ಮುಂಬೈ: ಸ್ಟಾಕ್ ಮಾರ್ಕೆಟ್‌ನಲ್ಲಿ (Stock Market) ಇವತ್ತು ಸೆನ್ಸೆಕ್ಸ್ ಮತ್ತು ನಿಫ್ಟಿ ಲಾಭ-ನಷ್ಟದ ನಡುವೆ ಏರಿಳಿತದದಲ್ಲೇ ವಹಿವಾಟು ನಡೆಸಿತು. ದಿನದ ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 58 ಅಂಕ ಇಳಿಕೆಯಾಗಿ 82,102ಕ್ಕೆ ಸ್ಥಿರವಾಯಿತು. ನಿಫ್ಟಿ 33 ಅಂಕ ಇಳಿಕೆಯಾಗಿ 25,169 ಅಂಕಗಳಿಗೆ ವಹಿವಾಟು ಮುಕ್ತಾಯಗೊಳಿಸಿತು. ಒಟ್ಟಾರೆಯಾಗಿ ನೋಡೋದಿದ್ರೆ ಹೂಡಿಕೆದಾರರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಸರಕುಗಳ ಆಮದಿನ ವಿರುದ್ಧ ವಿಧಿಸಿರುವ ಟಾರಿಫ್‌ಗಳು ಮತ್ತು ಎಚ್1 ಬಿ ವೀಸಾ ಶುಲ್ಕ ಹೆಚ್ಚಳದ ಪರಿಣಾಮ ಏನಾಗಬಹುದು ಎಂಬುದನ್ನು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ. ಕೆಲವು ತಜ್ಞರು ಹೇಳೋ ಪ್ರಕಾರ ಟ್ರಂಪ್ ಅವರು 50% ಟಾರಿಫ್ ಅನ್ನು 25% ಕ್ಕೆ ಇಳಿಸುವ ನಿರೀಕ್ಷೆ ಇದೆ. ಆದರೆ ಈ ಕುರಿತ ಸ್ಪಷ್ಟತೆ ಇನ್ನೂ ಮೂಡಿಲ್ಲ.
ಪಿಎಸ್‌ಯು ಬ್ಯಾಂಕ್‌ಗಳು ಮತ್ತು ಲೋಹಗಳ ಷೇರು ದರಗಳು ಏರಿತು. ಬಂಗಾರದ ದರ ದಾಖಲೆಯ ಎತ್ತರಕ್ಕೇರಿತು. ಡಾಲರ್ ಎದುರು ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತಕ್ಕೀಡಾಯಿತು. ಇಂದು ಮಾರುತಿ ಸುಜುಕಿಯ ಷೇರುಗಳ ದರದಲ್ಲಿ 3.2% ಏರಿಕೆಯಾಗಿದ್ದು, ಎನ್‌ಎಸ್‌ಇನಲ್ಲಿ 16,325/-ಕ್ಕೆ ಏರಿಕೆಯಾಯಿತು. ಇದು 52 week high ಆಗಿದೆ. ಜಿಎಸ್‌ಟಿ ದರ ಇಳಿಕೆಯ ಬಳಿಕ ಕಂಪನಿಯ ಕಾರುಗಳ ಮಾರಾಟದ ಭರಾಟೆ ಸೆಪ್ಟೆಂಬರ್ 22ರಿಂದ ಆರಂಭವಾಗಿದೆ. ಮಾರುತಿ ಸುಜುಕಿಗೆ ಕಳೆದ 35 ವರ್ಷಗಳಲ್ಲಿಯೇ ಬೆಸ್ಟ್ ನವರಾತ್ರಿಯಾಗಿ ಪರಿಣಮಿಸಿದೆ. ಸಣ್ಣ ಕಾರುಗಳಿಗೆ ಭರ್ಜರಿ ಡಿಮ್ಯಾಂಡ್ ಉಂಟಾಗಿದೆ. ಭಾನುವಾರ 30,000ಕ್ಕೂ ಹೆಚ್ಚು ಕಾರುಗಳು ಡೆಲಿವರಿ ಆಗುತ್ತಿದೆ. 80,000ಕ್ಕೂ ಹೆಚ್ಚು ಎನ್‌ಕ್ವೈರಿಗಳು ಬಂದಿವೆ. ಸೆಪ್ಟೆಂಬರ್ 18ರ ಬಳಿಕ ಮಾರುತಿ ಸುಜುಕಿಯು 75,000 ಬುಕಿಂಗ್ಸ್‌ಗಳನ್ನು ಸ್ವೀಕರಿಸಿದೆ. ಮುಖ್ಯವಾಗಿ ಸಣ್ಣ ಕಾರುಗಳಿಗೆ ಬೇಡಿಕೆ ಹೆಚ್ಚಿರುವುದನ್ನು ಗಮನಿಸಬಹುದು.
ಎಚ್- 1 ಬಿ ವೀಸಾ ವೆಚ್ಚವನ್ನು ತೀವ್ರವಾಗಿ ಏರಿಸಿದ ಹಿನ್ನೆಲೆಯಲ್ಲಿ ಸೋಮವಾರ ಕುಸಿತಕ್ಕೀಡಾಗಿದ್ದ ಸ್ಟಾಕ್ ಇಂಡೆಕ್ಸ್‌ಗಳು ಮಂಗಳವಾರ ಚೇತರಿಸಿತು. ಇವತ್ತು ಬಹುತೇಕ ಸೆಕ್ಟರ್‌ಗಳು ರೆಡ್‌ನಲ್ಲಿ ಇತ್ತು. ಎಫ್‌ಎಂಸಿಜಿ, ಐಟಿ, ಮಾಧ್ಯಮ, ರಿಯಾಲ್ಟಿ ವಲಯದ ಷೇರುಗಳ ದರ ಇಳಿಯಿತು. ಪಿಎಸ್‌ಯು ಬ್ಯಾಂಕ್, ಲೋಹದ ಷೇರು ದರಗಳು ಏರಿತು.
ಸಾತ್ವಿಕ್ ಗ್ರೀನ್ ಎನರ್ಜಿಯ ಐಪಿಒ ಮೂರನೇ ದಿನ ಸಂಪೂರ್ಣ ಸಬ್ ಸ್ಕ್ರೈಬ್ ಆಗಿದೆ. ಗ್ರೇ ಮಾರ್ಕೆಟ್ ಪ್ರೀಮಿಯಂ 2% ಕ್ಕೆ ಇಳಿದಿದ್ದರೂ, ಐಪಿಒ ಸಂಪೂರ್ಣ ಸಬ್ ಸ್ಕ್ರೈಬ್ ಆಗಿದೆ. ಸೌರಫಲಕಗಳ ಉತ್ಪಾದನೆ ಮತ್ತು ಇಪಿಸಿ ಸಲ್ಯೂಷನ್ಸ್ ಅನ್ನು ಕಂಪನಿಯು ಗ್ರಾಹಕರಿಗೆ ನೀಡುತ್ತದೆ. ಭಾರತ ಮತ್ತು ವಿದೇಶದಲ್ಲಿ ತನ್ನ ವಿಸ್ತರಣೆಯನ್ನು ಮಾಡುತ್ತದೆ.
ಜಿಕೆ ಎನರ್ಜಿ ಐಪಿಒದಲ್ಲಿ ಮೂರನೇ ದಿನವಾದ ಇವತ್ತು 8 ಪಟ್ಟು ಸಬ್ ಸ್ಕ್ರೈಬ್ ಆಗಿದೆ. ಹೀಗಿದ್ದರೂ ಗ್ರೇ ಮಾರ್ಕೆಟ್ ಪ್ರೀಮಿಯಂ 12% ಇಳಿಕೆಯಾಗಿದೆ. ಮುಂಬಯಿ ಮೂಲದ ಪಿಡಿಲೈಟ್ ಇಂಡಸ್ಟ್ರೀಸ್ ಕಂಪನಿಯ ಷೇರು ದರದಲ್ಲಿ ಮಂಗಳವಾರ 51% ಕುಸಿತ ದಾಖಲಾಯಿತು. ಏಕೆಂದರೆ ಷೇರಿನ 1:1 ಬೋನಸ್ ಷೇರು ವಿತರಣೆಯ 1:1 ರೆಕಾರ್ಡ್ ಡೇಟ್ ಇವತ್ತು ಆಗಿರುವುದು. ಕಳೆದ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಪಿಡಿಲೈಟ್ ಇಂಡಸ್ಟ್ರೀಸ್ ಪ್ರಬಲ ಬೆಳವಣಿಗೆ ದಾಖಲಿಸಿತ್ತು. ಪಿಡಿಲೈಟ್ ಇಂಡಸ್ಟ್ರಿಯು ಅಡ್‌ಹೇಸಿವ್ ಪ್ರಾಡಕ್ಟ್‌ಗಳನ್ನು ಉತ್ಪಾದಿಸಿ ಮಾರುತ್ತದೆ. ಇನ್ನೂ ಸರಳವಾಗಿ ಹೇಳಬೇಕಿದ್ದರೆ, ನಿಮಗೆ ಫೆವಿಕಾಲ್, ಫೆವಿಕ್ವಿಕ್ ಗಮ್ ಗಳು ಗೊತ್ತಿರಬಹುದು. ಇವುಗಳು ಇಲ್ಲದ ಮನೆಯೇ ಇಲ್ಲ ಎನ್ನಬಹುದು. ಇವುಗಳನ್ನು ಪಿಡಿಲೈಟ್ ಕಂಪನಿ ತಯಾರಿಸುತ್ತಿದೆ. ಪಿಡಿಲೈಟ್ ಇಂಡಸ್ಟ್ರಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 1 ಲಕ್ಷದ 52 ಸಾವಿರ ಕೋಟಿ ರುಪಾಯಿಗಳಾಗಿದೆ.
ಈ ಸುದ್ದಿಯನ್ನೂ ಓದಿ: Larry Ellison: ಒರಾಕಲ್ ಷೇರು ಬೆಲೆ ಹೆಚ್ಚಳ; ಕೋಟ್ಯಧಿಪತಿಗಳಾದ ಭಾರತೀಯ ಉದ್ಯೋಗಿಗಳು
ಚಿನ್ನದ ದರ ಏರಿಕೆ:
ಬಂಗಾರದ ದರದಲ್ಲಿ ಮಂಗಳವಾರ ಭಾರಿ ಏರಿಕೆ ಆಗಿದೆ. 24 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರವು 1 ಲಕ್ಷದ 12 ಸಾವಿರದ 419 ರುಪಾಯಿಗೆ ಏರಿಕೆಯಾಗಿದೆ. ದರ ಎಷ್ಟೇ ಆದರೂ ಬೇಡಿಕೆ ಕಡಿಮೆಯಾಗಿಲ್ಲ. ಜಾಗತಿಕ ಅನಿಶ್ಚಿತತೆಗಳ ಪರಿಣಾಮ ಆಪದ್ಧನವಾಗಿರುವ ಬಂಗಾರದಲ್ಲಿ ಹೂಡಿಕೆ ಹೆಚ್ಚುತ್ತಿದೆ. ಮತ್ತೊಂದು ಕಡೆ ಬೆಳ್ಳಿಯ ದರದಲ್ಲೂ ಏರಿಕೆ ಆಗಿದೆ. ಪ್ರತಿ ಕೆಜಿ ಬೆಳ್ಳಿಯ ದರವು 1 ಲಕ್ಷದ 33 ಸಾವಿರದ 531ಕ್ಕೆ ವೃದ್ಧಿಸಿದೆ.