ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chidambaram Bhat: ಡಿಜಿಟಲ್‌ ವಾಚ್‌ನಿಂದ ಎಐ ತಂತ್ರಜ್ಞಾನದವರೆಗೆ; ಇದು ಚಿದಂಬರಂ ಭಟ್‌ ಯಶಸ್ಸಿನ ಪಯಣ

ಸರಿಯಾಗಿ ವಿದ್ಯುತ್‌ ಸೌಕರ್ಯವೂ ಇಲ್ಲದ ಭಾರತದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಚಿದಂಬರಂ ಭಟ್ ಇಂದು ಕೃತಕ ಬುದ್ಧಿಮತ್ತೆ ಆಧಾರಿತ ಅಮೆರಿಕದ ಇಂಟೆಗ್ರಲ್ ಟೆಕ್ನಾಲಜೀಸ್‌ ಕಂಪೆನಿಯ ಸಹ-ಸಂಸ್ಥಾಪಕ ಮತ್ತು ಸಿಟಿಒ ಎನಿಸಿಕೊಂಡಿದ್ದಾರೆ. ಅವರ ದೃಢ ಸಂಕಲ್ಪವೇ ಇಂದಿನ ಈ ಯಶಸ್ಸಿಗೆ ಕಾರಣ.

ಚಿದಂಬರಂ ಭಟ್‌

ದೆಹಲಿ, ಅ. 13: ಸಾಧಿಸುವ ಛಲವಿದ್ದರೆ ಯಾವ ಅಂಶವೂ ನಮ್ಮನ್ನು ತಡೆಯಲಾರದು ಎನ್ನುವ ಮಾತಿದೆ. ಈ ಮಾತಿಗೆ ಉತ್ತಮ ಉದಾಹರಣೆ ಚಿದಂಬರಂ ಭಟ್ (Chidambaram Bhat). ಭಾರತದ ಒಂದು ಸಣ್ಣ ಹಳ್ಳಿಯಲ್ಲಿ ಜನಿಸಿದ ಅವರು ಇಂದು ಜಗತ್ತನ್ನು ಆಳುತ್ತಿರುವ ತಂತ್ರಜ್ಞಾನ ಕೃತಕ ಬುದ್ಧಿಮತ್ತೆ (AI) ಆಧಾರಿತ ಅಮೆರಿಕದ ಇಂಟೆಗ್ರಲ್ ಟೆಕ್ನಾಲಜೀಸ್‌ (Integral Technologies) ಕಂಪೆನಿಯ ಸಹ-ಸಂಸ್ಥಾಪಕ ಮತ್ತು ಸಿಟಿಒ (Chief Technology Officer) ಎನಿಸಿಕೊಂಡಿದ್ದಾರೆ. ಅವರ ಈ ಪ್ರಯಾಣವೇನೂ ಹೂ ಹಾಸಿನ ದಾರಿಯಾಗಿರಲಿಲ್ಲ. ಆದರೆ ಸ್ಪಷ್ಟ ಗುರಿ ಹೊಂದಿದ್ದ ಅವರ ದೃಢ ಸಂಕಲ್ಪವೇ ಇಂದಿನ ಈ ಯಶಸ್ಸಿಗೆ ಕಾರಣ.

ಚಿದಂಬರಂ ಭಟ್ ಅವರ ಈ ಪ್ರಯಾಣವು ಭಾರತದ ಒಂದು ಸಣ್ಣ ಹಳ್ಳಿಯಲ್ಲಿ ಪ್ರಾರಂಭವಾಯಿತು. ಅಲ್ಲಿ ನೆಟ್ಟಗೆ ವಿದ್ಯುತ್ ಸೌಕರ್ಯವೂ ಇರಲಿಲ್ಲ. ಇನ್ನು ಆಧುನಿಕ ತಂತ್ರಜ್ಞಾನದ ಮಾತು ದೂರವೇ ಬಿಡಿ. ಚಿಕ್ಕಪ್ಪ ಉಡುಗೊರೆಯಾಗಿ ನೀಡಿದ ಸರಳ ಡಿಜಿಟಲ್ ವಾಚ್‌ ಚಿದಂಬರಂ ಭಟ್ ಅವರ ಯೋಚನಾ ಧಾಟಿಯನ್ನೇ ಬದಲಾಯಿಸಿ ಬಿಟ್ಟಿತು. ಈ ಸಣ್ಣ ಯಂತ್ರದಿಂದ ಆಕರ್ಷಿತರಾದ ಅವರು, ಅದರ ಕಾರ್ಯ ವಿಧಾನವನ್ನು ಅರ್ಥ ಮಾಡಿಕೊಳ್ಳಲು ಬಿಡಿಸಿದರು. ಅವರಿಗೆ ಮತ್ತೆ ಅದನ್ನು ಜೋಡಿಸಲು ಸಾಧ್ಯವಾಗಲಿಲ್ಲ. ಆದರೆ ಆ ಕ್ಷಣವು ಯಂತ್ರಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ಜಿಜ್ಞಾಸೆಯನ್ನು ಅವರಲ್ಲಿ ಹುಟ್ಟುಹಾಕುವಲ್ಲಿ ಯಶಸ್ವಿಯಾಯಿತು. ಅಲ್ಲಿಂದ ಬಳಿಕ ಅವರ ಜೀವನದ ಗತಿಯೇ ಬದಲಾಯಿತು.

ಆಗ ಮೂಡಿದ ಕುತೂಹಲದ ಕಿಡಿಯೊಂದು ಅವರನ್ನು ಅಮೆರಿಕದ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಪದವಿ ಅಧ್ಯಯನದವರೆಗೆ ತಂದು ನಿಲ್ಲಿಸಿತು. ಜತೆಗೆ ವಿಶ್ವದ ಅತ್ಯಂತ ಬೇಡಿಕೆಯ ತಂತ್ರಜ್ಞಾನಗಳಲ್ಲಿ ಒಂದಾದ ಎಐ ಮೂಲಕ ವೃತ್ತಿ ಜೀವನ ಆರಂಭಿಸಲು ಕಾರಣವಾಯಿತು. ಪ್ರಸ್ತುತ ಚಿದಂಬರಂ ಭಟ್ ಇಂಟೆಗ್ರಲ್ ಟೆಕ್ನಾಲಜೀಸ್‌ನ ಸಹ-ಸಂಸ್ಥಾಪಕ ಮತ್ತು ಸಿಟಿಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಎಐ ಚಾಲಿತ ಫಿನ್‌ಟೆಕ್ ಕಂಪೆನಿ.

ಈ ಸುದ್ದಿಯನ್ನೂ ಓದಿ: ಟಾಟಾ ಮೋಟಾರ್ಸ್ ಕಮರ್ಷಿಯಲ್ ವೆಹಿಕಲ್ಸ್ ಶೂನ್ಯ-ಹೊರಸೂಸುವಿಕೆ ಟ್ರಕ್ಕಿಂಗ್ ಮುಂದುವರಿಕೆ

ವೃತ್ತಿ ಜೀವನದ ಆರಂಭಿಕ ದಿನಗಳು

ಚಿದಂಬರಂ ಭಟ್ ಎಚ್‌ಪಿ (HP)ಯ ಇಮೇಜಿಂಗ್ ಮತ್ತು ಪ್ರಿಂಟಿಂಗ್ ಗ್ರೂಪ್‌ ಮೂಲಕ ವೃತ್ತಿ ಜೀವನ ಆರಂಭಿಸಿದರು. ಅಲ್ಲಿ ಅವರು ಸ್ಕ್ಯಾನರ್ ಮತ್ತು ಪ್ರಿಂಟಿಂಗ್ ಸಿಸ್ಟಮ್‌ಗಳಿಗಾಗಿ ಇಮೇಜ್ ರೆಕಗ್ನಿಷನ್ ಅಲ್ಗಾರಿದಮ್‌ಗಳನ್ನು ಅಭಿವೃದ್ಧಿಪಡಿಸಿದರು. ಬಳಿಕ ಅವರು ಆಕ್ಟಿಫಿಯೊಗೆ ಸೇರಿದರು. ಅಲ್ಲಿ ಅವರು ಡಿಡ್ಯೂಪ್ಲಿಕೇಶನ್ ಎಂಜಿನ್ ಶೆಡ್ಯೂಲರ್ ವಿನ್ಯಾಸಗೊಳಿಸಿದರು.

ನಂತರ ವಿಶ್ವದ ಪ್ರಮುಖ ಹೆಡ್ಜ್ ಫಂಡ್‌ಗಳಲ್ಲಿ (ಹೆಡ್ಜ್ ಫಂಡ್ ಎನ್ನುವುದು ಖಾಸಗಿ ಹೂಡಿಕೆ ಪಾಲುದಾರಿಕೆಯ ಸಾಮಾನ್ಯ ನಿಧಿ ಆಗಿದ್ದು, ಹೂಡಿಕೆ ವೇಳೆ ಅದು ವೈವಿಧ್ಯಮಯ ಮತ್ತು ಸಂಕೀರ್ಣ ತಂತ್ರಗಳನ್ನು ಬಳಸುತ್ತದೆ) ಒಂದಾದ ಸಿಟಾಡೆಲ್‌ಗೆ ಕಾಲಿಟ್ಟು ಅಲ್ಲಿ ಮಹತ್ತರ ಬದಲಾವಣೆ ತಂದರು. ರಿಯಲ್‌ ಟೈಮ್‌ ವ್ಯಾಪಾರ ವಿಶ್ಲೇಷಣೆಯನ್ನು ಸುಗಮಗೊಳಿಸಲು ಉತ್ತಮ ಕಾರ್ಯಕ್ಷಮತೆಯ ಸ್ಟೋರೇಜ್‌ ಸಿಸ್ಟಂ ನಿರ್ಮಿಸಿದರು. ಇಷ್ಟೆಲ್ಲ ಯಶಸ್ಸಿನ ನಡುವೆಯೂ ಒಂದು ಪ್ರಶ್ನೆ ಅವರನ್ನು ಕೊರೆಯತ್ತಲೇ ಇತ್ತು. ಎಐಯಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕಡೆಗಣಿಸಲ್ಪಡುವ ವಲಯಗಳಿಗೆ ಹೇಗೆ ಅನ್ವಯಿಸಬಹುದು ಎನ್ನುವ ವಿಚಾರ ಅವರ ತಲೆಯಲ್ಲಿ ಓಡುತ್ತಲೇ ಇತ್ತು.

ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ

ಇಂಟೆಗ್ರಲ್ ಟೆಕ್ನಾಲಜೀಸ್‌ ಅನ್ನು ಸ್ಥಾಪಿಸುವ ಮೂಲಕ ಚಿದಂಬರಂ ಭಟ್ ಮತ್ತು ಅವರ ತಂಡವು ಹಣಕಾಸಿನ ಅತ್ಯಂತ ಸಂಕೀರ್ಣ ಮತ್ತು ವಿರಳ ಕ್ಷೇತ್ರಗಳಲ್ಲಿ ಸರಳ ವಿಧಾನವನ್ನು ಅಳವಡಿಸಿದರು. ಬೃಹತ್‌ ಕಂಪನಿಗಳಲ್ಲಿ ಸರಕುಗಳ ದರ ನಿಗದಿಗೆ ಇರುವ ತಂತ್ರಜ್ಞಾನ ಆಧಾರಿತ ಆಡಿಂಗ್‌ ವ್ಯವಸ್ಥೆ ಇದಾಗಿದೆ. ಮೊದಲು ಇದು ಮ್ಯಾನುವಲ್‌ ಆಗಿ ನಡೆಯುತ್ತಿತ್ತು. ಇದರಿಂದ ಬಹುರಾಷ್ಟ್ರೀಯ ಕಂಪನಿಗಳ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯರ್ಥವಾಗುತ್ತಿತ್ತು. ವ್ಯವಹಾರವನ್ನು ದೋಷ ಮುಕ್ತಗೊಳಿಸುವುದು ಭಟ್‌ ಮತ್ತು ತಂಡದ ಉದ್ದೇಶವಾಗಿತ್ತು. ಜತೆಗೆ ಲೆಕ್ಕಪರಿಶೋಧನೆ ಮಾಡಬಲ್ಲ ಎಐ ವ್ಯವಸ್ಥೆಗಳನ್ನು ರಚಿಸುವುದು ಕೂಡ ಚಿದಂಬರ್‌ ಭಟ್ ಅವರ ಗುರಿಯಾಗಿತ್ತು. ಈ ಕಾರಣಕ್ಕೆ ಇಂಟೆಗ್ರಲ್ ಟೆಕ್ನಾಲಜೀಸ್‌ ಹುಟ್ಟಿಕೊಂಡಿತು.

ಇದರರ್ಥ ಸ್ವಯಂಚಾಲಿತವಾಗಿ ಆಡಿಟ್ ದಾಖಲಾತಿ ರಚಿಸುವ ಮತ್ತು ನಿರ್ದಿಷ್ಟ ತೆರಿಗೆ ಅವಶ್ಯಕತೆಗಳನ್ನು ನಿರ್ವಹಿಸುವ ವ್ಯವಸ್ಥೆ. ಈ ವೇಳೆ ಎದುರಾದ ಸವಾಲುಗಳನ್ನು ಅವರು ಸಮರ್ಥವಾಗಿ ಎದುರಿಸಿದರು.

ಭವಿಷ್ಯದ ದೃಷ್ಟಿಕೋನ

ಬಹುರಾಷ್ಟ್ರೀಯ ಕಂಪೆನಿಗಳು, ಲೆಕ್ಕಪತ್ರ ಸಂಸ್ಥೆಗಳ ಎಐ ಚಾಲಿತ ಮೂಲಸೌಕರ್ಯಕ್ಕಾಗಿ ಇಂಟೆಗ್ರಲ್ ಜಾಗತಿಕ ಮಾನದಂಡವಾಗಲಿದೆ ಎನ್ನುವುದು ಭಟ್ ಅವರ ನಿರೀಕ್ಷೆ. ಇಂಟೆಗ್ರಲ್ ಸ್ಥಾಪನೆಯ ಜತೆಗೆ ಚಿದಂಬರಂ ಭಟ್‌ ಸೌಲಭ್ಯ ವಂಚಿತ ಹಿನ್ನೆಲೆಯಿಂದ ಬಂದವರಿಗೆ ಮಾರ್ಗದರ್ಶನ ನೀಡಲು ಮತ್ತು ಹೂಡಿಕೆ ಮಾಡುವ ಗುರಿ ಹೊಂದಿದ್ದಾರೆ. ಮುರಿದ ಡಿಜಿಟಲ್‌ ವಾಚ್‌ ಅವರನ್ನು ಇಲ್ಲಿಯವರೆಗೆ ಕೈಹಿಡಿದು ನಡೆಸಿಕೊಂಡು ಬಂದಿದೆ ಎನ್ನುವುದೇ ಅಚ್ಚರಿ.