ಬೆಂಗಳೂರು, ಅ.28: ರಾಜಧಾನಿಯಲ್ಲಿ ನಿಂದಿಸಿದ್ದಕ್ಕೆ, ಮೈಗೆ ಕೈ ತಗುಲಿಸಿದ್ದಕ್ಕೆ, ಕ್ಷುಲ್ಲಕ ಕಾರಣಗಳಿಗೆಲ್ಲ ಕೊಲೆಗಳು ನಡೆಯುವುದು ಹೆಚ್ಚುತ್ತಿದೆ. ಬೆಂಗಳೂರಿನ (Bengaluru Crime News) ಉಲ್ಲಾಳ ಉಪನಗರದಲ್ಲಿ ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಯುವಕನನ್ನು ಇಂಥದೇ ಕಾರಣಕ್ಕಾಗಿ ಬರ್ಬರವಾಗಿ ಕೊಲೆ (Murder case) ಮಾಡಲಾಗಿದೆ. ಸ್ಥಳಕ್ಕೆ ಜ್ಞಾನಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂಬಂಧಿಕನೇ ಹೊಡೆದು ಕೊಂದಿದ್ದಾನೆ ಎನ್ನಲಾಗುತ್ತಿದೆ.
ಉಳ್ಳಾಲ ಉಪನಗರದ ಬಳಿ ಹೆಣವಾಗಿ ಬಿದ್ದಿರುವ ಯುವಕನನ್ನು 36 ವರ್ಷದ ಅವಿನಾಶ್ ಎಂದು ಪೊಲೀಸರು ಗುರುತಿಸಿದ್ದಾರೆ. ಸಂಬಂಧಿಕನಾದ ಕಾರ್ತಿಕ್ ಮನೆಗೆ ಹೋಗಿದ್ದ ಅವಿನಾಶ್ ಕುಡಿದು ಗಲಾಟೆ ಮಾಡಿದ್ದ. ಕಾರ್ತಿಕ್ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ತಾಯಿಗೆ ಕೆಟ್ಟ ಮಾತುಗಳಿಂದ ಬೈಯ್ದ ಎನ್ನುವ ಕಾರಣಕ್ಕೆ ಕಾರ್ತಿಕ್ ಸಿಟ್ಟಿನಲ್ಲಿ ಅವಿವಾಶನನ್ನು ಕೊಲೆಗೈದಿದ್ದಾನೆ ಎನ್ನಲಾಗುತ್ತಿದೆ.
ಮನೆಗೆ ಬಂದು ಗಲಾಟೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಮೃತ ಅವಿನಾಶ್ ಹಾಗೂ ಕಾರ್ತಿಕ್ ಇಬ್ಬರು ಸಂಬಂಧಿಗಳಾಗಿದ್ದಾರೆ. ಅವಿನಾಶ್, ಕಾರ್ತಿಕ್‌ನ ತಾಯಿಗೆ ನಿಂದಿಸಿದ್ದ. ಈ ಸಂದರ್ಭ ತಾಯಿ ಪೊಲೀಸರಿಗೆ ಫೋನ್ ಮಾಡಿದ್ದಾರೆ. ಬೆಳಗಿನ ಜಾವ ಕಾರ್ತಿಕ್, ಬೈಕ್‌ನ ಕಬ್ಬಿಣದ ಕ್ರಾಸ್ ಗಾರ್ಡ್ ರಾಡ್ನಿಂದ ಅವಿನಾಶನ ತಲೆ ಹಾಗೂ ಬೆನ್ನಿಗೆ ಹೊಡೆದಿದ್ದಾನೆ.
ಇದನ್ನೂ ಓದಿ: Murder Case: ಯುಪಿಎಸ್‌ಸಿ ಆಕಾಂಕ್ಷಿ ಕೊಲೆಗೆ ಟ್ವಿಸ್ಟ್; ಮಾಜಿ ಗೆಳೆಯನ ಜೊತೆಗೂಡಿ ಮುಹೂರ್ತ ಇಟ್ಲು ಐನಾತಿ ಲವರ್
ತೀವ್ರ ರಕ್ತಸ್ರಾವದಿಂದ ಅವಿನಾಶ್ ಸಾವನ್ನಪ್ಪಿದ್ದಾನೆ. ಬಳಿಕ ಆರೋಪಿ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದ.ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈತ ಸ್ಕೂಲ್ ಬಸ್ ಡ್ರೈವರ್ ಆಗಿದ್ದ. ಕಾರ್ತಿಕ್ ಕುಟುಂಬ ಒಂದು ವರ್ಷದ ಹಿಂದೆ ಬಾಡಿಗೆಗೆ ಬಂದಿತ್ತು. ಆರೋಪಿ ಕಾರ್ತಿಕ್ ಕುಟುಂಬದವರು ಹೋಟೆಲ್ ನಡೆಸುತ್ತಿದ್ದಾರೆ. ಇವರ ಜೊತೆಯಲ್ಲೇ ಅವಿನಾಶ್ ಮೊದಲು ಕೆಲಸ ಮಾಡಿಕೊಂಡಿದ್ದ. ಅವಿನಾಶ್ ತಂದೆ ತಾಯಿ ಈಗಾಗಲೇ ಸಾವನ್ನಪ್ಪಿದ್ದಾರೆ. ಅವಿನಾಶ್‌ಗೆ ಮದುವೆಯಾಗಿದ್ದು, ಎರಡು ಮಕ್ಕಳು ಇದ್ದಾರೆ. ಈತನ ಕುಡಿತದ ಚಟದಿಂದ ಹೆಂಡತಿ ತವರು ಸೇರಿದ್ದಳು.