ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುನಿಯಪ್ಪ v/s ರಮೇಶ್‌ ಕುಮಾರ್‌ ಕೋಲಾರದ ಜಗಳ್‌ಬಂಧಿ ತಾರಕಕ್ಕೆ

ಮುಳಬಾಗಿಲು ಕ್ಷೇತ್ರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕರಾಗಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಮುನಿಆಂಜನಪ್ಪ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸುಪ್ರಿಂ ಕೋರ್ಟ್ ವರೆಗೂ ತಲುಪಿದ್ದು ಜಿಲ್ಲಾಧಿಕಾರಿ ನೇತೃತ್ವದ ಜಾತಿ ನಿರ್ಧಾರ ಸಮಿತಿ ನೀಡಿದ ವರದಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿ ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ನೀಡುವಂತೆ ಸೂಚಿಸಿತ್ತು.

ಕೆ.ಎಸ್.ಮಂಜುನಾಥ ರಾವ್ ಕೋಲಾರ

ಕೊತ್ತೂರು ನಕಲಿ ಜಾತಿ ಪ್ರಮಾಣಪತ್ರ, ರಾಜಕೀಯ ವಿರೋಧಿಗಳಿಂದ ಕ್ರಮಕ್ಕೆ ಆಗ್ರಹ

ಕೋಲಾರ ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿ ದಶಕಗಳಿಂದ ನಡೆಯುತ್ತಿರುವ ಕೆಎಚ್ ಮುನಿಯಪ್ಪ ವರ್ಸಸ್ ರಮೇಶ್ ಕುಮಾರ್ ಹಣಾಹಣಿ ಇದೀಗ ಕ್ಲೈಮ್ಯಾಕ್ಸ್ ತಲುಪಿದ್ದು ಹೀಗಾ ಗಿಯೇ ಸಾಫ್ಟ್ ರಾಜಕಾರಣಕ್ಕೆ ಹೆಸರಾದ ಆಹಾರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಇದೀಗ ಅಖಾಡಕ್ಕೆ ಇಳಿದು ಸುಳ್ಳು ಜಾತಿ ಪತ್ರದ ರೂವಾರಿ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನೇರವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದ್ದಾರೆ. ‌

ಎಂತಹ ಸಂದರ್ಭದಲ್ಲೂ ಮೆಲುಧ್ವನಿಯಲ್ಲಿ ಮಾತನಾಡುವ ಯಾವುದೇ ಸನ್ನಿವೇಶದಲ್ಲೂ ಕಟುಪದಗಳನ್ನು ಬಳಸದ ಮೆದು ರಾಜಕಾರಣಿ ಕೆ. ಎಚ್.ಮುನಿಯಪ್ಪ ಅವರು ವಿಧಾನಸೌಧದಲ್ಲಿ ನಡೆದ ದೌರ್ಜನ್ಯ ನಿಯಂತ್ರಣ ಸಭೆಯಲ್ಲಿ ತಮ್ಮ ರಾಜಕೀಯ ವಿರೋಧಿಯಾಗಿರುವ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅವರು 2013ರಲ್ಲಿ ಮುಳಬಾಗಲು ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಜಾತಿ ಪ್ರಮಾಣಪತ್ರ ಬಳಸಿ ಶಾಸಕರಾಗಿದ್ದ ಕುರಿತು ಕ್ರಮಕ್ಕೆ ಕೈಕೋರ್ಟ್ ಆದೇಶ ನೀಡಿ ಎಂಟತ್ತು ತಿಂಗಳಾದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮುಖ್ಯಮಂತ್ರಿ ಬಳಿಯೇ ಅಸಮಾಧಾನ ತೋಡಿಕೊಳ್ಳುವ ಮೂಲಕ ದಾಳ ಉರುಳಿಸಿದ್ದಾರೆ.

ಮುನಿಯಪ್ಪ ಅವರು ಶಾಸಕ ಕೊತ್ತೂರು ಮಂಜುನಾಥ್‌ಗೆ ಕೊಟ್ಟ ಟಾಂಗ್ ಇದಾಗಿದೆ ಎಂದು ವಿಶ್ಲೇಷಣೆ ಮಾಡಬಹುದಾದರೂ ಇದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬುಡಕ್ಕೆ ಇಟ್ಟ ಡೈನಾಮೆಂಟ್ ಎಂಬುದು ಕೋಲಾರ ಜಿಲ್ಲಾ ರಾಜಕೀಯ ವಿಶ್ಲೇಷಣೆ ಆಗಿದೆ. ಏಕೆಂದರೆ ಶಾಸಕ ಕೊತ್ತೂರು ಮಂಜುನಾಥ್ ಅವರು ರಮೇಶ್ ಕುಮಾರ್ ಅವರ ಮುಖವಾಣಿಯಂತೆ ರಾಜಕೀಯ ಹೆಜ್ಜೆಗಳನ್ನು ಇಡುತ್ತಿದ್ದು ಹೀಗಾಗಿ ಕೊತ್ತೂರು ಹೆಣೆದರೆ ನೇರವಾಗಿ ರಮೇಶ್ ಕುಮಾರ್ ಅವರಿಗೆ ಹಿನ್ನಡೆ ಆಗುತ್ತದೆ ಎಂಬುದು ಕೆಎಚ್ ಬಣದವರ ಇಂಗಿತವಾಗಿದೆ.

ಇದನ್ನೂ ಓದಿ: Dr N Someshwara Column: ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು

ಹೀಗಾಗಿ ಸ್ವತಃ ಸಿಎಂ ಮುಂದೆಯೇ ಕೊತ್ತೂರು ನಕಲಿ ಜಾತಿ ಸರ್ಟಿಫಿಕೇಟ್ ಬಗ್ಗೆ ಮುನಿಯಪ್ಪ ಪ್ರಸ್ತಾಪ ಮಾಡಿದ್ದಾರೆ!

ಏನಿದು ಕೊತ್ತೂರು ವಿವಾದ

ಮುಳಬಾಗಿಲು ಕ್ಷೇತ್ರದಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿ ಶಾಸಕರಾಗಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಮುನಿಆಂಜನಪ್ಪ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಸುಪ್ರಿಂ ಕೋರ್ಟ್ ವರೆಗೂ ತಲುಪಿದ್ದು ಜಿಲ್ಲಾಧಿಕಾರಿ ನೇತೃತ್ವದ ಜಾತಿ ನಿರ್ಧಾರ ಸಮಿತಿ ನೀಡಿದ ವರದಿ ಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿ ಹೈಕೋರ್ಟ್‌ನಲ್ಲಿ ಅಂತಿಮ ತೀರ್ಪು ನೀಡುವಂತೆ ಸೂಚಿಸಿತ್ತು. ಕಳೆದ ಡಿಸೆಂಬರ್ ನಲ್ಲಿ ತೀರ್ಪು ನೀಡಿದ ಹೈಕೋರ್ಟ್ ನಕಲಿ ಜಾತಿ ಪ್ರಮಾಣಪತ್ರದ ಸಂಬಂಧ ಕೊತ್ತೂರು ಮಂಜುನಾಥ್ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಈ ತೀರ್ಪಿನ ವಿರುದ್ಧ ಕೊತ್ತೂರು ಮಂಜುನಾಥ್ ಹೈಕೋರ್ಟ್ ವಿಭಾಗೀಯ ಪೀಠ ಮತ್ತು ಸುಪ್ರಿಂ ಕೋರ್ಟ್‌ ಮೊರೆ ಹೋಗಿದ್ದರಾದರೂ ಇದುವರೆಗೂ ಹೈ ಕೋರ್ಟ್ ಏಕ ಸದಸ್ಯ ಪೀಠದ ಆದೇಶಕ್ಕೆ ತಡೆಯಾಜ್ಞೆ ಸಿಕ್ಕಿಲ್ಲ ಎಂಬುದು ವಾಸ್ತವ.

ಹೀಗಾಗಿಯೇ ಕೊತ್ತೂರು ಮಂಜುನಾಥ್ ಅವರನ್ನು ಕಂಬಿ ಹಿಂದೆ ಕಳುಹಿಸಬೇಕೆಂಬುದು ರಾಜಕೀಯ ವಿರೋಽಗಳ ಅಜೆಂಡಾ ಆಗಿದ್ದು ಹೀಗಾಗಿಯೇ ದೌರ್ಜನ್ಯ ನಿಯಂತ್ರಣ ಸಭೆಯಲ್ಲಿ ಸಿದ್ದರಾಮಯ್ಯ ಅವರ ಗಮನಕ್ಕೆ ಬರಲೆಂದು ಕೊತ್ತೂರು ಜಾತಿ ಪ್ರಮಾಣಪತ್ರದ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ.

ಎತ್ತು ಏರಿಗೆ ಕೋಣ ಕೇರಿಗೆ

ಕೋಲಾರ ಜಿಲ್ಲಾ ರಾಜಕಾರಣದಲ್ಲಿ ಕಾಂಗ್ರೆಸ್‌ನ ಆರು ಶಾಸಕರಿದ್ದು ಕೋಲಾರದ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ನಂಜೇಗೌಡ, ಎಂಎಲ್‌ಸಿ ಅನಿಲ್ ಕುಮಾರ್, ನಜೀರ್ ಅಹ್ಮದ್ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣದಲ್ಲಿ ಗುರುತಿಸಿಕೊಂಡಿದ್ದರೆ ಕೆಜಿಎಫ್ ಶಾಸಕಿ ರೂಪಕಲಾ, ಬಂಗಾರಪೇಟೆ ಎಸ್ಸೆನ್ ನಾರಾಯಣಸ್ವಾಮಿ ಅವರು ಕೆಎಚ್ ಮುನಿಯಪ್ಪ‌ ಆಪ್ತರಾಗಿದ್ದಾರೆ.

ಹೀಗಾಗಿಯೇ ಏನೇ ವಿಷಯ ಬಂದರೂ ಒಂದು ಗುಂಪು ಪರವಾಗಿ ನಿಂತರೆ ಮತ್ತೊಂದು ಬಣ ವಿರೋಧ ವ್ಯಕ್ತಪಡಿಸುವುದು ಸಾಮಾನ್ಯವಾಗಿದ್ದು ಇದರಿಂದ ಅಭಿವೃದ್ಧಿ ಕುಂಠಿತ ಆಗುತ್ತಿದೆ ಎಂಬುದು ಜನಸಾಮಾನ್ಯರ ಅಳಲಾಗಿದೆ. ಇದನ್ನೇ ನೇರವಾಗಿ ಪ್ರಸ್ತಾಪ ಮಾಡಿರುವ ಮಾಲೂರು ಶಾಸಕ ನಂಜೇಗೌಡರು ಜಿಲ್ಲೆಯ ರಾಜಕೀಯ ವಿದ್ಯಮಾನಗಳನ್ನು ಪ್ರಸ್ತಾಪ ಮಾಡುವ ಮೂಲಕ ಶಾಸಕರ ಒಗ್ಗಟ್ಟಿನ ಕೊರತೆಯಿಂದ ತೊಂದರೆಯಾಗಿದೆ. ಸಿದ್ದರಾಮಯ್ಯ ಅವರು ಜಿಲ್ಲೆಗೆ ಏನು ಕೇಳಿದರೂ ಮಾಡಿಕೊಡಲು ಸಿದ್ದರಾಗಿದ್ದರೂ ಕನಿಷ್ಟ ಎತ್ತಿನಹೊಳೆ ನೀರು ಬೇಗ ತರಲು ಆಗುತ್ತಿಲ್ಲ ಎಂದು ಕಾಂಗ್ರೆಸ್ ಕಥೆಯನ್ನು ಬಹಿರಂಗವಾಗಿ ಬಿಚ್ಚಿಟ್ಟಿರುವುದು ಸುಳ್ಳೇನಲ್ಲ.

ಕೊತ್ತೂರು ಕಿರುಕುಳ: ಸಿಎಂಗೂ ಮುಜುಗರ

ಶಾಸಕ ಮಂಜುನಾಥ್ ಅವರು ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದು ಎಂತಹ ಸಂದರ್ಭದಲ್ಲೂ ಕೊತ್ತೂರು ಪರವಾಗಿ ನಿಲ್ಲುವ ಮೂಲಕ ನೈತಿಕ ಬೆಂಬಲ ಕೊಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಲು ಟಿಕೇಟ್ ಖರ್ಗೆ ಆಪ್ತರಿಗೆ ತಪ್ಪಿಸಿ ಕೊತ್ತೂರು ಹೇಳಿದವರಿಗೆ ನೀಡಿದ್ದರು. ಇಂತಹ ಶಿಷ್ಯನ ಮೇಲೆ ಮೀಸಲಾತಿ ದುರ್ಬಳಕೆ ಬಂದಿರುವುದು ಸಿಎಂಗೆ ನುಂಗಲಾರದ ತುತ್ತಾಗಿದ್ದು ಜತೆಗೆ ಮುಜುಗರಕ್ಕೆ ಕಾರಣವಾಗಿದೆ. ಹೀಗಾಗಿ ಸಿಎಂ ಮುಂದಿನ ನಡೆ ಏನು ಎಂಬುದು ಕಾದು ನೋಡಬೇಕಾಗಿದೆ.

*

ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಪರಿಶಿಷ್ಟ ಜಾತಿ ನಕಲಿ ಜಾತಿ ಪ್ರಮಾಣಪತ್ರ ಬಳಸಿ ರಾಜಕೀಯ ಲಾಭ ಪಡೆದುಕೊಂಡಿದ್ದು ಕ್ರಮ ಜರುಗಿಸುವಂತೆ ಹೈಕೋರ್ಟ್ ತೀರ್ಪು ನೀಡಿದ್ದರೂ ಸಿಆರ್‌ಇ ಸೆಲ್ ನಿದ್ದೆಗೆ ಜಾರುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಸಿಎಂ ಸೂಚನೆ ಮೇರೆಗಾದರೂ ಕ್ರಮ ಆಗದಿದ್ದರೆ ಕಾನೂನು ಹೋರಾಟ ಮಾಡಲಾಗುತ್ತದೆ.

- ಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್

ಜನಸಾಮಾನ್ಯರು ಎಸ್ಸಿ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಂಡಿದ್ದರೆ ಸಿಆರ್‌ಇ ಸೆಲ್ ಅಧಿಕಾರಿಗಳು ಈ ರೀತಿ ಸುಮ್ಮನೆ ಇರುತ್ತಿದ್ದರಾ? ಅಧಿಕಾರಿಗಳು ಯಾವ ಒತ್ತಡಕ್ಕೆ ಶರಣಾಗಿ ಮೌನದ ಮೊರೆ ಹೋಗಿದ್ದಾರೆ? ದಲಿತರಾಮಯ್ಯ ಅವರ ಆಡಳಿತದಲ್ಲಿ ಮೀಸಲಾತಿ ದುರ್ಬಳಕೆ ವಿರುದ್ಧ ಕ್ರಮ ಆಗಿಲ್ಲವೆಂದರೆ ಆಶ್ಚರ್ಯ ಆಗುತ್ತಿದೆ. ಇನ್ನಾದರೂ ಕ್ರಮ ಕೈಗೊಳ್ಳುವಂತಾಗಲಿ.

- ನಳಿನಾಗೌಡ, ಸಾಮಾಜಿಕ ಹೋರಾಟಗಾರರು, ಕೋಲಾರ