ಚರ್ಚಾ ವೇದಿಕೆ
ರಾಘವ ಶರ್ಮ ನಿಡ್ಲೆ
ಅಧಿಕಾರ ಯಾರನ್ನು ಹೇಗೆ ಬೇಕಾದರೂ ಬದಲಾಯಿಸುತ್ತದೆ. ಕುರ್ಚಿಗಾಗಿ ಸೈದ್ಧಾಂತಿಕ ನಿಲುವು ಗಳನ್ನು ಬದಿಗೆ ಸರಿಸಿ, ಹೊಂದಾಣಿಕೆ ಮಾಡಿಕೊಳ್ಳುವುದು ರಾಜಕೀಯದಲ್ಲಿ ಮಾಮೂಲು. ಬಿಹಾರ ಸಿಎಂ ನಿತೀಶ್ ಕುಮಾರ್ ಅಂಥವರಲ್ಲಿ ಒಬ್ಬರು. ಕಾಲಕ್ಕೆ ಅನುಗುಣವಾಗಿ ಲಾಲೂ ಪ್ರಸಾದ್ ಯಾದವ್ ಮತ್ತು ಪ್ರಧಾನಿ ನರೇಂದ್ರ ಮೋದಿ ಜತೆಗೆ ಸಂಬಂಧ ಸಾಧಿಸಿ, ಮುರಿದುಕೊಂಡ ನಿತೀಶ್ ಕುಮಾರ್, ರಾಜಕಾರಣದಲ್ಲಿ Love & Hate ಸಂಬಂಧ ಹೇಗಿರುತ್ತದೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಬಲ್ಲರು.
ಈಗ ಬಿಹಾರ ಚುನಾವಣೆ ಹತ್ತಿರದಲ್ಲಿರುವುದರಿಂದ ಮತ್ತು ಈ ಚುನಾವಣೆ ಬಹುತೇಕ ನಿತೀಶ್ ಪಾಲಿನ ಕೊನೆಯ ಚುನಾವಣೆ ಆಗಿರುವುದರಿಂದ ನಿತೀಶ್-ಮೋದಿ ಪ್ರೀತಿ-ದ್ವೇಷದ ಸಂಬಂಧಗಳು ಮತ್ತೆ ಚರ್ಚೆಗೆ ಬರುತ್ತಿವೆ. ಮೋದಿ-ನಿತೀಶ್ ಮಧ್ಯೆ ಈಗ ಎಲ್ಲವೂ ಸರಿ ಇದೆ ಎಂದುಕೊಂಡರೂ, ಇವರಿಬ್ಬರ ಸಂಬಂಧ ನಡೆದು ಬಂದ ಹಾದಿ ಹಾಗೂ ಮೋದಿಯವರನ್ನು ಒಪ್ಪಿಕೊಳ್ಳುವುದು ನಿತೀಶರಿಗೆ ಹೇಗೆ ಅನಿವಾರ್ಯವಾಯಿತು ಎನ್ನುವುದು ರಾಜಕೀಯ ವಿeನ ಅಭ್ಯಸಿಸುವವರಿಗೆ ಸದಾ ಆಸಕ್ತಿಯ ವಿಚಾರವೇ.
2005ರಿಂದ ಬಿಹಾರ ಎನ್‌ಡಿಎ ಮುನ್ನಡೆಸುತ್ತಿದ್ದ ನಿತೀಶ್, ಮುಂದೊಂದು ದಿನ ದೇಶದ ಪ್ರಧಾನಿ ಯಾಗಬೇಕೆಂಬ ತಮ್ಮ ಕನಸಿಗೆ ಮೋದಿಯೇ ಪ್ರಮುಖ ಅಡ್ಡಿಯಾಗಬಲ್ಲರು ಎಂಬುದನ್ನು ಮೊದಲೇ ಗ್ರಹಿಸಿದ್ದರು. ಹಾಗಾಗಿಯೇ, ಗುಜರಾತ್ ಗಲಭೆ ಕಾರಣಕ್ಕಾಗಿ ಮೋದಿಯವರನ್ನು ಅಪರಾಧಿ ಎಂದು ಬಿಂಬಿಸುತ್ತಲೇ, ದ್ವೇಷಿಸುತ್ತಿದ್ದ ನಿತೀಶ್, ಬಿಹಾರದಲ್ಲಿ ಕೋಮುವಾದದ ಗಾಳಿ ಸೋಕಲು ಎಂದಿಗೂ ಬಿಡಲಾರೆ 2005ರ ಪೂರ್ವದ ಹೇಳುತ್ತಿದ್ದರು.
2004ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸೋತಾಗ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜ ಪೇಯಿ ಬಳಿ ತೆರಳಿದ್ದ ನಿತೀಶರು, ನಿಮ್ಮ ಮೋದಿಯಿಂದಾಗಿ ಇಡೀ ಭಾರತದ ಮುಸ್ಲಿಂ ಮತ್ತು ಜಾತ್ಯತೀತ ಸಮುದಾಯದಲ್ಲಿ ಭಯ ಮತ್ತು ಅಭದ್ರತೆಯ ಭಾವನೆ ಬಲವಾಗಿ ಬೇರೂರಿದೆ. ಭಾರತ ದಲ್ಲಿ ವಿಭಜನಕಾರಿ ನಾಯಕರಿಗೆ ಸ್ಥಾನವಿಲ್ಲ. ನಮ್ಮ ಸೋಲಿಗೆ ಮೋದಿ ಕೂಡ ಕಾರಣ ಎಂದು ಅಸಮಾಧಾನ ತೋಡಿಕೊಂಡಿದ್ದರು.
2005ರ ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಗುಜರಾತ್ ಸಿಎಂ ಬರುವುದು ಬೇಡ ಎಂದು ಎಲ್.ಕೆ.ಆಡ್ವಾಣಿ ಸೇರಿ ಎನ್‌ಡಿಎ ಮುಖಂಡರಿಗೆ ತಿಳಿಸಿದ್ದ ನಿತೀಶ್ ಕುಮಾರ್, ಮೋದಿ ಮಾದರಿ ರಾಜಕಾರಣಕ್ಕೆ ಬಿಹಾರದಲ್ಲಿ ಜಾಗ ಇಲ್ಲ. ಲೋಹಿಯಾವಾದಿ, ಸಮಾಜವಾದಿ, ಜಾತ್ಯತೀತ ಚಿಂತನೆ ಗಳ ಮಧ್ಯೆ ಆರ್‌ಎಸ್‌ಎಸ್ ಪ್ರೇರಿತ ಹಿಂದುತ್ವದ ವಾದಗಳನ್ನು ಇಲ್ಲಿ ತರಬೇಡಿ ಎಂದು ಖಂಡ ತುಂಡವಾಗಿ ಹೇಳಿದ್ದರು.
ಇದನ್ನೂ ಓದಿ: Raghava Sharma Nidle Column: ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ಸರಕಾರದ ಕಣ್ತಪ್ಪಿದ್ದು ಹೇಗೆ ?
ಜೆಡಿಯುಗೆ ಅಲ್ಪಸಂಖ್ಯಾತ ಮತಗಳೂ ಮುಖ್ಯವಾಗಿದ್ದರಿಂದ ಮೋದಿ ಆಗಮನದಿಂದ ಈ ಮತಗಳು ಆರ್‌ಜೆಡಿಗೆ ಶಿಫ್ಟ್ ಆಗುತ್ತವೆ ಎಂಬ ಆತಂಕವಿತ್ತು. 2005ರಲ್ಲಿ ಮೊದಲ ಬಾರಿಗೆ ರಾಜ್ಯ ಚುನಾವಣೆ ಗೆದ್ದ ನಂತರ, ಕಾಲೇಜು ದಿನಗಳಿಂದಲೂ ನಿತೀಶ್‌ರ ಆತ್ಮೀಯ ಮಿತ್ರರಾಗಿದ್ದ ಸುಶೀಲ್ ಕುಮಾರ್ ಮೋದಿ (ಬಿಜೆಪಿ) ಉಪಮುಖ್ಯಮಂತ್ರಿಯಾಗಿದ್ದರಿಂದ ಜೆಡಿಯು-ಬಿಜೆಪಿ ಸಂಬಂಧ 2009ರ ತನಕ ತಕ್ಕ ಮಟ್ಟಿಗೆ ಸದೃಢವಾಗಿತ್ತು.
ಸುಶೀಲ್ ಮೋದಿ ಬಿಜೆಪಿಗಿಂತ ಹೆಚ್ಚು ನಿತೀಶ್‌ಗೆ ನಿಷ್ಠರಾಗಿದ್ದಾರೆ. ಬಿಜೆಪಿ ನಿತೀಶರ ಬಿ ಟೀಮ್‌ನಂತೆ ಆಗಿದೆ ಎಂದು ಬಿಹಾರ ಬಿಜೆಪಿಯ ಷಾ ನವಾಸ್ ಹುಸೇನ್, ರಾಜೀವ್ ಪ್ರತಾಪ್ ರೂಢಿ ಕಡೆಯಿಂದ ಭಿನ್ನ ಧ್ವನಿಗಳು ಕೇಳಿಸಿದ್ದಾಗ, ಜೆಡಿಯುನ ಸಂಜಯ್ ಝಾ ಮತ್ತು ಬಿಜೆಪಿ ಅರುಣ್ ಜೇಟ್ಲಿ ಮಧ್ಯ ಪ್ರವೇಶಿಸಿ ಅದನ್ನು ಶಮನಗೊಳಿಸುತ್ತಿದ್ದರು.
ಪಟನಾದಲ್ಲಿ ಸುಶೀಲ್ ಮೋದಿ ಮತ್ತು ದಿಲ್ಲಿಯಲ್ಲಿ ಅರುಣ್ ಜೇಟ್ಲಿ ಜತೆ ನೇರವಾಗಿ ವ್ಯವಹರಿಸು ತ್ತಿದ್ದುದರಿಂದ ನಿತೀಶ್ ಉಳಿದವರ ಮೂದಲಿಕೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ. ಆದರೆ, 2009ರ ಮೇ ತಿಂಗಳಲ್ಲಿ ಪಂಜಾಬಿನ ಲೂಧಿಯಾನದಲ್ಲಿ ನಡೆದ ಘಟನೆ ಬಿಜೆಪಿ-ನಿತೀಶ್ ನಡುವಿನ ಬಿರುಕು ದೊಡ್ಡದಾಗಲು ಕಾರಣವಾಗಿತ್ತು.
2009ರ ಲೋಕಸಭೆ ಚುನಾವಣೆಗೆ ಎಲ್.ಕೆ.ಆಡ್ವಾಣಿ ಅವರನ್ನು ಎನ್‌ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ತೀರ್ಮಾನಿಸಲಾಗಿತ್ತು. ಪಂಜಾಬಿನ ಲೂಧಿಯಾನದಲ್ಲಿ ಎನ್‌ಡಿಎ ಬಲ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿ, ಗುಜರಾತ್ ಸಿಎಂ ಮೋದಿಗೂ ಆಹ್ವಾನ ಹೋಗಿತ್ತು. ಮೋದಿ ಬಂದರೆ ನಾನು ಬರುವುದಿಲ್ಲ.
ಮೋದಿ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ಶರದ್ ಯಾದವ್ ಪಟ್ನಾದಿಂದ ಬರುತ್ತಾರೆ ಎಂದರು ನಿತೀಶ್. ನಿತೀಶ್‌ರನ್ನು ಕರೆಸಲು ದಿಲ್ಲಿಯಿಂದ -ನಾಯಿಸಿದ ಅರುಣ್ ಜೇಟ್ಲಿ, ಆಡ್ವಾಣಿಯವರು ನಿಮ್ಮ ನಿರೀಕ್ಷೆಯಲ್ಲಿದ್ದಾರೆ. ನೀವು ಬರಲೇಬೇಕು ಎಂದರು. ಆಗ ನಿತೀಶ್ ಸ್ಪಷ್ಟ ಉತ್ತರ ನೀಡಿರ ಲಿಲ್ಲ. ನಂತರ ಸಂಜಯ್ ಝಾ ಮನವೊಲಿಸಿ ನಿತೀಶರನ್ನು ವಿಶೇಷ ವಿಮಾನದಲ್ಲಿ ಲೂಧಿಯಾನಕ್ಕೆ ಕರೆದುಕೊಂಡು ಹೋದರು.
ಸಮಾವೇಶದ ಮಾರನೇ ದಿನ ಪತ್ರಿಕೆಗಳಲ್ಲಿ ಮೋದಿ-ನಿತೀಶ್ ಕೈ ಹಿಡಿದ ಚಿತ್ರಗಳು ರಾರಾಜಿಸಿದ್ದವು. ಬೆಳಗ್ಗೆಯೇ ನಿತೀಶ್ ಕುದಿಯುತ್ತಿದ್ದರು. ಇದಕ್ಕಾಗಿ ನೀನು ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋದೆಯಾ. ಅವರು ನನ್ನನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರು ಎಂದು ಆಪ್ತ ಸಂಜಯ್ ಝಾ ಮೇಲೆ ಮುನಿಸಿಕೊಂಡಿದ್ದರು.
2002ರ ಗುಜರಾತ್ ಗಲಭೆ ನಂತರ ಮೋದಿ ಜತೆ ಅಂತರ ಕಾಯ್ದಿದ್ದ ನಿತೀಶ್, ಕೇಸರಿಪಡೆಯ ದಿಲ್ಲಿ ನಾಯಕರ ಜತೆ ಚೆನ್ನಾಗಿದ್ದರು. ಬಿಹಾರದಲ್ಲಿ ತಮ್ಮ ಸೆಕ್ಯುಲರ್ ಸಿದ್ಧಾಂತದ ರಾಜಕಾರಣವನ್ನು ಮೋದಿ ಮಾದರಿ ಹಿಂದುತ್ವ ಹಾಳು ಮಾಡುತ್ತದೆ.
ಹೀಗಾಗಿ ಮೋದಿ ಗಾಳಿಯೂ ಇಲ್ಲಿಗೆ ತಾಗಬಾರದು ಎನ್ನುವುದು ನಿತೀಶ್ ವಾದವಾಗಿತ್ತು. ಆದರೆ, ಮೋದಿಯ ಹಿಂದುತ್ವದ ಬಿರುಗಾಳಿ ಗ್ರಹಿಸಿದ್ದ ನಿತೀಶ್‌ಗೆ, ಮೋದಿ ಭವಿಷ್ಯದ ನಾಯಕ ಆಗುತ್ತಾರೆ ಎನ್ನುವ ಅರಿವು, ಜಾಗೃತಿ ಇತ್ತು. ಇದಕ್ಕಾಗಿಯೇ, ಮೈತ್ರಿಕೂಟದೊಳಗೆ ಮೋದಿ ಮುನ್ನೆಲೆಗೆ ಬರುವುದು ಅವರಿಗೆ ಇಷ್ಟವಿರಲಿಲ್ಲ.
ಹಾಗಂತ, ಗುಜರಾತ್ ಗಲಭೆಯಾಗಿ 1 ವರ್ಷದ ನಂತರ, 2003ರಲ್ಲಿ ಕೇಂದ್ರ ರೈಲ್ವೆ ಸಚಿವರಾಗಿದ್ದ ನಿತೀಶ್, ಕಚ್‌ನ ಆದಿಪುರದಲ್ಲಿ ರೈಲ್ವೆ ಯೋಜನೆ ಉದ್ಘಾಟಿಸಿದ್ದರು. ಆಗ ಮೋದಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಮೋದಿ ಅಭಿವೃದ್ಧಿ ದೃಷ್ಟಿಕೋನವುಳ್ಳವರು. ಅವರು ರಾಷ್ಟ್ರೀಯ ನಾಯಕ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. 2002ರ ದುರಂತವನ್ನು ಮರೆತು ನೀವು ಮುನ್ನಡೆಯಬೇಕು. ಗುಜರಾತ್ ಬೆಳೆದರೆ ದೇಶ ಬೆಳೆಯುತ್ತದೆ ಎಂದು ಅಲ್ಲಿನ ಜನರಿಗೆ ಸಲಹೆ ನೀಡಿದ್ದರು ಇದೇ ನಿತೀಶ್!
2010ರ ವಿಧಾನಸಭೆ ಚುನಾವಣೆ ಹತ್ತಿರದಲ್ಲಿತ್ತು. ಕೋಸಿ ನದಿ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದರು. ಗುಜರಾತ್ ಸಿಎಂ ಮೋದಿ ಪ್ರವಾಹ ಪೀಡಿತರ ನೆರವಿಗೆಂದು 5 ಕೋಟಿ ರು. ಪರಿಹಾರ ಪ್ರಕಟಿಸಿ, ಬಿಹಾರಕ್ಕೆ ಕಳುಹಿಸಿದ್ದರು. ಈ ಮಧ್ಯೆ, ಪಟ್ನಾದಲ್ಲಿ 2 ದಿನಗಳ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಆಯೋಜನೆಯಾಗಿತ್ತು ಮತ್ತು ನರೇಂದ್ರ ಮೋದಿ ಕೂಡ ಬಂದಿದ್ದರು.
ಹೃದಯ ವೈಶಾಲ್ಯತೆ ಮೆರೆದ ಮೋದಿ ಅವರಿಗೆ ಅಭಿನಂದನೆ ಎಂಬೆ ಪೋಸ್ಟರ್‌ಗಳು ಪಟ್ನಾದಲ್ಲಿ ಎದ್ದು ಕಾಣುತ್ತಿದ್ದವು. ಮೋದಿ ಬಗೆಗಿನ ಆಕ್ರೋಶದ ಬಿಸಿ ಏರಿದ್ದರೂ ನಿತೀಶ್ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಹಾಗಿದ್ದರೂ, ಪಟ್ನಾ ಬಿಡುವ ಮುನ್ನ ಬಿಜೆಪಿ ನಾಯಕರಿಗೆ ತಮ್ಮ ಮನೆಯಲ್ಲಿ ಭೋಜನ ಕೂಟ ಏರ್ಪಡಿಸುವುದಾಗಿ ತಿಳಿಸಿದ್ದ ನಿತೀಶ್, ಅದಕ್ಕಾಗಿ ಎಲ್ಲ ತಯಾರಿ ಮಾಡಿಸಿದ್ದರು.
ಆದರೆ, ಕಾರ್ಯಕಾರಿಣಿಯ 2ನೇ ದಿನದಂದು ಪಟ್ನಾದಲ್ಲಿ ಪ್ರಕಟವಾಗುತ್ತಿದ್ದ ಹಿಂದುಸ್ತಾನ್ ಮತ್ತು ಜಾಗರಣ್ ಪತ್ರಿಕೆಗಳ ಮುಖಪುಟದಲ್ಲಿ ನಿತೀಶ್-ಮೋದಿ ಕೈ ಕೈ ಹಿಡಿದ 1 ಪುಟದ ಜಾಹೀರಾತು ಚಿತ್ರ ಪ್ರಕಟವಾಗಿ, 5 ಕೋಟಿ ರು. ಪರಿಹಾರ ನೀಡಿದ ಮೋದಿಗೆ ಅಭಿನಂದನೆ ಎಂದು ತಿಳಿಸಲಾಗಿತ್ತು.
ಫ್ರೆಂಡ್ಸ್ ಆಫ್ ಬಿಹಾರ್ ಎಂಬ ಹೆಸರಲ್ಲಿ ಜಾಹೀರಾತು ಪ್ರಕಟಗೊಂಡಿತ್ತು. ಇದನ್ನು ಕಂಡು ವ್ಯಗ್ರಗೊಂಡಿದ್ದ ನಿತೀಶ್, ನನ್ನ ಅನುಮತಿ ಇಲ್ಲದೆ ಈ ಚಿತ್ರ ಮತ್ತು ಜಾಹೀರಾತು ಪ್ರಕಟ ಮಾಡಿದ್ದು ಏಕೆ ಎಂದು ಸಿಟ್ಟಾಗಿ, ಬಿಜೆಪಿಯವರಿಗೆಂದು ಆಯೋಜಿಸಿದ್ದ ಭೋಜನ ಕೂಟವನ್ನೂ ರದ್ದುಪಡಿಸಿ ದರು. ‘ಚುನಾವಣೆ ಮುನ್ನ ಕೆಟ್ಟ ಸಂದೇಶ ಹೋಗುತ್ತದೆ.
ಹೀಗೆ ಮಾಡಬೇಡಿ’ ಎಂದು ಸುಶೀಲ್ ಮೋದಿ ಮನವೊಲಿಸುವ ಯತ್ನ ಮಾಡಿದರೂ, ಕೆಟ್ಟ ಸಂದೇಶ ಹೋಗುವಂತೆ ಮಾಡಿದ್ದು ನಿಮ್ಮವರೇ. ಅವರಿಗೆ ಇದನ್ನು ಹೇಳಿ ಎಂದು ಬಾಯಿ ಮುಚ್ಚಿಸಿದ್ದರು. ಇಂಥದದ್ದೊಂದು ಜಾಹೀರಾತು ಪ್ರಕಟ ಮಾಡಿ, ನಿತೀಶರನ್ನು ವಿನಾಕಾರಣ ಕೆರಳುವಂತೆ ಮಾಡಿzರೆ ಎಂದು ಮೋದಿ ಬಗ್ಗೆ ಎಲ್.ಕೆ.ಆಡ್ವಾಣಿ, ನಿತಿನ್ ಗಡ್ಕರಿ, ಅರುಣ್ ಜೇಟ್ಲಿಗೂ ಅಸಮಾಧಾನ ಉಂಟಾಗಿತ್ತು.
ಫ್ರೆಂಡ್ಸ್ ಆಫ್ ಬಿಹಾರ್ ಎಂದರೆ ಯಾರು? ಜಾಹೀರಾತಿನ ಹಿಂದೆ ಯಾರಿದ್ದಾರೆ ಎಂಬುದರ ಪೊಲೀಸ್ ತನಿಖೆ ಮಾಡಿಸಿದ ನಿತೀಶರಿಗೆ, ಗುಜರಾತ್ ಮೂಲದ ಈಗಿನ ಕೇಂದ್ರ ಸಚಿವರೊಬ್ಬರು ಇರುವುದು ಗೊತ್ತಾಗಿತ್ತು. ಈ ಘಟನಾವಳಿಗಳ ನಂತರ ಬಿಜೆಪಿ-ಜೆಡಿಯು ಮೈತ್ರಿ ಅಂತ್ಯ ಎಂದೇ ಚರ್ಚೆ ಯಾಗುತ್ತಿತ್ತು. ಮೇಲಾಗಿ, ಸಿಎಂ ಮೋದಿ ಕಳುಹಿಸಿದ್ದ 5 ಕೋಟಿ ರು. ಪರಿಹಾರದ ಚೆಕ್‌ನ್ನು ನಾನು ವಾಪಸ್ ಮಾಡಿದ್ದೇನೆ.
ಅವರ ದುಡ್ಡು ನಮಗೆ ಬೇಕಿಲ್ಲ ಎಂದು ನಿತೀಶ್ ಹೇಳಿದ್ದರು. ನಿತೀಶ್ ಮಾತುಗಳು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಕೆರಳಿಸಿತು. ದಿಲ್ಲಿಯಲ್ಲಿದ್ದ ಶರದ್ ಯಾದವ್ ಜತೆ ಮಾತನಾಡಿದ ಗಡ್ಕರಿ, 5 ಕೋಟಿ ಕೊಟ್ಟದ್ದು ನಿಮ್ಮ ನಿತೀಶರಿಗಲ್ಲ, ಬಿಹಾರ ಜನತೆಗೆ. ವಾಪಸ್ ಮಾಡುವುದು ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದರು.
ಉತ್ತರ ನೀಡುವ ಸ್ಥಿತಿಯಲ್ಲಿ ಶರದ್ ಯಾದವ್ ಇರಲಿಲ್ಲ. ಏಕೆಂದರೆ ಅವರು ನಾಮಕಾವಾಸ್ತೆ ಅಧ್ಯಕ್ಷರಾಗಿದ್ದರು! ನಿತೀಶ್‌ರನ್ನು ಪ್ರಶ್ನಿಸುವ ಧಮ್ಮು, ಎದೆಗಾರಿಕೆ ಎರಡೂ ಅವರಲ್ಲಿರಲಿಲ್ಲ. ಜೆಡಿಯು ಜತೆ ಮೈತ್ರಿ ಅಂತ್ಯ ಮಾಡೋಣ ಎಂದು ಷಾ ನವಾಸ್ ಹುಸೇನ್, ಗಿರಿರಾಜ್ ಸಿಂಗ್, ರಾಜೀವ್ ಪ್ರತಾಪ್ ರೂಢಿ ಹೇಳಿದ್ದರೂ, ಸ್ವಲ್ಪ ಕಾಯೋಣ.
ನಾವು ಏನು ಮಾಡಬೇಕು, ಬಿಜೆಪಿಯಿಂದ ಬಿಹಾರಕ್ಕೆ ಯಾರು ಹೋಗಬೇಕು/ಬೇಡ ಎನ್ನುವುದನ್ನು ನಿತೀಶ್ ನಿರ್ಧಾರ ಮಾಡುವುದಲ್ಲ. ಆದರೆ, ಮೈತ್ರಿಯನ್ನು ಹೀಗೆ ಕೊನೆಗೊಳಿಸುವುದೂ ಸರಿಯಲ್ಲ ಎಂದು ಜೇಟ್ಲಿ ಸಲಹೆ ನೀಡಿ, ತಾಳ್ಮೆಗೆಡದಂತೆ ನೋಡಿಕೊಂಡರು. ಸ್ವಲ್ಪ ದಿನಗಳ ನಂತರ ಪಟ್ನಾ ದಲ್ಲಿ ಬಿಜೆಪಿ-ಜೆಡಿಯು ಸಭೆ ನಡೆದು, ಅದರಲ್ಲಿ ದಿಲ್ಲಿ ನಾಯಕರು ಪಾಲ್ಗೊಂಡು, ಮೈತ್ರಿ ಮುಂದು ವರಿಸುವ ತೀರ್ಮಾನವಾಯ್ತು. ಆದರೆ, ಬಿಹಾರಕ್ಕೆ ಒಂದು ಮೋದಿ (ಸುಶೀಲ) ಸಾಕು, ಇನ್ನೊಬ್ಬ ಮೋದಿಯ ಅಗತ್ಯವಿಲ್ಲ ಎಂದು ನಿತೀಶ್ ಸ್ಪಷ್ಟವಾಗಿ ತಿಳಿಸಿದ್ದರು!
2014ರ ಲೋಕಸಭೆ ಚುನಾವಣೆಗೆ ನರೇಂದ್ರ ಮೋದಿ ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಂಬ ಚರ್ಚೆ ಕಾವೇರುತ್ತಿದ್ದಂತೆ 2013ರ ಏಪ್ರಿಲ್ ತಿಂಗಳಲ್ಲಿ ದಿಲ್ಲಿಯಲ್ಲಿ ಅರುಣ್ ಜೇಟ್ಲಿ ನಿವಾಸಕ್ಕೆ ತೆರಳಿದ್ದ ನಿತೀಶ್, ಮೋದಿ ನಾಯಕತ್ವಕ್ಕೆ ನನ್ನ ಒಪ್ಪಿಗೆ ಇಲ್ಲ. ಇಂಥದ್ದೊಂದು ದುರಂತದ ತೀರ್ಮಾನ ಬೇಡ ಎಂದಿದ್ದರು.
ಹೊಸ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ನಿವಾಸಕ್ಕೆ ತೆರಳಿ ಅದೇ ಮಾತನ್ನು ಪುನರುಚ್ಚರಿಸಿ ದ್ದರು. ನಾವು ಯಾವುದೇ ತೀರ್ಮಾನ ಮಾಡಿಲ್ಲ ಎಂದು ರಾಜನಾಥ್ ಸಮಾಧಾನ ಮಾಡಿ ಕಳುಹಿಸಿ ದ್ದರು. 2009ರ ಲೋಕಸಭೆ ಚುನಾವಣೆಯನ್ನು ಯುಪಿಎ ಗೆದ್ದಿದ್ದರಿಂದ ಮೋದಿ ಬ್ರ್ಯಾಂಡ್ ಆಫ್ ಪಾಲಿಟಿಕ್ಸ್ ನ್ನು ಈ ದೇಶದ ಮತದಾರ ಒಪ್ಪುವುದಿಲ್ಲ ಎನ್ನುವುದು ನಿತೀಶ್ ಖಚಿತ ನಿಲುವಾಗಿತ್ತು.
ಉತ್ತರ ಪ್ರದೇಶದ ಪಿಲಿಭಿಟ್‌ನಲ್ಲಿ ವರುಣ್ ಗಾಂಧಿ ಮುಸ್ಲಿಮರ ವಿರುದ್ಧ ವಿಷ ಕಾರಿದ್ದರಿಂದಲೇ ಕಾಂಗ್ರೆಸ್ ಅಲ್ಲಿ 22 ಸೀಟು ಗೆದ್ದುಕೊಂಡಿತು ಎನ್ನುವುದು ನಿತೀಶ್ ಅಭಿಪ್ರಾಯವಾಗಿತ್ತು. 2013ರ ಜೂನ್ ತಿಂಗಳಲ್ಲಿ ಮೋದಿ ಪಿಎಂ ಅಭ್ಯರ್ಥಿ ಎಂದು ಗೋವಾದಲ್ಲಿ ಘೋಷಣೆಯಾಗುತ್ತಲೇ ಎನ್‌ಡಿಎ ಮೈತ್ರಿಕೂಟದಿಂದ ಹೊರ ನಡೆದ ನಿತೀಶ್ 20 ವರ್ಷಗಳ ಸಂಬಂಧ ಮುರಿದುಕೊಂಡಿ ದ್ದರು.
ನಂತರ ನಡೆದಿzಲ್ಲವೂ ಇತಿಹಾಸ. ನಿತೀಶ್‌ರ ಮೋದಿ ವಿರೋಧಿ ನಡೆಯನ್ನು ಬಿಹಾರ ಮತದಾರರು ತಿರಸ್ಕರಿಸಿದರು. ಜೆಡಿಯು ಹೀನಾಯವಾಗಿ ಸೋತಿತ್ತು. ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಿತೀಶ್, ಜೀತನ್ ರಾಮ್ ಮಾಂಜಿಯನ್ನು ಸಿಎಂ ಆಗಿ ಆಯ್ಕೆ ಮಾಡಿದರು. 2015ರ ರಾಜ್ಯ ವಿಧಾನಸಭೆ ಚುನಾವಣೆಯನ್ನು ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡು ಗೆದ್ದರೂ, ಈ ಸಂಬಂಧ ಹೆಚ್ಚು ಕಾಲ ಬಾಳಲಿಲ್ಲ.
ಬಿಜೆಪಿ ಗೆಲುವಿನ ನಾಗಾಲೋಟ ಹಾಗೂ ನರೇಂದ್ರ ಮೋದಿ ಜನಪ್ರಿಯತೆಯನ್ನು ಒಪ್ಪಿಕೊಳ್ಳುವುದು ಮತ್ತು ಬಿಹಾರದಲ್ಲಿ ತಮ್ಮ ಅಧಿಕಾರ ಹಾಗೂ ನಾಯಕತ್ವದ ಮುಂದುವರಿಕೆಗೆ ಅವರನ್ನು ಅಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. 2017ರಲ್ಲಿ ಬಿಜೆಪಿ ಜತೆ ಮರು ಮದುವೆಯಾದ ನಿತೀಶ್, 2019ರ ಲೋಕಸಭೆ ಚುನಾವಣೆಗೆ “ದೇಶಕ್ಕೆ ಮೋದಿ ಅನಿವಾರ್ಯ" ಎಂದು ಭಾಷಣ ಮಾಡಿದ್ದರು.
2019ರ ಮಾರ್ಚ್ ತಿಂಗಳಲ್ಲಿ ಪಟ್ನಾದ ಎನ್‌ಡಿಎ ಸಮಾವೇಶದಲ್ಲಿ ಮೋದಿ ಕೈ ಹಿಡಿದು ಜನರತ್ತ ಕೈ ಬೀಸಿದ್ದ ಚಿತ್ರಗಳು ಪತ್ರಿಕೆಗಳಲ್ಲಿ ರಾರಾಜಿಸಿದ್ದವು. ನಿತೀಶ್ ಮೊಗದಲ್ಲಿ ನಗು ಚೆಲ್ಲಿತ್ತು. 2009ರ ಲೂಧಿಯಾನ ಸಮಾವೇಶದ ಇಂಥದ್ದೇ ಚಿತ್ರ ಕಂಡು ಕೆಂಡಾಮಂಡಲಗೊಂಡಿದ್ದ ಮೋದಿ ವಿರೋಧಿ ನಿತೀಶ್, 2019ರಲ್ಲಿ ಅಧಿಕಾರದ ರಕ್ಷಣೆಗಾಗಿ ಮೋದಿ-ವಾದಿಯಾಗಿದ್ದರು.
ತಮ್ಮ ವಿರುದ್ಧ ಇಷ್ಟೆಲ್ಲ ಮಾಡಿದ ನೀತಿಶ್‌ರನ್ನು ಮೋದಿ ಸುಮ್ಮನೆ ಬಿಟ್ಟಾರಾ? 2020ರ ವಿಧಾನಸಭೆ ಚುನಾವಣೆಯಲ್ಲಿ ಚಿರಾಗ್ ಪಾಸ್ವಾನ್ ಮುಂದಿಟ್ಟು ನಿತೀಶರ ಜೆಡಿಯುವನ್ನು ನೆಲಕಚ್ಚುವಂತೆ ಮಾಡಿದರು. ಬಿಜೆಪಿ ಜತೆ ಸರಕಾರ ರಚನೆ ಮಾಡಿದರೂ ಮೋದಿ ಮೇಲಿನ ಒಳ ಮುನಿಸು ಮುಂದು ವರಿದಿತ್ತು. 2022ರಲ್ಲಿ ಮತ್ತೆ ಆರ್ ಜೆಡಿ ಜತೆ ಕೈಜೋಡಿಸಿದ ನಿತೀಶ್, ಮುಂದೆಂದೂ ಎನ್‌ಡಿಎ ಸೇರಲಾರೆ ಎಂದು ಘೋಷಿಸಿದರು.
2024ರ ಲೋಕಸಭೆ ಚುನಾವಣೆಗೆ ಮುನ್ನ ಮತ್ತೆ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡ ನಿತೀಶ್ ಕುಮಾರ್ ನಡೆ ಕಂಡು ಮಹಾಮೈತ್ರಿ ನಾಯಕರು ಕಕ್ಕಾಬಿಕ್ಕಿಯಾಗಿದ್ದರು. ನಿತೀಶರಿಗೆ ಬಿಹಾರದ ಜನರು ‘ಪಲ್ಟುರಾಮ’, ‘ಕುರ್ಸಿ ಕುಮಾರ್’, ‘ಗಿರ್ ಗಿಟ್’, ‘ಆಯಾ ರಾಮ್ ಗಯಾ ರಾಮ’ ಎಂದೆ ಬಿರುದುಗಳನ್ನು ನೀಡಿ ಆಡಿಕೊಳ್ಳುವುದು ಸುಮ್ಮನೆ ಏನಲ್ಲ ಅಲ್ಲವೇ? ಅನಾರೋಗ್ಯ, ಮರೆವಿನ ಕಾರಣದಿಂದಾಗಿ ಈಗ ನಿತೀಶ್ ರಾಜಕೀಯದ ಸಂಧ್ಯಾಕಾಲದಲ್ಲಿzರೆ. ಆದರೆ, ಅವರಿಗಿಂತ 1 ವರ್ಷ ಹಿರಿಯರಾಗಿರುವ ಪ್ರಧಾನಿ ಮೋದಿ ಉತ್ಸಾಹ, ಹುಮ್ಮಸ್ಸು ಮಾತ್ರ ತಗ್ಗಿಲ್ಲ.
2013ರ ತನಕ ಮೋದಿಯವರನ್ನು ಬಿಹಾರಕ್ಕೆ ಕಾಲಿಡಲು ಬಿಡಲಾರೆ ಎನ್ನುತ್ತಿದ್ದ ನಿತೀಶ್, ಈಗ ಅದೇ ಮೋದಿಗೆ ಮತ್ತೊಮ್ಮೆ ಕೆಂಪು ಹಾಸು ಹಾಕಿ ಸ್ವಾಗತಿಸಲು ಸಜ್ಜಾಗುತ್ತಿದ್ದಾರೆ.