ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ ನಗರದ ಜನರು ಜನನಿಬಿಡ ರಸ್ತೆಯಲ್ಲಿ ಅನಿರೀಕ್ಷಿತ ಪ್ರತಿಮೆಯೊಂದನ್ನು ನೋಡಿ ಅಚ್ಚರಿಗೊಳಗಾಗಿದ್ದಾರೆ. ಮ್ಯಾನ್‌ಹ್ಯಾಟನ್‌ನ ಜನನಿಬಿಡ ರಸ್ತೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರ ಪ್ರಕಾಶಮಾನವಾದ ಕೆಂಪು ಪ್ರತಿಮೆ ಮ್ಯಾನ್‌ಹೋಲ್‌ನಿಂದ ಎದ್ದು ಬಂದು ನಿಂತಂತೆ ಕಂಡುಬಂದಿತು. ಡೊನಾಲ್ಡ್ ಎಂಬ ಹೆಸರಿನಲ್ಲಿ ಅಮೆರಿಕ ಅಧ್ಯಕ್ಷರ ಕೆಂಪು ಬಣ್ಣದ ಪ್ರತಿಮೆಯನ್ನು ಫ್ರೆಂಚ್ ಬೀದಿ ಕಲಾವಿದ ಜೇಮ್ಸ್ ಕೊಲೊಮಿನಾ ಅವರು ರಹಸ್ಯವಾಗಿ ಸ್ಥಾಪಿಸಿದರು. ಇದು ಟ್ರಂಪ್ ಟವರ್‌ನಿಂದ ಸರಿಸುಮಾರು ಒಂದು ಮೈಲಿ ದೂರದಲ್ಲಿರುವ ಪೂರ್ವ 42ನೇ ಬೀದಿ ಮತ್ತು 2 ನೇ ಅವೆನ್ಯೂದ ಕಾರ್ನರ್‌ನಲ್ಲಿ ಸ್ಥಾಪಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಪೂರ್ವ ಸೂಚನೆ ಇಲ್ಲದೆ ಇರಿಸಲಾಗುವ, ಕೆಂಪು ಶಿಲ್ಪಗಳಿಗೆ ಹೆಸರುವಾಸಿಯಾದ ಕೊಲೊಮಿನಾ ಅವರು ಶಿಲ್ಪವನ್ನು ಆಯ್ಕೆಮಾಡಿದ ಸ್ಥಳವು ಉದ್ದೇಶಪೂರ್ವಕವಾಗಿತ್ತು ಎಂದು ತಿಳಿಸಿದರು. ತಾನುನು ಈ ಶಿಲ್ಪವನ್ನು ನ್ಯೂಯಾರ್ಕ್‌ನಲ್ಲಿ ಸ್ಥಾಪಿಸಿದ್ದೇನೆ, ಏಕೆಂದರೆ ಇಲ್ಲಿಯೇ ಟ್ರಂಪ್ ತನ್ನ ಸಾಮ್ರಾಜ್ಯವನ್ನು, ತನ್ನ ಕತೆಗಳನ್ನು ನಿರ್ಮಿಸಿಕೊಂಡರು ಎಂದು ಹೇಳಿದರು.
ರಾಳದಿಂದ ಮಾಡಲ್ಪಟ್ಟ ಈ ಪ್ರಕಾಶಮಾನವಾದ ಕೆಂಪು ಶಿಲ್ಪವು ಟ್ರಂಪ್ ಅವರನ್ನು ಸೊಂಟದಿಂದ ಮೇಲಕ್ಕೆ, ಮ್ಯಾನ್‌ಹೋಲ್‌ನಿಂದ ಹೊರಬರುತ್ತಿರುವಂತೆ ಚಿತ್ರಿಸಿದೆ. ಇದು ಶಿಲ್ಪದ ಒಂದು ಭಾಗವೂ ಆಗಿದೆ. ಸೂಟ್ ಮತ್ತು ಟೈ ಧರಿಸಿದ ಈ ಟ್ರಂಪ್ ಪ್ರತಿಮೆಯು ಗಂಭೀರ ನೋಟ ಮತ್ತು ಗಗನಚುಂಬಿ ಕಟ್ಟಡವನ್ನು ನೋಡುತ್ತಿರುವಂತೆ ಚಿತ್ರಿಸಲಾಗಿದೆ. ಮ್ಯಾನ್‌ಹೋಲ್ ಕವರ್ ಮುಚ್ಚಳದ ಕೆಳಗೆ, ಒಂದು ಸಣ್ಣ ಕೆಂಪು ಇಲಿ ಹೊರಕ್ಕೆ ಇಣುಕುವಂತಿರುವ ಪುಟ್ಟ ಪ್ರತಿಮೆಯೂ ಇದೆ.
ಈ ಸುದ್ದಿಯನ್ನೂ ಓದಿ: Modi-Trump Meet: 5ನೇ ಜನರೇಷನ್ ಜೆಟ್, ಮಿಷನ್ 500, ಮುಂಬೈ ದಾಳಿ ರೂವಾರಿಯ ಗಡಿಪಾರು; ಟ್ರಂಪ್-ಮೋದಿ ಒಪ್ಪಂದಗಳ ಲಿಸ್ಟ್ ಇಲ್ಲಿದೆ
ಈ ಶಿಲ್ಪವನ್ನು ಕ್ರಿಸ್ಲರ್ ಕಟ್ಟಡದ ಎದುರುಗಡೆ ಸ್ಥಾಪಿಸಲಾಗಿದೆ. ಕ್ರಿಸ್ಲರ್ ಕಟ್ಟಡದ ಕಡೆಗೆ ಪ್ರತಿಮೆಯ ಸ್ಥಾಪನೆಯು ಉದ್ದೇಶಪೂರ್ವಕವಾಗಿತ್ತು ಎಂದು ಕೊಲೊಮಿನಾ ತಿಳಿಸಿದ್ದಾರೆ. ಆದರೆ, ಈ ಪ್ರತಿಮೆಯನ್ನು ನಿರ್ವಹಣಾ ಕಾರ್ಮಿಕರು ತೆರವುಗೊಳಿಸಿದರು.
ಈ ಶಿಲ್ಪವನ್ನು ಫ್ರಾನ್ಸ್‌ನಲ್ಲಿ ರಚಿಸಲಾಗಿದ್ದು, ಇದನ್ನು ತಯಾರಿಸಲು ಮೂರು ವಾರಗಳನ್ನು ತೆಗೆದುಕೊಂಡಿದೆ ಎಂದು ಕೊಲೊಮಿನಾ ತಿಳಿಸಿದರು. ಫ್ರೆಂಚ್ ಕಲಾವಿದ ಕೊಲೊಮಿನಾ ಜುಲೈ 23 ರಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಮೇಕ್ ಅಮೇರಿಕಾ ಗ್ರೈಮ್ ಅಗೇನ್’ ಎಂಬ ಶೀರ್ಷಿಕೆಯೊಂದಿಗೆ ಈ ಶಿಲ್ಪದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಟ್ರಂಪ್ ಅವರ ಜನಪ್ರಿಯ ಧ್ಯೇಯವಾಕ್ಯವಾದ ‘ಮೇಕ್ ಅಮೇರಿಕಾ ಗ್ರೇಟ್ ಅಗೇನ್’ ಅನ್ನು ಉಲ್ಲೇಖಿಸುತ್ತದೆ.
ಜೆಮ್ಸ್ ಕೋಲೊಮಿನಾ ಯಾರು?
ಜೆಮ್ಸ್ ಕೋಲೊಮಿನಾ ಎಂಬುವವರು ಫ್ರೆಂಚ್ ಬೀದಿ ಕಲಾವಿದರಾಗಿದ್ದು ಸಾಮಾಜಿಕ ಸಂದೇಶಗಳನ್ನು ಹೊಂದಿರುವ ಕೆಂಪು ಬಣ್ಣದ ಶಿಲ್ಪಗಳನ್ನು ರಚಿಸುವ ಮೂವಕ ಖ್ಯಾತಿ ಪಡೆದಿದ್ದಾರೆ. ಅವರು ತಮ್ಮ ಶಿಲ್ಪಗಳನ್ನು ಪೂರ್ವಘೋಷಣೆ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸುವಲ್ಲಿ ಪರಿಣಿತರಾಗಿದ್ದಾರೆ. ಕೋಲೊಮಿನಾ ಅವರು ಶಿಲ್ಪಗಳನ್ನು ಟೋಕಿಯೋ, ಬಾರ್ಸಿಲೋನಾ, ಪ್ಯಾರಿಸ್ ಹಾಗೂ ಇತರೆ ಅನೇಕ ಪ್ರಮುಖ ನಗರಗಳಲ್ಲಿ ಸ್ಥಾಪಿಸಿದ್ದಾರೆ.