#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Union Budget 2025: ಸ್ವಾತಂತ್ರ್ಯಾನಂತರದ ಭಾರತದ ಹಣಕಾಸು ಸಚಿವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..!

ಕೇಂದ್ರ ಅಥವಾ ರಾಜ್ಯ ಸರಕಾರದಲ್ಲಿ ಪ್ರಮುಖವಾದ ಖಾತೆಗಳಲ್ಲಿ ಹಣಕಾಸು ಖಾತೆಯೂ ಒಂದಾಗಿದ್ದು, ಫೆ01ರ ಕೇಂದ್ರ ಬಜೆಟ್ ಮಂಡನೆಯ ಈ ಸಂದರ್ಭದಲ್ಲಿ ಸ್ವತಂತ್ರ ಭಾರತದ ವಿವಿಧ ಕೇಂದ್ರ ಸರಕಾರಗಳಲ್ಲಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದವರ ಮಾಹಿತಿ ಇಲ್ಲಿದೆ.

1947 ರಿಂದ 2025ರವರೆಗಿನ ಕೆಂದ್ರ ಬಜೆಟ್ ಇತಿಹಾಸ ಇಲ್ಲಿದೆ!

1947 ರಿಂದ 2025ರವರೆಗಿನ ಕೆಂದ್ರ ಬಜೆಟ್ ನ ಇತಿಹಾಸ ಇಲ್ಲಿದೆ.

Profile Sushmitha Jain Feb 1, 2025 7:09 AM

ನವದೆಹಲಿ: ಸಂವಿಧಾನದ 112ನೇ ಆರ್ಟಿಕಲ್ ಪ್ರಕಾರ, ಪ್ರಸಕ್ತ ವರ್ಷದ ಸರಕಾರದ ನಿರೀಕ್ಷಿತ ಆದಾಯ ಮತ್ತು ವೆಚ್ಚಗಳ ಹಣಕಾಸು ಮಾಹಿತಿಯೇ ಕೇಂದ್ರ ಬಜೆಟ್ (Union Budget) ಆಗಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ ಮೊದಲ ಬಜೆಟ್ ಮಂಡನೆಯಾಗಿದ್ದು 1947ರಲ್ಲಿ. ರೈಲ್ವೇ ಬಜೆಟ್ (Railway Budget) ಕೇಂದ್ರ ಬಜೆಟ್ ನೊಂದಿಗೆ 2017-18ರಲ್ಲಿ ವಿಲೀನಗೊಂಡಿತು. ಈ ಮೂಲಕ ಹಣಕಾಸು ಬಜೆಟ್ ಮತ್ತು ರೈಲ್ವೇ ಬಜೆಟನ್ನು ಪ್ರತ್ಯೇಕವಾಗಿ ಮಂಡಿಸುವ 92 ವರ್ಷದ ಪರಿಪಾಠ ಈ ಮೂಲಕ ಅಂತ್ಯಗೊಂಡಿತು.

ಬಜೆಟ್ ಪುಸ್ತಕವನ್ನು ಮುದ್ರಿಸುವ ಸಂದರ್ಭದಲ್ಲಿ. ಬಜೆಟ್ ಮಂಡನೆಗೂ ಮೊದಲು ‘ಹಲ್ವಾ ತಯಾರಿ ಸಂಭ್ರಮ’ ನಡೆಯುವುದು ವಿಶೇಷ. ಹಾಗಾದ್ರೆ, 1947 ರಿಂದ 2024ರವರೆಗೆ ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವರ ವಿವರಗಳು ಇಲ್ಲಿದೆ..

ಆರ್.ಕೆ. ಷಣ್ಮುಖಂ ಚೆಟ್ಟಿ (R. K. Shanmukham Chetty)

ರಾಮಸ್ವಾಮಿ ಚೆಟ್ಟಿ ಕಂದಸ್ವಾಮಿ ಷಣ್ಮುಖಂ ಚೆಟ್ಟಿ ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದೇಶದ ಮೊದಲ ಬಜೆಟನ್ನು 1947ರ ನ.26ರಂದು ಮಂಡಿಸಲಾಯಿತು. ಇದೇ ಅವಧಿಯಲ್ಲಿ ಯೊಜನಾ ಆಯೋಗವನ್ನೂ ಸಹ ರಚಿಸಲಾಯಿತು.

ದೇಶದ ಮೊದಲ ಬಜೆಟ್ ಮಂಡಿಸಿದ ಚೆಟ್ಟಿ ಅವರು ತಮ್ಮ ಭಾಷಣದಲ್ಲಿ ಈ ಬಜೆಟ್ ಏಳೂವರೆ ತಿಂಗಳಿಗೆ ಎಂದು ಹೆಳಿರುತ್ತಾರೆ. ತಮ್ಮ ಬಜೆಟ್ ನಲ್ಲಿ 171.15 ಕೋಟಿ ರೂಪಾಯಿಗಳ ಆದಾಯ ಮತ್ತು 197.39 ಕೋಟಿ ಖರ್ಚಿನ ಬಜೆಟನ್ನು ಮಂಡಿಸಿದ್ದರು. ಚೆಟ್ಟಿ ಅವರು 1947 ಆಗಸ್ಟ್ 15 ರಿಂದ 1948 ರ ಆಗಸ್ಟ್ 17ರವರೆಗೆ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಜಾನ್ ಮಥಾಯಿ (John Matthai)

ಜಾನ್ ಮಥಾಯಿ ಅವರು ದೇಶದ ಮೊದಲ ರೈಲ್ವೇ ಸಚಿವರಾಗಿದ್ದರು. ಆ ಬಳಿಕ, ಷಣ್ಮುಖಂ ಚೆಟ್ಟಿ ಅವರ ಬಳಿಕ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಪಂಚ ವಾರ್ಷಿಕ ಯೋಜನೆಯನ್ನು ಇವರ ಅವಧಿಯಲ್ಲೇ ಜಾರಿಗೆ ಬಂತು. ಯೋಜನಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಿರುವುದನ್ನು ವಿರೋಧಿಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದರು.

ಅಧಿಕಾರವಧಿ: 1948 ಸೆ.22 ರಿಂದ 1950 ಜ.26ರವರೆಗೆ ; 1950 ಜ.26 ರಿಂದ – 1950 ಮೇ 6 ; 1950 ರ ಮೇ 6ರಿಂದ – 1950 ಜೂನ್ 1

ಸಿ.ಡಿ. ದೇಶ್ ಮುಖ್ (C. D. Deshmukh)

ಚಿಂತನಮ್ ದ್ವಾರಕಾನಾಥ್ ದೇಶ್ ಮುಖ್ 1951-52ರಲ್ಲಿ ಮೊದಲ ಮಧ್ಯಂತರ ಬಜೆಟನ್ನು ಮಂಡಿಸಿದ್ದರು. ಇವರ ಅಧಿಕಾರಾವಧಿಯಲ್ಲಿ ಮೊದಲ ಪಂಚವಾರ್ಷಿಕ ಯೋಜನೆ ಜಾರಿಗೊಂಡಿತ್ತು. ತೆರಿಗೆ ಹೆಚ್ಚಳ, ಕಾರ್ಪೊರೇಶನ್ ತೆರಿಗೆ ಸೇರ್ಪಡೆ ಮತ್ತು ಆದಾಯ ತೆರಿಗೆ ಮತ್ತು ಸೂಪರ್-ಟ್ಯಾಕ್ಸ್ ರೇಟ್ ಗಳ ಮೇಲೆ 5 ಪ್ರತಿಶತ ಮೇಲ್ತರಿಗೆ ಪ್ರಸ್ತಾವನೆಗಳನ್ನು ಇವರೇ ಮಾಡಿದ್ದರು.

ಇವರ ಅಧಿಕಾರಾವಧಿಯಲ್ಲಿ, ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್ () ಸ್ಥಾಪನೆಗೊಂಡಿತು, ಮತ್ತು ಇದರ ಆಡಳಿತ ಮಂಡಳಿಯ ಸ್ಥಾಪಕ ಸದಸ್ಯರೂ ಆಗಿದ್ದರು.

ಅಧಿಕಾರವಧಿ: 1950 ಜೂ.1 – 1952 ಮೇ 13ರವರೆಗೆ ; 1952 ಮೇ 13 ರಿಂದ 1956 ಆ.01ರವರೆಗೆ

ಟಿ.ಟಿ. ಕೃಷ್ಣಮಾಚಾರಿ (T. T. Krishnamachari)

ಟಿ ಟಿ ಕೃಷ್ಣಮಾಚಾರಿ ಅವರು ಆಸ್ತಿ ತೆರಿಗೆ ಮತ್ತು ವೆಚ್ಚ ತೆರಿಗೆಯನ್ನು ಪರಿಚಯಿಸಿದ ಖ್ಯಾತಿ ಹೊಂದಿದ್ದಾರೆ. ಎನ್.ಎಲ್.ಸಿ., ಐಡಿಬಿಐ, ಐಸಿಐಸಿಐ ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಶನ್ ಇವರ ಅಧಿಕಾರಾವಧಿಯಲ್ಲೇ ಸ್ಥಾಪನೆಗೊಂಡಿತು. ಮುಂದ್ರಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದ ಕಾರಣಕ್ಕೆ ಇವರು ತಮ್ಮ ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವಂತಾಗಿತ್ತು.

ಅವಧಿ: 1956 ಆ.30 – 1957 ಎ.17 ; 1957 ಎ.17 ರಿಂದ 1958 ಫೆ.14ರವೆಗೆ

ಜವಾಹರಲಾಲ್ ನೆಹರೂ (Jawaharlal Nehru)

ದೇಶದ ಮೊದಲ ಪ್ರಧಾನ ಮಂತ್ರಿಯಾಗಿದ್ದ ನೆಹರು ಅವರು ಪ್ರಪ್ರಥಮ ಕೇಂದ್ರ ಬಜೆಟ್ ಮಂಡಿಸಿದ್ದರು. ಇವರು ಗಿಫ್ಟ್ ಟ್ಯಾಕ್ಸ್ ಪರಿಚಯಿಸಿದರು. ಇದರಲ್ಲಿ ಚ್ಯಾರಿಟೇಬಲ್ ಇನ್ ಸ್ಟಿಟ್ಯೂಷನ್ ಗಳು, ಸರಕಾರಿ ಕಂಪೆನಿಗಳು, ಕೇಂದ್ರ ಅಥವಾ ರಾಜ್ಯ ಕಾನೂನಿನಡಿಯಲ್ಲಿ ಸ್ಥಾಪನೆಗೊಂಡ ಕಾರ್ಪೊರೇಶನ್ ಗಳು, ಮತ್ತು ಆರು ಅಥವಾ ಅದಕ್ಕಿಂತ ಹೆಚ್ಚು ಜನರಿಂದ ನಿಯಂತ್ರಿಸಲ್ಪಡುವ ಸಾರ್ವಜನಿಕ ಕಂಪೆನಿಗಳನ್ನು ಇದರಿಂದ ವಿನಾಯಿತಿ ನೀಡಲಾಗಿತ್ತು. ಎಸ್ಟೇಟ್ ಡ್ಯೂಟಿ ಟ್ಯಾಕ್ಸ್ ಗೆ ಕೆಲವೊಂದು ತಿದ್ದುಪಡಿಗಳನ್ನು ನೆಹರು ಅವರು ಪ್ರಸ್ತಾಪಿಸಿದ್ದರು.

ಅವಧಿ: 1956 ಆ.01 – 1956 ಆ.30 ; 1958 ಫೆ.14 – 1958 ಮಾ.22ರವರೆಗೆ

ಮೊರಾರ್ಜಿ ದೇಸಾಯಿ (Morarji Desai)

ಅತೀ ಹೆಚ್ಚು ಬಜೆಟ್ ಮಂಡಿಸಿದ ಖ್ಯಾತಿ ಮೊರಾರ್ಜಿ ದೇಸಾಯಿ ಅವರದ್ದಾಗಿದೆ, ಅವರು, ಮಧ್ಯಂತರ ಬಜೆಟ್ ಸಹಿತ ದೇಸಾಯಿ ಅವರು ಒಟ್ಟು 10 ಬಜೆಟ್ ಗಳನ್ನು ಮಂಡಿಸಿದ್ದಾರೆ. ಇವರು ಕೃಷಿ – ಆಧಾರಿತ ಸಂಶೋಧನೆ ಮತ್ತು ಅಭಿವೃದ್ಧಿಗೆ (R&D) ಉತ್ತೇಜನ ನೀಡಿದ್ದರು. ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹಸುರು ಕ್ರಾಂತಿಗೆ ಮುನ್ನುಡಿ ಬರೆದವರು ಮೊರಾರ್ಜಿ ದೇಸಾಯಿ. ಆಮದು ಪರವಾನಿಗ ವ್ಯವಸ್ಥೆಯನ್ನು ಇವರೇ ಸ್ಥಾಪಿಸಿದ್ದರು.

ಅವಧಿ: 1958 ಮಾ.22 ರಿಂದ 1962 ಎ.10ರವರೆಗೆ ; 1962 ಎ.10 ರಿಂದ 1963 ಆ.31ರವರೆಗೆ

ಟಿ ಟಿ ಕೃಷ್ಣಮಾಚಾರಿ (T. T. Krishnamachari)

ಕೃಷ್ಣಮಾಚಾರಿ ಅವರ ಈ ಅವಧಿಯಲ್ಲಿ ಅವರು ದೇಶದಲ್ಲೇ ಪ್ರಥಮ ಬಾರಿಗೆ ಐಚ್ಛಿಕ ಗುಪ್ತ ಆದಾಯ ಬಹಿರಂಗ ಯೋಜನೆಯನ್ನು ಜಾರಿಗೆ ತಂದಿದ್ದರು.

ಅವಧಿ: 1963 ಆ.31 ರಿಂದ – 1965 ಡಿ.31ರವರೆಗೆ

ಇದನ್ನೂ ಓದಿ: Economic Survey: ಶೇ. 6.8ರವರೆಗೆ ಜಿಡಿಪಿ ಹೆಚ್ಚಳ ನಿರೀಕ್ಷೆ; ಆರ್ಥಿಕ ಸಮೀಕ್ಷೆಯಲ್ಲಿ ಏನೇನಿದೆ?

ಸಚಿಂದ್ರ ಚೌಧರಿ (Sachindra Chaudhuri)

ಸಚಿಂದ್ರ ಚೌಧರಿ ಅವರು ವಿಶ್ವ ಸಂಸ್ಥೆಗೆ ಭಾರತೀಯ ನಿಯೋಗದ ಸದಸ್ಯರಾಗಿದ್ದರು. ವೆಚ್ಚ ತೆರಿಗೆಯನ್ನು ಇವರ ಅವಧಿಯಲ್ಲಿ ತೆಗೆದುಹಾಕಲಾಯಿತು. ‘ಈ ತೆರಿಗೆಯಿಂದ ಬರುವ ಆದಾಯ ತುಂಬಾ ಕಡಿಮೆ ಇದೆ, 13 ಲಕ್ಷದಿಂದ ಕೇವಲ 60 ರೂಪಾಯಿಗಳು ಬರುತ್ತದೆ’ ಎಂದು ಅವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿಕೊಂಡಿದ್ದರು.

ಅವಧಿ: 1966 ಜ.01 ರಿಂದ 1966 ಜ.11 ರವರೆಗೆ ; 1966 ಜ.11 ರಿಂದ 1966 ಜ.24ರವರೆಗೆ ; 1966 ಜ.24 ರಿಂದ – 1967 ಮಾ.13ರವರೆಗೆ

ಮೊರಾರ್ಜಿ ದೇಸಾಯಿ (Morarji Desai)

ದೇಸಾಯಿ ಅವರು 1968ರಲ್ಲಿ ಸಣ್ಣ ಮತ್ತು ಬೃಹತ್ ತಯಾರಕರ ಉತ್ಪನ್ನಗಳ ಸ್ವ-ನಿರ್ಧಾರಕ ವಿಧಾನವನ್ನು ಪರಿಚಯಿಸಿದರು. ಇವರು ಸಂಗಾತಿ ಭತ್ಯೆಯನ್ನು ತೆಗೆದುಹಾಕಿದರು ಇದರಿಂದಾಗಿ ಪತಿ ಮತ್ತು ಪತ್ನಿಯನ್ನು ವೈಯಕ್ತಿಕ ತೆರಿಗೆದಾರರನ್ನಾಗಿ ಗುರುತಿಸುವಂತಾಯಿತು. ಇವರು 1962ರಲ್ಲಿ ಚಿನ್ನ ನಿಯಂತ್ರಣ ಕಾಯ್ದೆಯನ್ನು ಪರಿಚಯಿಸಿದರು. ತನ್ನಲ್ಲಿ ಸಮಾಲೋಚಿಸದೇ ಇಂದಿರಾ ಗಾಂಧಿ ಅವರು 14 ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿದ್ದನ್ನು ವಿರೋಧಿಸಿ ದೇಸಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಅವಧಿ: 1967 ಮಾರ್ಚ್ 13 ರಿಂದ 1969ರ ಜು.16ರವರೆಗೆ

ಇಂದಿರಾ ಗಾಂಧಿ (Indira Gandhi)

ಪ್ರಧಾನ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ಹಣಕಾಸು ಖಾತೆಯನ್ನೂ ಸಹ ನಿಭಾಯಿಸಿದ್ದರು. ಇವರ ಅವಧಿಯಲ್ಲಿ ಹಸುರ ಕ್ರಾಂತಿಯ ಬೆನ್ನಲ್ಲೇ ಕ್ಷೀರ ಕ್ರಾಂತಿಯನ್ನು ಪರಿಚಯಿಸಲಾಯಿತು. ನ್ಯಾಷನಲ್ ಡೈರಿ ಡೆವಲಪ್ಮೆಂಟ್ ಬೋರ್ಡನ್ನು (NDDB) ಇವರ ಕಾಲದಲ್ಲಿ ರಚಿಸಲಾಯಿತು.

ಅವಧಿ: 1969 ಜು.16 ರಿಂದ 1970 ಜೂ.27ರವರೆಗೆ

ಯಶವಂತ ರಾವ್ ಬಿ. ಚೌಹಾಣ್ (Yashwantrao B. Chavan)

ಚೌಹಾಣ್ ಅವರು ತಮ್ಮ ಅಧಿಕಾರವಧಿಯಲ್ಲಿ ಜನರಲ್ ಇನಶ್ಯೂರೆನ್ಸ್ ಕಂಪೆನಿಗಳನ್ನು ಹಾಗೂ ಕಲ್ಲಿದ್ದಲು ಗಣಿಗಳನ್ನು ರಾಷ್ಟ್ರೀಕರಣಗೊಳಿಸಿದರು. ಇವರ ಅವಧಿಯಲ್ಲೇ ಭಾರತದ ಆರ್ಥಿಕತೆ ಹಿಂಜರಿತಕ್ಕೊಳಗಾಯಿತು.

ಅವಧಿ: 1970 ಜೂ.27 ರಿಂದ 1971 ಮಾ.18 ; 1971 ಮಾ.18 ರಿಂದ 1974 ಅ.10ರವರೆಗೆ

ಚಿದಂಬರಂ ಸುಬ್ರಮಣಿಯನ್ (Chidambaram Subramaniam)

ಇವರ ಅಧಿಕಾರಾವಧಿಯಲ್ಲಿ ಇ.ಎಸ್.ಐ., ಇಪಿಎಫ್ ಮತ್ತು ಕುಟುಂಬ ಪಿಂಚಣಿ ಯೋಜನೆಗಳಂತಹ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಲಾಯಿತು.

ಅವಧಿ: 1974ರ ಅ.10 ರಿಂದ 1977ರ ಮಾ.24ರವರೆಗೆ

ಹರಿಭಾಯ್ ಎಂ. ಪಟೇಲ್ (Haribhai M. Patel)

ಪಟೇಲ್ ಅವರು ಮೊದಲ ಕಾಂಗ್ರೇಸೇತರ ಹಣಕಾಸು ಸಚಿವರಾಗಿದ್ದರು. ಕೇವಲ 800 ಪದಗಳ ಬಜೆಟ್ ಭಾಷಣ ಮಾಡಿದ ಹೆಗ್ಗಳಿಗೆ ಇವರದ್ದಾಗಿದ್ದು, ಇಂದಿನವರೆಗೂ ಅದೊಂದು ದಾಖಲೆಯಾಗಿ ಉಳಿದಿದೆ.

ಅವಧಿ: 1977ರ ಮಾ.26 ರಿಂದ 1979ರ ಜ.24ರವರೆಗೆ

ಚರಣ್ ಸಿಂಗ್ (Charan Singh)

ಚರಣ್ ಸಿಂಗ್ ಅವರು 1979ರ ಜ.24ರಿಂದ 1979ರ ಜು.16ರವರೆಗ ಹಣಕಾಸು ಸಚಿವರಾಗಿ ಅಧಿಕಾರದಲ್ಲಿದ್ದರು. ಅತೀ ಬೇಡಿಕೆಯ ಗ್ರಾಹಕ ವಸ್ತುಗಳ ಮೇಲೆ ಹೆಚ್ಚಿನ ಸುಂಕವನ್ನು ಇವರ ಅವಧಿಯಲ್ಲಿ ವಿಧಿಸಲು ಪ್ರಾರಂಭವಾಯಿತು.

ಹೇಮಾವತಿ ನಂದನ್ ಬಹುಗುಣ (Hemvati Nandan Bahuguna)

ಹಣಕಾಸು ಸಚಿವರಾಗಿದ್ದರೂ ಬಹುಗುಣ ಅವರು ಯಾವುದೇ ಬಜೆಟ್ ಮಂಡಿಸಲಿಲ್ಲ! ಇವರು 1979 ಜ.28ರಿಂದ 1979 ಅ.19ರವರೆಗೆ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಆರ್. ವೆಂಕಟರಾಮನ್ (R. Venkataraman)

ಜೀವ ರಕ್ಷಕ ಔಷ‍‍ಧಿಗಳು, ಸೈಕಲ್ ಗಳು, ಹೊಲಿಗೆ ಯಂತ್ರಗಳು ಮತ್ತು ಪ್ರೆಶರ್ ಕುಕ್ಕರ್ ಗಳ ಮೇಲಿನ ಅಬಕಾರಿ ಸುಂಕವನ್ನು ಇವರು ತೆಗೆದು ಹಾಕಿದ್ದರು. ಮತ್ತು ರೇಡಿಯೋ ಮೇಲಿದ್ದ ಪರವಾನಿಗೆ ಶುಲ್ಕವನ್ನೂ ಸಹ ಇವರು ತೆಗೆದುಹಾಕಿದ್ದರು. ಇವರು 1980ರ ಜ.14ರಿಂದ 1982ರ ಜ.15ರವರೆಗೆ ಅಧಿಕಾರದಲ್ಲಿದ್ದರು.

ಪ್ರಣಬ್ ಮುಖರ್ಜಿ (Pranab Mukherjee)

ಮುಖರ್ಜಿ ಅವರು ತಮ್ಮ ಅಧಿಕಾರವಧಿಯಲ್ಲಿ ಸಾರ್ವಜನಿಕ ಹೂಡಿಕೆ ಅದರಲ್ಲೂ ಅನಿವಾಸಿ ಭಾರತೀಯರ ಹೂಡಿಕೆಗೆ ಹೆಚ್ಚಿನ ಮಹತ್ವವನ್ನು ನೀಡಿದ್ದರು. ಇವರು 1982ರ ಜ.15ರಿಂದ 1984ರ ಅ.31ರವರೆಗೆ ಹಾಗೂ 1984ರ ಅ.31ರಿಂದ 1984ರ ಸಿ.31ರವರೆಗೆ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ವಿ.ಪಿ. ಸಿಂಗ್ (V. P. Singh)

ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಸಣ್ಣ ಉದ್ದಿಮೆಗಳಿಗೆ ಬೆಂಬಲ ನೀಡಲು ಸಣ್ಣ ಉದ್ದಿಮೆ ಅಭಿವೃದ್ಧಿ ಬ್ಯಾಂಕ್ ಸ್ಥಾಪಿಸುವ ಘೋಷಣೆಯನ್ನು ಮಾಡಲಾಯಿತು.

ಅವಧಿ: 1984ರ ಡಿ.31 ರಿಂದ 1985ರ ಜ.14 ; 1985ರ ಜ.14 ರಿಂದ 1985ರ ಮಾ.30 ; 1985ರ ಮಾ.30ರಿಂದ 1985ರ ಸೆ.25 ; 1985ರ ಸೆ.25ರಿಂದ – 1987ರ ಜ.24ರವರೆಗೆ

ರಾಜೀವ್ ಗಾಂಧಿ (Rajiv Gandhi)

ಕಾರ್ಪೊರೇಟ್ ತೆರಿಗೆಯನ್ನು ಪ್ರಪ್ರಥಮ ಬಾರಿಗೆ ಪರಿಚಯಿಸಿದವರು ರಾಜಿವ್ ಗಾಂಧಿ. ಇವರು 1987 ಜ.24ರಿಂದ 1987 ಜು.25ರವರೆಗೆ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಎನ್.ಡಿ. ತಿವಾರಿ (N. D. Tiwari)

ರಫ್ತು ಲಾಭದ ಮೇಲೆ 100 ಪ್ರತಿಶತ ತೆರಿಗೆ ವಿನಾಯಿತಿಯನ್ನು ತಿವಾರಿ ಘೋಷಿಸಿದ್ದರು ಮತ್ತು ರಫ್ತು ಸಾಲದ ಮೇಲಿನ ಬಡ್ಡಿ ದರವನ್ನು 12 ರಿಂದ 9%ಗೆ ಇಳಿಸುವ ಮೂಲಕ ಯಂತ್ರೋಪಕರಣಗಳು ಮತ್ತು ಕಚ್ಛಾವಸ್ತುಗಳ ಆಮದಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದರು.

ಅವಧಿ: 1987 ಜು.25 ರಿಂದ 1988 ಜೂ.25ರವರೆಗೆ

ಶಂಕರ ರಾವ್ ಬಿ. ಚೌಹಾಣ್ (Shankarrao B. Chavan)

ಚೌಹಾಣ್ ಅವರು ಹಣಕಾಸು ಸಚಿವರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಉದ್ಯೋಗಕ್ಕೆ ಬಲ ತುಂಬುವ ಜವಾಹರಲಾಲ್ ನೆಹರು ರೋಜ್ ಗಾರ್ ಯೋಜನೆಯನ್ನು ಪರಿಚಯಿಸಿದರು.

ಅವಧಿ: 1988 ಜೂ.25ರಿಂದ 1989 ಡಿ.2ರವರೆಗೆ

ಮಧು ದಂಡವತೆ (Madhu Dandavate)

ಕರಕುಶಲ ಕಾರ್ಮಿಕರು ಮತ್ತು ಸಣ್ಣ ಚಿನ್ನದ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗೊಲ್ಡ್ ಕಂಟ್ರೋಲ್ ಆಕ್ಟ್ ಅನ್ನು ಇವರ ಅಧಿಕಾರವಧಿಯಲ್ಲಿ ಜಾರಿಗೆ ತರಲಾಯಿತು. ಮಾತ್ರವಲ್ಲದೆ ಸೆಬಿಯನ್ನೂ ಸಹ ದಂಡವತೆ ಅವಧಿಯಲ್ಲೇ ಸ್ಥಾಪಿಸಲಾಯಿತು.

ಅವಧಿ: 1989 ಡಿ.15 ರಿಂದ 1990 ನ.10ರವರೆಗೆ

ಯಶ್ವಂತ್ ಸಿನ್ಹಾ (Yashwant Sinha)

ಸಿನ್ಹಾ ಅವರು 1991ರಲ್ಲಿ ಮಂಡಿಸಿದ ತನ್ನ ಮಧ್ಯಂತರ ಬಜೆಟ್ ನಲ್ಲಿ ಆರ್ಥಿಕ ಸುಧಾರಣೆಯ ಅಡಿಪಾಯವನ್ನು ಹಾಕಿಕೊಟ್ಟರು.

ಅವಧಿ: 1990 ನ.01 ರಿಂದ 1991 ಜೂ.21ರವರೆಗೆ

ಮನಮೋಹನ್ ಸಿಂಗ್ (Manmohan Singh)

ಮನಮೋಹನ್ ಸಿಂಗ್ ಅವರು ಎಲ್.ಪಿ.ಜಿ. (ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ) ನೀತಿಗಳ ಮೂಲಕ ದೇಶೀಯ ಮಾರುಕಟ್ಟೆಯನ್ನು ಮುಕ್ತಗೊಳಿಸಿದರು.

ಅವಧಿ: 1991 ಜೂ.21 ರಿಂದ 1996 ಮೇ.16ರವರೆಗೆ

ಜಸ್ವಂತ್ ಸಿಂಗ್ (Jaswant Singh)

ಅತೀ ಕಡಿಮೆ ಅವಧಿಗೆ ಹಣಕಾಸು ಸಚಿವರಾಗಿದ್ದವರು ಜಸ್ವಂತ್ ಸಿಂಗ್.

ಅವಧಿ: 1996 ಮೇ 16 ರಿಂದ 1996 ಜೂ,1ರವರೆಗೆ

ಪಿ. ಚಿದಂಬರಂ (P. Chidambaram)

ಪಿ ಚಿದಂಬರಂ ಅವರು ತೆರಿಗೆ ಸುಧಾರಣಾ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಅವರು ಐದಿಎಫ್.ಸಿ. ಸ್ಥಾಪನೆಯ ಪ್ರಸ್ತಾವನೆಯನ್ನೂ ಸಹ ತಮ್ಮ ಅವಧಿಯಲ್ಲಿ ಮಾಡಿದ್ದರು.

ಅವಧಿ: 1996 ಜೂ.1 ರಿಂದ 1997 ಎ.21ರವರೆಗೆ

ಐ.ಕೆ. ಗುಜ್ರಾಲ್ (I.K. Gujral)

ಪ್ರಧಾನಮಂತ್ರಿಗಳಾಗಿದ್ದ ಗುಜ್ರಾಲ್ ಅವರು ಹಣಕಾಸು ಸಚಿವಾಲಯವನ್ನು ತಮ್ಮ ಬಳಿ ಇರಿಸಿಕೊಂಡಿದ್ದರು.

ಅವಧಿ: 1997 ಎ.21 ರಿಂದ 1997 ಮೇ.1ರವರೆಗೆ

ಪಿ.ಚಿದಂಬರಂ (P. Chidambaram)

ಇವರು ಮಂಡಿಸಿದ ‘ಡ್ರೀಂ ಬಜೆಟ್’ ದೇಶದ ಆರ್ಥಿಕ ಸುಧಾರಣೆಗೆ ಮಾರ್ಗಸೂಚಿಯನ್ನು ಹಾಕಿಕೊಟ್ಟಿತ್ತು.

ಅವಧಿ: 1997 ಮೇ 1 ರಿಂದ 1998 ಮಾ.19ರವರೆಗೆ

ಯಶ್ವಂತ್ ಸಿನ್ಹಾ (Yashwant Sinha)

ಸಿನ್ಹಾ ಅವರು ತಮ್ಮ ಈ ಅವಧಿಯಲ್ಲಿ ಐಟಿ ಸೆಕ್ಟರ್ ಗೆ ಔಟ್ ಆಫ್ ಟ್ಯಾಕ್ಸ್ ಹಾಲಿಡೇ ನೀತಿಯನ್ನು ಜಾರಿಗೆ ತಂದಿದ್ದರು. ಇವರು ಸಾಲ ಮಾರುಕಟ್ಟೆ ಪುನರ್ ಸಂಯೋಜನೆಯನ್ನೂ ಸಹ ಮಾಡಿದ್ದರು.

ಅವಧಿ: 1998 ಮಾ.19 ರಿಂದ – 1999 ಅ.13 ; 1999 ಅ.13 ರಿಂದ 2002 ಜು.1ರವರೆಗೆ

ಜಸ್ವಂತ್ ಸಿಂಗ್ (Jaswant Singh)

ಆದಾಯ ತೆರಿಗೆಯ ಎಲೆಕ್ಟ್ರಾನಿಕ್ ಫೈಲಿಂಗ್ ಇವರ ಅವಧಿಯಲ್ಲಿ ಪರಿಚಯಿಸಲ್ಪಟ್ಟಿತು.

ಅವಧಿ: 2002 ಜೂ.1 ರಿಂದ 2004 ಮೇ 22ರವರೆಗೆ

ಪಿ. ಚಿದಂಬರಂ (P. Chidambaram)

ಗ್ರಾಮೀಣ ಭಾಗದ ಕಾರ್ಮಿಕರಿಗೆ 100 ದಿನಗಳ ಉದ್ಯೋಗ ಖಾತ್ರಿಯನ್ನು ನೀಡುವ ಮನ್ ರೇಗಾ ಯೊಜನೆ ಇವರ ಈ ಅವಧಿಯಲ್ಲಿ ಜಾರಿಗೆ ಬಂತು.

ಅವಧಿ: 2004 ಮೇ 23ರಿಂದ – 2008 ನ.30ರವರೆಗೆ

ಮನಮೋಹನ್ ಸಿಂಗ್ (Manmohan Singh)

ಪ್ರಧಾನಮಂತ್ರಿಗಳಾಗಿದ್ದ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಹಣಕಾಸು ಖಾತೆಯನ್ನೂ ಸಹ ತಾವೇ ನಿಭಾಯಿಸಿದ್ದರು.

ಅವಧಿ: 2008 ನ.30ರಿಂದ – 2009 ಜ.24

ಪ್ರಣಬ್ ಮುಖರ್ಜಿ (Pranab Mukherjee)

ಆಹಾರ ಭದ್ರತೆ ಕಾಯ್ದೆ ಇವರ ಅವಧಿಯಲ್ಲಿ ಪರಿಚಯಿಸಲಾಯಿತು. ಸರಕಾರಕ್ಕೆ ಆದಾಯ ಮೂಲವಾಗಿ 3ಜಿ ಸ್ಪೆಕ್ಟ್ರಂ ತರಂಗಾಂತರಗಳ ಹರಾಜು ಸಹ ನಡೆದದ್ದು ಇವರ ಈ ಅವಧಿಯಲ್ಲೇ.

ಅವಧಿ: 2009 ಜ.24 ರಿಂದ 2009 ಮೇ.22 ; 2009 ಮೇ.23 ರಿಂದ 2012 ಜೂ.26ರವರೆಗೆ

ಮನಮೋಹನ್ ಸಿಂಗ್ (Manmohan Singh)

ಪ್ರಧಾನಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಿಂಗ್ ಅವರು ಹಣಕಾಸು ಸಚಿವಾಲಯವನ್ನೂ ಸಹ ನಿಭಾಯಿಸಿದ್ದರು.

ಅವಧಿ: 2012 ಜೂ.26 ರಿಂದ 2012 ಜು.31ರವರೆಗೆ

ಪಿ.ಚಿದಂಬರಂ (P. Chidambaram)

ಒಂದು ಕೋಟಿಗಿಂತ ಹೆಚ್ಚಿನ ತೆರಿಗೆ ವ್ಯಾಪ್ತಿಯ ಆದಾಯಕ್ಕೆ 10% ಸರ್ ಚಾರ್ಜನ್ನು ಚಿದಂಬರಂ ಪರಿಚಯಿಸಿದರು. ಮಹಿಳೆಯರಿಗಾಗಿಯೇ ಕಾರ್ಯಾಚರಿಸುವ ಭಾರತಿಯ ಮಹಿಳಾ ಬ್ಯಾಂಕ್ ಇವರ ಅವಧಿಯಲ್ಲಿ ಪ್ರಾರಂಭಗೊಂಡಿತು.

ಅವಧಿ: 2012 ಜು.31 ರಿಂದ 2014 ಮೇ.26ರವರೆಗೆ

ಅರುಣ್ ಜೇಟ್ಲಿ (Arun Jaitley)

ನರೇಂದ್ರ ಮೋದಿ ಅವರ ಪ್ರಥಮ ಪ್ರಧಾನಿ ಅವಧಿಯಲ್ಲಿ ಜ್ಯೇಟ್ಲಿ ಅವರು ಹಲವಾರು ಇತರೇ ಖಾತೆಗಲ ಜವಾಬ್ದಾರಿಯೊಂದಿಗೆ ಹಣಕಾಸು ಖಾತೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರು. ಜಿ.ಎಸ್.ಟಿ. ಮತ್ತು ಡಿಮಾನಿಟೈಸೇಷನ್ ಇವರ ಅವಧಿಯಲ್ಲಿನ ಪ್ರಮುಖ ಎರಡು ನಿರ್ಧಾರಗಳಾಗಿವೆ.

ಅವಧಿ: 2014 ಮೇ.26 ರಿಂದ 2019 ಮೇ.30ರವರೆಗೆ

ಪಿಯೂಷ್ ಗೋಯೆಲ್ (Piyush Goya)

ಗೋಯೆಲ್ ಅವರು 2018 ರಿಂದ 2019ರವರೆಗೆ ಹಣಕಾಸು ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ನಿಭಾಯಿಸಿದ್ದರು. ಇವರು ಅರುಣ್ ಜ್ಯೇಟ್ಲಿ ಅವರ ಅನುಪಸ್ಥಿತಿಯಲ್ಲಿ 2019ರ ಫೆ.1ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು.

ಅವಧಿ: 2019 ಜ.23 ರಿಂದ 2019 ಫೆ.15ರವರೆಗೆ

ನಿರ್ಮಲಾ ಸೀತಾರಾಮನ್ (Nirmala Sitharaman)

ಇಂದಿರಾ ಗಾಂಧ ಅವರ ಬಳಿಕ ಹಣಕಾಸು ಸಚಿವರಾದ ಎರಡನೇ ಮಹಿಳೆಯೆಂಬ ಖ್ಯಾತಿಗೆ ನಿರ್ಮಲಾ ಪಾತ್ರರಾಗಿದ್ದಾರೆ. ನಿರ್ಮಲಾ ಅವರು ತಮ್ಮ ಪ್ರಥಮ ಬಜೆಟನ್ನು 2019ರ ಜು.5ರಂದು ಮಂಡಿಸಿದ್ದರು. ಇದುವರೆಗೆ ನಿರ್ಮಲಾ ಅವರು ಸತತ ಏಳು ಬಜೆಟ್ ಮಂಡಿಸಿದ್ದಾರೆ. ಇದರಲ್ಲಿ 6 ವಾರ್ಷಿಕ ಬಜೆಟ್ ಹಾಗೂ 1 ಮಧ್ಯಂತರ ಬಜೆಟ್ ಸೇರಿದೆ.

ಇದೀಗ ನಿರ್ಮಲಾ ಅವರು ಮೋದಿ 3.0 ಸರಕಾರದ 8ನೇ ಬಜೆಟನ್ನು 2025ರ ಫೆ.01ರಂದು ಮಂಡಿಸಲಿದ್ದಾರೆ.

ಅವಧಿ: 2019 ಮೇ 31 ರಿಂದ ಇಂದಿನವರೆಗೆ