Vishweshwar Bhat Column: ಅಮೆರಿಕ ಅಧ್ಯಕ್ಷರ ಹಾಸ್ಯ ದಿನದ ಬಗ್ಗೆ ನಿಮಗೆ ಗೊತ್ತಿದೆಯೇ ?
ಅನೇಕರಿಗೆ ಗೊತ್ತಿಲ್ಲದಿರಬಹುದು, ಪ್ರತಿ ವರ್ಷ ಆಗಸ್ಟ್ 11ನ್ನು ‘ಅಮೆರಿಕ ಅಧ್ಯಕ್ಷರ ಹಾಸ್ಯ ದಿನ’ ( Presi dential Joke Day) ಎಂದು ಆಚರಿಸುತ್ತಾರೆ. ಆ ದಿನ ಅಮೆರಿಕ ಅಧ್ಯಕ್ಷರ ಬಗ್ಗೆ ಜೋಕ್ ಮಾಡಬಹುದು ಎಂದಲ್ಲ, ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಅಮೆರಿಕ ಅಧ್ಯಕ್ಷರೇ ಅಂದು ಕೆಲವು ಜೋಕುಗಳನ್ನು ಹೇಳುತ್ತಾರೆ
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್
vbhat@me.com
ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ದ್ದಾಯ್ತು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಮುಂಬರುವ 4 ವರ್ಷಗಳ ಅವಧಿಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಹೇಗಿರಬಹುದು ಎಂಬುದನ್ನು ಮುನ್ನಂದಾಜಿಸುವ ಸಾಕ ಷ್ಟು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ, ಆಗುತ್ತಲೇ ಇವೆ. ಆದರೆ, ಇಂಥ ಆಡಳಿತಾತ್ಮಕ ವಿಷಯಗಳಿಗೆ ಹೊರತಾದ ಒಂದು ಮಗ್ಗುಲನ್ನು ಇಂದು ಇಲ್ಲಿ ಹಂಚಿಕೊಳ್ಳಲು ಬಯಸುವೆ.
ಅನೇಕರಿಗೆ ಗೊತ್ತಿಲ್ಲದಿರಬಹುದು, ಪ್ರತಿ ವರ್ಷ ಆಗಸ್ಟ್ 11ನ್ನು ‘ಅಮೆರಿಕ ಅಧ್ಯಕ್ಷರ ಹಾಸ್ಯ ದಿನ’ ( Presidential Joke Day) ಎಂದು ಆಚರಿಸುತ್ತಾರೆ. ಆ ದಿನ ಅಮೆರಿಕ ಅಧ್ಯಕ್ಷರ ಬಗ್ಗೆ ಜೋಕ್ ಮಾಡ ಬಹುದು ಎಂದಲ್ಲ, ಆದರೆ ಅದಕ್ಕೆ ವ್ಯತಿರಿಕ್ತವಾಗಿ, ಅಮೆರಿಕ ಅಧ್ಯಕ್ಷರೇ ಅಂದು ಕೆಲವು ಜೋಕು ಗಳನ್ನು ಹೇಳುತ್ತಾರೆ.
ಈ ಸಂಪ್ರದಾಯ ಆರಂಭವಾಗಿದ್ದಕ್ಕೆ ಕಾರಣವಿದೆ. 198ರ ಆಗಸ್ಟ್ 11ರಂದು, ತಮ್ಮ ಶನಿವಾರದ ರೇಡಿಯೋ ಭಾಷಣಕ್ಕೆ ಮುನ್ನ, ಅಧ್ಯಕ್ಷ ರೊನಾಲ್ಡ್ ರೇಗನ್ ಮೈಕ್ರೊಫೋನ್ ಪರೀಕ್ಷೆ ಮಾಡು ತ್ತಿದ್ದರು. ಆದರೆ ತಮ್ಮ ಮಾತು ಲೈವ್ ಪ್ರಸಾರವಾಗುತ್ತಿದೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಅವರು ಮೈಕ್ ಟೆಸ್ಟ್ ಮಾಡುತ್ತಾ, “ನನ್ನ ಪ್ರೀತಿಯ ಅಮೆರಿಕವಾಸಿಗಳೇ, ನಾನು ರಷ್ಯಾ ವಿರುದ್ಧ ದಾಳಿ ನಡೆಸಲು ನಿರ್ಧರಿಸಿದ್ದೇನೆ. ಇನ್ನು ಕೆಲ ಹೊತ್ತಿನಲ್ಲಿ ದಾಳಿ ಆರಂಭವಾಗಲಿದೆ" ಎಂದು ಹೇಳಿದರು.
ಆದರೆ ಅವರ ಮಾತು ಹೊರ ಜಗತ್ತಿಗೆ ಲೈವ್ ಪ್ರಸಾರ ಆಗಿ ಬಹಳ ಮುಜುಗರವಾಯಿತು. ಅದನ್ನು ಮರೆಮಾಚಲು ‘ಇದೊಂದು ಜೋಕ್’ ಎಂದು ಹೇಳಲಾಯಿತು. ಅಮೆರಿಕ ಅಧ್ಯಕ್ಷರ ಕಾರ್ಯಾಲಯ ಸ್ಪಷ್ಟನೆ ನೀಡಿತು. ಅಷ್ಟೇ ಅಲ್ಲ, ಇನ್ನು ಪ್ರತಿ ವರ್ಷ ಆ ದಿನವನ್ನು ‘ಅಧ್ಯಕ್ಷರ ಹಾಸ್ಯ ದಿನ’ವೆಂದು ಆಚರಿಸಲಾಗುವುದು ಎಂದು ಘೋಷಿಸಲಾಯಿತು. ಈ ಘಟನೆಯೇ Presidential Joke Day ಆಚ ರಣೆಗೆ ಕಾರಣವಾಯಿತು.
ಆ ದಿನ ಅಧ್ಯಕ್ಷರು ಜೋಕ್ ಹೇಳಬೇಕೆಂದು ನಿರೀಕ್ಷಿಸಲಾಗುತ್ತದೆ. ಆದರೆ ಎಲ್ಲರೂ ಹೇಳುವುದಿಲ್ಲ. ಅವರು ಹೇಳು ತ್ತಾರೋ ಇಲ್ಲವೋ, ಜನರಂತೂ ಅಮೆರಿಕ ಅಧ್ಯಕ್ಷರ ಬಗ್ಗೆ ಹಾಸ್ಯ ಚಟಾಕಿಗಳನ್ನು ಸಿಡಿಸಿ ಖುಷಿ ಪಡುತ್ತಾರೆ. ಅದರ ಮುಂದಿನ ವರ್ಷ ‘ಅಧ್ಯಕ್ಷರ ಹಾಸ್ಯ ದಿನ’ದಂದು ರೊನಾಲ್ಡ್ ರೇಗನ್ ಒಂದು ಹಾಸ್ಯ ಚಟಾಕಿ ಹಾರಿಸಿದರು- Recession is when your neighbour loses his job. Depression is when you lose yours. And recovery is when Jimmy Carter loses his .
ಒಂದು ವೇಳೆ, ಈ ಘಟನೆ ಭಾರತದಲ್ಲಿ ನಡೆದಿದ್ದರೆ, ಪ್ರತಿಪಕ್ಷಗಳು ಪ್ರಧಾನಿ ಮೋದಿ ಕ್ಷಮೆಯಾಚಿಸ ಬೇಕೆಂದು ಆಗ್ರಹಿಸುತ್ತಿದ್ದವು. ಈ ಪ್ರಮಾದಕ್ಕೆ ತಲೆದಂಡವಾಗಿ ಪ್ರಸಾರ ಖಾತೆ ಸಚಿವರು ರಾಜೀ ನಾಮೆ ನೀಡಬೇಕೆಂಬ ಬೇಡಿಕೆ ಇಡುತ್ತಿದ್ದವು. ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು, ಆಕಾಶ ವಾಣಿಯ ಹಿರಿಯ ಅಧಿಕಾರಿಗಳನ್ನು ವಜಾ ಮಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಸಂಗವು ಒಂದು ವಾರದವರೆಗೆ ತೀವ್ರ ಸ್ವರೂಪದ ವಾದ-ವಿವಾದಕ್ಕೆ ಕಾರಣವಾಗುತ್ತಿತ್ತು.
‘ಪ್ರಧಾನಿಯವರು ಇಷ್ಟು ಬೇಜವಾಬ್ದಾರಿಯಿಂದ ವರ್ತಿಸಬಾರದು’ ಅಂತ ಎಳಸು ಪತ್ರಕರ್ತರಿಂದ ಮೊದಲ್ಗೊಂಡು ಅನುಭವಿ ಸಂಪಾದಕರುಗಳವರೆಗೆ ಎಲ್ಲರೂ ಪ್ರಧಾನಿಯವರಿಗೆ ಬುದ್ಧಿಮಾತು ಹೇಳುತ್ತಿದ್ದರು. ಎಕ್ಸ್ (ಟ್ವಿಟರ್) ಮತ್ತು ಫೇಸ್‌ಬುಕ್‌ನಲ್ಲಿ ಮೂರ್ನಾಲ್ಕು ದಿನ ರಾಡಿ!
ಒಂದಷ್ಟು ಜೋಕುಗಳು
ಅಮೆರಿಕ ಅಧ್ಯಕ್ಷರ ಬಗ್ಗೆ ಇರುವಷ್ಟು ಹಾಸ್ಯ ಪ್ರಸಂಗಗಳು ಚಮತ್ಯಾರ ಬಗೆಗೂ ಇರಲಿಕ್ಕಿಲ್ಲ. ಯಾರೇ ಅಧ್ಯಕ್ಷರಾಗಿ ಬರಲಿ, ತಕ್ಷಣ ಅವರ ಬಗ್ಗೆ ಒಂದಷ್ಟು ಜೋಕುಗಳು ಹುಟ್ಟಿಕೊಳ್ಳುತ್ತವೆ. ಕೆಲವು ಅಂಥ ಪ್ರಸಂಗಗಳು...
ಒಬ್ಬ: ಒಂದು ಲೈಟ್ ಬಲ್ಬನ್ನು ಬದಲಿಸಲು ಅಮೆರಿಕ ಅಧ್ಯಕ್ಷರ ಎಷ್ಟು ಮಂದಿ ಸಹಾಯಕರು ಬೇಕು?
- ಮತ್ತೊಬ್ಬ: ಯಾರೂ ಬೇಕಿಲ್ಲ. ಕಾರಣ ಅವರೆಲ್ಲ ಅಧ್ಯಕ್ಷರನ್ನು ಕತ್ತಲೆಯಲ್ಲಿಡಲು ಪ್ರಯತ್ನಿ ಸುತ್ತಾರೆ!
ಒಬ್ಬ: ಯಾರು ಬೇಕಾದರೂ ಅಮೆರಿಕ ಅಧ್ಯಕ್ಷರಾಗಬಹುದು. ಆದರೆ ‘ಮಿಸ್ ಅಮೆರಿಕ’ ಆಗುವುದು ಬಹಳ ಕಷ್ಟ.
ಮತ್ತೊಬ್ಬ: ಹೇಗೆ ಹೇಳ್ತೀರಾ ?
ಒಬ್ಬ: ನೋಡಿ, ಇಬ್ಬರ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆರಿಸುತ್ತಾರೆ. ಆದರೆ ‘ಮಿಸ್ ಅಮೆರಿಕ’ ಹಾಗಲ್ಲ, ಐವತ್ತು ಯುವತಿಯರ ಪೈಕಿ ಒಬ್ಬಳನ್ನು ಆರಿಸುತ್ತಾರೆ.
ಅಮೆರಿಕದ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾರತಕ್ಕೆ ಬಂದಿದ್ದರು. ಆಗ ಮೊರಾರ್ಜಿ ದೇಸಾಯಿ ಪ್ರಧಾನಿ. ಅವರಿಗೆ 82 ವರ್ಷ ವಯಸ್ಸಾಗಿತ್ತು. ಕಾರ್ಟರ್ ಅವರ ಗೌರವಾರ್ಥ ಏರ್ಪಡಿಸಿದ್ದ ಭೋಜನ ಕೂಟ ದಲ್ಲಿ, ಮೊರಾರ್ಜಿ ಕೊನೆಯಲ್ಲಿ, ‘ Lets make love and not war " ಎಂದು ಹೇಳಿದರಂತೆ.
ಈ ಮಾತುಗಳನ್ನು ಕೇಳಿದ ಕಾರ್ಟರ್ ತಮ್ಮ ಪಕ್ಕದಲ್ಲಿ ಕುಳಿತಿದ್ದ ಸಹಾಯಕನಿಗೆ ಹೇಳಿದರಂತೆ- “ಈ ಮನುಷ್ಯನನ್ನು (ಮೊರಾರ್ಜಿ) ನೋಡಿದರೆ, ಅವೆರಡನ್ನೂ ಮಾಡುವ ಲಕ್ಷಣಗಳಿದ್ದಂತೆ ಕಾಣು ವುದಿಲ್ಲ". ಒಮ್ಮೆ ಬಿಲ್ ಕ್ಲಿಂಟನ್ ಅವರನ್ನು ಯಾರೋ ಕೇಳಿದರಂತೆ- “ನಿಮ್ಮ ದೃಷ್ಟಿಯಲ್ಲಿ ಅಮೆರಿಕದ ಅಧ್ಯಕ್ಷಗಿರಿ ಅಂದ್ರೆ ಏನು?".
ಅದಕ್ಕೆ ಕ್ಲಿಂಟನ್ ಹೇಳಿದರಂತೆ- “ಅಮೆರಿಕ ಅಧ್ಯಕ್ಷ ಅಂದ್ರೆ ಸ್ಮಶಾನದ ಮುಖ್ಯಸ್ಥನಿದ್ದಂತೆ. ಎಲ್ಲರೂ ಅವನ ಕಾಲ ಕೆಳಗೆ ಇರುತ್ತಾರೆ. ಆದರೆ ಒಬ್ಬರೂ ಅವನ ಮಾತುಗಳನ್ನು ಕೇಳುವುದಿಲ್ಲ".
ಹಿಂಗ್ಯಾಕೆ ಆಡ್ತಾರೋ?!
ಸಾಮಾನ್ಯವಾಗಿ, ನನಗೆ ಯಾರೇ ಕರೆ ಮಾಡಲಿ, ಅವರು ಕರ್ನಾಟಕದವರೇ ಆಗಿದ್ದರೆ, ‘ಕನ್ನಡದ ಮಾತಾಡಿ’ ಎಂದು ಹೇಳುತ್ತೇನೆ. ಆ ಕಡೆಯಿಂದ ಮಾತಾಡುವವನು ಕನ್ನಡ ಬಲ್ಲವನಾ, ಇಲ್ಲವಾ ಎಂಬುದು ಎಂಥವರಿಗಾದರೂ ಥಟ್ಟನೆ ಗೊತ್ತಾಗುತ್ತದೆ. ಅದರಲ್ಲೂ ಕಾಲ್ ಸೆಂಟರ್ ಅಥವಾ ಕಸ್ಟಮರ್ ಕೇರ್‌ಗಳಿಂದ ಕರೆ ಮಾಡಿದರೆ, ಕನ್ನಡದ ಮಾತಾಡಿ ಎಂದು ಆಗ್ರಹಿಸುತ್ತೇನೆ.
ದುರಂತ ಅಂದ್ರೆ, ಆ ಕಡೆಯಿಂದ ಮಾತಾಡುವವರಿಗೆ ನನಗೂ ಕನ್ನಡ ಬರುತ್ತದೆಂದು ಗೊತ್ತಿದ್ದರೂ, ಇಂಗ್ಲಿಷಿನ ಮಾತಾಡುತ್ತಾರೆ. ಅವರಾಡುವ ಎರಡು ವಾಕ್ಯ ಇಂಗ್ಲಿಷ್ ಕೇಳಿದರೆ, ಆಸಾಮಿ ಕನ್ನಡ ವನೆಂದೇ ಗೊತ್ತಾಗುತ್ತದೆ. ಆದರೂ ಇಂಗ್ಲಿಷಿನಲ್ಲಿ ಮಾತಾಡುವ ಚಟ!
ನಮ್ಮ ಪತ್ರಿಕಾ ಕಚೇರಿಗೆ ಉದ್ಯೋಗ ಬಯಸಿ ಬರುವವರು ತಮ್ಮ ಬಯೋಡಾಟವನ್ನು ಯಾಕೋ ಇಂಗ್ಲಿಷಿನಲ್ಲಿ ಬರೆದಕೊಂಡು ಬರುತ್ತಾರೆ. ಅವರಿಗೆ ತಾವು ಕೆಲಸ ಮಾಡುವುದು ಕನ್ನಡ ಪತ್ರಿಕೆಗೆ ಎಂಬುದು ಗೊತ್ತಿದ್ದರೂ ಹಾಗೆ ಮಾಡುತ್ತಾರೆ. ಕೆಲವರಿಗೆ ಇನ್ನೊಂದು ಚಾಳಿ. ರಾಜೀನಾಮೆ ಪತ್ರ ಮತ್ತು ರಜೆ ಚೀಟಿಯನ್ನು ಸಹ ಇಂಗ್ಲಿಷಿನಲ್ಲಿ ಬರೆಯುತ್ತಾರೆ. ಕೆಲ ವರ್ಷಗಳ ಹಿಂದೆ, ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ತಮ್ಮ ಮಗಳ ಮದುವೆಗಾಗಿ ಒಂದು ವಾರದ ರಜಾ ಕೋರಿ ಅರ್ಜಿ ನೀಡಿದ್ದರು.
ಅದರಲ್ಲಿ ಹೀಗೆ ಬರೆದಿದ್ದರು- As I am marrying my daughter, please grant me a week's leave, without fail . ನನಗೆ ಅದನ್ನು ಓದುತ್ತಿದ್ದಂತೆ ನಗು ತಡೆಯಲಾಗಲಿಲ್ಲ. ಇನ್ನೊಮ್ಮೆ ಓದು ವಂತೆ ಅವರಿಗೆ ಹೇಳಿದೆ. ಅದನ್ನು ಓದಿದರೂ, ಅದರಲ್ಲಿನ ತಪ್ಪು ಅವರಿಗೆ ಹೊಳೆಯಲಿಲ್ಲ. ಇನ್ನೊಮ್ಮೆ ಓದುವಂತೆ ಹೇಳಿದೆ. ಅವರಿಗೂ ನಗು ತಡೆದುಕೊಳ್ಳಲಾಗಲಿಲ್ಲ. “ಅರಿ, ಯಾಕೆ ಇಂಗ್ಲಿಷ್ ಮೋಹ? ನೆಟ್ಟಗೆ ಕನ್ನಡದಲ್ಲಿ ಬರೆಯಬಾರದೇ? ನಾನೇನು ನ್ಯೂಯಾರ್ಕ್ ಟೈಮ್ಸ್ ಎಡಿಟರಾ?" ಎಂದು ಕೇಳಿದೆ. ತಲೆ ತಗ್ಗಿಸಿ ನಿಂತಿದ್ದರು. ಒಮ್ಮೆ, ತಮ್ಮ ಅತ್ತೆ ನಿಧನರಾಗಿದ್ದರಿಂದ, ಅಪರಕಾರ್ಯ ಗಳನ್ನೆಲ್ಲ ತಾವೇ ಮಾಡಬೇಕಿದ್ದರಿಂದ, ಆ ಹೊಣೆಗಾರಿಕೆ ಪೂರೈಸಲು, ಒಂದು ವಾರ ರಜೆ ಬೇಕೆಂದು ಸಹೋದ್ಯೋಗಿಯೊಬ್ಬರು, ರಜಾ ಚೀಟಿಯನ್ನು ಹೀಗೆ ಬರೆದಿದ್ದರು- “As my mother-in-law has expired and I am responsible for it, please grant me four days leave".
ಇನ್ನೊಂದು ಪ್ರಸಂಗ. ನಾನು ‘ವಿಜಯ ಕರ್ನಾಟಕ’ದಲ್ಲಿದ್ದಾಗ, ಸಂಪಾದಕೀಯ ಸಿಬ್ಬಂದಿ ಯೊಬ್ಬರು, ತಮಗೆ ಒಂದು ವಾರ ರಜೆ ಬೇಕೆಂದು ಹೇಳಿದರು. ನಾನು ಯಾಕೆಂದು ಕೇಳಿದೆ. ಅದಕ್ಕೆ ಅವರು ತಮ್ಮ ಮಾವನಿಂದ ಬಂದ ಆಸ್ತಿಯನ್ನು ಮಾರಾಟ ಮಾಡಬೇಕಿದೆಯೆಂದೂ, ತಾವೂ, ತಮ್ಮ ಪತ್ನಿಯೂ ಊರಿಗೆ ಹೋಗಬೇಕಾಗಿ ಬಂದಿದೆಯೆಂದೂ, ಅದಕ್ಕಾಗಿ ಒಂದು ವಾರ ರಜೆ ಬೇಕೆಂದೂ ಹೇಳಿದರು. ನಾನು ಆಯಿತು ಎಂದೆ. ರಜಾ ಚೀಟಿ ಬರೆದುಕೊಡುವಂತೆ ಹೇಳಿದೆ.
ಅದಕ್ಕೆ ಅವರು ಬರೆದು ಕೊಟ್ಟರು- Since I have to go to my village to sell my land with my wife, please grant my a week leave . ಕೆಲ ವರ್ಷ ಗಳ ಹಿಂದೆ, ಒಬ್ಬ ಸಹೋದ್ಯೋಗಿ ಮಿತ್ರರು ಬರೆದಿದ್ದರು- Dear Sir, with reference to the above, please refer to my below...
ಅವಳಿ ಮಕ್ಕಳ ಊರು
ನನ್ನ ಸ್ನೇಹಿತರೊಬ್ಬರು ಮದುವೆಯಾದರು. ಒಂದು ತಿಂಗಳ ನಂತರ, ಬೆಂಗಳೂರಿನ ಹೊಸಕೆರೆಹಳ್ಳಿ ಯಲ್ಲಿರುವ ತಮ್ಮ ಮನೆಯಲ್ಲಿ, 15 ಜನರನ್ನು ಮಿತ್ರ-ಭೋಜನಕ್ಕೆ ಕರೆದಿದ್ದರು. ಅವರ ಮನೆಗೆ ಹೋಗುತ್ತಿದ್ದಂತೆ, ತಮ್ಮ ಪತ್ನಿಯನ್ನು ಪರಿಚಯಿಸಿದರು.
“ನಾನು ಮಲಯಾಳಿ ಹುಡುಗಿಯನ್ನು ಮದುವೆಯಾಗಿದ್ದೇನೆ. ಈಕೆ ನನ್ನ ಆಫೀಸಿನಲ್ಲಿಯೇ ರಿಸೆಪ್ಷ ನಿಸ್ಟ್ ಆಗಿದ್ದರು" ಎಂದು ಪರಿಚಯಿಸಿದರು. ನಾನು ಅವರ ಪತ್ನಿಯನ್ನು, “ಕೇರಳದಲ್ಲಿ ನಿಮ್ಮ ಊರು ಯಾವುದು?" ಎಂದು ಕೇಳಿದೆ. ಅವರು “ಮಲಪ್ಪುರಂ" ಎಂದರು. “ಮಲಪ್ಪುರಂನಲ್ಲಿ ಎಲ್ಲಿ?" ಎಂದು ಕೇಳಿದೆ. “ನಿಮಗೆ ಕೇರಳ ಗೊತ್ತಾ?" ಎಂದು ಕೇಳಿದ ಅವರು ನನ್ನ ಉತ್ತರಕ್ಕೂ ಕಾಯದೇ, “ಪರಪ್ಪನಂಗಡಿ ಸಮೀಪ" ಅಂದರು.
ನಾನು ಅಷ್ಟಕ್ಕೇ ಸುಮ್ಮನಾಗದೇ, “ಬೈ ಚಾನ್ಸ್, ನಿಮ್ಮ ಊರು ತಿರುರಂಗಡಿ ಸನಿಹದ ಕೊಡಿನಿ ಹಿಯೇ?" ಎಂದು ಕೇಳಿದೆ. ಅವರು ಕಣ್ಣುಗಳನ್ನು ಅರಳಿಸಿಕೊಂಡು ಪರಮಾಶ್ಚರ್ಯದಿಂದ, “ಹೌದು.. ನಿಮಗೆ ಹೇಗೆ ಗೊತ್ತು? ನೀವು ನಮ್ಮ ಊರಿಗೆ ಬಂದಿದ್ರಾ? ನಿಮ್ಮ ಬಾಯಿಯಲ್ಲಿ ನಮ್ಮ ಊರಾದ ಕೊಡಿನಿಹಿ ಹೆಸರು ಕೇಳಿ ಸಂತೋಷವಾಯಿತು. ಹೇಳಿ ಪ್ಲೀಸ್, ನಿಮಗೆ ಹೇಗೆ ನಮ್ಮ ಊರಿನ ಹೆಸರು ಗೊತ್ತು?" ಎಂದು ಒಂದೇ ಸಮನೆ ಪ್ರಶ್ನೆಗಳ ಸುರಿಮಳೆಗೈದರು.
ನಾನು ತಕ್ಷಣ ಉತ್ತರಿಸಲಿಲ್ಲ. ಅವರ ಪತಿ ಅರ್ಥಾತ್ ನನ್ನ ಸ್ನೇಹಿತ ಪಕ್ಕದಲ್ಲಿ ಇನ್ನೊಬ್ಬರ ಜತೆ ಮಾತಾಡುತ್ತಿದ್ದ. ಅವನನ್ನು ಕರೆದು, “ನಿನಗೆ ಹುಟ್ಟುವ ಮಗು ಅವಳಿ-ಜವಳಿ ಕಣೋ" ಎಂದೆ. ಅದಕ್ಕೆ ಅವನ ಪತ್ನಿ (ನವ ವಧು) ಮುಖ ಮುಚ್ಚಿಕೊಂಡು ತುಸು ನಾಚಿಕೆ ಮಿಶ್ರಿತ ವೈಯಾರದಿಂದ ಜೋರಾಗಿ ನಗಲಾರಂಭಿಸಿದಳು. ಸ್ನೇಹಿತನಿಗೆ, ನನ್ನ ಉತ್ತರದಿಂದ ಅವಳೇಕೆ ನಗುತ್ತಿದ್ದಾಳೆ ಎಂಬುದು ಅರ್ಥವಾಗಲಿಲ್ಲ.
ನಾನು ಹೇಳುವುದು ಅವಳಿಗೆ ಅರ್ಥವಾಗಿತ್ತು. ಇನ್ನೂ ಹೆಚ್ಚು ಹೊತ್ತು ಕಾಯಿಸಬಾರದೆಂದು ಸ್ನೇಹಿತನಿಗೆ ಹೇಳಿದೆ- “ನಿನ್ನ ಪತ್ನಿ ನಿನಗೆ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಕೇರಳದ ಮಲಪ್ಪುರಂ ನಲ್ಲಿ ಕೊಡಿನಿಹಿ ಎಂಬ ಹಳ್ಳಿಯಿದೆ. ಅಲ್ಲಿ ಬಹುತೇಕ ಮಹಿಳೆಯರಿಗೆ ಅವಳಿ-ಜವಳಿ ಮಕ್ಕಳೇ ಹುಟ್ಟುತ್ತವೆಯಂತೆ. ಆ ಊರಿನ ಜನಸಂಖ್ಯೆ ಕೇವಲ 9 ಸಾವಿರ. ಆದರೆ ಅಲ್ಲಿ 400 ಜೋಡಿ ಅವಳಿಗಳಿವೆಯೆಂದು ನಾನು ಕೆಲ ವರ್ಷಗಳ ಹಿಂದೆ ಓದಿದ್ದೆ.
ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆ ಕೂಡ ಈ ಹಳ್ಳಿ ಬಗ್ಗೆ ಒಂದು ಲೇಖನ ಪ್ರಕಟಿಸಿತ್ತು. ಒಂದೆರಡು ಚಾನೆಲ್ಲುಗಳೂ ಈ ಹಳ್ಳಿಯ ಬಗ್ಗೆ ಸಾಕ್ಷ್ಯಚಿತ್ರ ಮಾಡಿದ್ದನ್ನು ನೋಡಿದ್ದೆ. ಇಲ್ಲಿ ತನಕ ಈ ರಹಸ್ಯವನ್ನು ಭೇದಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಹಲವು ದೇಶಿ ಮತ್ತು ವಿದೇಶಿ ವಿಶ್ವ ವಿದ್ಯಾಲಯಗಳು ಕೊಡಿನಿಹಿ ಊರಿಗೆ ಬಂದು ಈ ಬಗ್ಗೆ ಸಂಶೋಧನೆ ಮಾಡಿವೆ. ಇದರಿಂದ ಹೇಳಿ ಕೊಳ್ಳುವಂಥ ಮಹತ್ವದ ಸಂಗತಿ ಬೆಳಕಿಗೆ ಬಂದಿಲ್ಲ. ನನಗೆ ತಿಳಿದಂತೆ, ಪ್ರತಿ ಸಾವಿರಕ್ಕೆ ೯ ಅವಳಿ-ಜವಳಿ ಹುಟ್ಟುತ್ತಾರೆ.
ಇದು ನಮ್ಮ ರಾಷ್ಟ್ರೀಯ ಸರಾಸರಿ. ಆದರೆ ಕೊಡಿನಿಹಿಯಲ್ಲಿ ಪ್ರತಿ ಸಾವಿರಕ್ಕೆ 45 ಅವಳಿಗಳು ಹುಟ್ಟುತ್ತಾರೆ. ಆ ಊರಲ್ಲಿ ಯಾರನ್ನು ನೋಡಿದರೂ ತದ್ರೂಪಿಯಂತೆ ಕಾಣುತ್ತಾರೆ". “ಇಂಟರೆಸ್ಟಿಂಗ್ ಆದ ಈ ಸಂಗತಿಯನ್ನು ನೀನು ನನಗೆ ಹೇಳೇ ಇಲ್ಲವಲ್ಲ?" ಎಂದು ನನ್ನ ಸ್ನೇಹಿತ ತನ್ನ ಪತ್ನಿಗೆ ಕೇಳಿದ.
ಹಲವಾರು ಸಂಘ-ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಈ ಬಗ್ಗೆ ಸಂಶೋಧನೆ ನಡೆಸಿದರೂ ವೈಜ್ಞಾ ನಿಕ ಕಾರಣಗಳೇನು ಎಂಬುದು ಪತ್ತೆಯಾಗಿಲ್ಲ. “ಆ ಊರಿನಲ್ಲಿ ವಾಸಿಸುವ ಹೆಂಗಸರು ಮಾತ್ರ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ, ಆ ಊರಿನಲ್ಲಿ ಹುಟ್ಟಿ ಬೇರೆ ಊರಿನಲ್ಲಿ ನೆಲೆಸಿದವರು ಒಂದೇ ಮಗುವಿಗೆ ಜನ್ಮ ನೀಡುತ್ತಾರೆ. ಇದಕ್ಕೆ ಪ್ರಾಯಶಃ ಈ ಊರಿನ ನೀರು, ಗಾಳಿ, ಪರಿಸರ ಕಾರಣ ವಾಗಿರಬಹುದು" ಎಂದು ಕೆಲವು ಅಧ್ಯಯನಗಳು ಹೇಳಿವೆ.
ಇದಕ್ಕೆ ಅಪವಾದವೆಂಬಂತೆ, ಕೊಡಿನಿಹಿಯಲ್ಲಿ ಜನಿಸಿ, ವಿದೇಶಗಳಲ್ಲಿ ವಾಸಿಸುತ್ತಿರುವವರು ಅವಳಿ ಮಕ್ಕಳಿಗೆ ಜನ್ಮ ನೀಡಿದ ನಿದರ್ಶನಗಳಿವೆ. ಹೀಗಾಗಿ ಯಾವ ಸಂಶೋಧನೆಗಳಿಂದಲೂ ನಿಶ್ಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಇಂದೇ ಅಲ್ಲ, ಆಂಧ್ರದ ಪೂರ್ವ ಗೋದಾವರಿ ಜಿಯ ರಂಗಂ ಪೇಟ ಮಂಡಲದ ದೊಡ್ಡಿಗುಂಟ ಗ್ರಾಮವೂ ಇದೇ ರೀತಿ ಅವಳಿ-ಜವಳಿ ಮಕ್ಕಳ ಊರು ಎಂದು ಹೆಸರುವಾಸಿಯಾಗಿದೆ. ಈ ಊರಿನ ನೀರು ಕುಡಿದ ಮಹಿಳೆಯರು ಅವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ ಎಂಬ ಪ್ರತೀತಿಯಿದೆ.
ಟರ್ ಟಕ್!
ಟಾಮ್ ಕ್ರೂಸ್ ನಾಯಕನಾಗಿ ನಟಿಸಿದ ‘ಮಿಷನ್ ಇಂಪಾಸಿಬಲ್- ದಿ ಫಾಲ್ ಔಟ್’ ಎಂಬ ಸಿನಿಮಾ ವನ್ನು ನೀವು ನೋಡಿರಬಹುದು. ಈ ಸಿನಿಮಾದ ಕೊನೆಯ 15 ನಿಮಿಷಗಳು ಮೈನವಿರೇಳಿಸು ವಂಥವು. ಒಂದು ಸಿನಿಮಾವನ್ನು ಈ ರೀತಿಯಲ್ಲೂ ಚಿತ್ರೀಕರಿಸಬಹುದಾ ಎಂದು ಆಶ್ಚರ್ಯ ವಾಗುತ್ತದೆ. ಹಾಗಂತ ಇದು ಸಾಕಷ್ಟು ಹಳೆಯ ಸಿನಿಮಾ. ಕೊನೆಯ 15 ನಿಮಿಷಗಳ ದೃಶ್ಯಗಳನ್ನು ನೋಡುತ್ತಿದ್ದರೆ, ಆ ಘಟನೆ ಭಾರತದ ಸಿಯಾಚಿನ್ ಪ್ರಾಂತದಲ್ಲಿರುವ ‘ಟರ್ ಟಕ್’ ಎಂಬ ಪ್ರದೇಶ ದಲ್ಲಿ ನಡೆಯುತ್ತಿದೆ ಎಂದು ಭಾಸವಾಗುತ್ತದೆ.
ಜಗತ್ತನ್ನು ಅಣುಬಾಂಬ್ ದಾಳಿಯಿಂದ ರಕ್ಷಿಸಲು ಟಾಮ್ ಕ್ರೂಸ್ ನಡೆಸುವ ಸಾಹಸ, ಉಸಿರು ಬಿಗಿಹಿಡಿದು ವೀಕ್ಷಿಸುವಂತೆ ಮಾಡುತ್ತದೆ. ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗುವಾಗ, ಸೆನ್ಸಾರ್ ಮಂಡಳಿ ಈ ಭಾಗವನ್ನು ಕತ್ತರಿಸುವಂತೆ ಆದೇಶಿಸಿತು. ಅದನ್ನು ಕತ್ತರಿಸಿದರೆ ಸಿನಿಮಾ ನಿರರ್ಥಕ ವಾಗುತ್ತದೆಂದು ಸಿನಿಮಾ ನಿರ್ದೇಶಕ ವಾದಿಸಿದ. ಆನಂತರ ಸಿನಿಮಾಕ್ಕೆ ಅನುಮತಿ ನೀಡಲಾಯಿತು.
ಸಿನಿಮಾ ನಾಯಕ ತಾನು ಈ ಕ್ಷಣದಲ್ಲಿ ಟರ್ ಟಕ್ ಪ್ರದೇಶಕ್ಕೆ ಧಾವಿಸುತ್ತಿರುವುದಾಗಿ ಹೇಳುತ್ತಾನೆ. ಹೀಗಾಗಿ ವೀಕ್ಷಕರು ಮುಂದಿನ ದೃಶ್ಯ ಟರ್ ಟಕ್‌ನಲ್ಲಿ ನಡೆಯುತ್ತಿರಬಹುದು ಎಂದು ಭಾವಿಸುತ್ತಾರೆ. ಆದರೆ ಮುಂದಿನ ಚಿತ್ರೀಕರಣ ನಡೆದಿದ್ದು ನ್ಯೂಜಿಲ್ಯಾಂಡಿನಲ್ಲಿ. ಟರ್ ಟಕ್ ಬಗ್ಗೆ ಎರಡು ಮಾತು ಹೇಳಬೇಕು. ಇದು ಭಾರತದ ಉತ್ತರಕ್ಕಿರುವ ಕಟ್ಟಕಡೆಯ ಹಳ್ಳಿ. ಲೇಹ್ ಜಿಯ, ನುಬ್ರಾ ಪ್ರಾಂತ ದಲ್ಲಿರುವ ಈ ಹಳ್ಳಿಯ ಜನಸಂಖ್ಯೆ 3 ಸಾವಿರವಿದ್ದಿರಬಹುದು. ಲೇಹ್‌ದಿಂದ 250 ಕಿ.ಮೀ. ದೂರ ದಲ್ಲಿರುವ ಈ ಹಳ್ಳಿ ಷ್ಯೋಕ್ ನದಿ ದಂಡೆಯ ಮೇಲಿದೆ.
1971ರವರೆಗೆ ಈ ಹಳ್ಳಿ ಪಾಕಿಸ್ತಾನದ ವಶದಲ್ಲಿತ್ತು. ಆನಂತರ ಭಾರತ ಈ ಹಳ್ಳಿ ಸೇರಿದಂತೆ ಸುತ್ತಲಿನ ಪ್ರದೇಶವನ್ನು ತನ್ನ ವಶಕ್ಕೆ ಪಡೆಯಿತು. ಮೂಲತಃ ಟರ್ ಟಕ್ ಬಾಲ್ಟಿಸ್ತಾನ್ ಪ್ರಾಂತದಲ್ಲಿದೆ. ಟರ್ ಟಕ್ ನಂತರ ಜನವಸತಿ ಇಲ್ಲ. ಅದಾದ ಬಳಿಕ ಪಾಕಿಸ್ತಾನ ನಿಯಂತ್ರಣದಲ್ಲಿರುವ ಗಿಲ್ಗಿಟ್ ಆರಂಭ ವಾಗುತ್ತದೆ. ಟರ್ ಟಕ್ ಸಿಯಾಚಿನ್ ಪ್ರದೇಶದ ಹೆಬ್ಬಾಗಿಲು ಸಹ ಹೌದು. ಟರ್ ಟಕ್ ಹಿಮಾಚ್ಛಾದಿತ ಪ್ರದೇಶವಾದರೂ ಹಣ್ಣುಗಳಿಗೆ ಪ್ರಸಿದ್ಧ. ಈ ಹಳ್ಳಿಯಲ್ಲಿ ಅನೇಕ ಹೋಮ್ ಸ್ಟೇಗಳಿವೆ.
ಇದು ದೇಶದ ಉತ್ತರಕ್ಕಿರುವ ಕೊನೆಯ ಹಳ್ಳಿಯಾಗಿರುವುದರಿಂದ, ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಆದರೆ ಸೇನೆಯ ಅನುಮತಿ ಬೇಕು. ಟರ್ ಟಕ್ ಹಳ್ಳಿ ಜನ ಪ್ರತಿವರ್ಷ ಸ್ವರ್ಗ ದಿನಾಚರಣೆ ಆಚರಿಸು ತ್ತಾರೆ. ಅಂದರೆ ಅವರ ಪ್ರಕಾರ, ಭೂಮಿ ಮೇಲೆ ಸ್ವರ್ಗ ಅಂತಿದ್ದರೆ ಅದು ಟರ್ ಟಕ್. ಭಾರತದ ಯಾವ ಸಿನಿಮಾ ನಿರ್ದೇಶಕರಿಗೂ ಕಾಣದ ಈ ತಾಣ ಟಾಮ್ ಕ್ರೂಸ್‌ಗೆ ಕಂಡಿದ್ದು ಆಶ್ಚರ್ಯವೇ. ಹಿಂದೊಮ್ಮೆ ಖುಷ್ವಂತ್ ಸಿಂಗ್ ಅವರು ಯಾರೂ ಕೇಳದ ಊರು ಎಂಬುದನ್ನು ವಿವರಿಸುವಾಗ, ‘ಅದು ಯಾರೂ ಕೇಳಿರದ ಟಿಂಬಕ್ಟು ಅಥವಾ ಟರ್ ಟಕ್" ಎಂದು ಬರೆದಿದ್ದನ್ನು ಓದಿದ ನೆನಪು.