ತಿರುವಣ್ಣಾಮಲೈ: ಹಣ್ಣು ಮಾರಾಟ ಮಾಡಲು ಬಂದ ಮಹಿಳೆಯ ( Andhra Woman) ಮೇಲೆ ತಮಿಳುನಾಡಿನ ಇಬ್ಬರು ಪೊಲೀಸ್ ಸಿಬ್ಬಂದಿ (Tamil Nadu police) ಅತ್ಯಾಚಾರ ಮಾಡಿರುವ ಘಟನೆ ತಿರುವಣ್ಣಾಮಲೈಯಲ್ಲಿ (Tiruvannamalai) ನಡೆದಿದೆ. ಆರೋಪಿಗಳಿಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿ ಬಂಧಿಸಲಾಗಿದೆ. ಆಂಧ್ರಪ್ರದೇಶದ ಮಹಿಳೆ ಹಣ್ಣುಗಳನ್ನು ಮಾರಾಟ ಮಾಡುವ ಸಲುವಾಗಿ ತಮಿಳುನಾಡಿನ ತಿರುವಣ್ಣಾಮಲೈಗೆ ಬಂದಿದ್ದಳು. ಆಕೆ ತಡರಾತ್ರಿ ರಸ್ತೆ ಬದಿ ಕಾಯುತ್ತಿದ್ದಾಗ ಆರೋಪಿಗಳಿಬ್ಬರು ಬಂದು ವಿಚಾರಿಸಿ ಬಲವಂತವಾಗಿ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಆಂಧ್ರಪ್ರದೇಶದಿಂದ ತಾಯಿಯೊಂದಿಗೆ ಹಣ್ಣು ಮಾರಾಟ ಮಾಡಲು ಬಂದಿದ್ದ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಸಂತ್ರಸ್ತೆ ಮತ್ತು ಆಕೆಯ ತಾಯಿ ಆಂಧ್ರಪ್ರದೇಶದಿಂದ ತಮಿಳುನಾಡಿನ ತಿರುವಣ್ಣಾಮಲೈಗೆ ಹಣ್ಣು ಮಾರಾಟ ಮಾಡಲೆಂದು ಬಂದಿದ್ದರು. ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಇಬ್ಬರು ಪೊಲೀಸರನ್ನು ಬಂಧಿಸಿ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ತೆ ಮತ್ತು ಆಕೆಯ ತಾಯಿ ಸೋಮವಾರ ತಿರುವಣ್ಣಾಮಲೈ ಗೆ ಬಂದಿದ್ದು, ತಡರಾತ್ರಿ ಮನೆಗೆ ಮರಳಲು ಇಬ್ಬರೂ ರಸ್ತೆ ಬದಿ ನಿಂತಿದ್ದರು. ಈ ವೇಳೆ ಗಸ್ತು ಕರ್ತವ್ಯದಲ್ಲಿದ್ದ ಕಾನ್ಸ್ ಟೇಬಲ್ ಗಳಾದ ಡಿ. ಸುರೇಶ್ ರಾಜ್ ಮತ್ತು ಪಿ. ಸುಂದರ್ ತಮ್ಮ ವಾಹನ ನಿಲ್ಲಿಸಿ ಅವರನ್ನು ತಡೆದಿದ್ದಾರೆ.
ಅನಂತರ ಮಹಿಳೆಯರನ್ನು ಬಲವಂತವಾಗಿ ಏಕಾಂತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಾನ್ಸ್ ಟೇಬಲ್ ಗಳಾದ ಡಿ. ಸುರೇಶ್ ರಾಜ್ ಮತ್ತು ಪಿ. ಸುಂದರ್ ಅವರನ್ನು ಬಂಧಿಸಲಾಗಿದ್ದು, ಇಬ್ಬರನ್ನೂ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಇಬ್ಬರಿಗೂ ಗರಿಷ್ಠ ಶಿಕ್ಷೆಯನ್ನು ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: BBK 12: ಮಲ್ಲಮ್ಮನ ಮುಂದೆ ವಿಚ್ಛೇದನ ಕುರಿತು ಮನಬಿಚ್ಚಿ ಮಾತನಾಡಿದ ಜಾನ್ವಿ: ಏನು ಹೇಳಿದ್ರು ನೋಡಿ
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆಯು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಇದನ್ನು ಖಂಡಿಸಿದ್ದು, ಇದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಕಪ್ಪು ಚುಕ್ಕಿ ಎಂದು ಹೇಳಿದ್ದಾರೆ. ಡಿಎಂಕೆ ಸರ್ಕಾರ ನಾಚಿಕೆ ಪಡಬೇಕು ಎಂದಿರುವ ಅವರು, ತಮಗೆ ಭದ್ರತೆ ನೀಡಬೇಕಾದ ಪೊಲೀಸರೇ ಇದನ್ನು ಮಾಡಿರುವ ಸ್ಟಾಲಿನ್ ಮಾದರಿ ಸರ್ಕಾರವನ್ನು ನಾನು ಖಂಡಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.