Actor Darshan: ಮುಂದುವರಿದ ದರ್ಶನ್ ಟೆಂಪಲ್ ರನ್; ಪತ್ನಿ ವಿಜಯಲಕ್ಷ್ಮೀ ಜತೆ ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಭೇಟಿ
Kamakhya Temple: ʼಡೆವಿಲ್ʼ ಚಿತ್ರದ ಶೂಟಿಂಗ್‌ಗಾಗಿ ಥಾಯ್ಲೆಂಡ್‌ಗೆ ತೆರಳಿದ್ದ ನಟ ದರ್ಶನ್ ಬೆಂಗಳೂರಿಗೆ ಮರಳಿದ್ದು, ಮತ್ತೆ ಟೆಂಪಲ್ ರನ್ ಆರಂಭಿಸಿದ್ದಾರೆ. ಇದೀಗ ಪತ್ನಿ ವಿಜಯಲಕ್ಷ್ಮೀ ಜತೆಗೆ ಅಸ್ಸಾಂನ ಗುವಾಹಟಿಯ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.


ದಿಸ್‌ಪುರ: ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ (Kamakhya Temple) ನಟ ದರ್ಶನ್ (Actor Darshan) ಮತ್ತು ವಿಜಯಲಕ್ಷ್ಮೀ ದಂಪತಿ ಮಂಗಳವಾರ (ಜು. 29) ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ʼದಿ ಡೆವಿಲ್ʼ ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಥಾಯ್ಲೆಂಡ್‌ಗೆ ತೆರಳಿದ್ದ ದರ್ಶನ್ ಇತ್ತೀಚೆಗಷ್ಟೇ ಬೆಂಗಳೂರಿಗೆ ಮರಳಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿರುವ ದರ್ಶನ್ ಅವರಿಗೆ ನೀಡಿರುವ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ (Supreme Court) ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ತೀರ್ಪು ತಮ್ಮ ಪರವಾಗಿ ಬರುವಂತೆ ಪ್ರಾರ್ಥಿಸಲು ದಂಪತಿ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಪೊಲೀಸರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜು. 24ರಂದು ನಡೆಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಲಿಖಿತ ವಾದಾಂಶಗಳನ್ನು ಒಂದು ವಾರದೊಳಗೆ 3 ಪುಟಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.
ಈ ಸುದ್ದಿಯನ್ನೂ ಓದಿ: Actor Darshan: ಜಾಮೀನು ಟೆನ್ಷನ್‌ನಲ್ಲಿ ಥಾಯ್ಲೆಂಡ್‌ನಿಂದ ವಾಪಸಾದ ದರ್ಶನ್
ಆದೇಶ ಕಾಯ್ದಿರಿಸಿದ ಸುಪ್ರೀಂ
ದರ್ಶನ್ ಮತ್ತು ಗ್ಯಾಂಗ್‌ನಿಂದ ನಡೆದಿದ್ದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ದರ್ಶನ್ ಮತ್ತಿತರರ ಪರ ವಾದ ಮಂಡನೆ ಮುಕ್ತಾಯವಾಗಿದೆ. ವಾದ, ಪ್ರತಿವಾದ ಆಲಿಸಿ ಸುಪ್ರೀಂ ಕೋರ್ಟ್ ಆದೇಶ ಕಾಯ್ದಿರಿಸಿದೆ. ಹೀಗಾಗಿ ದರ್ಶನ್ ಮತ್ತು ಗ್ಯಾಂಗ್ಗೆ 10 ದಿನಗಳ ಕಾಲ ತಾತ್ಕಾಲಿಕ ರಿಲೀಫ್ ದೊರೆತಿದೆ. ಸದ್ಯದಲ್ಲೇ ದರ್ಶನ್ ಜಾಮೀನಿಗೆ ಸಂಬಂಧಿಸಿ ತೀರ್ಪು ಬರಲಿದ್ದು, ಹೀಗಾಗಿ ಟೆಂಪಲ್ ರನ್ ನಡೆಸುತ್ತಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ಕಳೆದ ವಾರ ನಡೆದ ವಿಚಾರಣೆ ವೇಳೆ, ಪೊಲೀಸರು ನೀಡಿರುವ ಸಾಕ್ಷ್ಯಗಳು ತೃಪ್ತಿ ತಂದಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಜತೆಗೆ ಹೈಕೋರ್ಟ್ ಜಾಮೀನು ನೀಡಲು ನೀಡಿರುವ ಕಾರಣಗಳು ಸಮಂಜಸವಾಗಿಲ್ಲ. ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಹೈಕೋರ್ಟ್ ನೀಡಿರುವ ಜಾಮೀನಿನ ವಿಷಯದಲ್ಲಿ ನಾವೇಕೆ ಮಧ್ಯ ಪ್ರವೇಶ ಮಾಡಬಾರದೆಂದು ದರ್ಶನ್ ಪರ ವಕೀಲ ಕಪಿಲ್ ಸಿಬಲ್ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್‌ಗೆ ಮತ್ತೆ ಢವಢವ ಆರಂಭವಾಗಿದೆ.
ಕೆಲವು ದಿನಗಳ ಹಿಂದೆ ಕೇರಳದ ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದ ದರ್ಶನ್ ಇತ್ತೀಚೆಗೆ ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದರು. ಆಷಾಡ ಮಾಸ ಹಿನ್ನೆಲೆಯಲ್ಲಿ ನಟ ದರ್ಶನ್ ತಮ್ಮ ಪತ್ನಿ ಜತೆಗೆ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು.
ಏನಿದು ಪ್ರಕರಣ?
2024ರ ಜೂನ್ನಲ್ಲಿ ರೇಣುಕಾಸ್ವಾಮಿ ಶವ ಪತ್ತೆ ಆದ ನಂತರ ದರ್ಶನ್ ಹಾಗೂ ಇತರ ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅಲ್ಲಿನ ನಿಯಮಗಳನ್ನು ಉಲ್ಲಂಘನೆ ಮಾಡಿದ್ದರಿಂದ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿತ್ತು. ಕಡೆಗೂ 2024ರ ಡಿಸೆಂಬರ್ನಲ್ಲಿ ದರ್ಶನ್ ಜಾಮೀನು ಪಡೆದುಕೊಂಡಿದ್ದರು.