಅಂತರಂಗ ಸುದ್ದಿ
vbhat@me.com
ಅನೇಕ ವಿದೇಶಿ ಪ್ರವಾಸಿಗರು ಇಸ್ರೇಲ್ ಪ್ರವಾಸದಲ್ಲಿ ಮುಖ್ಯವಾಗಿ ಟೆಲ್ ಅವಿವ್, ಡೆಡ್ ಸೀ ಮತ್ತು ಜೆರುಸಲೇಮ್ ಸ್ಥಳಗಳನ್ನು ಮಾತ್ರ ನೋಡುತ್ತಾರೆ. ಇಸ್ರೇಲ್‌ನ ಅತ್ಯಂತ ಸುಂದರ ಮತ್ತು ಅದ್ಭುತ ಭಾಗಗಳಲ್ಲಿ ಮರುಭೂಮಿಯೂ ಒಂದು. ಆದರೆ ಬಹುತೇಕ ಪ್ರವಾಸಿಗರು ಈ ಪ್ರದೇಶವನ್ನೇ ಕಡೆಗಣಿಸುತ್ತಾರೆ. ಇಸ್ರೇಲಿಗೆ ಹೋಗಿ ಅಲ್ಲಿನ ಮರುಭೂಮಿಯನ್ನು ನೋಡದೇ ಬರುವುದು, ಅಷ್ಟರ ಮಟ್ಟಿಗೆ ಆ ಪ್ರವಾಸದ ಕೆಲವು ಸ್ಮರಣೀಯ ಅನುಭವದಿಂದ ವಂಚಿತರಾದಂತೆ.
ಇಸ್ರೇಲ್ ಮರುಭೂಮಿ ಏಕೆ ವಿಶಿಷ್ಟವಾಗಿದೆ? ಇಸ್ರೇಲ್‌ನ ದಕ್ಷಿಣ ಭಾಗದಲ್ಲಿರುವ ನೆಗೆವ್ ಮರು ಭೂಮಿ ಕೇವಲ ಮರಳು ಮತ್ತು ಬಿಸಿಲಿನಿಂದ ಕೂಡಿಲ್ಲ. ಅಲ್ಲಿ ಅಚ್ಚರಿಗೊಳಿಸುವ ಅನೇಕ ಸಂಗತಿ ಗಳಿವೆ. ನೆಗೆವ್ ಮರುಭೂಮಿಯಲ್ಲಿ ಕ್ರೇಟರ್‌ಗಳು, ಬೃಹತ್ ಕಣಿವೆಗಳು ಮತ್ತು ವಿಚಿತ್ರ ಆಕಾರದ ಮರಳು ದಿಬ್ಬಗಳಿವೆ. ಮಿಟ್ಜ್ಪೆ ರಾಮೋನ್ ಪ್ರದೇಶದಲ್ಲಿರುವ ದೊಡ್ಡ ಕ್ರೇಟರ್ ಜಗತ್ತಿನ ವಿಶಿಷ್ಟ ಭೂವೈಜ್ಞಾನಿಕ ಸ್ಥಳಗಳಲ್ಲಿ ಒಂದಾಗಿದೆ. ಈ ಮರುಭೂಮಿ ಪ್ರದೇಶದಲ್ಲಿ ಪ್ರಾಚೀನ ಸಂಸ್ಕೃತಿಗಳ ಅವಶೇಷಗಳಿವೆ.
ನಬತೇನ್ ನಗರಗಳಾದ ಅವ್ಡಾಟ್ ಮತ್ತು ಶಿಫ್ಟಾ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿವೆ. ಇವು ಪ್ರಾಚೀನ ಕಾಲದ ವ್ಯಾಪಾರ ಮಾರ್ಗಗಳ ಕುರಿತು ತಿಳಿಸುತ್ತವೆ. ಟ್ರೆಕ್ಕಿಂಗ್, ಸೈಕ್ಲಿಂಗ್, ಜೀಪ್ ಸಫಾರಿ ಮತ್ತು ಮರುಭೂಮಿ ಕ್ಯಾಂಪಿಂಗ್ ನಂಥ ಚಟುವಟಿಕೆಗಳಿಗೆ ಇದು ಹೇಳಿ ಮಾಡಿಸಿದ ಜಾಗ.
ರಾತ್ರಿ ಆಕಾಶದಲ್ಲಿ ನಕ್ಷತ್ರಗಳನ್ನು ನೋಡುವುದು ಇಲ್ಲಿನ ಮತ್ತೊಂದು ಅನನ್ಯ ಅನುಭವ. ನಂಬಲು ಕಷ್ಟವಾದರೂ, ಅಲ್ಲಿನ ಮರುಭೂಮಿಯಲ್ಲಿ ಅನೇಕ ಪ್ರಾಣಿ ಮತ್ತು ಸಸ್ಯ ಪ್ರಭೇದಗಳು ಬದುಕುಳಿ ದಿವೆ. ಇಲ್ಲಿ ವಿಶೇಷ ಜಾತಿಯ ಪ್ರಾಣಿಗಳನ್ನು ಮತ್ತು ಮರುಭೂಮಿಗೆ ಹೊಂದಿ ಕೊಂಡಿರುವ ಸಸ್ಯಗಳನ್ನು ನೋಡಬಹುದು.
ಪ್ರವಾಸಿಗರು ಏಕೆ ಮರುಭೂಮಿಗೆ ಹೋಗಬೇಕು?
ಮರುಭೂಮಿ ಪ್ರವಾಸವು ಕೇವಲ ಒಂದು ಸ್ಥಳವನ್ನು ನೋಡುವುದಲ್ಲ, ಬದಲಾಗಿ ಒಂದು ವಿಭಿನ್ನ ಅನುಭವ ನೀಡುತ್ತದೆ. ನಗರದ ಗದ್ದಲದಿಂದ ದೂರ ಉಳಿದು, ಪ್ರಕೃತಿಯ ಶಾಂತತೆಯನ್ನು ಅನುಭವಿಸಲು ಇದು ಉತ್ತಮ ಸ್ಥಳ. ಇಸ್ರೇಲ್‌ನ ನಿಜವಾದ ಸೌಂದರ್ಯ ಮತ್ತು ಇತಿಹಾಸವನ್ನು ಸಂಪೂರ್ಣವಾಗಿ ಅರಿಯಬೇಕಾದರೆ, ಈ ಮರುಭೂಮಿ ಪ್ರದೇಶಕ್ಕೆ ಭೇಟಿ ನೀಡುವುದು ಅತ್ಯಗತ್ಯ.
ಇದನ್ನೂ ಓದಿ: Vishweshwar Bhat Column: ಲ್ಯಾಂಡಿಂಗ್ ಅಂದ್ರೆ...
ನೆಗೆವ್ ಮರುಭೂಮಿ ವಿಸ್ತೀರ್ಣ ಇಸ್ರೇಲ್‌ನ ಒಟ್ಟು ಭೂಭಾಗದ ಶೇ.55ರಷ್ಟಿದೆ. ಆದರೂ, ಇಲ್ಲಿ ಇಸ್ರೇಲ್‌ನ ಒಟ್ಟು ಜನಸಂಖ್ಯೆಯ ಶೇ.10ರಷ್ಟು ಜನರು ಮಾತ್ರ ವಾಸಿಸುತ್ತಾರೆ. ಇಸ್ರೇಲ್‌ನ ನೀರಾವರಿ ತಂತ್ರಜ್ಞಾನಕ್ಕೆ ನೆಗೆವ್ ಮರುಭೂಮಿಯೇ ಪ್ರಮುಖ ಪಾತ್ರ ವಹಿಸಿದೆ.
ಇಲ್ಲಿನ ತೀವ್ರ ಬಿಸಿಲಿನ ವಾತಾವರಣದಲ್ಲಿ ಹನಿ ನೀರಾವರಿ ( Drip Irrigation) ತಂತ್ರಜ್ಞಾನ ವನ್ನು ಬಳಸಿ ಕೃಷಿ ಮಾಡುತ್ತಾರೆ. ಬೆನ್-ಗುರಿಯನ್ ಯುನಿವರ್ಸಿಟಿ ಈ ಮರುಭೂಮಿಯ ವಾತಾವರಣಕ್ಕೆ ಹೊಂದಿಕೊಂಡಿರುವ ಸಂಶೋಧನೆಗಳನ್ನು ನಡೆಸುತ್ತದೆ. ಅಷ್ಟೇ ಅಲ್ಲ, ಈ ಮರು ಭೂಮಿ ಇಸ್ರೇಲ್‌ನ ಮಿಲಿಟರಿ ತರಬೇತಿ ಹಾಗೂ ರಕ್ಷಣಾ ಕಾರ್ಯಗಳಿಗೆ ಪ್ರಮುಖ ಕೇಂದ್ರವಾಗಿದೆ.
ನೆಗೆವ್ ಮರುಭೂಮಿಯು ಇಸ್ರೇಲ್‌ನ ಕೃಷಿ, ತಂತ್ರಜ್ಞಾನ, ಇತಿಹಾಸ ಮತ್ತು ಪ್ರವಾಸೋದ್ಯಮದಲ್ಲಿ ಒಂದು ದೊಡ್ಡ ಪಾತ್ರ ವಹಿಸುತ್ತದೆ. ಹೀಗಾಗಿ ಇದು ಇಸ್ರೇಲ್‌ನ ಅತ್ಯಂತ ಪ್ರಮುಖ ಮತ್ತು ವೈಶಿಷ್ಟ್ಯ ಪೂರ್ಣ ಭಾಗವಾಗಿದೆ. ನೆಗೆವ್ ಭೀಕರ ಮರುಭೂಮಿ. ಅಲ್ಲಿ ಧಾರಾಳವಾಗಿರುವುದು ಸುಡುಸುಡು ಬಿಸಿಲು ಮಾತ್ರ. ಅಲ್ಲಿ ಮರಳಿನ ಹೊರತಾಗಿ ಮತ್ತೇನೂ ಇಲ್ಲ. ಅಂಥ ಬರಡು ಮರುಭೂಮಿ. ಹಾಗಂತ ನೆಗೆವ್ ಮರುಭೂಮಿ ಕೇವಲ ಬಂಜರು ಭೂಮಿಯಲ್ಲ.
ಇದು ಇಸ್ರೇಲಿನ ಕೃಷಿ ವಲಯದಲ್ಲಿ ಕ್ರಾಂತಿ ಮಾಡಿರುವ ಸ್ಥಳ. ಹೇಗೆಂದರೆ, ಇಸ್ರೇಲಿ ವಿಜ್ಞಾನಿಗಳು ಇಲ್ಲಿನ ಮರಳು ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಸೌರಶಕ್ತಿ ಬಳಸಿ ಉಪ್ಪಿನ ನೀರನ್ನು ಶುದ್ಧೀಕರಿಸಿ, ಹನಿ ನೀರಾವರಿ ಪದ್ಧತಿಯ ಮೂಲಕ ಬೆಳೆಗಳನ್ನು ಬೆಳೆಯುತ್ತಾರೆ.
ಇದರಿಂದಾಗಿ, ಇಲ್ಲಿ ಆಲಿವ್, ದ್ರಾಕ್ಷಿ, ವೈನ್ ತಯಾರಿಕೆ ಮತ್ತು ವಿವಿಧ ಹಣ್ಣುಗಳನ್ನು ಬೆಳೆಯು ತ್ತಾರೆ. ಮರುಭೂಮಿಯ ಮಧ್ಯದಲ್ಲಿ ಕೃಷಿ ಮಾಡುವುದು ಒಂದು ಪವಾಡವೇ ಸರಿ. ನೆಗೆವ್ ಮರುಭೂಮಿಯ ರಾಜಧಾನಿ ಎಂದು ಕರೆಯುವ ಬೀ’ಎರ್ ಶೆವಾ ಒಂದು ಆಧುನಿಕ ನಗರ. ಇದು ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದೆ. ಬೈಬಲ್ ಪ್ರಕಾರ, ಈ ನಗರದಲ್ಲಿ ಅಬ್ರಹಾಂ ವಾಸಿಸು ತ್ತಿದ್ದ.
ನೆಗೆವ್ ಮರುಭೂಮಿಯಲ್ಲಿ ಪ್ರಾಚೀನ ಜನರು ವಾಸಿಸುತ್ತಿದ್ದ ಭೂಗರ್ಭದ ನಗರಗಳಿವೆ. ಇದು ಯುದ್ಧ ಮತ್ತು ತೀವ್ರ ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿರ್ಮಿಸಲಾದ ಗುಹೆಗಳ ಜಾಲವಾಗಿದೆ. ಇಸ್ರೇಲ್‌ನ ಪ್ರಥಮ ಪ್ರಧಾನ ಮಂತ್ರಿಯಾಗಿದ್ದ, ಡೆವಿಡ್ ಬೆನ್-ಗುರಿಯನ್ ದೇಶದ ಭವಿಷ್ಯದ ಬಗ್ಗೆ ಒಂದು ವಿಶಿಷ್ಟ ದೃಷ್ಟಿಕೋನವನ್ನು ಹೊಂದಿದ್ದರು. ಅವರಿಗೆ ನೆಗೆವ್ ಮರುಭೂಮಿ ಕೇವಲ ಒಂದು ನಿರ್ಜೀವ ಪ್ರದೇಶವಾಗಿರಲಿಲ್ಲ.
ಅದು ಇಸ್ರೇಲ್ ನ ಭವಿಷ್ಯದ ಬೆಳವಣಿಗೆಯ ಕೇಂದ್ರವಾಗಬೇಕೆಂದು ಬಯಸಿದ್ದರು. ಇಸ್ರೇಲ್‌ನ ಜನಸಂಖ್ಯೆ ಹೆಚ್ಚುತ್ತಿದ್ದಂತೆ ಭವಿಷ್ಯದ ಜನರು ನೆಗೆವ್ ಮರುಭೂಮಿಯಲ್ಲಿ ವಾಸಿಸಬೇಕೆಂದು ಅವರು ಬಯಸಿದ್ದರು. ಈ ಮರುಭೂಮಿಯನ್ನು ಅಭಿವೃದ್ಧಿಪಡಿಸಿದರೆ ದೇಶದ ಭದ್ರತೆ, ಕೃಷಿ, ಮತ್ತು ಆರ್ಥಿಕತೆಗೂ ಅನುಕೂಲವಾಗುತ್ತದೆ ಎಂದು ನಂಬಿದ್ದರು.
ಸಾರ್ವಜನಿಕ ಜೀವನದಿಂದ ನಿವೃತ್ತಿಯಾದ ನಂತರ, ಅವರು ಸಾರ್ವಜನಿಕರಿಗೆ ಮಾದರಿಯಾಗ ಬೇಕೆಂದು ನೆಗೆವ್ ಮರುಭೂಮಿಯಲ್ಲಿರುವ ಸೇದೆ ಬೋಕರ್ ( Sde Boker ) ಎಂಬಲ್ಲಿ ನೆಲೆಸಿದರು. ಅವರ ಈ ನಿರ್ಧಾರವು ಇಸ್ರೇಲ್‌ನ ಜನರಿಗೆ ಮರುಭೂಮಿಯಲ್ಲಿ ಬದುಕು ಕಟ್ಟಿಕೊಳ್ಳುವ ಸ್ಪೂರ್ತಿ ನೀಡಿತು.
ನೆಗೆವ್ ಮರುಭೂಮಿಯಲ್ಲಿ ನೆಲೆಸಿದ ನಂತರ, ಅಲ್ಲಿ ಕೃಷಿ, ನೀರಾವರಿ ಮತ್ತು ಸೌರಶಕ್ತಿ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಿದರು. ಇದರಿಂದಾಗಿ, ಇಸ್ರೇಲ್‌ನ ಪ್ರಮುಖ ಸಂಶೋಧನಾ ಕೇಂದ್ರಗಳಲ್ಲಿ ಒಂದಾದ ಬೆನ್-ಗುರಿಯನ್ ವಿಶ್ವವಿದ್ಯಾಲಯ ಅಲ್ಲಿ ಸ್ಥಾಪಿತವಾಯಿತು.
ಬೆನ್-ಗುರಿಯನ್ ಅವರ ಜೀವನದ ಈ ನಿರ್ಧಾರ ಇಸ್ರೇಲ್ ನ ಇತಿಹಾಸದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಅವರ ದೂರದೃಷ್ಟಿಯಿಂದಾಗಿಯೇ ಇಂದು ನೆಗೆವ್ ಮರುಭೂಮಿಯಲ್ಲಿ ಅನೇಕ ನಗರಗಳು, ಕೃಷಿ -ರ್ಮ್‌ಗಳು ಮತ್ತು ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿವೆ. ಅವರ ಸಮಾಽ ಕೂಡ ಸೇದೆ ಬೋಕರ್ ನಲ್ಲಿ ಇದೆ. ಇದು ಇಸ್ರೇಲ್‌ನ ಅನೇಕ ನಾಗರಿಕರು ಮತ್ತು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ತಾಣಗಳಲ್ಲಿ ಒಂದು.
ವೆಸ್ಟ್ ಬ್ಯಾಂಕ್ ವಿವಾದ
‘ವೆಸ್ಟ್ ಬ್ಯಾಂಕ್ ಅಂದ್ರೆ ಏನು, ಅದಕ್ಕೆ ಯಾಕೆ ಹಾಗೆ ಕರೆಯಲಾಗುತ್ತದೆ?’ ಈ ಪ್ರಶ್ನೆಯನ್ನು ನನಗೆ ಅನೇಕರು ಕೇಳಿರಬಹುದು. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ವಿವಾದ ಕೇಳಿಬಂದಾಗಲೆಲ್ಲ ವೆಸ್ಟ್ ಬ್ಯಾಂಕ್ ಹೆಸರು ಕೇಳಿಬರುತ್ತದೆ. ಜಗತ್ತಿನ ಭೂಪಟದಲ್ಲಿ ಗಾಜಾ ಪಟ್ಟಿ ಮತ್ತು ವೆಸ್ಟ್ ಬ್ಯಾಂಕ್ ಅನ್ನು ಭೂತಗನ್ನಡಿ ಇಟ್ಟು ಹುಡುಕಬೇಕು. ಆದರೆ ಇವೆರಡೂ ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮ ಗಳಲ್ಲಿ ಆಗಾಗ ಕೇಳಿಬರುತ್ತವೆ.
ವೆಸ್ಟ್ ಬ್ಯಾಂಕ್ ( West Bank ) ಎಂಬ ಹೆಸರು ಬರಲು ಮುಖ್ಯ ಕಾರಣ ಅದರ ಭೌಗೋಳಿಕ ಸ್ಥಾನ. ಇದು ಜೋರ್ಡಾನ್ ನದಿಯ ಪಶ್ಚಿಮಕ್ಕೆ ( West Bank ) ಇದೆ. ಜೋರ್ಡಾನ್ ನದಿಯು ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್‌ನ ಪೂರ್ವ ಗಡಿಯ ಮೂಲಕ ಹರಿಯುತ್ತದೆ.
ನದಿಯ ಪಶ್ಚಿಮಕ್ಕೆ ಇರುವ ಪ್ರದೇಶವನ್ನು ‘ವೆಸ್ಟ್ ಬ್ಯಾಂಕ್’ ಎಂದು ಕರೆಯಲಾಯಿತು. ಇದೇ ರೀತಿ, ನದಿಯ ಪೂರ್ವದಲ್ಲಿರುವ ಪ್ರದೇಶವನ್ನು ಈ ಹಿಂದೆ ಟ್ರಾನ್ಸ್-ಜೋರ್ಡಾನ್ ( Transjordan ) ಎಂದು ಕರೆಯಲಾಗುತ್ತಿತ್ತು. 1948ರ ಅರಬ್-ಇಸ್ರೇಲ್ ಯುದ್ಧದ ನಂತರ ಈ ಪ್ರದೇಶವು ಜೋರ್ಡಾ ನ್‌ನ ನಿಯಂತ್ರಣಕ್ಕೆ ಬಂದಿತು.
ಜೋರ್ಡಾನ್ ತನ್ನ ಭಾಗವಾಗಿ ಇದನ್ನು ಸೇರಿಸಿಕೊಂಡಿತು. ಆಗ, ಜೋರ್ಡಾನ್‌ನ ಆಡಳಿತದಲ್ಲಿ ಈ ಪ್ರದೇಶಕ್ಕೆ ನಿರ್ದಿಷ್ಟ ಹೆಸರು ಇರಲಿಲ್ಲ. ಈ ಪ್ರದೇಶವು ಜೋರ್ಡಾನ್ ನದಿಯ ಪಶ್ಚಿಮದಲ್ಲಿರು ವುದರಿಂದ, ಅದನ್ನು ‘ವೆಸ್ಟ್ ಬ್ಯಾಂಕ್ ಆಫ್ ದಿ ಜೋರ್ಡಾನ್’ ಎಂದು ಅನೌಪಚಾರಿಕವಾಗಿ ಕರೆಯ ಲಾಗುತ್ತಿತ್ತು. ನಂತರ ಈ ಹೆಸರೇ ಅಧಿಕೃತವಾಗಿ ಬಳಕೆಗೆ ಬಂದಿತು.
1967ರ ಆರು ದಿನಗಳ ಯುದ್ಧದಲ್ಲಿ, ಇಸ್ರೇಲ್ ಈ ಪ್ರದೇಶವನ್ನು ವಶಪಡಿಸಿಕೊಂಡಿತು. ಅಂದಿ ನಿಂದಲೂ ಈ ಪ್ರದೇಶವನ್ನು ‘ವೆಸ್ಟ್ ಬ್ಯಾಂಕ್’ ಎಂದೇ ಕರೆಯಲಾಗುತ್ತಿದೆ. ಹೀಗಾಗಿ ವೆಸ್ಟ್ ಬ್ಯಾಂಕ್ ಎಂಬ ಹೆಸರು ಕೇವಲ ಅದರ ಭೌಗೋಳಿಕ ಸ್ಥಳವನ್ನು ಸೂಚಿಸುತ್ತದೆ, ಅಂದರೆ ‘ಜೋರ್ಡಾನ್ ನದಿಯ ಪಶ್ಚಿಮ ದಂಡೆ’. ಈ ಹೆಸರು ಯಾವುದೇ ರಾಜಕೀಯ ಸಿದ್ಧಾಂತ ಅಥವಾ ಜನರ ಗುರುತನ್ನು ಆಧರಿಸಿಲ್ಲ.
ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಶಾಂತಿ ಒಪ್ಪಂದಗಳ ಪ್ರಕಾರ, ವೆಸ್ಟ್ ಬ್ಯಾಂಕ್ ಅನ್ನು ಆಡಳಿತಾತ್ಮಕವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ: ಮೊದಲನೆಯದಾಗಿ, ವಲಯ A (Area A ): ಈ ಪ್ರದೇಶ ಸಂಪೂರ್ಣವಾಗಿ ಪ್ಯಾಲೆಸ್ತೀನ್ ಆಡಳಿತ ಪ್ರಾಧಿಕಾರದ (Palestinian Authority) ನಿಯಂತ್ರಣದಲ್ಲಿದೆ.
ಇಲ್ಲಿನ ಭದ್ರತೆ ಮತ್ತು ಆಡಳಿತವನ್ನು ಪ್ಯಾಲೆಸ್ತೀನಿಯರು ನೋಡಿಕೊಳ್ಳುತ್ತಾರೆ. ಎರಡನೆಯದಾಗಿ, ವಲಯ B (Area B): ಇಲ್ಲಿನ ಆಡಳಿತವು ಪ್ಯಾಲೆಸ್ತೀನ್ ಆಡಳಿತ ಪ್ರಾಧಿಕಾರದ ನಿಯಂತ್ರಣದಲ್ಲಿದೆ. ಆದರೆ ಭದ್ರತೆಯನ್ನು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಜಂಟಿಯಾಗಿ ನಿರ್ವಹಿಸುತ್ತವೆ.
ಮೂರನೆಯದಾಗಿ, ವಲಯ C (Area C): ಈ ವಲಯವು ಇಸ್ರೇಲ್‌ನ ಸಂಪೂರ್ಣ ಆಡಳಿತ ಮತ್ತು ಭದ್ರತಾ ನಿಯಂತ್ರಣದಲ್ಲಿದೆ. ಇದು ಬಹುತೇಕ ಗ್ರಾಮೀಣ ಪ್ರದೇಶಗಳನ್ನು ಮತ್ತು ಪ್ಯಾಲೆಸ್ತೀನ್ ಅಲ್ಲದ ವಸತಿ ಪ್ರದೇಶಗಳನ್ನು ಒಳಗೊಂಡಿದೆ.
ವೆಸ್ಟ್ ಬ್ಯಾಂಕ್ ಅನ್ನು ಸುತ್ತುವರಿದಿರುವ ಬೃಹತ್ ಕಾಂಕ್ರೀಟ್ ಗೋಡೆಯನ್ನು ಇಸ್ರೇಲ್, ‘ಭದ್ರತಾ ತಡೆಗೋಡೆ’ ( Security Barrier) ಎಂದು ಕರೆಯುತ್ತದೆ. ಇಸ್ರೇಲ್ ಈ ಗೋಡೆಯನ್ನು ಭಯೋ ತ್ಪಾದಕ ದಾಳಿಗಳನ್ನು ತಡೆಯಲು ನಿರ್ಮಿಸಿದೆ ಎಂದು ಹೇಳುತ್ತದೆ. 2000ರ ದ್ವಿತೀಯ ಇಂತಿಫಾದ ( Second Intifada) ಸಮಯದಲ್ಲಿ, ಪ್ಯಾಲೆಸ್ತೀನಿಯರ ಭಯೋತ್ಪಾದಕ ದಾಳಿಗಳು ತೀವ್ರಗೊಂಡಾಗ, ಇಸ್ರೇಲ್ ಈ ಗೋಡೆಯನ್ನು ನಿರ್ಮಿಸಿತು.
ಈ ಗೋಡೆಯು ಅನೇಕ ಕಡೆ ಕಾಂಕ್ರೀಟ್ ಗೋಡೆಗಳಾಗಿದ್ದರೆ, ಕೆಲವು ಕಡೆಗಳಲ್ಲಿ ಮುಳ್ಳು ತಂತಿ ಬೇಲಿಗಳನ್ನೂ ಒಳಗೊಂಡಿದೆ. ಪ್ಯಾಲೆಸ್ತೀನಿಯರ ಪ್ರಕಾರ, ಈ ಗೋಡೆಯನ್ನು ಭದ್ರತೆಯ ಉದ್ದೇಶಕ್ಕೆ ನಿರ್ಮಿಸಿಲ್ಲ, ತಮ್ಮ ದೈನಂದಿನ ಜೀವನಕ್ಕೆ ತೀವ್ರ ಅಡ್ಡಿ ಉಂಟುಮಾಡಲೆಂದೇ ಇಸ್ರೇಲಿಗಳು ನಿರ್ಮಿಸಿದ್ದಾರೆ.
ಈ ಗೋಡೆಯಿಂದಾಗಿ ಪ್ಯಾಲೆಸ್ತೀನಿಯರಿಗೆ ತಮ್ಮ ಜಮೀನು, ಶಾಲೆಗಳು ಮತ್ತು ಕೆಲಸದ ಸ್ಥಳಗಳಿಗೆ ತೆರಳಲು ಕಷ್ಟವಾಗಿದೆ. ಹಾಗೆ ನೋಡಿದರೆ, ವೆಸ್ಟ್ ಬ್ಯಾಂಕ್ ಪ್ರದೇಶ ವಿವಾದಗಳ ನೆಲೆಬೀಡು. ಹೆಜ್ಜೆ ಹೆಜ್ಜೆಗೂ ಅಲ್ಲಿ ತಕರಾರು. ಇಡೀ ಪ್ರದೇಶ ಸದಾ ಬೂದಿ ಮುಚ್ಚಿದ ಕೆಂಡ. ಇಸ್ರೇಲ್ ವೆಸ್ಟ್ ಬ್ಯಾಂಕ್ ನಲ್ಲಿ ಯಹೂದಿ ವಸಾಹತುಗಳನ್ನು ನಿರ್ಮಿಸಿದೆ. ಅಂತಾರಾಷ್ಟ್ರೀಯ ಕಾನೂನಿನ ಪ್ರಕಾರ, ಈ ವಸಾಹತುಗಳು ಕಾನೂನುಬಾಹಿರ ಎಂದು ಹೇಳಲಾಗುತ್ತದೆ. ಆದರೆ ಇಸ್ರೇಲ್ ಈ ಹೇಳಿಕೆಯನ್ನು ಒಪ್ಪಿಕೊಳ್ಳುವುದಿಲ್ಲ.
ಈ ವಸಾಹತುಗಳು ಭವಿಷ್ಯದ ಪ್ಯಾಲೆಸ್ತೀನ್ ದೇಶದ ರಚನೆಗೆ ಅಡ್ಡಿಯಾಗಿವೆ ಎಂಬುದು ಪ್ಯಾಲೆಸ್ತೀನಿಯರ ವಾದ. ಗೋಡೆಯ ನಿರ್ಮಾಣ ಮತ್ತು ಇಸ್ರೇಲ್‌ನ ಮಿಲಿಟರಿ ನಿಯಂತ್ರಣ ದಿಂದಾಗಿ, ಪ್ಯಾಲೆಸ್ತೀನ್ ಜನರು ಪ್ರತ್ಯೇಕವಾದ ಇಕ್ಕಟ್ಟಿನ ಜಾಗದಲ್ಲಿ ಜೀವಿಸುತ್ತಿದ್ದಾರೆ ಎಂದು ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಆರೋಪಿಸಿವೆ.
ವೆಸ್ಟ್ ಬ್ಯಾಂಕ್, ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ಶಾಂತಿ ಮಾತುಕತೆಗಳಲ್ಲಿ ಯಾವತ್ತೂ ಒಂದು ಪ್ರಮುಖ ವಿಷಯ. ಪ್ಯಾಲೆಸ್ತೀನಿಯರು ತಮ್ಮ ಸ್ವತಂತ್ರ ದೇಶದ ರಾಜಧಾನಿಯಾಗಿ ಪೂರ್ವ ಜೆರುಸಲೆಮ್ ಅನ್ನು ಬಯಸುತ್ತಾರೆ ಮತ್ತು ವೆಸ್ಟ್ ಬ್ಯಾಂಕ್ ಅನ್ನು ತಮ್ಮ ದೇಶದ ಭಾಗವೆಂದು ಪರಿಗಣಿಸುತ್ತಾರೆ. ಆದರೆ ಇಸ್ರೇಲಿಗಳು ಈ ವಾದವನ್ನು ಒಪ್ಪುವುದಿಲ್ಲ.
ವೆಸ್ಟ್ ಬ್ಯಾಂಕ್ ಒಂದು ಸಂಕೀರ್ಣ ರಾಜಕೀಯ ಮತ್ತು ಭೌಗೋಳಿಕ ಪ್ರದೇಶ ಎಂಬುದರಲ್ಲಿ ಎರಡು ಮಾತಿಲ್ಲ. ಅಲ್ಲಿನ ಗೋಡೆ ಮತ್ತು ಪರಿಸ್ಥಿತಿಗಳು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಡುವಿನ ದೀರ್ಘ ಕಾಲದ ಸಂಘರ್ಷದ ಪ್ರತೀಕಗಳಾಗಿರುವುದು ವಾಸ್ತವ.
ಎಲ್ಲೆಡೆ ಕೋಶರ್ ರೆಸ್ಟೋರೆಂಟ್
ಇಸ್ರೇಲ್‌ನಲ್ಲಿ ನೀವು ಎಡೆ ‘ಕೋಶರ್’ (Kosher), ‘ಕೋಶರ್ ರೆಸ್ಟೊರೆಂಟ್’ ಎಂದು ಬರೆದಿರುವು ದನ್ನು ಗಮನಿಸಬಹುದು. ಕೋಶರ್ ಎಂಬುದು ಯಹೂದಿ ಧರ್ಮದ ಆಹಾರ ನಿಯಮಗಳನ್ನು ಅನುಸರಿಸಿ ತಯಾರಿಸಿದ ಅಥವಾ ಪರಿಶೀಲಿಸಲಾದ ಆಹಾರ ಮತ್ತು ಪದಾರ್ಥಗಳನ್ನು ಸೂಚಿಸುವ ಪದ. ಇದು ಹೀಬ್ರೂ ಭಾಷೆಯ ‘ಕಷೇರ್’ ಎಂಬ ಪದದಿಂದ ಬಂದಿದೆ, ಇದರರ್ಥ ‘ಸರಿಯಾದುದು’ ಅಥವಾ ‘ಸೂಕ್ತವಾದದು’.
ಯಹೂದಿಗಳ ಪವಿತ್ರ ಗ್ರಂಥವಾದ ‘ತೋರಾ’ (Torah)ದಲ್ಲಿ ತಿಳಿಸಲಾದ ಕೆಲವು ಧಾರ್ಮಿಕ ನಿಯಮ ಗಳ ಪ್ರಕಾರ, ಆಹಾರವನ್ನು ತಯಾರಿಸುವಾಗ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು. ಈ ನಿಯಮಗಳನ್ನು ಒಟ್ಟಾಗಿ ‘ಕಶ್ರುತ್’ ಎಂದು ಕರೆಯುತ್ತಾರೆ. ಇಸ್ರೇಲ್‌ನಲ್ಲಿ ಯಾವುದೇ ಆಹಾರ ಉತ್ಪನ್ನದ ಮೇಲೆ ‘ಕೋಶರ್’ ಎಂದು ಗುರುತಿಸಿದ್ದರೆ ಅದರರ್ಥ- ಆ ಆಹಾರವನ್ನು ಧಾರ್ಮಿಕ ಅಧಿಕಾರಿಗಳು ಅಥವಾ ರಬ್ಬಿ (ಯಹೂದಿ ಧರ್ಮಗುರು) ಪರಿಶೀಲಿಸಿ, ಯಹೂದಿ ಧರ್ಮದ ನಿಯಮಗಳ ಪ್ರಕಾರ ಅದನ್ನು ತಯಾರಿಸಲಾಗಿದೆ ಎಂದು ಪ್ರಮಾಣೀಕರಿಸಿzರೆ. ಆ ಆಹಾರ ಶುದ್ಧವಾಗಿದೆ ಮತ್ತು ಸೇವಿಸಲು ಸುರಕ್ಷವಾಗಿದೆ.
ಪ್ರಾಣಿಯನ್ನು ವಧೆ ಮಾಡುವಾಗ ರಕ್ತವನ್ನು ಸಂಪೂರ್ಣವಾಗಿ ತೆಗೆಯಲಾಗಿದೆ. ಕೋಶರ್ ಆಹಾರ ವನ್ನು ಪ್ರಮಾಣೀಕರಿಸುವಾಗ ಕೆಲವು ನಿಯಮಗಳನ್ನು ಪಾಲಿಸಲಾಗುತ್ತದೆ: ಹಾಲು ಮತ್ತು ಮಾಂಸದ ಉತ್ಪನ್ನಗಳನ್ನು ಒಂದೇ ಊಟದಲ್ಲಿ, ಒಂದೇ ಪಾತ್ರೆಯಲ್ಲಿ ಅಥವಾ ಒಂದೇ ಸಮಯ ದಲ್ಲಿ ಸೇವಿಸುವಂತಿಲ್ಲ.
ಕೋಶರ್ ರೆಸ್ಟೋರೆಂಟ್‌ಗಳು ಮಾಂಸ ಮತ್ತು ಹಾಲಿನ ವಿಭಾಗಗಳನ್ನು ಪ್ರತ್ಯೇಕವಾಗಿ ಇಡುತ್ತವೆ. ಕೋಶರ್ ಆಹಾರಕ್ಕಾಗಿ ಕೆಲವು ನಿರ್ದಿಷ್ಟ ಪ್ರಾಣಿಗಳನ್ನು ಮಾತ್ರ ಬಳಸಬಹುದು. ಉದಾಹರಣೆಗೆ, ದನದ ಮಾಂಸ, ಕುರಿ ಮಾಂಸ ಮತ್ತು ಕೋಳಿ ಮಾಂಸ. ಹಂದಿ, ಒಂಟೆ, ಮೊಲ, ಮೀನುಗಳಲ್ಲಿ ಕೆಲವು ಜಾತಿಗಳು (ಸಿಂಪಿ, ಕಪ್ಪೆ), ಮತ್ತು ಕ್ರಿಮಿಕೀಟಗಳು ಸಂಪೂರ್ಣವಾಗಿ ನಿಷಿದ್ಧ.
ಮೀನಿಗೆ ಕೋಶರ್ ಎಂದು ಪ್ರಮಾಣೀಕರಿಸಲು ಅದಕ್ಕೆ ಇಬ್ಬದಿ ರೆಕ್ಕೆಗಳು ( Fins ) ಮತ್ತು ಸುಲಭ ವಾಗಿ ತೆಗೆಯಬಹುದಾದ ಚಕ್ಕೆಗಳು ( Scales) ಇರಬೇಕು. ಇಸ್ರೇಲ್‌ನಲ್ಲಿ ಕೋಶರ್ ಎಂಬ ಪದವು ಆಹಾರವನ್ನು ಧಾರ್ಮಿಕ ನಿಯಮಗಳಿಗೆ ಅನುಗುಣವಾಗಿ ತಯಾರಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಇಸ್ರೇಲ್‌ನ ಬಹುತೇಕ ಜನರು ಯಹೂದಿಗಳಾಗಿರುವುದರಿಂದ, ಕೋಶರ್ ಆಹಾರದ ಪ್ರಮಾಣೀಕರಣ ಅಲ್ಲಿ ಸಾಮಾನ್ಯವಾಗಿದೆ. ಈ ರೆಸ್ಟೋರೆಂಟ್‌ಗಳಲ್ಲಿ ನೀವು ಚೀಸ್‌ಬರ್ಗರ್ (ಚೀಸ್ ಹಾಲು ಉತ್ಪನ್ನ ಮತ್ತು ಮಾಂಸ ಉತ್ಪನ್ನದ ಮಿಶ್ರಣ) ಅಥವಾ ಹಂದಿ ಮಾಂಸದಂಥ ಆಹಾರ ಗಳನ್ನು ನಿರೀಕ್ಷಿಸುವಂತಿಲ್ಲ, ಏಕೆಂದರೆ ಇವು ಯಹೂದಿ ಧಾರ್ಮಿಕ ಕಾನೂನುಗಳಲ್ಲಿ ನಿಷಿದ್ಧ.
ಇಸ್ರೇಲ್‌ನಲ್ಲಿ ಕೋಶರ್ ಆಹಾರ ಸರ್ವೇಸಾಮಾನ್ಯ. ಯಹೂದಿ ಧರ್ಮದ ಅನೇಕರು ಕೋಶರ್ ಆಹಾರವನ್ನೇ ಸೇವಿಸುವುದರಿಂದ, ಈ ನಿಯಮಗಳನ್ನು ಅನುಸರಿಸಿ ಆಹಾರವನ್ನು ತಯಾರಿಸ ಲಾಗುತ್ತದೆ. ಆದ್ದರಿಂದ, ಇಸ್ರೇಲ್‌ಗೆ ಭೇಟಿ ನೀಡಿದಾಗ, ಕೋಶರ್ ಆಹಾರವನ್ನು ಸುಲಭವಾಗಿ ಕಂಡುಕೊಳ್ಳಬಹುದು.
ಕೋಶರ್ ಆಹಾರವನ್ನು ಸೇವಿಸುವುದು ಯಹೂದಿ ಧಾರ್ಮಿಕ ನಿಯಮಗಳ ಭಾಗವಾಗಿದ್ದು, ಇಸ್ರೇಲ್‌ನ ಸಂಸ್ಕೃತಿಯ ಒಂದು ಪ್ರಮುಖ ಭಾಗವಾಗಿದೆ. ಯಹೂದಿ ಧರ್ಮದ ಪವಿತ್ರ ದಿನವಾದ ಶಬ್ಬತ್ (ಶುಕ್ರವಾರ ಸಂಜೆಯಿಂದ ಶನಿವಾರ ಸಂಜೆವರೆಗೆ) ಆಚರಣೆಯ ಕಾರಣದಿಂದಾಗಿ, ಈ ರೆಸ್ಟೋರೆಂಟ್‌ಗಳು ಮುಚ್ಚಿರುತ್ತವೆ. ಈ ಅವಧಿಯಲ್ಲಿ ಧಾರ್ಮಿಕ ಯಹೂದಿಗಳು ಕೆಲಸ ಮಾಡುವು ದಿಲ್ಲ.
ಇಸ್ರೇಲ್‌ನಲ್ಲಿ, ವಿಶೇಷವಾಗಿ ಟೆಲ್ ಅವಿವ್‌ನಂಥ ನಗರಗಳಲ್ಲಿ, ಕೋಶರ್ ಅಲ್ಲದ ರೆಸ್ಟೋರೆಂಟ್ ಗಳು ಸಹ ಸಾಕಷ್ಟು ಇವೆ. ಅಲ್ಲಿ ಕೆಲವು ರೆಸ್ಟೋರೆಂಟ್‌ಗಳು ಕೋಶರ್ ನಿಯಮಗಳನ್ನು ಬೇಕಂತಲೇ ಮುರಿಯುವ ಮೂಲಕ, ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಪ್ರಭಾವವನ್ನು ವಿರೋಧಿಸುತ್ತಿವೆ. ಇದು ಪ್ರಗತಿಪರ ಜೀವನಶೈಲಿಯ ಪ್ರತೀಕ. ಇಸ್ರೇಲ್‌ನಲ್ಲಿ ನೀವು ಕೋಶರ್ ಆಹಾರವನ್ನು ಸುಲಭ ವಾಗಿ ಕಂಡುಕೊಳ್ಳಬಹುದಾದರೂ, ಕೆಲವು ನಗರಗಳಲ್ಲಿ, ನಿಮ್ಮಿಷ್ಟದ ಯಾವುದೇ ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ. ಇದು ಇಸ್ರೇಲ್‌ನಲ್ಲಿರುವ ವೈವಿಧ್ಯಮಯ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ತೋರಿಸುತ್ತದೆ.
ಪಾಸ್‌ಪೋರ್ಟ್‌ಗಳಿಗೆ ಮುದ್ರೆ ಹಾಕುವುದಿಲ್ಲ
ನೀವು ಯಾವುದೇ ದೇಶಕ್ಕೆ ಹೋದಾಗ, ಅಲ್ಲಿನ ವಿಮಾನ ನಿಲ್ದಾಣದ ಇಮಿಗ್ರೇಷನ್ ಕೌಂಟರ್ ಬಳಿ ಹೋದಾಗ, ನಿಮ್ಮ ಪಾಸ್‌ಪೋರ್ಟಿನಲ್ಲಿರುವ ವೀಸಾ ನೋಡಿದ ಬಳಿಕ ಸ್ಟ್ಯಾಂಪ್ ಅಥವಾ ಸೀಲ್ ಹಾಕುವುದು ಸಾಮಾನ್ಯ. ಆದರೆ ಇಸ್ರೇಲ್ ಪಾಸ್ ಪೋರ್ಟ್‌ಗಳಿಗೆ ನೇರವಾಗಿ ವೀಸಾ ಮುದ್ರೆ ( stamp ) ಹಾಕುವುದನ್ನು ನಿಲ್ಲಿಸಿದೆ.
ಇಸ್ರೇಲ್ ಏಕೆ ಪಾಸ್‌ಪೋರ್ಟ್‌ಗಳಿಗೆ ಮುದ್ರೆ ಹಾಕುವುದಿಲ್ಲ? ಇಸ್ರೇಲ್‌ನ ಈ ನೀತಿಯು ಒಂದು ಪ್ರಮುಖ ಕಾರಣಕ್ಕಾಗಿ ಜಾರಿಗೆ ಬಂದಿದೆ. ವಿಶ್ವದ ಅನೇಕ ದೇಶಗಳು ಇಸ್ರೇಲ್‌ನೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲ. ಕೆಲವು ದೇಶಗಳು ತಮ್ಮ ಪ್ರವೇಶದ್ವಾರಗಳಲ್ಲಿ ಇಸ್ರೇಲಿ ಮುದ್ರೆಯನ್ನು ಹೊಂದಿರುವ ಪಾಸ್‌ಪೋರ್ಟ್‌ಗಳನ್ನು ಸ್ವೀಕರಿಸುವುದಿಲ್ಲ. ಆ ದೇಶಗಳಿಗೆ ಪ್ರಯಾಣಿಸುವಾಗ ಇಸ್ರೇಲ್‌ನಲ್ಲಿ ಪ್ರಯಾಣಿಸಿದವರಿಗೆ ಸಮಸ್ಯೆಯಾಗಬಾರದು ಎಂಬ ಕಾರಣದಿಂದ, ಇಸ್ರೇಲ್ ಈ ನೀತಿಯನ್ನು ಅನುಸರಿಸುತ್ತಿದೆ.
ಇಸ್ರೇಲ್‌ಗೆ ಪ್ರವೇಶಿಸುವ ಪ್ರತಿಯೊಬ್ಬರಿಗೂ ವೀಸಾ ಮುದ್ರೆಯ ಬದಲು ಒಂದು ಸಣ್ಣ ‘ನೀಲಿ ಕಾರ್ಡ್’ ( Blue Card ) ನೀಡಲಾಗುತ್ತದೆ. ಈ ಕಾರ್ಡ್‌ನಲ್ಲಿ ನಿಮ್ಮ ಪಾಸ್ ಪೋರ್ಟ್ ಸಂಖ್ಯೆ, ಪ್ರವೇಶ ದಿನಾಂಕ, ನಿಮ್ಮ ಛಾಯಾಚಿತ್ರ ಮತ್ತು ವೀಸಾ ವಿವರಗಳು ಇರುತ್ತವೆ. ಈ ನೀಲಿ ಕಾರ್ಡ್ ನೀವು ದೇಶದಲ್ಲಿ ಕಾನೂನುಬದ್ಧವಾಗಿ ನೆಲೆಸಿದ್ದೀರಿ ಎಂಬುದಕ್ಕೆ ಏಕೈಕ ಪುರಾವೆಯಾಗಿದೆ. ಅದನ್ನು ಕಳೆದುಕೊಳ್ಳದಂತೆ ನಿಮ್ಮ ಪಾಸ್ ಪೋರ್ಟ್‌ನಲ್ಲಿ ಸುರಕ್ಷಿತವಾಗಿ ಇಟ್ಟುಕೊಳ್ಳಿ ಎಂದು ಇಮಿಗ್ರೇಷನ್ ಅಧಿಕಾರಿಗಳು ಹೇಳುತ್ತಾರೆ.
ಕೆಲವು ಹೋಟೆಲ್‌ಗಳಲ್ಲಿ, ವ್ಯಾಟ್ ( VAT ) ಮರುಪಾವತಿ ಪಡೆಯಲು ಅಥವಾ ವ್ಯಾಟ್‌ನಿಂದ ವಿನಾಯಿತಿ ಪಡೆಯಲು ಈ ಕಾರ್ಡ್ ಅಗತ್ಯವಾಗಬಹುದು. ದೇಶದಿಂದ ಹೊರಹೋಗುವಾಗ, ನಿಮಗೆ ಮತ್ತೊಂದು ಸಣ್ಣ ‘ಗುಲಾಬಿ ಕಾರ್ಡ್’ ( Pink Card) ನೀಡಲಾಗುತ್ತದೆ. ಇದು ನೀವು ಕಾನೂನುಬದ್ಧ ವಾಗಿ ದೇಶದಿಂದ ಹೊರಹೋಗುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ.
ನೀಲಿ ಕಾರ್ಡ್‌ನಂತೆ, ಗುಲಾಬಿ ಕಾರ್ಡ್ ಅನ್ನು ಪಾಸ್‌ಪೋರ್ಟ್‌ನೊಂದಿಗೆ ಒಯ್ಯಬೇಕಾದ ಅಗತ್ಯವಿಲ್ಲ. ಅದು ನಿಮ್ಮ ನಿರ್ಗಮನದ ದಾಖಲೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ. ನೀಲಿ ಕಾರ್ಡ್ ಇಲ್ಲದಿದ್ದರೂ ನೀವು ದೇಶವನ್ನು ತೊರೆಯಬಹುದು. ಏಕೆಂದರೆ ನಿಮ್ಮ ಪಾಸ್‌ಪೋರ್ಟ್ ಮತ್ತು ಪ್ರಯಾಣದ ವಿವರಗಳು ಈಗಾಗಲೇ ವ್ಯವಸ್ಥೆಯಲ್ಲಿ ದಾಖಲಾಗಿರುತ್ತವೆ. ಈ ನೀತಿಯಿಂದಾಗಿ, ಇಸ್ರೇಲ್‌ಗೆ ಭೇಟಿ ನೀಡಿದ ನಂತರವೂ ಪ್ರವಾಸಿಗರು ಯಾವುದೇ ತೊಂದರೆ ಇಲ್ಲದೇ ಇತರೆ ದೇಶಗಳಿಗೆ ಪ್ರಯಾಣಿಸಬಹುದು. ಇದು ಪ್ರವಾಸಿಗರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತೆಗೆದುಕೊಂಡ ಉತ್ತಮ ನಿರ್ಧಾರ.