Actor Darshan: ದರ್ಶನ್ ಜಾಮೀನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದಕ್ಕೆ ಇಲ್ಲಿವೆ ಕಾರಣಗಳು
Supreme Court: ದರ್ಶನ್ ಬೆನ್ನು ನೋವಿನ ನೆಪ ನೀಡಿ, ಅದಕ್ಕೆ ಸರ್ಜರಿ ಆಗಬೇಕು ಎಂಬ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಆದರೆ ಬೆನ್ನು ನೋವಿಗೆ ಯಾವುದೇ ಚಿಕಿತ್ಸೆ ಪಡೆದಿಲ್ಲ ಎಂದು ಸರ್ಕಾರಿ ವಕೀಲರು ಗಮನ ಸೆಳೆದಿದ್ದರು. ಕಳೆದ ಬಾರಿಯ ವಿಚಾರಣೆಗೆ ದರ್ಶನ್ ಪರ ವಕೀಲರಾಗಿದ್ದ ಕಪಿಲ್ ಸಿಬಲ್ ಹಾಜರಾಗಿರಲಿಲ್ಲ.


ಬೆಂಗಳೂರು : ನಟ ದರ್ಶನ್‌ಗೆ (Actor darshan) ಸುಪ್ರೀಂ ಕೋರ್ಟ್ (Supreme court) ಬಿಗ್ ಶಾಕ್ ನೀಡಿದ್ದು, ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ (Renuka Swamy murder case) ಪ್ರಕರಣಕ್ಕೆ ಸಂಬಂಧಪಟ್ಟಂತೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಿದೆ. ಕಳೆದ 2024 ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾ.ಜೆ.ಬಿ ಪರ್ದಿವಾಲಾ ಹಾಗೂ ನ್ಯಾ.ಆರ್.ಮಹದೇವನ್ ಅವರ ಪೀಠ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಸುಪ್ರೀಂ ಪೀಠದ ನ್ಯಾ.ಆರ್. ಮಹಾದೇವನ್ ಅವರು ತೀರ್ಪು ಓದಿದರು. ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ ಎಂದರು. ಹೈಕೋರ್ಟ್ ಆದೇಶಗಳ ಲೋಪವನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ಎತ್ತಿ ತೋರಿಸಿತು. ಅಲ್ಲದೆ ಶೀಘ್ರವಾಗಿ ಸಾಕ್ಷಿಗಳ ವಿಚಾರಣೆ ನಡೆಸಲು ಆದೇಶ ಹೊರಡಿಸಿದರು.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಜೈಲು ಸುಪರಿಂಟೆಂಡೆಂಟ್‌ನನ್ನು ಸಸ್ಪೆಂಡ್ ಮಾಡಬೇಕಿತ್ತು. ಇನ್ನು ಮುಂದೆ ರಾಜಾತಿಥ್ಯದ ಯಾವುದೇ ಫೋಟೋ ಕಂಡುಬಂದರೆ, ಆರೋಪಿ ಜೈಲಲ್ಲಿ ಕುಳಿತು ಸಿಗರೇಟ್ ಸೇದಿದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿ ಜಾಮೀನು ರದ್ದುಗೊಳಿಸಿದರು.
ದರ್ಶನ್ ಬೆನ್ನು ನೋವಿನ ನೆಪ ನೀಡಿ, ಅದಕ್ಕೆ ಸರ್ಜರಿ ಆಗಬೇಕು ಎಂಬ ಕಾರಣ ನೀಡಿ ಜಾಮೀನು ಪಡೆದಿದ್ದಾರೆ. ಆದರೆ ಬೆನ್ನು ನೋವಿಗೆ ಯಾವುದೇ ಚಿಕಿತ್ಸೆ ಪಡೆದಿಲ್ಲ ಮಾತ್ರವಲ್ಲ ಸರ್ಜರಿಯನ್ನೂ ಮಾಡಿಸಿಕೊಂಡಿಲ್ಲ. ಇದರ ನಡುವೆ ವಿದೇಶಕ್ಕೆ ತೆರಳಿ ಫಿಲಂ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಬೆನ್ನು ನೋವು ಎಂಬ ಕಾರಣ ಸಮಂಜಸವಾಗಿಲ್ಲ ಎಂದು ಸರ್ಕಾರಿ ವಕೀಲರು ವಾದ ಮಂಡಿಸಿದ್ದರು. ಈ ಕುರಿತು ಫೋಟೋ, ವಿಡಿಯೋ ಸಾಕ್ಷ್ಯ ಒದಗಿಸಿದ್ದರು.
ಕಳೆದ ವಿಚಾರಣೆಯ ವೇಳೆ ಸರ್ಕಾರದ ಪರ ವಕೀಲರು ಸುದೀರ್ಘವಾಗಿ ವಾದ ಮಂಡನೆ ಮಾಡಿದ್ದರು. ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡುವಾಗ ದರ್ಶನ್ ಸ್ಥಳದಲ್ಲಿ ಇದ್ದರು ಎಂಬುದು ರುಜುವಾತಾಗಿದೆ. ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಮಾಡಲಾಗಿದೆ. ಬಟ್ಟೆಯ ಮೇಲೆ ರಕ್ತದ ಕಲೆಗಳು ಸೇರಿದಂತೆ ಎಲ್ಲಾ ಸಾಕ್ಷಿಗಳನ್ನು ಸರ್ಕಾರದ ಪರ ವಕೀಲರು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮುಂದೆ ವಿವರಿಸಿದ್ದರು.
ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಸೆಷನ್ ಕೋರ್ಟಿಗೆ ತಲುಪಿದ ಕೂಡಲೇ ನಟ ದರ್ಶನ್ ಅವರನ್ನು ಬಂಧಿಸಲಾಗುತ್ತದೆ ಹಾಗೂ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಸದ್ಯ ದರ್ಶನ್ ಬೆಂಗಳೂರಿನಲ್ಲಿ ಇಲ್ಲ ಎಂದು ತಿಳಿದುಬಂದಿದೆ. ಪೊಲೀಸರ ಒಂದು ತಂಡ ಅವರನ್ನು ಟ್ರ್ಯಾಕ್ ಮಾಡುತ್ತಿದೆ. ಬೆನ್ನು ನೋವಿನ ನೆಪ ನೀಡಿ ಜಾಮೀನು ಪಡೆದಿದ್ದ ದರ್ಶನ್ ಡೆವಲ್ ಫಿಲಂನ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು.
ಕಳೆದ ಬಾರಿಯ ವಿಚಾರಣೆಗೆ ದರ್ಶನ್ ಪರ ವಕೀಲರಾಗಿದ್ದ ಕಪಿಲ್ ಸಿಬಲ್ ಹಾಜರಾಗಿರಲಿಲ್ಲ. ದರ್ಶನ್ ಪರ ವಕೀಲ ಸಿದ್ಧಾರ್ಥ ದವೆ ಹಾಜರಾಗಿದ್ದರು. ಹೈಕೋರ್ಟ್ ನೀಡಿರುವ ಜಾಮೀನಿನ ವಿಷಯದಲ್ಲಿ ನಾವೇಕೆ ಮಧ್ಯಪ್ರವೇಶ ಮಾಡಬಾರದೆಂದು ಹೇಳಿ ಎಂದು ದರ್ಶನ್ ಪರ ವಕೀಲ ಕಪಿಲ್ ಸಿಬಲ್ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ನಮಗೆ ಪೊಲೀಸರು ನೀಡಿರುವ ಸಾಕ್ಷ್ಯಗಳು ತೃಪ್ತಿ ತಂದಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಜತೆಗೆ ಹೈಕೋರ್ಟ್ ಜಾಮೀನು ನೀಡಲು ನೀಡಿರುವ ಕಾರಣಗಳು ಸಮಂಜಸವಾಗಿಲ್ಲ. ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಇದನ್ನೂ ಓದಿ: Actor Darshan: ನಟ ದರ್ಶನ್ ಬೇಲ್ ಕ್ಯಾನ್ಸಲ್; ದಾಸನಿಗೆ ಜೈಲೇ ಗತಿ! ಸುಪ್ರೀಂನಿಂದ ಮಹತ್ವದ ತೀರ್ಪು