ಚೆನ್ನೈ: ತಮಿಳುನಾಡಿನ ಪ್ರಮುಖ ಟೆಕ್ಸ್‌ಟೈಲ್ ಮತ್ತು ಆಭರಣ ಶೋರೂಂ ಪೋಥಿಸ್ ಪ್ರೈವೇಟ್ ಲಿಮಿಟೆಡ್‌ಗೆ (Pothys Private Limited) ಸಂಬಂಧಿಸಿದ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ (Income Tax) ಇಲಾಖೆ ಶುಕ್ರವಾರ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದಡಿ ನಡೆದ ಈ ದಾಳಿಗಳು ಚೆನ್ನೈ (Chennai), ಕೊಯಮತ್ತೂರು (Coimbatore), ಮಧುರೈ ಮತ್ತು ತಿರುನೆಲ್ವೇಲಿ ನಗರಗಳ ಶೋರೂಂಗಳು ಮತ್ತು ಆಸ್ತಿಗಳನ್ನು ಒಳಗೊಂಡಿವೆ. ಚೆನ್ನೈಯ ಈಸ್ಟ್ ಕೋಸ್ಟ್ ರೋಡ್ (ECR)ನಲ್ಲಿರುವ ಪೋಥಿಸ್ ಮಾಲೀಕನ ಇಬ್ಬರು ಮಕ್ಕಳಾದ ಆಶೋಕ್ ಪೋಥಿ ಮತ್ತು ಅವನ ಸಹೋದರರ ನಿವಾಸದಲ್ಲಿ 12 ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ದಾಳಿಯ ವಿವರ
ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳು ಬೆಳಗ್ಗೆ 7.20ರ ಸುಮಾರಿನಿಂದ ಚೆನ್ನೈಯ ನೀಲಾಂಕರೈನಲ್ಲಿರುವ ಆಶೋಕ್ ಪೋಥಿ ಮತ್ತು ಅವರ ಸಹೋದರರ ಮನೆಗಳಲ್ಲಿ ದಾಳಿ ನಡೆಸಿದ್ದಾರೆ. ಒಂದು ಮನೆಯಲ್ಲಿ 6 ಅಧಿಕಾರಿಗಳು ಮತ್ತು ಮತ್ತೊಂದರಲ್ಲಿ 12 ಅಧಿಕಾರಿಗಳು ಇದ್ದರು ಎಂದು ತಿಳಿದುಬಂದಿದೆ. ವರದಿಯ ಪ್ರಕಾರ, ಚೆನ್ನೈಯ ವಡಪಾಲಾನಿ, ಅಲ್ವಾರ್‌ಪೇಟ್, ಮತ್ತು ಟಿ. ನಗರ್‌ನಂತಹ ಪ್ರದೇಶಗಳು ಗುರಿಯಾಗಿಸಿ ತನಿಖೆ ನಡೆಸಲಾಗಿದೆ.
ಪೋಥಿಸ್ ಜವಳಿ ಶೋರೂಂ ತಮಿಳುನಾಡಿನ ಉದ್ಯಮಿಗೆ ಸೇರಿದ್ದು, ಚೆನ್ನೈ, ಮಧುರೈ ಸೇರಿದಂತೆ ತಮಿಳುನಾಡಿನಲ್ಲಿ ಇದು ಅತೀ ದೊಡ್ಡ ಜವಳಿ ವ್ಯವಹಾರವಾಗಿ ಬೆಳೆದಿದೆ. 1923ರಲ್ಲಿ ಕೆ.ವಿ. ಪೊಥಿ ಮೂಪನಾರ್ ಅವರಿಂದ ಸ್ಥಾಪಿತವಾದ ಈ ಬ್ರ್ಯಾಂಡ್, ಕಾಲಾನಂತರದಲ್ಲಿ ತನ್ನ ವ್ಯಾಪಾರವನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ವಿಸ್ತರಿಸಿದೆ. ಬೆಂಗಳೂರಿನಲ್ಲಿ ಗಾಂಧಿನಗರ (ಕೆಂಪೇಗೌಡ ರಸ್ತೆ) ಮತ್ತು ಟೆಂಬರ್ ಲೇಔಟ್‌ನಲ್ಲಿ ಎರಡು ದೊಡ್ಡ ಶೋರೂಂಗಳನ್ನು ಹೊಂದಿದೆ. ಈ ಶೋರೂಂಗಳು ರೇಷ್ಮೆ ಸೀರೆಗಳು, ಮಕ್ಕಳ ಬಟ್ಟೆಗಳು, ಪುರುಷರ ಉಡುಪುಗಳು ಮತ್ತು ಇತರ ಫ್ಯಾಷನ್ ಉತ್ಪನ್ನಗಳಿಗೆ ಹೆಸರುವಾಸಿ.
ಈ ಸುದ್ದಿಯನ್ನು ಓದಿ: Viral Video: ತನಿಖಾಧಿಕಾರಿಯನ್ನೇ ಜೈಲಿಗಟ್ಟಿದ ಕೋರ್ಟ್- ಅಷ್ಟಕ್ಕೂ ನಡೆದಿದ್ದೇನು?
ಹಿಂದಿನ ದಾಳಿಗಳು
ಇದು ಪೋಥಿಸ್ ಮೇಲೆ ನಡೆದ ಮೊದಲ ದಾಳಿಯಲ್ಲ. 2016ರ ಅಕ್ಟೋಬರ್‌ನಲ್ಲಿ ಚೆನ್ನೈ, ಕೊಯಂಬತೂರ್ ಮತ್ತು ಪುದುಚೇರಿಯ 9 ಸ್ಥಳಗಳಲ್ಲಿ ದಾಳಿ ನಡೆದಿತ್ತು. ಪುದುಚೇರಿಯಲ್ಲಿ ಇಬ್ಬರು ಸಿಬ್ಬಂದಿಯಿಂದ 1 ಕೋಟಿ ರೂ. ಹಣ ಸಿಕ್ಕಿತ್ತು. ಈ ದಾಳಿಗಳು ತಮಿಳುನಾಡಿನ ವ್ಯಾಪಾರ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಪೋಥಿಸ್‌ನಂತಹ ಪ್ರಮುಖ ಚೈನ್ ಮೇಲಿನ ತನಿಖೆಯು ತೆರಿಗೆ ವಂಚನೆ ವಿರುದ್ಧದ ಇಲಾಖೆಯ ಕಠಿಣ ನೀತಿಗೆ ಹಿಡಿದ ಕೈಗನ್ನಡಿ ಎಂದು ವಿಶ್ಲೇಷಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ತನಿಖೆಯ ಫಲಿತಾಂಶಗಳು ಬಹಿರಂಗವಾಗುವ ನಿರೀಕ್ಷೆಯಿದೆ.