Viral Video: ಪ್ರೀತಿಗೆ ವಯಸ್ಸಿನ ಹಂಗಿಲ್ಲ; ವೃದ್ಧಾಶ್ರಮದಲ್ಲಿ ಮದುವೆಯಾದ ವೃದ್ಧ ದಂಪತಿ
ಕೇರಳದ ಸರ್ಕಾರಿ ವೃದ್ಧಾಶ್ರಮದಲ್ಲಿ ವಿಜಯ ರಾಘವನ್ (79) ಮತ್ತು ಸುಲೋಚನಾ (75) ಎಂಬ ವೃದ್ಧರಿಬ್ಬರು ಭೇಟಿಯಾಗಿದ್ದು, ಕಾಲಾನಂತರದಲ್ಲಿ ಅವರ ಸ್ನೇಹ ಪ್ರೀತಿಗೆ ತಿರುಗಿ ಇದೀಗ ಹಸೆಮಣೆ ಏರಿದ್ದಾರೆ. ಇದೀಗ ಸಾಮಾಜಿಕ ನ್ಯಾಯ ಇಲಾಖೆಯ ಮೇಲ್ವಿಚಾರಣೆ ವಹಿಸಿರುವ ಸಚಿವೆ ಆರ್. ಬಿಂದು, ಮುಂದೆ ನಿಂತು ಈ ದಂಪತಿಗೆ ಮದುವೆ ಮಾಡಿಸಿದ್ದಾರೆ. ಅವರ ಮದುವೆಯ ಫೋಟೋಗಳು ಮತ್ತು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ತಿರುವನಂತಪುರಂ: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಉತ್ತಮ ನಿದರ್ಶನವೆಂಬಂತೆ ಕೇರಳದ (Kerala) ಸರ್ಕಾರಿ ವೃದ್ಧಾಶ್ರಮದಲ್ಲಿ ಭೇಟಿಯಾದ ಹಿರಿಯ ಜೀವಗಳು ಪ್ರೀತಿಸಿ ಮದುವೆಯಾಗಿದೆ. ಇದೀಗ ಅವರ ಮದುವೆಯ ಫೋಟೊಗಳು ಮತ್ತು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಅವರ ಈ ಹೃದಯಸ್ಪರ್ಶಿ ಪ್ರೇಮಕಥೆಯು ಸೋಶಿಯಲ್ ಮೀಡಿಯಾಗಳಲ್ಲಿ ಅನೇಕರ ಮನಸ್ಸನ್ನು ಗೆದ್ದು ವೈರಲ್ (Viral Video) ಆಗಿದೆ.
ವಿಜಯ ರಾಘವನ್ (79) ಮತ್ತು ಸುಲೋಚನಾ (75) ಇಬ್ಬರೂ ವೃದ್ಧಾಶ್ರಮದಲ್ಲಿ ಭೇಟಿಯಾಗಿ ಮದುವೆಯಾದ ದಂಪತಿ. ವಿಜಯ ರಾಘವನ್ 2019ರಿಂದ ವೃದ್ಧಾಶ್ರಮದಲ್ಲೇ ವಾಸಿಸುತ್ತಿದ್ದರು ಮತ್ತು ಸುಲೋಚನಾ 2024ರಲ್ಲಿ ಅಲ್ಲಿಗೆ ಬಂದಿದ್ದಾರೆ. ನಂತರ ಅವರಿಬ್ಬರು ಭೇಟಿಯಾಗಿ ಸ್ನೇಹಿತರಾದರು. ತಮ್ಮ ಕಷ್ಟಸುಖಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಹೀಗಿರುವಾಗ ಕಾಲಾನಂತರದಲ್ಲಿ, ಅವರ ಸ್ನೇಹ ಪ್ರೀತಿಗೆ ತಿರುಗಿತು. ಬಾಂಧವ್ಯ ಬೆಳೆದಂತೆ, ಅವರು ಮದುವೆಯಾಗಲು ನಿರ್ಧರಿಸಿದ್ದಾರೆ. ಜುಲೈ 7ರಂದು, ದಂಪತಿ ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾದರು. ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್. ಬಿಂದು, ನಗರದ ಮೇಯರ್ ಎಂ.ಕೆ. ವರ್ಗೀಸ್ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಈ ಮದುವೆ ನಡೆಯಿತು.
ಅವರ ಮದುವೆಯ ಫೋಟೊಗಳು ಮತ್ತು ವಿಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ವೈರಲ್ ಆಗಿದೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಶುಭಾಶಯ ತಿಳಿಸಿದ್ದಾರೆ. "ನಿಜವಾದ ಪ್ರೀತಿಗೆ ಸಮಯ ಅಥವಾ ವಯಸ್ಸಿನ ಮಿತಿಗಳಿಲ್ಲ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಪ್ರೀತಿಗೆ ಭರವಸೆ ಇದೆ" ಎಂದು ಬರೆದಿದ್ದಾರೆ. "ಇದನ್ನು ನೋಡಲು ತುಂಬಾ ಸಂತೋಷವಾಗುತ್ತದೆ" ಎಂದು ಮಗದೊಬ್ಬರು ಹೇಳಿದ್ದಾರೆ. "ನಮ್ಮಂತಹ ಜನರಿಗೆ ಇವರು ಸ್ಫೂರ್ತಿ" ಎಂದು ನೆಟ್ಟಿಗರು ತಿಳಿಸಿದ್ದಾರೆ.
ವರದಿ ಪ್ರಕಾರ, ದಂಪತಿ ಒಟ್ಟಿಗೆ ಇರಬೇಕೆಂಬ ಆಶಯವನ್ನು ಬೆಂಬಲಿಸಲು ಸಾಮಾಜಿಕ ನ್ಯಾಯ ಇಲಾಖೆಯು ಮದುವೆಯನ್ನು ಆಯೋಜಿಸಿತ್ತು. ಇಲಾಖೆಯ ಮೇಲ್ವಿಚಾರಣೆ ವಹಿಸಿರುವ ಸಚಿವೆ ಆರ್. ಬಿಂದು, ಮುಂದೆ ನಿಂತು ಈ ದಂಪತಿಗೆ ಮದುವೆ ಮಾಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral news: ಬೆಂಗಳೂರಿನ ಬೀದಿಯಲ್ಲಿ ಮಹಿಳೆಯರ ಒಪ್ಪಿಗೆಯಿಲ್ಲದೆ ವಿಡಿಯೊ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್: ಯುವತಿಯ ದೂರು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವೃದ್ಧ ದಂಪತಿ!
ಈ ಹಿಂದೆ ನಡೆದ ಮತ್ತೊಂದು ಹೃದಯಸ್ಪರ್ಶಿ ಕಥೆಯಲ್ಲಿ, ರಾಜಸ್ಥಾನದ ವೃದ್ಧ ದಂಪತಿ 70 ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಮಾ ಭಾಯಿ ಅಂಗರಿ (95) ಮತ್ತು ಜೀವಲಿ ದೇವಿ (90) ಡುಂಗರಪುರ ಜಿಲ್ಲೆಯ ಗಲಂದರ್ ಗ್ರಾಮದಲ್ಲಿ ತಮ್ಮ ಕುಟುಂಬ ಮತ್ತು ಸಮುದಾಯದ ಮುಂದೆ ಮದುವೆಯಾಗಿದ್ದಾರೆ. ಈ ದಂಪತಿ ಒಟ್ಟಿಗೆ ಜೀವನವನ್ನು ಕಟ್ಟಿಕೊಂಡು ಎಂಟು ಮಕ್ಕಳನ್ನು - ನಾಲ್ವರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳು ಮತ್ತು ಹಲವಾರು ಮೊಮ್ಮಕ್ಕಳನ್ನು ಹೊಂದಿದ್ದರು. ಅವರಲ್ಲಿ ನಾಲ್ವರು ಸರ್ಕಾರಿ ಉದ್ಯೋಗಿಗಳು. ರಮಾ ಭಾಯಿ ಮತ್ತು ಜೀವಲಿ ದೇವಿ ಸಾಂಪ್ರದಾಯಿಕ ಪದ್ಧತಿಗಳ ಮೂಲಕ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದಾಗ, ಅವರ ಮಕ್ಕಳು ಸಂತೋಷದಿಂದ ಅವರನ್ನು ಬೆಂಬಲಿಸಿ ಅವರ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ.