ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Canara Bank: ಗ್ರಾಹಕರಿಗೆ ಕೆನರಾ ಬ್ಯಾಂಕ್‌ನಿಂದ ಗುಡ್‌ನ್ಯೂಸ್‌: ಇನ್ಮುಂದೆ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೂ ದಂಡವಿಲ್ಲ

ಕೆನರಾ ಬ್ಯಾಂಕ್ ತನ್ನ ಎಲ್ಲ ರೀತಿಯ ಉಳಿತಾಯ ಖಾತೆಗಳಾದ ಸಾಮಾನ್ಯ ಉಳಿತಾಯ ಖಾತೆ, ವೇತನ ಖಾತೆ ಮತ್ತು ಎನ್‌ಆರ್‌ಐ ಉಳಿತಾಯ ಖಾತೆಗಳಲ್ಲಿ ಕಡ್ಡಾಯವಾಗಿ ಸರಾಸರಿ ಮಾಸಿಕ ಬ್ಯಾಲನ್ಸ್ ಕಾಯ್ದಿರಿಸಬೇಕು ಎನ್ನುವ ನಿಯಮವನ್ನು ರದ್ದುಗೊಳಿಸಿದೆ. ಆ ಮೂಲಕ ಗ್ರಾಹಕ ಸ್ನೇಹಿ ನಿರ್ಧಾರ ತೆಗೆದುಕೊಂಡಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಕೆನರಾ ಬ್ಯಾಂಕ್ (Canara Bank) ತನ್ನ ಎಲ್ಲ ರೀತಿಯ ಉಳಿತಾಯ ಖಾತೆಗಳಾದ (Savings Accounts) ಸಾಮಾನ್ಯ ಉಳಿತಾಯ ಖಾತೆ, ವೇತನ ಖಾತೆ ಮತ್ತು ಎನ್‌ಆರ್‌ಐ ಉಳಿತಾಯ ಖಾತೆಗಳಲ್ಲಿ ಕಡ್ಡಾಯವಾಗಿ ಸರಾಸರಿ ಮಾಸಿಕ ಬ್ಯಾಲನ್ಸ್ (Average Monthly Balance) ಕಾಯ್ದಿರಿಸಬೇಕು ಎನ್ನುವ ನಿಯಮವನ್ನು ರದ್ದುಗೊಳಿಸಿದೆ. AMB (ಸರಾಸರಿ ಮಾಸಿಕ ಬ್ಯಾಲೆನ್ಸ್) ಕಾಯ್ದಿರಿಸದಿದ್ದರೆ ಯಾವುದೇ ದಂಡ ಶುಲ್ಕವಿಲ್ಲ. 2020ರಿಂದಲೇ SBI ತನ್ನ ಎಲ್ಲ ಉಳಿತಾಯ ಖಾತೆಗಳಿಗೆ ಕನಿಷ್ಠ ಬ್ಯಾಲೆನ್ಸ್ ಕಾಯ್ದಿರಿಸುವ ಅಗತ್ಯವನ್ನು ರದ್ದುಗೊಳಿಸಿದ್ದು, ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ಯಾವುದೇ ದಂಡ ವಿಧಿಸುವುದಿಲ್ಲ ಎಂದು ಹೇಳಿತ್ತು.

ಯಾವಾಗಿನಿಂದ ಪ್ರಯೋಜನ?

ಈ ಹೊಸ ನಿಯಮ ಜೂ. 1ರಂದು ಜಾರಿಗೆ ಬಂದಿದೆ. “2025ರ ಜೂ. 1ರಿಂದ ಕೆನರಾ ಬ್ಯಾಂಕ್‌ನ ಯಾವುದೇ ಉಳಿತಾಯ ಖಾತೆದಾರ ಕನಿಷ್ಠ ಬ್ಯಾಲೆನ್ಸ್ ಕಾಯ್ದಿರಿಸದಿದ್ದರೂ ದಂಡ ವಿಧಿಸುವುದಿಲ್ಲ. ಎಲ್ಲ ಗ್ರಾಹಕರಿಗೆ ನಿಜವಾದ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯನ್ನು ಒದಗಿಸುವ ಕ್ರಮದ ಭಾಗವಾಗಿ ಈ ನಿಯಮ ಜಾರಿಗೆ ಬಂದಿದೆ” ಎಂದು ಬ್ಯಾಂಕ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ.



ಈವರೆಗಿನ ಸರಾಸರಿ ಮಾಸಿಕ ಬ್ಯಾಲೆನ್ಸ್ ಅವಶ್ಯಕತೆ

ಕೆನರಾ ಬ್ಯಾಂಕ್‌ನಲ್ಲಿ ಸರಾಸರಿ ಮಾಸಿಕ ಬ್ಯಾಲೆನ್ಸ್ ಬ್ಯಾಂಕ್ ಶಾಖೆಯ ಸ್ಥಳದ ಆಧಾರದ ಮೇಲೆ ಬದಲಾಗುತ್ತಿತ್ತು. ನಗರ ಮತ್ತು ಮೆಟ್ರೊ ಶಾಖೆಗಳಲ್ಲಿ 2,000 ರೂ., ಅರೆ-ನಗರ ಶಾಖೆಗಳಲ್ಲಿ 1,000 ರೂ. ಮತ್ತು ಗ್ರಾಮೀಣ ಶಾಖೆಗಳಲ್ಲಿ 500 ರೂ. ಸರಾಸರಿ ಮಾಸಿಕ ಬ್ಯಾಲೆನ್ಸ್ ಕಾಯ್ದಿರಿಸಬೇಕಿತ್ತು. ಈ ಹಣ ಕಾಯ್ದಿರಿಸದಿದ್ದರೆ ಖಾತೆಯ ಪ್ರಕಾರ ದಂಡ ವಿಧಿಸಲಾಗುತ್ತಿತ್ತು.

ಸರಾಸರಿ ಮಾಸಿಕ ಬ್ಯಾಲೆನ್ಸ್ ಎಂದರೇನು?

ಸರಾಸರಿ ಮಾಸಿಕ ಬ್ಯಾಲೆನ್ಸ್ (AMB) ಎಂದರೆ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಕಾಯ್ದಿರಿಸಬೇಕಾದ ಕನಿಷ್ಠ ಹಣ. ಈ ಹಣ ಕಡಿಮೆಯಾದರೆ, ಬ್ಯಾಂಕ್‌ಗಳು ದಂಡ ವಿಧಿಸುತ್ತವೆ. ದಂಡದ ಮೊತ್ತ ಉಳಿತಾಯ ಖಾತೆಯ ಪ್ರಕಾರ ಬದಲಾಗುತ್ತದೆ.

ಈವರೆಗಿನ ದಂಡ ಶುಲ್ಕ

2025ರ ಮೇ 31ರವರೆಗೆ ಕೆನರಾ ಬ್ಯಾಂಕ್ ಖಾತೆದಾರರು ಕನಿಷ್ಠ ಬ್ಯಾಲೆನ್ಸ್ ಕಾಯ್ದಿರಿಸದಿದ್ದರೆ ದಂಡ ಶುಲ್ಕವನ್ನು ಭರಿಸಬೇಕಿತ್ತು. ಈ ಶುಲ್ಕವು ಖಾತೆಯ ಪ್ರಕಾರ ಮತ್ತು ಶಾಖೆಯ ಸ್ಥಳದ ಆಧಾರದ ಮೇಲೆ ಬದಲಾಗುತ್ತಿತ್ತು. ಸದ್ಯ ಕೆನರಾ ಬ್ಯಾಂಕ್‌ ಪರಿಚಯಿಸಿರುವ ಈ ಗ್ರಾಹಕ ಸ್ನೇಹಿ ಕ್ರಮವು ಎಲ್ಲ ಉಳಿತಾಯ ಖಾತೆದಾರರಿಗೆ ಆರ್ಥಿಕ ಒತ್ತಡವನ್ನು ಕಡಿಮೆ ಮಾಡಲಿದೆ. ಕನಿಷ್ಠ ಬ್ಯಾಲೆನ್ಸ್‌ನ ಚಿಂತೆಯಿಲ್ಲದೆ ಖಾತೆಯನ್ನು ನಿರ್ವಹಿಸಬಹುದಾಗಿದೆ. ಈ ನಿರ್ಧಾರವು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಗ್ರಾಹಕರಿಗೆ ವಿಶೇಷವಾಗಿ ಉಪಯುಕ್ತವಾಗಲಿದೆ.