Tata Avinya: ಅಮೆರಿಕದ ಟೆಸ್ಲಾ ಕಾರಿಗೆ ಟಾಟಾದ ಅವಿನ್ಯಾ ಸವಾಲ್!
ಟಾಟಾ ಮೋಟಾರ್ಸ್‌ನಿಂದ ಹೊಸ ಎಲೆಕ್ಟ್ರಿಕ್ ಕಾರು ಅವಿನ್ಯಾ ಬರಲಿದ್ದು, ಅಮೆರಿಕದ ಟೆಸ್ಲಾ ಕಾರಿಗೆ ಭಾರತದಲ್ಲಿ ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. 2026-27ರಲ್ಲಿ ಅವಿನ್ಯಾ ಎಸ್‌ಯುವಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮಾರುಕಟ್ಟೆ ತಜ್ಞರ ಪ್ರಕಾರ ಟಾಟಾ ಮೋಟಾರ್ಸ್‌ನ ಅವಿನ್ಯಾ ಎಸ್ ಯುವಿಯು ಟೆಸ್ಲಾದ ಮಾಡೆಲ್ 3 ಕಾರಿಗೆ ಪೈಪೋಟಿ ನೀಡಲಿದೆ.


ಮುಂಬೈ: ಟಾಟಾ ಮೋಟಾರ್ಸ್‌ನಿಂದ ಹೊಸ ಎಲೆಕ್ಟ್ರಿಕ್ ಕಾರು ಅವಿನ್ಯಾ(Tata Avinya) ಬರಲಿದ್ದು, ಅಮೆರಿಕದ ಟೆಸ್ಲಾ ಕಾರಿಗೆ ಭಾರತದಲ್ಲಿ ತೀವ್ರ ಪೈಪೋಟಿ ನೀಡುವ ನಿರೀಕ್ಷೆ ಇದೆ ಎಂದು ವರದಿಯಾಗಿದೆ. 2024ರ ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ ಟಾಟಾ ಕ್ಯಾಪಿಟಲ್(Tata Capital) ಸಂಸ್ಥೆಯು 932 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿತ್ತು. 5,943 ಕೋಟಿ ರುಪಾಯಿ ಆದಾಯ ಗಳಿಸಿತ್ತು. ಈಗ ಟಾಟಾ ಮೋಟಾರ್ಸ್‌ನ ಹೊಸ ಅವಿನ್ಯಾ ಎಲೆಕ್ಟ್ರಿಕ್ ಕಾರಿನ ಕುರಿತ ಸುದ್ದಿ ನೋಡೋಣ. ಮನಿ ಕಂಟ್ರೋಲ್ ವರದಿಯ ಪ್ರಕಾರ ಟಾಟಾ ಮೋಟಾರ್ಸ್ 25 ಲಕ್ಷ ರುಪಾಯಿಗೆ ಅತ್ಯಾಧುನಿಕವಾದ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಿದ್ದು, ಇದು ಅಮರಿಕದ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ.
ಮನಿ ಕಂಟ್ರೋಲ್ ವರದಿಯ ಪ್ರಕಾರ ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಲಿರುವ ಆಲ್ -ಎಲೆಕ್ಟ್ರಿಕ್ ಕಾರು, 5 ಸೀಟುಗಳನ್ನು ಒಳಗೊಂಡಿರುವ ಎಸ್‌ಯುವಿ ಆಗಿದ್ದು, ಇದರ ವಿನ್ಯಾಸವನ್ನು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ ಮೊದಲ ಬಾರಿಗೆ 2022ರಲ್ಲಿ ಅನಾವರಣಗೊಳಿಸಿತ್ತು. 2026-27ರಲ್ಲಿ ಅವಿನ್ಯಾ ಎಸ್‌ಯುವಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಮಾರುಕಟ್ಟೆ ತಜ್ಞರ ಪ್ರಕಾರ ಟಾಟಾ ಮೋಟಾರ್ಸ್‌ನ ಅವಿನ್ಯಾ ಎಸ್ ಯುವಿಯು ಟೆಸ್ಲಾದ ಮಾಡೆಲ್ 3 ಕಾರಿಗೆ ಪೈಪೋಟಿ ನೀಡಲಿದೆ. ಮತ್ತೊಂದು ಕಡೆ ಈ ವರ್ಷ ಏಪ್ರಿಲ್‌ನಿಂದ ಭಾರತದ ಮಾರುಕಟ್ಟೆಗೆ ಟೆಸ್ಲಾ ಕಾರುಗಳು ಎಂಟ್ರಿಯಾಗುವ ನಿರೀಕ್ಷೆ ಇದೆ. ಟೆಸ್ಲಾದ ಎಲೆಕ್ಟ್ರಿಕ್ ಕಾರುಗಳಿಗೆ ನಮ್ಮದೇ ದೇಶದ ಹೆಮ್ಮೆಯ ಟಾಟಾ ಬ್ರ್ಯಾಂಡ್‌ನ ಎಸ್‌ಯುವಿ ಅವಿನ್ಯಾ ಪೈಪೋಟಿ ನೀಡಲಿರುವುದು ತೀವ್ರ ಕುತೂಹಲ ಮೂಡಿಸಿದೆ.
ಟಾಟಾ ಕಂಪನಿಯ ಮತ್ತೊಂದು IPOಗೆ ಸಿದ್ಧತೆ
ಕಳೆದ 2023ರಲ್ಲಿ ಟಾಟಾ ಸಮೂಹದ ಪ್ರತಿಷ್ಠಿತ ಟಾಟಾ ಟೆಕ್ನಾಲಜೀಸ್(Tata Technologies) ಯಶಸ್ವಿ IPO ನಡೆಸಿದ ಬಳಿಕ, ಇದೀಗ ಮತ್ತೊಂದು ಟಾಟಾ ಕಂಪನಿಯ ಐಪಿಒ(Tata Capital IPO)ಗೆ ಸಿದ್ಧತೆ ನಡೆಯುತ್ತಿದೆ. ಕಳೆದ ಇಪ್ಪತ್ತು ವರ್ಷಗಳಲ್ಲಿಯೇ ಐಪಿಒಗೆ ಹೋಗುತ್ತಿರುವ ಎರಡನೇ ಟಾಟಾ ಕಂಪನಿ ಇದಾಗಿರುವುದರಿಂದ ಕುತೂಹಲ ಮೂಡಿಸಿದೆ. ಟಾಟಾ ಸಮೂಹದ ಕಂಪನಿಗಳೆಂದರೆ ಷೇರು ಹೂಡಿಕೆದಾರರಿಗೆ ವಿಶ್ವಾಸಾರ್ಹ ಕಂಪನಿಗಳಾಗಿವೆ. ಹೀಗಾಗಿ ಟಾಟಾ ಗ್ರೂಪಿನ ಯಾವುದಾದರೂ ಕಂಪನಿ ಷೇರು ಮಾರುಕಟ್ಟೆಗೆ ಐಪಿಒ ಮೂಲಕ ಪ್ರವೇಶಿಸುತ್ತಿದ್ದರೆ ದೊಡ್ಡ ಸಂಚಲನವೇ ಸೃಷ್ಟಿಯಾಗುತ್ತಿದೆ.
ಟಾಟಾ ಸಮೂಹದ ಭಾಗವಾಗಿರುವ ಟಾಟಾ ಕ್ಯಾಪಿಟಲ್ ಸಂಸ್ಥೆಯ ಬಹು ನಿರೀಕ್ಷಿತ ಐಪಿಒಗೆ ಸಂಸ್ಥೆಯ ಆಡಳಿತ ಮಂಡಳಿಯು ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್‌ನ ಷೇರುಗಳ ದರದಲ್ಲಿ 8 % ಏರಿಕೆಯಾಗಿದೆ. ಪ್ರತಿ ಷೇರಿನ ದರ 6,225 ರುಪಾಯಿಗೆ ಏರಿಕೆಯಾಗಿದೆ. ಟಾಟಾ ಇನ್ವೆಸ್ಟ್‌ಮೆಂಟ್ ಎನ್ನುವುದು ಹಲವಾರು ಟಾಟಾ ಕಂಪನಿಗಳ ಹೋಲ್ಡಿಂಗ್ ಕಂಪನಿಯಾಗಿದ್ದು, ಅವುಗಳಲ್ಲಿ ಷೇರುಗಳ ಪಾಲನ್ನು ಹೊಂದಿದೆ. ಆದ್ದರಿಂದ ಟಾಟಾ ಕ್ಯಾಪಿಟಲ್ ಐಪಿಒದಿಂದ ಟಾಟಾ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್‌ಗೆ ಹೆಚ್ಚಿನ ಲಾಭವಾಗುವ ನಿರೀಕ್ಷೆ ಇದೆ. ಆದ್ದರಿಂದ ಅದರ ಷೇರಿನ ದರದಲ್ಲಿ ಇದೀಗ ಹೆಚ್ಚಳವಾಗಿದೆ.
ಹಾಗಾದ್ರೆ ಟಾಟಾ ಕ್ಯಾಪಿಟಲ್ ಕಂಪನಿಯ ಮಹತ್ವದ ಐಪಿಒ ಬಗ್ಗೆ ಈ ಎಪಿಸೋಡ್‌ನಲ್ಲಿ ತಿಳಿದುಕೊಳ್ಳೋಣ. ಟಾಟಾ ಸಮೂಹದ ಪ್ರಮುಖ ಫೈನಾನ್ಷಿಯಲ್ ಸರ್ವೀಸ್ ಕಂಪನಿ ಟಾಟಾ ಕ್ಯಾಪಿಟಲ್ ಆಗಿದೆ. ಇಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಟಾಟಾ ಕ್ಯಾಪಿಟಲ್ 23 ಕೋಟಿ ಹೊಸ ಷೇರುಗಳನ್ನು ಬಿಡುಗಡೆಗೊಳಿಸಲಿದೆ. ಹಾಲಿ ಷೇರುದಾರರಿಗೆ ಆಫರ್ ಫಾರ್ ಸೇಲ್ ಮೆಕಾನಿಸಂ ಅಡಿಯಲ್ಲಿ ಅವರ ಪಾಲು ಸಿಗಲಿದೆ. ಇದು ಬ್ಯಾಂಕೇತರ ಹಣಕಾಸು ಸಂಸ್ಥೆ ಅಥವಾ ನಾನ್ ಬ್ಯಾಂಕಿಂಗ್ ಫೈನಾನ್ಷಿಯಲ್ ಸರ್ವೀಸ್ ಸಂಸ್ಥೆಯ ಕೆಟಗರಿಗೆ ಬರುತ್ತದೆ. ವರದಿಗಳ ಪ್ರಕಾರ ಟಾಟಾ ಕ್ಯಾಪಿಟಲ್ ಐಪಿಒದ ಗಾತ್ರ 15,000 ಕೋಟಿ ರುಪಾಯಿಗಳಷ್ಟಿರಬಹುದು.
ಈ ಸುದ್ದಿಯನ್ನೂ ಓದಿ: ಡಿಜಿಟ್ ಆರೋಗ್ಯ ವಿಮೆ ಅತಿ ಕಡಿಮೆ ಕಾಯುವ ಅವಧಿಯ ವಿಮೆಗಳಲ್ಲಿ ಒಂದಾಗಿದೆ
ಈಗ ಟಾಟಾ ಕ್ಯಾಪಿಟಲ್‌ನಲ್ಲಿ ಟಾಟಾ ಸಮೂಹದ ಪ್ರವರ್ತಕ ಕಂಪನಿಯಾಗಿರುವ ಅಥವಾ ಹೋಲ್ಡಿಂಗ್ ಕಂಪನಿಯಾಗಿರುವ ಟಾಟಾ ಸನ್ಸ್, 93% ಷೇರುಗಳನ್ನು ಹೊಂದಿದೆ. ಟಾಟಾ ಕ್ಯಾಪಿಟಲ್, ಟಾಟಾ ಸಮೂಹದ ಬೇರೆ ಬೇರೆ ಕಂಪನಿಗಳಿಗೆ ಬೇಕಾಗುವ ಬಂಡವಾಳದ ಅಗತ್ಯವನ್ನು ಪೂರೈಸುತ್ತದೆ. 2007ರಲ್ಲಿ ಸ್ಥಾಪನೆಯಾಗಿರುವ ಟಾಟಾ ಕ್ಯಾಪಿಟಲ್, ತನ್ನ ಗ್ರಾಹಕರಿಗೆ ಹೋಮ್ ಲೋನ್, ಪರ್ಸನಲ್ ಲೋನ್, ಟೂ ವ್ಹೀಲರ್ ಲೋನ್, ಬಿಸಿನೆಸ್ ಲೋನ್ ಕೊಡುತ್ತದೆ. ಲೋನ್ ಅಗೈನ್ಸ್ಟ್ ಪ್ರಾಪರ್ಟಿ, ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್, ಅಡ್ವೈಸರಿ ಸರ್ವೀಸ್‌ಗಳನ್ನು ಕೊಡುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಟಾಟಾ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸ್ ಅನ್ನು ಅಪ್ಪರ್ -ಲೇಯರ್ ಸಿಸ್ಟಮ್ಯಾಟಿಕಲಿ ಇಂಪಾರ್ಟೆಂಟ್ ನಾನ್-ಬ್ಯಾಂಕಿಂಗ್ ಫೈನಾನ್ಷಿಯಲ್ ಕಂಪನಿ ಎಂದು ಮಾನ್ಯತೆ ನೀಡಿದೆ. 2022ರಲ್ಲಿ ಆರ್‌ಬಿಐ ಈ ಮಾನ್ಯತೆ ನೀಡಿತ್ತು. ಇದಾದ ಮೂರು ವರ್ಷಗಳೊಳಗೆ ಸಂಸ್ಥೆಯು ಐಪಿಒ ನಡೆಸಿ ಸಾರ್ವಜನಿಕರಿಗೆ ಅದರ ಷೇರುಗಳು ದೊರೆಯುವುದು ಕಡ್ಡಾಯವಾಗಿದೆ.
ಮಾರುಕಟ್ಟೆ ನಿಯಂತ್ರಕ ಸೆಬಿಗೆ ಟಾಟಾ ಕ್ಯಾಪಿಟಲ್ ಸಲ್ಲಿಸಿರುವ ಪ್ರಸ್ತಾಪದ ಪ್ರಕಾರ, ಐಪಿಒ ಮೂಲಕ ಸಂಗ್ರಹವಾಗುವ ಹಣವನ್ನು ಸಂಸ್ಥೆಯು ಸಾಲದ ವಹಿವಾಟನ್ನು ಹೆಚ್ಚಿಸಲು ಬಳಸಲಿದೆ. ಒಂದಷ್ಟು ಹಣವನ್ನು ಸಾಲದ ಮರು ಪಾವತಿಗೆ ಕೂಡ ಬಳಸಲಿದೆ. ಟಾಟಾ ಕ್ಯಾಪಿಟಲ್ ಐಪಿಒ ಸುದ್ದಿ ಹೊರ ಬಿದ್ದ ಬಳಿಕ ಕಂಪನಿಯ ಅನ್‌ಲಿಸ್ಟೆಡ್ ಷೇರುಗಳಿಗೆ ಭಾರಿ ಬೇಡಿಕೆ ಬಂದಿದೆ. ಅನ್‌ಲಿಸ್ಟೆಡ್ ಮಾರುಕಟ್ಟೆಯ ಡೀಲರ್‌ಗಳ ಪ್ರಕಾರ, ಟಾಟಾ ಕ್ಯಾಪಿಟಲ್‌ನ ಅನ್ ಲಿಸ್ಟೆಡ್ ಷೇರುಗಳ ದರ 1000-1050 ರುಪಾಯಿಗೆ ಏರಿದೆ. ವಾರದ ಹಿಂದೆ ದರ 800-825 ರುಪಾಯಿಯಷ್ಟಿತ್ತು. ತಜ್ಞರ ನಿರೀಕ್ಷೆಯ ಪ್ರಕಾರ ಟಾಟಾ ಕ್ಯಾಪಿಟಲ್‌ನ ಐಪಿಒದಲ್ಲಿ ಷೇರಿನ ದರ 400 ರುಪಾಯಿ ಇರಬಹುದು.