Lehenga Sarees Trend 2025: ಮುಂಬರುವ ನವರಾತ್ರಿ ಸಂಭ್ರಮಕ್ಕೆ ಸಾಥ್ ನೀಡಲು ಸಜ್ಜಾದ ಲೆಹೆಂಗಾ ಸೀರೆಗಳು
Lehenga Sarees Trend 2025: ಮುಂಬರುವ ನವರಾತ್ರಿಯ ಸಂಭ್ರಮಕ್ಕೆ ಸಾಥ್ ನೀಡಲು ಲೆಹೆಂಗಾ ಶೈಲಿಯ ಸೀರೆಗಳು ಹಾಗೂ ಸೀರೆಯ ಲುಕ್ ನೀಡುವ ಲೆಹೆಂಗಾಗಳು ಸಜ್ಜಾಗಿವೆ. ಯಾವ್ಯಾವ ಬಗೆಯವು ಎಂಟ್ರಿ ನೀಡಿವೆ? ಈ ಎಲ್ಲದರ ಕುರಿತಂತೆ ಡಿಸೈನರ್‌ಗಳು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.
ಮುಂಬರುವ ನವರಾತ್ರಿ ಸಂಭ್ರಮಕ್ಕೆ ಸಾಥ್ ನೀಡಲು ಎಥ್ನಿಕ್ ಫ್ಯಾಷನ್‌ನಲ್ಲಿ ಇಂಡೋ-ವೆಸ್ಟರ್ನ್, ದೇಸಿ ಡಿಸೈನರ್ ಶೈಲಿಯ ಲೆಹೆಂಗಾ ಸೀರೆಗಳು ಮತ್ತು ಸ್ಯಾರಿ ಸ್ಟೈಲ್ ಲೆಹೆಂಗಾಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಇವುಗಳಲ್ಲಿ ರೆಡಿಮೇಡ್ ಲೆಹೆಂಗಾ ಸೀರೆಗಳು ಕಾಲೇಜು ಹುಡುಗಿಯರನ್ನು ಸೆಳೆದರೆ, ಸ್ಯಾರಿ ಶೈಲಿಯ ಲೆಹೆಂಗಾಗಳು ದೇಸಿ ಪ್ರಿಯ ಮಹಿಳೆಯರನ್ನು ಆಕರ್ಷಿಸಿವೆ. ಇನ್ನು ವಯಸ್ಸಿನ ಭೇದವಿಲ್ಲದೇ ಧರಿಸಬಹುದಾದ ಇಂಡೋ-ವೆಸ್ಟರ್ನ್ ಶೈಲಿಯ ಸೆಮಿ ಸೀರೆ ಡಿಸೈನ್‌ನ ಲೆಹೆಂಗಾಗಳು ಪಾರ್ಟಿ ಪ್ರಿಯರನ್ನು ಬರಸೆಳೆದಿವೆ ಎನ್ನುತ್ತಾರೆ ಡಿಸೈನರ್ಸ್.
ರೆಡಿಮೇಡ್ ಲೆಹೆಂಗಾ ಸೀರೆಗಳು
ಸೆಂಟರ್ ಫ್ಲೀಟ್ಸ್, ಅಂಬ್ರೆಲ್ಲಾ ಫ್ಲೀಟ್ಸ್, ರಫಲ್ಸ್ ಹೀಗೆ ನಾನಾ ವೆರೈಟಿ ವಿನ್ಯಾಸಗಳಲ್ಲಿ ಲಭ್ಯವಿರುವ ಲೆಹೆಂಗಾ ರೆಡಿಮೇಡ್ ಸೀರೆಗಳು ಮತ್ತಷ್ಟು ಹೊಸ ಡಿಸೈನ್‌ಗಳಲ್ಲಿ ಕಲರ್‌ಫುಲ್ ಶೇಡ್‌ಗಳಲ್ಲಿ ಎಂಟ್ರಿ ನೀಡಿವೆ. ನೋಡಲು ಥೇಟ್ ಲೆಹೆಂಗಾದಂತೆಯೇ ಕಾಣುವ ಈ ಉಡುಪು ಹೊಸ ವಿನ್ಯಾಸದಲ್ಲಿ ಊಹೆಗೂ ಮೀರಿದ ಡಿಸೈನ್‌ನಲ್ಲಿಆಗಮಿಸಿವೆ.
ಎಂಬ್ರಾಯ್ಡರಿ ನೆಟ್ ಲೆಹೆಂಗಾ ಸೀರೆಗಳು
ಈ ಬಗೆಯ ಲೆಹೆಂಗಾ ಸೀರೆಗಳ ಬಹುತೇಕ ಭಾಗ ಎಂಬ್ರಾಯ್ಡರಿ ವಿನ್ಯಾಸ ಹೊಂದಿರುತ್ತದೆ. ಪಲ್ಲು, ಸೆರಗನ್ನು ನೆಟ್ ಪ್ಲಸ್ ಎಂಬ್ರಾಯ್ಡರಿ ಫ್ಯಾಬ್ರಿಕ್‌ನಿಂದ ವಿನ್ಯಾಸಗೊಳಿಸಲಾಗಿರುತ್ತದೆ. ಕೆಲವಲ್ಲಿ ಫ್ಲೀಟ್ಸ್ ಭಾಗವೂ ಕೂಡ ನೆಟ್‌ನಿಂದ ಕೂಡಿರುತ್ತವೆ. ನೆಟ್ ಹಾಗೂ ಎಂಬ್ರಾಯ್ಡರಿ ಕಾಂಬಿನೇಷನ್ ಲೆಹೆಂಗಾ ಶೈಲಿ ಸೀರೆಗಳು ಗ್ರ್ಯಾಂಡ್ ಫಂಕ್ಷನ್‌ಗೆ ಸೂಟ್ ಆಗುತ್ತವೆ. ನೋಡಲು ಮನಮೋಹಕವಾಗಿ ಕಾಣುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀವಾ.
ವರ್ಕ್ ಲೆಹೆಂಗಾ ಸೀರೆಗಳು
ಹ್ಯಾಂಡ್‌ವರ್ಕ್ ಇಲ್ಲವೇ ಮೆಷಿನ್ ವರ್ಕ್ ಲೆಹೆಂಗಾ ಶೈಲಿ ಸೀರೆಗಳು ಸೂಕ್ಷ್ಮ ಕಲಾತ್ಮಕ ವಿನ್ಯಾಸ ಹೊಂದಿರುತ್ತವೆ. ಪಾರ್ಟಿ, ಮದುವೆ ಸಮಾರಂಭಗಳಿಗೆ ಧರಿಸಲು ಹೇಳಿ ಮಾಡಿಸಿದಂತಿರುತ್ತವೆ. ಸೆಲೆಬ್ರಿಟಿ ಲುಕ್ ನೀಡುವ ಇವು ಟ್ರೆಂಡಿಯಾಗಿ ಕಾಣುವಂತೆ ಮಾಡುತ್ತವೆ. ಸಿಂಪಲ್ ವರ್ಕ್‌ನಿಂದ ಹಿಡಿದು ತುಂಬಾ ಹೆವ್ವಿ ವರ್ಕ್‌ನ ನೆಟ್ಟೆಡ್ ಲೆಹೆಂಗಾ ಸೀರೆಗಳು ಈ ಸೀಸನ್‌ನಲ್ಲಿ ಭಾರಿ ಬೇಡಿಕೆ ಸೃಷ್ಟಿಸಿಕೊಂಡಿವೆ. ಅವುಗಳಲ್ಲಿ, ಹ್ಯಾಂಡ್ ಎಂಬ್ರಾಯ್ಡರಿ, ಬೀಡ್ಸ್, ರೇಶಮ್ ಎಂಬ್ರಾಯ್ಡರಿ, ಸ್ಟೋನ್ ವರ್ಕ್ ಡಿಸೈನ್ ಹೀಗೆ ಹಲವಾರು ಡಿಸೈನ್‌ಗಳಲ್ಲಿ ಕೆಂಪು, ಹಳದಿ, ಹಸಿರು, ನೀಲಿ ಸೇರಿದಂತೆ ವೈಬ್ರೆಂಟ್ ಕಲರ್‌ಗಳಲ್ಲಿ ಬಿಡುಗಡೆಗೊಂಡಿವೆ.
ಜಾರ್ಜೆಟ್ ಲೆಹೆಂಗಾ ಸೀರೆ
ಪ್ಲಂಪಿಯಾಗಿರುವವರು ಹಾಗೂ ಕೊಂಚ ಹೈ ಪರ್ಸನಾಲಿಟಿ ಹೊಂದಿರುವವರು ಜಾರ್ಜೆಟ್‌ನ ಲೆಹೆಂಗಾ ಸ್ಟೈಲ್ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮೈಲ್ಡ್ ಡಿಸೈನ್ ಹಾಗೂ ಶೇಡ್ಸ್‌ನವು ಹೆಚ್ಚು ಈ ಬಾರಿ ಬೇಡಿಕೆ ಪಡೆದಿವೆ. ಈ ಸೀರೆಯಲ್ಲಿ ಯಾವುದೇ ಹೆವ್ವಿ ವರ್ಕ್ ಡಿಸೈನ್ ಇರುವುದು ತೀರಾ ಕಡಿಮೆ. ಸಿಂಪಲ್ ಆಗಿದ್ದರೂ ಪ್ರಿಂಟ್ಸ್‌ನಿಂದ ಹೈಲೈಟಾಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.