ಜೋಧ್‌ಪುರ: ಗ್ರೇಟರ್ ನೋಯ್ಡಾದಲ್ಲಿ (Greater Noida) ವರದಕ್ಷಿಣೆಗಾಗಿ (Dowry) ಮಹಿಳೆಗೆ ಬೆಂಕಿ ಹಚ್ಚಿದ ಘಟನೆಯ ನಂತರ, ರಾಜಸ್ಥಾನದ (Rajasthan) ಜೋಧ್‌ಪುರ (Jodhpur) ಜಿಲ್ಲೆಯ ಸರ್ನಾದ ಗ್ರಾಮದಲ್ಲಿ ಶುಕ್ರವಾರ ಶಾಲಾ ಶಿಕ್ಷಕಿ ಸಂಜು ಬಿಷ್ಣೋಯ್ (32) ತನ್ನ ಮೂರು ವರ್ಷದ ಮಗಳು ಯಶಸ್ವಿಯೊಂದಿಗೆ ಬೆಂಕಿ ಹಚ್ಚಿಕೊಂಡ ಘಟನೆ ನಡೆದಿದೆ. ಯಶಸ್ವಿ ಸ್ಥಳದಲ್ಲೇ ಮೃತಪಟ್ಟಳು, ಆದರೆ ಸಂಜು ಶನಿವಾರ ಬೆಳಗ್ಗೆ ಚಿಕಿತ್ಸೆಯ ವೇಳೆ ಕೊನೆಯುಸಿರೆಳೆದಿದ್ದಾರೆ. ಸಂಜು ಆತ್ಮಹತ್ಯೆಗು ಮುನ್ನ ಬರೆದ ನೋಟ್‌ನಲ್ಲಿ ಪತಿ ಮತ್ತು ಮಾವನಿಂದ ವರದಕ್ಷಿಣೆಗಾಗಿ ಕಿರುಕುಳವನ್ನು ಎದುರಿಸಿದ್ದಾಗಿ ಆರೋಪಿಸಿದ್ದಾರೆ.
ದಂಗಿಯಾವಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಮನೆಯಲ್ಲಿ ಸಂಜು ಶಾಲೆಯಿಂದ ಮಧ್ಯಾಹ್ನ ವಾಪಸ್ಸಾಗಿ, ಕುರ್ಚಿಯಲ್ಲಿ ಕುಳಿತು, ತನ್ನ ಮೇಲೆ ಮತ್ತು ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿಗೆ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ ಆಕೆಯ ಪತಿ ದಿಲೀಪ್ ಬಿಷ್ಣೋಯ್ ಮತ್ತು ಮಾವ ಮನೆಯಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.
ಈ ಸುದ್ದಿಯನ್ನು ಓದಿ: Viral Video: ಸತ್ತ ಸಾಕು ಬೆಕ್ಕನ್ನು ಫ್ರೀಜರ್‌ನಲ್ಲಿಟ್ಟ ಮಹಿಳೆ; ಶಾಕಿಂಗ್ ವಿಡಿಯೊ ವೈರಲ್
ಮನೆಯಿಂದ ಬರುತ್ತಿದ್ದ ಹೊಗೆಯನ್ನು ಗಮನಿಸಿ ಅಕ್ಕಪಕ್ಕದ ಮನೆಯವರು ಪೊಲೀಸರು ಮತ್ತು ಕುಟುಂಬಕ್ಕೆ ಮಾಹಿತಿ ನೀಡಿದರು. ಆದರೆ, ಇಬ್ಬರನ್ನೂ ರಕ್ಷಿಸಲಾಗಲಿಲ್ಲ. ಶನಿವಾರ ಸಂಜುವಿನ ಮರಣದ ನಂತರ, ಆಕೆಯ ಶವವನ್ನು ಕೊಂಡೊಯ್ಯಲು ಆಕೆಯ ತಂದೆ-ತಾಯಿ ಮತ್ತು ಮಾವನ ನಡುವೆ ವಿವಾದ ಉಂಟಾಯಿತು. ಶವಪರೀಕ್ಷೆಯ ನಂತರ, ಶವಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು ಮತ್ತು ತಾಯಿ-ಮಗಳನ್ನು ಒಟ್ಟಿಗೆ ಸಂಸ್ಕಾರ ಮಾಡಲಾಯಿತು.
ಸಂಜುವಿನ ತಂದೆ ಒಮರಾಮ್ ಬಿಷ್ಣೋಯ್, ತಮ್ಮ ಅಳಿಯ ದಿಲೀಪ್, ಆತನ ತಾಯಿ, ತಂದೆ, ಮತ್ತು ಗಣಪತ್ ಸಿಂಗ್ ಎಂಬ ವ್ಯಕ್ತಿ ಕಿರುಕುಳದಿಂದಾಗಿ ಸಂಜು ಆತ್ಮಹತ್ಯೆಗೆ ಶರಣಾದಳು ಎಂದು ದೂರಿದ್ದಾರೆ. ಈ ಆಧಾರದ ಮೇಲೆ ದಿಲೀಪ್ ಮತ್ತು ಆತನ ಮಾವನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ತಂಡದ ಸಹಾಯದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಸಂಜು ಅವರ ಮೊಬೈಲ್ ಫೋನ್ ಕೂಡ ವಶಪಡಿಸಿಕೊಳ್ಳಲಾಗಿದೆ.
ಈ ಘಟನೆ, ಆಗಸ್ಟ್ 21 ರಂದು ನೋಯ್ಡಾದಲ್ಲಿ ವರದಕ್ಷಿಣೆಗಾಗಿ ನಿಕ್ಕಿ ಎಂಬ ಮಹಿಳೆಗೆ ಬೆಂಕಿ ಹಚ್ಚಿದ ಘಟನೆಯನ್ನು ಹೋಲುತ್ತದೆ. ನಿಕ್ಕಿ ಆ ದಿನವೇ ಫೋರ್ಟಿಸ್ ಆಸ್ಪತ್ರೆಯಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ವರ್ಗಾಯಿಸುವಾಗ ಮೃತಪಟ್ಟಿದ್ದರು. ವರದಕ್ಷಿಣೆ ಕಿರುಕುಳದಿಂದಾಗಿ ಈ ದುರಂತಗಳು ಸಂಭವಿಸಿವೆ ಎಂಬ ಆರೋಪಗಳು ಸಮಾಜದಲ್ಲಿ ಆತಂಕ ಮೂಡಿಸಿವೆ.