ಅನಂತ ಸ್ಮರಣೆ
ಜಿ.ಎಂ.ಇನಾಂದಾರ್
ಅನಂತ್ ಕುಮಾರ್ ಕೇಂದ್ರದ ಮಂತ್ರಿಯಾಗಿ 9 ವಿವಿಧ ಖಾತೆಗಳನ್ನು ನಿಭಾಯಿಸಿ, ಅಚ್ಚಳಿ ಯದ ಹೆಜ್ಜೆಗುರುತುಗಳನ್ನು ಮೂಡಿಸಿದರು. ಇವತ್ತು ಕರ್ನಾಟಕ ಹಾಗೂ ಬೆಂಗಳೂರು ದೇಶದ ಟೆಕ್ ರಾಜಧಾನಿಯಾಗಲು ಅವರು ನೀಡಿದ ಕೊಡುಗೆಗಳು ಕಾರಣವಾಗಿವೆ.
ಅನಂತ್ ಕುಮಾರ್ ಈ ದೇಶ ಕಂಡ ವಿಶಿಷ್ಟ ರಾಜಕಾರಣಿ, ನೇತಾರ, ಮುತ್ಸದ್ದಿ. ಇಂದು (ಸೆ.22) ಅವರ ಜನ್ಮದಿನ. ಇದರ ಆಚರಣೆಯು ಬೆಂಗಳೂರಿನ ‘ಅದಮ್ಯ ಚೇತನ’ ಸಂಸ್ಥೆಯ ಎದುರಿಗೆ ಇರುವ ದೋಂಡುಸಾ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಅವರ ವ್ಯಕ್ತಿತ್ವದ ಕೆಲವು ಝಲಕ್‌ಗಳನ್ನು ಇಲ್ಲಿ ಅವಲೋಕಿಸೋಣ.
ಅನಂತ್ ಕುಮಾರ್ ಅತ್ಯಂತ ಸಾಮಾನ್ಯ ಕುಟುಂಬದಿಂದ ರಾಜಕಾರಣಕ್ಕೆ ಕಾಲಿಟ್ಟು ಯಶಸ್ವಿಯಾದ ರಾಜಕಾರಣಿ. ಬೇರುಮಟ್ಟದಿಂದಲೇ ದಕ್ಕಿದ ದಟ್ಟ ಜೀವನಾನುಭವವು ಅವರ ಯಶಸ್ಸಿಗೆ ಕಾರಣ ಎಂದರೆ ಅತಿಶಯೋಕ್ತಿಯಲ್ಲ. ಅನಂತ್ ಕುಮಾರ್, ಆರೆಸ್ಸೆಸ್ ಹಾಗೂ ಎಬಿವಿಪಿ ಗರಡಿಗಳಲ್ಲಿ ತಯಾರಾದ ಕಾರ್ಯಕರ್ತ. ಹಾಗಾಗಿ ಅವರು ಅನೇಕ ಸಂದರ್ಭಗಳಲ್ಲಿ ಪ್ರತಿಕ್ರಿಯಿಸಿದ ಪರಿ ಉಳಿದ ರಾಜಕಾರಣಿಗಳಿಗಿಂತ ಭಿನ್ನ.
ಅನಂತ್ ಕುಮಾರ್ ಬಿಜೆಪಿಯನ್ನು ಪ್ರವೇಶಿಸಿದ್ದು 1987 ರಲ್ಲಿ. ಅದಾದ ನಂತರ ಪ್ರತಿ ಚುನಾವಣೆ ಯಲ್ಲಿ ಟಿಕೆಟ್ ನೀಡುವಾಗ ಮಹತ್ವದ ಪಾತ್ರ ವಹಿಸುತ್ತಿದ್ದ ಅವರು, ತಮಗೆಂದೂ ಟಿಕೆಟ್ ಕೊಟ್ಟುಕೊಂಡಿರಲಿಲ್ಲ. ಆದರೆ 1996ರ ಲೋಕಸಭೆ ಚುನಾವಣೆಗೆ ಅವರಿಗೆ ಟಿಕೆಟ್ ಘೋಷಣೆ ಯಾದಾಗ ಅದು ಅವರಿಗೆ ಅನಿರೀಕ್ಷಿತವೇ ಆಗಿತ್ತು. ಆಗಷ್ಟೇ ತಮ್ಮ ತಾಯಿ ಗಿರಿಜಾ ಶಾಸ್ತ್ರಿಯವರ ನಿಧನದ ನಂತರದ ಕಾರ್ಯಗಳಲ್ಲಿ ಅನಂತ್ ಕುಮಾರ್ ವ್ಯಸ್ತರಾಗಿದ್ದರು. ಅವರ ತಾಯಿಯ ವೈಕುಂಠ ಸಮಾರಾಧನೆಗೆ ಬಂದ ಬಿಜೆಪಿಯ ಎಲ್ಲಾ ನಾಯಕರು, ಅನಂತ್ ಕುಮಾರ್ ಅವರು ಚುನಾವಣೆಗೆ ನಿಲ್ಲುವ ಕುರಿತು ಸರ್ವಾನುಮತದಿಂದ ಘೋಷಣೆ ಮಾಡಿದರು.
ಇದನ್ನೂ ಓದಿ: Yagati Raghu Naadig Column: ಜನಸೇವೆಯ ನೆಪದಲ್ಲಿ ಕಳ್ಳಬೆಕ್ಕಿನ ಶಯನಸೇವೆ...
ಆ ಚುನಾವಣೆಯಲ್ಲಿನ ಗೆಲುವಿನ ನಂತರ ಅನಂತ್ ಕುಮಾರ್ ಸೋತಿದ್ದೇ ಇಲ್ಲ. ಟಿಕೆಟ್‌ಗಾಗಿ ದಿನ ಬೆಳಗಾದರೆ ಜಗಳ ನಡೆಯುವ ಈ ಕಾಲದಲ್ಲಿ, 18 ವರ್ಷಗಳಷ್ಟು ಸುದೀರ್ಘ ಕಾಲ ಟಿಕೆಟ್‌ಗಾಗಿ ಆಶಿಸದೆ ಅವರು ಸಂಘಟನೆಯ ಕೆಲಸದಲ್ಲಿ ಸಕ್ರಿಯರಾಗಿದ್ದು ಅಪರೂಪವೇ ಸರಿ.
ಅನಂತ್ ಕುಮಾರ್ ಕೇಂದ್ರದ ಮಂತ್ರಿಯಾಗಿ 9 ವಿವಿಧ ಖಾತೆಗಳನ್ನು ನಿಭಾಯಿಸಿದರು, ಪ್ರತಿ ಯೊಂದು ಖಾತೆಯಲ್ಲೂ ಅಚ್ಚಳಿಯದ ಹೆಜ್ಜೆಗುರುತುಗಳನ್ನು ಮೂಡಿಸಿದರು. ದೇಶಕ್ಕೆ ಮತ್ತು ಕರ್ನಾಟಕಕ್ಕೆ ಅವರು ನೀಡಿದ ಕೊಡುಗೆಗಳು ತುಂಬಾ ಮಹತ್ವದ್ದಾಗಿವೆ. ಇವತ್ತು ಕರ್ನಾಟಕ ಹಾಗೂ ಬೆಂಗಳೂರು ದೇಶದ ಟೆಕ್ ರಾಜಧಾನಿಯಾಗಲು ಇಲ್ಲಿಯ ಮೂರು ಪ್ರಮುಖ ಮೂಲ ಸೌಕರ್ಯಗಳು ಕಾರಣವಾಗಿವೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೆಟ್ರೋ ಹಾಗೂ ಸುವರ್ಣ ಚತುಷ್ಪಥ ಹೆದ್ದಾರಿ ಈ ಮೂರು ಮೂಲಸೌಕರ್ಯಗಳಿಗೆ ಅಡಿಪಾಯ ಹಾಕಿದ್ದು ಅನಂತ್ ಕುಮಾರ್ ಅವರೇ ಎನ್ನುವುದು ವಿಶೇಷ.
ಅನಂತ್ ಕುಮಾರ್ ಮಂತ್ರಿಯಾದ ತಕ್ಷಣ ತಮ್ಮ ಗೆಳೆಯರಾದ ಡಾ.ವಾಮನಾಚಾರ್ಯ, ವೈ.ಬಿ.ರಾಮಕೃಷ್ಣ, ಎಂ.ಪಿ.ಕುಮಾರ್, ಎಂ.ಎಚ್.ಶ್ರೀಧರ್ ಮುಂತಾದವರ ಎದುರು, ದೇಶದ ಪ್ರಗತಿಗೆ ಕಾರಣವಾಗಬಹುದಾದ ಯೋಜನೆಗಳ ಬಗೆಗೆ ಚಿಂತನ-ಮಂಥನ ನಡೆಸಿದರು.
ದೇಶದ ಪ್ರಮುಖ ನಗರಗಳನ್ನು ಜೋಡಿಸುವ ಹೆದ್ದಾರಿಯ ನಿರ್ಮಾಣದ ಜತೆಗೆ, ಗ್ರಾಮೀಣ ಪ್ರದೇಶ ಗಳನ್ನು ಈ ಜಾಲಕ್ಕೆ ಜೋಡಿಸುವ ಅವಶ್ಯಕತೆ ಇರುವುದೂ ಆ ಚರ್ಚೆಯ ವೇಳೆ ತಿಳಿದು ಬಂತು. ಈ ಕುರಿತು ಒಂದು ‘ಪವರ್ ಪಾಯಿಂಟ್ ಪ್ರೆಸೆಂಟೇಷನ್’ ಅನ್ನು ವೈ.ಬಿ. ರಾಮಕೃಷ್ಣ ಸಿದ್ಧಪಡಿಸಿ ಕೊಟ್ಟರು. ಆಗ ಸುವರ್ಣ ಚತುಷ್ಪಥ ಹೆದ್ದಾರಿ ಸಮಿತಿಯ ನೇತೃತ್ವ ವಹಿಸಿದ್ದವರು ಜಸ್ವಂತ್ ಸಿಂಗ್. ಈ ಸಮಿತಿಯಲ್ಲಿ ಅನಂತ್ ಕುಮಾರ್ ಕೂಡ ಸದಸ್ಯರಾಗಿದ್ದರು.
ಮುಂಚಿನ ಯೋಜನೆಯಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಶಿಲುಬೆ ಆಕಾರದ ಯೋಜನೆಯ ಕರಡು ರೂಪುಗೊಂಡಿತ್ತು. ಇದರ ನೆರಳು ಕೂಡ ಕರ್ನಾಟಕದ ಮೇಲೆ ಬೀಳುತ್ತಿರಲಿಲ್ಲ. ಇದರ ಬದಲು ನಾಲ್ಕು ದಿಕ್ಕುಗಳನ್ನು ಆಯತಾಕಾರದಲ್ಲಿ ಬೆಸೆಯುವ ಸುವರ್ಣ ಚತುಷ್ಪಥ ಹೆದ್ದಾರಿ ಹೆಚ್ಚು ಉಪಯುಕ್ತವೆಂದು ಅನಂತ್ ಕುಮಾರ್ ವಾದಿಸಿ, ಜಸ್ವಂತ್ ಸಿಂಗರ ಮನವೊಲಿಸುವಲ್ಲಿ ಯಶಸ್ವಿಯಾದರು.
ಹೀಗೆ ನಿರ್ಮಾಣವಾದ ಸುವರ್ಣ ಚತುಷ್ಪಥ ಹೆದ್ದಾರಿಯು ಕರ್ನಾಟಕದಲ್ಲಿ 706 ಕಿಲೋಮೀಟರ್ ಕ್ರಮಿಸಿ, ಕರ್ನಾಟಕದ ಪ್ರಗತಿಗೆ ಕಾರಣವಾಗಿದೆ. ಅನಂತ್ ಕುಮಾರ್ ಕೇಂದ್ರ ವಿಮಾನಯಾನ ಖಾತೆ ಸಚಿವರಾಗಿದ್ದಾಗ, ಆಗಿನ ಮುಖ್ಯಮಂತ್ರಿಗಳಾದ ಜೆ.ಎಚ್ .ಪಟೇಲರ ಜತೆಗಿನ M.O.U. ಬೆಂಗಳೂರಿನ ಹೊಸ ವಿಮಾನ ನಿಲ್ದಾಣಕ್ಕೆ ಅಡಿಗಲ್ಲಾಯಿತು. ಈ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡಲು ಕೂಡ ಅವರೇ ಕಾರಣ.
2001ರಲ್ಲಿ ಅನಂತ್ ಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದಾಗ, ಬೆಂಗಳೂರಿನಂಥ ಬೆಳೆಯು ತ್ತಿರುವ ನಗರಕ್ಕೆ ಮೆಟ್ರೋ ಸಾರಿಗೆ ತುಂಬಾ ಅವಶ್ಯಕ ಎಂಬುದು ಅವರಿಗಾಗಲೇ ಮನವರಿಕೆ ಯಾಗಿತ್ತು. ಬೆನ್ನು ಬಿಡದ ತ್ರಿವಿಕ್ರಮನಂತೆ ಮೆಟ್ರೋ ಹಿಂದೆ ಬಿದ್ದ ಅನಂತ್ ಕುಮಾರ್, ಯೋಜನಾ ಆಯೋಗದ ಅನುಮತಿ ಸಿಗುವವರೆಗೆ ವಿರಮಿಸಿರಲಿಲ್ಲ.
2001ರಲ್ಲಿ ಅನಂತ್ ಕುಮಾರ್ ಮತ್ತು ಎಸ್.ಎಂ.ಕೃಷ್ಣ (ಅಂದಿನ ಮುಖ್ಯಮಂತ್ರಿ) ಅವರಿಗೆ ವಿಧಾನಸೌಧದಲ್ಲಿ ಪ್ರಾತ್ಯಕ್ಷಿಕೆಯೊಂದನ್ನು ಕೊಡಲಾಗಿತ್ತು. ಆಗ Bangalore Mass Rapid Transit Ltd(BMRTL) ಎಂಬ ರಾಜ್ಯ ಸರಕಾರದ ಸಂಸ್ಥೆಗೆ ಬೆಂಗಳೂರಿಗೆ ಮೆಟ್ರೋವನ್ನು ಒದಗಿಸುವ ಹೊಣೆ ಯನ್ನು ವಹಿಸಲಾಗಿತ್ತು. ಈ ಸಂಸ್ಥೆಯು ಯು.ಬಿ.ಗ್ರೂಪ್ ಜತೆಗೆ ಒಪ್ಪಂದ ಮಾಡಿಕೊಂಡು ಬೆಂಗಳೂರಿಗೆ ಮೆಟ್ರೋವನ್ನು ತರಲು ಯೋಚಿಸುತ್ತಿತ್ತು.
ಆದರೆ ಈ ಇಡೀ ಯೋಜನೆಯಲ್ಲಿ ಯು.ಬಿ.ಗ್ರೂಪ್‌ನವರು ಸೂಚಿಸಿದ್ದ ಮಾರ್ಗ ಹಾಗೂ ಪ್ರಸ್ತಾವಿತ ಪ್ರಯಾಣದರಗಳು ತುಂಬಾ ದುಬಾರಿಯಾಗಿದ್ದವು. ಅನಂತ್ ಕುಮಾರ್ ಅವರು ನಗರಾಭಿವೃದ್ಧಿ ಸಚಿವರಾದ ಮೇಲೆ ಈ ಒಪ್ಪಂದವನ್ನು ರದ್ದು ಮಾಡಿದರು. ದೆಹಲಿ ಮೆಟ್ರೋದ ಪ್ರಮುಖರಾಗಿದ್ದ ಶ್ರೀಧರನ್ ಅವರ ಮುಖಾಂತರ ಬೆಂಗಳೂರಿಗೆ ಹೊಸ ಯೋಜನೆಯನ್ನೇ ಮಾಡಿಸಿದ್ದರು ಹಾಗೂ ಇದಕ್ಕೆ ರಾಜ್ಯದಿಂದ ಮತ್ತು ಕೇಂದ್ರದಿಂದ ಸಮಪ್ರಮಾಣದಲ್ಲಿ ಈಕ್ವಿಟಿ ಹೂಡಿಕೆ ಮಾಡಿಸಿ, ಉಳಿದ ಹಣವನ್ನು Japan Bank of International Co-operation- JBIC ನಿಂದ ಅತಿಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡುವುದೆಂದು ನಿರ್ಧರಿಸಲಾಯಿತು.
ರಾಜ್ಯ ಸರಕಾರವು ಅದಾಗಲೇ ಬೆಂಗಳೂರಿನಲ್ಲಿ ಮಾರಾಟವಾಗುವ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ‘ಸೆಸ್’ ವಿಧಿಸಿ ಕೂಡಿಟ್ಟಿದ್ದ ಅಂದಾಜು 700 ಕೋಟಿ ರುಪಾಯಿಗಳನ್ನು ರಾಜ್ಯದ ಪಾಲಾಗಿ ಹೂಡಿಕೆಮಾಡಲು ಯೋಚಿಸಲಾಯಿತು. ಹೀಗೆ ನಾಡು-ನುಡಿ, ನೆಲ-ಜಲದ ಬಗ್ಗೆ ಸದಾ ತುಡಿಯು ತ್ತಿದ್ದ ಒಬ್ಬ ವಿಶಿಷ್ಟ ಮುತ್ಸದ್ದಿಯಾಗಿ ಅನಂತ್ ಕುಮಾರ್ ಸದಾ ನಮ್ಮ ಮುಂದೆ ಕಾಣುತ್ತಿರುತ್ತಾರೆ.
ಅನಂತ್ ಕುಮಾರ್ ನಮ್ಮನ್ನು ಅಗಲಿ 7 ವರ್ಷಗಳಾದರೂ, ಇವತ್ತಿಗೂ ಅನೇಕ ಸಂದರ್ಭಗಳಲ್ಲಿ ‘ಅನಂತ್ ಕುಮಾರ್ ಅವರು ಇರಬೇಕಿತ್ತು’ ಅನ್ನಿಸುವುದು ಸುಳ್ಳಲ್ಲ.
(ಲೇಖಕರು ಅನಂತ್ ಕುಮಾರ್‌ರವರ ಮಾಜಿ ವಿಶೇಷ ಕರ್ತವ್ಯಾಧಿಕಾರಿ)