ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಸಿವಿಲ್ ಲೈನ್ಸ್ (Civil Lines) ಪ್ರದೇಶದಲ್ಲಿ ಭಾನುವಾರ ರಾತ್ರಿ 24 ವರ್ಷದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ (Gang Rape) ನಡೆದಿರುವ ಆಘಾತಕಾರಿ ಘಟನೆ ವರದಿಯಾಗಿದೆ. ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಯುವತಿಯ ಹೇಳಿಕೆಯನ್ನು ದಾಖಲಿಸಿದ್ದಾರೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಿದ್ದಾರೆ. ಆರೋಪಿಗಳನ್ನು ಗುರುತಿಸಿ ಪತ್ತೆಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಯುವತಿ ಪಾರ್ಟಿಗೆಂದು ತನ್ನ ಸ್ನೇಹಿತೆಯ ಮನೆಗೆ ಹೋಗಿದ್ದಳು. ಆದರೆ, ಆಕೆ ಮನೆಗೆ ತೆರಳಿದಾಗ, ಸ್ನೇಹಿತೆಯ ಜೊತೆಗೆ ನಾಲ್ಕು ಜನ ಪುರುಷರು ಇದ್ದರು. ಯುವತಿಯ ಪ್ರಕಾರ, ಆಕೆ ಕುಡಿದ ಡ್ರಿಂಕ್ಸ್‌ನಲ್ಲಿ ಏನನ್ನೋ ಬೆರೆಸಲಾಗಿತ್ತು, ಇದರಿಂದ ಆಕೆ ಪ್ರಜ್ಞೆ ಕಳೆದುಕೊಂಡಳು. ತದನಂತರ, ಆರೋಪಿಗಳು ಆಕೆಯನ್ನು ಬಾತ್ ರೂಮ್‌ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಅದನ್ನು ವಿಡಿಯೋ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಯುವತಿಯು ತನ್ನ ಸಹೋದರಿಯೊಂದಿಗೆ ಸ್ಥಳಕ್ಕೆ ಹೋಗಿದ್ದಳು. ಘಟನೆ ನಡೆದು ಸುಮಾರು 13-14 ಗಂಟೆಗಳ ನಂತರ ದೂರು ದಾಖಲಿಸಿದ್ದಾಳೆ. ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಘಟನೆಯ ಎಲ್ಲ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳು ಯುವತಿಯನ್ನು ಥಳಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ.
ಈ ಸುದ್ದಿಯನ್ನು ಓದಿ: Viral Video: ಬೀದಿ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ; ವಿಡಿಯೋ ವೈರಲ್
ದೆಹಲಿ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ. “ಆರೋಪಿಗಳನ್ನು ಗುರುತಿಸಲು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ವರದಿಯ ಜೊತೆಗೆ, ಯುವತಿಯ ಹೇಳಿಕೆಯ ಆಧಾರದ ಮೇಲೆ ತನಿಖೆ ಮುಂದುವರಿದಿದೆ.
ಇತ್ತೀಚೆಗೆ ಹಾಸನದಲ್ಲೊಂದು ಪೈಶಾಚಿಕ ಕೃತ್ಯ ನಡೆದಿತ್ತು. ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿತ್ತು. ದುರುಳರು ಅತ್ಯಾಚಾರವೆಸಗಿದ್ದಲ್ಲದೆ, ವಿಡಿಯೋ ಮಾಡಿ ಸಂತ್ರಸ್ತೆಯ ಸಹೋದರನಿಗೆ ಕಳುಹಿಸಿ ಡಿಲೀಟ್ ಕೂಡ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆಯ ಸಹೋದರನ ದೂರು ದಾಖಲಿಸಿದ್ದಾರೆ.