ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಭಾರತದ ಆರ್ಥಿಕತೆಯ ವಿರುದ್ಧ ಸಲ್ಲದ ಆರೋಪಗಳನ್ನು ಮಾಡುತ್ತಿರುವಂತೆಯೇ, ಅಲ್ಲಿನ ಪತ್ರಿಕೆಗಳಲ್ಲೂ ಭಾರತದ ಸಾರ್ವಜನಿಕ ಸಂಸ್ಥೆಗಳ ವಿರುದ್ಧ ಸುಳ್ಳು ವರದಿಗಳು ಬರುತ್ತಿವೆ. ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಯಾವುದೆಂದರೆ, ವಾಷಿಂಗ್ಟನ್ ಪೋಸ್ಟ್‌ನಲ್ಲಿ(LIC's investment in Adani Group) ಪ್ರಕಟವಾಗಿರುವ ವರದಿ.
ಭಾರತೀಯ ಜೀವ ವಿಮಾ ನಿಗಮ ಅಥವಾ ಎಲ್‌ಐಸಿ ದೇಶದ ಮನೆ ಮಾತಾಗಿರುವ ಪ್ರತಿಷ್ಠಿತ ವಿಮೆ ಸಂಸ್ಥೆ. 30 ಕೋಟಿಗೂ ಹೆಚ್ಚು ವೈಯಕ್ತಿಕ ವಿಮೆ ಪಾಲಿಸಿಗಳನ್ನು ವಿತರಿಸಿದೆ. ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿರುವ ಮತ್ತು ಸಾರ್ವಜನಿಕ ವಲಯದ ಸಂಸ್ಥೆ. ಆದರೆ ಅಮೆರಿಕದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಎಲ್‌ಐಸಿ ವಿರುದ್ಧ ತಪ್ಪು ಮಾಹಿತಿಗಳನ್ನು ಒಳಗೊಂಡಿರುವ ವರದಿಯನ್ನು ಪ್ರಕಟಿಸಿದೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ ಎಲ್‌ಐಸಿಯಲ್ಲಿರುವ ಅಧಿಕಾರಿಗಳು ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಅದಾನಿ ಗ್ರೂಪ್ ಕಂಪನಿಯ ಬಾಂಡ್‌ಗಳಲ್ಲಿ ಸುಮಾರು 34,200 ಕೋಟಿ ರುಪಾಯಿ ದುಡ್ಡನ್ನು ಹೂಡಿಕೆ ಮಾಡಲಾಗಿದೆ. ಇದು ಸಾರ್ವಜನಿಕರ ದುಡ್ಡಾಗಿದ್ದು ಬಲವಂತವಾಗಿ ಅದಾನಿ ಕಂಪನಿಗಳಲ್ಲಿ ಇನ್ವೆಸ್ಟ್ ಮಾಡಲಾಗಿದೆ ಎಂಬುದು ಆರೋಪ. ಆದರೆ ಈ ವರದಿಯನ್ನು ಎಲ್‌ಐಸಿ ನಿರಾಕರಿಸಿದ್ದು, ಸ್ಪಷ್ಟೀಕರಣ ನೀಡಿದೆ.
ಈ ಸುದ್ದಿಯನ್ನೂ ಓದಿ: Trade license: ರಾಜ್ಯದಲ್ಲಿ ವ್ಯಾಪಾರಸ್ಥರು ʼಟ್ರೇಡ್ ಲೈಸೆನ್ಸ್ʼ ಪಡೆಯುವುದು ಕಡ್ಡಾಯ: ಸಚಿವ ಬೈರತಿ ಸುರೇಶ್
ಮೊದಲನೆಯದಾಗಿ ವಾಷಿಂಗ್ಟನ್ ಪತ್ರಿಕೆಯ ವರದಿಯೇ ನಿರಾಧಾರವಾಗಿದೆ. ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲು ಯಾವೊಬ್ಬ ಸರಕಾರಿ ಅಧಿಕಾರಿಗಳೂ ಎಲ್‌ಐಸಿಗೆ ಸೂಚಿಸಿಲ್ಲ. ಅಂಥ ಕ್ರಮವೂ ಇಲ್ಲ. ಎಲ್ಲಿ ಹೂಡಿಕೆ ಮಾಡಬೇಕು ಎಂಬ ನಿರ್ಧಾರವನ್ನು ಎಲ್‌ಐಸಿ ಸಾಕಷ್ಟು ಅಧ್ಯಯನ ನಡೆಸಿ ಸ್ವತಂತ್ರವಾಗಿಯೇ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.
ಎಲ್‌ಐಸಿಯು ಈ ವರ್ಷ ಮೇನಲ್ಲಿ ಅದಾನಿ ಗ್ರೂಪ್‌ನ ಅದಾನಿ ಪೋರ್ಟ್ಸ್ ಕಂಪನಿಯ 5,000 ಕೋಟಿ ರುಪಾಯಿ ಮೊತ್ತದ ಇಡೀ ಬಾಂಡ್‌ಗಳನ್ನು ಏಕೈಕ ಬಿಡ್ಡರ್ ಆಗಿ ಖರೀದಿಸಿತ್ತು. ಇದು ಕೇಂದ್ರ ಸರಕಾರಿ ಅಧಿಕಾರಿಗಳ ಒತ್ತಡಕ್ಕೆ ಮಣಿದು ತೆಗೆದುಕೊಂಡಿರುವ ನಿರ್ಧಾರ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಆರೋಪಿಸಿದೆ.
ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಎಲ್‌ಐಸಿ, ಈ ಹಿಂದೆಯೂ ಹಲವಾರು ಸಲ ಏಕೈಕ ಬಿಡ್ಡರ್ ಆಗಿ ಹೂಡಿಕೆಗಳನ್ನು ಮಾಡಿರುವುದಾಗಿ ತಿಳಿಸಿದೆ. ಎಲ್‌ಐಸಿಯು ಅದಾನಿ ಪೋರ್ಟ್ಸ್ ಕಂಪನಿಯ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿರುವುದು ನಿಜ. ಅದಕ್ಕೆ ಎಎಎ ರೇಟಿಂಗ್ ಕೂಡ ಇದೆ. ಅಂದರೆ ಉತ್ತಮ ಗುಣಮಟ್ಟದ ಬಾಂಡ್ ಎಂಬ ರೇಟಿಂಗ್ ಇದೆ. ಜತೆಗೆ 7.7% ಬಡ್ಡಿ ಆದಾಯ ಕೂಡ ಸಿಗುತ್ತದೆ. ಸರಕಾರ ಎಲ್‌ಐಸಿಯಲ್ಲಿ 96.5% ಷೇರು ಪಾಲನ್ನು ಹೊಂದಿದೆ. ಆದರೆ ಇದನ್ನು ಪ್ರತಿಪಕ್ಷಗಳು ಸಾರ್ವಜನಿಕರ ದುಡ್ಡಿನ ದುರ್ಬಳಕೆ ಎಂಬ ಆರೋಪ ಮಾಡಿವೆ.
ಇಲ್ಲಿ ಮತ್ತೊಂದು ಗಮನಾರ್ಹ ಅಂಶವನ್ನು ಗಮನಿಸಬೇಕು. ಎಲ್‌ಐಸಿ ಬಾಂಡ್, ಷೇರುಗಳಲ್ಲಿ ಹೂಡಿಕೆ ಮಾಡುತ್ತಿರುವುದು ಹೊಸತೇನಲ್ಲ. ಸ್ಟಾಕ್ ಮಾರ್ಕೆಟ್‌ನಲ್ಲಿ ಭಾರತದ ಅತಿ ದೊಡ್ಡ ಸಾಂಸ್ಥಿಕ ಹೂಡಿಕೆದಾರ ಆಗಿದೆ. ಎಲ್‌ಐಸಿ ಹೊಂದಿರುವ ಆಸ್ತಿಯ ಮೌಲ್ಯವೇ 41 ಲಕ್ಷ ಕೋಟಿ ರುಪಾಯಿಗೂ ಹೆಚ್ಚು.
ಎಲ್‌ಐಸಿಯು ಅದಾನಿ ಗ್ರೂಪ್‌ನಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ಇತರ ಕಂಪನಿಗಳಲ್ಲಿ ಮಾಡಿರುವ ಹೂಡಿಕೆಗೆ ಹೋಲಿಸಿದರೆ ಕಡಿಮೆಯೇ ಆಗುತ್ತದೆ. ಉದಾಹರಣೆಗೆ ಟಾಟಾ ಗ್ರೂಪ್ ಕಂಪನಿಗಳಲ್ಲಿ 1 ಲಕ್ಷದ 30 ಸಾವಿರ ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ. ಆದಿತ್ಯಾ ಬಿರ್ಲಾ ಗ್ರೂಪ್ ನಲ್ಲಿ 42 ಸಾವಿರ ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿದೆ.
ರಿಲಯನ್ಸ್ ಗ್ರೂಪ್ ಕಂಪನಿಗಳಲ್ಲಿ ಎಲ್‌ಐಸಿಯು 1 ಲಕ್ಷದ 34 ಸಾವಿರ ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಹೊಂದಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 72,000 ಕೋಟಿ, ಎಸ್‌ಬಿಐನಲ್ಲಿ 68 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಹೊಂದಿದೆ. ಎಲ್‌ಐಸಿ ಷೇರು ಹೂಡಿಕೆಯಿಂದ ಗಳಿಸಿರುವ ಸಂಪತ್ತಿನ ಒಟ್ಟು ಮೌಲ್ಯವೇ 15 ಲಕ್ಷ ಕೋಟಿ ರುಪಾಯಿಗಳಾಗಿದೆ! ಹೀಗಿರುವಾಗ ಅದಾನಿ ಗ್ರೂಪ್‌ನಲ್ಲಿ 5,000 ಕೋಟಿ ರುಪಾಯಿ ಬಾಂಡ್‌ಗಳನ್ನು ಖರೀದಿಸಿದ್ದಕ್ಕೆ ಸಾರ್ವಜನಿಕರ ದುಡ್ಡು ದುರ್ಬಳಕೆಯಾಗಿದೆ, ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಅದಾನಿ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಯಾವ ಅಧಾರವೂ ಇಲ್ಲದೆ ಆರೋಪಿಸುವುದು ಎಷ್ಟು ಸರಿ?