ಶಿವಕುಮಾರ್ ಬೆಳ್ಳಿತಟ್ಟೆ
1 ಸಾವಿರ ಕೋಟಿ ಬೆಲೆ ಬಾಳುವ 300 ಎಕರೆ ಸರಕಾರಿ ಜಾಗ ರಕ್ಷಣೆ
ಬೆಂಗಳೂರು ಜಿಲ್ಲಾಡಳಿತದಿಂದ ವಿಕ್ರಮ
ಬೆಂಗಳೂರು: ಸರಕಾರಿ ಜಾಗ ಒತ್ತುವರಿ ತೆರವುಗೊಳಿಸುವಲ್ಲಿ ಹೊಸ ವಿಕ್ರಮ ಸಾಧಿಸಿರುವ ಕಂದಾಯ ಇಲಾಖೆ ಈಗ ಬಾಕಿ ಪ್ರಕರಣಗಳ ವಿಲೇವಾರಿಯಲ್ಲೂ ದಾಖಲೆ ನಿರ್ಮಿಸಿದೆ. ರಾಜಧಾನಿ ಬೆಂಗಳೂರು ನಗರ ಒಂದರಲ್ಲೇ ಸುಮಾರು 10 ಸಾವಿರ ಕೋಟಿ ಬೆಲೆ ಬಾಳುವ 300 ಎಕರೆಗೂ ಹೆಚ್ಚು ಸರಕಾರಿ ಜಾಗವನ್ನು ಭೂಗಳ್ಳರ ಒತ್ತುವರಿಂದ ರಕ್ಷಿಸಿದೆ.
ಒಟ್ಟಾರೆ ರಾಜ್ಯದಲ್ಲಿ ಒತ್ತುವರಿಯಾಗಿರುವ ಸುಮಾರು 10000 ಎಕರೆ ಸರಕಾರಿ ಜಾಗದಲ್ಲಿ ಸುಮಾರು 900 ಎಕರೆಗಳಷ್ಟು ಸರಕಾರಿ ಜಾಗ ತೆರವುಗೊಳಿಸಿ ರಕ್ಷಣೆ ಮಾಡಲಾಗಿದೆ. ಅದರಲ್ಲಿ 300 ಎಕರೆ ಯಷ್ಟು ಜಾಗ ಬೆಂಗಳೂರು ಒಂದರಲ್ಲೇ ತೆರವುಗೊಳಿಸಲಾಗಿದ್ದು ಇದರ ಮೌಲ್ಯ ರಾಜ್ಯದ ಇತರ ಭಾಗಗಳಿಗಿಂತ ಅತ್ಯಧಿಕವಾಗಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ವಿವಿಧ ಕಾರಣಗಳಿಗೆ ಸುಮಾರು 10 ವರ್ಷಗಳಿಂದ ಬಾಕಿ ಉಳಿದಿದ್ದ 4000ಕ್ಕೂ ಹೆಚ್ಚು ಭೂಮಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು ಇದು ರಾಜ್ಯದ ಒಟ್ಟಾರೆ ವಿಲೇವಾರಿ ಪ್ರಕರಣಗಳಿಗೆ ಹೋಲಿಸಿದರೆ ಬೆಂಗಳೂರು ನಗರ ಜಿಲ್ಲೆಯು ಪ್ರಥಮ ಸ್ಥಾನದಲ್ಲಿದೆ ಎಂದು ಹೇಳಬಹುದು.
ಅಚ್ಚರಿ ಎಂದರೆ ಕಳೆದ ಅನೇಕ ವರ್ಷಗಳಿಂದ ಕೋರ್ಟ್ ಆದೇಶವಿದ್ದರೂ ವಿಲೇವಾರಿಗೆ ತೆಗೆದು ಕೊಳ್ಳದೆ ಬಾಕಿ ಉಳಿಸಿಕೊಂಡಿದ್ದ ಕೇಸುಗಳು ಸಾವಿರಾರು. ಅದರಲ್ಲೂ ಶೇ.80ರಷ್ಟು ಪ್ರಕರಣಗಳು ಭೂಮಿ ಹಾಗೂ ಭೂ ದಾಖಲೆ ಮತ್ತು ವಿವಾದಗಳಿಗೆ ಸಂಬಂಧಿಸಿದ್ದರೆ ಆಗಿದ್ದವು, ಅಂದರೆ ಅದೆಲ್ಲವೂ ನಕಲಿ ದಾಖಲೆಗಳ ಸೃಷ್ಟಿ, ಒತ್ತುವರಿ ಭೂಗಳ್ಳರು ಹಾಗೂ ಏಜೆಂಟರುಗಳಿಂದ ಆಕ್ಷೇಪ ಮತ್ತು ಒತ್ತುವರಿ ಸೇರಿದಂತೆ ಅನೇಕ ಪ್ರಕರಣಗಳಿದ್ದವು.
ಇದನ್ನೂ ಓದಿ: Roopa Gururaj Column: ನಂಬಿದವರ ಹೃದಯದೊಳಗೆ ನೆಲೆಸುವ ಶ್ರೀಕೃಷ್ಣ
ಅದೆಲ್ಲವನ್ನು ಸಮಾರೋಪಾದಿಯಲ್ಲಿ ಕಡಿಮೆ ಅವಧಿಯಲ್ಲಿ ಈಗ ಜಿಲ್ಲಾಡಳಿತ ವಿಲೇವಾರಿ ಮಾಡಿದೆ. ಇನ್ನು ಸರಕಾರಿ ಜಾಗ ಒತ್ತುವರಿ ತೆರವಿಗಾಗಿ ಜಿಲ್ಲಾಡಳಿತ ವಿಶೇಷ ಕಾನೂನು ತಜ್ಞರ ತಂಡ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಂಡ ರಚಿಸಿ ತೆರವು ಕಾರ್ಯ ನಡೆಸುತ್ತಿದ್ದು ಬೆಂಗಳೂರಿನಲ್ಲಿ ಸುಮಾರು ಇನ್ನೂ 4 ಸಾವಿರಕ್ಕೂ ಹೆಚ್ಚು ಎಕರೆ ಸರಕಾರಿ ಜಾಗ ಒತ್ತುವರಿಯಾಗಿದೆ.
ಇದರ ವಿರುದ್ಧ ಕ್ರಮ ಕೈಗೊಳ್ಳಲು ಕಾರ್ಯತಂತ್ರ ರೂಪಿಸಲಾಗಿದೆ. ಒಟ್ಟಾರೆ ಸರಕಾರಿ ಜಾಗ ರಕ್ಷಣೆಗೆ ನಮ್ಮ ಇಲಾಖೆ ಕಟ್ಟಿ ಬದ್ಧವಾಗಿದ್ದು ಒತ್ತುವರಿ ತೆರವು ವಿಚಾರದಲ್ಲಿ ನಾವು ಯಾವುದೇ ಪ್ರಭಾವಕ್ಕೆ ಮಣಿಯುತ್ತಿಲ್ಲ. ನಾನು ಜಿಲ್ಲಾಧಿಕಾರಿಯಾಗಿ ಸರಕಾರಿ ಜಾಗ ಉಳಿಸಲು ಯಾವುದೇ ಸಂದರ್ಭ ದಲ್ಲೂ ಕೋರ್ಟ್ ಕಟಕಟೆಯಲ್ಲಿ ನಿಲ್ಲಲು ಸಿದ್ಧ. ಸರಕಾರಿ ಜಾಗ ರಕ್ಷಣೆ ನಮ್ಮ ಗುರಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಖಾಸಗಿ ಸಂಸ್ಥೆಗಳ ಮೇಲೆ ಕಣ್ಣು
ಒತ್ತುವರಿ ತೆರುವು ಮಾಡುವುದರ ಜೊತೆಗೆ ಸರಕಾರ ಈಗ ಖಾಸಗಿ ಸಂಸ್ಥೆಗಳಿಗೆ ನೀಡಿರುವ ಜಾಗ ಗಳನ್ನು ವಾಪಸ್ ಪಡೆಯಲು ಕಾರ್ಯತಂತ್ರ ರೂಪಿಸಿದೆ. ರಾಜ್ಯದಲ್ಲಿ ನೂರಾರು ಎಕರೆಗಳಷ್ಟು ಸರಕಾರಿ ಜಾಗಗಳನ್ನು ವಿವಿಧ ಉದ್ದೇಶಗಳಿಗಾಗಿ ಖಾಸಗಿ ಸಂಸ್ಥೆಗಳಿಗೆ ನೀಡಿದ್ದು ವಾಣಿಜ್ಯ ಅಥವಾ ಇತರ ದುರುದ್ದೇಶ ಗಳಿಗೆ ಬಳಕೆಯಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಏಕೆಂದರೆ ಕಂದಾಯ ಇಲಾಖೆ ಸರಕಾರಿ ಜಾಗ ಪಡೆದಿರುವ ಖಾಸಗಿ ಸಂಸ್ಥೆಗಳ ವಿವರ ಮತ್ತು ಅವುಗಳ ಚಟುವಟಿಕೆ ಸಂಗ್ರಹಿಸಲು ಅಧಿಕಾರಿಗಳು ಮತ್ತು ಕಾನೂನು ತಜ್ಞರ ತಂಡ ರಚಿಸಿ ತನ್ನ ಜಾಗವನ್ನು ಹೇಗೆ ವಾಪಸ್ ಪಡೆಯಬಹುದು ಎನ್ನುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದೆ. ಈ ಕಾರ್ಯಚರಣೆ ಸದ್ದಿಲ್ಲದೆ ಆರಂಭವಾಗಿದ್ದು ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರಗಳು ಮತ್ತು ಪಟ್ಟಣಗಳಲ್ಲಿ ಸರಕಾರಿ ಜಾಗ ಪಡೆದಿರುವ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಹಾಗೆ ಆ ಸಂಸ್ಥೆಗಳ ಜಾಗದ ದುರ್ಬಬಳಕೆ ವಿರುದ್ಧ ಕೇಸುಗಳನ್ನು ದಾಖಲಿಸಲಾಗಿದ್ದು ಇನ್ನು ಕೆಲವೇ ತಿಂಗಳಲ್ಲಿ ಈ ಕಾರ್ಯಚರಣೆ ಫಲ ನೀಡಲಿದೆ ಎಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸರಕಾರದಿಂದ ಲ್ಯಾಂಡ್ ಬ್ಯಾಂಕ್
2023ರ ಅವಧಿಯಲ್ಲಿ ಸರ್ಕಾರಿ ಜಾಗಗಳ ಒತ್ತುವರಿ ಸುಮಾರು 28000 ಎಕರೆ ಇತ್ತು. ಆದರೆ ಅದರ ಪ್ರಮಾಣ ಈಗ 12000 ಎಕರೆಗೆ ಇಳಿದಿದೆ. ಇದರಲ್ಲಿ ಶೇ.50ರಷ್ಟು ಜಾಗಗಳು ಬೆಂಗಳೂರಿನಲ್ಲೇ ಇದ್ದವು. ಅವು ಈಗ ಒತ್ತುವರಿಯಿಂದ ತೆರವಾಗಿವೆ. ಬೆಂಗಳೂರಿನಲ್ಲಿ ಇನ್ನೂ 4000 ಎಕರೆಯಿಂದ 5000 ವರೆಗೂ ಎಕರೆ ವರೆಗೂ ಸರಕಾರಿ ಜಾಗ ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದೆ. ಇದನ್ನು ಸುಧಾರಿತ ತಂತ್ರಜ್ಞಾನದಿಂದ ಸುಲಭವಾಗಿ ಗುರುತಿಸಲಾಗುತ್ತಿದ್ದು ಕಾಲಮಿತಿಯಲ್ಲಿ ತೆರವು ಗೊಳಿಸಲಾಗುತ್ತದೆ. ಹೀಗೆ ತೆರವಾಗುವ ಸರಕಾರಿ ಜಾಗವನ್ನು ಲ್ಯಾಂಡ್ ಬ್ಯಾಂಕ್ ಮಾಡಿ ಜನೋಪಕಾರಿ ಯೋಜನೆಗಳಿಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
*
ಸರಕಾರಿ ಜಾಗ ಒತ್ತುವರಿ ಮಾಡಿರುವ ದಾಖಲೆ ನೋಡಿದರೆ ಬರೀ ರಾಜಕಾರಣಿಗಳು, ಅಧಿಕಾರಿಗಳು, ಪ್ರಭಾವಿಗಳು, ಸಂಘ ಸಂಸ್ಥೆಗಳು ಹಾಗೂ ಭೂಗಳ್ಳರು, ಏಜೆಂಟರು ಹೆಚ್ಚಾಗಿದ್ದಾರೆ. ಇವರ ಪ್ರಭಾವ ಮತ್ತು ಬೆದರಿಕೆಯನ್ನು ಲೆಕ್ಕಿಸದೆ ಸರಕಾರ ಮುನ್ನುಗ್ಗುತ್ತಿದೆ. ಇದು ಸದ್ಯದಲ್ಲೇ ಫಲ ನೀಡಲಿದೆ. -ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ