A Khata: ಲಂಚ ಕೊಡಬೇಡಿ, ಸದ್ಯದಲ್ಲೇ ಎ- ಖಾತಾ ವ್ಯವಸ್ಥೆ ಆನ್‌ಲೈನ್
A Khata: ಎ ಖಾತಾ ಮಾಡಿಸಿಕೊಳ್ಳಲು ಯಾವುದೇ ಬಿಬಿಎಂಪಿ ಕಚೇರಿಗೆ ಹೋಗಬೇಡಿ ಮತ್ತು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ. ಯಾರಿಗೂ ಲಂಚ ನೀಡಬೇಡಿ. ಆನ್‌ಲೈನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎಂ ಮಹೇಶ್ವರ ರಾವ್ ತಿಳಿಸಿದ್ದಾರೆ.


ಬೆಂಗಳೂರು: ನಗರದಲ್ಲಿ (Bengaluru) ಆಸ್ತಿ ಮಾಲೀಕರಿಗೆ ಆನ್‌ಲೈನ್ ಮೂಲಕ ಬಿ ಖಾತಾದಿಂದ (B Khata) ಎ ಖಾತಾ (A Khata) ಪರಿವರ್ತಿಸಿ ನೀಡುವ ವಿಚಾರವಾಗಿ ಬಿಬಿಎಂಪಿ (BBMP) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಮಹತ್ವದ ಹೇಳಿಕೆ ನೀಡಿದ್ದು, ಬಿ ಖಾತಾದಿಂದ ಎ ಖಾತಾ ಕೊಡಲು ಸರಕಾರದಿಂದ ಆದೇಶ ಆಗಿದೆ ಎಂದು ತಿಳಿಸಿದರು. ಎರಡು ವಾರದಲ್ಲಿ ಈ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ. ಆನ್ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಎರಡು ವಾರದಲ್ಲಿ ಅವಕಾಶ ನೀಡುತ್ತೇವೆ ಎಂದರು.
ಏನು ನಿಯಮಗಳು ಇರುತ್ತವೋ ಅದನ್ನು ಫಾಲೋ ಮಾಡಬೇಕಾಗುತ್ತದೆ. ಎ ಖಾತೆ ಮಾಡಿಸಿಕೊಳ್ಳುವುದಕ್ಕೆ ಎಷ್ಟು ಹಣ ಭರಿಸಬೇಕೆಂಬುದರ ಕುರಿತು ಚರ್ಚಿಸಲಾಗಿದ್ದು, ಅದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಹೊಸ ಮಾರ್ಗಸೂಚಿಯಲ್ಲಿಯೇ ಎಲ್ಲ ಮಾಹಿತಿ ನೀಡಲಾಗುತ್ತದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ಹೇಳಿಕೆ ನೀಡಿದರು.
ಆನ್ಲೈನ್ ವ್ಯವಸ್ಥೆಯನ್ನು ಸುಮಾರು 15 ದಿನಗಳಲ್ಲಿ ಆರಂಭಿಸಲಾಗುತ್ತದೆ. ಆದ್ದರಿಂದ ದಯವಿಟ್ಟು ಕಾಯಿರಿ. ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಿದ ನಂತರ ನಾಗರಿಕರು ಕೆಳಗಿನಂತೆ ಅರ್ಜಿ ಸಲ್ಲಿಸಬಹುದು.
(i) ಬಿ-ಖಾತಾವನ್ನು ಎ-ಖಾತಾಕ್ಕೆ ಪರಿವರ್ತನೆ ಮಾಡುವುದು. ಅಥವಾ
(ii) ಈಗ ಯಾವುದೇ ಖಾತಾ ಇಲ್ಲದಿದ್ದರೆ ಹೊಸ ಎ-ಖಾತಾಗೆ ಅರ್ಜಿ ಸಲ್ಲಿಸಬಹುದು.
ಯಾವುದೇ ಬಿಬಿಎಂಪಿ ಕಚೇರಿಗೆ ಹೋಗಬೇಡಿ ಮತ್ತು ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ. ಯಾರಿಗೂ ಲಂಚ ನೀಡಬೇಡಿ. ಆನ್‌ಲೈನ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎಂ ಮಹೇಶ್ವರ ರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: A Khata: ಬೆಂಗಳೂರಿಗರಿಗೆ ಸಿಹಿ ಸುದ್ದಿ: ಬಿ-ಖಾತಾಗಳಿಗೆ ಎ-ಖಾತಾ ಕಾನೂನು ಮಾನ್ಯತೆ ಭಾಗ್ಯ