Haryana Crime: ಬುದ್ಧಿ ಹೇಳಿದ್ದೇ ತಪ್ಪಾಯ್ತಾ? ಗುರು ಪೂರ್ಣಿಮೆಯಂದೇ ಶಿಕ್ಷಕನನ್ನು ಹತ್ಯೆ ಮಾಡಿದ ವಿದ್ಯಾರ್ಥಿಗಳು
ಇಬ್ಬರು ವಿದ್ಯಾರ್ಥಿಗಳ ಸೇರಿ ಪ್ರಿನ್ಸಿಪಾಲ್‌ರನ್ನೇ ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ. ಹಿಸಾರ್‌ನ ಕರ್ತಾರ್ ಮೆಮೋರಿಯಲ್ ಸೀನಿಯರ್ ಸೆಕೆಂಡರಿ ಶಾಲೆಯ ಮುಖ್ಯಸ್ಥ ಜಗಬೀರ್ ಸಿಂಗ್ ಅವರನ್ನು ಇಬ್ಬರು 12ನೇ ತರಗತಿಯ ವಿದ್ಯಾರ್ಥಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಗುರುಪೂರ್ಣಿಮೆಯಂದೇ ಶಿಕ್ಷಕರನ್ನು ಹತ್ಯೆ ಮಾಡಲಾಗಿದೆ.

ಹತ್ಯೆಗೀಡಾದ ಪ್ರಿನ್ಸಿಪಾಲ್

ಚಂಡೀಗಢ: ಇಬ್ಬರು ವಿದ್ಯಾರ್ಥಿಗಳು (Students) ಸೇರಿ ಪ್ರಿನ್ಸಿಪಾಲ್‌ರನ್ನೇ (Principal) ಕೊಲೆ ಮಾಡಿರುವ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ. ಹಿಸಾರ್‌ನ ಕರ್ತಾರ್ ಮೆಮೋರಿಯಲ್ ಸೀನಿಯರ್ ಸೆಕೆಂಡರಿ ಶಾಲೆಯ ಮುಖ್ಯಸ್ಥ ಜಗಬೀರ್ ಸಿಂಗ್ (Jagbir Singh) ಅವರನ್ನು 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಶಿಕ್ಷಕರನ್ನು ಗೌರವಿಸುವ ಗುರುಪೂರ್ಣಿಮೆ ದಿನಂದೇ ಈ ಕೃತ್ಯ ನಡೆದಿದೆ. ಕೂದಲು ಕತ್ತರಿಸಿ, ಸಭ್ಯವಾಗಿ ಕಾಣುವಂತೆ ಮತ್ತು ಶಾಲೆಯ ನಿಯಮಗಳನ್ನು ಪಾಲಿಸುವಂತೆ ಪ್ರಾಂಶುಪಾಲರು ತಿಳಿಸಿದ್ದಕ್ಕೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಇಬ್ಬರು ವಿದ್ಯಾರ್ಥಿಗಳು ಈ ಹಿಂದೆಯೂ ಪ್ರಾಂಶುಪಾಲರಿಗೆ ಬೆದರಿಕೆ ಹಾಕಿದ್ದರು ಮತ್ತು ಆತನ ಮಗನನ್ನು ಕೊಲೆ ಮಾಡುವ ಬೆದರಿಕೆ ಹಾಕಿ 10 ಲಕ್ಷ ರೂ. ಬೇಡಿಕೆಯಿಟ್ಟಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಈ ಬೆದರಿಕೆಯ ವಿಡಿಯೊವೊಂದು ಬಯಲಾಗಿದ್ದು, ಅದರಲ್ಲಿ ವಿದ್ಯಾರ್ಥಿಗಳು ಅಸಭ್ಯ ಪದಗಳನ್ನು ಬಳಸಿ, “10 ಲಕ್ಷ ರೂ. ದೊಡ್ಡ ಮೊತ್ತವಲ್ಲ, ನಿಮ್ಮ ಮಗನ ಜೀವ ಅಪಯದಲ್ಲಿದೆ” ಎಂದು ಹೇಳಿರುವುದು ಕೇಳಿಬಂದಿದೆ.
ಈ ಸುದ್ದಿಯನ್ನು ಓದಿ: Viral Video: ವೃದ್ಧಾಶ್ರಮದಲ್ಲಿ ಪ್ರೀತಿಸಿ ಮದುವೆಯಾದ ವೃದ್ಧ ದಂಪತಿ; ಏನಿದು ವೈರಲ್ ಸ್ಟೋರಿ!
“ವಿದ್ಯಾರ್ಥಿಗಳು ಕೆಲವು ಗ್ಯಾಂಗ್‌ನ ಸದಸ್ಯರಿಂದ ಪ್ರಭಾವಿತರಾಗಿರಬಹುದೆಂದು ತೋರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ ಪೇಜ್‌ಗಳಿವೆ. ವಿದ್ಯಾರ್ಥಿಗಳನ್ನು ಬಂಧಿಸಿದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ” ಎಂದು ಹನ್ಸಿಯ ಎಸ್‌ಪಿ ಅಮಿತ್ ಯಶವರ್ಧನ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಮಡಚಿ ಇಡಬಹುದಾದ ಚಾಕುವಿನಿಂದ ಜಗಬೀರ್ ಸಿಂಗ್ ಅವರನ್ನು ಹಲವು ಬಾರಿ ಇರಿದಿದ್ದಾರೆ. ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ವಿದ್ಯಾರ್ಥಿಗಳು ಚಾಕು ಎಸೆದು ಓಡಿಹೋಗುವುದು ಮತ್ತು ಸಿಬ್ಬಂದಿ ಜಗಬೀರ್ ಸಿಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವುದು ದಾಖಲಾಗಿದೆ. ಪೊಲೀಸರು ಚಾಕು ಮತ್ತು ದೃಶ್ಯಾವಳಿಯನ್ನು ವಶಪಡಿಸಿಕೊಂಡಿದ್ದಾರೆ.
ಈ ಘಟನೆಯಿಂದ ಹಿಸಾರ್‌ನ ಬಾಸ್ ಬಾದ್‌ಶಾಪುರ್ ಗ್ರಾಮದಲ್ಲಿ ಆತಂಕ ಮೂಡಿದೆ. ಶಾಲೆಯ ನಿಯಮಗಳನ್ನು ಪಾಲಿಸುವಂತೆ ತಿಳಿಸಿದ ಕಾರಣಕ್ಕೆ ಶಿಕ್ಷಕನ ಕೊಲೆಯಾದ ಘಟನೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತಿನ ವಿಷಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಓಡಿಹೋಗಿರುವ ವಿದ್ಯಾರ್ಥಿಗಳಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ. ಈ ಘಟನೆಯ ಹಿಂದಿನ ನಿಜವಾದ ಉದ್ದೇಶ ಮತ್ತು ಗ್ಯಾಂಗ್‌ನ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ.