ನವದೆಹಲಿ: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI)ವು ಯುಪಿಐ (UPI) ಬಳಕೆದಾರರಿಗಾಗಿ ಮಹತ್ವದ ಅಪ್‌ಡೇಟ್‌ವೊಂದನ್ನು ಮಾಡಿದ್ದು, ಡಿಸೆಂಬರ್ 31ರಿಂದ ಹೊಸ ನಿಮಯ ಜಾರಿಗೆ ಬರಲಿದೆ. ಈ ಹೊಸ ವೈಶಿಷ್ಟ್ಯದಿಂದ ಬಳಕೆದಾರರು ಯಾವುದೇ ಯುಪಿಐ ಆ್ಯಪ್ (PhonePe, Google Pay or Paytm)ನಲ್ಲೇ ತಮ್ಮ ಎಲ್ಲ ಪಾವತಿಗಳು ಹಾಗೂ ಆಟೋ ಪೇಮೆಂಟ್‌ಗಳ ಮಾಹಿತಿ ನೋಡಲು ಮತ್ತು ಅವುಗಳನ್ನು ನಿರ್ವಹಿಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲದೇ ಬಳಕೆದಾರರು ತಮ್ಮ ಆಟೋ ಪೇಮೆಂಟ್‌ಗಳನ್ನು ಒಂದು ಆ್ಯಪ್‌ನಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು.
ಸದ್ಯ ಯುಪಿಐ ಬಳಕೆದಾರರು, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ವಿದ್ಯುತ್ ಬಿಲ್ ಹೀಗೆ ವಿವಿಧ ರೀತಿಯ ಆಟೋ ಪೇಮೆಂಟ್‌ಗಳನ್ನು ಬೇರೆ ಬೇರೆ ಆ್ಯಪ್‌ಗಳ ಮೂಲಕ ಪ್ರತ್ಯೇಕವಾಗಿ ನಿರ್ವಹಿಸಬೇಕಾಗಿತ್ತು. ಇದರಿಂದ ಸಮಯ ವ್ಯರ್ಥ ಹಾಗೂ ಪೇಮೆಂಟ್ ಮಾಡುವಲ್ಲಿ ಗೊಂದಲ ಉಂಟಾಗುತ್ತಿತ್ತು.
ಇದೀಗ ಈ ಮುಂಬರುವ ಹೊಸ ಅಪ್‌ಡೇಟ್‌ನಿಂದಾಗಿ, ಬಳಕೆದಾರರು, ತಮ್ಮ ಆಯ್ಕೆಯ ಒಂದೇ ಆ್ಯಪ್‌ನಲ್ಲಿ ತಮ್ಮ ಎಲ್ಲ ಪೇಮೆಂಟ್‌ಗಳನ್ನು ನೋಡಲು ಹಾಗೂ ಮ್ಯಾನೇಜ್ ಮಾಡಲು ಸಾಧ್ಯವಾಗಲಿದೆ. ಜತೆಗೆ ಆಟೋ ಪೇಮೆಂಟ್‌ಗಳನ್ನು ಒಂದು ಆ್ಯಪ್‌ನಿಂದ ಇನ್ನೊಂದಕ್ಕೆ ವರ್ಗಾಯಿಸಲು ಸಹ ಅವಕಾಶ ಕಲ್ಪಿಸಲಾಗಿದೆ. ಈ ಬದಲಾವಣೆ ಎಲ್ಲ ಖಾಸಗಿ ಹಾಗೂ ಆಧಿಕೃತ UPI ಆ್ಯಪ್‌ಗಳಲ್ಲಿ ಜಾರಿಗೆ ಬರಲಿದೆ.
ಈ ಸುದ್ದಿಯನ್ನು ಓದಿ:Viral Video: ಖ್ಯಾತ ಗಾಯಕಿ ಬಿಲ್ಲಿ ಎಲಿಷ್ ಕೈಹಿಡಿದು ಎಳೆದ ಅಭಿಮಾನಿ; ಇಲ್ಲಿದೆ ವೈರಲ್ ವೀಡಿಯೋ
ಈ ಬದಲಾವಣೆಯು ಬಳಕೆದಾರರ ಮೇಲೆ ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ ಎಂದು ಎನ್‌ಪಿಸಿಐ ಭರವಸೆ ನೀಡಿದೆ. ಅಷ್ಟೇ ಅಲ್ಲದೇ ನಿರ್ದಿಷ್ಟ ಅಪ್ಲಿಕೇಶನ್ ಬಳಸುವಂತೆ ಉತ್ತೇಜಿಸುವ ಕ್ಯಾಶ್‌ಬ್ಯಾಕ್ ಅಥವಾ ನೋಟಿಫಿಕೇಷನ್‌ಗಳು ಇರುವುದಿಲ್ಲ ಮತ್ತು ಆಯ್ಕೆಯನ್ನು ಸಂಪೂರ್ಣವಾಗಿ ಬಳಕೆದಾರರಿಗೆ ಬಿಡಲಾಗುವುದು ಎಂದು ಎನ್‌ಪಿಸಿಐ ಹೇಳಿದೆ.
ಇನ್ನೂ ಹೊಸ ಅಪ್‌ಡೇಟ್‌ನಲ್ಲಿ ಮುಖ ಗುರುತಿಸುವಿಕೆ (Face Recognition) ಹಾಗೂ ಬಯೋಮೆಟ್ರಿಕ್ ಅಥೆಂಟಿಕೇಷನ್ (Biometric Authentication) ಪರಿಚಯಿಸಲಾಗಿದ್ದು, ಇದರಿಂದ ಯುಪಿಐ ಪಾವತಿಗಳು ಇನ್ನಷ್ಟು ಸುರಕ್ಷಿತವಾಗಲಿವೆ. ಸಾಲದ ಕಂತು, ಬಿಲ್ ಪಾವತಿ, ಸಬ್‌ಸ್ಕ್ರಿಪ್ಶನ್‌ನಂತಹ ಆಟೋ ಪೇಮೆಂಟ್‌ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದಾಗಿದೆ.
ಈ ಹೊಸ ಬದಲಾವಣೆಯಿಂದ ಡಿಜಿಟಲ್ ಹಣಕಾಸು ನಿರ್ವಹಣೆಯು ಮತ್ತಷ್ಟು ಸುಲಭ ಮತ್ತು ಪರಿಣಾಮಕಾರಿಯಾಗಲಿದೆ. ಪಾರದರ್ಶಕತೆ, ಹೆಚ್ಚು ಭದ್ರತೆ ಮತ್ತು ಸಮಯದ ಉಳಿತಾಯ ಇವೆಲ್ಲವನ್ನೂ ಈ ಹೊಸ ನಿಯಮ ಒದಗಿಸುತ್ತದೆ.