Ravi Sajangadde Column: ಅಶ್ವಿನ್, ರೋಹಿತ್, ಕೊಹ್ಲಿ- ಸಿ&ಬಿ ಗಂಭೀರ್ !
ಕಿಂಗ್ ಕೊಹ್ಲಿಯ ಕಥೆಯೂ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಖಂಡಿತ ವಾಗಿಯೂ ಇನ್ನೂ ಎರಡರಿಂದ ಮೂರು ವರ್ಷಗಳ ಕಾಲ ಅಥವಾ 2027ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ವರೆಗಾದರೂ ಆಡುವ ಕ್ಷಮತೆ ಹೊಂದಿರುವ, ಕ್ರಿಕೆಟ್ ಅಂಗಣದಲ್ಲಿ ಎಲ್ಲ ಸಾಮರ್ಥ್ಯ ವನ್ನೂ ಧಾರೆ ಎರೆವ ತುಡಿತವಿರುವ ಅಪರೂಪದ ಆಟಗಾರ ವಿರಾಟ್ ಕೊಹ್ಲಿ


ಕ್ರಿಕೆಟಾಯಣ
ರವೀ ಸಜಂಗದ್ದೆ
ಅದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ. ಅಂದು 18 ಡಿಸೆಂಬರ್ 2024. ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಸರಣಿಯ ಮೂರನೆಯ ಪಂದ್ಯ ಡ್ರಾ ಆಗಿತ್ತು. ಈ ಪಂದ್ಯದ ಆಡುವ ಹನ್ನೊಂದರ ಬಳಗದಲ್ಲಿ ರವಿಚಂದ್ರನ್ ಅಶ್ವಿನ್ ಇರಲಿಲ್ಲ. ಅಂದು ಸಂಜೆ ದಿಢೀರ್ ಪತ್ರಿಕಾಗೋಷ್ಠಿ ಕರೆದು ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಈ ನಿರ್ಧಾರ ಸ್ವತಃ ತಂಡದ ಬಳಗದವರಿಗೆ ಗೊತ್ತಿರಲಿಲ್ಲ. ಎಲ್ಲರೂ ಅಶ್ವಿನ್ ಅವರು ಸರಣಿಯ ಮಧ್ಯ ದಲ್ಲಿ ತೆಗೆದುಕೊಂಡ ಈ ನಿರ್ಧಾರಕ್ಕೆ ಸಖೇದಾಶ್ಚರ್ಯ ವ್ಯಕ್ತಪಡಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 537 ವಿಕೆಟ್ ಪಡೆದ, ತ್ವರಿತವಾಗಿ 500 ವಿಕೆಟ್ ಪಡೆದವರ ಸಾಲಿನಲ್ಲಿ ಎರಡನೆಯ ಸ್ಥಾನದಲ್ಲಿರುವ, ಒಟ್ಟು 37 ಬಾರಿ ಇನ್ನಿಂಗ್ಸ್ ಒಂದರಲ್ಲಿ ಐದಕ್ಕಿಂತ ಹೆಚ್ಚು ವಿಕೆಟ್ ಗಳಿಸಿದ ಸಾಧನೆ ಮಾಡಿದ, ಬ್ಯಾಟಿಂಗ್ ವಿಭಾಗದಲ್ಲೂ ಹಲವಾರು ಇನ್ನಿಂಗ್ಸ್ ಗಳಲ್ಲಿ ನಿರ್ಣಾಯಕ ಆಟ ಆಡಿದ, ದೇಶ ಕಂಡ ಮಹಾನ್ ಸ್ಪಿನ್ನರ್ ಹೀಗೆ ಹಠಾತ್ ನೇಪಥ್ಯಕ್ಕೆ ಸರಿದರು. ಅಶ್ವಿನ್ ಅವರಲ್ಲಿ ಇನ್ನೂ ಎರಡು ಮೂರು ವರ್ಷಗಳ ಕಾಲ ದೇಶಕ್ಕಾಗಿ ಆಡುವ ಸಾಮರ್ಥ್ಯ ಇತ್ತು.
ಯಾವುದೋ ವಿಚಾರಕ್ಕೆ, ಯಾರದೋ ಮಾತು, ನಡವಳಿಕೆ ಮತ್ತು ನಿರ್ಧಾರಗಳಿಂದ ನೊಂದು ನಿವೃತ್ತಿಯಾದರು ಎನ್ನುವ ಸುದ್ದಿ ಹರಿದಾಡಿತು. ಅಶ್ವಿನ್ ತಂದೆ ಕೂಡ ಅದೇ ಧಾಟಿಯಲ್ಲಿ ಮಾತ ನಾಡಿ ‘ಭಾರತ ತಂಡದಲ್ಲಿ ಅಶ್ವಿನ್’ಗೆ ಆಗಾಗ ಅವಮಾನ ಆಗುತ್ತಲೇ ಇತ್ತು. ಎಷ್ಟು ದಿನ ಇದನ್ನೆಲ್ಲ ಸಹಿಸಿಕೊಳ್ಳುವುದು? ಹಾಗಾಗಿ ನಿವೃತ್ತಿ ಘೋಷಿಸಿzನೆ’ ಎಂದಾಗ ಬೇಸರ, ಆಕ್ರೋಶ ಎರಡೂ ಅವರಲ್ಲಿ ಮಿಳಿತವಾಗಿತ್ತು.
ಯಾರೋ ಒತ್ತಡ ತಂದು ಟೆಸ್ಟ ಸರಣಿಯ ಮಧ್ಯದಲ್ಲಿ ಅಶ್ವಿನ್ ನಿವೃತ್ತಿಯಾಗುವಂತೆ ಮಾಡಿದರು ಎನ್ನುವ ಅಷ್ಟೇನೂ ‘ಗಂಭೀರ’ವಲ್ಲದ ವಿಚಾರವು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಲ್ಲಿ ಪ್ರಚಾರ ಪಡೆಯಿತು. ಅದೇ ಟೆಸ್ಟ್ ಸರಣಿಗೆ ಭಾರತ ತಂಡದ ಕಪ್ತಾನನಾಗಿ ರೋಹಿತ್ ಶರ್ಮಾ ತಂಡದಲ್ಲಿದ್ದರು. ಮೊದಲ ಮೂರು ಪಂದ್ಯಗಳಲ್ಲಿ ರೋಹಿತ್ ನಿರೀಕ್ಷಿತ ಮಟ್ಟದಲ್ಲಿ ಬ್ಯಾಟಿಂಗ್ ಮಾಡಲೇ ಇಲ್ಲ.
ದೊಡ್ಡ ಮೊತ್ತದ, ದೀರ್ಘ ಇನ್ನಿಂಗ್ಸ್ ನಿರೀಕ್ಷಿಸಿದ್ದ, ತಂಡದ ಆಧಾರವಾಗಿ ಆಡಬೇಕಾಗಿದ್ದ ರೋಹಿತ್ ಶರ್ಮಾ ಆಯ್ಕೆ ಮಂಡಳಿ ಮತ್ತು ಭಾರತದ ಕ್ರಿಕೆಟ್ ಪ್ರೇಮಿಗಳಿಗೆ ಕಳಪೆ ಪ್ರದರ್ಶನದ ಮೂಲಕ ನಿರಾಸೆ ಮೂಡಿಸಿದರು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡು, ಕಪ್ತಾನ ರೋಹಿತ್ ನಾಲ್ಕನೆಯ ಟೆಸ್ಟ್ ಪಂದ್ಯದಿಂದ ಹೊರಗೆ ಉಳಿಯಬೇಕಾಯಿತು, ಅನಿವಾರ್ಯವಾಗಿ ಬೆಂಚು ಬಿಸಿ ಮಾಡಬೇಕಾಯಿತು.
ಇದನ್ನೂ ಓದಿ: Ravi Sajangadde Column: ಭೀಮವ್ವಾ, ಬೊಂಬೆ ಹೇಳುತೈತೆ ನೀನೇ ರಾಜಕುಮಾರಿ !
ಆಗಲೇ ಆತನ ನಿವೃತ್ತಿಯ ಬಗ್ಗೆ ಊಹಾಪೋಹಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಕತೆಗಳು ಮತ್ತು ಮೀಮ್ಸ್‌ಗಳು ಹರಿದಾಡಿದವು. ಕಳಪೆ ಫಾರ್ಮ್ ಕಳಚಿ ಮತ್ತೆ ಲಯ ಕಂಡುಕೊಳ್ಳುವ ಆತ್ಮವಿಶ್ವಾಸ ರೋಹಿತ್ ಮತ್ತು ಕ್ರಿಕೆಟ್ ಪ್ರೇಮಿಗಳಿಲ್ಲಿತ್ತು. ಆರು ತಿಂಗಳ ಟೆಸ್ಟ್ ಕ್ರಿಕೆಟ್ ವಿರಾಮದ ಸಮಯದ ಬಳಿಕ ರೋಹಿತ್ ಮತ್ತೆ ನಾಯಕನಾಗಿ ಕಣಕ್ಕಿಳಿದು ರನ್ ಪೇರಿಸುವ ಮೂಲಕ ತಂಡವನ್ನು ಸಮರ್ಥವಾಗಿ ಮುನ್ನಡೆಸುವುದನ್ನು ಪ್ರೇಕ್ಷಕರು ಕಾತರದಿಂದ ಎದುರು ನೋಡುತ್ತಿದ್ದರು.
‘ಇನ್ನೂ ಕೆಲವು ಸಮಯ ಭಾರತ ತಂಡದ ಪರವಾಗಿ ನಾನು ಟೆಸ್ಟ್ ಆಡಲಿದ್ದೇನೆ’ ಎಂದು ಕೆಲ ತಿಂಗಳ ಹಿಂದೆ ಹೇಳಿದ್ದ ಅದೇ ರೋಹಿತ್ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಒಂದೆರಡು ವಾರ ಗಳಿರುವಾಗ ಹಠಾತ್ ನಿವೃತ್ತಿ ಘೋಷಿಸಿ ಎಲ್ಲರನ್ನೂ ಚಕಿತಗೊಳಿಸಿದರು! ಇಂಗ್ಲೆಂಡಿನಲ್ಲಿ ಕೊನೆಯ ಬಾರಿ ಟೆಸ್ಟ್ ಆಡಿ, ಭಾರತ ತಂಡವನ್ನು ಮುನ್ನಡೆಸಲು ಬಯಸಿದ್ದ ರೋಹಿತ್‌ಗೆ ಆಯ್ಕೆ ಸಮಿತಿಯ ಸದಸ್ಯರೊಬ್ಬರ ಮೂಲಕ ‘ ಇಂಗ್ಲೆಂಡ್ ಪ್ರವಾಸದ ಭಾರತ ತಂಡದಲ್ಲಿ ನಿಮಗೆ ಸ್ಥಾನ ಇಲ್ಲ’ ಎನ್ನುವ ಸಂದೇಶ ರವಾನಿಸಲಾಗುತ್ತದೆ.
ಅವಮಾನದ, ಅಗೌರವದ ಮುನ್ಸೂಚನೆ ಸಿಕ್ಕಿದ ಕೂಡಲೇ ರೋಹಿತ್ ಶರ್ಮಾ ನಿವೃತ್ತಿ ಘೋಷಿಸು ತ್ತಾರೆ. ಅಲ್ಲಿಗೆ ಅಶ್ವಿನ್ ನಂತರ, ಭಾರತ ತಂಡದ ಎರಡನೆಯ ಬಲಿಷ್ಠ ವಿಕೆಟ್ ಪತನವಾಗಿ ನೇಪಥ್ಯಕ್ಕೆ ಸರಿಯುತ್ತದೆ. ಕಿಂಗ್ ಕೊಹ್ಲಿಯ ಕಥೆಯೂ ಇದಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಖಂಡಿತ ವಾಗಿಯೂ ಇನ್ನೂ ಎರಡರಿಂದ ಮೂರು ವರ್ಷಗಳ ಕಾಲ ಅಥವಾ 2027ರ ವಿಶ್ವ ಟೆಸ್ಟ್ ಚಾಂಪಿ ಯನ್ ಶಿಪ್ ವರೆಗಾದರೂ ಆಡುವ ಕ್ಷಮತೆ ಹೊಂದಿರುವ, ಕ್ರಿಕೆಟ್ ಅಂಗಣದಲ್ಲಿ ಎಲ್ಲ ಸಾಮರ್ಥ್ಯ ವನ್ನೂ ಧಾರೆ ಎರೆವ ತುಡಿತವಿರುವ ಅಪರೂಪದ ಆಟಗಾರ ವಿರಾಟ್ ಕೊಹ್ಲಿ.
ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಆಡಲು ಮಾನಸಿಕ, ದೈಹಿಕ ಕ್ಷಮತೆಯ ತಯಾರಿಯನ್ನು ಕೊಹ್ಲಿ ನಡೆಸುತ್ತಿದ್ದರು. ಆ ಯೋಜನೆಯ ವಿಸ್ತೃತ ಭಾಗವಾಗಿ ತನ್ನ ಬ್ಯಾಟಿಂಗ್ ಲಯ ಕಂಡುಕೊಳ್ಳಲು, ಆಫ್ ಸ್ಟಂಪಿನ ಹೊರಗಡೆಯ ಎಸೆತವನ್ನು ಆಡಲು ಎಡವುತ್ತಿದ್ದ ಕೊಹ್ಲಿ ಅದರ ಅಭ್ಯಾಸವನ್ನು ನೆಟ್ಸ್ ನಲ್ಲಿ ಮಾಡುತ್ತಿದ್ದರು. ಇತ್ತೀಚೆಗೆ ದೆಹಲಿ ತಂಡದ ಪರ ರಣಜಿ ಪಂದ್ಯವನ್ನು ಆಡಿದರು. ‘ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮೊದಲು, ಅಲ್ಲಿನ ವಾತಾವರಣ ಮತ್ತು ಪಿಚ್‌ಗೆ ಒಂದಷ್ಟು ಹೊಂದಿ ಕೊಳ್ಳುವ ಆಲೋಚನೆಯಿಂದ ಭಾರತ ‘ಎ’ ತಂಡದ ಭಾಗವಾಗಿ ಇಂಗ್ಲೆಂಡಿನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಡಲು ಉತ್ಸುಕನಾಗಿದ್ದೇನೆ’ ಎಂದು ತನ್ನ ಆತ್ಮೀಯರೊಂದಿಗೆ ಮತ್ತು ಕೋಚ್ ಶರಣದೀಪ್ ಸಿಂಗ್ ಅವರಲ್ಲಿ ವಿರಾಟ್ ಹೇಳಿದ್ದರು.
ಯಾವಾಗ ‘ಇಂಗ್ಲೆಂಡ್ ಟೆಸ್ಟ್ ಸರಣಿಯ ಬಳಿಕ ನಿಮ್ಮನ್ನು ಟೆಸ್ಟ್ ತಂಡಕ್ಕೆ ಪರಿಗಣಿಸಲಾಗುವುದಿಲ್ಲ; ಹಾಗಾಗಿ ಸೂಕ್ತ ಸಮಯದಲ್ಲಿ ನಿವೃತ್ತಿ ಘೋಷಿಸಿ’ ಎನ್ನುವ ಒತ್ತಡವನ್ನು ಕೊಹ್ಲಿ ಮೇಲೆ ಹಾಕಲಾ ಯಿತೋ, ಆಗ ಮೈದಾನದಲ್ಲಿ ಎದುರಾಳಿಯೆದುರು ಕೆರಳುವಷ್ಟೇ ಭೀಕರವಾಗಿ ಕೆರಳಿ ಬಿಟ್ಟರು. ಅಪ್ಪಟವಾದ ಸ್ವಂತಿಕೆ ಮತ್ತು ಸ್ವಾಭಿಮಾನವನ್ನು ಪ್ರತಿ ಪಾದಿಸುವ ಕೊಹ್ಲಿ, ‘ಇಷ್ಟು ವರ್ಷಗಳ ಕಾಲ ಉತ್ತಮ ಕ್ರಿಕೆಟ್ ಆಡಿರುವ ನನ್ನ ಕ್ರಿಕೆಟ್ ಭವಿಷ್ಯವನ್ನು ಮತ್ತು ನಿವೃತ್ತಿಯನ್ನು ಯಾರ‍್ಯಾರೋ ನಿರ್ಧರಿಸುವುದು ಎಂದರೆ ಅದು ಹೇಗೆ?’ ಎಂದು ಗೌತಮ ಬುದ್ಧನ ರೀತಿಯಲ್ಲಿ ಆಲೋಚಿಸಿದರು.
ಸಂಸಾರ ಮತ್ತು ಆತ್ಮೀಯರಲ್ಲಿ ಚರ್ಚಿಸಿ, ವಾಸ್ತವ ಅರಗಿಸಿಕೊಳ್ಳಲಾಗದಿದ್ದರೂ ‘ಇನ್ಮುಂದೆ ಬಿಳಿ ದಿರಿಸು ಧರಿಸಿ ಭಾರತವನ್ನು ನಾನು ಪ್ರತಿನಿಧಿಸುವುದನ್ನು ನೀವು ನೋಡಲಾರಿರಿ, ಗುಡ್ ಬೈ’ ಎಂದು ಹೇಳಿ ಪಂದ್ಯಶ್ರೇಷ್ಠ ಎನಿಸಿಕೊಂಡರು. ಅತ್ಯಂತ ಗರಿಷ್ಠ ಫಾರ್ಮಿನಲ್ಲಿರುವ ಭಾರತ ತಂಡದ ಮೂರನೆಯ ವಿಕೆಟ್ ಪತನವಾಯಿತು. ಕ್ರಿಕೆಟ್ ಲೋಕದ ಹಲವರ ಮುಖದಲ್ಲಿ ಅಂದು ಕೊಂಡಿದ್ದನ್ನು ಸಾಧ್ಯವಾಗಿಸಿದ ಗಂಭೀರ ಮುಗುಳುನಗು!
ಈ ಎಲ್ಲಾ ಅಹಿತಕರ, ಅಷ್ಟೇನೂ ಸಮಂಜಸವಲ್ಲದ ಬೆಳವಣಿಗೆಗಳು ಯಾಕೆ ಆದವು? ಇದರ ಹಿಂದಿರುವ ಕಾಣದ ಕೈಗಳು ಯಾರದ್ದು? ಯಾರು ಶಕ್ತಿ-ಪ್ರಭಾವ ಬೀರಿದರು ಎನ್ನುವುದು ಯಕ್ಷ ಪ್ರಶ್ನೆ! ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ರಾಕೆಟ್ ಸೈನ್ಸ್ ಕಲಿತಿರಬೇಕು ಎಂದೇನು ಇಲ್ಲ; ಬದಲಾಗಿ ಒಂದಷ್ಟು ಕಾಮನ್‌ಸೆನ್ಸ್ ಉಪಯೋಗಿಸಿದರೆ ಅಷ್ಟೇ ಸಾಕು. ಉತ್ತರ ಸುಲಭ ಮತ್ತು ಸರಳ!
ರವಿಚಂದ್ರನ್ ಅಶ್ವಿನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಅನಿರೀಕ್ಷಿತ, ಅನಪೇಕ್ಷಿತ ಮತ್ತು ಅಚ್ಚರಿಯ ‘ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿ ನಿರ್ಧಾರ’ದ ಹಿಂದಿರುವ ವ್ಯಕ್ತಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೀಗೆಲ್ಲ ಯಾಕಾಯಿತು ಎಂದು ನೋಡುತ್ತಾ ಹೋದರೆ, 2027ರ ಏಕದಿನ ವಿಶ್ವಕಪ್ ವರೆಗೆ ಗೌತಮ್ ಗಂಭೀರ್ ಜೊತೆಗೆ ಬಿಸಿಸಿಐ ಒಪ್ಪಂದ ಮಾಡಿಕೊಂಡಿದೆ.
ಅಲ್ಲಿಯವರೆಗೆ ನಡೆಯುವ ಸರಣಿಗಳು ಮತ್ತು ಚಾಂಪಿಯನ್‌ಶಿಪ್ ಪಂದ್ಯಾವಳಿಗಳಲ್ಲಿ ಮುಖ್ಯ ಕೋಚ್ ಆಗಿ ಅವರು ಯಶ ಕಾಣಬಹುದು ಅಥವಾ ವಿಫಲರಾಗಬಹುದು. ಶಕ್ತಿಯಿಂದ ಮತ್ತು ಆಟಗಾರರ ಸಾಮರ್ಥ್ಯದ ಆಧಾರದ ಮೇಲೆ ತಂಡವನ್ನು ಕಟ್ಟಿ ಗೆಲ್ಲಿಸಿಕೊಂಡು ಬರುವ ಹೊಣೆ ಹೊರಬೇಕಾದ ಗಂಭೀರ್ ಅವರಲ್ಲಿ ಈ ಸದ್ಗುಣಗಳು ಕಾಣಿಸುತ್ತಿಲ್ಲ!
ಒಬ್ಬ ವ್ಯಕ್ತಿಯಾಗಿ, ಮುಖ್ಯ ಕೋಚ್ ಆಗಿ ಮೆಚ್ಚಿಕೊಳ್ಳಬಹುದಾದ, ಅನುಸರಿಸಬಹುದಾದ ಗುಣಗಳು ಅವರಲ್ಲಿ ಇಲ್ಲ ಎನ್ನುವುದು ಖರೇ. ಕ್ರಿಕೆಟ್ ಜಗತ್ತಿನ ಅಷ್ಟೂ ‘ಅಹಂ’ಗಳನ್ನು, ‘ಇಸಂ’ಗಳನ್ನು ತನ್ನೊಳಗೆ ತುಂಬಿಕೊಂಡಿರುವ ವ್ಯಕ್ತಿಯಂತೆ ಗಂಭೀರ್ ಭಾಸವಾಗುತ್ತಿದ್ದಾರೆ. ತನ್ನ ಯೋಚನೆ-ಯೋಜನೆಗಳಿಗೆ ಅಡ್ಡಿಯಾಗಿರುವ, ಸಹಮತ ನೀಡದ ಮೂವರನ್ನೂ ನಿವಾಳಿಸಿಯಾಗಿದೆ. ಹಿರಿಯ ಮತ್ತು ಅನುಭವಿ ಆಟಗಾರರು ತಂಡದ ಭಾಗವಾಗಿರುವುದರಿಂದ ತನ್ನ ನೆಚ್ಚಿನ ಆಟಗಾರರನ್ನು ತಂಡದಲ್ಲಿ ಆಡಿಸಲು ಗಂಭೀರ್‌ಗೆ ಸಾಧ್ಯವಾದಂತೆ ಕಾಣುತ್ತಿಲ್ಲ. ಇದರ ಪರಿಣಾಮ ನಮ್ಮೆಲ್ಲರ ಕಣ್ಣ ಮುಂದೆ ಕಾಣುತ್ತಿರುವ ಮೂವರ ನಿವೃತ್ತಿ ಕಥನಗಳು.
ಕಾರಣಗಳು ಏನೇ ಇರಲಿ, ಈ ಮೂವರ ಟೆಸ್ಟ್ ನಿವೃತ್ತಿ ತುಂಬಾ ಸಮಯದವರೆಗೆ ನೆನಪಿನಲ್ಲುಳಿದು ಕ್ರಿಕೆಟ್ ಅಭಿಮಾನಿಗಳನ್ನು ಕಾಡಲಿದೆ. ಕಾರಣ, ಇಡೀ ಕ್ರಿಕೆಟ್ ಜಗತ್ತೇ ಅಶ್ವಿನ್, ರೋಹಿತ್ ಮತ್ತು ಕೊಹ್ಲಿ ಇನ್ನಷ್ಟು ಕಾಲ ಟೆಸ್ಟ್ ಕ್ರಿಕೆಟ್ ಆಡುವುದನ್ನು ಬಯಸಿತ್ತು. ದಿಗ್ಗಜರೆನಿಸಿಕೊಂಡವರ ಇಂತಹ ಅಸಹನೀಯ, ಅಸಮ್ಮತ ನಿವೃತ್ತಿ ಭಾರತೀಯ ಕ್ರಿಕೆಟಿನಲ್ಲಿ ಕಾಣಲು ಸಿಗುವುದು ವಿರಳಾತಿ ವಿರಳ.
‘ನಿನಗೆ ವಯಸ್ಸಾಯಿತು, ನಿನ್ನ ಕೈಯಲ್ಲಿ ಇನ್ನು ಮೊದಲಿನಂತೆ ಆಡಲಾಗದು, ನಿನ್ನ ಆಟವನ್ನು ನಿಲ್ಲಿಸು’ ಎಂದು ಹೇಳಿಸಿಕೊಂಡು ತಂಡ ಮತ್ತು ಮೈದಾನದಿಂದ ಶಾಶ್ವತವಾಗಿ ನೇಪಥ್ಯಕ್ಕೆ ಸರಿಯುವುದಕ್ಕೆ ಮತ್ತು ‘ನೀನು ಉತ್ಕೃಷ್ಟ ಫಾರ್ಮಿನಲ್ಲಿರುವೆ. ನೀನಿನ್ನೂ ಭಾರತಕ್ಕಾಗಿ ಆಡಿ ತಂಡವನ್ನು ಗೆಲ್ಲಿಸಬೇಕು’ ಎಂಬ ಧ್ವನಿ ಸ್ಪಷ್ಟವಾಗಿ ಮಾರ್ದನಿಸುತ್ತಿರುವಾಗ ಯುವ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ಕಲ್ಪಿಸುವ ಸಲುವಾಗಿ ನಿವೃತ್ತಿಯಾಗುವುದಕ್ಕೆ ಬಹಳ ವ್ಯತ್ಯಾಸವಿದೆ.
ಸದ್ಯದ ಸಂದರ್ಭದಲ್ಲಿ ಗಂಭೀರ್ ದುರಾಲೋಚನೆ/ ದೂರಾಲೋಚನೆ ಗೆದ್ದಿರಬಹುದು. ಹಾಗೆಂದು ಈ ಮೂವರು ಹಿರಿಯರ ಅನುಪಸ್ಥಿತಿಯಲ್ಲಿ, ತನ್ನ ನೆಚ್ಚಿನ ಆಟಗಾರರನ್ನು ಆಡುವ ಬಳಗದಲ್ಲಿ ಹಾಕಿಸಿಕೊಂಡು ಪಂದ್ಯ, ಪಂದ್ಯಾವಳಿ ಗೆಲ್ಲುವುದು ಸುಲಭದ ಮಾತಲ್ಲ! ನಿಜ ಆಟ ಇನ್ನೂ ಬಾಕಿಯಿದೆ - ಭಾರತ ಕ್ರಿಕೆಟ್ ‘ಗಂಭೀರ ಮನ್ವಂತರದ ಹಾದಿ’ಯಲ್ಲಿದೆ.R Ashwin, R Sharm, V Kohli & caught bowled Gambhir. ಹೀಗಾಗಬಾರದಿತ್ತು.
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)