ವಾಷಿಂಗ್ಟನ್: ವಲಸೆ ಮತ್ತು ಯುಎಸ್ (America) ವೀಸಾಗಳಿಗೆ ಸಂಬಂಧಿಸಿದಂತೆ (H-1B Visa) ನಡೆಯುತ್ತಿರುವ ಸಮಸ್ಯೆಗಳ ನಡುವೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ H-1B ವೀಸಾಗಳಿಗೆ ಹೊಸ $100,000 ಶುಲ್ಕವನ್ನು ಪರಿಚಯಿಸಿದ್ದಾರೆ. ಶ್ವೇತಭವನದ ಅಧಿಕೃತ ಪ್ರಕಟಣೆಯ ಪ್ರಕಾರ , ಈ ಹೊಸ ಘೋಷಣೆಯು H-1B ವೀಸಾ ಅರ್ಜಿದಾರರನ್ನು ಪ್ರಾಯೋಜಿಸಲು ಕಂಪನಿಗಳು ಪಾವತಿಸುವ ಶುಲ್ಕವನ್ನು $100,000 ಕ್ಕೆ ಅಂದರೆ ಭಾರತೀಯ ರೂಪಾಯಿಯಲ್ಲಿ 90 ಲಕ್ಷ ರೂ. ಆಗಲಿದೆ. ಇದು ಭಾರತ ಮತ್ತು ಚೀನಾದ ನುರಿತ ಕೆಲಸಗಾರರ ಮೇಲೆ ಹೆಚ್ಚು ಅವಲಂಬಿತವಾಗಿರುವ ತಂತ್ರಜ್ಞಾನ ವಲಯಕ್ಕೆ ಗಮನಾರ್ಹ ಹೊಡೆತವನ್ನು ನೀಡುವ ಸಾಧ್ಯತೆಯಿದೆ.
ಶುಕ್ರವಾರ ಓವಲ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್ ಆಡಳಿತ, H-1B ವೀಸಾಗಳು ವಿದೇಶಿಯರನ್ನು ಉನ್ನತ ಕೌಶಲ್ಯದ ಉದ್ಯೋಗಗಳಿಗೆ ಅಮೆರಿಕಗೆ ಕರೆತರಲು ಉದ್ದೇಶಿಸಿವೆ. ಅಮೆರಿಕ ಉದ್ಯೋಗಿಗಳಿಗೆ ಹೆಚ್ಚಿನ ಸಂಬಳ ಕೊಟ್ಟು ನೇಮಿಸಿಕೊಳ್ಳುವುದು ಟೆಕ್ ಕಂಪನಿಗಳಿಗೆ ಕಷ್ಟ. ಹೀಗಾಗಿ, ಕಡಿಮೆ ಸಂಬಳಕ್ಕೆ ನುರಿತ, ಕೌಶಲಪೂರ್ಣ ವಿದೇಶಿ ಉದ್ಯೋಗಿಗಳನ್ನು ಕರೆತಂದು ಕೆಲಸ ನೀಡುತ್ತಿವೆ. ಅದಕ್ಕಾಗಿ ಹೆಚ್-1ಬಿ ವೀಸಾ ಕ್ರಮ ಅಮೆರಿಕದಲ್ಲಿ ಜಾರಿಯಲ್ಲಿದೆ. ಈಗ, ಈ ವೀಸಾ ಶುಲ್ಕದಲ್ಲಿ ಭಾರಿ ಏರಿಕೆ ಮಾಡಿರುವುದರಿಂದ ಇತರೆ ದೇಶಗಳಿಂದ ನುರಿತರನ್ನು ಕರೆತರಲು ಅರ್ಜಿ ಸಲ್ಲಿಸುವ ಕಂಪನಿಗಳು ವಾರ್ಷಿಕವಾಗಿ ಪ್ರತಿ ವೀಸಾಕ್ಕೆ 1,00,000 ಡಾಲರ್ ಪಾವತಿಸಬೇಕಾಗುತ್ತದೆ.
H-1B ವೀಸಾ ಎಂದರೇನು?
H-1B ವೀಸಾ ಅಮೆರಿಕದ ತಾತ್ಕಾಲಿಕ ವೀಸಾ ಆಗಿದ್ದು, ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ವೃತ್ತಿಪರರನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದನ್ನು 1990 ರಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಕ್ಷೇತ್ರಗಳಲ್ಲಿ ಪದವಿ ಅಥವಾ ಅದಕ್ಕಿಂತ ಹೆಚ್ಚಿನ ಪದವಿ ಹೊಂದಿರುವ ಜನರಿಗೆ ರಚಿಸಲಾಯಿತು. ಆರಂಭದಲ್ಲಿ ವೀಸಾವನ್ನು ಮೂರು ವರ್ಷಗಳವರೆಗೆ ನೀಡಲಾಗುತ್ತದೆ, ಆದರೆ ಗರಿಷ್ಠ ಆರು ವರ್ಷಗಳವರೆಗೆ ವಿಸ್ತರಿಸಬಹುದು. ಗ್ರೀನ್ ಕಾರ್ಡ್ (ಶಾಶ್ವತ ನಿವಾಸ) ಪಡೆದವರಿಗೆ, ವೀಸಾವನ್ನು ಅನಿರ್ದಿಷ್ಟವಾಗಿ ನವೀಕರಿಸಬಹುದು. H-1B ವೀಸಾ ಹೊಂದಿರುವವರಲ್ಲಿ ಭಾರತೀಯರು ನಿರಂತರವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರಿ ಮಾಹಿತಿಯ ಪ್ರಕಾರ, ಕಳೆದ ವರ್ಷ ಭಾರತವು H-1B ವೀಸಾಗಳ ಅತಿದೊಡ್ಡ ಫಲಾನುಭವಿಯಾಗಿದ್ದು, ಅನುಮೋದಿತ ಫಲಾನುಭವಿಗಳಲ್ಲಿ ಶೇ. 71 ರಷ್ಟಿದೆ.
ಈ ಸುದ್ದಿಯನ್ನೂ ಓದಿ: Trade Deal: ಅಮೆರಿಕ-ಭಾರತ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗೆ ಮರುಜೀವ; ಎರಡೂ ದೇಶಗಳಿಂದ ಸಕಾರಾತ್ಮಕ ಸ್ಪಂದನೆ
H-1B ವೀಸಾ ಅಭ್ಯರ್ಥಿಗಳನ್ನು ಪ್ರಾಯೋಜಿಸಲು ಹೆಚ್ಚಿದ ಶುಲ್ಕಗಳ ಹೊರತಾಗಿ, ಅಮೆರಿಕ ಸರ್ಕಾರವು ಅಕ್ಟೋಬರ್ 2025 ರಿಂದ ಪೌರತ್ವ ಅರ್ಜಿದಾರರಿಗೆ ಹೆಚ್ಚು ಕಷ್ಟಕರವಾದ ಪರೀಕ್ಷೆಯನ್ನು ಜಾರಿಗೆ ತರಲು ಸಜ್ಜಾಗಿದೆ. ಇದರ ಅಡಿಯಲ್ಲಿ, ಪ್ರಶ್ನೆಗಳ ಸಂಖ್ಯೆಯನ್ನು 128 ಕ್ಕೆ ಹೆಚ್ಚಿಸಲಾಗುವುದು ಮತ್ತು ಅರ್ಜಿದಾರರು 20 ರಲ್ಲಿ ಕನಿಷ್ಠ 12 ಸರಿಯಾದ ಉತ್ತರಗಳನ್ನು ನೀಡಬೇಕು.