ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

T S Nagraj Column: ಸಾಟಿ ಇಲ್ಲದ ವ್ಯಕ್ತಿತ್ವದ ಟಿ.ಆರ್.ಶಾಮಣ್ಣ

ದಕ್ಷಿಣ ಭಾರತದಿಂದ, ಅದರಲ್ಲೂ ನಿರ್ದಿಷ್ಟವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ, ಡಿ.ಪಿ.ಶರ್ಮ ಎಂಬ ದುಡ್ಡಿನ ಕುಳದ ಎದುರು, ಅಲೆ ಇಲ್ಲದ ಪಕ್ಷದ ವತಿಯಿಂದ ಹೀಗೆ ಸ್ಪರ್ಧಿಸಿ ಗೆದ್ದವರು ಟಿ.ಆರ್.ಶಾಮಣ್ಣ. ಹೀಗಾಗಿ ಅವರು ಅಂದು ಇಡೀ ರಾಷ್ಟ್ರದ ಗಮನವನ್ನು ಸೆಳೆದಿದ್ದರು. ಶಾಮಣ್ಣನವರ 35ನೇ ಪುಣ್ಯ ಸ್ಮರಣೆಯ ದಿನವಾದ ಇಂದು (ಆ.೩೦) ಅವರ ಒಂದಿಷ್ಟು ಸಾಧನೆಗಳನ್ನು ಮೆಲುಕು ಹಾಕೋಣ.

ಪುಣ್ಯ ಸ್ಮರಣೆ

ಟಿ.ಎಸ್.ನಾಗರಾಜ್

ಇಂದಿನ ಕೆಲ ನಾಯಕರ ಜತೆ ಶಾಮಣ್ಣನವರನ್ನು ಹೋಲಿಸಿದಾಗ, ಇಂಥ ವ್ಯಕ್ತಿಯೊಬ್ಬರು ಇದ್ದರೆ? ಎಂಬ ಅನುಮಾನ ಹುಟ್ಟುತ್ತದೆ. ಹಣ, ಹೆಂಡ, ತೋಳ್ಬಲದ ಮೇಲೆ ಚುನಾವಣೆ ಗೆಲ್ಲುವ ಹಂತಕ್ಕೆ ಇಂದಿನ ರಾಜಕೀಯ ವ್ಯವಸ್ಥೆ ಮುಟ್ಟಿದೆ. ಆದರೆ ಇಂಥ ಅಪಸವ್ಯಗಳಿಂದ ದೂರವಿದ್ದೂ ಚುನಾವಣೆ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟವರು ಶಾಮಣ್ಣ.

ಅದು ೧೯೮೦ರ ಲೋಕಸಭಾ ಚುನಾವಣೆಯ ಕಾಲಘಟ್ಟ. ರಾಷ್ಟ್ರದ ಮಹಾನ್ ನಾಯಕರುಗಳು ಜನತಾಪಕ್ಷದಿಂದ ಸ್ಪರ್ಧಿಸಿ ಸೋತು ಮನೆ ಸೇರಿದ್ದರೆ, ದಕ್ಷಿಣ ಭಾರತದಿಂದ ಒಬ್ಬರೇ ಒಬ್ಬ ವ್ಯಕ್ತಿ ಲೋಕಸಭೆಯನ್ನು ಪ್ರವೇಶಿಸಿದರು. ಯಾರಪ್ಪಾ ಇವರು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಸದನವನ್ನು ಪ್ರವೇಶಿಸಿದ ಈ ವ್ಯಕ್ತಿಯ ದೇಹದ ಆಕಾರ ಮತ್ತು ಸರಳ ಉಡುಪನ್ನು ಕಂಡು ಎಲ್ಲರೂ ಹುಬ್ಬೇರಿಸಿದರು.

ದಕ್ಷಿಣ ಭಾರತದಿಂದ, ಅದರಲ್ಲೂ ನಿರ್ದಿಷ್ಟವಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ, ಡಿ.ಪಿ.ಶರ್ಮ ಎಂಬ ದುಡ್ಡಿನ ಕುಳದ ಎದುರು, ಅಲೆ ಇಲ್ಲದ ಪಕ್ಷದ ವತಿಯಿಂದ ಹೀಗೆ ಸ್ಪರ್ಧಿಸಿ ಗೆದ್ದವರು ಟಿ.ಆರ್.ಶಾಮಣ್ಣ. ಹೀಗಾಗಿ ಅವರು ಅಂದು ಇಡೀ ರಾಷ್ಟ್ರದ ಗಮನವನ್ನು ಸೆಳೆದಿದ್ದರು. ಶಾಮಣ್ಣ ನವರ 35ನೇ ಪುಣ್ಯಸ್ಮರಣೆಯ ದಿನವಾದ ಇಂದು (ಆ.೩೦) ಅವರ ಒಂದಿಷ್ಟು ಸಾಧನೆಗಳನ್ನು ಮೆಲುಕು ಹಾಕೋಣ.

ಇಂದು ರಾಜಕಾರಣದಲ್ಲಿ ನಾವು ನೋಡುವ ನಾಯಕರುಗಳ ಅಥವಾ ನಮ್ಮೆದುರು ಕಾಣುವ ಚುನಾಯಿತ ಪ್ರತಿನಿಽಗಳ ಜತೆಯಲ್ಲಿ ಶಾಮಣ್ಣನವರ ಬದುಕು ಹಾಗೂ ನಡವಳಿಕೆಯನ್ನು ತುಲನೆ ಮಾಡಿ ನೋಡಿದಾಗ, ಇಂಥ ಒಬ್ಬರು ವ್ಯಕ್ತಿ ಇದ್ದರೆ? ಅವರ ಅಂಥ ಜೀವನಶೈಲಿ ನಿಜವೇ? ಎಂಬ ಅನುಮಾನ ಹುಟ್ಟುತ್ತದೆ. ಹಣ, ಹೆಂಡ, ತೋಳ್ಬಲದ ಆಧಾರದ ಮೇಲೆ ಚುನಾವಣೆಯನ್ನು ಗೆಲ್ಲಬಹುದು ಎನ್ನುವಂಥ ಹಂತಕ್ಕೆ ಇಂದಿನ ರಾಜಕೀಯ ವ್ಯವಸ್ಥೆ ಬಂದು ಮುಟ್ಟಿರುವ ಸಂದರ್ಭ ದಲ್ಲಿ, ಹಣ-ಹೆಂಡದಂಥ ಅಪಸವ್ಯಗಳಿಂದ ದೂರವಿದ್ದು ಚುನಾವಣೆಯನ್ನು ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟವರು ಟಿ.ಆರ್. ಶಾಮಣ್ಣನವರು.

ಇದನ್ನೂ ಓದಿ: Umesh Vamana Prabhu Column: ಮರೆಯಾಗುತ್ತಿರುವ ಸಂಸ್ಕೃತಿ !

ಬೆಂಗಳೂರು ನಗರದ ಅಭಿವೃದ್ಧಿಯ ಹರಿಕಾರರಲ್ಲಿ ಮೊದಲ ಪಂಕ್ತಿಯಲ್ಲಿ ನಿಲ್ಲುವವರು ಟಿ.ಆರ್. ಶಾಮಣ್ಣ. ಬೆಂಗಳೂರು ನಗರವನ್ನು ಮತ್ತು ತಾವು ಪ್ರತಿನಿಧಿಸುವ ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸಿರುವುದರ ಬಗ್ಗೆ ಅನೇಕರು ಕೊಚ್ಚಿಕೊಳ್ಳಬಹುದು. ಆದರೆ ನಗರದ ಜನರು ಇಂದಿಗೂ ನೆನಪಿಸಿಕೊಳ್ಳುವುದು ಶಾಮಣ್ಣನವರನ್ನು. ಏಕೆಂದರೆ, ಜನರಿಗೆ ಬೇಕಾದಂಥ ಮೂಲಭೂತ ಸೌಕರ್ಯಗಳನ್ನು ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟವರಲ್ಲಿ ಮೊದಲಿಗರು ಶಾಮಣ್ಣ ನವರು.

ಚುನಾಯಿತ ಪ್ರತಿನಿಧಿಯೊಬ್ಬ ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಅವರ ದಿನಚರಿಯೇ ಒಂದು ನಿದರ್ಶನ. ಬೆಳಗ್ಗೆ 2 ಗಂಟೆಗಳ ಕಾಲ ಜನರನ್ನು ಭೇಟಿಮಾಡುವುದು, ನಂತರ ಸರಕಾರಿ ಕಚೇರಿಗಳಿಗೆ ಭೇಟಿಯಿತ್ತು ಜನರ ಸಮಸ್ಯೆಗಳ ಕಡೆಗೆ ಗಮನ ನೀಡುವುದು ಇವರ ಕಾರ್ಯ ಚಟುವಟಿಕೆಯ ಮೊದಲ ಭಾಗವಾಗಿತ್ತು. ಮಧ್ಯಾಹ್ನದ ವೇಳೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಜಲ ಮಂಡಳಿ, ಮಹಾನಗರಪಾಲಿಕೆ, ಬಹುಮಹಡಿ ಕಟ್ಟಡ, ವಿಧಾನಸೌಧ ಇಲ್ಲೆಲ್ಲಾ ಶಾಮಣ್ಣನವರ ಆಗಮನ ಕ್ಕಾಗಿ ಜನರು ಪ್ರತಿದಿನ ಕಾಯುತ್ತಿದ್ದರು.

ಆ ವೇಳೆಯಲ್ಲಿ, ಅಧಿಕಾರಿಗಳಿಗೆ ಹೇಳಿ ಜನಸಾಮಾನ್ಯರ ಕೆಲಸವನ್ನು ಮಾಡಿಸಿಕೊಡುವ ಸಲುವಾಗಿ ಈ ಕಚೇರಿಗಳ ಮುಂದೆ ಶಾಮಣ್ಣ ತಮ್ಮ ಆಟೋದಲ್ಲಿ ಬರುತ್ತಿದ್ದರು. ಕಾದಿರುತ್ತಿದ್ದ ಅಧಿಕಾರಿಗಳು ಶಾಮಣ್ಣನವರ ಆಟೋ ಬಂದು ನಿಲ್ಲುತ್ತಿದ್ದಂತೆಯೇ ಅದರೆಡೆಗೆ ಧಾವಿಸಿ, ಶಾಮಣ್ಣನವರಿಂದ ಕಾರ್ಯಸಂಬಂಽ ಆದೇಶವನ್ನು ಸ್ವೀಕರಿಸುತ್ತಿದ್ದರು.

ಇದು ಚುನಾಯಿತ ಪ್ರತಿನಿಧಿಯೊಬ್ಬರು ಅನುಸರಿಸಬೇಕಾದಂಥ ಅಧಿಕಾರ ಚಲಾವಣೆಯ ರೀತಿ ಎಂಬುದನ್ನು ಶಾಮಣ್ಣನವರು ಪ್ರತ್ಯಕ್ಷವಾಗಿ ತೋರಿಸುತ್ತಿದ್ದರು. ಜನಸಾಮಾನ್ಯರು ಎಂಥದೇ ಸಮಸ್ಯೆಯನ್ನು ಹೊತ್ತುತಂದರೂ, ಅದನ್ನು ಅಷ್ಟೇ ತಾಳ್ಮೆಯಿಂದ ಕೇಳಿ ಪರಿಹರಿಸಿಕೊಡುತ್ತಿದ್ದ ಶಾಮಣ್ಣ ಅವರ ಬದುಕಿನಲ್ಲಿ ಜಾತಿ-ಮತ ಭೇದಗಳು, ಬಡವ-ಬಲ್ಲಿದ ಎಂಬ ಭಾವಗಳು ಎಂದೂ ಸುಳಿಯಲಿಲ್ಲ. ಭ್ರಷ್ಟಾಚಾರವನ್ನು ನೇರವಾಗಿ ನಿಷ್ಠುರವಾಗಿ ಎದುರಿಸುತ್ತಿದ್ದವರು ಅವರೊಬ್ಬರೇ.

ಸತ್ಯವನ್ನು ಹೇಳಲು ಎಂದೂ ಹಿಂದು-ಮುಂದು ನೋಡದ ಶಾಮಣ್ಣ, ಜನಸಾಮಾನ್ಯರಿಗೆ ತೊಂದರೆ ಯಾದಾಗ ‘ತಮ್ಮ ಪಕ್ಷ, ತಮ್ಮ ನಾಯಕ’ ಎಂಬ ಯಾವ ಅಂಶವನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಬಡ ಕುಟುಂಬವೊಂದರಲ್ಲಿ ಹುಟ್ಟಿ, ಹೇಳದೆ ಕೇಳದೆ ಮನೆ ಬಿಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ, ಸೆರೆಮನೆಯಿಂದ ಸೆರೆಮನೆಗೆ ಅನೇಕ ವರ್ಷಗಳವರೆಗೆ ಓಡಾಡುತ್ತಾ ಶಿಕ್ಷೆಯನ್ನು ಅನುಭವಿಸಿದವರು ಶಾಮಣ್ಣ.

ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಕಾರಣಕ್ಕೆ ಅವರು ಕಠಿಣ ಶಿಕ್ಷೆಗೆ ಒಳಗಾಗಬೇಕಾಗಿ ಬಂತು; ಆದರೆ ನ್ಯಾಯಾಲಯದಲ್ಲಿ ಈ ‘ತಪ್ಪನ್ನು’ ಒಪ್ಪಿಕೊಳ್ಳದೆ ಸೆರೆಮನೆ ವಾಸಕ್ಕೆ ಒಡ್ಡಿಕೊಂಡ ಧೈರ್ಯ ಶಾಲಿ ಶಾಮಣ್ಣನವರು. ಹೀಗೆ ತಮ್ಮ ಮನೆಯನ್ನು ಮರೆತು, ಸ್ವಾತಂತ್ರ್ಯ ಚಳವಳಿಯ ವಿವಿಧ ಆಯಾಮಗಳಲ್ಲಿ ತೊಡಗಿದ್ದ ಶಾಮಣ್ಣನವರು ತಮ್ಮ ತಂದೆಯು ಅನಾರೋಗ್ಯಕ್ಕೆ ಒಳಗಾದ ಕಾರಣದಿಂದ ಮನೆಗೆ ಮರಳಿದರು.

ಮನೆಯಲ್ಲಿ ತಾಂಡವವಾಡುತ್ತಿದ್ದ ದುರ್ಭರ ಪರಿಸ್ಥಿತಿಯನ್ನು ಮನಗಂಡ ಶಾಮಣ್ಣ, ಸ್ವಾವ ಲಂಬನೆಯ ಬದುಕಿಗಾಗಿ ಸ್ವಂತ ಉದ್ಯೋಗವನ್ನು ಆರಂಭಿಸಿದರು. ಯರವಾಡ ಜೈಲಿನಲ್ಲಿದ್ದಾಗ ಅನೇಕ ಮಹತ್ತರ ಘಟನೆಗಳನ್ನು ಹತ್ತಿರದಿಂದ ಕಂಡವರಾಗಿದ್ದ ಶಾಮಣ್ಣ,

‘ಬದುಕಿನಲ್ಲಿ ಮದ್ಯಪಾನ ಸೇರಿದಂತೆ ಯಾವುದೇ ದುಶ್ಚಟಗಳ ದಾಸನಾಗಬಾರದು. ಯಾವಾಗಲೂ ಸತ್ಯವನ್ನೇ ಹೇಳಬೇಕು, ಸರಳವಾಗಿ ಬದುಕಬೇಕು. ಮಹಾತ್ಮ ಗಾಂಧಿಯವರ ಆಶಯದಂತೆ ಸದಾ ಕಾಲ ಖಾದಿಯನ್ನು ಧರಿಸಬೇಕು’ ಎಂಬ ನಿಲುವುಗಳಿಗೆ ಬದ್ಧರಾದರು, ಬದುಕಿನ ಕೊನೆಯ ಕ್ಷಣದ ತನಕ ಅವಕ್ಕೆ ಅಂಟಿ ಕೊಂಡಿದ್ದರು.

1957ರಲ್ಲಿ ಬೆಂಗಳೂರು ನಗರಪಾಲಿಕೆಯ ಸದಸ್ಯರಾಗಿ, ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ತಮ್ಮ ರಾಜಕೀಯ ಬದುಕನ್ನು ಆರಂಭಿಸಿದ ಶಾಮಣ್ಣನವರು ಮೂರು ಬಾರಿ ಬಸವನಗುಡಿ ಕ್ಷೇತ್ರದ ಶಾಸಕರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ, ಲೋಕಸಭಾ ಸದಸ್ಯ ರಾಗಿ ದುಡಿದರು. ಭಿಕ್ಷುಕರ ಪರಿಹಾರ ನಿಧಿ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಬಸವನಗುಡಿ ಕ್ಷೇತ್ರದಲ್ಲಿ ಶಾಮಣ್ಣನವರ ಹೆಸರು ಮತಗಳನ್ನು ತಂದುಕೊಡುವ ಶಕ್ತಿಯಾಗಿತ್ತು.

ಶಾಮಣ್ಣ ಹೇಳಿದರೆಂದರೆ ಮತದಾರರು ಅದರ ವಿರುದ್ಧವಾಗಿ ತೀರ್ಪು ನೀಡುತ್ತಿರಲಿಲ್ಲ. ಶಾಮಣ್ಣ ನವರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಇಲ್ಲಿ ಗೆಲ್ಲಿಸಿಕೊಳ್ಳುತ್ತಾರೆ ಎಂಬುದು ಆ ಕಾಲಘಟ್ಟದಲ್ಲಿ ಚಾಲ್ತಿಯಲ್ಲಿದ್ದ ಮಾತಾಗಿತ್ತು. ಕಾರಣ ಇಲ್ಲಿನ ಜನರ ಬದುಕಿನ ಒಂದು ಭಾಗ ವಾಗಿದ್ದ ನಾಯಕ ಅವರು. ಶಾಮಣ್ಣನವರು 1980ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ನಂತರ ಬಸವನಗುಡಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು.

ಈ ಚುನಾವಣೆಯಲ್ಲಿ ಹುಣಸೂರಿನ ಎಚ್.ಎಲ್.ತಿಮ್ಮೇಗೌಡರು ಜನತಾ ಪಕ್ಷದ ಅಭ್ಯರ್ಥಿ ಯಾಗಿದ್ದರೆ, ಲಕ್ಷ್ಮಣರಾಯರು ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪರ್ಧಿಸಿದ್ದರು. ಅಂದಿನ ಮುಖ್ಯಮಂತ್ರಿ ಗುಂಡೂರಾಯರು ಈ ಚುನಾವಣೆಯನ್ನು ಪ್ರತಿಷ್ಠೆಯ ಹೋರಾಟವಾಗಿ ಸ್ವೀಕರಿಸಿದ್ದರು. ಆಡಳಿತಾ ರೂಢ ಪಕ್ಷವು ಏನೆಲ್ಲಾ ಒತ್ತಡ, ತಂತ್ರಗಳನ್ನು ಹೂಡಿದರೂ ತಿಮ್ಮೇಗೌಡರ ಪರವಾಗಿಯೇ ಚುನಾ ವಣಾ ಫಲಿತಾಂಶ ಹೊರಬಿತ್ತು. ಆಗ ಇಲ್ಲಿನ ಜನ ಹೇಳಿದ್ದು, “ಈ ಕ್ಷೇತ್ರದಲ್ಲಿ ಶಾಮಣ್ಣನವರ ಮಾತೇ ಅಂತಿಮ,

ಹೀಗಾಗಿಯೇ ತಿಮ್ಮೇಗೌಡರ ಗೆಲುವಾಯಿತು" ಅಂತ. 1985ರಲ್ಲಿ, ಜನ ಪ್ರಿಯತೆಯ ಉತ್ತುಂಗದಲ್ಲಿದ್ದ ರಾಮಕೃಷ್ಣ ಹೆಗಡೆಯವರು ಈ ಕ್ಷೇತ್ರದ ಶಾಸಕ ರಾದರು, ಆದರೆ 1989ರ ವೇಳೆಗೆ ಅವರ ಜನಪ್ರಿಯತೆ ಕುಸಿದಿತ್ತು. ಕ್ಷೇತ್ರದಲ್ಲಿ ಅವರ ವಿರುದ್ಧ ಅನೇಕ ರೀತಿಯ ಅಭಿಪ್ರಾಯಗಳು ಹರಿದಾಡು ತ್ತಿದ್ದವು. ಈ ಸಲದ ಚುನಾವಣೆಯಲ್ಲಿ ಹೆಗಡೆಯವರು ಸೋಲುತ್ತಾರೆ ಅಂತ ಪತ್ರಿಕೆಗಳೂ ಅಭಿಪ್ರಾಯಪಟ್ಟಿದ್ದುಂಟು.

ಆದರೆ ಚುನಾವಣೆಯಲ್ಲಿ ಜಯಶೀಲರಾದದ್ದು ಹೆಗಡೆಯವರೇ. ಇದಕ್ಕೆ ಕಾರಣೀ ಭೂತರಾಗಿದ್ದು ಮತ್ತದೇ ಟಿ.ಆರ್. ಶಾಮಣ್ಣನವರು. ರಾತ್ರಿಯ ವೇಳೆಯಲ್ಲಿ ಕೊಳಚೆ ಪ್ರದೇಶಗಳಿಗೆ ಹೋಗಿ, ಅಲ್ಲಿನ ಮತದಾರರನ್ನು ಹೆಸರು ಹಿಡಿದು ಕರೆದು, ‘ಈ ಪಕ್ಷಕ್ಕೆ ಮತ ಹಾಕಿ’ ಎಂದು ಶಾಮಣ್ಣ ಹೇಳುತ್ತಿದ್ದರು.

ಇಂಥ ಕಡೆಗಳಿಗೆ ರಾತ್ರಿ ವೇಳೆಯಲ್ಲಿ ಹೋಗಲು ಅನೇಕರು ಹೆದರುತ್ತಿದ್ದರು, ಆದರೆ ಶಾಮಣ್ಣನವರಿಗೆ ಯಾವ ಭಯವೂ ಇರಲಿಲ್ಲ. ಕಾರಣ, ಅವರ ಬಗ್ಗೆ ಜನರಲ್ಲಿ ಇದ್ದಂಥ ವಿಶೇಷವಾದ ಗೌರವ! ಒಬ್ಬ ಸಮಾಜ ಸೇವಕರಾಗಿ, ಸಮರ್ಥ ಜನಪ್ರತಿನಿಧಿಯಾಗಿ ಕಾಣುವುದಷ್ಟೇ ಅಲ್ಲದೆ, ಒಬ್ಬ ಜನಪರ ಹೋರಾಟಗಾರರು ಕೂಡ ಆಗಿದ್ದುದು ಶಾಮಣ್ಣನವರ ಹೆಗ್ಗಳಿಕೆ.

ಕುಡಿಯುವ ನೀರು, ವಿದ್ಯುತ್ ಬಿಲ್ಲು, ಬಸ್ ಪ್ರಯಾಣ ದರ, ಮನೆ ಕಂದಾಯ ಹೀಗೆ ಯಾವುದೇ ವಿಚಾರದಲ್ಲಿ ರಾಜ್ಯ ಸರಕಾರವು ಜನವಿರೋಧಿ ನಿಲುವನ್ನು ತಳೆದರೆ, ಶಾಮಣ್ಣನವರ ಪ್ರತಿಭಟನೆ ಯನ್ನು ಕೂಡಲೇ ಎದುರಿಸ ಬೇಕಾಗಿ ಬರುತ್ತಿತ್ತು. ಅಂದಿನ ಬೆಂಗಳೂರು ನಗರ ಪಾಲಿಕೆಯು ಜನರಿಗೆ ಆಸ್ತಿ ತೆರಿಗೆಯನ್ನು ಹೆಚ್ಚಿಸಿದ ಸಂದರ್ಭದಲ್ಲಿ ವಿಧಾನಸೌಧದ ಮುಂದೆ ಶಾಮಣ್ಣನವರು ಏಕಾಂಗಿ ಯಾಗಿ ಧರಣಿ ನಡೆಸಿದ್ದಿದೆ.

ಶಾಮಣ್ಣ ಎಂದರೆ ಒಂದು ಶಕ್ತಿ ಎಂಬುದು ಎಲ್ಲರಿಗೂ ತಿಳಿದಿತ್ತು, ಹೀಗಾಗಿ ಅವರ ನಿಷ್ಠುರವನ್ನು ಕಟ್ಟಿಕೊಳ್ಳಲು ಎಲ್ಲರೂ ಹೆದರುತ್ತಿದ್ದರು. ಅವರನ್ನು ‘ಸೈಕಲ್ ಶಾಮಣ್ಣ’ ಎಂದೂ ಜನರು ಕರೆಯು ತ್ತಿದ್ದುದುಂಟು. ದಶಕಗಳ ಹಿಂದೆ ‘ಸೈಕಲ್’ ಜನಸಾಮಾನ್ಯರ ಪ್ರಮುಖ ವಾಹನವಾಗಿತ್ತು. ಅದರ ಮೇಲೆ ತೆರಿಗೆಯನ್ನು ವಿಧಿಸಿದ್ದಕ್ಕೆ ದೊಡ್ಡ ಹೋರಾಟವನ್ನೇ ಶಾಮಣ್ಣ ಶುರುವಿಟ್ಟುಕೊಂಡರು.

ಪರಿಣಾಮ ತೆರಿಗೆಯನ್ನು ರದ್ದುಗೊಳಿಸಬೇಕಾಗಿ ಬಂತು. ಹೀಗೆ ಟಿ.ಆರ್.ಶಾಮಣ್ಣನವರ ಬದುಕು ಹಲವು ಹೋರಾಟದ ಪ್ರಸಂಗಗಳನ್ನು ಒಳಗೊಂಡ ಒಂದು ದಂತಕತೆಯಾಗಿದೆ. ಚುನಾವಣೆಯ ವೇಳೆ ಶಾಮಣ್ಣನವರು ಎಂದೂ ಹಣದ ಥೈಲಿಯನ್ನು ಹಿಡಿದು ಆ ಚಟುವಟಿಕೆಯಲ್ಲಿ ತೊಡಗಿದ ವರಲ್ಲ, ಹೆಂಡವನ್ನು ಹಂಚಿದವರಲ್ಲ. ಅವರ ಇಂಥ ಚುನಾವಣಾ ಪ್ರಚಾರ ವೈಖರಿಯು ಇವತ್ತಿನ ಚುನಾವಣಾ ರಾಜಕಾರಣಕ್ಕೆ ಒಂದು ದಿಕ್ಸೂಚಿಯಾಗಬೇಕು.

ಚುನಾವಣಾ ಸುಧಾರಣೆ ಮಾಡಲು ಬಯಸುವವರು ಶಾಮಣ್ಣನವರ ಈ ವೈಖರಿಯನ್ನು ಒಮ್ಮೆ ಕೂಲಂಕಷ ಅವಲೋಕಿಸಿದರೆ ಸಾಕು, ಎಷ್ಟೋ ವಿಚಾರ ಗಳು ಅರಿವಿಗೆ ಬರುತ್ತವೆ. ಶಾಮಣ್ಣ ನವರನ್ನು ಬೆಂಗಳೂ ರಿನ ಜನರು ಥಟ್ಟನೆ ಗುರುತಿಸುತ್ತಿದ್ದುದು ಅವರು ಓಡಾಡುತ್ತಿದ್ದ ಕರಿಬಣ್ಣದ ಆಟೋರಿಕ್ಷಾದ ಮೂಲಕ. ಅದು ಆಗಾಗ ಓಡಾಡಿದರೆ ‘ನಮ್ಮ ಬಡಾವಣೆಗೆ ಶಾಮಣ್ಣ ಬಂದಿದ್ದಾರೆ’ ಎಂದು ಜನರು ಸುಲಭ ವಾಗಿ ಗ್ರಹಿಸುತ್ತಿದ್ದರು.

ತಮ್ಮ ಸೇವಾ ಮನೋಭಾವ, ಪ್ರಾಮಾಣಿಕತೆ, ನೇರವಾದ ನಡವಳಿಕೆಯ ಮೂಲಕ ದಶಕಗಳವರೆಗೆ ಬೆಂಗಳೂರು ನಗರದ, ಅದರಲ್ಲೂ ವಿಶೇಷವಾಗಿ ಬಸವನಗುಡಿ ಭಾಗದ ದೊಡ್ಡ ರಾಜಕೀಯ ಶಕ್ತಿ ಯಾಗಿದ್ದವರು ಟಿ.ಆರ್.ಶಾಮಣ್ಣ. ಅವರ ನಿಧನದ ನಂತರ ಬೆಂಗಳೂರು ಮಹಾನಗರಿಯಲ್ಲಿ ಜನಪರ ಹೋರಾಟ ಗಳು, ಅದರಲ್ಲೂ ಪ್ರಮುಖವಾಗಿ ಜನರಿಗೆ ದೊರೆಯ ಬೇಕಾದ ಮೂಲ ಸೌಕರ್ಯ ಸಂಬಂಧಿತ ಹೋರಾಟಗಳು ನಿಂತುಹೋಗಿವೆ.

ಶಾಮಣ್ಣನವರು ಇಂದು ನಮ್ಮ ನಡುವೆ ಇಲ್ಲ. ಆದರೂ ಅವರು ತೊಡಗಿಸಿಕೊಂಡಿದ್ದ ಅನೇಕ ಹೋರಾಟಗಳು, ಬಡಾವಣೆಗಳಲ್ಲಿನ ಅಭಿವೃದ್ಧಿ ಕಾರ್ಯಗಳು ಅವರ ಇರುವಿಕೆಯನ್ನು ಸಾರಿ ಹೇಳುತ್ತವೆ. ಇದೇ ಅಲ್ಲವೇ ಜನಪ್ರತಿಯೊಬ್ಬನ ಸಾರ್ಥಕ ಜೀವನ?

(ಲೇಖಕರು ಹವ್ಯಾಸಿ ಬರಹಗಾರರು)