ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಓದಿದ್ದನ್ನು ನಾವು ಏಕೆ ಮರೆಯುತ್ತೇವೆ ?

ಆರಂಭದಲ್ಲಿ ಹಾಗೂ ಕೊನೆಯಲ್ಲಿ ಕಲಿತದ್ದು ನೆನಪಿನಲ್ಲಿ ಉಳಿಯುತ್ತವೆ, ಮಧ್ಯದಲ್ಲಿ ಕಲಿತ ದ್ದು ಮರೆತುಹೋಗುತ್ತದೆ. ಹೀಗಾಗದಿರಲು ನಾವು ವಿಷಯವನ್ನು ಮತ್ತೆ ಮತ್ತೆ ಮನನ ಮಾಡಿ ಕೊಳ್ಳಬೇಕು. ವೇದ ವಿದ್ಯಾರ್ಥಿಗಳು ಮಂತ್ರಗಳನ್ನು ಮತ್ತೆ ಮತ್ತೆ ಕಲಿಯುತ್ತಾರೆ. ನೆನಪಿನಲ್ಲಿ ದ್ದರೂ, ಮಂತ್ರ ಪಠನವನ್ನು ಪುನರಾ ವರ್ತಿಸುತ್ತಾರೆ. ಹೀಗೆ ಕಲಿತದ್ದು ನೆನಪಿನಲ್ಲಿರುತ್ತದೆ.

ಓದಿದ್ದನ್ನು ನಾವು ಏಕೆ ಮರೆಯುತ್ತೇವೆ ?

ಅಂಕಣಕಾರ ಡಾ.ನಾ.ಸೋಮೇಶ್ವರ

ಹಿಂದಿರುಗಿ ನೋಡಿದಾಗ

ಇದು ಅನಾದಿ ಕಾಲದ ಪ್ರಶ್ನೆ. ದಾರ್ಶನಿಕರು, ವಿಜ್ಞಾನಿಗಳು ಹಾಗೂ ಶಿಕ್ಷಣವೇತ್ತರು ಈ ಬಗ್ಗೆ ತುಂಬಾ ವಿಚಾರ ಮಾಡಿದ್ದಾರೆ. ನಾವು ನಮ್ಮ ಜೀವನ ಪೂರ್ತಿ ಕಲಿಯುತ್ತಿರುತ್ತೇವೆ. ನಮ್ಮ ಮನೆ, ಶಾಲೆ, ಕಾಲೇಜು, ಉದ್ಯೋಗ, ಹಾಗೂ ನಿವೃತ್ತ ಜೀವನದ ಪ್ರತಿಯೊಂದು ದಿನವೂ ಒಂದಲ್ಲ ಒಂದು ಹೊಸ ವಿಷಯವನ್ನು ಕಲಿಯುತ್ತಲೇ ಇರುತ್ತೇವೆ. ಸಾಯುವ ಕೊನೆಯ ಕ್ಷಣದಲ್ಲೂ ‘ಸಾವು ಎಂದರೆ ಏನು?’ ಎನ್ನುವುದನ್ನು ಅನುಭವಿಸಿ ತಿಳಿಯುತ್ತೇವೆ. ಈ ಕಲಿಕೆ ಗೆ ಕೊನೆಯಿಲ್ಲ. ಆದರೆ ನಾವು ಕಲಿತದ್ದರಲ್ಲಿ ಬಹಳಷ್ಟನ್ನು ಮರೆಯುತ್ತೇವೆ. ಮರೆಯು ವುದೇ ಹೆಚ್ಚು. ನೆನಪಿನಲ್ಲಿ ಇಟ್ಟುಕೊಳ್ಳುವುದು ಕಡಿಮೆ. ನಾನಿ ವತ್ತು ನಗರದ ಮಾರುಕಟ್ಟೆ ಯಲ್ಲಿ ಹಣ್ಣು ತರಕಾರಿಯನ್ನು ಕೊಳ್ಳಲೆಂದು ಹೋದಾಗ ನೂರಾರು ಜನರು ನನ್ನೆದು ರು ಬಂದರು.

ಅವರನ್ನು ನೋಡಿದೆ. ಕೆಲವರನ್ನು ಮಾತನಾಡಿಸಿದೆ. ಚೌಕಾಸಿ ಮಾಡಿದೆ. ಒಬ್ಬ ಮಹಿಳೆಯ ಹತ್ತಿರ ಜಗಳವಾಡಿದೆ. ಈ ಎಲ್ಲ ಜನರ ಮುಖಗಳನ್ನು ನಾನು ನೆನಪಿನಲ್ಲಿ ಇಟ್ಟುಕೊಳ್ಳ ಬೇಕೆ? ಈ ನಿರ್ಣಯವನ್ನು ತೆಗೆದುಕೊಳ್ಳುವವರು ಯಾರು? ಇದೊಂದು ಚಿದಂಬರ ಪ್ರಶ್ನೆ ಯಂತೆ ಮನುಕುಲವನ್ನು ಕಾಡುತ್ತಲೇ ಬಂದಿದೆ.

ಇದನ್ನೂ ಓದಿ: Dr N Someshwara Column: ಮನಸ್ಸಿನ ಮೌಲ್ಯಮಾಪನವು ಸಾಧ್ಯವೇ ?

ಕಲಿಕೆ, ನೆನಪು ಮತ್ತು ಮರೆವಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಅದ್ಭುತ ವೈಜ್ಞಾನಿಕ ಪ್ರಯೋಗ ಗಳನ್ನು ಹಾಗೂ ತರ್ಕಬದ್ಧ ಅಧ್ಯಯನವನ್ನು ಮಾಡಿದ ಮೊದಲಿಗರಲ್ಲಿ ಜರ್ಮನ್ ದೇಶದ ಹರ್ಮನ್ ಎಬಿಂಗಾಸ್ (1850-1909) ಪ್ರಮುಖನು. ಈತನು ಓರ್ವ ಮನೋವಿಜ್ಞಾನಿ. ಇವನು ಮೂರು ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಮುಂದಿಟ್ಟು, ಮತ್ತೆ ಮೂರು ಪರಿಕಲ್ಪನೆ ಗಳ ಸುಳಿವನ್ನು ನೀಡಿದ್ದಾನೆ.

ಮರೆವಿನ ರೇಖೆ (ಫಾರ್ಗೆಟಿಂಗ್ ಕರ್ವ್), ಕಲಿಕೆಯ ರೇಖೆ (ಲರ್ನಿಂಗ್ ಕರ್ವ್) ಮತ್ತು ಅಂತ ರದ ಪರಿಣಾಮ (ಸ್ಪೇಸಿಂಗ್ ಎಫೆಕ್ಟ್). ಕ್ರಮಗತಿ ಸ್ಥಾನ ಪರಿಣಾಮ (ಸೀರಿಯಲ್ ಪೊಸಿಷನ್ ಎಫೆಕ್ಟ್), ಮಿತಿಮೀರಿ ಕಲಿಕೆ (ಓವರ್ ಲರ್ನಿಂಗ್) ಮತ್ತು ಪರೀಕ್ಷಾ ಪರಿಣಾಮ (ಟೆಸ್ಟಿಂಗ್ ಎಫೆಕ್ಟ್). ಇವು ಇಂದಿಗೂ ಮಾನ್ಯವಾಗಿವೆ.

ಕಲಿಕೆ (ಲರ್ನಿಂಗ್) ಎಂದರೆ ಹೊಸದನ್ನು ಕಲಿಯುವುದು. ಆ ಕಲಿಕೆ ಹೊಸ ತಿಳಿವು ಆಗಿರ ಬಹುದು, ಕುಶಲತೆ ಆಗಿರಬಹುದು ಇಲ್ಲವೇ ವರ್ತನೆಯಾಗಿರಬಹುದು. ಇದೊಂದು ಸಂಕೀರ್ಣ ಪ್ರಕ್ರಿಯೆ. ನಮ್ಮ ಪರಿಸರದಲ್ಲಿ ನಡೆಯುವ ವಿದ್ಯಮಾನಗಳನ್ನು ನಮ್ಮ ಪಂಚೇಂದ್ರಿಯಗಳ ಮೂಲಕ ಮಿದುಳಿಗೆ ಪೂರೈಸುತ್ತೇವೆ. ಈ ಪಂಚೇಂದ್ರಿಯಗಳಲ್ಲಿ ಸಂಗ್ರಹವಾದ ಮಾಹಿತಿಗಳನ್ನು ಸಮನ್ವಯಗೊಳಿಸುವ ಒಂದು ಹೊಸ ನರಜಾಲವು ರೂಪುಗೊಳ್ಳುತ್ತದೆ. ಈ ನರಜಾಲದಲ್ಲಿ ನಾವು ಹೊಸದಾಗಿ ಕಲಿತ ವಿಚಾರವು ದಾಖಲಾ ಗಿರುತ್ತದೆ.

ಹೀಗೆ ದಾಖಲಾಗಿರುವುದೇ ನೆನಪು. ಈ ನೆನಪನ್ನು ಜಾಗೃತಗೊಳಿಸುವುದೇ ಸ್ಮರಣೆ. ಇಲ್ಲಿ ಒಂದು ‘ವಿಚಿತ್ರ’ವು ನಡೆಯುತ್ತದೆ. ನಾವು ಒಂದು ವಿಚಾರವನ್ನು ಕಲಿತು 20 ನಿಮಿಷಗಳಾದ ಮೇಲೆ, ನಮ್ಮ ಕಲಿಕೆಯ ಶೇ.42ರಷ್ಟು ವಿವರಗಳನ್ನು ಮರೆಯುತ್ತೇವೆ.

ಒಂದು ಗಂಟೆಯಾಗುತ್ತಿರುವಂತೆಯೇ ಸುಮಾರು ಶೇ.56ರಷ್ಟು ಮಾಹಿತಿಯನ್ನು ಮರೆಯು ತ್ತೇವೆ. ಒಂದು ದಿನದಲ್ಲಿ ಶೇ.33ರಷ್ಟು ಮಾಹಿತಿಯು ಮಾತ್ರ ನೆನಪಿನಲ್ಲಿ ಉಳಿದಿರುತ್ತದೆ. ಒಂದು ವಾರವಾಗುತ್ತಿರುವಂತೆಯೇ ಶೇ.25ರಷ್ಟು ಮಾತ್ರ ಉಳಿದಿರುತ್ತದೆ. ಈ ಎಲ್ಲ ಮಾಹಿತಿ ಯನ್ನು ಒಂದು ಗ್ರಾಫ್ ರೂಪದಲ್ಲಿ ದಾಖಲಿಸಬಹುದು. ಆಗ ದೊರೆಯುವ ರೇಖೆಯೇ ಮರೆವಿನ ರೇಖೆ. ಈ ವಿವರಣೆಯಿಂದ ‘ಮರೆವು’ ಎನ್ನುವುದು ಪ್ರಕೃತಿಯು ರೂಪಿಸಿರುವ ಒಂದು ಸಹಜ ಪ್ರಕ್ರಿಯೆ ಎಂದು ಅರ್ಥವಾಗುತ್ತದೆ. ‌

ಮಾರುಕಟ್ಟೆಯಲ್ಲಿ ನಾನು ನೂರಾರು ಜನರನ್ನು ನೋಡಿದೆ. ಅವರನ್ನು ಒಂದು ದಿನ ಮುಗಿಯುವಷ್ಟರಲ್ಲಿ ಪೂರ್ಣ ಮರೆಯುತ್ತೇನೆ. ಅದರೆ ಚೌಕಾಸಿ ಮಾಡುವಾಗ ಜಗಳ ವಾಡಿದ ಮಹಿಳೆಯ ಮುಖ ಮಾತ್ರ ನೆನಪಿನಲ್ಲಿ ಸ್ಥಿರವಾಗಿದೆ. ಏನು ಮಾಡಿದರೂ ಮರೆ ಯಲು ಆಗುತ್ತಿಲ್ಲ. ನಾನು ತರಕಾರಿ ಹೆಂಗಸಿನ ಜತೆಯಲ್ಲಿ ಜಗಳವಾಡಿದ್ದು ಒಂದು ಹೊಸ ಕಲಿಕೆ. ನಾನು ಮನೆಗೆ ಬಂದಕೂಡಲೇ ನನ್ನ ಹೆಂಡತಿಯ ಬಳಿ ನಡೆದ ಘಟನೆಯನ್ನು ಹೇಳಿದೆ.

ಸಂಜೆ ಗೆಳೆಯರ ಜತೆಯಲ್ಲಿ ಸುತ್ತಾಡಲು ಹೋಗುವಾಗಲೂ ಅವರ ಜತೆಯಲ್ಲಿ ಬೆಳಗ್ಗೆ ನಡೆದ ಘಟನೆಯನ್ನು ವಿವರಿಸಿದೆ. ರಾತ್ರಿ ಮಲಗುವುದಕ್ಕೆ ಮೊದಲೇ ಅದೇ ಘಟನೆಯು ನನ್ನನ್ನು ಕಾಡುತ್ತಿತ್ತು. ಬೆಳಗ್ಗೆ ಎದ್ದೆ. ಮನೆಯಲ್ಲಿ ಕೊತ್ತಂಬರಿ ತನ್ನಿ ಎಂದಾಗ ಅದೇ ಮಾರುಕಟ್ಟೆಗೆ ಹೋದೆ. ಅದೇ ಹೆಂಗಸು ಕಂಡಳು. ನಿನ್ನ ನಡೆದದ್ದೆಲ್ಲ ನೆನಪಿಗೆ ಬಂತು. ಮುಖವು ಬಿಗುವಾಯಿತು. ಅಂದಿನಿಂದ ಪ್ರತಿಸಲ ಮಾರುಕಟ್ಟೆಗೆ ಹೋದಾಗಲೆಲ್ಲ ಆ ಜಗಳ ವಾಡಿದ ಹೆಂಗಸಿನ ನೆನಪು ಬರುತ್ತಿತ್ತು.

ಬಹುಶಃ ನಾನು ಆಕೆಯನ್ನು ನನ್ನ ಜೀವಮಾನ ಪೂರ್ಣ ಮರೆಯುವುದಿಲ್ಲ ಎಂದೆನಿಸು ತ್ತಿದೆ. ಮಾರುಕಟ್ಟೆಯ ಆ ತರಕಾರಿ ಹೆಂಗಸಿನ ಪ್ರಕರಣವನ್ನು ನಾನು ಯಾಕೆ ನೆನಪಿನಲ್ಲಿ ಇಟ್ಟುಕೊಂಡಿದ್ದೇನೆ ಎನ್ನುವುದನ್ನು ವಿಶ್ಲೇಷಿಸೋಣ. ಮಾರುಕಟ್ಟೆಯಿಂದ ಬಂದಕೂಡಲೇ ನನ್ನ ಹೆಂಡತಿಗೆ ಇಡೀ ಕಥೆಯನ್ನು ಹೇಳಿದೆ. ಆ ಸಂಜೆ ನನ್ನ ಗೆಳೆಯರಿಗೆ ಮತ್ತೊಮ್ಮೆ ಹೇಳಿದೆ.

ಮರು ದಿವಸ ಬೆಳಗ್ಗೆ ಕೊತ್ತಂಬರಿ ತರಲು ಹೋದಾಗ, ಮತ್ತೆ ಅವಳನ್ನು ನೆನಪಿಸಿಕೊಂಡೆ. ಇಲ್ಲಿ ನಾನೇನು ಮಾಡುತ್ತಿದ್ದೇನೆ? ಒಂದು ಕಲಿಕೆಯನ್ನು ಮತ್ತೆ ಮತ್ತೆ ಮತ್ತೆ ನೆನಪಿಸಿಕೊಳ್ಳು ತ್ತಿದ್ದೇನೆ. ವಿದ್ಯಾರ್ಥಿಗಳು ತಾವು ಕಲಿತ ಹೊಸ ಪಾಠವನ್ನು ಒಂದೇ ದಿನದಲ್ಲಿ ಮರೆಯು ವುದು ಪ್ರಕೃತಿ ನಿಯಮ. ಅದನ್ನು ಅವರು ಮರೆಯಬಾರದು ಎಂದರೆ, ಅವರು ಪಾಠವನ್ನು ಮತ್ತೆ ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕು.

ಇದುವೇ ಕಲಿಕೆಯ ರೇಖೆ ಅಥವಾ ಲರ್ನಿಂಗ್ ಕರ್ವ್. ಒಂದು ವಿಷಯವನ್ನು ಮತ್ತೆ ಮತ್ತೆ ಕಲಿಯುತ್ತಾ ಹೋದರೆ, ಅದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಮೂರನೆಯ ಪರಿಕಲ್ಪನೆ ಯೆಂದರೆ ಅಂತರದ ಪರಿಣಾಮ. ಒಂದು ಹೊಸ ಕಲಿಕೆಯನ್ನು ಮತ್ತೆ ಮತ್ತೆ ಮತ್ತೆ ಕಲಿಯು ವಾಗ ಎಷ್ಟು ಅಂತರವನ್ನು ಕಾದಿಟ್ಟುಕೊಳ್ಳುತ್ತೇವೆ ಎನ್ನುವುದು ಇದರ ಸಾರಾಂಶ. ನಾನು ಆ ಹೆಂಗಸಿನ ಘಟನೆಯನ್ನು 24 ಗಂಟೆಗಳ ಒಳಗೆ ಮೂರು ಸಲ ನೆನಪಿಸಿಕೊಂಡೆ.

ಆನಂತರವೂ ಆಕೆಯ ಮುಖವನ್ನು ನೋಡಿದಾಗಲೆಲ್ಲ ಎಲ್ಲವನ್ನು ಮತ್ತೆ ನೆನಪಿಸಿಕೊಂಡೆ. ಒಂದು ಪ್ರಕರಣವನ್ನು, ಒಂದು ದಿನದಲ್ಲಿ ಮತ್ತೆ ಮತ್ತೆ ಮತ್ತೆ ಮೂರು ಸಲ ನೆನಪಿಸಿ ಕೊಂಡ ಕಾರಣ, ಆ ಪ್ರಕರಣದ ವಿವರಗಳೆಲ್ಲ ನೆನಪಿನಲ್ಲಿ ಉಳಿದಿದ್ದವು. ಎಬಿಂಗಾಸ್, ಈ ಮೂರು ಪ್ರಕರಣಗಳ ಫಲಿತಾಂಶವನ್ನು ಪ್ರಾಯೋಗಿಕವಾಗಿ ನಿರೂಪಿಸಿದ. ಮುಂದೆ ನಾವು ವಿವರಿಸುವ ಮೂರು ವಿಷಯಗಳ ಬಗ್ಗೆ ಆತ ಸೂಚ್ಯವಾಗಿ ಪ್ರಸ್ತಾಪಿಸಿದ್ದ.

ಇತರರು ಈ ಕ್ಷೇತ್ರದಲ್ಲಿ ಕೆಲಸ ಮಾಡಿ ಆ ಮೂರೂ ಪರಿಕಲ್ಪನೆಗಳ ವಾಸ್ತವತೆಯನ್ನು ನಮಗೆ ಮನಗಾಣಿಸಿದರು. ನಾಲ್ಕನೆಯ ಪರಿಕಲ್ಪನೆಯೆಂದರೆ ಕ್ರಮಗತಿ ಸ್ಥಾನ ಪರಿಣಾಮ. ಮನೆಯಲ್ಲಿ ನನ್ನ ಹೆಂಡತಿಯು ‘ಅಂಗಡಿಗೆ ಹೋಗಿ 10 ವಸ್ತುಗಳನ್ನು ತರಬೇಕು’ ಎಂದಳು. ಆಗ ನಾನು ‘ಹೂಂ ಹೇಳು’ ಎಂದೆ. ‘ನಾನು ಹೇಳೋದನ್ನ ಬರಕೊಳ್ರೀ, ಇಲ್ಲದಿದ್ದರೆ ಮರೆತು ಹೋಗುತ್ತೆ’ ಎಂದಾಗ, ನನ್ನ ಅಹಮ್ಮಿಗೆ ಪೆಟ್ಟು ಬಿತ್ತು. ಕೂಡಲೆ ‘ಏ..ಹೇಳೆ ನೀನು. ಹತ್ತು ಹೆಸರನ್ನು ನೆನಪಲ್ಲಿ ಇಟ್ಕೊಳ್ಳಕ್ಕೆ ಆಗಲ್ವ ನನಗೆ’ ಎಂದೆ. ‘ನಿಮ್ಮಿಷ್ಟ’ ಎಂದು ಹೇಳಿದಳು.

ಅವಳು ಹೇಳಿದ್ದನ್ನೆಲ್ಲ ಮತ್ತೊಮ್ಮೆ ನನಗೆ ನಾನೇ ಹೇಳಿಕೊಂಡೆ. ಅಂಗಡಿಗೆ ಹೊರಟೆ. ನನ್ನ ಗೆಳೆಯನೂ ಸಿಕ್ಕಿದ. ಅವನೊಡನೆ ಮಾತನಾಡುತ್ತಾ ಇಬ್ಬರೂ ಅಂಗಡಿಗೆ ಹೋದೆವು. ಅಲ್ಲಿ ನನ್ನ ಹೆಂಡತಿ ಹೇಳಿದ 10 ವಸ್ತುಗಳ ಹೆಸರನ್ನು ನೆನಪಿಸಿಕೊಳ್ಳಲೆತ್ನಿಸಿದೆ. ಮೊದಲ ಮೂರು ಹೆಸರು ಹಾಗೂ ಕೊನೆಯ ಮೂರು ವಸ್ತುಗಳ ಹೆಸರು ನೆನಪಿಗೆ ಬಂದವು.

ಮಧ್ಯದ ನಾಲ್ಕು ವಸ್ತುಗಳ ಹೆಸರು ನೆನಪಿಗೆ ಬರಲೇ ಇಲ್ಲ. ನನ್ನ ಹೆಂಡತಿಗೆ ಫೊನ್ ಮಾಡಿದೆ. ಮಧ್ಯದ ನಾಲ್ಕು ನೆನಪಿಗೆ ಬರುತ್ತಿಲ್ಲ ಎಂದೆ. ಫೋನಿನಲ್ಲಿಯೇ ನನ್ನ ಹೆಂಡತಿ ಬೈಗುಳಾರ್ಚನೆಯನ್ನು ಮಾಡಿದಳು. ನಾಲ್ಕು ವಸ್ತುಗಳ ಹೆಸರನ್ನು ಹೇಳಿದಳು. ಅವುಗಳ ನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಂಡು ಎಲ್ಲ ಹತ್ತೂ ವಸ್ತುಗಳನ್ನು ಮನೆಗೆ ತಂದೆ. ನನಗೆ ಆಗಿದ್ದು ಕ್ರಮಗತಿ ಸ್ಥಾನ ಪರಿಣಾಮ.

ನನ್ನ ಹೆಂಡತಿ ಹೇಳಿದ 10 ವಸ್ತುಗಳಲ್ಲಿ ಮೊದಲ ಮೂರು ನನ್ನ ನೆನಪಿನಲ್ಲಿ ಉಳಿದವು. ಇದು ‘ಆರಂಭದ ಕಲಿಕೆ’ ಅಥವಾ ‘ಪ್ರೈಮರಿ ಎಫೆಕ್ಟ್’. ಕೊನೆಯ ಮೂರು ವಸ್ತುಗಳು ನೆನಪಿನಲ್ಲಿ ಉಳಿದಿದ್ದವು. ಕಾರಣ ಇವು ‘ಇತ್ತೀಚಿನ ಪರಿಣಾಮಗಳು’ ಅಥವಾ ‘ರೀಸೆನ್ಸಿ ಎಫೆಕ್ಟ್’. ಹಾಗಾಗಿ ಆರಂಭದಲ್ಲಿ ಕಲಿತದ್ದು ಹಾಗೂ ಕೊನೆಯಲ್ಲಿ ಕಲಿತದ್ದು ನೆನಪಿನಲ್ಲಿ ಉಳಿಯುತ್ತವೆ.

ಮಧ್ಯದಲ್ಲಿ ಕಲಿತದ್ದು ಮರೆತುಹೋಗುತ್ತದೆ. ಇದು ನಮ್ಮ ಮಿದುಳು-ಮನಸ್ಸಿನ ಸ್ವಾಭಾ ವಿಕ ವರ್ತನೆ. ಹೀಗೆ ಆಗದಿರಲು ನಾವು ಹತ್ತೂ ವಸ್ತುಗಳ ಹೆಸರನ್ನು ಬರೆದಿಟ್ಟುಕೊಂಡು ಅಂಗಡಿಗೆ ಹೋಗುವುದು ಉತ್ತಮ. ಇಲ್ಲವೆಂದರೆ ನಾನು ಅಂಗಡಿಗೆ ಹೋಗುವ ಹಾದಿಯಲ್ಲಿ, ಎರಡೆರಡು ನಿಮಿಷಕ್ಕೆ ಒಮ್ಮೆ ಹತ್ತೂ ಹೆಸರುಗಳನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳಬೇಕಾಗಿತ್ತು. ಆದರೇನು ಮಾಡುವುದು. ದಾರಿಯಲ್ಲಿ ಗೆಳೆಯ ಸಿಕ್ಕಿಬಿಟ್ಟನಲ್ಲ. ಅವನೊಡನೆ ಮಾತನಾ ಡುತ್ತಾ ಹೋದಾಗ, ದಾರಿ ಸವೆದದ್ದೇ ಗೊತ್ತಾಗಲಿಲ್ಲ.

ಆದರೆ ಹತ್ತು ವಸ್ತುಗಳನ್ನು ನೆನಪಿಸಿಕೊಳ್ಳಲು ಆಗಲೇ ಇಲ್ಲ. ಐದನೆಯ ಪರಿಕಲ್ಪನೆ ಮಿತಿಮೀರಿದ ಕಲಿಕೆ. ನಾವು ಕಲಿತ ವರ್ಣಮಾಲೆ. ಇವನ್ನು ಪ್ರತಿನಿತ್ಯವು ಬಳಸುವ ಕಾರಣ ಇವನ್ನು ಮರೆಯೋದಿಕ್ಕೆ ಸಾಧ್ಯವೇ ಇಲ್ಲ. ವೇದ ವಿದ್ಯಾರ್ಥಿಗಳು ಮಂತ್ರಗಳನ್ನು ಮತ್ತೆ ಮತ್ತೆ ಕಲಿಯುತ್ತಾರೆ. ಎಲ್ಲವೂ ನೆನಪಿನಲ್ಲಿದ್ದರೂ, ಮಂತ್ರ ಪಠನವನ್ನು ತಮ್ಮ ಜೀವನ ದಾದ್ಯಂತ ಪುನರಾವರ್ತಿಸುತ್ತಾರೆ. ಹೀಗೆ ಅಗತ್ಯವನ್ನು ಮೀರಿ ಕಲಿತದ್ದು ಚೆನ್ನಾಗಿ ಹಾಗೂ ಸದಾ ನೆನಪಿನಲ್ಲಿರುತ್ತದೆ.

ಮಿತಿಮೀರಿದ ಕಲಿಕೆಯು ನೆನಪನ್ನು ಸದೃಢವಾಗಿಸುತ್ತದೆ. ಆರನೆಯದು ಪರೀಕ್ಷಾ ಪರಿಣಾ ಮ. ವೇದ ವಿದ್ಯಾರ್ಥಿಗಳಿಗೆ ಯಾವ ಕ್ಷಣದಲ್ಲಾದರೂ ಸರಿ, ನಿಗದಿತ ಮಂತ್ರವನ್ನು ಹೇಳಲು ಪ್ರಾರ್ಥಿಸಿ. ಅವರು ತಕ್ಷಣ ಹೇಳುತ್ತಾರೆ. ಇದುವೇ ಪರೀಕ್ಷಾ ಪರಿಣಾಮ. ಬೇಕೆಂದಾ ಗಲೆಲ್ಲ ನಿಖರವಾಗಿ ನೆನಪಿಗೆ ಬರುವಿಕೆಯೇ ಪರೀಕ್ಷಾ ಪರಿಣಾಮ.

ಕಲಿಕೆ-ನೆನಪು-ಮರೆವಿನ ಬಗ್ಗೆ ನಾನು ಶಾಲಾ ಕಾಲೇಜುಗಳಿಗೆ ಹೋಗಿ ಮಾತನಾಡುವು ದುಂಟು. ಆಗ ಅವರಿಗೆ ಎಬಿಂಗಾಸ್ ಪ್ರಯೋಗಗಳ ಸಾರಾಂಶವನ್ನು ವಿವರಿಸುವುದುಂಟು. ಇದನ್ನು ದಿನದ ಮರು-ಓದು, ವಾರದ ಮರು-ಓದು, ತಿಂಗಳ ಮರು-ಓದು, ಮೂರು ತಿಂಗಳ ಮರು-ಓದು, ಆರು ತಿಂಗಳ ಮರು-ಓದು ಹಾಗೂ ಒಂಬತ್ತು ತಿಂಗಳ ಮರು-ಓದು ಎಂದು ವಿಭಜಿಸಿ ವಿವರಿಸುತ್ತೇನೆ.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತರಗತಿಗಳು ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಆರಂಭ ವಾಗುತ್ತವೆ. ಜೂನ್ ತಿಂಗಳ ಮೊದಲ ವಾರ. ಸೋಮವಾರ ಪಾಠವನ್ನು ಕೇಳಿದ ವಿದ್ಯಾರ್ಥಿ ಗಳು, ಅಂದೇ ರಾತ್ರಿ ತಾವು ಕಲಿತ ಪಾಠವನ್ನು ಮತ್ತೊಮೆ ಓದಬೇಕು. ಮಂಗಳವಾರ ಕಲಿತ ದ್ದನ್ನು ಮಂಗಳವಾರ ರಾತ್ರಿ, ಬುಧವಾರ ಕಲಿತದ್ದನ್ನು ಅದೇ ರಾತ್ರಿ... ಹೀಗೆ ಇಡೀ ವಾರ ಆಯಾ ದಿನ ಕಲಿತದ್ದನ್ನು, ಆಯಾ ದಿನವೇ ಮತ್ತೊಮ್ಮೆ ಓದಬೇಕು. ಇದು ‘ದಿನದ ಮರು-ಓದು’.

ಜೂನ್ ತಿಂಗಳ ಮೊದಲ ಭಾನುವಾರ. ಜೂನ್ ತಿಂಗಳ ಸೋಮವಾರದಿಂದ ಶನಿವಾರ ದವರೆಗೆ ಕಲಿತದ್ದನ್ನು ಜೂನ್ ತಿಂಗಳ ಭಾನುವಾರದಂದು ಇಡೀ ವಾರದ ಪಾಠವನ್ನು ಮತ್ತೊಮ್ಮೆ ಓದಬೇಕು. ಇದು ‘ವಾರದ ಮರು-ಓದು’.

ಜೂನ್ ತಿಂಗಳ ಎರಡನೆ ಭಾನುವಾರ. ಎರಡನೇ ವಾರದಲ್ಲಿ ಕಲಿತ ಹೊಸಪಾಠಗಳನ್ನು ಓದುವುದರ ಜತೆಯಲ್ಲಿ, ಮೊದಲ ವಾರದಲ್ಲಿ ಕಲಿತ ಪಾಠಗಳನ್ನೂ ಓದಬೇಕು. ಜೂನ್ ತಿಂಗಳ ಮೂರನೆಯ ಭಾನುವಾರ. ಮೂರನೆಯ ವಾರದ ಪಾಠಗಳ ಜತೆಯಲ್ಲಿ ಮೊದಲ ಮತ್ತು ಎರಡನೆಯ ವಾರದ ಪಾಠಗಳನ್ನು ಓದಬೇಕು.

ಜೂನ್ ತಿಂಗಳ ನಾಲ್ಕನೆಯ ಭಾನುವಾರ. ನಾಲ್ಕನೆಯ ವಾರದ ಪಾಠದ ಜತೆಯಲ್ಲಿ ಮೊದಲ, ಎರಡನೆಯ ಹಾಗೂ ಮೂರನೆಯ ವಾರದ ಪಾಠಗಳನ್ನೂ ಓದಬೇಕು. ಇದು ‘ತಿಂಗಳ ಮರು-ಓದು’. ಹೀಗೆಯೇ ಜುಲೈ ತಿಂಗಳು ಮಾಡಬೇಕು (ಜೂನ್ ತಿಂಗಳ ಪಾಠವನ್ನು ಓದುವುದು ಬೇಡ) ಹಾಗೂ ಆಗಸ್ಟ್ ತಿಂಗಳೂ ಮಾಡಬೇಕು (ಜುಲೈ ತಿಂಗಳಿನ ಪಾಠವನ್ನು ಓದುವುದು ಬೇಡ). ಆದರೆ ಆಗಸ್ಟ್ ತಿಂಗಳ ಕೊನೆಯ ಭಾನುವಾರದಂದು ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳುಗಳ, ಎಲ್ಲ ಪಾಠಗಳನ್ನು ಒಮ್ಮೆ ಮರು ಓದಲೇಬೇಕು.

ಇದುವೇ ‘ಮೂರು ತಿಂಗಳ ಮರು-ಓದು’. ಹೀಗೆಯೇ ನವೆಂಬರ್ ತಿಂಗಳಿನ ಕೊನೆಯ ಭಾನು ವಾರದಂದು ‘ಆರು ತಿಂಗಳ ಮರು-ಓದನ್ನು’ ಮಾಡಬೇಕು. ಹೀಗೆಯೇ ಫೆಬ್ರವರಿ ತಿಂಗಳಿನ ಕೊನೆಯ ವಾರದಂದು ‘ಒಂಬತ್ತು ತಿಂಗಳಿನ ಮರು-ಓದನ್ನು’ ಮಾಡಬೇಕು. ಹೀಗೆ ನಿಗದಿತ ಅಂತರದಲ್ಲಿ ಮತ್ತೆ ಮತ್ತೆ ಓದುತ್ತಿದ್ದರೆ, ಓದಿದ್ದು ನೆನಪಿನಲ್ಲಿ ಉಳಿಯುತ್ತದೆ. ಈ ಕ್ರಮಬದ್ಧ ಓದುವಿಕೆಯಿಂದ ನಾವು ಕಲಿತದ್ದೆಲ್ಲ ನೆನಪಿನಲ್ಲಿ ಉಳಿಯುತ್ತದೆ. ಮರೆವು ನಮ್ಮಿಂದ ಗಾವುದ ದೂರ ಹೋಗುತ್ತದೆ. ನಾವೆಲ್ಲರೂ ರ‍್ಯಾಂಕ್ ವಿದ್ಯಾರ್ಥಿಗಳಾಗಬಹುದು.