ಲಖನೌ, ಅ. 17: ಅನೈತಿಕ ಸಂಬಂಧಕ್ಕೆ (Illicit relationship) ಮತ್ತೊಂದು ಜೀವ ಬಲಿಯಾಗಿದೆ. ತಾಯಿ ಮತ್ತು ಮಗಳು ಸೇರಿ ಅಳಿಯನನ್ನೇ ಕೊಲೆ ಮಾಡಿದ್ದು, ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಬಾಘ್‌ಪತ್ ಜಿಲ್ಲೆಯಲ್ಲಿ(Baghpat district) ಈ ಘಟನೆ ನಡೆದಿದೆ. ಪ್ರೀತಿ, ದ್ರೋಹ, ಬ್ಲ್ಯಾಕ್ ಮೇಲ್ ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಬಿನೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜೀವನ ಗಲಿಯಾನ್ ಗ್ರಾಮದಲ್ಲಿ ಮೃತಪಟ್ಟ ಸೋನು ಸೈನಿಯ ಕೊಲೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಬೆಚ್ಚಿ ಬೀಳಿಸುವ ಅಂಶ ಗೊತ್ತಾಗಿದೆ.
ಸೋನು ಮತ್ತು ಆತನ ಅತ್ತೆ (ಪತ್ನಿಯ ತಾಯಿ) ಸರೋಜಾ ಮಧ್ಯೆ ಅನೈತಿಕ ಸಂಬಂಧ ಇತ್ತು. ಸೋನು ಅತ್ತೆಯೊಂದಿಗಿನ ಖಾಸಗಿ ಕ್ಷಣವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಅದನ್ನು ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದಾಗ ತಾಯಿ-ಮಗಳು ಸೇರಿ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿ ಕೊನೆಗೆ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾರೆ.
ಈ ಸುದ್ದಿಯನ್ನೂ ಓದಿ: Crime: ಅನೈತಿಕ ಸಂಬಂಧ; ಪ್ರಿಯಕರನೊಂದಿಗೆ ಸೇರಿ ಗಂಡನನ್ನೇ ಮುಗಿಸಿದ ನವವಧು
ಘಟನೆ ವಿವರ
ಇತ್ತೀಚೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಸೋನುವಿನ ಮೃತದೇಹ ಪತ್ತೆಯಾಗಿತ್ತು. ಸೋನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತೀರ್ಮಾನಿಸಿ ಅಂತ್ಯಕ್ರಿಯೆಯನ್ನೂ ನಡೆಸಲಾಯಿತು. ಆದರೆ ಆತನ ಸಹೋದರನಿಗೆ ಈ ಬಗ್ಗೆ ಸಂದೇಹ ಮೂಡಿದ್ದರಿಂದ ಪೋಲಿಸರಿಗೆ ದೂರು ನೀಡಿದ. ಅದಾದ ಬಳಿಕ ಅಪರಾಧ ಕೃತ್ಯದ ಒಂದೊಂದೇ ಪದರ ಬಿಚ್ಚತೊಡಗಿತು. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸೋನುವಿನ ಸಹೋದರ ಪೊಲೀಸರ ಬಳಿ ಸಂಶಯ ವ್ಯಕ್ತಪಡಿಸಿದ. ಬಳಿಕ ವಿಚಾರಣೆ ಕೈಗೆತ್ತಿಕೊಂಡ ಪೊಲೀಸರಿಗೆ ಸತ್ಯಾಂಶ ಗೊತ್ತಾಗತೊಡಗಿತು.
ವಿಡಿಯೊ ವೈರಲ್ ಮಾಡುವ ಬೆದರಿಕೆ
ಸೋನು ತನ್ನ ಅತ್ತೆ ಸರೋಜಾ ಜತೆ ಅನೈತಿಕ ಸಂಬಂಧ ಹೊಂದಿದ್ದ. ಇದನ್ನು ವಿಡಿಯೊ ಮಾಡಿಟ್ಟುಕೊಂಡಿದ್ದ. ಬಳಿಕ ಸರೋಜಾ ಹೆಸರಿನಲ್ಲಿದ್ದ 30 ಲಕ್ಷ ರೂ. ಮೌಲ್ಯದ ಜಮೀನನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಕೇಳಿದ್ದ. ಇಲ್ಲದಿದ್ದರೆ ಖಾಸಗಿ ವಿಡಿಯೊವನ್ನು, ರಸಮಯ ಕ್ಷಣಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ. ಕೊನೆಗೆ ಗತ್ಯಂತರವಿಲ್ಲದೆ ಸರೋಜಾ ಮಗಳ ಬಳಿ ಈ ವಿಚಾರವನ್ನು ಬಾಯ್ಬಿಟ್ಟಿದ್ದಳು.
ತಾಯಿ-ಮಗಳು ಸೇರಿ ಕೊಲೆ
ಬಳಿಕ ತಾಯಿ-ಮಗಳು ಸೇರಿ ಸೋನುವನ್ನು ಕೊಲೆ ಮಾಡಲು ನಿರ್ಧರಿಸಿದರು. ಅದರಂತೆ ಮೊದಲು ಸೋನುವಿಗೆ ನಿದ್ದೆ ಮಾತ್ರೆ ನೀಡಿದರು. ಆತ ಮೈಮರೆತು ನಿದ್ದೆ ಮಾಡಿದಾಗ ತಾಯಿ-ಮಗಳು ಹಗ್ಗದಿಂದ ಆತನ ಕುತ್ತಿಗೆ ಬಿದ್ದು ಉಸಿರುಗಟ್ಟಿಸಿ ಕೊಂದರು. ಕೊನೆಗೆ ಮೃತದೇಹವನ್ನು ತೀಗು ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾದರು.
ಬಾಘ್‌ಪತ್ ಎಎಸ್‌ಪಿ ಪ್ರವೀಣ್ ಸಿಂಗ್ ಚೌಹಾಣ್ ಈ ಬಗ್ಗೆ ಮಾಹಿತಿ ನೀಡಿ, ʼʼಸೋನುವಿನ ಸಹೋದರ ನೀಡಿದ ದೂರಿನ ಮೇರೆಗೆ ತನಿಖೆ ಆರಂಭಿಸಿದೆವು. ಸರೋಜಾ ಮತ್ತು ಆಕೆಯ ಮಗಳನ್ನು ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಗಿದೆ. ಸದ್ಯ ತಾಯಿ-ಮಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಇವರಲ್ಲದೆ ಈ ಕೃತ್ಯದ ಹಿಂದೆ ಬೇರೆ ಯಾರಾದರೂ ಇದ್ದಾರಾ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆʼʼ ಎಂದು ವಿವರಿಸಿದ್ದಾರೆ.