ಜೇಡರಬಲೆ
ರವೀ ಸಜಂಗದ್ದೆ
ಯುದ್ಧವೆಂದರೆ ಹಾಗೆಯೇ- ಶುರುವಾಗೋ ದಿನ ಮಾತ್ರ ಒಂದು ದೇಶದ ನಿಯಂತ್ರಣದಲ್ಲಿರುತ್ತದೆ, ಆದರೆ ಮುಗಿಸುವ ದಿನ ಮಾತ್ರ ಎರಡೂ ದೇಶಗಳ ನಿಯಂತ್ರಣದಲ್ಲಿರುವುದಿಲ್ಲ. ರಷ್ಯಾ-ಉಕ್ರೇನ್ ನಡುವಿನ ಯುದ್ಧ 3 ವರ್ಷಗಳಿಂದ ನಡೆಯುತ್ತಿದೆ! ಇದು ಕೆಲವೇ ದಿನದೊಳಗೆ ಮುಗಿದು, ಬಲಿಷ್ಠ ರಷ್ಯಾ ದೇಶವು ಅಷ್ಟೇನೂ ಶಕ್ತಿಶಾಲಿಯಲ್ಲದ ಉಕ್ರೇನನ್ನು ಸೋಲಿಸುವ ಸಾಧ್ಯತೆ ದಟ್ಟವಾಗಿತ್ತು ಮತ್ತು ವಾಸ್ತವಕ್ಕೆ ಹತ್ತಿರವಿದ್ದ ಆಲೋಚನೆಯೂ ಆಗಿತ್ತು. ಆದರೆ ಹಾಗಾಗಲಿಲ್ಲ!
ಒಂದೆರಡು ಯುದ್ಧವಿರಾಮಗಳೂ ಜತೆಯಾಗಿ ಈ ಯುದ್ಧ 4ನೇ ವರ್ಷಕ್ಕೆ ಕಾಲಿಟ್ಟಿದೆ. ಎರಡೂ ಕಡೆಯಲ್ಲಿ ಅಪಾರ ಸಾವು-ನೋವು-ನಷ್ಟಗಳಾಗಿವೆ. ವರ್ಷಗಳ ಹಿಂದೆ, ನ್ಯಾಟೋ ಸಮೂಹದ ಹಲವು ದೇಶಗಳ ಒತ್ತಡದಿಂದಾಗಿ ಉಕ್ರೇನ್, ಬೆಲಾರಸ್, ಕಝಕಿಸ್ತಾನ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ತಮ್ಮ ಸಂಗ್ರಹದಲ್ಲಿದ್ದ ಅಣುಬಾಂಬ್/ಶಸ್ತ್ರಾಸ್ತ್ರಗಳನ್ನು ರಷ್ಯಾಕ್ಕೆ ಮಾರಿದವು.
ಇದಕ್ಕೆ ಪ್ರತಿಯಾಗಿ ಅವು ಅಮೆರಿಕ ಮತ್ತು ರಷ್ಯಾದಿಂದ ಆರ್ಥಿಕ ಮತ್ತಿತರ ನೆರವನ್ನು ಪಡೆದವು. ಇದಾದ ಕೆಲ ವರ್ಷಗಳಲ್ಲಿ ರಷ್ಯಾ-ಉಕ್ರೇನ್ ಸಂಬಂಧ ಹದಗೆಡಲಾರಂಭಿಸಿ ಯುದ್ಧ ಶುರುವಾ ಯಿತು. ಒಂದೊಮ್ಮೆ ಉಕ್ರೇನ್‌ಗೆ ತನ್ನದೇ ಆದ ಅಣ್ವಸ್ತ್ರ ಬಲವಿದ್ದಿದ್ದರೆ, ಈ ಯುದ್ಧ ಶುರು ವಾಗುತ್ತಿರಲಿಲ್ಲವೇನೋ! ಒಟ್ಟಿನಲ್ಲಿ ಈ ಯುದ್ಧ ವಿಶ್ವದ ವಿವಿಧ ದೇಶಗಳ ಮೇಲೆ ತನ್ನ ನಕಾರಾತ್ಮಕ ಛಾಯೆಯನ್ನು ಬೀರಿದೆ.
ಇದನ್ನೂ ಓದಿ: Ravi Sajangadde Column: ಅಶ್ವಿನ್, ರೋಹಿತ್, ಕೊಹ್ಲಿ- ಸಿ&ಬಿ ಗಂಭೀರ್ !
ಈ ಯುದ್ಧವನ್ನು ಕೊನೆಗಾಣಿಸುವ/ದೀರ್ಘ ವಿರಾಮ ನೀಡುವ ನಿಟ್ಟಿನಲ್ಲಿ ಹಲವಾರು ಯತ್ನ ಗಳಾಗುತ್ತಿದ್ದರೂ, ಅವು ಯಶ ಕಾಣದೆ ಎರಡೂ ಕಡೆಗಳಲ್ಲಿ ಸಾವು-ನೋವು ಸಂಭವಿಸುತ್ತಿವೆ. ಐರೋಪ್ಯ ಒಕ್ಕೂಟ, ನ್ಯಾಟೋ, ಚೀನಾ ಮತ್ತು ಅಮೆರಿಕ ಪರದೆಯ ಹಿಂದಿನಿಂದಲೇ ಈ ಯುದ್ಧಕ್ಕೆ ಪ್ರೇರಣೆ, ಸಂಪನ್ಮೂಲ, ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿವೆ. ಆದರೆ ಈ ಬಾಬತ್ತಿಗೆ ಅಗಾಧ ಹಣ ಖರ್ಚಾಗುವುದರಿಂದ ದಿನಗಳೆದಂತೆ ಈ ರಾಷ್ಟ್ರಗಳು ತಮ್ಮ ನೆರವನ್ನು ತಗ್ಗಿಸುತ್ತಾ ಬಂದವು.
ಈ ಯುದ್ಧದಿಂದ ತಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದರಿತ ಈ ದೇಶಗಳು ಮೌನವಾಗಿ ಕೈಯೆತ್ತಿದವು. ಯುದ್ಧದ ಮೇಲೆ ಹೂಡಿಕೆ ಮಾಡಿ ಒಂದಷ್ಟು ರಾಜತಾಂತ್ರಿಕ ಮತ್ತು ವ್ಯಾವಹಾರಿಕ ಲಾಭ ಮಾಡಿಕೊಳ್ಳುವ ಅವುಗಳ ಆಲೋಚನೆಗಳು, ಆಯಾ ದೇಶಗಳ ಮುಖ್ಯಸ್ಥರಿಂದಾಗಿ ಮಕಾಡೆ ಮಲಗಿವೆ. ಹೀಗಾಗಿ ಈ ಯುದ್ಧವನ್ನೀಗ ರಷ್ಯಾ ಮತ್ತು ಉಕ್ರೇನ್ ಮಾತ್ರವೇ ನಿರ್ವಹಿಸಬೇಕಿದೆ.
ಈ ನಡುವೆ ಉಕ್ರೇನ್ ನಡೆಸಿದ ‘ಆಪರೇಷನ್ ಸ್ಪೈಡರ್ ವೆಬ್’ ಎಂಬ ಅನೂಹ್ಯ ದಾಳಿಯು ರಷ್ಯಾ ವನ್ನು ಕಂಗೆಡಿಸಿ, ಶಸ್ತ್ರಾಸ್ತ್ರ ಸಂಗ್ರಹಕ್ಕೆ ಅಪಾರ ಹಾನಿ ಮಾಡಿದೆ, ರಷ್ಯಾದ ಆಸ್ಮಿತೆಗೆ ದೊಡ್ಡ ಪೆಟ್ಟು ನೀಡಿದೆ. ಇದರ ಒಂದಿಷ್ಟು ವಿವರ ಹೀಗಿದೆ: ಈ ಯುದ್ಧ ಜೂನ್ 1ರಂದು ತೀವ್ರವಾಯಿತು. ಉಕ್ರೇನ್ ನ ಮಿಲಿಟರಿ ತರಬೇತಿ ಕೇಂದ್ರವೊಂದರ ಮೇಲೆ ರಷ್ಯಾದಿಂದ ‘ಇಸ್ಕಾಂಡರ್-ಎಂ’ ಕ್ಷಿಪಣಿ ದಾಳಿ ಯಾದ ಪರಿಣಾಮ 12 ಉಕ್ರೇನಿ ಸೈನಿಕರು ಸತ್ತು ನೂರಾರು ಮಂದಿ ಗಾಯಗೊಂಡರು.
ಇದಕ್ಕೆ ಪ್ರತೀಕಾರವೆಂಬಂತೆ ಉಕ್ರೇನ್ ಪಡೆಗಳು ರಷ್ಯಾದ ಐದು ಪ್ರಮುಖ ವಾಯುನೆಲೆಗಳ ಮೇಲೆ ಕಂಡು ಕೇಳರಿಯದ ರೀತಿಯಲ್ಲಿ 117 ಡ್ರೋನ್‌ಗಳಿಂದ ದಾಳಿ ನಡೆಸಿದವು. ಇದರಿಂದಾಗಿ ರಷ್ಯಾದ ಅತ್ಯಾಧುನಿಕ ಕ್ಷಿಪಣಿಗಳು, ರಾಡಾರ್ ಮತ್ತು ಕಮಾಂಡ್ ವಿಮಾನಗಳು ನಾಶವಾದವು. ಈ ದಾಳಿಗೆ ಉಕ್ರೇನ್ ನೀಡಿದ ಹೆಸರು ‘ಆಪರೇಷನ್ ಸ್ಪೈಡರ್ ವೆಬ್’.
ಈ ದಾಳಿಗೊಳಗಾದ ರಷ್ಯಾದ ನೆಲೆಗಳು ಉಕ್ರೇನ್ ಗಡಿಯಿಂದ ಸಾವಿರಾರು ಕಿ. ಮೀ. ದೂರವಿದ್ದರೂ ಗುರಿ ತಲುಪಿದ್ದು ಈ ದಾಳಿಯ ನಿಖರತೆಗೆ ಸಾಕ್ಷಿ. ಈ ದಾಳಿಯಿಂದ ರಷ್ಯಾಕ್ಕೆ ಆಗಿರುವ ನಷ್ಟ ಸುಮಾರು 60000 ಕೋಟಿ ರುಪಾಯಿಗಳು!
ಈ ದಾಳಿಗೆ ಬಳಸಿದ ಡ್ರೋನ್‌ಗಳನ್ನು ರಿಮೋಟ್ ನಿಯಂತ್ರಿತ ಮುಚ್ಚಳವಿರುವ ಮರದ ಪಾತ್ರೆಗಳ ಒಳಗೆ ಪ್ಯಾಕ್ ಮಾಡಿ ರಷ್ಯಾದೊಳಗೆ ಸಾಗಿಸಲಾಯಿತು. ಕಳ್ಳಸಾಗಣೆ ಮೂಲಕ ಅಲ್ಲಿಗೆ ಉಕ್ರೇನ್ ನಿಂದ ಸಾಕಷ್ಟು ಟ್ರಕ್‌ಗಳನ್ನು ಕಳುಹಿಸಿ, ಅವು ರಷ್ಯಾದವೆಂದು ಭಾಸವಾಗುವಂತೆ ಸಜ್ಜುಗೊಳಿಸಿ ಡ್ರೋನ್‌ಗಳಿರುವ ಪಾತ್ರೆಗಳನ್ನು ಅವುಗಳಲ್ಲಿ ಇರಿಸಲಾಯಿತು. ಈ ಟ್ರಕ್ಕುಗಳು ರಷ್ಯಾದ ಹೆದ್ದಾರಿ ಸಂಚಾರದಲ್ಲಿ ಇತರ ವಾಹನಗಳೊಂದಿಗೆ ಬೆರೆತವು. ಚೆಕ್‌ಪೋಸ್ಟ್‌ಗಳ ಮೂಲಕ ಸಲೀಸಾಗಿ ಸಾಗಲು ಬೇಕಾದ ಪರವಾನಗಿ ಮತ್ತಿತರ ದಾಖಲೆಗಳನ್ನು, ರಷ್ಯಾದ ಪೊಲೀಸ್ ವ್ಯವಸ್ಥೆಗೆ ಅನುಮಾನ ಬಾರ ದಂತೆ ಉಕ್ರೇನ್ ಸಜ್ಜುಗೊಳಿಸಿತು ಎನ್ನಲಾಗಿದೆ.
ಮೊದಲೇ ಗೊತ್ತು ಮಾಡಿದ ಸ್ಥಳಗಳಲ್ಲಿ ಅವನ್ನು ಪಾರ್ಕ್ ಮಾಡುವಂತೆ ಅದರ ಚಾಲಕರುಗಳಿಗೆ ಸೂಚಿಸಲಾಯಿತು. ಹೀಗೆ ಟ್ರಕ್ಕುಗಳು ನಿಂತ ಅಷ್ಟೂ ಪ್ರದೇಶಗಳು ರಷ್ಯಾದ ವಾಯುನೆಲೆಗಳ ಸಮೀಪದ ರಾಷ್ಟ್ರೀಯ ಹೆದ್ದಾರಿ ಸ್ಥಳಗಳಾಗಿದ್ದವು! ಆ ಟ್ರಕ್ಕುಗಳ ಚಾವಣಿಯನ್ನು, ‘ಆಪರೇಷನ್ ಸ್ಪೈಡರ್ ವೆಬ್’ ತಂಡವು ಉಕ್ರೇನ್‌ನ ಮೂಲೆಯಲ್ಲಿ ಕುಳಿತು ರಿಮೋಟ್ ಕಂಟ್ರೋಲ್ ವ್ಯವಸ್ಥೆಯ ಮೂಲಕ ತೆರೆಯುವಂತೆ ಮಾಡಿತು.
ನಂತರ, ಡ್ರೋನ್‌ಗಳು ಸ್ವತಂತ್ರವಾಗಿ ಹಾರಿ ನಿರ್ದಿಷ್ಟ ಗುರಿತಲುಪುವಂತೆ ಕಮಾಂಡ್ ನೀಡಿತು. ಕೆಲ ನಿಮಿಷಗಳಲ್ಲೇ ರಷ್ಯಾದ ಐದು ಅತ್ಯಂತ ಭದ್ರ ಮತ್ತು ಗೌಪ್ಯ ವಾಯುನೆಲೆಗಳು, ಕ್ಷಿಪಣಿ ಸಂಗ್ರಹಾ ಗಾರಗಳ ಮೇಲೆ ಡ್ರೋನ್‌ಗಳು ಹಾರಿ ಸ್ವಯಂಸ್ಫೋಟಗೊಂಡು ಅವನ್ನು ಧ್ವಂಸ ಗೊಳಿಸಿದವು.
ಟ್ರಕ್‌ನಿಂದ ಮಿಕ್ಕ ಎಲ್ಲಾ ಡ್ರೋನ್‌ಗಳು ಹಾರಿದ ನಂತರ, ಕೊನೆಯ ಡ್ರೋನ್ ಅಲ್ಲೇ ಸ್ಫೋಟ ಗೊಂಡು ಟ್ರಕ್ ಕೂಡ ನಾಶವಾಗುವಂತೆ ಈ ಆಪರೇಷನ್ ಅನ್ನು ಯೋಜಿಸಲಾಗಿತ್ತು. ಈ ಅನೂಹ್ಯ ದಾಳಿಯಿಂದ ರಷ್ಯಾ ಮಕಾಡೆ ಮಲಗಿತು. ರಷ್ಯಾದ ಈ ಸೂಕ್ಷ್ಮ ಪ್ರದೇಶಗಳನ್ನು ಉಕ್ರೇನ್ ಅಷ್ಟು ನಿಖರವಾಗಿ ಜಾಲಾಡಿ ದಾಳಿ ಮಾಡಿದ್ದು ಹೇಗೆ ಎಂಬುದೇ ಕೌತುಕದ ಸಂಗತಿ. ಲಭ್ಯ ಮಾಹಿತಿ ಯಂತೆ, ರಷ್ಯಾದ ಈ ಪ್ರದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಉಕ್ರೇನ್ ಹಲವು ಗೂಢಚಾರರನ್ನು ನಿಯೋಜಿಸಿತ್ತು. ಜತೆಗೆ, ಉಕ್ರೇನಿಗೆ ನ್ಯಾಟೋ ಒದಗಿಸಿದ ಉಪಗ್ರಹ ಗೌಪ್ಯ ದತ್ತಾಂಶ ಮತ್ತು ಅತ್ಯಾಧು ನಿಕ ಐಎಸ್‌ಆರ್ (ಗುಪ್ತಚರ, ಕಣ್ಗಾವಲು, ವಿಚಕ್ಷಣ) ತಂತ್ರಜ್ಞಾನವು ಈ ಕಾರ್ಯಾಚರಣೆ ಅಂದು ಕೊಂಡಂತೆ ನೆರವೇರಲು ಸಹಕರಿಸಿತು.
ಉಕ್ರೇನ್‌ಗಿಂತ ಅಧಿಕ ಶಸ್ತ್ರಾಸ್ತ್ರಗಳನ್ನು ರಷ್ಯಾ ಹೊಂದಿದ್ದರೂ ಈ ಹಂತದಲ್ಲಿ ಅದು ದೊಡ್ಡ ಪೆಟ್ಟು ತಿಂದಿದೆ. ಶತ್ರುದೇಶದ ಮೇಲೆ, ಅದೇ ದೇಶದ ಒಳಗಿನಿಂದಲೇ ಹೇಗೆ ದಾಳಿ ನಡೆಸಬಹುದು ಮತ್ತು ಅದರ ಪರಿಣಾಮ ಹೇಗಿರುತ್ತದೆ ಎಂಬುದನ್ನು ಈ ಕಾರ್ಯಾಚರಣೆ ತೆರೆದಿಟ್ಟಿದೆ. ಸಾಮಾನ್ಯ ವಾಗಿ ಬಾನೆತ್ತರದಲ್ಲಿರುವ, ವ್ಯವಸ್ಥಿತ ಪ್ರತಿದಾಳಿ ಮತ್ತು ರಾಡಾರ್ ವ್ಯವಸ್ಥೆಯ ಗಮನಕ್ಕೆ ಬಾರ ದಂತೆ, ನೆಲದಿಂದ ಕೆಲವೇ ಅಡಿಗಳಷ್ಟು ಎತ್ತರದಿಂದ ಹೀಗೆ ಡ್ರೋನ್ ದಾಳಿ ನಡೆಸುವ ಮೂಲಕ ಉಕ್ರೇನ್
ಅಚ್ಚರಿ ಮೂಡಿಸಿದೆ. ಈ ದಾಳಿಯಿಂದಾಗಿ, ಜೂನ್ 2ರಂದು ನಡೆಯಬೇಕಿದ್ದ ಕದನ ವಿರಾಮ ಸಭೆಯು ಒಮ್ಮತ ಮೂಡದೆ ಕೆಲ ನಿಮಿಷಗಳಲ್ಲೇ ಮುಕ್ತಾಯಗೊಂಡಿತು. ರಷ್ಯಾದ ಸೇನಾ ಸಾಮರ್ಥ್ಯ ಮತ್ತು ಯೋಧರ ಮನೋಬಲದ ಮೇಲಾದ ಈ ದಾಳಿಯ ಪರಿಣಾಮವನ್ನು ಈ ಹಂತದಲ್ಲಿ ಅಂದಾಜಿಸಲಾಗದಿದ್ದರೂ, ಇದುವರೆಗಿನ ಯುದ್ಧದಲ್ಲಿ ಹಿನ್ನಡೆ ಅನುಭವಿಸಿಕೊಂಡೇ ಬಂದಿದ್ದ ಉಕ್ರೇನ್‌ಗೆ ಈ ಗೆಲುವು ಒಂದಿಷ್ಟು ಉತ್ತೇಜನ ನೀಡಿರುವಂತೆ ಭಾಸವಾಗುತ್ತಿದೆ.
ಅಷ್ಟರ ಮಟ್ಟಿಗೆ ‘ಆಪರೇಷನ್ ಸ್ಪೈಡರ್ ವೆಬ್’ ಬೀಗುತ್ತಿದೆ. ರಷ್ಯಾ ಸದ್ಯಕ್ಕೆ ಗಾಯಗೊಂಡ ಹುಲಿ ಯಂತಾಗಿದೆ. ಗಾಯಗೊಂಡ ಹುಲಿ ಯಾವಾಗಲೂ ಶತ್ರು ಸಂಹಾರಕ್ಕೆ ಹೊಂಚು ಹಾಕುತ್ತಿರುತ್ತದೆ. ಯುದ್ಧೋನ್ಮಾದವೆಂಬುದು ನಾಗರಿಕತೆಯ ಮೇಲಿನ ಅಯಾಚಿತ ಪ್ರಹಾರವೇ. ಈ ಪ್ರಹಾರ ಸದ್ಯ ಕ್ಕಂತೂ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಛೇ!
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)