ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghava Sharma Nidle Column: ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ಸರಕಾರದ ಕಣ್ತಪ್ಪಿದ್ದು ಹೇಗೆ ?

ಇಡೀ ಪ್ರಕರಣದಲ್ಲಿ ಎಸ್‌ಐಟಿಗೆ ಷಡ್ಯಂತ್ರದ ವಾಸನೆ ಬಡಿದ ಪರಿಣಾಮ, ಚಿನ್ನಯ್ಯನ ಹಿಂದೆ-ಮುಂದೆ ಇದ್ದ ಎಲ್ಲರನ್ನೂ ವಿಚಾರಣೆಗೊಳಪಡಿಸಿ, ಒಳಸಂಚಿನ ಜಾಲವನ್ನು ಬೇಧಿಸಲಾಗುತ್ತಿದೆ. ಕಳೆದೆರಡೂವರೆ ತಿಂಗಳಲ್ಲಿ ಬುರುಡೆ ಕೇಸು ದೇಶದಲ್ಲಿ ಸಂಚಲನ ಸೃಷ್ಟಿಸಿದರೂ, ಸುಪ್ರೀಂ ಕೋರ್ಟಿ ನದ ಮಹತ್ವದ ಬೆಳವಣಿಗೆಯನ್ನು 140 ದಿನಗಳ ಕಾಲ ಮುಚ್ಚಿಟ್ಟಿದ್ದೇಕೆ ಎನ್ನುವುದೇ ದಿಗ್ಭ್ರಮೆ ಮೂಡಿಸಿದೆ.

ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ಸರಕಾರದ ಕಣ್ತಪ್ಪಿದ್ದು ಹೇಗೆ ?

-

Ashok Nayak Ashok Nayak Sep 28, 2025 10:23 AM

ಚರ್ಚಾ ವೇದಿಕೆ

ರಾಘವ ಶರ್ಮ ನಿಡ್ಲೆ

ಧರ್ಮಸ್ಥಳ ಆಸುಪಾಸು ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಅಲ್ಲಿ ನೈರ್ಮಲ್ಯ ಕಾರ್ಮಿಕನಾಗಿದ್ದ ಸಿ.ಎನ್.ಚಿನ್ನಯ್ಯ ಪರ ವಕೀಲರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ, 2025ರ ಮೇ ತಿಂಗಳಲ್ಲಿ ಹಿನ್ನಡೆ ಅನುಭವಿಸಿದ್ದರು ಎನ್ನುವುದು ತಡವಾಗಿ ಬೆಳಕಿಗೆ ಬಂದದ್ದು ಅಚ್ಚರಿ ಮತ್ತು ಆಘಾತ ಎರಡಕ್ಕೂ ಕಾರಣವಾಗಿದೆ. ಇಂಥದ್ದೊಂದು ಮಹತ್ವದ ವಿಚಾರ ರಹಸ್ಯವಾಗಿ ಉಳಿದದ್ದು ಅಚ್ಚರಿಗೆ ಕಾರಣವಾದರೆ, ಕೋರ್ಟ್ ವಿಷಯದಲ್ಲಿ ಸರಕಾರ ಮತ್ತು ಜನರ ಕಣ್ಣಿಗೆ ಮಣ್ಣೆರಚಿರುವುದು ಆಘಾತಕಾರಿ.

ಚಿನ್ನಯ್ಯನ ದೂರನ್ನು ಆಧರಿಸಿ ಜುಲೈ ತಿಂಗಳಲ್ಲಿ ರಾಜ್ಯ ಸರಕಾರ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚನೆ ಮಾಡಿ, ನಂತರ ನೇತ್ರಾವತಿ ನದಿ ಸುತ್ತಮುತ್ತ 17 ಕಡೆ ಭೂಮಿ ಅಗೆದಾಗ ಅಲ್ಲಿ ಏನೂ ಸಿಕ್ಕಲಿಲ್ಲ. ಇಡೀ ಪ್ರಕರಣದಲ್ಲಿ ಎಸ್‌ಐಟಿಗೆ ಷಡ್ಯಂತ್ರದ ವಾಸನೆ ಬಡಿದ ಪರಿಣಾಮ, ಚಿನ್ನಯ್ಯನ ಹಿಂದೆ-ಮುಂದೆ ಇದ್ದ ಎಲ್ಲರನ್ನೂ ವಿಚಾರಣೆಗೊಳಪಡಿಸಿ, ಒಳಸಂಚಿನ ಜಾಲವನ್ನು ಬೇಧಿಸ ಲಾಗುತ್ತಿದೆ. ಕಳೆದೆರಡೂವರೆ ತಿಂಗಳಲ್ಲಿ ಬುರುಡೆ ಕೇಸು ದೇಶದಲ್ಲಿ ಸಂಚಲನ ಸೃಷ್ಟಿಸಿದರೂ, ಸುಪ್ರೀಂ ಕೋರ್ಟಿನಲ್ಲಾದ ಮಹತ್ವದ ಬೆಳವಣಿಗೆಯನ್ನು 140 ದಿನಗಳ ಕಾಲ ಮುಚ್ಚಿಟ್ಟಿದ್ದೇಕೆ ಎನ್ನುವುದೇ ದಿಗ್ಭ್ರಮೆ ಮೂಡಿಸಿದೆ.

ಸುಜಾತ ಭಟ್ ಎಂಬ ಮಹಿಳೆ 30 ವರ್ಷಗಳ ಹಿಂದೆ ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಳು ಎಂದು ಆರೋಪಿಸಿ, ಬುರುಡೆ ಕೇಸಿನೊಂದಿಗೆ ತನ್ನದನ್ನೂ ಸೇರಿಸಿಕೊಂಡು, ಅತ್ಯಾಚಾರ-ಕೊಲೆ ಆರೋಪಗಳಿಗೆ ಮತ್ತಷ್ಟು ರೆಕ್ಕೆ- ಪುಕ್ಕಗಳನ್ನು ಸೇರಿಸಿದ್ದರು. ನಂತರ ಆಕೆ ಹೇಳಿದ್ದೆಲ್ಲವೂ ಬುರುಡೆ ಎಂದು ಗೊತ್ತಾದಾಗ ಇವರೆಲ್ಲರೂ ಮಾಡುತ್ತಿರುವ ಆರೋಪಗಳ ‘ಹಿಂದಿನ ಘನ ಉದ್ದೇಶ’ ಏನೆಂಬುದು ಬಯಲಿಗೆ ಬಂದಿತ್ತು. ಎಸ್ ಐಟಿ ಚಿನ್ನಯ್ಯನನ್ನು ಆರೋಪಿ ಮಾಡಿ, ಬಂಧಿಸಿದ ನಂತರ ಆತನ ಹಿಂದೆ ಜಯಂತ್ ತಂಗಚ್ಚನ್, ಅವರ ಯೂಟ್ಯೂಬ್ ಚಾನೆಲ್‌ಗಳ ಮಿತ್ರರು, ಕೇರಳದ ಬೆಂಬಲಿಗರು, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮತ್ತು ಬೆಂಬಲಿಗ ಪಡೆಯೇ ಇದೆ ಎನ್ನುವುದೂ ಬಯಲಾಯ್ತು. ಇದಕ್ಕೆ ಪುಷ್ಟಿ ನೀಡುವಂತೆ - ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯೂ ಮೇ ತಿಂಗಳಲ್ಲಿ ವಜಾಗೊಂಡಿರುವುದು ಬಹಿರಂಗ ವಾಗಿದೆ. ಈ ವಿಷಯವನ್ನು ಚಿನ್ನಯ್ಯ ಮತ್ತವನ ಪರ ವಕೀಲರು ರಹಸ್ಯವಾಗಿಟ್ಟದ್ದು, ಅವರ ಮೇಲಿನ ಸಂಶಯ ಹೆಚ್ಚಿಸಿರುವುದರ ಜತೆಗೆ ಇಡೀ ತಂಡಕ್ಕೆ ಕನಿಷ್ಠ ವಿಶ್ವಾಸಾರ್ಹತೆಯೂ ಇಲ್ಲ ಎಂದು ಜನ ಮಾತನಾಡಿಕೊಳ್ಳುವಂತಾಗಿದೆ.

ಇದನ್ನೂ ಓದಿ: Raghav Sharma Nidle Column: ಎನ್‌ಡಿಎಗೆ ತಲೆನೋವಾದ ಮೋದಿ-ನಿತೀಶರ ಹಳೆಯ ಮಿತ್ರ

ಏಪ್ರಿಲ್ ತಿಂಗಳಲ್ಲಿ ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ ಚಿನ್ನಯ್ಯನ ಗುರುತು ಬಹಿರಂಗಪಡಿಸಬಾರದು ಎಂಬ ಉದ್ದೇಶದಿಂದ ಗಿಗಿಗಿ ಎಂದು ದಾಖಲು ಮಾಡಿ, ಕೇಂದ್ರ ಸರಕಾರ ಮತ್ತು ಇತರರನ್ನು ಕೇಸಿನ ಪಾರ್ಟಿಗಳನ್ನಾಗಿ ಮಾಡಲಾಗಿತ್ತು. ಈ ಅರ್ಜಿಯನ್ನು ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಸತೀಶ್ಚಂದ್ರ ಶರ್ಮ ಒಳಗೊಂಡ ದ್ವಿಸದಸ್ಯ ಪೀಠ, ಆರಂಭದ ವಜಾ ಮಾಡಿದ್ದರಿಂದ ಪ್ರತಿವಾದಿಗಳಿಗೆ ನೊಟೀಸ್ ನೀಡುವ ಸನ್ನಿವೇಶವೇ ನಿರ್ಮಾಣವಾಗಿರಲಿಲ್ಲ. ಮುಖ್ಯವಾಗಿ, ರಿಟ್ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ) ಎಂಬಂತೆ ಬಿಂಬಿಸಿ ದರೂ, ಕೋರ್ಟ್ ಅದನ್ನು ಮಾನ್ಯ ಮಾಡಿರಲಿಲ್ಲ. ಇದು ಪಿಐಎಲ್‌ನ ಉದಾತ್ತ ಉದ್ದೇಶವನ್ನೇ ಹಾಳು ಮಾಡುವಂತಿದೆ ಎಂದು ಟೀಕಿಸಿದ ನ್ಯಾಯಪೀಠ, ಇದು ಪಬ್ಲಿಸಿಟಿ ಇಂಟರೆ ಲಿಟಿಗೇಷನ್’, ಪ್ರೈವೇಟ್ ಇಂಟರೆ ಲಿಟಿಗೇಷನ್’, ‘ಪೈಸಾ ಇಂಟರೆ ಲಿಟಿಗೇಷನ್’ ಎಂದೆ ಆದೇಶದಲ್ಲಿ ದಾಖಲು ಮಾಡಿರುವುದು ಅರ್ಜಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡಿದಂತಿದೆ. ಪ್ರಕರಣದಲ್ಲಿ ಹಿರಿಯ ವಕೀಲ ಕೆ.ವಿ.ಧನಂಜಯ್ ಅವರು ದೂರುದಾರನ ಪರ ವಾದಿಸಿದ್ದರು. ಚಿನ್ನಯ್ಯನನ್ನು ಜುಲೈ ತಿಂಗಳಲ್ಲಿ ಬೆಳ್ತಂಗಡಿ ಕೋರ್ಟಿಗೆ ಕರೆದು ಕೊಂಡು ಬರುತ್ತಿದ್ದ ವಕೀಲ ಸಚಿನ್ ದೇಶಪಾಂಡೆ, ಓಜಸ್ವಿ ಗೌಡ ಹೆಸರು ಕೂಡ ಕೋರ್ಟ್ ಆದೇಶದ ಪ್ರತಿಯಲ್ಲಿದೆ. ಅಂದರೆ, ಸುಪ್ರೀಂಕೋರ್ಟಿನಲ್ಲಿ ವಿಫಲವಾದಾಗ, ಆ ವಿಷಯವನ್ನು ಮುಚ್ಚಿಟ್ಟು, ರಾಜ್ಯ ಸರಕಾರದ ಮೇಲೆ ವಿರಾಟ್ ಸ್ವರೂಪದಲ್ಲಿ ಒತ್ತಡ ಹೇರುವುದು ಈ ತಂಡದ ಉದ್ದೇಶವಾಗಿತ್ತೇ ಎನ್ನುವುದು ಪ್ರಶ್ನೆ. ತಾಂತ್ರಿಕ ನೆಲೆಯಲ್ಲಿ ಅರ್ಜಿ ವಜಾಗೊಂಡರೂ ಕೇಸಿನ ಮೆರಿಟ್‌ಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಕೆ.ವಿ. ಧನಂಜಯ ಸ್ಪಷ್ಟೀಕರಣ ನೀಡಿದ್ದಾರೆ.

ಸಾಮಾನ್ಯವಾಗಿ ಸುಪ್ರೀಂಕೋರ್ಟಿನಲ್ಲಿ ಅರ್ಜಿಯೊಂದು ಸಲ್ಲಿಕೆಯಾದ ನಂತರ, ಅದನ್ನು ರಿಜಿಸ್ಟ್ರಾರ್‌ನಲ್ಲಿ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್‌ಗಳು ಇಂಥಾ ನ್ಯಾಯಪೀಠದ ಮುಂದೆ ವಿಚಾರಣೆ ಗೆಂದು ಪಟ್ಟಿ ಮಾಡುತ್ತಾರೆ. ಕರ್ನಾಟಕಕ್ಕೆ ಸಂಬಂಧಿಸಿದ ಪ್ರಕರಣದ ಪ್ರಕ್ರಿಯೆಯೂ ಇದೇ ರೀತಿ ನಡೆಯುತ್ತದೆ. ಕೇಸ್ ವಿಚಾರಣೆಗೆಂದು ಪಟ್ಟಿಯಾದ ಕೂಡಲೇ ಕೋರ್ಟ್ ವೆಬ್‌ಸೈಟ್‌ನಲ್ಲಿ ಕಾಸ್-ಲಿಸ್ಟ್‌ ನಲ್ಲಿ ಅದನ್ನು ಅಪ್ಡೇಟ್ ಮಾಡಲಾಗುತ್ತದೆ.

ಕ್ಷಣಾರ್ಧದಲ್ಲಿ ಈ ಮಾಹಿತಿ ಸಂಬಂಧಪಟ್ಟವರಿಂದ ರಾಜ್ಯ ಸರಕಾರಕ್ಕೆ ರವಾನೆಯಾಗುತ್ತದೆ. ಮೇಲಾಗಿ, ಸುಪ್ರೀಂಕೋರ್ಟಿನಲ್ಲಿ ಕರ್ನಾಟಕದ ಪರವಾಗಿ ಅರ್ಜಿ/ಪ್ರತ್ಯುತ್ತರ ಸಲ್ಲಿಕೆ ಸೇರಿ ವಿವಿಧ ಕೆಲಸಗಳನ್ನು ನಿಭಾಯಿಸಲೆಂದೇ ಮೂರ್ನಾಲ್ಕು ಸ್ಟ್ಯಾಂಡಿಂಗ್ ಕೌನ್ಸಿಲ್‌ಗಳನ್ನು (ರಾಜ್ಯದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವ ವಕೀಲರು) ಸರಕಾರ ನೇಮಕ ಮಾಡಿರುತ್ತದೆ.

ದೆಹಲಿಯ ಕರ್ನಾಟಕ ಭವನದಲ್ಲೂ ಕೋರ್ಟ್ ಬೆಳವಣಿಗೆಗಳ ಬಗ್ಗೆ ನಿತ್ಯ ಮಾಹಿತಿ ನೀಡಲೆಂದೇ ಪರಿಣತ ಸಿಬ್ಬಂದಿಯೊಬ್ಬರು ಇರುತ್ತಾರೆ. ಸುಪ್ರೀಂಕೋರ್ಟ್ ಅಥವಾ ಕರ್ನಾಟಕದ ಕೇಸ್ ಇರುವ ನ್ಯಾಯಾಲಯಗಳಿಗೆ ತೆರಳಿ, ಅಲ್ಲಿನ ಬೆಳವಣಿಗೆಗಳನ್ನು ರಾಜ್ಯ ಸರಕಾರ, ಕಾನೂನು ಇಲಾಖೆ/ಸಚಿವರು/ಹಿರಿಯ ಅಧಿಕಾರಿಗಳಿಗೆ ವರದಿ ಮಾಡುವುದೇ ಅವರ ಜವಾಬ್ದಾರಿ.

ಇವರೊಂದಿಗೆ, ರಾಜ್ಯ ಸರಕಾರದಿಂದ ಗುಪ್ತಚರ ಇಲಾಖೆಯ ಪೊಲೀಸ್ ಅಧಿಕಾರಿಯನ್ನೂ ದೆಹಲಿಗೆ ನೇಮಕ ಮಾಡಿ, ಅವರು ರಾಜ್ಯದ ಕೇಸುಗಳ ಬಗ್ಗೆ ಗುಪ್ತಚರ ಉನ್ನತಾಧಿಕಾರಿಗೆ ನಿತ್ಯವೂ ಮಾಹಿತಿ ನೀಡುತ್ತಿರುತ್ತಾರೆ. ಇಷ್ಟೆ ಸಿಬ್ಬಂದಿ ಹಾಗೂ ಪರಿಣತರು ಕೋರ್ಟ್ ಸುತ್ತಮುತ್ತಲೇ ಇರುವಾಗ ಅವರೆಲ್ಲರ ಹದ್ದಿನಗಣ್ಣಿಗೆ ಮಣ್ಣೆರಚಲು ಸಾಧ್ಯವೇ ಎನ್ನುವುದು ಪ್ರಶ್ನೆ. ಅಥವಾ ಚಿನ್ನಯ್ಯ ಪರ ವಕೀಲರು ಇವರ್ಯಾರಿಗೂ ಮಾಹಿತಿ ನೀಡದೆ ಸುಪ್ರೀಂಕೋರ್ಟಿನಲ್ಲಿ ದೂರು ದಾಖಲಿಸಿದರೇ? ಹೋಗಲಿ, ದೂರು ದಾಖಲಾದ ನಂತರ, ಮೊದಲ ವಿಚಾರಣೆಗೆ ಕೇಸ್ ಲಿಸ್ಟ್ ಮಾಡಿದ್ದಾರೆ ಎಂಬ ವಿಷಯವೂ ಕರ್ನಾಟಕದ ಸ್ಟ್ಯಾಂಡಿಂಗ್ ಕೌನ್ಸಿಲ್ ಗಳಿಗೆ, ಕರ್ನಾಟಕ ಭವನದ ಅಧಿಕಾರಿಗೆ ಮತ್ತು ನಿಯೋಜಿತ ಗುಪ್ತಚರ ಅಧಿಕಾರಿಗೆ ಗೊತ್ತಾಗಲಿಲ್ಲವೇ? ಅಥವಾ ಗೊತ್ತಿದ್ದೂ, ಅದನ್ನು ಅಷ್ಟೊಂದು ಗಂಭೀರ ವಿಚಾರವಲ್ಲ ಎಂದು ಕಡೆಗಣಿಸಿದರೆ? ಅಥವಾ ಗೊತ್ತಾಗಿ, ರಾಜ್ಯ ಕಾನೂನು ಇಲಾಖೆ ಈ ವಜಾ ಆದೇಶವನ್ನು ಕಸದ ಬುಟ್ಟಿಗೆ ಎಸೆಯಿತೇ? ರಾಜ್ಯ ಸರಕಾರ ಎಸ್‌ಐಟಿ ರಚನೆ ಮಾಡಿದ್ದಾಗ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರೂ ಸ್ವಾಗತಿಸಿದ್ದರು.

ನಿತ್ಯವೂ ಇಷ್ಟೆ ಆರೋಪಗಳನ್ನು ಮಾಡುತ್ತಿರುವಾಗ, ಸತ್ಯ ಹೊರಬರಲಿ ಎನ್ನುವುದು ಅವರ ನಿಲುವಾಗಿತ್ತು. ಆದರೆ, ಶವಗಳನ್ನು ಹೂತು ಹಾಕಲಾಗಿದೆ ಎಂಬ ವಾದಕ್ಕೆ ಬದ್ಧವಾಗಿದ್ದ ಮತ್ತು ಯೂಟ್ಯೂಬ್ ಚಾನೆಲ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಚಿನ್ನಯ್ಯನ ದೂರನ್ನು ಪ್ರತಿಪಾದಿಸುತ್ತಿದ್ದವರಿಗೂ ಸುಪ್ರೀಂಕೋರ್ಟಿನದ ಬೆಳವಣಿಗೆ ಬಗ್ಗೆ ಮಾಹಿತಿ ಇರಲಿಲ್ಲವೇ? ಅಥವಾ ಗೊತ್ತಿದ್ದೂ ಅವರು ಜಾಣಮೌನ"ದ ಮೊರೆ ಹೋಗಿದ್ದರೇ? ಈ ಪ್ರಕರಣದಲ್ಲಿ ಸರಕಾರ ಎಸ್‌ಐಟಿ ರಚನೆ ಮಾಡಿ, ಒಳ್ಳೆಯ ಕೆಲಸವನ್ನೇ ಮಾಡಿದೆ. ಆದರೆ, ಸುಪ್ರೀಂಕೋರ್ಟಿನಲ್ಲಿ ವಜಾಗೊಂಡದ್ದು ರಾಜ್ಯ ಕಾನೂನು ಮತ್ತು ಗೃಹ ಇಲಾಖೆ ಗಮನಕ್ಕೆ ಬಂದಿರಲಿಲ್ಲ ಎನ್ನುವುದೇ ಹೌದಾಗಿದ್ದರೆ, ಅದಕ್ಕಿಂತ ದೊಡ್ಡ ದುರಂತ, ವಿಪರ್ಯಾಸ ಮತ್ತೊಂದಿಲ್ಲ.

ಅಥವಾ ಇಲಾಖೆಗೆ ಗೊತ್ತಿದ್ದೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಈ ಕುರಿತ ಮಾಹಿತಿ ವಿನಿಮಯ ಆಗಿರಲಿಲ್ಲವೇ ಎಂಬುದಾದರೂ ಬಹಿರಂಗವಾಗಬೇಕು. ಏಕೆಂದರೆ, ಯಾರೋ ಹೇಳಿದರೆಂದು ಎಸ್‌ಐಟಿ ರಚನೆ ಮಾಡಕ್ಕಾಗಲ್ಲ" ಎಂದು ಸಿಎಂ ಸಿದ್ದರಾಮಯ್ಯನವರು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಒಂದೆರಡು ದಿನದ ಎಸ್‌ಐಟಿ ರಚನೆ ಮಾಡಿ, ಆದೇಶಿಸಿದ್ದರು.

ಎಲ್ಲಕ್ಕಿಂತ ಮುಖ್ಯವಾಗಿ, ಚಿನ್ನಯ್ಯ ಬೆಂಬಲಿಗ ತಂಡದ ಪ್ರಣವ್ ಮೊಹಂತಿ ಸಾರಥ್ಯದ ಎಸ್‌ಐಟಿ ಯೇ ಬೇಕು ಎಂಬ ಬೇಡಿಕೆಯನ್ನೂ ಸರಕಾರ ಒಪ್ಪಿಕೊಂಡಿತ್ತು. ಹೀಗಿರುವಾಗ, ಎಸ್‌ಐಟಿ ರಚನೆ ಮಾಡುವುದರ ಸಾಧಕ/ಬಾಧಕಗಳ ಬಗ್ಗೆ ಸರಕಾರದ ಹಂತದಲ್ಲಿ ಚರ್ಚೆಯಾಗಿರುವುದಿಲ್ಲವೇ? ಕೋರ್ಟುಗಳಲ್ಲಿ ರಾಜ್ಯ ಸರಕಾರವನ್ನು ಪ್ರತಿನಿಧಿಸುವ ಅಡ್ವೊಕೇಟ್ ಜನರಲ, ಹೆಚ್ಚುವರಿ ಅಡ್ವೊ ಕೇಟ್ ಜನರಲ್‌ಗಳ ಅಭಿಪ್ರಾಯಗಳನ್ನು ಸರಕಾರ ಪಡೆಯಲಿಲ್ಲವೇ? ಅವರಿಗೂ ಸುಪ್ರೀಂ ಕೋರ್ಟ್ ಅರ್ಜಿ ವಜಾದ ಬಗ್ಗೆ ಮಾಹಿತಿ ಇರಲಿಲ್ಲವೇ? ವಿಧಾನಸಭೆಯಲ್ಲಿ ಚರ್ಚೆಯಾದ ಸಂದರ್ಭ ದಲ್ಲೂ ಈ ವಿಷಯ ಸಿಎಂ, ಗೃಹ ಸಚಿವರ ಗಮನಕ್ಕೆ ಬರಲಿಲ್ಲವೇ? ಹೀಗಾಗಿ, ಈ ಎಲ್ಲದಕ್ಕೂ ರಾಜ್ಯ ಸರಕಾರ ಸ್ಪಷ್ಟೀಕರಣ ನೀಡಲೇಬೇಕಿದೆ.

ಹಿಂದೊಮ್ಮೆ ಕಾವೇರಿ ನೀರು ಹಂಚಿಕೆ ವ್ಯಾಜ್ಯದ ವಿಚಾರಣೆ ನಡೆಯುತ್ತಿದ್ದಾಗ, ತಮಿಳುನಾಡಿಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ಹರಿಸಲೇಬೇಕೆಂದು ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶ ಮಾಡಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಆದೇಶದ ವಿರುದ್ಧ ವಿಧಾನ ಸಭೆಯಲ್ಲಿ ನಿರ್ಣಯ ಮಾಡಿತು. ಈ ನಿರ್ಣಯ ವಿರೋಧಿಸಿದ್ದ ರಾಜ್ಯದ ಪರ ವಕೀಲ, ಕಾನೂನು ತಜ್ಞ ಫಾಲಿ ನಾರಿಮನ್, ನಾವು ಕೇವಲ ವಕೀಲರಲ್ಲ ಅಥವಾ ವಕೀಲಿಕೆ ಮಾತ್ರ ನಮ್ಮ ಜವಾಬ್ದಾರಿ ಆಗಿರುವುದಿಲ್ಲ.

ನಾವು ಕಾನೂನು ಅಧಿಕಾರಿಗಳಂತೆಯೂ (ಲಾ ಆಫೀಸರ‍್ಸ್) ಕೆಲಸ ಮಾಡುತ್ತೇವೆ. ಹೀಗಾಗಿ, ಸುಪ್ರೀಂ ಕೋರ್ಟ್ ಹೇಳಿದ್ದನ್ನು ಒಪ್ಪಲಾರೆ ಎಂದು ಹಠ ಹಿಡಿಯಲಾಗದು ಎಂದು ತಮ್ಮ ವೃತ್ತಿ ಘನತೆಯ ಬಗ್ಗೆ ರಾಜ್ಯಕ್ಕೆ ಮನದಟ್ಟು ಮಾಡುವ ಯತ್ನ ಮಾಡಿದ್ದರು. ಮೇ ತಿಂಗಳಲ್ಲಿ ಬುರುಡೆ ಕೇಸಿನ ಅರ್ಜಿ ವಜಾಗೊಂಡದ್ದು ಹಾಗೂ ಅದನ್ನು ಮುಚ್ಚಿಟ್ಟ ಬೆಳವಣಿಗೆ ನೋಡಿದಾಗ ವಕೀಲರ ಜವಾಬ್ದಾರಿಗಳ ಕುರಿತ ಫಾಲಿ ನಾರಿಮನ್ ಅವರ ಮಾತುಗಳು ನೆನಪಾದವು.