Stock Market: ಸೆನ್ಸೆಕ್ಸ್ 294 ಅಂಕ ಜಿಗಿತ, ನಿಫ್ಟಿ 24,461ಕ್ಕೆ ಏರಿಕೆ
Share Market: ಜಾಗತಿಕ ವಾಣಿಜ್ಯ ಸಂಘರ್ಷ ತಿಳಿಯಾಗುತ್ತಿರುವುದು ಮತ್ತು ವಿದೇಶಿ ಹೂಡಿಕೆಯ ಒಳಹರಿವಿನಲ್ಲಿ ಹೆಚ್ಚಳವಾಗಿರುವುದರಿಂದ ಮುಂಬೈ ಷೇರು ಮಾರುಕಟ್ಟೆ ಚೇತರಿಸಿಕೊಳ್ಳುತ್ತಿದೆ. ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 294 ಅಂಕ ಏರಿಕೆಯಾಗಿ 80,796ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 114 ಅಂಕ ಚೇತರಿಸಿಕೊಂಡು 24,461ಕ್ಕೆ ಸ್ಥಿರವಾಯಿತು.

ಸಾಂದರ್ಭಿಕ ಚಿತ್ರ.

ಮುಂಬೈ: ಮುಂಬೈ ಷೇರು ಮಾರುಕಟ್ಟೆ (Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ (Sensex) ಸೋಮವಾರ 294 ಅಂಕ ಏರಿಕೆಯಾಗಿ 80,796ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ (Nifty) 114 ಅಂಕ ಚೇತರಿಸಿಕೊಂಡು 24,461ಕ್ಕೆ ಸ್ಥಿರವಾಯಿತು. ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಗಣನೀಯ ಲಾಭ ಗಳಿಸಿತು. ಜಾಗತಿಕ ವಾಣಿಜ್ಯ ಸಂಘರ್ಷ ತಿಳಿಯಾಗುತ್ತಿರುವುದು ಮತ್ತು ವಿದೇಶಿ ಹೂಡಿಕೆಯ ಒಳಹರಿವಿನಲ್ಲಿ ಹೆಚ್ಚಳವಾಗಿರುವುದು ಸಕಾರಾತ್ಮಕ ಪ್ರಭಾವ ಬೀರಿದೆ.
13 ಸೆಕ್ಟರ್‌ಗಳ ಪೈಕಿ 10 ಸೆಕ್ಟರ್‌ಗಳು ಲಾಭ ಗಳಿಸಿದವು. ಸ್ಮಾಲ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಏರಿಕೆ ದಾಖಲಿಸಿದವು. ಸತತ 12 ದಿನಗಳಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರುಗಳನ್ನು ಖರೀದಿಸುತ್ತಿದ್ದು, ಇದು ಕಳೆದ ಎರಡು ವರ್ಷಗಳಲ್ಲಿಯೇ ದೀರ್ಘ ಖರೀದಿ ಪ್ರಕ್ರಿಯೆಯಾಗಿದೆ.
ಈ ಸುದ್ದಿಯನ್ನೂ ಓದಿ: Stock Market: ಭಾರತ-ಪಾಕಿಸ್ತಾನ ಟೆನ್ಷನ್ಸ್; ಡಿಫೆನ್ಸ್ ಸ್ಟಾಕ್ಸ್ ಅಬ್ಬರ, ಈ 4 ಕಂಪನಿಗಳಲ್ಲಿ ಹೂಡಿದ್ರೆ ಲಾಭ ಆಗುತ್ತಾ?
ಈ ನಡುವೆ ಬಂಗಾರದ ದರದಲ್ಲಿ 550 ರೂ. ಏರಿಕೆಯಾಗಿದ್ದು, 24 ಕ್ಯಾರಟ್‌ನ ಪ್ರತಿ 10 ಗ್ರಾಂ ಬಂಗಾರದ ದರ 97,350 ರೂ.ಗೆ ತಲುಪಿದೆ. ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹ ಸುಧಾರಿಸಿತ್ತು. ಇದು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಿದೆ. ಸೆನ್ಸೆಕ್ಸ್ 30 ಪ್ಯಾಕ್‌ನಲ್ಲಿ ಬಜಾಜ್ ಫಿನ್ ಸರ್ವ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಪವರ್ ಗ್ರಿಡ್, ಐಟಿಸಿ, ಟಾಟಾ ಮೋಟಾರ್ಸ್, ಏಷ್ಯನ್ ಪೇಂಸ್ಟ್, ಹಿಂದೂಸ್ತಾನ್ ಯುನಿಲಿವರ್ ಷೇರುಗಳು ಲಾಭ ಗಳಿಸಿತು.
ಕೋಟಕ್ ಮಹೀಂದ್ರಾ ಬ್ಯಾಂಕ್, ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಟೈಟನ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ನಷ್ಟಕ್ಕೀಡಾಯಿತು. ಈ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶುಕ್ರವಾರ 2,769 ಕೋಟಿ ರೂ.ಗಳ ಷೇರುಗಳನ್ನು ಖರೀದಿಸಿದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು 3,290 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದರು.
ಕಳೆದ ಮೂರು ವರ್ಷಗಳಲ್ಲಿ 52%ರಷ್ಟು ಮ್ಯೂಚುವಲ್ ಫಂಡ್‌ಗಳು ತಮ್ಮ ಬೆಂಚ್ ಮಾರ್ಕ್‌ಗಳನ್ನು ಮೀರಿ ಹೂಡಿಕೆದಾರರಿಗೆ ಆದಾಯ ನೀಡಿವೆ. 228 ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಪೈಕಿ 119 ಫಂಡ್‌ಗಳು ಉತ್ತಮ ಬೆಳವಣಿಗೆ ದಾಖಲಿಸಿವೆ. ಕಾಂಟ್ರಾ ಫಂಡ್, ವಾಲ್ಯೂ ಫಂಡ್, ಮಲ್ಟಿ ಕ್ಯಾಪ್ ಫಂಡ್, ಫ್ಲೆಕ್ಸಿ ಕ್ಯಾಪ್ ಫಂಡ್, ಇಎಲ್‌ಎಸ್‌ಎಸ್ ಫಂಡ್, ಸ್ಮಾಲ್ ಕ್ಯಾಪ್ ಫಂಡ್ ಉತ್ತಮ ಬೆಳವಣಿಗೆ ಕಂಡಿವೆ.