ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮಗಳೊಂದಿಗೆ ಮದುವೆ ನಿಶ್ಚಯವಾದ ವರನೊಂದಿಗೆ ಓಡಿ ಹೋದ ಮಹಿಳೆ; ಉತ್ತರ ಪ್ರದೇಶದಲ್ಲಿ ದೇಶವೇ ಅಚ್ಚರಿ ಪಡುವ ಘಟನೆ

ಮದುವೆ ನಿಗದಿಯಾದ ವಧುವಿನ ತಾಯಿಯೇ ವರನೊಂದಿಗೆ ಓಡಿ ಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಲಿಗಢದ ಮದ್ರಾಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾವಿ ಅಳಿಯನೊಂದಿಗೆ ಅತ್ತೆ ಓಡಿ ಹೋಗಿ ಸುದ್ದಿಯಾಗಿದ್ದಾಳೆ. ಜತೆಗೆ ಮಗಳ ಮದುವೆಗಾಗಿ ತಂದಿಟ್ಟಿದ್ದ ಒಡವೆ, ಹಣವನ್ನೂ ಕೊಂಡೊಯ್ದಿದ್ದಾಳೆ.

ಮಗಳೊಂದಿಗೆ ಮದುವೆ ನಿಶ್ಚಯವಾದ ವರನೊಂದಿಗೆ ಓಡಿ ಹೋದ ಮಹಿಳೆ

ಸಾಂದರ್ಭಿಕ ಚಿತ್ರ. -

Ramesh B Ramesh B Apr 9, 2025 5:04 PM

ಲಖನೌ: ಪ್ರೀತಿಗೆ ಕಣ್ಣಿಲ್ಲ ಎನ್ನುವ ಮಾತಿದೆ. ಈ ಮಾತನ್ನು ಸಾಬೀತುಪಡಿಸುವಂತಹ ಘಟನೆ ಆಗಾಗ ನಡೆಯುತ್ತಲೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆಯಂತಿದೆ ಈ ವಿಚಿತ್ರ ಪ್ರಸಂಗ. ಈ ಘಟನೆ ಕೇಳಿದರೆ ನೀವೂ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುತ್ತೀರಿ. ಯಾಕೆಂದರೆ ನೀವು ನಂಬಲೇ ಸಾಧ್ಯವಿಲ್ಲದ ಘಟನೆ ಇದಾಗಿದ್ದು, ದೇಶಾದ್ಯಂತ ಚರ್ಚೆ ಹುಟ್ಟು ಹಾಕಿದೆ. ಅಷ್ಟಕ್ಕೂ ಆಗಿದ್ದೇನೆಂದರೆ ಮದುವೆ ನಿಗದಿಯಾದ ವಧುವಿನ ತಾಯಿಯೇ ವರನೊಂದಿಗೆ ಓಡಿ ಹೋಗಿದ್ದಾಳೆ (Viral News). ಹೌದು, ಈ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಏನ್‌ ಕಾಲ ಬಂತಪ್ಪಾ ಎಂದು ಹಿರಿಯರು ಉದ್ಘಾರ ತೆಗೆದಿದ್ದಾರೆ.

ಆಲಿಗಢದ ಮದ್ರಾಕ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಭಾವಿ ಅಳಿಯನೊಂದಿಗೆ ಅತ್ತೆ ಓಡಿ ಹೋಗಿ ಸುದ್ದಿಯಾಗಿದ್ದಾಳೆ. ಜತೆಗೆ ಮಗಳ ಮದುವೆಗಾಗಿ ತಂದಿಟ್ಟಿದ್ದ ಒಡವೆ, ಹಣವನ್ನೂ ಕೊಂಡೊಯ್ದಿದ್ದಾಳೆ. ಮದುವೆಗೆ ಕೆಲವೇ ದಿನ ಬಾಕಿ ಉಳಿದಿದ್ದು, ಈ ಮಧ್ಯೆ ಇಂತಹದ್ದೊಂದು ಬೆಳವಣಿಗೆ ನಡೆದು ಎರಡೂ ಮನೆಯವರು ಕಂಗಾಲಾಗಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Seema Haider: ಪಾಕಿಸ್ತಾನದಿಂದ ಭಾರತಕ್ಕೆ ಓಡಿಬಂದಿದ್ದ ಸೀಮಾ ಹೈದರ್‌ ಮಗಳಿಗೆ 'ಭಾರತಿ ಮೀನಾ' ಎಂದು ನಾಮಕರಣ

ವರ ಭಾವಿ ಅತ್ತೆಯ ಮೇಲೆ ಅನುರಕ್ತನಾಗಿದ್ದು, ಮನೆಯವರು ತಮ್ಮ ಸಂಬಂಧವನ್ನು ಒಪ್ಪಲಾರರು ಎಂದು ತಿಳಿದು ಅವರು ಓಡಿ ಹೋಗಿದ್ದಾರೆ. ಸದ್ಯ ಇವರ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರನ್ನು ಪತ್ತೆ ಹಚ್ಚುವಂತೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಗಳ ಮದುವೆ ಮುರಿದು ಬಿದ್ದಿರುವುದು ಒಂದೆಡೆಯಾದರೆ, ಕೂಡಿಟ್ಟ ಹಣ, ಒಡವೆಗಳೊಂದಿಗೆ ಪತ್ನಿ ಭಾವಿ ಅಳಿಯನೊಂದಿಗೆ ಓಡಿ ಹೋಗಿರುವುದು ಮತ್ತೊಂದೆಡೆ-ಹೀಗೆ ವಧುವಿನ ತಂದೆ ಸಾಲು ಸಾಲು ಶಾಕ್‌ನಿಂದ ತತ್ತರಿಸಿದ್ದು, ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.

ಮಹಿಳೆ ಮಗಳ ಮದುವೆ ಕಾರ್ಯದಲ್ಲಿ ಉತ್ಯಾಹದಿಂದ ತೊಡಗಿಸಿಕೊಂಡಿದ್ದಳು. ಆದರೆ ಇದ್ದಕ್ಕಿದ್ದಂತೆ ಏನಾಯ್ತು ಗೊತ್ತಿಲ್ಲ, ಭಾವಿ ವರನೊಂದಿಗೆ ಓಡಿ ಹೋಗಿದ್ದಾಳೆ ಎಂದು ಕುಟುಂಬ‍ಸ್ಥರು ತಿಳಿಸಿದ್ದಾರೆ. ಮದುವೆ ನಿಶ್ಚಯವಾದ ಬಳಿಕ ಸಿದ್ಧತೆ ಪರಿಶೀಲನೆಯ ನೆಪದಲ್ಲಿ ವರ ಪದೇ ಪದೆ ಭಾವಿ ಪತ್ನಿಯ ಮನೆಗೆ ಆಗಮಿಸುತ್ತಿದ್ದ. ಈ ವೇಳೆ ಅತ್ತೆಯೊಂದಿಗೆ ಆತನ ಸಂಬಂಧ ಏರ್ಪಟ್ಟಿದೆ. ಅಲ್ಲದೆ ಆತ ಈ ಹಿಂದೆ ಅತ್ತೆಗೆ ಮೊಬೈಲ್‌ ಫೋನ್‌ ಕೂಡ ಕೊಡಿಸಿದ್ದ. ಇದು ಅನುಮಾನ ಹುಟ್ಟು ಹಾಕಿದ್ದರೂ ಯಾರೂ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.

ಏ. 16ರಂದು ಮದುವೆ ನಡೆಸಲು ದಿನಾಂಕ ನಿಗದಿ ಪಡಿಸಲಾಗಿತ್ತು. ಮದುವೆಯ ಆಮಂತ್ರಣ ಪತ್ರವನ್ನೂ ಹಂಚಲಾಗಿತ್ತು. ಈ ಮಧ್ಯೆ ಶಾಪಿಂಗ್‌ಗಾಗಿ ತೆರಳಿದ್ದ ಅತ್ತೆ ಮತ್ತು ಅಳಿಯ ಓಡಿ ಹೋಗಿದ್ದಾರೆ. ಅದಾದ ಬಳಿಕ ಇವರ ಸುಳಿವೇ ಸಿಕ್ಕಿಲ್ಲ. ಹಣ ಮತ್ತು ಒಡವೆ ನಾಪತ್ತೆಯಾದ ಹಿನ್ನೆಲೆಯಲ್ಲಿ ವಧುವಿನ ತಂಡಯ ಅನುಮಾನ ನಿಜವಾಗಿದ್ದರಿಂದ ದೂರು ಕೊಟ್ಟಿದ್ದಾರೆ. ಸದ್ಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು, ಮೊಬೈಲ್‌ ಲೊಕೇಷನ್‌ ಆಧಾರದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.

ನೆಟ್ಟಿಗರು ಶಾಕ್‌

ಘಟನೆ ತಿಳಿದು ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ. ಮಹಿಳೆ ಮತ್ತು ವರನ ವರ್ತನೆಗೆ ಕಿಡಿಕಾರಿದ್ದಾರೆ. ಇಂತಹವರನ್ನು ಒದ್ದು ಕಂಬಿ ಹಿಂದೆ ಕೂರಿಸಬೇಕು ಎಂದು ಆಗ್ರಹಿಸಿದ್ದಾರೆ.