ಚಂಡೀಗಡ: ಐಷಾರಾಮಿ ವಾಹನಗಳು, 5 ಕೋಟಿ ರೂ. ನಗದು, ದುಬಾರಿ ಕೈಗಡಿಯಾರಗಳು ಸೇರಿದಂತೆ ಅಪಾರ ಪ್ರಮಾಣದ ಸಂಪತ್ತು ಹೊಂದಿದ್ದ ಪಂಜಾಬ್ ಐಪಿಎಸ್ ಅಧಿಕಾರಿ ಹರ್ಚರಣ್ ಸಿಂಗ್ ಭುಲ್ಲರ್ (Punjab IPS officer Harcharan Singh Bhullar) ಲಂಚ (Bribery case) ಪಡೆಯುತ್ತಿದ್ದಾಗ ಗುರುವಾರ ಕೇಂದ್ರ ತನಿಖಾ ದಳದ ( Central Bureau of Investigation) ಬಲೆಗೆ ಬಿದ್ದಿದ್ದಾರೆ. ಅವರನ್ನು ಬಂಧಿಸಲಾಗಿದೆ. ಐದು ದಿನಗಳ ಹಿಂದೆ ಫತೇಘರ್ ಸಾಹಿಬ್‌ನ ಸ್ಕ್ರ್ಯಾಪ್ ಡೀಲರ್ ಆಕಾಶ್ ಬಟ್ಟಾ ಎಂಬವರು ನೀಡಿರುವ ಲಿಖಿತ ದೂರಿನ ಆಧಾರದ ಮೇಲೆ ಸಿಬಿಐ (CBI) ಈ ಪ್ರಕರಣವನ್ನು ದಾಖಲಿಸಿತ್ತು.
ಫತೇಘರ್ ಸಾಹಿಬ್‌ನ ಸ್ಕ್ರ್ಯಾಪ್ ಡೀಲರ್ ಆಕಾಶ್ ಬಟ್ಟಾ ಅವರಿಂದ 8 ಲಕ್ಷ ರೂ. ಬೇಡಿಕೆ ಇಟ್ಟ ಪಂಜಾಬ್ ಐಪಿಎಸ್ ಅಧಿಕಾರಿ ಹರ್ಚರಣ್ ಸಿಂಗ್ ಭುಲ್ಲರ್ ವಿರುದ್ದ ಆಕಾಶ್ ಬಟ್ಟಾ ಲಿಖಿತವಾಗಿ ಸಿಬಿಐಗೆ ದೂರು ನೀಡಿದ್ದರು.
ಪಂಜಾಬ್‌ನ ರೋಪರ್ ರೇಂಜ್‌ನಲ್ಲಿ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಗಿ ನೇಮಕಗೊಂಡಿದ್ದ ಹಿರಿಯ ಭಾರತೀಯ ಪೊಲೀಸ್ ಸೇವೆ ಅಧಿಕಾರಿ ಭುಲ್ಲರ್ ಅವರನ್ನು ಮೊಹಾಲಿಯ ಅವರ ಕಚೇರಿಯಲ್ಲಿ 8 ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಬಿಐ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ. ಭುಲ್ಲರ್ 5 ಕೋಟಿ ರೂ. ನಗದು, ಐಷಾರಾಮಿ ವಾಹನಗಳು, ಆಭರಣಗಳು, ದುಬಾರಿ ಮೌಲ್ಯದ ಕೈಗಡಿಯಾರಗಳು ಸೇರಿದಂತೆ ಅಪಾರ ಪ್ರಮಾಣದ ಸಂಪತ್ತನ್ನು ಹೊಂದಿರುವುದಕ್ಕೆ ದಾಖಲೆಗಳು ಸಿಕ್ಕಿವೆ.
ಆರಂಭದಲ್ಲಿ 8 ಲಕ್ಷ ರೂ.ಗಳನ್ನು ಪಾವತಿಸಬೇಕು, ತಿಂಗಳಿಗೆ ನಿಗದಿತ ಪಾವತಿಗಳನ್ನು ಮಾಡಬೇಕು. ಇಲ್ಲವಾದರೆ ನಕಲಿ ಪ್ರಕರಣದಲ್ಲಿ ಸಿಲುಕಿಸುವುದಾಗಿ ಆಕಾಶ್ ಬಟ್ಟಾ ಅವರಿಗೆ ಭುಲ್ಲರ್ ಬೆದರಿಕೆ ಹಾಕಿದ್ದ ಎನ್ನಲಾಗಿದೆ.
ಹರ್ಚರಣ್ ಸಿಂಗ್ ಭುಲ್ಲರ್ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ ತನಿಖಾ ಸಂಸ್ಥೆ ಸುಮಾರು 5 ಕೋಟಿ ರೂ. ನಗದು ಸೇರಿದಂತೆ 1.5 ಕೆಜಿ ಆಭರಣಗಳು, ಆಸ್ತಿ ದಾಖಲೆಗಳು ಮತ್ತು ಇತರ ಕೆಲವು ಸಂಪತ್ತನ್ನು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ಎರಡು ಐಷಾರಾಮಿ ಕಾರುಗಳು, 22 ಐಷಾರಾಮಿ ಕೈಗಡಿಯಾರಗಳು, ಲಾಕರ್ ಕೀಗಳು, 40 ಲೀಟರ್ ಆಮದು ಮಾಡಿಕೊಂಡ ಮದ್ಯ ಮತ್ತು ಬಂದೂಕುಗಳು ಸೇರಿವೆ.
ಈ ಸುದ್ದಿಯನ್ನೂ ಓದಿ: Cyber Crime: ದೇಶದಲ್ಲಿ ಹೆಚ್ಚುತ್ತಿದೆ ಸೈಬರ್ ಕ್ರೈಂ ಪ್ರಕರಣ; 2024 ರಲ್ಲಿ 23,000 ಕೋಟಿ ರೂ ಕಳೆದುಕೊಂಡ ಭಾರತೀಯರು!
ಭುಲ್ಲರ್ ತನ್ನ ಸಹಚರ ಕೃಷ್ಣ ಮೂಲಕ ಎಲ್ಲ ಪಾವತಿಗಳನ್ನು ಮಾಡಬೇಕೆಂದು ಒತ್ತಾಯಿಸಿದ್ದ ಎಂದು ಎಫ್ ಐಆರ್ ನಲ್ಲಿ ತಿಳಿಸಲಾಗಿದೆ. ಬಟ್ಟಾ ಅವರು ನೀಡಿರುವ ಮಾಹಿತಿ ಆಧಾರದಲ್ಲಿ ಸಿಬಿಐ ಚಂಡೀಗಢದ ಸೆಕ್ಟರ್ 21 ರಲ್ಲಿ ಐಪಿಎಸ್ ಅಧಿಕಾರಿಯ ಬಂಧನಕ್ಕೆ ಯೋಜನೆ ರೂಪಿಸಿಕೊಂಡಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಡಿಐಜಿ ಪರವಾಗಿ ದೂರುದಾರರಿಂದ 8 ಲಕ್ಷ ರೂ.ಗಳನ್ನು ಸ್ವೀಕರಿಸುತ್ತಿದ್ದ ಕೃಷ್ಣನನ್ನು ಕೂಡ ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಕೃಷ್ಣನ ಬಂಧನದ ತಕ್ಷಣ ದೂರುದಾರ ಮತ್ತು ಡಿಐಜಿ ನಡುವೆ ಫೋನ್ ಮೂಲಕ ಮಾತುಕತೆ ನಡೆಸಲಾಯಿತು. ಈ ವೇಳೆ ಅಧಿಕಾರಿ ಹಣ ಸ್ವೀಕರಿಸಿದ್ದನ್ನು ಒಪ್ಪಿಕೊಂಡು ಕಚೇರಿಗೆ ಬರುವಂತೆ ಹೇಳಿದರು. ಬಳಿಕ ಸಿಬಿಐ ತಂಡವು ಡಿಐಜಿ ಭುಲ್ಲರ್ ಅವರನ್ನು ಮೊಹಾಲಿಯಲ್ಲಿರುವ ಅವರ ಕಚೇರಿಯಲ್ಲಿ ಬಂಧಿಸಿತು.