ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Trade Deal: ಅಮೆರಿಕ-ಭಾರತ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗೆ ಮರುಜೀವ; ಎರಡೂ ದೇಶಗಳಿಂದ ಸಕಾರಾತ್ಮಕ ಸ್ಪಂದನೆ

ಅಮೆರಿಕ ಭಾರತದ ಉತ್ಪನ್ನಗಳಿಗೆ ಶೇ. 50ರಷ್ಟು ಪ್ರತಿಸುಂಕ ವಿಧಿಸಿದ ಬಳಿಕ ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ಆರಂಭವಾಗಿದೆ. ಮಾತುಕತೆ ಸಕಾರಾತ್ಮಕವಾಗಿ ಸಾಗಿದ್ದು ನಿರೀಕ್ಷೆ ಮೂಡಿಸಿದೆ ಎಂದು ಎರಡೂ ದೇಶಗಳು ತಿಳಿಸಿವೆ.

ಅಮೆರಿಕ-ಭಾರತ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗೆ ಮರುಜೀವ

-

Ramesh B Ramesh B Sep 16, 2025 9:18 PM

ದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಭಾರತದ ಉತ್ಪನ್ನಗಳಿಗೆ ಶೇ. 50ರಷ್ಟು ಪ್ರತಿಸುಂಕ ವಿಧಿಸಿದ ಬಳಿಕ ಇದೇ ಮೊದಲ ಬಾರಿಗೆ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮಾತುಕತೆ ಆರಂಭವಾಗಿದೆ (Trade Deal). ಮಾತುಕತೆ ಸಕಾರಾತ್ಮಕವಾಗಿ ಸಾಗಿದ್ದು ನಿರೀಕ್ಷೆ ಮೂಡಿಸಿದೆ ಎಂದು ಎರಡೂ ದೇಶಗಳು ತಿಳಿಸಿವೆ. ಎರಡೂ ದೇಶಗಳ ನಡುವಿನ ಮಹತ್ವದ ವ್ಯಾಪಾರ ಒಪ್ಪಂದವನ್ನುಅಂತಿಮಗೊಳಿಸುವ ಮಾತುಕತೆಗಾಗಿ ಅಮೆರಿಕದ ವ್ಯಾಪಾರ ಪ್ರತಿನಿಧಿಯಾಗಿ ಬ್ರೆಂಡನ್‌ ಲಿಂಚ್‌ (Brendan Lynch) ಭಾರತಕ್ಕೆ ಆಗಮಿಸಿದ್ದಾರೆ.

"ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳ ಮುಂದಿನ ಹಂತದ ಕುರಿತು ಚರ್ಚಿಸಲು ಸೆಪ್ಟೆಂಬರ್ 16ರಂದು ದೆಹಲಿಯಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ ಬ್ರೆಂಡನ್ ಲಿಂಚ್ ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರ್‌ವಾಲ್‌ ಅವರೊಂದಿಗೆ ನಡೆಸಿದ ಸಭೆ ಸಕಾರಾತ್ಮಕವಾಗಿತ್ತು" ಎಂದು ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಇದಾದ ಸ್ವಲ್ಪ ಸಮಯದ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವೂ ಮಾತುಕತೆ ಸಕಾರಾತ್ಮಕವಾಗಿ ನಡೆದಿದೆ ಎಂದು ಹೇಳಿದೆ. ಎರಡೂ ದೇಶಗಳು ವ್ಯಾಪಾರ ಒಪ್ಪಂದವನ್ನು ಪುನರಾರಂಭಿಸಲು ಆಸಕ್ತಿ ವಹಿಸಿವೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: UPI New Rules: ಫೋನ್‌ಪೇ, ಗೂಗಲ್ ಪೇ ಬಳಕೆದಾರರಿಗೆ ಬಿಗ್‌ ಅಪ್ಡೇಟ್‌! ಇಂದಿನಿಂದ ಹಲವು ನಿಯಮಗಳಲ್ಲಿ ಬದಲಾವಣೆ

"ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರದ ಪ್ರಾಮುಖ್ಯತೆಯನ್ನು ಮನಗಂಡು ಎರಡೂ ದೇಶಗಳು ಸಕಾರಾತ್ಮಕವಾಗಿ ಮಾತುಕತೆ ನಡೆಸಿವೆ. ಪರಸ್ಪರ ಪ್ರಯೋಜನಕಾರಿ ವ್ಯಾಪಾರ ಒಪ್ಪಂದಕ್ಕೆ ಬರಲು ಮುಂದಾಗಿವೆʼʼ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ.

ಭಾರತೀಯ ಸರಕುಗಳ ಮೇಲೆ ಅಮೆರಿಕ ಏಕಪಕ್ಷೀಯವಾಗಿ ಶೇ. 50ರಷ್ಟು ಆಮದು ಸುಂಕ ವಿಧಿಸಿದ ನಂತರ ಎರಡೂ ದೇಶಗಳ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ನಿಂತುಹೋಗಿತ್ತು. ಇತ್ತೀಚೆಗೆ ಪ್ರಧಾನಿ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌ ಸೋಶಿಯಲ್‌ ಮೀಡಿಯಾದಲ್ಲಿ ಸಕಾರಾತ್ಮಕ ಪೋಸ್ಟ್‌ ಹಂಚಿಕೊಂಡ ಬಳಿಕ ವ್ಯಾಪಾರ ಒಪ್ಪಂದದ ಬಗ್ಗೆ ನಿರೀಕ್ಷೆ ಗರಿಗೆದರಿದೆ.

ಮುಂದೂಡಲ್ಪಟ್ಟ 6ನೇ ಸುತ್ತಿನ ಮಾತುಕತೆ

ಒಪ್ಪಂದಕ್ಕಾಗಿ ಇದುವರೆಗೆ 5 ಸುತ್ತಿನ ಮಾತುಕತೆ ನಡೆದಿವೆ. ಆಗಸ್ಟ್‌ ಕೊನೆ ವಾರದಲ್ಲಿ 6ನೇ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಟ್ರಂಪ್‌ ಶೇ. 50ರಷ್ಟು ಸುಂಕ ಘೋಷಿಸಿದ್ದರಿಂದ ಇದು ಮುಂದೂಡಲ್ಪಟ್ಟಿತ್ತು.

ರಾಜೇಶ್ ಅಗರ್‌ವಾಲ್‌ ಹೇಳಿದ್ದೇನು?

ʼʼಸೆಪ್ಟೆಂಬರ್‌ 16ರಂದು ನಡೆಯಲಿರುವುದು 6ನೇ ಸುತ್ತಿನ ಮಾತುಕತೆಯಲ್ಲ. ಆದರೆ ಇದು ವ್ಯಾಪಾರದ ಕುರಿತಾದ ಸಮಾಲೋಚನೆಯಾಗಲಿದೆ. ವ್ಯಾಪಾರ ಮಾತುಕತೆಯನ್ನು ಮುಂದಕ್ಕೆ ಹೇಗೆ ತೆಗದುಕೊಂಡು ಹೋಗಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಲಿದೆʼʼ ಎಂದು ರಾಜೇಶ್ ಅಗರ್‌ವಾಲ್‌ ಈ ಹಿಂದೆಯೇ ಹೇಳಿದ್ದರು.

ಬ್ರೆಂಡನ್‌ ಲಿಂಚ್‌ ಹಿನ್ನೆಲೆ

ಅಮೆರಿಕನ್‌ ಟ್ರೇಡ್‌ ರೆಪ್ರಸೆಂಟೇಟಿವ್‌ ಬ್ರೆಂಡನ್‌ ಲಿಂಚ್‌ 15 ದೇಶಗಳಿಗೆ ಸಂಬಂಧಿಸಿದ ಅಮರಿಕ ವ್ಯಾಪಾರ ನೀತಿಯ ಅಭಿವೃದ್ಧಿ ಮತ್ತು ಅನುಷ್ಟಾನದ ಮೇಲ್ವಿಚಾರಣೆ ನಡೆಸುತ್ತಾರೆ. ಹೀಗಾಗಿ ಭಾರತ-ಅಮೆರಿಕ ವ್ಯಾಪಾರ ಒಪ್ಪಿಂದ ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.