ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tejas H S Column: ಬೇಕಿರುವುದು ಹೊಸದಿಕ್ಕು; ಹೊಸ ಧರ್ಮವಲ್ಲ...

ಪ್ರತ್ಯೇಕ ಧರ್ಮದ ಬೇಡಿಕೆಯು ಕೇವಲ ‘ಆಧ್ಯಾತ್ಮಿಕ ಚಳವಳಿ’ ಅಲ್ಲ; ಅದು ರಾಜಕೀಯವಾಗಿ ಬಳಕೆ ಯಾಗುತ್ತಿರುವುದು ಸ್ಪಷ್ಟಗೋಚರ. ಕರ್ನಾಟಕದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ ಶಕ್ತಿಗಳು ಎಂಬುದು ಎಲ್ಲ ಪಕ್ಷಗಳಿಗೂ ತಿಳಿದಿದೆ; ಹೀಗಾಗಿ ಕೆಲವು ಜನನಾಯಕರು ಧಾರ್ಮಿಕ ಭಾವನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

ಧರ್ಮಜಿಜ್ಞಾಸೆ

ತೇಜಸ್‌ ಎಚ್.ಎಸ್

ಬಸವಣ್ಣನವರು ಜಾತಿಭೇದ, ಅಸಮಾನತೆಯ ವಿರುದ್ಧ ಆಧ್ಯಾತ್ಮಿಕ ಕ್ರಾಂತಿಯನ್ನು ನಡೆಸಿ ದರಷ್ಟೇ. ಅವರ ವಚನಗಳು ಮಾನವೀಯ ಏಕತೆಯತ್ತ ದಾರಿ ತೋರಿಸಿದವೇ ವಿನಾ, ಧಾರ್ಮಿಕ ವಿಭಜನೆ ಯತ್ತ ಅಲ್ಲ. ಆದರೆ, ಇಂದು ಕೆಲವರು ಬಸವಣ್ಣನ ಹೆಸರಿನಲ್ಲಿ ವಿಭಜನೆಯ ವಾದವನ್ನು ಮುಂದಿಟ್ಟಿರುವುದು ವಿಷಾದನೀಯ.

ಲಿಂಗಾಯತ ಸಮುದಾಯದೊಳಗೆ ‘ಪ್ರತ್ಯೇಕ ಧರ್ಮದ ಸ್ಥಾನಮಾನ’ ಎಂಬ ವಿಚಾರವು ಇತ್ತೀಚಿನ ದಿನಗಳಲ್ಲಿ ಮತ್ತೆ ಚರ್ಚೆಗೆ ಬಂದಿದೆ. ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಕೆಲವು ಸಂಘಟನೆ ಗಳು ಬಸವಣ್ಣನವರ ತತ್ತ್ವದ ಹೆಸರಿನಲ್ಲಿ ಪ್ರತ್ಯೇಕ ಧಾರ್ಮಿಕ ಗುರುತಿನ ಬೇಡಿಕೆಯನ್ನು ಮುಂದಿ‌ ಟ್ಟಿವೆ.

ಸರಕಾರ, ನಾಯಕರು ಹಾಗೂ ಪಂಡಿತರ ಮಧ್ಯೆ ಇದು ತೀವ್ರ ಚರ್ಚೆಯ ವಿಷಯವಾಗುತ್ತಿದೆ. ಆದರೆ, ಈ ಚರ್ಚೆಯ ಭರದಲ್ಲಿ, ಲಿಂಗಾಯತ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಯಂಥ ನಿಜವಾದ ಅಗತ್ಯಗಳನ್ನು ಮರೆತಂತಾಗಿದೆ.

ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಅದರ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಅವರಿಂದ, ಇಡೀ ಲಿಂಗಾಯತ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಕರ್ನಾಟಕ ಸರಕಾರದ ‘ಸಾಮಾಜಿಕ-ಆರ್ಥಿಕ ಸಮೀಕ್ಷೆ, 2025’ರಲ್ಲಿ ಎಲ್ಲಾ ಲಿಂಗಾಯತರು ‘ಧರ್ಮ’ ಎಂಬ ಕಾಲಂನಲ್ಲಿ ‘ಲಿಂಗಾಯತ’ (ಇತರೆ) ಎಂದು ಬರೆಸುವಂತೆ ಮಹಾಸಭಾ ಮತ್ತು ಜಾಮದಾರರ ಕಡೆ ಯಿಂದ ಸೂಚನೆ ಹೊಮ್ಮಿದೆ.

ಆದರೆ ಸಂವಿಧಾನದಲ್ಲಿ ಲಿಂಗಾಯತ ಧರ್ಮಕ್ಕೆ ಮಾನ್ಯತೆಯಿಲ್ಲ; ಇಲ್ಲಿ ಮಾನ್ಯಗೊಂಡಿರುವುದು ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್, ಬೌದ್ಧ, ಜೈನ, ಪಾರ್ಸಿ ಧರ್ಮಗಳು ಮಾತ್ರ. ಹೀಗಿರುವಾಗ, ಮಾನ್ಯತೆ ಯೇ ಇಲ್ಲದ ಮತ್ತೊಂದು ಧರ್ಮದ ಹೆಸರನ್ನು ನಮೂದಿಸುವಂತೆ ಹೇಳಿ ಗೊಂದಲ ಸೃಷ್ಟಿಸ ಲಾಗಿದೆ, ತನ್ಮೂಲಕ ಲಿಂಗಾಯತರನ್ನು ಎಲ್ಲಿಯೂ ಸಲ್ಲದವರಂತೆ ಮಾಡಲಾಗುತ್ತಿದೆ.

ಇದನ್ನೂ ಓದಿ: Vishweshwar Bhat Column: ಪ್ರಧಾನಿಯ ಮೊದಲ ಸಂದರ್ಶಕ

ಜಾಮದಾರ್ ಅವರು ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುವಾಗ, ಸಂವಿಧಾನದ ಆರ್ಟಿಕಲ್ 25ರ ಕುರಿತು ಉಲ್ಲೇಖಿಸಿ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಹೇಳುತ್ತಾರೆ; ಆದರೆ ಸಂವಿಧಾನದಲ್ಲಿ ಮಾನ್ಯವಾಗದ ಧರ್ಮದ ಹೆಸರನ್ನು ಸಮೀಕ್ಷೆಯ ವೇಳೆ ನಮೂದಿಸಲು ಸೂಚಿಸುತ್ತಾರೆ. ಇದ್ಯಾವ ನ್ಯಾಯ? ಸಂವಿಧಾನವನ್ನು ಪಾಲಿಸುವುದಾದರೆ ಎಲ್ಲ ಸಮಯದಲ್ಲೂ ಪಾಲಿಸಬೇಕಲ್ಲವೇ? ಬಸವಣ್ಣನವರು ಧರ್ಮವನ್ನು ಹೊಸದಾಗಿ ಸ್ಥಾಪಿಸಲು ಪ್ರಯತ್ನಿಸಲಿಲ್ಲ; ಆಗಿನ ಕಾಲಘಟ್ಟದ ಸಾಮಾಜಿಕ ಅನ್ಯಾಯ, ಜಾತಿಭೇದ, ಅಸಮಾನತೆಯ ವಿರುದ್ಧ ಆಧ್ಯಾತ್ಮಿಕ ಕ್ರಾಂತಿಯನ್ನು ನಡೆಸಿದರಷ್ಟೇ.

‘ಕಾಯಕವೇ ಕೈಲಾಸ’, ‘ಮನುಷ್ಯನಿಲ್ಲದೆ ಧರ್ಮವಿಲ್ಲ’ ಎಂಬ ಅವರ ವಚನಗಳು ಮಾನವೀಯ ಏಕತೆಯತ್ತ ದಾರಿ ತೋರಿಸಿದವೇ ವಿನಾ, ಧಾರ್ಮಿಕ ವಿಭಜನೆಯತ್ತ ಅಲ್ಲ. ಆದರೆ, ಇಂದು ಕೆಲ ಸಂಘಟನೆಗಳು ಬಸವಣ್ಣನ ಹೆಸರಿನಲ್ಲಿ ವಿಭಜನೆಯ ವಾದವನ್ನು ಮುಂದಿಟ್ಟಿರುವುದು ವಿಷಾದ ನೀಯ.

ಬಸವ ತತ್ತ್ವವು ಶರಣರ ಸಮಾನತೆಯ ಆಧ್ಯಾತ್ಮಿಕ ಚಳವಳಿಯಾಗಿದ್ದು, ಹಿಂದೂ ಧರ್ಮದ ಒಳಗಿನ ಶುದ್ಧೀಕರಣ ಚಿಂತನೆಯಾಗಿ ಅದು ಹುಟ್ಟಿತ್ತು. ಹೀಗಿರುವಾಗ, ‘ಹೊಸ ಧರ್ಮ’ ಎಂಬ ಹಣೆಪಟ್ಟಿ ಕಟ್ಟಿ ಸಮುದಾಯದೊಳಗಿನ ಏಕತೆಯನ್ನು ಕದಡುವುದು ಸಲ್ಲ, ಅದು ಬಸವಣ್ಣನವರ ಆಶಯವೂ ಅಲ್ಲ.

ಮಹಾಸಭಾ ಮತ್ತು ಜಾಮದಾರರ ನೇತೃತ್ವದಲ್ಲಿ ಕಳೆದ ಕೆಲ ತಿಂಗಳಿಂದ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಅಭಿಯಾನ ನಡೆಯುತ್ತಿದೆ. ‘ಬಸವ ಸಂಸ್ಕೃತಿ ಅಭಿಯಾನ’ ಎಂಬ ಕಾರ್ಯಕ್ರಮದಲ್ಲಿ ಈ ಆಗ್ರಹವನ್ನು ಮತ್ತೊಮ್ಮೆ ತೀವ್ರವಾಗಿ ಎತ್ತಿಹಿಡಿಯಲಾಯಿತು. ಇದಕ್ಕೆ ಸಂಬಂಧಿಸಿದ ಪತ್ರಕರ್ತರ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಅವರು, “ಈ ಬಗ್ಗೆ ವೈಯಕ್ತಿಕ ನಿಲುವೇನಿಲ್ಲ, ಜನರ ನಿಲುವೇ ನನ್ನ ನಿಲುವು" ಎಂದು ಹೇಳಿದ್ದು ರಾಜಕೀಯವಾಗಿ ‘ತಟಸ್ಥ’ ನಿಲುವಿನಂತೆ ಕಂಡಿತು. ಈ ವಿಷಯವು ಈಗ ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಚರ್ಚೆಯ ಮೇಳವಾಗುತ್ತಿದೆ.

ಸರಕಾರ ನಡೆಸುತ್ತಿರುವ ಜನಾಂಗ ಸಮೀಕ್ಷೆ (Caste/Community Survey) ವಿಷಯದಲ್ಲೂ ಲಿಂಗಾಯತರು ‘ಧರ್ಮ’ ವಿಭಾಗದಲ್ಲಿ ತಮ್ಮನ್ನು ಹೇಗೆ ಗುರುತಿಸಿಕೊಳ್ಳಬೇಕು ಎಂಬ ಗೊಂದಲ ವಾಗಿದೆ. ಕೆಲವರು ‘ಲಿಂಗಾಯತ’ ಎಂದು ಬರೆಸುವಂತೆ ಕರೆಕೊಡುತ್ತಿದ್ದರೆ, ಇತರರು ‘ಹಿಂದೂ-ಲಿಂಗಾಯತ’ ಎಂದೇ ಗುರುತಿಸಬೇಕು ಎಂದಿದ್ದಾರೆ.

ಈ ಭಿನ್ನಮತವು ಸಮುದಾಯದೊಳಗಿನ ಏಕತೆಯನ್ನು ಹಾಳುಮಾಡುವ ಲಕ್ಷಣವಾಗಿದೆ. ಕರ್ನಾಟಕದ ಆರ್ಥಿಕ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಲಿಂಗಾಯತರು ಪ್ರಮುಖ ಪಾತ್ರ ವಹಿಸಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸಿಂಹಪಾಲು ಹೊಂದಿರುವ ಈ ಸಮುದಾಯವು ರಾಜ್ಯದ ಅಭಿವೃದ್ಧಿಯ ಬೆನ್ನೆಲುಬಾಗಿದೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ಧರ್ಮದ ಹೆಸರಲ್ಲಿ ಯುವ ಪೀಳಿಗೆಯ ನಡುವೆ ಸೃಷ್ಟಿಸಲಾಗು ತ್ತಿರುವ ಗೊಂದಲವು ಅಸಲಿ ಅಭಿವೃದ್ಧಿಯ ದಿಕ್ಕನ್ನು ತಪ್ಪಿಸುತ್ತಿದೆ. ಶಿಕ್ಷಣ, ಉದ್ಯೋಗ, ಕೃಷಿ, ನವೀನ ತಂತ್ರಜ್ಞಾನ, ಗ್ರಾಮೀಣ ಅಭಿವೃದ್ಧಿಯಂಥ ವಿಷಯಗಳ ಕಡೆಗೆ ಗಮನಕೊಡಬೇಕಾದ ಹೆಚ್ಚಿನ ಯುವ ಜನರನ್ನು ಧಾರ್ಮಿಕ ಗುರುತಿನ ವಿವಾದಗಳು ವಿಭಜಿಸುತ್ತಿವೆ.

ತಮ್ಮ ವಚನಗಳಲ್ಲಿ ‘ಕಾಯಕವೇ ಕೈಲಾಸ’ ಎಂದು ಸ್ಪಷ್ಟವಾಗಿ ಹೇಳಿದ ಬಸವಣ್ಣನವರ ದೃಷ್ಟಿ ಯಲ್ಲಿ, ‘ಕೆಲಸ’ ಮತ್ತು ‘ಸೇವೆ’ಯೇ ನಿಜವಾದ ಧರ್ಮ. ಆದರೆ, ಇಂದಿನ ಕೆಲವು ನಾಯಕರ ನಿಲುವಿ ನಿಂದಾಗಿ ‘ಹೊಸ ಧರ್ಮದ ಹೆಸರು ತರುವುದೇ ಧರ್ಮರಕ್ಷಣೆ’ ಎಂಬ ತಪ್ಪುಕಲ್ಪನೆ ಬೆಳೆಯುತ್ತಿದೆ.

ಪ್ರತ್ಯೇಕ ಧರ್ಮದ ಬೇಡಿಕೆಯು ಕೇವಲ ‘ಆಧ್ಯಾತ್ಮಿಕ ಚಳವಳಿ’ ಅಲ್ಲ; ಅದು ರಾಜಕೀಯವಾಗಿ ಬಳಕೆಯಾಗುತ್ತಿರುವುದು ಸ್ಪಷ್ಟಗೋಚರ. ಕರ್ನಾಟಕದಲ್ಲಿ ಲಿಂಗಾಯತ ಮತದಾರರೇ ನಿರ್ಣಾಯಕ ಶಕ್ತಿಗಳು ಎಂಬುದು ಎಲ್ಲ ಪಕ್ಷಗಳಿಗೂ ತಿಳಿದಿದೆ; ಹೀಗಾಗಿ ಕೆಲವು ಜನನಾಯಕರು ಧಾರ್ಮಿಕ ಭಾವನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.

ಇದರಿಂದಾಗಿ ಸಮುದಾಯದಲ್ಲಿ ನಂಬಿಕೆ, ಒಗ್ಗಟ್ಟು, ಧರ್ಮಶ್ರದ್ಧೆಗಳು ಕುಸಿಯುವ ಅಪಾಯವಿದೆ. ಬಸವಣ್ಣನವರ ತತ್ತ್ವದ ಮೌಲ್ಯಗಳು ಅಭಿವೃದ್ಧಿಯ ದೀಪವಾಗಬೇಕೇ ವಿನಾ, ರಾಜಕೀಯ ವಾದಗಳ ಸಾಧನವಾಗಬಾರದು. ಶಿಕ್ಷಣ, ಉದ್ಯಮ ಮತ್ತು ಸಾಮಾಜಿಕ ಏಕತೆಯು ಅಭಿವೃದ್ಧಿಯ ನಿಜವಾದ ದಿಕ್ಕಾಗಿದೆ. ಲಿಂಗಾಯತ ಸಮುದಾಯವು ‘ಪ್ರತ್ಯೇಕ ಧರ್ಮ’ ಚರ್ಚೆಯಿಂದ ಹೊರಬಂದು, ಶಿಕ್ಷಣ ಮತ್ತು ಆರ್ಥಿಕ ಪ್ರಗತಿಯತ್ತ ಮುಖಮಾಡಬೇಕಿದೆ.

ಶಿಕ್ಷಣವನ್ನು ಪವಿತ್ರ ಸಾಧನವೆಂದು ಮನಗಂಡಿದ್ದ ಬಸವಣ್ಣನವರು ಮಹಿಳಾ ಶಿಕ್ಷಣಕ್ಕೂ ಒತ್ತು ನೀಡಿದರು. ಲಿಂಗಾಯತ ಸಮುದಾಯದ ಯುವಕರು ಗ್ರಾಮೀಣ ಉದ್ಯಮ, ಕೃಷಿ ತಂತ್ರಜ್ಞಾನ, ಸ್ಟಾರ್ಟ್‌ಅಪ್, ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿ ಇರಬೇಕಾದ್ದು ವರ್ತಮಾನದ ಅಗತ್ಯ ವಾಗಿದೆ. ಅಭಿವೃದ್ಧಿಯ ಉಪಕ್ರಮಗಳಲ್ಲಿ ಇವೆಲ್ಲವೂ ಸೇರಿವೆ: ಗ್ರಾಮೀಣ ಶಿಕ್ಷಣ ಗುಣಮಟ್ಟದ ಸುಧಾರಣೆ, ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವಿಕೆ, ಯುವಕರ ಉದ್ಯೋಗಾವಕಾಶಗಳು, ಮಹಿಳಾ ಸಬಲೀಕರಣ, ಸಾಮಾಜಿಕ ಒಗ್ಗಟ್ಟು ಮತ್ತು ಶಾಂತಿಯನ್ನು ಕಾಪಿಟ್ಟುಕೊಳ್ಳುವಿಕೆ.

ಆದರೆ, ಪ್ರತ್ಯೇಕ ಧರ್ಮದ ವಿವಾದ ಹೀಗೆಯೇ ಮುಂದುವರಿದರೆ, ಈ ಉಪಕ್ರಮಗಳು ಕೈಗೂಡದೆ ಸಮಯ ಮತ್ತು ಶಕ್ತಿಯಹರಣವಾಗುತ್ತದೆ. ಬಡವರ, ಶ್ರಮಿಕರ, ಶೂದ್ರರ ಗೌರವವನ್ನು ಎತ್ತಿ ಹಿಡಿದ ಬಸವಣ್ಣನವರ ದೃಷ್ಟಿಯಲ್ಲಿ ‘ಧರ್ಮ’ ಎಂದರೆ ಅಂತರಂಗ ಶುದ್ಧಿ, ಸಮಾಜಸೇವೆ, ಸಮಾನತೆ, ಕಾಯಕ ಮತ್ತು ಭಕ್ತಿ. ಇಂಥ ತತ್ತ್ವವನ್ನು ‘ಹೊಸ ಧರ್ಮ’ದ ರೂಪದಲ್ಲಿ ಚಿಕ್ಕದಾಗಿಸಿದರೆ, ಅದು ಆ ತತ್ತ್ವದ ಗೌರವಕ್ಕೆ ಧಕ್ಕೆ ತಂದಂತೆಯೇ ಆಗುತ್ತದೆ.

ಬಸವಣ್ಣನವರ ಆದರ್ಶಗಳನ್ನು ಪಾಲಿಸಿಕೊಂಡು, ಎಲ್ಲ ಧರ್ಮಗಳಿಗೂ ಮಾದರಿಯಾದ ಮಾನವೀಯ ಮಾಜವನ್ನು ಕಟ್ಟುವ ಹೊಣೆ ಹೊತ್ತಿರುವ ಲಿಂಗಾಯತರಲ್ಲಿ, ಇಂಥ ಪ್ರತ್ಯೇಕ ಧರ್ಮದ ಬೇಡಿಕೆಗಳಿಂದಾಗಿ ಭಿನ್ನಾ ಭಿಪ್ರಾಯಗಳು ಹೆಚ್ಚುತ್ತಿವೆ. ‘ಶೈವ-ಲಿಂಗಾಯತ’ ಎಂಬ ಭೇದವು ಒಂದೇ ತತ್ತ್ವದ ಬೇರೆ ಮುಖಗಳಾಗಿದ್ದರೂ, ರಾಜಕೀಯ ಪ್ರಚಾರದ ಅಡಿಯಲ್ಲಿ ವಿಭಜನೆಗೊಂಡಂತೆ ತೋರುತ್ತಿದೆ. ಈ ಸಂದರ್ಭದಲ್ಲಿ ಲಿಂಗಾಯತರು ತಮ್ಮ ಆಂತರಿಕ ಏಕತೆಯನ್ನು ಉಳಿಸಿಕೊಳ್ಳ ಬೇಕಾದ್ದು ತುಂಬಾ ಮುಖ್ಯ. ಏಕೆಂದರೆ ಶಕ್ತಿಯಿರುವುದು ಏಕತೆಯಲ್ಲೇ ವಿನಾ, ವಿಭಜಿತ ಸ್ವರೂಪ ದಲ್ಲಲ್ಲ!

ಲಿಂಗಾಯತರಿಗೆ ಇಂದು ಅಗತ್ಯವಿರುವುದು ಹೊಸ ದಿಕ್ಕೇ ವಿನಾ, ಹೊಸ ಧರ್ಮವಲ್ಲ; ಅದು ಬಸವಣ್ಣನವರ ದಿಕ್ಕು, ಸಮಾನತೆ, ಶ್ರದ್ಧೆ, ಕಾಯಕ, ಶಿಕ್ಷಣ ಮತ್ತು ಅಭಿವೃದ್ಧಿಯ ದಿಕ್ಕು. ಲಿಂಗಾಯತರು ಪ್ರತ್ಯೇಕ ಧರ್ಮದ ‘ರಾಜಕೀಯ’ ದಿಂದ ವಿಮುಖರಾಗಿ ಅಭಿವೃದ್ಧಿಯತ್ತ ಗಮನ ಹರಿಸಿದರೆ, ಮತ್ತೊಮ್ಮೆ ಕರ್ನಾಟಕದ ಸಾಮಾಜಿಕ ಕ್ರಾಂತಿಯ ಮುಂಚೂಣಿಯಲ್ಲಿರುತ್ತಾರೆ. ‘ಸಮಾಜದ ಅಭಿವೃದ್ಧಿ’ಯೇ ಬಸವ ತತ್ತ್ವದ ದಾರಿಯೇ ವಿನಾ, ‘ಧರ್ಮವಿಭಜನೆ’ ಅಲ್ಲ.

(ಲೇಖಕರು ಹವ್ಯಾಸಿ ಬರಹಗಾರರು)