Actor Darshan: ನಟ ದರ್ಶನ್ ಬೇಲ್ ಕ್ಯಾನ್ಸಲ್; ದಾಸನಿಗೆ ಜೈಲೇ ಗತಿ! ಸುಪ್ರೀಂನಿಂದ ಮಹತ್ವದ ತೀರ್ಪು
ದರ್ಶನ್‌ಗೆ ನೀಡಿದ ಜಾಮೀನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme court) ಗುರುವಾರ ಮಹತ್ವದ ತೀರ್ಪು ನೀಡಿದೆ. ದರ್ಶನ್ ಮತ್ತು ಪ್ರಕರಣದ ಇತರೆ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಡಿ.13ರಂದು ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.
-
Rakshita Karkera
Aug 14, 2025 10:46 AM
ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka swamy murder case) ಪ್ರಕರಣದಲ್ಲಿ ನಟ ದರ್ಶನ್‌ಗೆ (Actor Darshan) ಜಾಮೀನು ರದ್ದಾಗಿದ್ದು, ಅವರು ಮತ್ತೆ ಜೈಲಿಗೆ ಹೋಗುವುದು ಫಿಕ್ಸ್ ಆಗಿದೆ. ಹೈಕೋರ್ಟ್ ತೀರ್ಪಿನಲ್ಲಿ ದೋಷ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ಕ್ಯಾನ್ಸಲ್ ಮಾಡಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಲು ಸೂಚನೆ ನೀಡಿದೆ. ಜಾಮೀನು ಕ್ಯಾನ್ಸಲ್ ಆಗಿರುವ ಹಿನ್ನೆಲೆ ದರ್ಶನ್ ಬಳ್ಳಾರಿ ಜೈಲಿಗೆ ಮತ್ತು ಪವಿತ್ರಾ ಗೌಡ ಪರಪ್ಪನ ಅಗ್ರಹಾರಕ್ಕೆ ವಾಪಾಸಾಗಬೇಕಿದೆ. ಆ ಮೂಲಕ ಬೇಲ್ ರದ್ದುಗೊಳಿಸಲು ಪ್ರಯತ್ನಿಸಿದ ರಾಜ್ಯ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಿದೆ.
ಇನ್ನು ದರ್ಶನ್‌ಗೆ ಬೇಲ್ ನೀಡಿರುವ ಹೈಕೋರ್ಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಪ್ರಕರಣದಲ್ಲಿ ವಿವೇಚನೆ ಇಲ್ಲದೇ ಬೇಲ್ ನೀಡಲಾಗಿದೆ ಎಂದು ಹೇಳಿದೆ. ಅಲ್ಲದೇ ಪರಪ್ಪನ ಅಗ್ರಹಾರದಲ್ಲಿರುವಾಗ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದ ಜೈಲಾಧಿಕಾರಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅಲ್ಲದೇ ಈ ಪ್ರಕರಣವನ್ನು ಶೀಘ್ರವೇ ಇತ್ಯರ್ಥಗೊಳಿಸಿ ಎಂದು ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.
ದರ್ಶನ್ ಮತ್ತು ಪ್ರಕರಣದ ಇತರೆ 7 ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಕಳೆದ ವರ್ಷ ಡಿ.13ರಂದು ನೀಡಿದ್ದ ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು. ಈ ಅರ್ಜಿಯನ್ನು ಜು.24ರಂದು ವಿಚಾರಣೆ ನಡೆಸಿದ ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ನ್ಯಾ। ಆರ್. ಮಹಾದೇವನ್ ಅವರ ಪೀಠ, ತೀರ್ಪು ಕಾಯ್ದಿರಿಸಿತ್ತು.
ಜಾಮೀನು ರದ್ದತಿ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಜಾಮೀನು ರದ್ದತಿಯಾಗಲಿದೆ ಎಂದು ಚಿಂತಿಸುವಂತೆ ಮಾಡಿದೆ. 7 ಆರೋಪಿಗಳ ಜಾಮೀನು ನಿರ್ಧರಿಸುವಾಗ ಹೈಕೋರ್ಟ್ ಖುಲಾಸೆಗೊಳಿಸುವಂತೆ ಆದೇಶ ಹೊರಡಿಸಿದೆ. ಪ್ರತಿಯೊಂದು ಜಾಮೀನು ಕೊಡುವಾಗ ಹೈಕೋರ್ಟ್ ಇಂಥ ಆದೇಶವನ್ನೇ ನೀಡುತ್ತದೆಯೇ? ಎಂದು ಪ್ರಶ್ನಿಸಿತ್ತು.
ಜೊತೆಗೆ ವಿವೇಚನಾಧಿಕಾರವನ್ನು ಹೈಕೋರ್ಟ್ ತಪ್ಪಾಗಿ ಪ್ರಯೋಗಿಸಿದೆ. ಹೈಕೋರ್ಟ್ ನಿಜಕ್ಕೂ ತನ್ನ ಬುದ್ಧಿಯನ್ನು ಬಳಸಿದೆಯೇ? ಎಂದು ಅಸಮಾಧಾನ ಹೊರಹಾಕಿತ್ತು. ಹೈಕೋರ್ಟ್ ರೀತಿ ನಾವು ಮತ್ತದೇ ತಪ್ಪು ಮಾಡುವುದಿಲ್ಲ. ದೋಷಿ ಅಥವಾ ನಿರ್ದೋಷಿ ಎಂಬುದನ್ನು ನಾವು ನಿರ್ಧರಿಸುವುದಿಲ್ಲ. ಸೆಷನ್ಸ್ ಕೋರ್ಟ್ ನ್ಯಾಯಾಧೀಶರು ಇಂತಹ ತಪ್ಪು ಮಾಡಬಹುದು. ಆದರೆ ಹೈಕೋರ್ಟ್ ಜಡ್ಜ್ ಅಂತಹ ತಪ್ಪು ಮಾಡುತ್ತಾರೆಂದರೆ ಹೇಗೆ? ಎಂದು ಹೇಳಿತ್ತು.