ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price: ಚಿನ್ನದ ದರ 55,000 ರೂ.ಗೆ ಇಳಿಯುತ್ತಾ? 1 ಲಕ್ಷ ರೂ.ಗೆ ಏರುತ್ತಾ?‌

Gold rates in India: ದೇಶದಲ್ಲಿ ಚಿನ್ನದ ದರ ಗಗನಮುಖಿಯಾಗಿದೆ. ಈ ಮಧ್ಯೆ ಚಿನ್ನದ ದರ (Gold Price) ಪ್ರತಿ 10 ಗ್ರಾಮ್‌ಗೆ 55 ಸಾವಿರ ರೂ.ಗೆ ಇಳಿಯುತ್ತದೆ ಎನ್ನುವ ವದಂತಿ ಹಬ್ಬಿದೆ. ಇದರ ಜತೆಗೆ 1 ಲಕ್ಷ ರೂ.ಗೆ ಏರಿಕೆಯಾಗುತ್ತದೆ ಎನ್ನುವ ಆತಂಕವೂ ಎದುರಾಗಿದೆ. ಈ ಎಲ್ಲ ಗೊಂದಲಗಳಿಗೆ ಉತ್ತರ ಇಲ್ಲಿದೆ.

ಚಿನ್ನದ ದರ 55,000 ರೂ.ಗೆ ಇಳಿಯುತ್ತಾ? 1 ಲಕ್ಷ ರೂ.ಗೆ ಏರುತ್ತಾ?‌

ಸಾಂದರ್ಭಿಕ ಚಿತ್ರ.

Profile Ramesh B Apr 13, 2025 9:17 PM

ಕೇಶವ ಪ್ರಸಾದ್‌ ಬಿ.

ಬೆಂಗಳೂರು: ಚಿನ್ನದ ದರ (Gold Price) ಪ್ರತಿ 10 ಗ್ರಾಮ್‌ಗೆ 55 ಸಾವಿರ ರೂ.ಗೆ ಇಳಿಯುತ್ತದೆಯಂತೆ ಹೌದಾ? ಎಂಬ ಪ್ರಶ್ನೆಯನ್ನು ನೀವು ಕೇಳಿರಬಹುದು. ಆದರೆ ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಈಗ 24 ಕ್ಯಾರಟ್ ಚಿನ್ನದ ದರ 95,670 ರೂ. ಎತ್ತರದ ಮಟ್ಟದಲ್ಲಿದೆ (Gold rates in India). ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ದರ ಏರುಗತಿಯಲ್ಲಿದ್ದು, ಪ್ರತಿ ಔನ್ಸಿಗೆ 3,100 ಡಾಲರ್‌ ಮೇಲಿದೆ. ಹಾಗಾದರೆ ವಾಸ್ತವವಾಗಿ ಏನಾಗುತ್ತಿದೆ? ಬಂಗಾರದ ದರ 55 ಸಾವಿರ ರೂ.ಗೆ ಇಳಿಯಲಿದೆ ಎಂದು ಹೇಳಿದವರು ಯಾರು? ಈ ಎಲ್ಲ ವಿವರಗಳನ್ನು ತಿಳಿದುಕೊಳ್ಳೋಣ.

ಭಾರತದಲ್ಲಿ ಬಂಗಾರ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಅದಕ್ಕೆ ಸಂಬಂಧಿಸಿ ಜಗತ್ತಿನ ಯಾವುದೇ ಭಾಗದಲ್ಲಿ ಸಣ್ಣ ಸುದ್ದಿಯಾದರೂ, ಕೋಟ್ಯಂತರ ಭಾರತೀಯರಿಗೆ ಹೇಗೋ ತಲುಪುತ್ತೆ. ಇತ್ತೀಚೆಗೆ ಅದೊಂದು ಸುದ್ದಿ ಹರಡಿದೆ. ಚಿನ್ನದ ದರ 55 ಸಾವಿರ ರೂ.ಗೆ ಇಳಿಯುತ್ತದೆಯಂತೆ ಎಂಬ ಅಂತೆ ಕಂತೆಗಳ ಸುದ್ದಿ ಮನೆಮನೆಗೂ ಮುಟ್ಟಿದೆ. ಆದರೆ ನೆನಪಿಡಿ ಸದ್ಯದ ಪರಿಸ್ಥಿತಿ ನೋಡಿದರೆ ಇಂತಹ ಸಾಧ್ಯತೆ ಕಡಿಮೆ. ಜತೆಗೆ ಅದೊಂದು ವದಂತಿಯಷ್ಟೇ. ಮಾತ್ರವಲ್ಲದೆ ಚಿನ್ನದ ದರ 1 ಲಕ್ಷ ರೂ. ಗಡಿ ದಾಟಲಿದೆ ಎಂಬ ವರದಿಗಳಿವೆ. ಆ ವರದಿಗಳು ವಾಸ್ತವವಕ್ಕೆ ಹತ್ತಿರದಲ್ಲಿದೆ ಎನ್ನಬಹುದು. ಏಕೆಂದರೆ ಈಗಾಗಲೇ ಚಿನ್ನದ ದರ 94-95 ಸಾವಿರ ರೂ.ಯ ಉನ್ನತ ಮಟ್ಟದಲ್ಲಿ ಇದೆ.



ಹಾಗಾದರೆ ಚಿನ್ನದ ದರ ಹತ್ತು ಗ್ರಾಮ್‌ಗೆ 55 ಸಾವಿರ ರೂ.ಗೆ ಇಳಿಯಲಿದೆ ಎಂಬ ಸುದ್ದಿ ಹಬ್ಬಿದ್ದು ಹೇಗೆ? ಇಕನಾಮಿಕ್‌ ಟೈಮ್ಸ್‌ ಪ್ರಕಾರ, ಅಮೆರಿಕ ಮೂಲದ ಮಾರ್ನಿಂಗ್‌ ಸ್ಟಾರ್‌ ಎಂಬ ಸಂಸ್ಥೆಯ ಸ್ಟ್ರಾಟಜಿಸ್ಟ್‌ ಆಗಿರುವ ಜಾನ್‌ ಮಿಲ್ಸ್‌ ಎಂಬುವರು, ಚಿನ್ನದ ದರದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ಸುಮಾರು 40 ಪರ್ಸೆಂಟ್‌ ಇಳಿಕೆಯಾಗಬಹುದು. ಪ್ರತಿ ಔನ್ಸ್‌ ಬಂಗಾರದ ದರ 3,080 ಡಾಲರಿನಿಂದ 1,820 ಡಾಲರಿಗೆ ಇಳಿಯಬಹುದು ಎಂದು ಹೇಳಿದ್ದಾರೆ. ಈ ಲೆಕ್ಕಾಚಾರದಲ್ಲಿ ಚಿನ್ನದ ದರ ಹತ್ತು ಗ್ರಾಮ್‌ಗೆ 55,000 ರೂ.ಗೆ ಇಳಿಯಬಹುದು.

ಬಂಗಾರದ ದರ 40 ಪರ್ಸೆಂಟ್‌ ಇಳಿಯಲಿದೆ ಎಂಬುದಕ್ಕೆ ಜಾನ್‌ ಮಿಲ್ಸ್‌ ನೀಡುವ ಕಾರಣಗಳೇನು? ಎಂಬುದನ್ನೂ ನೋಡೋಣ. ಸಾಮಾನ್ಯವಾಗಿ ಆರ್ಥಿಕತೆಯ ಅನಿಶ್ಚಿತತೆ ಹಣದುಬ್ಬರ ಹೆಚ್ಚಳ, ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳ ಕುಸಿತದ ಸಂದರ್ಭ ಬಂಗಾರದ ದರ ಹೆಚ್ಚುತ್ತದೆ. ಅದು ಸುರಕ್ಷಿತ ಹೂಡಿಕೆಯ ಸಾಧನ ಎನಿಸಿರುವುದರಿಂದ ಅದಕ್ಕೆ ಬೇಡಿಕೆಯೂ ಉಂಟಾಗುತ್ತದೆ.

ಈ ಸುದ್ದಿಯನ್ನೂ ಓದಿ: Week of Victories: ಟ್ರಂಪ್‌ ಹೊಡೆತಕ್ಕೆ ತತ್ತರಿಸಿದ ಚೀನಾ! ಮೊದಲ ವಾರ ಅಮೆರಿಕಕ್ಕೆ ಮುನ್ನಡೆ

ಹೀಗಿದ್ದರೂ, ಬಂಗಾರದ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತಿದ್ದು, ಜಾಗತಿಕ ಮಟ್ಟದಲ್ಲಿ ಚಿನ್ನದ ದಾಸ್ತಾನು 9% ಹೆಚ್ಚಳವಾಗಿದ್ದು 2,16,265 ಟನ್‌ಗೆ ಏರಿಕೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಉತ್ಪಾದನೆ ಹೆಚ್ಚುತ್ತಿದೆ. ರಿಸೈಕಲ್ಡ್‌ ಗೋಲ್ಡ್‌ ಸಪ್ಲೈ ಕೂಡ ಹೆಚ್ಚುತ್ತಿದೆ. ರಿಸೈಕಲ್ಡ್‌ ಗೋಲ್ಡ್‌ ಎಂದರೆ ಬೇರೆ ಬೇರೆ ಮೂಲಗಳಿಂದ ಪಡೆಯುವ ಚಿನ್ನವನ್ನು ಸಂಸ್ಕರಿಸಿ ಮರು ಬಳಕೆ ಮಾಡುವಂಥದ್ದು. ಅದು ಜ್ಯುವೆಲ್ಲರಿಗಳು ಇರಬಹುದು, ಎಲೆಕ್ಟ್ರಾನಿಕ್‌ ವೇಸ್ಟೇಜ್‌, ಇಂಡಸ್ಟ್ರಿಯಲ್‌ ಸ್ಕ್ರಾಪ್‌ಗಳಲ್ಲಿ ಸಿಗುವ ಚಿನ್ನವನ್ನು ಸಂಸ್ಕರಿಸುತ್ತಾರೆ.

ಕಳೆದ ವರ್ಷ ನಾನಾ ದೇಶಗಳ ಸೆಂಟ್ರಲ್‌ ಬ್ಯಾಂಕ್‌ಗಳು 1,045 ಟನ್‌ ಬಂಗಾರವನ್ನು ಖರೀದಿಸಿತ್ತು. ಆದರೆ ಮುಂಬರುವ ವರ್ಷಗಳಲ್ಲಿ ಸೆಂಟ್ರಲ್‌ ಬ್ಯಾಂಕ್‌ಗಳಿಂದ ಚಿನ್ನದ ಖರೀದಿ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಬೇಡಿಕೆ ಇಳಿಕೆಯಾಗಬಹುದು.

ಹೀಗಿದ್ದರೂ, ಬ್ಯಾಂಕ್‌ ಆಫ್‌ ಅಮೆರಿಕ, ಗೋಲ್ಡ್‌ ಮನ್‌ ಸ್ಯಾಕ್ಸ್‌ ವರದಿಯ ಪ್ರಕಾರ ಪ್ರತಿ ಔನ್ಸ್‌ ಚಿನ್ನದ ದರ 3,300 ರಿಂದ 3,500 ಡಾಲರ್‌ಗೆ ಏರಿಕೆಯಾಗಬಹುದು. ಸದ್ಯದ ಪರಿಸ್ಥಿತಿಯನ್ನು ಗಮನಿಸಿದ್ರೆ, ಟ್ರೇಡ್‌ ವಾರ್‌ ನಡೆಯುತ್ತಿದೆ. ಅಮೆರಿಕ-ಚೀನಾ ನಡುವಣ ಸುಂಕ ಸಮರದ ಅನಿಶ್ಚಿತತೆ ಇದೆ. ಹೀಗಾಗಿ ಬಂಗಾರದ ದರ ಸದ್ಯಕ್ಕೆ ಕಡಿಮೆಯಾಗುವ ಸಾಧ್ಯತೆ ಕಾಣಿಸುತ್ತಿಲ್ಲ. ಜಾಗತಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೆ ಪ್ರತಿ ಔನ್ಸ್‌ ಬಂಗಾರದ ದರ 2,800 ಡಾಲರ್‌ ತನಕ ಇಳಿಯಬಹುದು. ಹೀಗಿದ್ದರೂ, ಹಣದುಬ್ಬರ ಹೆಚ್ಚಿದರೆ ಉನ್ನತ ಮಟ್ಟದ ದರ ಮುಂದುವರಿಯಬಹುದು. ಆದ್ದರಿಂದ ಚಿನ್ನದ ದರ ಭವಿಷ್ಯದಲ್ಲಿ ಲಕ್ಷ ದಾಟುವ ಸಾಧ್ಯತೆ ಹೆಚ್ಚು ಎನ್ನಬಹುದು.

ಒಂದು ವೇಳೆ ಮುಂಬರುವ ವರ್ಷಗಳಲ್ಲಿ ಚಿನ್ನದ ದರ ಗಣನೀಯ ಇಳಿಕೆಯಾದರೆ ಮಾತ್ರ, ಹೆಚ್ಚಿನ ದರದಲ್ಲಿ ಖರೀದಿಸಿದವರಿಗೆ ಸ್ವಲ್ಪ ನಷ್ಟವಾದೀತು. ಹೊಸತಾಗಿ ಖರೀದಿಸಿದವರಿಗೆ ಲಾಭವಾದೀತು.

ಕೆಲವು ವರ್ಷಗಳಿಂದ ಏರಿಕೆಯಾದ ಚಿನ್ನದ ದರ

ವರ್ಷ 24 ಕ್ಯಾರಟ್‌ ಚಿನ್ನದ ದರ (10 ಗ್ರಾಮ್‌ಗೆ ರೂ.ಗಳಲ್ಲಿ)
2025 (ಏಪ್ರಿಲ್‌) 95,670
‌2024 78,245
2023 63,203
2022 55,017
2021 48,099
2020 50,151
2019 39,108
2018 31,391
2017 28,156
2016 27,445
2015 24,931

ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಭಾರತದಲ್ಲಿ ಹೊಸತಲ್ಲ. ತಲೆ ತಲಾಂತರಗಳಿಂದಲೂ ದೇಶದಲ್ಲಿ ಜನರು ಇವೆರಡೂ ಅಮೂಲ್ಯ ಲೋಹಗಳಲ್ಲಿ ನಾನಾ ರೂಪಗಳಲ್ಲಿ ಹೂಡಿಕೆ ಮಾಡಿದ್ದಾರೆ. ಹಿಂದಿನ ಕಾಲದಲ್ಲಿ ಬಂಗಾರದ ಹೂಡಿಕೆಗೆ ಆಭರಣ, ಚಿನ್ನದ ನಾಣ್ಯ ಬಿಟ್ಟರೆ ಹೆಚ್ಚಿನ ಆಯ್ಕೆ ಇದ್ದಿರಲಿಲ್ಲ. ಆದರೆ ಈಗ ಭೌತಿಕ ಚಿನ್ನದ ಖರೀದಿಯಲ್ಲೂ ಹಲವಾರು ವಿಧಗಳಿವೆ. ಜತೆಗೆ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ ಅಥವಾ ಇಟಿಎಫ್‌, ಡಿಜಿಟಲ್‌ ಗೋಲ್ಡ್‌ ಆಯ್ಕೆ ಇದೆ.

ಚಿನ್ನ ಅಮೂಲ್ಯ ಲೋಹವಾದ್ದರಿಂದ ಪ್ರಕೃತಿಯಲ್ಲಿ ಅಪರೂಪದ್ದಾಗಿದೆ. ಆದ್ದರಿಂದಲೇ ಅದರ ಬೆಲೆ ಹೆಚ್ಚು. ಬಂಗಾರವನ್ನು ಆಭರಣಗಳ ಮೂಲಕ ಅಲಂಕಾರಕ್ಕೆ ಬಳಸುವುದರ ಜತೆಗೆ ಹೂಡಿಕೆಯ ದೃಷ್ಟಿಯಿಂದಲೂ ಪ್ರಯೋಜನ ಇದೆ. ಇಂಡಸ್ಟ್ರಿಯ ಉದ್ದೇಶಗಳಿಗೂ ಅದರ ಬಳಕೆ ಇರುವುದರಿಂದ ಬಂಗಾರಕ್ಕೆ ಬೇಡಿಕೆ ಸದಾ ಇದ್ದೇ ಇರುತ್ತದೆ. ಆದರೆ ಅದರ ದರದಲ್ಲಿ ಕೆಲವೊಮ್ಮೆ ಇಳಿಯಬಹುದು. ಆರೆ ದೀರ್ಘಕಾಲೀನ ಇತಿಹಾಸ ನೋಡಿದ್ರೆ ಚಿನ್ನದ ದರ ಏರುಗತಿಯಲ್ಲೇ ಸಾಗಿರುವುದನ್ನು ಅಂಕಿ ಅಂಶಗಳು ತಿಳಿಸುತ್ತವೆ.

gold

ಈ ವರ್ಷ 2025ರಲ್ಲಿ ಚಿನ್ನದಲ್ಲಿ ಹೂಡಿಕೆ ಮುಂದುವರಿಸಲು ಕಾರಣಗಳು

  • ಸುಂಕ ಸಮರ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಜಾಗತಿಕ ಸುಂಕ ಸಮರದ ಅನಿಶ್ಚಿತತೆ ಇರೋದ್ರಿಂದ ಚಿನ್ನದಲ್ಲಿ ಹೂಡಿಕೆ ಸೇಫ್‌ ಎಂಬ ಭಾವನೆ ಉಂಟಾಗಿದೆ.
  • ಸೆಂಟ್ರಲ್‌ ಬ್ಯಾಂಕ್‌ ಖರೀದಿ: ಕಳೆದ ಮೂರು ವರ್ಷಗಳಲ್ಲಿ ಸೆಂಟ್ರಲ್‌ ಬ್ಯಾಂಕ್‌ಗಳು 1000 ಟನ್ನಿಗೂ ಹೆಚ್ಚು ಚಿನ್ನ ಖರೀದಿಸಿವೆ.
  • ರಿಸೆಶನ್‌: ಅಮೆರಿಕದಲ್ಲಿ ರಿಸೆಶನ್‌ ಭೀತಿ ಇದೆ. ಇದು ಕೂಡ ಬಂಗಾರದ ದರ ಏರಿಕೆಯಾಗಲು ಕಾರಣವಾದೀತು.
  • ಚೀನಾದಲ್ಲಿ ಬೇಡಿಕೆ: ಚೀನಾದಲ್ಲಿ ಗೋಲ್ಡ್‌ ಇಟಿಎಫ್‌ಗಳಲ್ಲಿ ಈ ವರ್ಷ ದಾಖಲೆಯ 1 ಶತಕೋಟಿ ಡಾಲರ್‌ ಹೂಡಿಕೆ ಆಗಿದೆ.
  • ಬಡ್ಡಿ ದರ ಕಡಿತ: ಅಮೆರಿಕದ ಫೆಡರಲ್‌ ರಿಸರ್ವ್‌ ಈ ವರ್ಷ ಬಡ್ಡಿ ದರ ಕಡಿತಗೊಳಿಸಿದರೆ ಚಿನ್ನದ ದರ ಏರಿಕೆ ಆಗಬಹುದು.
  • ನೆಗೆಟಿವ್‌ ರಿಟರ್ನ್‌: ಕಳೆದ 2000ದಿಂದ 2025ರ ತನಕ ಎರಡು ವರ್ಷ ಮಾತ್ರ ಚಿನ್ನ ನೆಗೆಟಿವ್‌ ರಿಟರ್ನ್‌ ಕೊಟ್ಟಿದೆ.

2025ರಲ್ಲಿ ಚಿನ್ನದ ದರ, ಬ್ಯಾಂಕ್‌ಗಳ ಮುನ್ನೋಟ‌ (ಪ್ರತಿ ಔನ್ಸ್‌ಗೆ ಡಾಲರ್‌ನಲ್ಲಿ)

ಡ್ಯೂಯಿಷ್‌ ಬ್ಯಾಂಕ್‌: 3,139 ಡಾಲರ್

ಎಚ್‌ಎಸ್ ಬಿಸಿ : 3,015

ಎಎನ್‌ ಝಡ್‌ : 3,200

ಗೋಲ್ಡ್‌ಮನ್‌ ಸ್ಯಾಕ್ಸ್‌ : 3,300

ಯುಬಿಎಸ್‌ : 3,200

ಬ್ಯಾಂಕ್‌ ಆಫ್‌ ಅಮೆರಿಕ : 3,300

ಜೆಪಿ ಮೋರ್ಗಾನ್‌ : 3,000