ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ, ವಾಹನ ಸವಾರರ ಪರದಾಟ, ಸಾರ್ವಜನಿಕರ ಆಕ್ರೋಶ
ಮಂಜು ಕಲಾಲ
ವಿಜಯಪುರ: ಗುಮ್ಮಟ ನಗರಿ ಎಂದು ಖ್ಯಾತಿ ಪಡೆದ ವಿಜಯಪುರ ನಗರದಲ್ಲಿ ಸದ್ಯ ಬಹುತೇಕ ರಸ್ತೆಗಳ ಮೇಲಿನ ಟಾರ್ ಕಿತ್ತು ಹೋಗಿವೆ, ರಸ್ತೆಗಳು ಹಾಳಾಗಿವೆ, ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಸದ್ಯ ವಿಜಯಪುರ ನಗರದಲ್ಲಿ ತಗ್ಗು ಗುಂಡಿಗಳದ್ದೇ ದರ್ಬಾರ್ ಎಂಬಂತಾಗಿದೆ.
ನಗರದ ಸೋಲಾಪುರ ರಸ್ತೆ, ಬಿಎಲ್‌ಡಿಇ ರಸ್ತೆ, ರಾಮ್ ಮಂದಿರ ರಸ್ತೆ, ಗೋಲಗುಮ್ಮಟ ರಸ್ತೆ, ಮನಗೂಳಿ ರಸ್ತೆ, ಬಾಗಲಕೋಟ ರಸ್ತೆ, ಬಸ್ ನಿಲ್ದಾಣದ ಸುತ್ತಮುತ್ತ ಸೇರಿದಂತೆ ನಗರದ ಬಹುತೇಕ ಪ್ರಮುಖ ರಸ್ತೆಗಳು ಹಾಗೂ ನಗರದ ಆನಂದ ನಗರ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಯಲ್ಲಿ ತಗ್ಗು ಗುಂಡಿಗಳು ಬಿದ್ದು ಸಾರ್ವಜನಿಕರು ಪಾಲಿಕೆ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕು ವಂತಾಗಿದೆ.
ಇನ್ನೂ ಪಾಲಿಕೆ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ನಗರದಲ್ಲಿ ಕಳೆದ ಒಂದು ವಾರದ ಹಿಂದೆ ಭಾರಿ ಮಳೆಯಾಗಿದ್ದು ರಸ್ತೆಯಲ್ಲಿರುವ ತಗ್ಗು ಪ್ರದೇಶ ಗಳಲ್ಲಿ ನೀರು ತುಂಬಿಕೊಂಡು ರಸ್ತೆಯೇ ಕಾಣದಂತಾಗಿದೆ. ಹಲವಾರು ಬಾರಿ ಬೈಕ್ ವಾರರು ಮಳೆ ಬಂದ ಸಂದರ್ಭದಲ್ಲಿ ರಸ್ತೆ ಕಾಣದೆ ತಗ್ಗು ಗುಂಡಿಯಲ್ಲಿ ವಾಹನ ಚಲಾಯಿಸಿ ಆಯ ತಪ್ಪಿ ಬಿದ್ದು ಕೈ ಕಾಲು ಮುರಿದು ಕೊಂಡಿರುವ ಘಟನೆಗಳು ಸಂಭವಿಸಿವೆ. ಇನ್ನೂ ದೊಡ್ಡ ಪ್ರಮಾಣದ ಅಪಘಾತ ಗಳು ಸಂಭವಿಸುವ ಮುನ್ನವೇ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಗುಂಡಿ ಮುಚ್ಚಲು ಮುಂದಾಗ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Vijayapura (Indi) news: ಅಂಗನವಾಡಿ ಕಾರ್ಯಕರ್ತರಿಗೆ ಚುನಾವಣೆ ಕಾರ್ಯ: ಆದೇಶಕ್ಕೆ ಖಂಡನೆ
ಟಾರ್ ಕಿತ್ತು ಹಾಳಾದ ರಸ್ತೆಗಳು
ಇನ್ನೂ ನಗರದ ಕನಕದಾಸ ಬಡಾವಣೆಯ ಮುಖ್ಯ ರಸ್ತೆ ಮೇಲೆ ಹಾಕಿರುವ ಟಾರ್ ಕಿತ್ತು ಹೋಗಿದ್ದು ಅಲ್ಲಲ್ಲಿ ರಸ್ತೆ ಹಾಳಾಗಿದೆ. ಇದರಿಂದ ಬೈಕ್ ಸ್ಕಿಡ್ ಆಗಿ ಬೈಕ್ ಸವಾರರು ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕೂಡಲೇ ಸಂಬಂಧ ಪಟ್ಟ ಅಽಕಾರಿಗಳು ಎಚ್ಚೆತ್ತುಕೊಳ್ಳಬೇಕು ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಬೇಕು ಎನ್ನುವುದು ಬೈಕ್ ಸವಾರರ ಆಗ್ರಹವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯ
ನಗರದ ಬಹುತೇಕ ಕಡೆಗಳಲ್ಲಿ ಡ್ರೈನೆಜ್ ಸಂಪರ್ಕಕ್ಕಾಗಿ ಹಾಗೂ ಡ್ರೈನೆಜ್ ಸಮಸ್ಯೆ ಪರಿಹರಿಸಲು ಒಳ ಚರಂಡಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ರಸ್ತೆ ನಡುವೆಯೇ ಅಗೆದು ಡ್ರೈನೆಜ್ ಸಂಪರ್ಕ ಕಲ್ಪಿಸಿ ರಸ್ತೆಯನ್ನ ಸರಿ ಪಡಿಸದೆ ನಾಮಕೇ ವಾಸ್ತೆ ಎಂಬಂತೆ ಮಣ್ಣು ಹಾಕಿ ಗುಂಡಿ ಮುಚ್ಚಿ ಕೈ ತೊಳೆದುಕೊಂಡು ಬಿಡುತ್ತಾರೆ. ಇನ್ನೂ ಪಾಲಿಕೆ ಅಧಿಕಾರಿಗಳು ನನಗೇನೂ ಸಂಬಂಧವೇ ಇಲ್ಲದಂತೆ ಜಾಣ ನಡೆ ಪ್ರದರ್ಶಿಸುತ್ತಾರೆ.
ಒಟ್ಟಾರೆ ಅಧಿಕಾರಿಗಳ ಈ ನಿರ್ಲಕ್ಷ್ಯತನದಿಂದ ವಾಹನ ಸವಾರರು ಪ್ರತಿನಿತ್ಯ ನರಕ ಯಾತನೆ ಅನುಭವಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ಬಿದ್ದಿರುವ ಗುಂಡಿಗಳಿಗೆ ಮುಕ್ತಿ ದೊರಕುತ್ತದಾ ಎನ್ನುವುದನ್ನ ಕಾದು ನೋಡಬೇಕಿದೆ.
ನಗರದಲ್ಲಿ ಪ್ರತಿನಿತ್ಯ ಸುತ್ತಾಡುವ ಪಾಲಿಕೆ ಆಯುಕ್ತರು, ಅಧಿಕಾರಿಗಳು ತಗ್ಗು ಗುಂಡಿಗಳ ಕಂಡರೇ ಕಂಡು ಕಾಣದಂತೆ ಪಕ್ಕದಲ್ಲಿ ಸರಿದು ಹೋಗುತ್ತಾರೆ. ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ತಗ್ಗು ಗುಂಡಿಗಳು ಅಧಿಕಾರಿಗಳ ಕಾರ್ಯ ವೈಖರಿಗೆ ಹಿಡಿದ ಕೈ ಗನ್ನಡಿಯಾಗಿದೆ. ಇನ್ನಾದರೂ ಅಧಿಕಾರಿ ಗಳು ಎಚ್ಚೆತ್ತು ತಗ್ಗು ಗುಂಡಿಗಳನ್ನು ಮುಚ್ಚಲು ಮುಂದಾಗುತ್ತಾರಾ ಎನ್ನುವುದನ್ನ ಕಾದು ನೋಡ ಬೇಕಿದೆ.
ಗೌರಿ ಗಣೇಶ ಹಬ್ಬಕ್ಕೆ ಅಡ್ಡಿಯಾಗದಿರಲಿ ತಗ್ಗು ಗುಂಡಿ
ವಿಜಯಪುರ ನಗರದಲ್ಲಿ ಗಣೇಶೊತ್ಸವವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ವಿವಿಧ ಬಡಾವಣೆಗಳಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸಲಾಗುತ್ತದೆ, ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ವೇಳೆ ತಗ್ಗು ಗುಂಡಿಗಳಿಂದ ಯಾವುದೇ ಅಪಘಾತಗಳು ಸಂಭವಿಸಬಾರದು ಈ ಹಿನ್ನಲೆ ಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ತಗ್ಗು ಗುಂಡಿಗಳನ್ನ ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸ್ಥಳೀಯ ಮುತ್ತು ಬಾಗೇವಾಡಿ ಒತ್ತಾಯಿಸಿದ್ದಾರೆ. ನಗರದಲ್ಲಿ ಪಾಲಿಕೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ, ನಗರದಲ್ಲಿ ತಗ್ಗು ಗುಂಡಿ ಬಿದ್ದಿರುವ ಹಾಗೂ ಸಾರ್ವಜನಿಕ ಸಮಸ್ಯೆ ಕುರಿತು ಹಲವಾರು ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಇತ್ತ ಕಡೆ ಗಮನ ಹರಿಸಿ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದರೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಿಪಬ್ಲಿಕ್ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೋರಾಟ ಗಾರ ವೀರೇಶ ಮೇಟೆ ಎಚ್ಚರಿಕೆ ನೀಡಿದ್ದಾರೆ.