ನವದೆಹಲಿ: ‘ಗಜನಿ’, ‘ಆಯನ್’, ‘ಸಿಂಗಂ’, ‘ಜೈ ಭೀಮ್’ ಸಿನಿಮಾ ಮೂಲಕ ಖ್ಯಾತಿ ಪಡೆದ ತಮಿಳು ಸೂಪರ್ ಸ್ಟಾರ್ ನಟ ಸೂರ್ಯ (Suriya) 50ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಸೂರ್ಯ ಹುಟ್ಟು ಹಬ್ಬದ ಹಿನ್ನೆಲೆ ಅವರ ಅಭಿನಯದ 'ಕರುಪ್ಪು' ಸಿನಿಮಾದ ಟೀಸರ್ ಅನ್ನು ಇಂದು ಬಿಡುಗಡೆ ಗೊಳಿಸಲಾಯಿತು. ಆರ್. ಜೆ. ಬಾಲಾಜಿ ನಿರ್ದೇಶನದ ಕರುಪ್ಪು ಚಿತ್ರದಲ್ಲಿ ನಟ ಸೂರ್ಯ ನಾಯಕನಾಗಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ನಟಿ ತ್ರಿಶಾ ಅವರು ಈ ಸಿನಿಮಾದ ನಾಯಕಿ ಯಾಗಿದ್ದಾರೆ. ಸೂರ್ಯ ಅವರ ಅಭಿನಯದ ಹೊಸ ಸಿನಿಮಾ ಟೀಸರ್ ಬಹುತೇಕ 'ಘಜಿನಿ' ಸಿನಿಮಾವನ್ನು ಮತ್ತೆ ಮರುಕಳಿಸುವಂತಿದೆ. ಸಿನಿಮಾದಲ್ಲಿ ಆ್ಯಕ್ಷನ್ ಸಿಕ್ವೆನ್ಸ್ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
ಟೀಸರ್‌ನಲ್ಲಿ ನಟ ಸೂರ್ಯ ಅವರು ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಕೀಲ ರಾಗಿ ಬಿಳಿ ಬಟ್ಟೆ ಧರಿಸಿದ್ದ ಶರವಣನ್ ಪಾತ್ರವನ್ನು ಮತ್ತು ಇನ್ನೊಂದು ಪಾತ್ರದಲ್ಲಿ ಕಪ್ಪು ಬಟ್ಟೆ ಧರಿಸಿ, ಕುಡುಗೋಲು ಹಿಡಿದ ಪಾತ್ರದಲ್ಲಿ ವಿಭಿನ್ನವಾಗಿ ಕಂಡಿದ್ದಾರೆ. ಈ ದ್ವಂದ್ವತೆಯು ವೀಕ್ಷಕರಿಗೆ ಎರಡು ವಿಭಿನ್ನ ಕಥೆಗಳನ್ನು ತಿಳಿಸಿಕೊಡಲಿದೆ.
ಟೀಸರ್ ಇಲ್ಲಿದೆ ನೋಡಿ
ಟೀಸರ್ ನಲ್ಲಿ ಮಾಸ್ ಮ್ಯೂಸಿಕ್ ಆ್ಯಕ್ಷನ್ ಜೊತೆಗೆ ಡಬಲ್ ಆ್ಯಕ್ಟಿಂಗ್ ದೃಶ್ಯಗಳು ಪ್ರೇಕ್ಷಕರ ಮನ ಸೆಳೆಯುವಂತಿದೆ. ಒಂದು ಕಡೆ ಲಾಯರ್ ಆಗಿ ಮಿಂಚಿದರೆ ಇನ್ನೊಂದು ಕಡೆ ಊರಿನ ನಾಯಕನಾಗಿ ಸೂರ್ಯ ಮಾಸ್ ಎಂಟ್ರಿ ನೀಡಲಿದ್ದಾರೆ. ಸಿಂಗಂ ಲುಕ್‌ನಲ್ಲಿ ಮಾಸ್ ಎಂಟ್ರಿ ನೋಡಲು ಕಾಯುತ್ತಿರುವುದಾಗಿ ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿದ್ದಾರೆ. ಈ ವಿಡಿಯೋ ಕಂಡರೆ ಘಜನಿಯ ದೃಶ್ಯ ಕಂಡಂತೆ ನೆನಪಾಗುವುದಾಗಿ ಮತ್ತೊಬ್ಬ ಬಳಕೆದಾರರು ಕಾಮೆಂಟ್ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ:The Devil Movie: ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್; ʼದಿ ಡೆವಿಲ್ʼ ಚಿತ್ರದ ಮೋಷನ್ ಪೋಸ್ಟರ್ ಔಟ್
ಈ ಚಿತ್ರವನ್ನು ಆರ್ ಜೆ ಬಾಲಾಜಿ ನಿರ್ದೇಶಿಸಿದ್ದು, ಡ್ರೀಮ್ ವಾರಿಯರ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಿಸಿದೆ. ಅಶ್ವಿನ್ ರವಿಚಂದ್ರನ್, ರಾಹುಲ್ ರಾಜ್, ಟಿ. ಎಸ್. ಗೋಪಿ ಕೃಷ್ಣನ್ ಮತ್ತು ಕರಣ್ ಅರವಿಂದ್ ಕುಮಾರ್ ಅವರು ಕಥೆ ಬರೆದಿದ್ದಾರೆ. ಸೂರ್ಯ ಮತ್ತು ತ್ರಿಷಾ ಮುಖ್ಯ ಪಾತ್ರದಲ್ಲಿ ನಟಿಸಿದ್ದು ಸ್ವಿಸಿಕಾ, ಇಂದ್ರನ್ಸ್, ಯೋಗಿ ಬಾಬು, ಶಿವದ, ನಾಟಿ ಸುಬ್ರಮಣಿಯಂ ಮತ್ತು ಸುಪ್ರೀತ್ ರೆಡ್ಡಿ ಸೇರಿದಂತೆ ಈ ಸಿನಿಮಾಕ್ಕೆ ಬಹುದೊಡ್ಡ ತಾರಾಗಣವಿದೆ.
ಕರುಪ್ಪು ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಟೀಸರ್ ನಲ್ಲಿ ಅನೇಕ ಕುತೂಹಲಕಾರಿ ಅಂಶಗಳನ್ನು ತಿಳಿಸಲಾಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಸೂರ್ಯ ಅಭಿನಯದ ಈ ಹೊಸ ಸಿನಿಮಾ ಬಿಡುಗಡೆ ದಿನಾಂಕ ಇನ್ನೂ ಕೂಡ ಘೋಷಣೆಯಾಗಿಲ್ಲ. ಚಿತ್ರವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.