ಕಾಬೂಲ್, ನ. 3: ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 7 ಮಂದಿ ಅಸುನೀಗಿ, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ (Afghanistan Earthquake). ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಅಫ್ಘಾನಿಸ್ತಾನದ ಮಜಾರ್-ಎ ಷರೀಫ್ (Mazar-e Sharif) ನಗರದಲ್ಲಿ ಸೋಮವಾರ (ನವೆಂಬರ್ 3) ಮುಂಜಾನೆ ಭೂಮಿ ಕಂಪಿಸಿದೆ ಎಂದು ಮೂಲಗಳು ತಿಳಿಸಿವೆ. ಮುಂಜಾನೆ 1 ಗಂಟೆಯ ಸುಮಾರಿಗೆ ಭೂಕಂಪ ಸಂಭವಿಸಿದ್ದು, ಮನೆಗಳು ನೆಲಕ್ಕುರುಳುವ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ದಾಖಲಾಗಿವೆ. ಭೂಕಂಪದ ಕೇಂದ್ರ ಬಿಂದು 28 ಕಿ.ಮೀ. ಆಳದಲ್ಲಿ ಪತ್ತೆಯಾಗಿದೆ ಎಂದು ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಮಜಾರ್-ಎ ಷರೀಫ್ ನಗರದಲ್ಲಿ ಸುಮಾರು 5,23,000 ಜನಸಂಖ್ಯೆ ಇದ್ದು, ಸಾವು-ನೋವಿನ ಸಂಖ್ಯೆ ಅಧಿಕವಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
"ಒಟ್ಟು 150 ಮಂದಿ ಗಾಯಗೊಂಡಿದ್ದಾರೆ ಮತ್ತು 7 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ ಮತ್ತು ಅವರನ್ನು ಆರೋಗ್ಯ ಕೇಂದ್ರಗಳಿಗೆ ವರ್ಗಾಯಿಸಲಾಗಿದೆ" ಎಂದು ಮಜಾರ್-ಎ ಷರೀಫ್ ಬಳಿಯ ಸಮಂಗನ್‌ನ ಆರೋಗ್ಯ ಇಲಾಖೆಯ ವಕ್ತಾರ ಸಮೀಮ್ ಜೋಯಂಡಾ ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Earthquake: ಅಫ್ಘಾನಿಸ್ತಾನ ಗಡಿಯಲ್ಲಿ 5.8 ತೀವ್ರತೆಯ ಭೂಕಂಪ : ದೆಹಲಿ, ಜಮ್ಮು ಸೇರಿ ಹಲವೆಡೆ ಕಂಪಿಸಿದ ಭೂಮಿ
ʼʼಘಟನಾ ಸ್ಥಳದಲ್ಲಿ ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದ್ದು ಅವಶೇಷಗಳಡಿ ಹಲವು ಮಂದಿ ಸಿಲುಕಿರುವ ಸಾಧ್ಯತೆಗಳಿವೆ. ಅರನ್ನು ರಕ್ಷಿಸಲಾಗುತ್ತಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆʼʼ ಎಂದು ಹೇಳಿದ್ದಾರೆ. ಭೂಕಂಪದಿಂದ ಜಾರ್-ಎ ಷರೀಫ್‌ನ ಪ್ರಮುಖ ಧಾರ್ಮಿಕ ಕೇಂದ್ರ ಹಾಜಿ ಜೈದ್ ಬ್ಲೂವಿನ ಒಂದು ಭಾಗ ನಾಶವಾಗಿದೆ ಎಂದು ವರದಿಯೊಂದಿ ಹೇಳಿದೆ. ಸಾವು-ನೋವು ಮತ್ತು ಹಾನಿಯ ವರದಿಗಳನ್ನು ನಂತರ ಹಂಚಿಕೊಳ್ಳಲಾಗುವುದು ಎಂದು ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ನಡೆಸಲಾಗುತ್ತಿರುವ ಕಾರ್ಯಾಚರಣೆಗಳ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ದೃಶ್ಯ:
ಅಫ್ಘಾನಿಸ್ತಾನದಲ್ಲಿ ಪದೇ ಪದೆ ಭೂಕಂಪ ಸಂಭವಿಸುತ್ತಿದ್ದು, ಆಗಸ್ಟ್‌ನಲ್ಲಿ ಸುಮಾರು 1 ಸಾವಿರ ಮಂದಿ ಸಾವನ್ನಪ್ಪಿ, ನೂರಾರು ಮಂದಿ ನಿರಾಶ್ರಿತರಾಗಿದ್ದರು. 2023ರಲ್ಲಿ ಸಂಭವಿಸಿದ ಭೂಕಂಪವು ಕನಿಷ್ಠ 1,000 ಜನರನ್ನು ಬಲಿ ತೆಗೆದುಕೊಂಡಿತ್ತು. ಇನ್ನು 2015ರಲ್ಲಿ ಈಶಾನ್ಯ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪವು ಅಫ್ಘಾನಿಸ್ತಾನ ಮತ್ತು ಉತ್ತರ ಪಾಕಿಸ್ತಾನದಲ್ಲಿ ವ್ಯಾಪಕ ಹಾನಿಯನ್ನು ಉಂಟು ಮಾಡಿತ್ತು.
ಈ ವರ್ಷದ ಏಪ್ರಿಲ್‌ನಲ್ಲಿ ಅಫ್ಘಾನಿಸ್ತಾನ-ತಜಿಕಿಸ್ತಾನ್ ಗಡಿಯಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರ ಪರಿಣಾಮ ಜಮ್ಮು, ಶ್ರೀನಗರ, ಪಂಜಾಬ್ ಮತ್ತು ದೆಹಲಿ-ಎನ್‌ಸಿಆರ್‌ನ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವವಾಗಿತ್ತು ಎಂದು ಭೂ ವಿಜ್ಞಾನಿಗಳು ತಿಳಿಸಿದ್ದರು. ಪಾಕಿಸ್ತಾನದ ಇಸ್ಲಾಮಾಬಾದ್, ಲಾಹೋರ್ ಮತ್ತು ದೇಶದ ಕೆಲವು ಭಾಗಗಳಲ್ಲಿಯೂ ಭೂಕಂಪನದ ಅನುಭವವಾಗಿತ್ತು. ಅದೇ ವೇಳೆ ಅಸ್ಸಾಂನ ನಾಗಾಂವ್‌ನಲ್ಲಿ 2.9 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪನವು 10 ಕಿ.ಮೀ ಆಳದಲ್ಲಿ ಸಂಭವಿಸಿದದು, ಯಾವುದೇ ಹಾನಿಯಾಗಿರಲಿಲ್ಲ.