ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಅವಧೂತರ ಕಾಲಿಗೇ ತೊಡರುಹಾಕಿಕೊಂಡ ಕಳ್ಳಬೆಕ್ಕು

“ಅಲ್ಲೇನಿದೆ..?" ಎನ್ನುವಂತೆ ಶಿಷ್ಯರ ಹಣೆಯು ಪ್ರಶ್ನಾರ್ಥಕ ಚಿಹ್ನೆಯನ್ನು ಧರಿಸಿದಾಗ, “ಆ ಕಡೆಗೇ ಮತ್ತೊಮ್ಮೆ ಗಮನವಿಟ್ಟು ನೋಡ್ರಯ್ಯಾ" ಎಂದಷ್ಟೇ ನುಡಿದರು ಅವಧೂತರು. ಅಂತೆಯೇ ಶಿಷ್ಯರು ವೇದಿಕೆಯೆಡೆಗೇ ಕಣ್ಣು ನೆಟ್ಟರು. ಧೂಳೆಬ್ಬಿಸಿಕೊಂಡು ಬಂದ ಕಾರಿನಿಂದ ಕೆಳಗಿಳಿದ ಆಸಾಮಿ ಯೊಬ್ಬರು, ಜನರೆದುರು ಹಲ್ಲುಗಿಂಜುತ್ತಾ ಹುಸಿನಗೆ ಬೀರುತ್ತಾ ವೇದಿಕೆ ಯೇರಿದರು. ಅವಧೂತರು ಮತ್ತೊಮ್ಮೆ ಆ ಆಸಾಮಿ ಯ ಕಡೆಗೆ ಬೆರಳುಮಾಡಿ ತೋರಿಸಿ, “ ಬಂತು ನೋಡಿ... ಅದೇ ಕಳ್ಳಬೆಕ್ಕು" ಎಂದರು.

ಅವಧೂತರ ಕಾಲಿಗೇ ತೊಡರುಹಾಕಿಕೊಂಡ ಕಳ್ಳಬೆಕ್ಕು

-

ರಸದೌತಣ (ಭಾಗ-17)

naadigru@gmail.com

ಅವಧೂತರ ಆಶಯದಂತೆ ಮತ್ತು ವಾಡಿಕೆಯಂತೆ ಮುಂಜಾನೆಯ ಬ್ರಾಹ್ಮೀ ಮುಹೂರ್ತದಲ್ಲೇ ಎದ್ದು, ಧ್ಯಾನ ಇತ್ಯಾದಿ ಸಾಧನೆಗಳಿಗೆ ಒಡ್ಡಿಕೊಂಡರು ಶಿಷ್ಯರು. ಮುಗ್ಧೆ ಶಾರದೆಯನ್ನು ಕಳ್ಳಬೆಕ್ಕಿನ ಬುಟ್ಟಿಗೆ ಕೆಡಹುವ ‘ಸುಪಾರಿ’ ತೆಗೆದುಕೊಂಡಿದ್ದ ಅಡುಗೆಭಟ್ಟ ‘ನಳಪಾಕ’ ಅದಕ್ಕೆಂದು ಏನೆಲ್ಲಾ ಕುತಂತ್ರ ಹೂಡಿದ, ಅದನ್ನು ಕಳ್ಳಬೆಕ್ಕು ಹೇಗೆಲ್ಲಾ ಪರಿಪಾಲಿಸಿತು ಎಂಬುದನ್ನು ಅವಧೂತರ ಬಾಯಿಂದ ಕೇಳುವ ತವಕ ಶಿಷ್ಯರಲ್ಲಿ ಸಹಜವಾಗೇ ಮನೆ ಮಾಡಿತ್ತು. ಆದರೆ ಮುಂಜಾನೆಯ ಧ್ಯಾನ, ಪೂಜೆ ಇತ್ಯಾದಿಗಳನ್ನು ಮುಗಿಸಿದ ಅವಧೂತರು, ಶಿಷ್ಯರೊಂದಿಗೆ ಕೂತು ಉಪಾಹಾರ ಸೇವಿಸಿದ ನಂತರವೂ ಕಥೆಯನ್ನು ಮುಂದುವರಿಸುವ ಲಕ್ಷಣ ಕಾಣಲಿಲ್ಲ. ಆದರೆ ಆಗಾಗ ಶಿಷ್ಯರನ್ನು ವಾರೆ ನೋಟದಲ್ಲೇ ನೋಡುತ್ತಾ ಅವರ ಮುಖಭಾವವನ್ನು ಅವಲೋಕಿ ಸುತ್ತ, ಒಳಗೊಳಗೇ ತುಂಟನಗು ನಗುತ್ತಿದ್ದುದಂತೂ ಹೌದು. ಅದೇ ಅವಧೂತರ ವೈಖರಿ! ‘ಇಂತಜಾರ್ ಕಾ ಫಲ್ ಮೀಠಾ ಹೋತಾ ಹೈ’ ಎಂಬ ಹಿಂದಿ ಭಾಷೆಯ ಜಾಣನುಡಿಯನ್ನು ಶಿಷ್ಯರಿಗೆ ಮನವರಿಕೆ ಮಾಡಿಕೊಡುವುದು ಅವರ ಇರಾದೆಯಾಗಿತ್ತು...

ನಂತರ ಏನೂ ಸೂಚನೆ ನೀಡದೆಯೇ, ಅವಧೂತರು ಇದ್ದಕ್ಕಿದ್ದಂತೆ ಬೀದಿಬಾಗಿಲು ತೆರೆದುಕೊಂಡು ಹೊರಗೆ ಹೊರಟೇ ಬಿಟ್ಟರು. ಅವರು ಹಾಗೆ ಹಠಾತ್ತನೆ ನಿರ್ಗಮಿಸಿದ್ದನ್ನು ಹಜಾರದಲ್ಲಿ ಕೂತಿದ್ದ ಶಿಷ್ಯರು ಬಿಟ್ಟ ಕಣ್ಣು ಬಿಟ್ಟಿರುವಂತೆ ನೋಡಿದ್ದಷ್ಟೇ ಬಂತು! ಕೆಲ ಹೊತ್ತಿನ ನಂತರ ಅವರಲ್ಲೇ ‘ಪಿಸಿಪಿಸಿ’ ಮಾತುಗಳು ಶುರುವಾದವು. ‘’ಗುರುಗಳಿಗೆ ಇಂದು ಕಥನವನ್ನು ಮುಂದುವರಿಸುವ ಇಚ್ಛೆ ಇಲ್ಲ ಅನ್ಸುತ್ತೆ, ಕಳೆದ ಕೆಲ ದಿನಗಳಿಂದ ಒಂದೇ ಸಮನೆ ಹೇಳುತ್ತಲೇ ಇದ್ದಾರೆ, ಪ್ರಾಯಶಃ ದಣಿ ವಾಗಿರಬಹುದು. ಎಷ್ಟೆಂದರೂ, ಇಂಥ ಭಾವತೀವ್ರತೆಯ ಕಥನಗಳು ದೇಹಕ್ಕೆ ಅಲ್ಲದಿದ್ದರೂ ಮನಸ್ಸಿಗೆ ಒಂಥರಾ ದಣಿವು ಉಂಟು ಮಾಡ ಬಹುದಲ್ಲವೇ? ಗುರುಗಳಿಗೂ ಹಾಗೇ ಆಗಿರಬೇಕು. ಮಾನಸಿಕವಾಗಿ ಅವರು ಕೊಂಚ ನಿರಾಳರಾಗಲಿ, ಅವರಾಗೇ ಕಥನವನ್ನು ಮುಂದುವರಿಸೋ ತನಕ ನಾವೂ ಒತ್ತಾಯಿಸೋದು ಬೇಡ" ಎಂದು ತಮ್ಮ ತಮ್ಮಲ್ಲೇ ಹೇಳಿಕೊಂಡರು.

ಇದನ್ನೂ ಓದಿ: Yagati Raghu Naadig Column: ಕೀಚಕ ಕಳ್ಳಬೆಕ್ಕಿಗೆ ನಳಪಾಕನ ಶಕುನಿಬೋಧೆ

ಆದರೆ, ಅದು ಕೆಲವು ಕ್ಷಣದ ಮಾತಷ್ಟೇ...

ಬೀದಿಬಾಗಿಲನ್ನು ತಳ್ಳಿಕೊಂಡು ಮನೆಯೊಳಗೆ ಬಂದ ಹಳ್ಳಿಗನೊಬ್ಬ, “ಬುದ್ಯೋರು ಅಳ್ಳೀ ಮರದ ತಾವ ಕುಂತವ್ರೆ... ನಿಮ್ಮನ್ನೆಲ್ಲಾ ಅಲ್ಲಿಗೇ ಕರ್ಕಂಬಾ ಅಂದ್ರು..." ಎಂದು ಹೇಳಿದ. ಶಿಷ್ಯರು ಲಗುಬಗೆ ಯಿಂದ ಎದ್ದು ಅವನನ್ನೇ ಹಿಂಬಾಲಿಸಿ, ಅವಧೂತರು ಆಸೀನರಾಗಿದ್ದ ಅರಳೀಮರದ ಸಮೀಪಕ್ಕೆ ಬಂದರು. ಅಲ್ಲಿ ಕಂಡದ್ದೇನು?...

ಅರಳೀಮರದ ಬುಡದಲ್ಲಿನ ಕಲ್ಲಿನ ಕಟ್ಟೆಯ ಮೇಲೆ ಅವಧೂತರು ಒಂದು ಕಾಲನ್ನು ಮಡಚಿ ಕೊಂಡು, ಮತ್ತೊಂದನ್ನು ಕೆಳಗೆ ಇಳಿಬಿಟ್ಟುಕೊಂಡು ಕೂತಿದ್ದರು, ಸಾಕ್ಷಾತ್ ಶ್ರೀ ಶಿರಡಿ ಸಾಯಿ ಬಾಬಾ ಅವರ ಪರಿಯಲ್ಲಿ. ಎದುರಿಗೆ ಒಂದಷ್ಟು ಆರ್ತಜನರು. ಅವರ ಪೈಕಿ ಒಬ್ಬಾಕೆಯು ತನ್ನ ಅಳಲನ್ನು ಹೇಳಿಕೊಳ್ಳುವ ಮುಂಚೆಯೇ ಅವಧೂತರು, “ನಿನ್ನ ಜಮೀನನ್ನು ನುಂಗಿದವನು ಇನ್ನೇನು ಇಲ್ಲಿಗೇ ಬರ್ತಾನೆ ತಾಯಿ, ಅವನಿಂದ ಅದನ್ನು ಕಕ್ಕಿಸುತ್ತೇನೆ ಬಿಡು" ಎಂದು ಅಭಯ ವಿತ್ತಿದ್ದನ್ನು ಕಂಡು ಆಕೆ ಆನಂದ ಭಾಷ್ಪ ಸುರಿಸುತ್ತಾ, “ನಿನ್ನನ್ನ ಎಂಗೆ ನೋಡಾದು, ನಿನ್ನತ್ರ ಎಂಗೆ ಮಾತಾಡಿ ನಮ್ ಕಷ್ಟಾನೆಲ್ಲಾ ಏಳ್ಕಳ್ಳಾದು ಅಂತ ಒಂದೇ ಸಮನೆ ಯೇಚ್ನೆ ಮಾಡ್ತಾ, ನಿನ್ ಬಗ್ಗೆನೇ ಮನಸಿನ್ಯಾಗೆ ಪ್ರಾರ್ತ್‌ನೆ ಮಾಡ್ತಾ ಇದ್ದೆ ಕನಪ್ಪಾ.... ಅದನ್ನ ಕೇಳಿಸ್ಕಂಡವ್ನಂಗೆ ನೀನೇ ಇಲ್ಲಿಗೆ ಬಂದ್‌ಬುಟ್ಟು ಒಂದೇ ಕಿತ್ತಾ ಎಲ್ಲ ನೋವ್ನೂ ಒರೆಸಿಹಾಕಿಬಿಟ್ಯಲ್ಲೋ ನನ್ ತಂದೇ..." ಎನ್ನುತ್ತಾ ಆಕೆ ಅವಧೂತರಿಗೆ ತನ್ನದೇ ಭಾಷೆ ಮತ್ತು ಭಾವದಲ್ಲಿ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದಳು. ‘ಏನೊಂ ದೂ ಮಾತಾಡದೆ, ಸಣ್ಣ ಸೂಚನೆಯನ್ನೂ ನೀಡದೆ ಅವಧೂತರು ಸ್ವತಃ ಬೀದಿಬಾಗಿಲು ತೆರೆದು ಕೊಂಡು ಮನೆಯಿಂದ ಹಾಗೆ ಹಠಾತ್ತನೆ ನಿರ್ಗಮಿಸಿ ಅರಳೀಕಟ್ಟೆಯೆಡೆಗೆ ಧಾವಿಸಿದ್ದೇಕೆ?’ ಎಂಬ ಮನದಾಳದ ಪ್ರಶ್ನೆಗೆ ಶಿಷ್ಯರಿಗೆ ಉತ್ತರ ಸಿಕ್ಕಿತ್ತು..

ಅಂದು ಅವಧೂತರ ಊರಿನ ಸಂತೆಯ ದಿನ. ಸುತ್ತಲ ಹತ್ತಾರು ಹಳ್ಳಿಗಳ ಜನರು ದಿನಸಿಗಳ ಖರೀದಿಗೂ, ತಂತಮ್ಮ ಕೃಷಿ ಉತ್ಪನ್ನಗಳ ಮಾರಾಟಕ್ಕೂ ಜಮೆಯಾಗುತ್ತಿದ್ದ ದಿನವದು. ಅದಕ್ಕೆ ಕೂಗಳತೆಯ ದೂರದಲ್ಲಿತ್ತು ಈ ಅರಳೀಕಟ್ಟೆ. ಹಾಗೆ ಸಂತೆಗೆ ಬಂದವರಲ್ಲಿ ಕೆಲವರು, ತಮ್ಮ ದುಃಖ-ದುಮ್ಮಾನಗಳನ್ನು ಅವಧೂತರ ಬಳಿ ತೋಡಿಕೊಂಡು ಯಥೋಚಿತ ಪರಿಹಾರವನ್ನು ಪಡೆದು ಕೊಳ್ಳುವುದು, ತನ್ಮೂಲಕ ಮನಸ್ಸು ಹಗುರಮಾಡಿಕೊಂಡು ಮರಳುವುದು ಅನೂಚಾನವಾಗಿ ನಡೆದುಕೊಂಡು ಬಂದ ಅಲಿಖಿತ ಸಂಪ್ರದಾಯವಾಗಿತ್ತು. ಹಾಗೆ ಅವಧೂತರು ಅವರಿವರ ಅಳಲು ಗಳನ್ನು ಕೇಳುವಾಗ ಅರಳೀಮರದ ಕೆಳಗೆ ರೂಪುಗೊಳ್ಳುತ್ತಿದ್ದ ದೃಶ್ಯವು ಯಾವುದೋ ಅರಸರ ಒಡ್ಡೋಲಗದಂತಿರುತ್ತಿತ್ತು. ತಂತಮ್ಮ ಸಮಸ್ಯೆಗೆ ಪರಿಹಾರ ಕೋರಿ ಬಂದವರಲ್ಲಿ ಶಿಕ್ಷಕರು, ಪೊಲೀಸ್ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಹೀಗೆ ಸಮಾಜದ ವಿವಿಧ ಕಾರ್ಯಕ್ಷೇತ್ರಗಳಿಗೆ ಮತ್ತು ಸ್ತರಗಳಿಗೆ ಸೇರಿದ ಜನರು ಇರುತ್ತಿದ್ದರು. ಇಂಥ ಒಬ್ಬೊಬ್ಬರ ಸಮಸ್ಯೆಗಳಿಗೂ ಮನಸಾರೆ ಸ್ಪಂದಿಸಿ, ಯಥೋಚಿತವಾದ ‘ಸರಳ’ ಮತ್ತು ‘ಅನುಸರಿಸಲೇಬೇಕಾದ’ ಕ್ರಮಗಳನ್ನು ಸೂಚಿಸುವಾಗ ಅವಧೂತರು ಆಯಾ ಮನೆಯವರ ‘ಹಿರಿಯಣ್ಣ’ನೇ ಆಗಿ ಬಿಡುತ್ತಿದ್ದರು. ಅದರಲ್ಲೂ ನಿರ್ದಿಷ್ಟ ವಾಗಿ, ಪೌರಾಡಳಿತಕ್ಕೆ ಸಂಬಂಧಿಸಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹೊತ್ತು ತಂದ ಸವಾಲು-ಸಮಸ್ಯೆಗಳ ಪರಿಹಾರಕ್ಕೆ ಏನಾದರೂ ಮಾರ್ಗದರ್ಶನ ನೀಡುವಾಗ, ವಿಜಯನಗರ ಸಾಮ್ರಾಜ್ಯದ ಹಕ್ಕ-ಬುಕ್ಕರಿಗೆ ಬೆಳಕು ತೋರುತ್ತಿದ್ದ ರಾಜಗುರು ಶ್ರೀ ವಿದ್ಯಾರಣ್ಯರ ಸಾಕ್ಷಾತ್ ಸ್ವರೂಪಿಯಾಗಿ ಕಂಗೊಳಿಸುತ್ತಿದ್ದರು. ಇದು ಅವಧೂತರು ತಮ್ಮ ಹೆತ್ತವರ ಆಶಯದಂತೆ ನಡೆಸಿಕೊಂಡು ಬಂದ, ‘ಕಾಸು-ಕರಿಮಣಿ’ಗಳ ನಿರೀಕ್ಷೆಯಿಲ್ಲದ ‘ಅಧ್ಯಾತ್ಮ-ಲೇಪಿತ’ ಸಮಾಜಸೇವೆ...

ಅವಧೂತರ ಹಳೆಯ ಶಿಷ್ಯರಿಗೆ ಈ ಸನ್ನಿವೇಶ ಮಾಮೂಲಿನದು, ಆದರೆ ಹೊಸ ಶಿಷ್ಯರಿಗೆ ಅದೊಂದು ದಿವ್ಯನೋಟವನ್ನೇ ನೀಡಿತ್ತು. “ಅವಧೂತರು ಮನೆಯಿಂದ ಹಾಗೆ ಎದ್ದು ಬಂದಿದ್ದು ಸುಖಾಸುಮ್ಮನೆ ಅಲ್ಲ, ಅರಳೀಕಟ್ಟೆಯ ಬಳಿ ನೆರೆದಿರುವ ಸಂತ್ರಸ್ತರ ಅಳಲಿಗೆ ಕಿವಿಯಾಗುವುದು ಮಾತ್ರವೇ ಅವಧೂತರ ಈ ನಡೆಯ ಹಿಂದಿನ ಉದ್ದೇಶವಲ್ಲ; ಅದನ್ನೂ ಮೀರಿದ ಮತ್ತೇನೋ ಉದಾತ್ತವಾದುದನ್ನು ನಮಗೆ ಮನವರಿಕೆ ಮಾಡಿ ಕೊಡಲೆಂದೇ ಮತ್ತು ಶಾರದೆಯ ಕಥನಕ್ಕೆ ಸಂಬಂಧಿಸಿದ ಮಹತ್ತರವಾದ ಮಗ್ಗುಲನ್ನು ನಮಗೆ ಪ್ರತ್ಯಕ್ಷವಾಗಿ ತೋರಿಸಲೆಂದೇ ಈ ಲೀಲಾ ನಾಟಕವನ್ನು ಆಡುತ್ತಿದ್ದಾರೆ. ಇಂಥ ಪುಣ್ಯಾತ್ಮನ ಕಕ್ಷೆಯನ್ನು ಸೇರಿದ ನಾವೇ ಧನ್ಯರು" ಎಂದಿತು ಹೊಸ ಶಿಷ್ಯರ ಮನ...

ಕೆಲ ಕ್ಷಣದ ನಂತರ, ಅವಧೂತರನ್ನು ಸುತ್ತುವರಿದಿದ್ದ ಜನಸಂದಣಿ ಕರಗಿತು. ಕಣ್ಣಿನಲ್ಲೇ ಇಶಾರೆ ಮಾಡಿ ಅವಧೂತರು ಎಲ್ಲ ಶಿಷ್ಯರನ್ನೂ ಬಳಿಗೆ ಕರೆದು ಸುತ್ತಲೂ ಕೂರಿಸಿಕೊಂಡರು. ಎದುರಿದ್ದ ಮುತ್ತುಗದ ಮರದಿಂದ ಒಂದಷ್ಟು ಎಲೆಗಳನ್ನು ಕಿತ್ತು ತರುವಂತೆ ಹಳ್ಳಿಗನೊಬ್ಬನಿಗೆ ಮೌನವಾಗೇ ಸೂಚಿಸಿದರು. ನಂತರ, ತಮ್ಮನ್ನು ಭೇಟಿಯಾಗಲೆಂದು ಬಂದಿದ್ದ ಹಳ್ಳಿಗರು ಪ್ರೀತಿಭರಿತ ಭಕ್ತಿಯಿಂದ ಅರ್ಪಿಸಿದ, ಕೆಂಡದಲ್ಲಿ ಸುಟ್ಟ ಮೆಕ್ಕೆಜೋಳದ ತೆನೆ ಮತ್ತು ಜೇನು ಹಲಸಿನ ತೊಳೆಗಳನ್ನು ಎಲ್ಲರಿಗೂ ಹಂಚಿ, “ಇದು ಲಂಚಕ್ಕೆ ಕೈಯೊಡ್ಡದ ಜನರು ಬೆವರು ಸುರಿಸಿ ದುಡಿದು ತಂದು, ನಮಗೆ ಕೊಟ್ಟಿರುವ ‘ಕೈತುತ್ತು’. ಇದೇ ಈ ಮಧ್ಯಾಹ್ನದ ‘ರಸಕವಳ’. ಇಂಥವರು ನೀಡಿದ ಆಹಾರ ಬರಿಯ ಅನ್ನವಲ್ಲ, ಅದು ‘ಅನ್ನಬ್ರಹ್ಮ’.. ಎಲ್ಲರೂ ಆನಂದವಾಗಿ ಸೇವಿಸಿ" ಎನ್ನುತ್ತಾ ತಾವೂ ಒಂದು ಎಲೆಯನ್ನು ಎತ್ತಿಕೊಂಡರು. ಹೀಗೆ ಅವಕಾಶ ಸಿಕ್ಕಾಗಲೆಲ್ಲಾ ‘ಅನ್ನದ ಮಹತ್ವ’ವನ್ನು ಒತ್ತಿಹೇಳುವ ಅವಧೂತರ ಪರಿಯು ಶಿಷ್ಯರಿಗೆ ವಿಶೇಷವೆನಿಸಿತು. ಅರಳೀಮರದ ಬುಡದಲ್ಲಿ ಕೆಲ ಕ್ಷಣದವರೆಗೆ ‘ಅನ್ನಬ್ರಹ್ಮನ ರಸಾಸ್ವಾ ದನೆ’ಯ ಸದ್ದು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ, ನಡುನಡುವೆ ಹೊಮ್ಮುತ್ತಿದ್ದ ಗಿಳಿ-ಗೊರವಂಕ ಗಳ ಚಿಲಿಪಿಲಿಯ ಹೊರತಾಗಿ...

ಅದು ಹೇಳಿ-ಕೇಳಿ ಚುನಾವಣೆಯ ಕಾಲವಾಗಿತ್ತು. ಅವಧೂತರ ಊರಿನಲ್ಲಿ ಅಂದು ಸಂತೆಯಿದ್ದು ದರಿಂದ, ಒಂದೇ ಗುಕ್ಕಿಗೆ ಸಾವಿರಾರು ಜನರು ಸಿಗುತ್ತಾರೆ ಎಂಬ ಕಾರಣಕ್ಕೆ ಅಲ್ಲೊಂದು ಪ್ರಚಾರ ಭಾಷಣವನ್ನು ಆಯೋಜಿಸಲಾಗಿತ್ತು. ಹೀಗಾಗಿ, ಸಂತೆ ಮೈದಾನಕ್ಕೆ ತಾಕಿಕೊಂಡಂತೆ ನಿರ್ಮಿಸ ಲಾಗಿದ್ದ ತೆಂಗಿನಗರಿಯ ಪೆಂಡಾಲಿಗೆ ಅಂತಿಮರೂಪ ನೀಡುವ ಕಸರತ್ತಿನಲ್ಲಿ ಕೆಲ ಶ್ರಮಿಕರು ವ್ಯಸ್ತರಾಗಿದ್ದರು. “ಮಾನ್ಯ ಮತಬಾಂಧವರೇ, ಇನ್ನೇನು ಕೆಲವೇ ನಿಮಿಷಗಳಲ್ಲಿ ನಮ್ಮ ನೆಚ್ಚಿನ ನಾಯಕರು ಆಗಮಿಸಿ ನಿಮ್ಮನ್ನೆಲ್ಲಾ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ತಿಂಡಿಯ ವ್ಯವಸ್ಥೆಯಿದೆ. ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ.." ಎಂಬ ಉದ್ಘೋಷವು ಮೈಕಾಸುರನಿಂದ ಆಗಾಗ ಹೊಮ್ಮುತ್ತಿತ್ತು...

ಮೈಕಾಸುರನಿಗೆ ಸುಸ್ತಾಗಿ ಸುಮ್ಮನಾದ. ಅಷ್ಟುಹೊತ್ತಿಗೆ ಎಲ್ಲರ ರಸಕವಳದ ಸಮಾರಾಧನೆಯೂ ಮುಗಿದಿತ್ತು. ಆಗ ಮಾತಿ ಗಿಳಿದ ಶಿಷ್ಯರೊಬ್ಬರು, “ಗುರುಗಳೇ, ವಿದ್ಯಾರ್ಥಿ ನಿಲಯದ ಅಡುಗೆಭಟ್ಟ ‘ನಳಪಾಕ’ನ ಕುತಂತ್ರಕ್ಕೆ ಕುಮ್ಮಕ್ಕು ನೀಡುವಂತೆ ವರ್ತಿಸಿದ ಕಳ್ಳಬೆಕ್ಕು, ಆತನ ಕೈಗೆ ಕಂತೆಕಂತೆ ಹಣ ನೀಡಿದ್ದನ್ನು ಹಿಂದಿನ ಕಥಾಭಾಗದಲ್ಲಿ ಹೇಳಿದಿರಿ. ಆದರೆ ಆ ಕಳ್ಳಬೆಕ್ಕು ಯಾರಂತ ಮಾತ್ರ ನೀವು ನೇರವಾಗಿ ಹೇಳಲಿಲ್ಲ. ಆ ಕಳ್ಳಬೆಕ್ಕು, ‘ನಳಪಾಕ’ನ ಬಾಲ್ಯಸ್ನೇಹಿತನೂ ಹೌದು, ಕ್ರೈಮ್ ಪಾರ್ಟ್‌ನರ್ ಕೂಡ ಹೌದು ಎಂದಷ್ಟೇ ಒಗಟಾಗಿ ನುಡಿದಿರಿ. ಹಿಂದೊಮ್ಮೆ, ‘ನೀವು ಊಹಿಸಿದಂತೆ ಅಡುಗೆಭಟ್ಟ ನಳಪಾಕ ಅಲ್ಲಸ್ವಾಮಿ ಕಳ್ಳಬೆಕ್ಕು; ಎದುರಿಗೆ ನಿಂತಿದೆ ನೋಡಿ ಕಥೆಯ ಸಸ್ಪೆನ್ಸು ಮತ್ತು ಕ್ಲೈ ಮ್ಯಾಕ್ಸು’ ಅಂತ ನೀವೇ ಹೇಳಿ, ಹಿರಿಯ ರಾಜಕಾರಣಿ ಯ ಮಗನಾದ ‘ಮರಿಪುಢಾರಿ’ಯ ಕಡೆಗೆ ಬೆರಳುಮಾಡಿ ತೋರಿಸಿದ್ದಿರಿ. ಹಾಗಾದರೆ ಆತನೇ ಕಳ್ಳಬೆಕ್ಕು ತಾನೇ?" ಎಂದು ಪ್ರಶ್ನಿಸಿದರು.

ಅದಕ್ಕೆ ಅವಧೂತರು ತುಂಟದನಿಯಲ್ಲಿ, “ಆತನನ್ನು ಕಥೆಯ ‘ಸಸ್ಪೆನ್ಸು’ ಮತ್ತು ‘ಕ್ಲೈಮ್ಯಾಕ್ಸು’ ಅಂದೆನೇ ಹೊರತು, ಆತನೇ ‘ಕಳ್ಳಬೆಕ್ಕು’ ಎಂದೇನೂ ನಾನು ಹೇಳಲಿಲ್ಲವಲ್ಲಾ?" ಎಂದರು. “ಹಾಗಾದ್ರೆ ಕಳ್ಳಬೆಕ್ಕು ಯಾರು ಅಂತ ಮೊದಲು ಹೇಳಿ, ನಂತರ ಕಥೆಯನ್ನು ಮುಂದುವರಿಸಿ ಗುರುಗಳೇ, ನಿಮ್ಮ ದಮ್ಮಯ್ಯಾ.." ಎಂದು ಗೋಗರೆದರು ಹೊಸಶಿಷ್ಯರು.

ಅದಕ್ಕೆ ಅವಧೂತರು ಮಾತಾಡದೆ ಸಂತೆಯ ಮಾಳದಲ್ಲಿ ನಿರ್ಮಾಣಗೊಂಡಿದ್ದ ಚುನಾವಣಾ ಪ್ರಚಾರದ ವೇದಿಕೆಯ ಕಡೆಗೆ ಹಾಗೇ ಬೆರಳು ಮಾಡಿ ತೋರಿಸಿದರು. “ಅಲ್ಲೇನಿದೆ..?" ಎನ್ನುವಂತೆ ಶಿಷ್ಯರ ಹಣೆಯು ಪ್ರಶ್ನಾರ್ಥಕ ಚಿಹ್ನೆಯನ್ನು ಧರಿಸಿದಾಗ, “ಆ ಕಡೆಗೇ ಮತ್ತೊಮ್ಮೆ ಗಮನವಿಟ್ಟು ನೋಡ್ರಯ್ಯಾ" ಎಂದಷ್ಟೇ ನುಡಿದರು ಅವಧೂತರು. ಅಂತೆಯೇ ಶಿಷ್ಯರು ವೇದಿಕೆಯೆಡೆಗೇ ಕಣ್ಣು ನೆಟ್ಟರು. ಧೂಳೆಬ್ಬಿಸಿಕೊಂಡು ಬಂದ ಕಾರಿನಿಂದ ಕೆಳಗಿಳಿದ ಆಸಾಮಿಯೊಬ್ಬರು, ಜನರೆದುರು ಹಲ್ಲುಗಿಂಜುತ್ತಾ ಹುಸಿನಗೆ ಬೀರುತ್ತಾ ವೇದಿಕೆ ಯೇರಿದರು. ಅವಧೂತರು ಮತ್ತೊಮ್ಮೆ ಆ ಆಸಾಮಿ ಯ ಕಡೆಗೆ ಬೆರಳುಮಾಡಿ ತೋರಿಸಿ, “ ಬಂತು ನೋಡಿ... ಅದೇ ಕಳ್ಳಬೆಕ್ಕು" ಎಂದರು.

“ಅಯ್ಯೋ ದೇವರೇ! ಇವರಾ...?" ಎಂದು ಶಿಷ್ಯರೆಲ್ಲರೂ ಕಿರುಚಿದರು.

ಅವಧೂತರು ಗಡ್ಡ ನೀವಿಕೊಂಡು ನಿಗೂಢನಗೆ ನಕ್ಕರು...

(ಮುಂದುವರಿಯುವುದು)