ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yagati Raghu Naadig Column: ಜನಸೇವೆಯ ನೆಪದಲ್ಲಿ ಕಳ್ಳಬೆಕ್ಕಿನ ಶಯನಸೇವೆ...

ಅದಕ್ಕೆ ಬಾಯಿಬಿಡದ ಅವಧೂತರು, ಹಾಗೇ ಬೀದಿ ಬಾಗಿಲ ಕಡೆಗೆ ಬೆರಳು ತೋರಿದರು. ಅಂತೆಯೇ ತಿರುಗಿದ ಕಳ್ಳಬೆಕ್ಕು ಅದಾಗಲೇ ಅಲ್ಲಿಗೆ ಬಂದಿದ್ದ ವ್ಯಕ್ತಿಯನ್ನು ಕಂಡು ಬೆವರತೊಡಗಿತು. ಅದು ಬೇರಾರೂ ಅಲ್ಲ, ಭಾಷಣ ಮಾಡುತ್ತಿದ್ದ ಕಳ್ಳಬೆಕ್ಕಿಗೆ ಕೆಲ ಹೊತ್ತಿನ ಮುಂಚೆ ಹಿಡಿಶಾಪ ಹಾಕಿ ನೆಟಿಗೆ ಮುರಿದಾಕೆ! ಬೇರೇನೋ ನಿರೀಕ್ಷೆಯೊಂದಿಗೆ ಅವಧೂತರಲ್ಲಿಗೆ ಬಂದಿದ್ದ ಕಳ್ಳಬೆಕ್ಕಿಗೆ ಮತ್ತೇನೂ ಮಾತನಾಡಲಾಗದೆ ದುರ್ದಾನ ತೆಗೆದುಕೊಂಡಂತೆ ಜಾಗ ಖಾಲಿ ಮಾಡಿತು...!

ಜನಸೇವೆಯ ನೆಪದಲ್ಲಿ ಕಳ್ಳಬೆಕ್ಕಿನ ಶಯನಸೇವೆ...

-

ರಸದೌತಣ (ಭಾಗ-18)

naadigru@gmail.com

ಅವಧೂತರ ಶಿಷ್ಯರೆಲ್ಲರಿಗೂ ನಿಜಕ್ಕೂ ಅಚ್ಚರಿಯಾಗಿತ್ತು. ‘ಭರ್’ ಅಂತ ಧೂಳೆಬ್ಬಿಸಿಕೊಂಡು ಬಂದ ಕಾರಿನಿಂದಿಳಿದು, ಜನರೆದುರು ಹಲ್ಲುಗಿಂಜುತ್ತಾ, ಹುಸಿನಗೆ ಬೀರುತ್ತಾ, ಸಂತೆಯ ಮಾಳದಲ್ಲಿ ಹಾಕಲಾಗಿದ್ದ ಪೆಂಡಾಲನ್ನು ಏರಿದ ಆಸಾಮಿಯೆಡೆಗೆ ಅವಧೂತರು ಬೆರಳು ಮಾಡಿ, “ಬಂತು ನೋಡಿ... ಅದೇ ಕಳ್ಳಬೆಕ್ಕು" ಎಂದಿದ್ದು ಶಿಷ್ಯರನ್ನು ಮತ್ತೊಮ್ಮೆ ಗೊಂದಲಕ್ಕೆ ಕೆಡವಿತ್ತು. ಅವಧೂತರು ಶಾರದೆಯ ಕಥನವನ್ನು ಶುರುಮಾಡಿದಾಗಿನಿಂದ ಮೊದಲ್ಗೊಂಡು ಅಂದಂದಿನ ಭಾಗವನ್ನು ಕೇಳುವಾಗಲೂ, ಯಾರ‍್ಯಾರನ್ನೋ ಕಣ್ಣಮುಂದೆ ಚಿತ್ರಿಸಿಕೊಂಡು ‘ಶಾರದೆಗೆ ಇನ್ನಿಲ್ಲದ ಕಾಟ ಕೊಟ್ಟ ಕಳ್ಳಬೆಕ್ಕು ಇದೇನೇ...’ ಅಂತ ಲೆಕ್ಕ ಹಾಕಿದ್ದ ಶಿಷ್ಯರಿಗೆ, ಬೇರೊಂದು ರೂಪದಲ್ಲಿ ಕಳ್ಳಬೆಕ್ಕಿನ ದರ್ಶನವಾಗಿತ್ತು. ಹೀಗಾಗಿ ಅಚ್ಚರಿಯಾಗಿದ್ದು ಸಹಜವೇ!

ವೇದಿಕೆಯೇರಿದ್ದ ಕಳ್ಳಬೆಕ್ಕಿನ ಕಡೆಗೆ ತೋರಿಸುತ್ತಾ ಹೊಸ ಶಿಷ್ಯರೊಬ್ಬರು ಅವಧೂತರನ್ನು ಉದ್ದೇಶಿಸಿ ಏನೋ ಹೇಳಲು ಹವಣಿಸಿದಾಗ, “ಕೊಂಚ ಸುಮ್ಮನಿರಿ, ಅವರ ಭಾಷಣ ಕೇಳಿಸಿಕೊಳ್ಳಿ" ಎನ್ನುವಂತೆ ಅವಧೂತರು ಮೌನವಾಗೇ ಸೂಚಿಸಿದರು.

“ಈಗ ನಮ್ಮ ನಾಯಕರು ಜನರನ್ನುದ್ದೇಶಿಸಿ ನಾಲ್ಕು ಮಾತಾಡಬೇಕೆಂದು ಪ್ರಾರ್ಥಿಸುತ್ತೇನೆ" ಎಂದು ಸ್ಥಳೀಯ ಪುಢಾರಿಯೊಬ್ಬ ಮೈಕಿನಲ್ಲಿ ಪಲುಕಿ, ಮೈ ಕುಲುಕಿ, ವೇದಿಕೆಯ ಪಕ್ಕಕ್ಕೆ ಬಂದು ನಿಂತ. ಮತ್ತದೇ ನಾಜೂಕಯ್ಯನ ಶೈಲಿಯಲ್ಲಿ ಹುಸಿನಗೆ ಬೀರುತ್ತಾ ಎದ್ದು ನಿಂತ ಕಳ್ಳಬೆಕ್ಕು, ಗಂಟಲು ಸರಿಮಾಡಿಕೊಂಡು, “ನನಗೆ ನೀವು ಬೇರೆಯಲ್ಲ, ನನ್ನ ಮಕ್ಕಳು ಬೇರೆಯಲ್ಲ. ಜನಸೇವೆಯೇ ದೇವರ ಸೇವೆ ಅಂತ ನಂಬಿರೋ ರಾಜಕೀಯ ಕುಟುಂಬ ನಮ್ಮದು. ನಿಮ್ಮೆಲ್ಲರ ಕಣ್ಣೀರು ಒರೆಸಿ, ಹೊಟ್ಟೆಗೆ ತಂಪೆರೆಯೋ ತನಕ ನಾವು ವಿಶ್ರಮಿಸೋದಿಲ್ಲ. ಈ ಬಾರಿಯ ಚುನಾವಣೆಯಲ್ಲೂ ನೀವು ನಮ್ಮ ಅಭ್ಯರ್ಥಿಗೇ ಮತ ಚಲಾಯಿಸಿ, ನಿಮ್ಮೆಲ್ಲರ ಸೇವೆಗೆ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಕೋರು ತ್ತೇನೆ...." ಅಂತ ಪುಟಗಟ್ಟಲೆ ಪುಂಗತೊಡಗಿತು.

ಇದನ್ನೂ ಓದಿ: Yagati Raghu Naadig Column: ಅವಧೂತರ ಕಾಲಿಗೇ ತೊಡರುಹಾಕಿಕೊಂಡ ಕಳ್ಳಬೆಕ್ಕು

ಭಾಷಣ ಮುಂದುವರಿದಿತ್ತು, ಆದರೆ ನಡುವೆಯೇ “ನೀನು ನಮ್ಮ ಕಣ್ಣೀರು ಒರುಸ್ತೀಯಾ... ನಮ್ ಒಟ್ಟೇನಾ ತಣ್ಣಗೆ ಮಾಡ್ತೀಯಾ... ನಿನ್ ನೆಗೆದುಬಿದ್ ಹೋಗಾ..." ಎಂಬ ಕೀರಲುದನಿ ಎಡಪಕ್ಕ ದಿಂದ ತೇಲಿಬಂತು. ಕೆಲಕ್ಷಣದ ಮುಂಚೆ ಅವಧೂತರನ್ನು ಅದೇನೋ ಕೇಳಲು ಹೊರಟಿದ್ದ ಹೊಸ ಶಿಷ್ಯರು ಆ ದನಿ ಬಂದತ್ತ ತಿರುಗಿ ನೋಡಿದರು, ಅಷ್ಟೇ! ಹಾಗೆ ಹೇಳಿದ್ದು ಒಬ್ಬ ಹಳ್ಳಿಯ ಹೆಂಗಸು. ಅತ್ತ ನಾಯಕರು ಭಾಷಣ ಬಿಗಿಯುತ್ತಿದ್ದರೆ, ಇತ್ತ ಈಕೆ ಆತನ ಪ್ರತಿಮಾತಿಗೂ ಶಪಿಸುತ್ತಾ ನೆಟಿಗೆ ಮುರಿಯುತ್ತಿದ್ದಳು. ‘ಈಕೆಯನ್ನು ಎಲ್ಲೋ ನೋಡಿದ ಹಾಗಿದೆಯಲ್ಲಾ?’ ಎಂದು ಹೊಸ ಶಿಷ್ಯರು ಗೊಣಗಿ ಕೊಂಡಾಗ, “ಸರಿಯಾಗಿ ದಿಟ್ಟಿಸಿ ನೋಡಿ, ಅವಳ್ಯಾರೆಂದು ಗೊತ್ತಾಗುತ್ತೆ..." ಎಂಬ ದನಿ ತೇಲಿಬಂತು ಅವರ ಬಲಪಕ್ಕದಿಂದ. ಹಾಗಂದಿದ್ದು ಸಾಕ್ಷಾತ್ ಅವಧೂತರೇ!

ಹೊಸ ಶಿಷ್ಯರು ಮತ್ತೊಮ್ಮೆ ಎಡಪಕ್ಕಕ್ಕೆ ತಿರುಗಿ, ಹಾಗೆ ಶಪಿಸುತ್ತಿದ್ದ ಮಹಿಳೆಯ ಮೇಲೆಯೇ ದೃಷ್ಟಿಯನ್ನು ಕೀಲಿಸಿದರು. ಅದೇನೋ ಹೊಳೆದಂತಾಗಿ, ಅವಧೂತರೆಡೆಗೆ ತಿರುಗಿ “ಅರೆ! ಈಕೆ ಸ್ವಲ್ಪ ಹೊತ್ತಿನ ಮುಂಚೆ ಅರಳೀಕಟ್ಟೆಯ ಬಳಿ ನಿಮ್ಮ ಬಳಿ ಅಹವಾಲು ಹೇಳಿಕೊಂಡಾಕೆಯಲ್ವಾ ಗುರುಗಳೇ..?!! ಎಂದರು.

ಅದಕ್ಕೆ ಅವಧೂತರು, “ಅಷ್ಟೇನಾ ಸ್ವಾಮೀ, ನಂತರ ಏನಾಯ್ತು? ನೆನಪಿಸಿಕೊಳ್ಳಿ ನೋಡೋಣ?" ಎಂದು ಲಘುವಾಗಿ ಸವಾಲೆಸೆದರು.

ಕೆಲ ಹೊತ್ತಿನಷ್ಟು ಹಿಂದಕ್ಕೆ ಜಾರಿದರು ಶಿಷ್ಯರು. ಈ ಆರ್ತ ಮಹಿಳೆ ತನ್ನ ಅಳಲನ್ನು ಹೇಳಿಕೊಳ್ಳುವುದಕ್ಕೆ ಮುಂಚೆಯೇ ಅವಧೂತರು, “ನಿನ್ನ ಜಮೀನನ್ನು ನುಂಗಿದವನು ಇನ್ನೇನು ಇಲ್ಲಿಗೇ ಬರ್ತಾನೆ ತಾಯಿ, ಅವನಿಂದ ಅದನ್ನು ಕಕ್ಕಿಸುತ್ತೇನೆ ಬಿಡು" ಎಂದು ಆಕೆಗೆ ಅಭಯ ವಿತ್ತಿದ್ದು, ಅದಕ್ಕೆ ಪ್ರತಿಯಾಗಿ ಆ ಮಹಿಳೆ, “ನನ್ನ ಪ್ರಾರ್ತ್‌ನೇನ ಕೇಳಿಸ್ಕಂಡವ್ನಂಗೆ ನೀನೇ ಇಲ್ಲಿಗೆ ಬಂದ್‌ಬುಟ್ಟು ಒಂದೇ ಕಿತ್ತಾ ಎಲ್ಲಾ ನೋವ್ನೂ ಒರೆಸಿ ಹಾಕಿ ಬಿಟ್ಯಲ್ಲೋ ನನ್ ತಂದೇ..." ಎಂದು ಕೃತಜ್ಞತೆ ಸಲ್ಲಿಸಿದ್ದು ಆ ಶಿಷ್ಯರಿಗೆ ನೆನಪಾಯಿತು. ಆನಂದ- ಆಶ್ಚರ್ಯಗಳಿಂದ ಸಣ್ಣಗೆ ಬೆವರ ತೊಡಗಿದ ಆ ಶಿಷ್ಯರು, “ಹಾಗಾದ್ರೆ ಗುರುಗಳೇ, ವೇದಿಕೆಯ ಮೇಲಿರೋ ಆ ಕಳ್ಳಬೆಕ್ಕು ಈ ಮಹಿಳೆಗೂ...." ಎಂದು ಏನೋ ಹೇಳುವವರಿದ್ದರು. ಅವರ ಬಾಯಿಯ ಮೇಲೆ ಕೈಯಿಟ್ಟು, ಮಾತನ್ನು ಅಷ್ಟಕ್ಕೇ ‘ಬಂದ್’ ಮಾಡಿಸಿದ ಅವಧೂತರು, ‘ಹೌದು’ ಎನ್ನುವಂತೆ ಕಣ್ಣರೆಪ್ಪೆಯನ್ನಷ್ಟೇ ಬಡಿದು ಇಶಾರೆ ಮಾಡಿದರು. ಅದು ಜನದಟ್ಟಣೆಯಿರುವ ಜಾಗ ಎಂಬುದನ್ನೂ ಮರೆತು ಆ ಶಿಷ್ಯರು ಅನಾಮತ್ತಾಗಿ ಅವಧೂತರಿಗೆ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟರು. ತಮ್ಮ ಜತೆಗಿರುವ ಈ ‘ಚೇತನ’ ಸಾಮಾನ್ಯದ್ದಲ್ಲ ಎಂಬ ಸತ್ಯವು ಅರಿವಾಗಿದ್ದಕ್ಕೆ ಶಿಷ್ಯರಿಂದ ಹೊಮ್ಮಿದ ವರ್ತನೆಯದು!

ನಿಜಾರ್ಥದ ಅಧ್ಯಾತ್ಮ ಸಾಧಕರು ಹಾಗೆಯೇ. ಅವರು ತಮ್ಮ ಸಾಧನೆಯನ್ನು, ಅದರಿಂದ ದಕ್ಕಿಸಿಕೊಂಡಿರುವ ಶಕ್ತಿಯನ್ನು ಜಗತ್ತಿನ ಎದುರು ‘ಟಾಂ ಟಾಂ’ ಹೊಡೆಯಲಿಕ್ಕೆ ಹೋಗುವುದಿಲ್ಲ. ಆದರೆ, ಆಧ್ಯಾತ್ಮಿಕ ಸಾಧನೆಗೆಂದು ತಮ್ಮ ತೆಕ್ಕೆಗೆ ಸೇರಿರುವ ಶಿಷ್ಯರಿಗೆ ಕೆಲವಷ್ಟು ‘ಜಗನ್ನಾಟಕ’ ಗಳನ್ನು ಪ್ರತ್ಯಕ್ಷ ತೋರಿಸಲು ಅವಧೂತರು ಆಗಾಗ ಇಂಥ ‘ಪ್ರಾತ್ಯಕ್ಷಿಕೆ’ಗಳನ್ನು ಏರ್ಪಡಿಸುತ್ತಿದ್ದರು. ಮುಂಜಾನೆಯ ಸ್ನಾನ-ಧ್ಯಾನ-ಉಪಾಹಾರಗಳನ್ನು ಮುಗಿಸಿದ ನಂತರ, ಏನೊಂದೂ ಸೂಚನೆ ನೀಡದೆ ಅರಳೀಕಟ್ಟೆಯ ಬಳಿಗೆ ಅವಧೂತರು ಧಾವಿಸಿದ್ದು, ತರುವಾಯದಲ್ಲಿ ಶಿಷ್ಯರನ್ನು ಅಲ್ಲಿಗೇ ಕರೆಸಿಕೊಂಡಿದ್ದು ಅಂಥದೊಂದು ‘ಪ್ರಾತ್ಯಕ್ಷಿಕೆ’ಯಾಗಿತ್ತ್ತು! ಆದರೆ ಇವ್ಯಾವುದೂ ‘ಪ್ರಜ್ಞಾಪೂರ್ವಕ’ ಕಸರತ್ತುಗಳಾಗಿರದೆ ಭಗವಂತನೇ ಸಜ್ಜುಗೊಳಿಸಿದ ರಂಗಸಜ್ಜಿಕೆಗಳಾಗಿದ್ದವು...

ಏನನ್ನೋ ಹೇಳಲು ಹವಣಿಸಿದ ಶಿಷ್ಯರ ಬಾಯನ್ನು ಅವಧೂತರು ಹಾಗೆ ‘ಬಂದ್’ ಮಾಡಿಸಿದ ಉದ್ದೇಶ, ‘ಮುಂದಿನದು ಇಲ್ಲಿಬೇಡ, ತುಂಬಾ ಜನರಿದ್ದಾರೆ. ಮನೆಯಲ್ಲಿ ವಿವರಿಸುವೆ...’ ಎಂಬುದರ ಸೂಚಕವಾಗಿತ್ತು. ಈ ಸೂಕ್ಷ್ಮವು ಅರ್ಥವಾಗಿ, ಎಲ್ಲರೂ ಮನೆಯ ಕಡೆಗೆ ಹೊರಟರು.

ಮನೆಯ ಬೀದಿ ಬಾಗಿಲನ್ನು ತೆರೆದುಕೊಂಡು ಇನ್ನೂ ಒಳಗೆ ಅಡಿಯಿಡುತ್ತಿರುವಾಗಲೇ ಅವಧೂತರು, “ಬಾಯಾರಿತು ಎಂದು ಬಾವಿ ನೀರಿಗೆ ಪೋದೆ, ಬಾವಿ ಜಲ ಬತ್ತಿ ಬರಿದಾಯ್ತೋ ಹರಿಯೇ..." ಎಂಬ ಪುರಂದರ ದಾಸರ ಗೀತೆಯೊಂದರ ಸಾಲನ್ನು ಹಜಾರದವರೆಗೂ ಜೋರಾಗಿ ಗುನುಗಿಕೊಂಡು ಬಂದರು! ಬಿಸಿಬಿಸಿ ಕಾಫಿ ಕುಡಿಯಬೇಕು ಎನಿಸಿದಾಗೆಲ್ಲಾ ಅಥವಾ ಹೊರಗಿನಿಂದ ಮನೆಗೆ ಬಂದಾಗಲೆಲ್ಲಾ ಈ ಸಾಲನ್ನು ತಮಾಷೆಯ ಛಾಯೆಯಲ್ಲಿ ಹೀಗೆ ಗುನುಗುವುದು ಅವರ ವಾಡಿಕೆ. ಈ ಗುನುಗಿಗೆ ಪ್ರತಿಯಾಗಿ, “ಗೊತ್ತಾಯ್ತು... ಗೊತ್ತಾಯ್ತು. ಒಂದು ಹತ್ತು ನಿಮಿಷ ಕಾಯ ಬೇಕಪ್ಪಾ ಪುತ್ರರತ್ನವೇ..." ಎಂಬ ತಮಾಷೆಯ ದನಿ ಅಡುಗೆಮನೆಯಿಂದ ಕೇಳಿ ಬಂತು! ಹಾಗಂದಿದ್ದು ಅವಧೂತರ ತಾಯಿ, ‘ಗುರುಮಾತೆ’.

ನಂತರ ಶಾರದೆಯ ಕಥನವನ್ನು ಮುಂದುವರಿಸಲು ಅವಧೂತರು ಉದ್ಯುಕ್ತರಾಗುತ್ತಿದ್ದಂತೆಯೇ ಬೀದಿಯಲ್ಲಿ ಹುಯಿಲು ಕೇಳಿಸಿತು, ಕಾರು ಬಂದ ಸದ್ದಾಯಿತು. ಹೊರಗೆ ಓಡಿಬಂದ ಶಿಷ್ಯರು ಅಲ್ಲಿನ ದೃಶ್ಯವನ್ನು ಕಂಡು ಅವಾಕ್ಕಾದರು. ಕಾರಣ, ವೇದಿಕೆಯಲ್ಲಿ ಭಾಷಣ ಬಿಗಿದಿದ್ದ ಕಳ್ಳಬೆಕ್ಕನ್ನು ಸ್ಥಳೀಯ ಪುಢಾರಿಯೊಬ್ಬ ಅಲ್ಲಿಗೆ ಕರೆ ತಂದಿದ್ದ! ಸುತ್ತಮುತ್ತಲ ಊರುಗಳಲ್ಲಿರುವ ಅವಧೂತರ ‘ಪ್ರತ್ಯಕ್ಷ ಪ್ರಭಾವ’ವು ಚುನಾವಣೆಯಲ್ಲಿ ತಮಗೆ ನೆರವಾಗಬಹುದು ಎಂಬ ವಿಲಕ್ಷಣ ಗ್ರಹಿಕೆ ಆತನದ್ದು!

‘ಶಾರದೆಯ ಪ್ರಕರಣದ ಇತ್ಯರ್ಥಕ್ಕೆ ಸಂಬಂಧಿಸಿ ದೈವವೇ ನಿರ್ಮಿಸಿರುವ ಅಗೋಚರ ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಲು ಮತ್ತೊಂದು ಸಾಕ್ಷಿ ಬಂತಾ...?!’ ಎಂದು ಗೊಣಗುತ್ತಲೇ ಒಳಬಂದ ಶಿಷ್ಯರು, “ಗುರುಗಳೇ, ಕಳ್ಳಬೆಕ್ಕು ಇಲ್ಲಿಗೇ ಬಂದುಬಿಟ್ಟಿತು" ಎಂದರು. ಹಜಾರದ ಉಯ್ಯಾಲೆಯ ಮೇಲೆ ಕೂತಿದ್ದ ಅವಧೂತರು, “ನನಗದು ಗೊತ್ತು, ಬರಲೇಬೇಕಲ್ಲಾ...!’ ಎಂದರು ನಿಗೂಢವಾಗಿ.

ತನ್ನ ಚಾಳಿಯಂತೆ ಹಲ್ಲುಗಿಂಜುತ್ತಾ ಹಜಾರವನ್ನು ಪ್ರವೇಶಿಸಿದ ಕಳ್ಳಬೆಕ್ಕು, “ಧಣಿಗಳು ಒಪ್ಪಿಸ್ಕೋಬೇಕು..." ಎಂದು ನಾಟಕೀಯವಾಗಿ ಹೇಳಿ, ಡಜನ್‌ನಷ್ಟು ಪಚ್ಚಬಾಳೆ ಹಣ್ಣುಗಳನ್ನು ಅವಧೂತರಿಗೆ ಸಮರ್ಪಿಸಲು ಮುಂದಾಯಿತು. ಅದನ್ನು ಉಯ್ಯಾಲೆಯ ಮೇಲಿಡುವಂತೆ ಸೂಚಿಸಿದ ಅವಧೂತರು, ತಮಗೆ ಪಾದನಮಸ್ಕಾರ ಮಾಡಲು ಬಂದ ಕಳ್ಳಬೆಕ್ಕಿನ ಹವಣಿಕೆಯನ್ನು ನಯವಾಗೇ ತಿರಸ್ಕರಿಸಿದರು. ನಂತರ, ಒಂದು ಬಾಳೆಹಣ್ಣನ್ನು ಸುಲಿದು ಕಳ್ಳಬೆಕ್ಕಿನ ಕೈಗಿತ್ತು, “ಈಗಲೇ ತಿನ್ನಿ..." ಎಂದರು.

“ಮಹಾಪ್ರಸಾದ.. ಮಹಾಪ್ರಸಾದ" ಎಂದು ನಾಟಕೀಯವಾಗಿ ಪಲುಕುತ್ತಲೇ ಅದನ್ನು ಬಾಯಿಗಿಟ್ಟು ಕೊಂಡಿತು ಕಳ್ಳಬೆಕ್ಕು. ಅವಧೂತರು ಮತ್ತೊಂದು ಹಣ್ಣಿನ ಸಿಪ್ಪೆ ಸುಲಿದರು. ಇನ್ನೇನು ಅದನ್ನು ತಮ್ಮ ಬಾಯಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ಅವರಿವರು ಅಂದುಕೊಳ್ಳುತ್ತಿರುವಾಗಲೇ ಆ ಹಣ್ಣನ್ನು ಕಳ್ಳಬೆಕ್ಕಿನ ಬಾಯಿಗೆ ತುರುಕಿಬಿಟ್ಟರು. ಅದೊಂದು ಹಠಾತ್ ‘ಕ್ರಿಯೆ’. ಅದಕ್ಕೆ ‘ಪ್ರತಿಕ್ರಿಯೆ’ ನೀಡಲಾಗದೇ ಕಳ್ಳಬೆಕ್ಕು ಅಯೋಮಯಗೊಂಡಿರುವಾಗಲೇ ಅವಧೂತರು ಇನ್ನೂ ಮೂರು ಹಣ್ಣುಗಳನ್ನು ಸುಲಿದು ಒಂದರ ಹಿಂದೆ ಒಂದರಂತೆ ಕಳ್ಳಬೆಕ್ಕಿಗೆ ತಿನ್ನಿಸತೊಡಗಿದರು. ಜತೆಗಿದ್ದ ಸ್ಥಳೀಯ ಪುಢಾರಿಗೂ ಇಲ್ಲೇನು ನಡೆಯುತ್ತಿದೆ ಎಂಬುದೇ ಅರಿವಾಗಲಿಲ್ಲ.

ಕೆಲ ಹೊತ್ತಿನ ನಂತರ ಸಾವರಿಸಿಕೊಂಡ ಕಳ್ಳಬೆಕ್ಕು, “ಧಣೀ... ಹಿಂಗೆ ಒಂದರ ಹಿಂದೆ ಒಂದರಂತೆ ಹಣ್ಣು ತಿನ್ನಿಸಿಬಿಟ್ಟರೆ ನಾನು ನುಂಗೋದಾದ್ರೂ ಹ್ಯಾಗೆ..?" ಎಂದು ಪ್ಯಾದೆಯಂತೆ ಕೇಳಿತು.

“ಹ್ಯಾಗೆ ಅಂತ ನೀವು ನನ್ನನ್ನ ಕೇಳಿದ್ರೆ ಹ್ಯಾಗೆ?! ‘ಮಣ್ಣನ್ನು’ ನುಂಗಿ ಜೀರ್ಣಿಸಿಕೊಳ್ಳಬಲ್ಲ ನಿಮ್ಮಂಥವರಿಗೆ, ‘ಹಣ್ಣನ್ನು’ ನುಂಗುವುದು ಅಷ್ಟು ಕಷ್ಟವೇ?" ಎಂಬ ತಿರುಗೇಟು ಹೊಮ್ಮಿತು ಅವಧೂತರಿಂದ.

ಕಕ್ಕಾಬಿಕ್ಕಿಯಾದ ಕಳ್ಳಬೆಕ್ಕು, “ಮಣ್ಣು? ನಾನೆಲ್ಲಿ ಮಣ್ಣು ತಿಂದೆ ಧಣೀ?" ಎಂದಾಗ ಅವಧೂತರು, “ತಿಂದಿದ್ದೀರಿ, ಒಂದೆರಡು ಹಿಡಿಯಷ್ಟನ್ನಲ್ಲ, ಎಕರೆಗಟ್ಟಲೆ.." ಎಂದರು ಕಳ್ಳಬೆಕ್ಕಿನ ಕಂಗಳನ್ನೇ ದಿಟ್ಟಿಸುತ್ತಾ.

ಗೊಂದಲಗೊಂಡ ಕಳ್ಳಬೆಕ್ಕು, “ಹಿಂಗೆ ಒಗಟಾಗಿ ಮಾತಾಡಿದ್ರೆ ಹೆಂಗೆ ಧಣಿ, ಬಿಡಿಸಿ ಹೇಳಬಾರದೇ?" ಎಂದಿತು.

ಅದಕ್ಕೆ ಬಾಯಿಬಿಡದ ಅವಧೂತರು, ಹಾಗೇ ಬೀದಿ ಬಾಗಿಲ ಕಡೆಗೆ ಬೆರಳು ತೋರಿದರು. ಅಂತೆಯೇ ತಿರುಗಿದ ಕಳ್ಳಬೆಕ್ಕು ಅದಾಗಲೇ ಅಲ್ಲಿಗೆ ಬಂದಿದ್ದ ವ್ಯಕ್ತಿಯನ್ನು ಕಂಡು ಬೆವರತೊಡಗಿತು. ಅದು ಬೇರಾರೂ ಅಲ್ಲ, ಭಾಷಣ ಮಾಡುತ್ತಿದ್ದ ಕಳ್ಳಬೆಕ್ಕಿಗೆ ಕೆಲ ಹೊತ್ತಿನ ಮುಂಚೆ ಹಿಡಿಶಾಪ ಹಾಕಿ ನೆಟಿಗೆ ಮುರಿದಾಕೆ! ಬೇರೇನೋ ನಿರೀಕ್ಷೆಯೊಂದಿಗೆ ಅವಧೂತರಲ್ಲಿಗೆ ಬಂದಿದ್ದ ಕಳ್ಳಬೆಕ್ಕಿಗೆ ಮತ್ತೇನೂ ಮಾತನಾಡಲಾಗದೆ ದುರ್ದಾನ ತೆಗೆದುಕೊಂಡಂತೆ ಜಾಗ ಖಾಲಿ ಮಾಡಿತು...!

“ಕಳ್ಳಬೆಕ್ಕು ಈಕೆಯ ಜಮೀನು ಕಸಿದುಕೊಂಡಿದ್ದೇಕೆ ಗುರುಗಳೇ?" ಎಂದು ಶಿಷ್ಯರೊಬ್ಬರು ಕೇಳಿದರು.

“ಜಮೀನು ಕಸಿದುಕೊಂಡಿದ್ದಷ್ಟೇ ಅಲ್ಲ, ಶಾರದೆಯ ಮಾನವನ್ನೂ ಕಸಿಯುವ ಸಜ್ಜಿಕೆ ರೂಪುಗೊಂಡಿದ್ದೂ ಅಲ್ಲಿದ್ದ ತೋಟದ ಮನೆಯಲ್ಲೇ..." ಎಂದರು ಅವಧೂತರು.

ಅಷ್ಟು ಹೊತ್ತಿಗೆ, ಕೆಂಡದಲ್ಲಿ ಸುಟ್ಟಿರುವ ಹಿಡಿಗಟ್ಟಲೆ ಹುರುಳಿ ಹಪ್ಪಳವನ್ನು ಬಿದಿರಿನ ಹೆಡಿಗೆ ಯಲ್ಲಿ ತುಂಬಿ ತಂದು ಅಲ್ಲಿಟ್ಟ ‘ಗುರುಮಾತೆ’, ಹಿತ್ತಾಳೆಯ ಲೋಟಗಳಿಗೆ ಸುಡುಸುಡು ಕಾಫಿಯನ್ನು ಬಗ್ಗಿಸಿ ಅವಧೂತರಿಗೂ ಶಿಷ್ಯರಿಗೂ ನೀಡಿ ನಿರ್ಗಮಿಸಿದರು.

ಎದುರಿದ್ದ ಸುಡುಕಾಫಿ, ಬಿಸಿಹಪ್ಪಳವನ್ನೇ ಅವಧೂತರು ದಿಟ್ಟಿಸುತ್ತಾ, “ಬಯಸಿದಾಗೆಲ್ಲಾ ಹೀಗೆ ‘ಜಠರಬಾಧೆ’ಯನ್ನು ನೀಗಿಸುವ ಅನ್ನಬ್ರಹ್ಮನನ್ನು ಆ ಅಡುಗೆಭಟ್ಟ ‘ನಳಪಾಕ’, ಕಳ್ಳಬೆಕ್ಕಿನ ‘ಕಾಮಬಾಧೆ’ಯನ್ನು ನೀಗಿಸುವ ಸಂಚಿನ ನೆರವೇರಿಕೆಗೆ ಬಳಸಿಕೊಳ್ಳಲು ಹೊರಟಿದ್ದನಲ್ಲಾ... ಶಿವ ಶಿವಾ..!" ಎನ್ನುತ್ತಾ ಒಮ್ಮೆ ಕಣ್ಣು ಮುಚ್ಚಿದರು...

(ಮುಂದುವರಿಯುವುದು)