Vishweshwar Bhat Column: ಇದು ಇಸ್ರೇಲಿನ ʼಒಳ್ಳೆಯದಕ್ಕಾಗಿ ಆಶಿಸು, ಕೆಟ್ಟದ್ದಕ್ಕೆ ಸಿದ್ಧನಾಗುʼ ತತ್ತ್ವಕ್ಕೆ ಸಾಕ್ಷಿ !
ಯುದ್ಧ ಅಥವಾ ಯಾವುದೇ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಕೇವಲ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಇದನ್ನು 2000 ಹಾಸಿಗೆಗಳ, ಸಂಪೂರ್ಣ ಸುಸಜ್ಜಿತ 2000 ಆಸ್ಪತ್ರೆಯಾಗಿ ಪರಿವರ್ತಿಸಬಹುದು. ಪಾರ್ಕಿಂಗ್ ತಾಣವನ್ನು ಅಷ್ಟು ಶೀಘ್ರವಾಗಿ ಆಸ್ಪತ್ರೆ ಯನ್ನಾಗಿ ಹೇಗೆ ಪರಿವರ್ತಿಸಲು ಸಾಧ್ಯ?

-

ಇದೇ ಅಂತರಂಗ ಸುದ್ದಿ
ಇಂಥ ಆಲೋಚನೆಗಳು ಇಸ್ರೇಲಿಗಳಿಗೆ ಮಾತ್ರ ಬರಲು ಸಾಧ್ಯ. ಅದು ಅವರು ಎದುರಿಸುತ್ತಿರುವ ಅನಿಶ್ಚಿತ ಜೀವನದಿಂದಾಗಿ ಅನಿವಾರ್ಯ ಅಗತ್ಯವೂ ಆಗಿದ್ದಿರಬಹುದು. ಇದು ಇಸ್ರೇಲಿಗಳ ಹೊಂದಾಣಿಕೆ ಮತ್ತು ಯಾವ ಸಂದರ್ಭಕ್ಕಾದರೂ ತಮ್ಮನ್ನು ಸನ್ನದ್ಧಗೊಳಿಸಿಕೊಳ್ಳುವ ಮನಸ್ಥಿತಿ ಯನ್ನು ತೋರಿಸುತ್ತದೆ.
ನಾನು ಈ ಮಾತನ್ನು ಹೇಳಲು ಕಾರಣವಿದೆ. ಇಸ್ರೇಲ್‌ನ ಹೈಫಾ ನಗರದಲ್ಲಿ ಸ್ಯಾಮಿ ಓಫರ್ ಫೋರ್ಟಿಫೈಡ್ ಅಂಡರ್ ಗ್ರೌಂಡ್ ಎಮರ್ಜೆನ್ಸಿ ಹಾಸ್ಪಿಟಲ್ (Sammy Ofer Fortified Under ground Emergency Hospital ) ಎಂಬ ಆಸ್ಪತ್ರೆ ಇದೆ. ಇದು ಆಧುನಿಕ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸನ್ನದ್ಧತೆಗೆ ಒಂದು ಅದ್ಭುತ ನಿದರ್ಶನ. ಸರಳವಾಗಿ ಹೇಳುವುದಾದರೆ ಇದೊಂದು ಭೂಗತ (ಅಂಡರ್‌ಗ್ರೌಂಡ್) ಆಸ್ಪತ್ರೆ. ಯಾರಾದರೂ ಆಸ್ಪತ್ರೆಯನ್ನು ಭೂಮಿಯೊಳಗೆ ನಿರ್ಮಿಸು ತ್ತಾರಾ ಎಂದು ನಿಮಗೆ ಅನಿಸಬಹುದು ಅಥವಾ ಹಾಗೆ ನಿರ್ಮಿಸಲು ಏನು ಕಾರಣವಿದ್ದಿರ ಬಹುದು ಎಂದೂ ಅನಿಸಬಹುದು.
ಇದನ್ನೂ ಓದಿ: Vishweshwar Bhat Column: ಟೇಕಾಫ್ ಪ್ರಕ್ರಿಯೆಗಳು
ಹೌದು, ಅದಕ್ಕೆ ಪ್ರಬಲ ಕಾರಣವಿದೆ. 2006ರಲ್ಲಿ ಇಸ್ರೇಲ್ ವಿರುದ್ಧ ಲೆಬನಾನ್ ಎರಡನೇ ಬಾರಿಗೆ ಯುದ್ಧ ಸಾರಿತು. ಲೆಬನಾನ್‌ನ ಹಿಜ್ಬೊ ಉಗ್ರಗಾಮಿ ಸಂಘಟನೆಯು ಉತ್ತರ ಇಸ್ರೇಲ್‌ನಾದ್ಯಂತ, ವಿಶೇಷವಾಗಿ ಹೈಫಾ ನಗರದ ಮೇಲೆ ಸಾವಿರಾರು ರಾಕೆಟ್‌ಗಳನ್ನು ಉಡಾಯಿಸಿತು. ಆಗ, ರಾಂಬಮ್ ಹೆಲ್ತ ಕೇರ್ ಕ್ಯಾಂಪಸ್ ( Rambam Health Care Campus) ಎಂಬ ಒಂದು ಆಸ್ಪತ್ರೆ ಇತ್ತು. ಅದು ಉತ್ತರ ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯಾಗಿತ್ತು. ಆದರೆ ನಿರಂತರ ರಾಕೆಟ್ ದಾಳಿಯ ಅಪಾಯ ದಿಂದಾಗಿ ರೋಗಿಗಳನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಿಸುವುದು ಅತ್ಯಂತ ಕಷ್ಟಕರ ವಾಯಿತು. ಯಾವ ಕ್ಷಣದದರೂ ಆ ಆಸ್ಪತ್ರೆ ಧ್ವಂಸವಾಗುವ ಸಾಧ್ಯತೆ ಇತ್ತು.
ಆ ಸಂದಿಗ್ಧ ಸಂದರ್ಭದಲ್ಲಿ ಆಸ್ಪತ್ರೆಯ ಪ್ರಮುಖ ವಿಭಾಗಗಳನ್ನು ತಾತ್ಕಾಲಿಕವಾಗಿ ನೆಲಮಾಳಿಗೆ ಯ ಶೆಲ್ಟರ್‌ಗಳಿಗೆ ಸ್ಥಳಾಂತರಿಸಲಾಯಿತು. ಈ ಅನುಭವವು, ಯಾವುದೇ ಬಾಹ್ಯ ದಾಳಿಗೆ ಜಗ್ಗದೆ, ಸಂಪೂರ್ಣವಾಗಿ ಸುರಕ್ಷಿತವಾಗಿ ಕಾರ್ಯನಿರ್ವಹಿಸಬಲ್ಲ ಒಂದು ಬೃಹತ್ ಆಸ್ಪತ್ರೆಯ ಅಗತ್ಯವನ್ನು ಮನಗಾಣಿಸಿತು.
ಈ ಅಸ್ಪತ್ರೆಯ ಕಲ್ಪನೆಯೇ ಅದ್ಭುತ. ಇದು ದ್ವಿ-ಉದ್ದೇಶದ ವಿನ್ಯಾಸ ( Dual-Purpose Design) ವನ್ನು ಹೊಂದಿದೆ. ಶಾಂತಿಕಾಲದಲ್ಲಿ ಈ ಮೂರು ಅಂತಸ್ತಿನ ಭೂಗತ ರಚನೆಯುಳ್ಳ ಆಸ್ಪತ್ರೆಯು 1500 ವಾಹನಗಳನ್ನು ನಿಲ್ಲಿಸಬಹುದಾದ ಪಾರ್ಕಿಂಗ್ ತಾಣವಾಗಿ ಕಾರ್ಯನಿರ್ವಹಿಸುತ್ತದೆ. ಇದು ಆಸ್ಪತ್ರೆಗೆ ಬರುವ ರೋಗಿಗಳು ಮತ್ತು ಸಾರ್ವಜನಿಕರ ದೈನಂದಿನ ಬಳಕೆಗೆ ಲಭ್ಯವಿರುತ್ತದೆ.

ಯುದ್ಧ ಅಥವಾ ಯಾವುದೇ ರಾಷ್ಟ್ರೀಯ ವಿಪತ್ತಿನ ಸಂದರ್ಭದಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ಕೇವಲ 72 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಇದನ್ನು 2000 ಹಾಸಿಗೆಗಳ, ಸಂಪೂರ್ಣ ಸುಸಜ್ಜಿತ 2000 ಆಸ್ಪತ್ರೆಯಾಗಿ ಪರಿವರ್ತಿಸಬಹುದು. ಪಾರ್ಕಿಂಗ್ ತಾಣವನ್ನು ಅಷ್ಟು ಶೀಘ್ರವಾಗಿ ಆಸ್ಪತ್ರೆ ಯನ್ನಾಗಿ ಹೇಗೆ ಪರಿವರ್ತಿಸಲು ಸಾಧ್ಯ?
ಈ ತ್ವರಿತ ಪರಿವರ್ತನೆಯ ಗುಟ್ಟು ಅದರ ಮೂಲಸೌಕರ್ಯದಲ್ಲಿದೆ. ಪಾರ್ಕಿಂಗ್ ಮತ್ತು ಗ್ಯಾರೇಜ್‌ನ ಗೋಡೆಗಳು ಮತ್ತು ಕಂಬಗಳಲ್ಲಿ ಆಸ್ಪತ್ರೆಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮೊದಲೇ ಅಳವಡಿಸ ಲಾಗಿದೆ. ಪ್ರತಿಯೊಂದು ಪಾರ್ಕಿಂಗ್ ಸ್ಥಳದ ಬಳಿಯೂ ವಿದ್ಯುತ್, ವೈದ್ಯಕೀಯ ಆಮ್ಲಜನಕ, ನಿರ್ವಾತ (vacuum), ದತ್ತಾಂಶ ಸಂಪರ್ಕ (data connections) ಮತ್ತು ಇತರ ವೈದ್ಯಕೀಯ ಅನಿಲ ಗಳಿಗಾಗಿ ಬಣ್ಣದ ಕೋಡ್‌ಗಳನ್ನು ಹೊಂದಿರುವ ಪೈಪ್‌ಲೈನರ್‌ಗಳು ಮತ್ತು ಔಟ್‌ಲೆಟ್‌ಗಳಿವೆ. ತುರ್ತು ಪರಿಸ್ಥಿತಿ ಘೋಷಣೆಯಾದ ತಕ್ಷಣ, ಹತ್ತಿರದ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟಿರುವ ಹಾಸಿಗೆ ಗಳು, ಮಾನಿಟರ್‌ಗಳು, ವೆಂಟಿಲೇಟರ್ ಗಳು ಮತ್ತು ಇತರ ಎಲ್ಲ ವೈದ್ಯಕೀಯ ಉಪಕರಣ ಗಳನ್ನು ಇಲ್ಲಿಗೆ ತಂದು, ಮೊದಲೇ ಸಿದ್ಧವಾಗಿರುವ ಪಾಯಿಂಟ್‌ಗಳಿಗೆ ಜೋಡಿಸಲಾಗುತ್ತದೆ.
ಈ ಆಸ್ಪತ್ರೆಯನ್ನು ದಪ್ಪವಾದ, ಉಕ್ಕು-ಬಲವರ್ಧಿತ ಕಾಂಕ್ರೀಟ್‌ನಿಂದ ನಿರ್ಮಿಸಲಾಗಿದೆ. ಇದು ಕ್ಷಿಪಣಿಗಳು ಮತ್ತು ಬಾಂಬ್ ದಾಳಿಯನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದೊಂದು ರೀತಿಯಲ್ಲಿ ಬಂಕರ್‌ನಲ್ಲಿರುವ ಆಸ್ಪತ್ರೆಯಿದ್ದಂತೆ. ಇದು ಕೇವಲ ಸಾಂಪ್ರದಾಯಿಕ ದಾಳಿಗಳ ವಿರುದ್ಧ ಮಾತ್ರವಲ್ಲದೇ, ರಾಸಾಯನಿಕ, ಜೈವಿಕ, ವಿಕಿರಣಶೀಲ ಮತ್ತು ಪರಮಾಣು ( CBRN- Chemical, Biological, Radiological, and Nuclear) ದಾಳಿಗಳಿಂದಲೂ ರಕ್ಷಣೆ ನೀಡುತ್ತದೆ. ಇದಕ್ಕಾಗಿ ವಿಶೇಷವಾದ ಗಾಳಿ ಶೋಧನಾ (air filtration) ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಈ ಆಸ್ಪತ್ರೆಯ ಒಂದು ಸೋಜಿಗದ ಸಂಗತಿಯೆಂದರೆ, ಒಂದು ವೇಳೆ ಭೀಕರ ದಾಳಿಯಿಂದ ಈ ಭೂಗತ ಆಸ್ಪತ್ರೆಯು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಂಡರೂ, ಕನಿಷ್ಠ ಮೂರು ದಿನಗಳವರೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ತನ್ನದೇ ಆದ ಬೃಹತ್ ಜನರೇಟರ್ ಗಳನ್ನು ಹೊಂದಿದೆ.
ಹೀಗಾಗಿ ವಿದ್ಯುಚ್ಛಕ್ತಿಯ ಪೂರೈಕೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಇದು ಶುದ್ಧ ನೀರು, ಆಮ್ಲಜನಕ ಮತ್ತು ಇತರ ವೈದ್ಯಕೀಯ ಸಾಮಗ್ರಿಗಳ ದೊಡ್ಡ ಸಂಗ್ರಹ ಮತ್ತು ದಾಸ್ತಾನನ್ನು ಹೊಂದಿದೆ. ಶಸ್ತ್ರ ಚಿಕಿತ್ಸಾ ಕೊಠಡಿಗಳು, ಹೆರಿಗೆ ಕೊಠಡಿಗಳು, ಡಯಾಲಿಸಿಸ್ ಘಟಕಗಳು ಮತ್ತು ತೀವ್ರ ನಿಗಾ ಘಟಕ ಗಳನ್ನು (ICU) ಒಳಗೊಂಡಂತೆ ಒಂದು ಪೂರ್ಣ ಪ್ರಮಾಣದ ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯ ಗಳನ್ನು ಇದು ಹೊಂದಿದೆ.
ಈ ಬೃಹತ್ ಯೋಜನೆ ಸಿದ್ಧವಾದಾಗ, ಆ ದಿನಗಳಲ್ಲಿ ಇದಕ್ಕೆ ಹಣವನ್ನು ಸಂಗ್ರಹಿಸುವುದು ಸವಾಲಾ ಗಿತ್ತು. ಕಾರಣ ಇಸ್ರೇಲ್ ಸತತ ಯುದ್ಧಗಳಿಂದ ಜರ್ಜರಿತವಾಗಿತ್ತು. ಇಸ್ರೇಲ್‌ನ ಖ್ಯಾತ ಹಡಗು ಉದ್ಯಮಿ, ಮಹಾದಾನಿ ಮತ್ತು ದೇಶದ ಅತ್ಯಂತ ಶ್ರೀಮಂತರಬ್ಬರಾದ ಸ್ಯಾಮಿ ಓಫರ್ ಅವರನ್ನು ಸರಕಾರ ವಿನಂತಿಸಿಕೊಂಡಿತು. ಅವರು ಮರುಮಾತಿಲ್ಲದೇ 25 ದಶಲಕ್ಷ ಡಾಲರ್ ಹಣಕ್ಕೆ ಸ್ಥಳ ದಲ್ಲಿಯೇ ಚೆಕ್ ನೀಡಿದರು. ಅವರ ಗೌರವಾರ್ಥವಾಗಿ ಈ ಆಸ್ಪತ್ರೆಗೆ ಅವರ ಹೆಸರನ್ನು ಇಡಲಾಗಿದೆ.
2014ರಲ್ಲಿ ಕಾರ್ಯಾರಂಭವಾದ ಈ ಆಸ್ಪತ್ರೆಯು ಜಗತ್ತಿನಲ್ಲಿಯೇ ಒಂದು ವಿಶೇಷ ಆಸ್ಪತ್ರೆ ಎಂದು ಗುರುತಿಸಿಕೊಂಡಿದೆ. ಇದು ವಿಶ್ವದ ಸಾವಿರಾರು ಪ್ರವಾಸಿಗರು ಮತ್ತು ವೈದ್ಯಕೀಯ ವೃತ್ತಿಪರರನ್ನು ಆಕರ್ಷಿಸುತ್ತಿದ್ದು, ಅವರು ಅದರ ವಿಶಿಷ್ಟ ವಿನ್ಯಾಸ ಮತ್ತು ಕಾರ್ಯಾಚರಣೆಯನ್ನು ಅಧ್ಯಯನ ಮಾಡಲು ಬರುತ್ತಾರೆ. ಇಸ್ರೇಲ್‌ನಲ್ಲಿನ ಇತ್ತೀಚಿನ ಸಂಘರ್ಷಗಳ ಸಂದರ್ಭದಲ್ಲಿ, ವಿಶೇಷವಾಗಿ 2023ರ ಅಕ್ಟೋಬರ್ 7ರ ಹಮಾಸ್ ದಾಳಿಯ ನಂತರ, ಈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸಕ್ರಿಯ ಗೊಳಿಸಲಾಯಿತು ಮತ್ತು ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಯಿತು.
ಇದು ಅದರ ಕಾರ್ಯಸಾಧ್ಯತೆಯನ್ನು ಸಾಬೀತುಪಡಿಸಿತು. ‘ಯುದ್ಧ ಆಸ್ಪತ್ರೆ’ (War Hospital) ಎಂದೇ ಕರೆಯಿಸಿಕೊಂಡಿರುವ ಈ ಆಸ್ಪತ್ರೆ ಯೋಧರಿಗೆ ಮತ್ತು ನಾಗರಿಕರಿಗೆ ನೈತಿಕ ಬಲವಾಗಿ ನಿಂತಿರುವುದು ಗಮನಾರ್ಹ. ಈ ಆಸ್ಪತ್ರೆಯು ಇಸ್ರೇಲ್‌ನ ‘ನಿರೀಕ್ಷೆ ಮತ್ತು ಸಿದ್ಧತೆ’ (Hope for the best, prepare for the worst) ಎಂಬ ತತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇದು ದೈನಂದಿನ ನಾಗರಿಕ ಅಗತ್ಯಗಳನ್ನು (ಪಾರ್ಕಿಂಗ್) ಮತ್ತು ದೇಶದ ಗಂಭೀರ ಭದ್ರತಾ ವಾಸ್ತವ ಗಳನ್ನು ಸಮತೋಲನಗೊಳಿಸುವ ಒಂದು ಅತ್ಯುತ್ತಮ ಮಾದರಿಯಾಗಿದೆ. ಇಸ್ರೇಲಿನದು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಜಾಯಮಾನವಲ್ಲ. ಅದು ಸದಾ ಯುದ್ಧಕ್ಕೆ ಸನ್ನದ್ಧವಾಗಿಯೇ ಇರುತ್ತದೆ. ಶಸ್ತ್ರಾಸ್ತ್ರಗಳನ್ನೂ ಸಿದ್ಧ ಮಾಡಿಕೊಳ್ಳುವುದರ ಜತೆಗೆ, ಯುದ್ಧದಲ್ಲಿ ಗಾಯಗೊಂಡವ ರನ್ನು ಶುಶ್ರೂಷೆ ಮಾಡುವುದು ಹೇಗೆ ಎಂಬ ಬಗ್ಗೆಯೂ ಯೋಚಿಸುತ್ತದೆ. ಭೂಮಿಯ ಮೇಲಿನ ಆಸ್ಪತ್ರೆಯು ದಾಳಿಯಿಂದ ಧ್ವಂಸವಾದರೆ, ನೆಲಮಾಳಿಗೆಯಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸಬೇಕು ಎಂಬ ಮುಂದಾಲೋಚನೆಯಿಂದ ಕಾರ್ಯತತ್ಪರವಾಗುತ್ತದೆ.
ಇದು ಅಂತಿಂಥ ಏಣಿಯಲ್ಲ !
ಸಾಮಾನ್ಯವಾಗಿ ಇಸ್ರೇಲಿಗೆ ಹೋದವರು ಟೆಲ್ ಅವಿವ್ ಅಂತಾರಾಷ್ಟ್ರೀಯ ವಿಮಾನದಲ್ಲಿ ಇಳಿದರೂ, ರಾಜಧಾನಿ ಜೆರುಸಲೆಮ್‌ಗೆ ಹೋಗಿಯೇ ಹೋಗುತ್ತಾರೆ. ಜೆರುಸಲೆಮ್‌ಗೆ ಹೋದವರು ‘ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್’ (Church of the Holy Sepulchre )ಗೆ ಹೋಗಿಯೇ ಹೋಗು ತ್ತಾರೆ. ಕಾರಣ ಇದು ಕ್ರೈಸ್ತರ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು. ಅಸಲಿಗೆ ಇದು, ಯೇಸುಕ್ರಿಸ್ತ ನನ್ನು ಶಿಲುಬೆಗೇರಿಸಿದ ಸ್ಥಳ (ಗೊಲ್ಗೊಥಾ ಅಥವಾ ಕ್ಯಾಲ್ವರಿ), ಜೀಸಸ್‌ನ ಶವವನ್ನು ಸಮಾಧಿ ಮಾಡಿದ ಸ್ಥಳ ಮತ್ತು ಆತ ಪುನರುತ್ಥಾನಗೊಂಡ ಸ್ಥಳ ಎಂದು ನಂಬಲಾಗಿದೆ.
ನಾಲ್ಕನೇ ಶತಮಾನದಿಂದಲೂ ಈ ಸ್ಥಳವನ್ನು ಕ್ರಿಶ್ಚಿಯನ್ನರು ಪೂಜಿಸುತ್ತಾ ಬಂದಿದ್ದಾರೆ. ಈ ಚರ್ಚ್ ಒಂದು ನಿರ್ದಿಷ್ಟ ಪಂಗಡಕ್ಕೆ ಸೇರಿಲ್ಲ ಎಂಬುದು ಗಮನಾರ್ಹ. ಪ್ರಸ್ತುತ, ಇದನ್ನು ರೋಮನ್ ಕ್ಯಾಥೋಲಿಕ್, ಗ್ರೀಕ್ ಆರ್ಥೊಡಾಕ್ಸ್, ಅರ್ಮೇನಿಯನ್ ಅಪೋಸ್ಟೋಲಿಕ್, ಕಾಪ್ಟಿಕ್ ಆರ್ಥೊಡಾಕ್ಸ್, ಸಿರಿಯಾಕ್ ಆರ್ಥೊಡಾಕ್ಸ್, ಇಥಿಯೋಪಿಯನ್ ಆರ್ಥೊಡಾಕ್ಸ್ ಹೀಗೆ ಆರು ವಿಭಿನ್ನ ಕ್ರೈಸ್ತ ಪಂಗಡಗಳು ಜಂಟಿಯಾಗಿ ನಿರ್ವಹಿಸುತ್ತಿವೆ. ಚರ್ಚ್‌ನ ಪ್ರವೇಶದ್ವಾರದಲ್ಲಿರುವ ಪರ್ಷಿಯಾದ ಸಂಗಮವರಿ ಶಿಲೆಯ ಬಳಿ ಯೇಸುಕ್ರಿಸ್ತನ ದೇಹವನ್ನು ಶಿಲುಬೆಯಿಂದ ಇಳಿಸಿದ ನಂತರ ತೈಲ ಲೇಪನ ಮಾಡಲಾಯಿತು ಎಂದು ನಂಬಲಾಗಿದೆ.
ಯಾತ್ರಿಕರು ಈ ಕಲ್ಲನ್ನು ಸ್ಪರ್ಶಿಸಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಕ್ರಿಶ್ಚಿಯನ್ ಯಾತ್ರಿಕರು ಪ್ರಪಂಚದಾದ್ಯಂತದಿಂದ ‘ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್’ಗೆ ಭೇಟಿ ನೀಡುತ್ತಾರೆ. ಇದು ಯೇಸುಕ್ರಿಸ್ತನ ಜೀವನದ ಪ್ರಮುಖ ಘಟನೆಗಳನ್ನು ನೆನಪಿಸುವ ಮತ್ತು ಅವನ ನಂಬಿಕೆ ಯನ್ನು ಬಲಪಡಿಸುವ ಸ್ಥಳವಾಗಿದೆ. ಈ ಚರ್ಚ್ ಕ್ರಿಶ್ಚಿಯನ್ ಧರ್ಮದ ಐತಿಹಾಸಿಕ ಮತ್ತು ಆಧ್ಯಾ ತ್ಮಿಕ ಪ್ರಯಾಣದ ಒಂದು ಪ್ರಮುಖ ಭಾಗ.
ಈ ಚರ್ಚ್‌ಗೆ ಹೋದವರೆಲ್ಲ ಯೇಸುಕ್ರಿಸ್ತನ ಸಮಾಧಿ ಸ್ಥಳ ಮತ್ತು ಪುನರವತರಿಸಿದ ಸ್ಥಳಗಳಿಗೆ ಭೇಟಿ ನೀಡಿದ ಭಾವನೆಯಿಂದ ಪುಳಕಿತರಾಗಿ ಬರುತ್ತಾರೆ. ಆದರೆ ಸಾಮಾನ್ಯವಾಗಿ ಯಾರೂ ‘ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್’ನ ಗೋಡೆಯಲ್ಲಿ, ಗ್ರೀಕ್ ಆರ್ಥೊಡಾಕ್ಸ್ ಚರ್ಚ್‌ಗೆ ಸೇರಿದ ಕಿಟಕಿಯೊಂದರ ಕೆಳಗೆ ಒಂದು ಸಣ್ಣ ಮರದ ಏಣಿಯನ್ನು ಇಡಲಾಗಿದೆ.
ಇದನ್ನು ‘ಅಚಲ ಏಣಿ’ ( Immovable Ladder) ಅಂತಾರೆ. ಕಾರಣ ಸುಮಾರು 300 ವರ್ಷಗಳಿಂದ ಅದನ್ನು ಯಾರೂ ಅದರ ಸ್ಥಾನದಿಂದ ಅಧಿಕೃತವಾಗಿ ಸರಿಸಿಲ್ಲ. ಆದರೆ ಈ ಏಣಿಯನ್ನು ಬಹುತೇಕ ರು ನೋಡದೇ ಬರುತ್ತಾರೆ. ಕೆಲವರು ನೋಡಿದರೂ, ಕಾಮಗಾರಿ ಕೆಲಸ ನಡೆಯುತ್ತಿರಬಹುದು, ಹೀಗಾಗಿ ಏಣಿಯನ್ನು ಅಲ್ಲಿಟ್ಟಿದ್ದಾರೆ ಎಂದು ಭಾವಿಸುತ್ತಾರೆ.
ಆದರೆ ಅಷ್ಟು ವರ್ಷಗಳಿಂದ ಆ ಏಣಿಯನ್ನು ಯಾರೂ ಮುಟ್ಟಿಲ್ಲ ಅಥವಾ ಕದಲಿಸಿಲ್ಲ ಎಂಬ ಸಂಗತಿ ಅವರ ಗಮನಕ್ಕೇ ಬರುವುದಿಲ್ಲ. ಈ ಏಣಿಯ ನಿಖರ ಮೂಲ ತಿಳಿದಿಲ್ಲ. ಆದರೆ 1728ರ ಒಂದು ಚಿತ್ರದಲ್ಲಿ ಇದು ಮೊದಲು ಕಾಣಿಸುತ್ತದೆ. 1834ರ ಚಿತ್ರ ಮತ್ತು 1850ರ ಛಾಯಾಚಿತ್ರ ಗಳಲ್ಲೂ ಇದು ಇರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಈ ಏಣಿಯನ್ನು ಕದಲಿಸಲು ಸಾಧ್ಯವಾಗದಿರುವುದಕ್ಕೆ ಮುಖ್ಯ ಕಾರಣ ‘ಸ್ಟೇಟಸ್ ಕೋ’ (Status Quo ) ಎಂಬ ಒಂದು ಐತಿಹಾಸಿಕ ಒಪ್ಪಂದ. ‘ಚರ್ಚ್ ಆಫ್ ದಿ ಹೋಲಿ ಸೆಪಲ್ಕರ್’ನ ಮಾಲೀಕತ್ವ ಅಥವಾ ಆಡಳಿತವು ಒಂದೇ ಕ್ರಿಶ್ಚಿಯನ್ ಪಂಗಡಕ್ಕೆ ಸೇರಿಲ್ಲ, ಬದಲಾಗಿ, ಇದನ್ನು ಆರು ಪ್ರಮುಖ ಕ್ರಿಶ್ಚಿಯನ್ ಪಂಗಡಗಳು ಹಂಚಿಕೊಂಡು ನಿರ್ವಹಿಸುತ್ತವೆ ತಾನೇ? 18ನೇ ಶತಮಾನದಲ್ಲಿ, ಈ ಪಂಗಡಗಳ ನಡುವೆ ಚರ್ಚ್‌ನ ಜಾಗ ಮತ್ತು ಪೂಜಾ ಸಮಯಗಳ ಬಗ್ಗೆ ತೀವ್ರವಾದ ಸಂಘರ್ಷಗಳು ನಡೆದವು.
ಇದನ್ನು ಕೊನೆಗೊಳಿಸಲು, 1757ರಲ್ಲಿ ಅಂದಿನ ಆಡಳಿತಗಾರರಾದ ಒಟ್ಟೋಮನ್ ಸುಲ್ತಾನರು ಒಂದು ಆದೇಶವನ್ನು ಹೊರಡಿಸಿದರು. ಅದರಂತೆ, ಚರ್ಚ್‌ನೊಳಗಿನ ಪ್ರತಿಯೊಂದು ವಸ್ತು, ಜಾಗ ಮತ್ತು ಹಕ್ಕುಗಳು ‘ಯಾವ ಪಂಗಡಕ್ಕೆ ಆ ಕ್ಷಣದಲ್ಲಿ ಸೇರಿತ್ತೋ, ಅದು ಶಾಶ್ವತವಾಗಿ ಅವರದ್ದೇ ಆಗಿರುತ್ತದೆ’ ಎಂದು ತೀರ್ಮಾನಿಸಲಾಯಿತು. ಇದನ್ನೇ ‘ಸ್ಟೇಟಸ್ ಕೋ’ (ಯಥಾಸ್ಥಿತಿ ಕಾಪಾಡು ವುದು)ಎಂದು ಕರೆಯಲಾಗುತ್ತದೆ.
ಈ ಆದೇಶ ಜಾರಿಗೆ ಬಂದಾಗ ಆ ಮರದ ಏಣಿಯು ಆ ಕಿಟಕಿಯ ಬಳಿ ಇತ್ತು. ಅದು ಯಾರಿಗೆ ಸೇರಿದ್ದು, ಅದನ್ನು ಅಲ್ಲಿ ಯಾರು ಇಟ್ಟರು ಅಥವಾ ಅದರ ಉದ್ದೇಶವೇನಿತ್ತು ಎಂಬುದು ಯಾರಿಗೂ ಖಚಿತವಾಗಿ ತಿಳಿದಿಲ್ಲ. ಆದರೆ ‘ಸ್ಟೇಟಸ್ ಕೋ’ ಒಪ್ಪಂದದ ಪ್ರಕಾರ, ಆ ಏಣಿಯನ್ನು ಸರಿಸಬೇಕಾದರೆ ಎಲ್ಲ ಆರು ಪಂಗಡಗಳ ಸಂಪೂರ್ಣ ಒಪ್ಪಿಗೆ ಬೇಕು. ಯಾವುದೇ ಒಂದು ಪಂಗಡ ಆಕ್ಷೇಪ ವ್ಯಕ್ತಪಡಿಸಿದರೂ ಅದನ್ನು ಸರಿಸುವಂತಿಲ್ಲ. ಸಣ್ಣ ಬದಲಾವಣೆಯೂ ತಮ್ಮ ಹಕ್ಕುಗಳ ಉಲ್ಲಂಘನೆ ಎಂದು ಭಾವಿಸುವುದರಿಂದ, ಯಾರೂ ಈ ವಿಷಯದಲ್ಲಿ ಬದಲಾವಣೆಗೆ ಒಪ್ಪುವುದಿಲ್ಲ. ಏಣಿಯನ್ನು ಅಲ್ಲಿ ಏಕೆ ಇಡಲಾಯಿತು ಎಂಬುದಕ್ಕೆ ಹಲವು ವಾದಗಳಿವೆ.
ಅರ್ಮೇನಿಯನ್ ಪಾದ್ರಿಗಳು ಆ ಜಾಗವನ್ನು ಬಾಲ್ಕನಿಯಾಗಿ ಬಳಸುತ್ತಿದ್ದರು ಮತ್ತು ಅಲ್ಲಿ ತರಕಾರಿ ಗಳನ್ನು ಬೆಳೆಸುತ್ತಿದ್ದರು ಅಥವಾ ಚರ್ಚ್‌ನಿಂದ ಹೊರಬರಲು ಅದನ್ನು ಬಳಸುತ್ತಿದ್ದರು. ಒಟ್ಟೋ ಮನ್ ಆಡಳಿತದಲ್ಲಿ ಚರ್ಚ್‌ಗೆ ಪ್ರವೇಶಿಸಲು ಭಾರಿ ತೆರಿಗೆ ವಿಧಿಸುತ್ತಿದ್ದ ಕಾರಣ, ಪಾದ್ರಿಗಳು ಸಾಮಗ್ರಿ ಗಳನ್ನು ಸಾಗಿಸಲು ಈ ಏಣಿಯನ್ನು ಬಳಸುತ್ತಿದ್ದರು ಎಂಬ ವಾದವೂ ಇದೆ.
ಹಾಗೆಂದು ಈ ಏಣಿಯನ್ನು ಸರಿಸಲು ಪ್ರಯತ್ನಗಳು ನಡೆದಿಲ್ಲ ಎಂದೇನೂ ಇಲ್ಲ. 1964ರಲ್ಲಿ ಆರನೇ ಪೋಪ್ ಪಾಲ್ ಅವರು ಜೆರುಸಲೆಂಗೆ ಭೇಟಿ ನೀಡಿದಾಗ, ಕ್ರಿಶ್ಚಿಯನ್ ಐಕ್ಯತೆಯ ಕೊರತೆಯನ್ನು ಉಖಿಸಿ, ಈ ಏಣಿಯನ್ನು ಸರಿಸಬೇಕು ಎಂದು ಆದೇಶಿಸಿದರು. ಆಶ್ಚರ್ಯ ಅಂದ್ರೆ ಅವರ ಮಾತಿಗೆ ಯಾರೂ ಬೆಲೆ ಕೊಡಲಿಲ್ಲ. ಅವರು ಎರಡನೇ ಬಾರಿಗೆ ಏಣಿಯನ್ನು ಅಲ್ಲಿಂದ ತೆಗೆಯುವಂತೆ ಆದೇಶಿಸಿದರು.
ಆಗಲೂ ಆ ಏಣಿಯನ್ನು ಸ್ಪರ್ಶಿಸಲು ಯಾರೂ ಮುಂದೆ ಬರಲಿಲ್ಲ. ಏಣಿ ತನ್ನ ಸ್ಥಾನದಲ್ಲಿಯೇ ಉಳಿಯಿತು. ಈ ವಿಷಯವನ್ನು ಕೆಲ ವರ್ಷಗಳ ಬಳಿಕ ಅವರ ಗಮನಕ್ಕೆ ತರಲಾಯಿತು. ಆಗ ಅವರು ತಮ್ಮ ಮಾತನ್ನು ಯಾರೂ ಈಡೇರಿಸದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಷ್ಟಾಗಿಯೂ ಏನೂ ಆಗಲಿಲ್ಲ. 1997ರಲ್ಲಿ ಒಬ್ಬ ಕಿಡಿಗೇಡಿ ಪ್ರವಾಸಿಗ ಕುಚೋದ್ಯ ಮಾಡಲೆಂದು ಏಣಿಯನ್ನು ಕದ್ದು ಕೆಲವು ವಾರಗಳ ಕಾಲ ಬಚ್ಚಿಟ್ಟಿದ್ದ.
ಇದು ಆರು ಪಂಗಡಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು. ಒಂದು ವಾರ ಕಾಲ ಆ ಚರ್ಚ್ ನಲ್ಲಿ ಉದ್ವಿಗ್ನ ವಾತಾವರಣ ನೆಲೆಸಿತ್ತು. ಕೆಲವು ಪಾದ್ರಿಗಳು ಈ ವಿಷಯವಾಗಿ ಚರ್ಚ್ ಒಳಗೆ ಹೊಡೆ ದಾಡಿಕೊಂಡರು. ಇದು ಪೊಲೀಸರಿಗೆ ದೊಡ್ಡ ತಲೆಬೇನೆಯಾಗಿ ಪರಿಣಮಿಸಿತು. ನಂತರ ಸರಕಾರ ಈ ಏಣಿಯನ್ನು ಹುಡುಕುವಂತೆ ಪೊಲೀಸರಿಗೆ ಆದೇಶಿಸಿತು. ಪೊಲೀಸರು ಅದನ್ನು ಪತ್ತೆ ಹಚ್ಚಿ ಮತ್ತೆ ಅದೇ ಜಾಗದಲ್ಲಿ ಇರಿಸಿದರು.
ಆಗಲೇ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿತು. 2009ರಲ್ಲಿ ಚರ್ಚ್‌ನಲ್ಲಿ ದುರಸ್ತಿ ಕಾರ್ಯ ನಡೆಸಲು ಮುಂದಾದಾಗ ಈ ಏಣಿಯನ್ನು ಏನು ಮಾಡಬೇಕು ಎಂಬ ಪ್ರಶ್ನೆ ತಲೆದೋರಿತು. ಏಣಿಯನ್ನು ಆ ಸ್ಥಳದಿಂದ ಸ್ಥಳಾಂತರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. ಆದರೆ ಯಾರೂ ಅದನ್ನು ಮುಟ್ಟಲು ಮುಂದೆ ಬರಲಿಲ್ಲ.
ನಂತರ ಎತ್ತರದ ಕ್ರೇನನ್ನು ಬಳಸಿ ಏಣಿಯನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸರಿಸಲಾಯಿತು. ತಮಾಷೆಯೆಂದರೆ, ದುರಸ್ತಿ ಕಾರ್ಯ ಮುಗಿದ ತಕ್ಷಣ ಅದನ್ನು ಮತ್ತೆ ಹಳೆಯ ಜಾಗಕ್ಕೇ ತರಲಾಯಿ ತು. ಒಟ್ಟಾರೆಯಾಗಿ, ಈ ‘ಅಚಲ ಏಣಿ’ಯು ಕೇವಲ ಒಂದು ಮರದ ತುಂಡಲ್ಲ. ಅದು ಜೆರುಸಲೆಮ್ ನ ಪವಿತ್ರ ಸ್ಥಳಗಳಲ್ಲಿ ಬೇರೂರಿರುವ ಆಳವಾದ ಧಾರ್ಮಿಕ ವಿಭಜನೆ, ಅಪನಂಬಿಕೆ ಮತ್ತು ಶತಮಾನಗಳಷ್ಟು ಹಳೆಯದಾದ ಸಂಪ್ರದಾಯಗಳ ಒಂದು ಶಕ್ತಿಯುತ ಸಂಕೇತವಾಗಿದೆ.
ಕೆಲವರು ಇದು ಕ್ರಿಶ್ಚಿಯನ್ ಧರ್ಮದಲ್ಲಿ ಇನ್ನೂ ಆಳವಾಗಿ ಬೇರೂರಿರುವ ಮೂಢನಂಬಿಕೆಯ ಪ್ರತೀಕ ಎಂದೂ ಗೇಲಿ ಮಾಡುತ್ತಾರೆ. ಕ್ರಿಶ್ಚಿಯನ್ ಧರ್ಮದಲ್ಲಿರುವ ನಾಸ್ತಿಕರು ‘ನಮಗೆ ಅವಕಾಶ ಕೊಡಿ, ನಾವು ಆ ಏಣಿಯನ್ನು ಬೇರೆಡೆ ಬಿಸಾಕುತ್ತೇವೆ’ ಎಂದು ಹೇಳಿದರೂ, ಉಳಿದವರು ಅದಕ್ಕೆ ಅವಕಾಶ ನೀಡುತ್ತಿಲ್ಲ.
ಸುಮಾರು ಹನ್ನೊಂದು ವರ್ಷಗಳ ಹಿಂದೆ ಕೆಲವು ನಾಸ್ತಿಕರು ಆ ಏಣಿಯನ್ನು ಅಲ್ಲಿಂದ ಸ್ಥಳಾಂ ತರಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ, ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ಓಡಿಸಿದ್ದರು. ಸುಮಾರು ಎಂಟು ತಿಂಗಳ ಕಾಲ ಆ ಏಣಿಯನ್ನು ಕಾಯಲು ಪೊಲೀಸ ರನ್ನು ನಿಯೋಜಿಸಲಾಗಿತ್ತು.
ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ‘ನಾಳೆ ಏಣಿ ಅಲ್ಲಿರುವುದಿಲ್ಲ’ ಎಂದು ಪೋ ಮಾಡಿದರೆ, ಅದು ವೈರಲ್ ಆಗುತ್ತದೆ. ಆ ಬಗ್ಗೆ ಪರ-ವಿರೋಧ ಚರ್ಚೆಗಳಾಗುತ್ತವೆ. ಕೆಲವರು ‘ಏಣಿಯನ್ನು ಸರಿಸಿದರೆ ಏನಾಗುತ್ತದೆ? ನೋಡಿಯೇ ಬಿಡೋಣ’ ಅಂತಾರೆ. ಇನ್ನು ಕೆಲವರು ‘ಆ ಏಣಿ ನಿಮಗೇನು ಮಾಡಿದೆ, ಇರಲಿ ಬಿಡಿ’ ಇಂದು ಪ್ರತಿಕ್ರಿಯಿಸುತ್ತಾರೆ. ಇನ್ನು ಕೆಲವರು, ‘ಆ ಏಣಿ ಚರ್ಚ್‌ನ ಸೌಂದರ್ಯಕ್ಕೆ ಧಕ್ಕೆಯುಂಟುಮಾಡುತ್ತಿದೆ, ಅದನ್ನು ಅಲ್ಲಿಂದ ತೆಗೆಯಬೇಕು’ ಎಂದು ಹೇಳುತ್ತಾರೆ.
ಕೆಲ ದಿನಗಳ ಬಳಿಕ ಈ ಚರ್ಚೆ ನಿಲ್ಲುತ್ತದೆ. ಆದರೆ ಏಣಿಯನ್ನು ಕದಲಿಸುವ ಧೈರ್ಯವನ್ನು ಯಾರೂ ಮಾಡುತ್ತಿಲ್ಲ. ಕ್ರಿಶ್ಚಿಯನ್ ಧರ್ಮದ ಎಲ್ಲ ಪಂಗಡಗಳು ಒಪ್ಪದ ಹೊರತು, ಆ ಏಣಿ ಬಹುಶಃ ಇನ್ನೂ ನೂರಾರು ವರ್ಷಗಳ ಕಾಲ ಅಲ್ಲಿಯೇ ಉಳಿಯಬಹುದು!